21 ಜುಲೈ 2018

ಗಜಲ್ ೩೯

ಗಜಲ್ ೩೯(ಕಂಡಿದ್ದೇನೆ )


ಗಜಲ್ ೩೯
ಪ್ರಖರ ಸೂರ್ಯ ಚಂದ್ರ ರಿಗೆ ಗ್ರಹಣ ಹಿಡಿದಿರುವುದನ್ನು ನಾನು ಕಂಡಿದ್ದೇನೆ
ಶಿಖರಗಳು ಕ್ಷಣಮಾತ್ರದಲ್ಲೇ ತರಗೆಲೆಯಂತೆ
ಧರೆಗುರುಳಿರುವುದನ್ನು ನಾನು ಕಂಡಿದ್ದೇನೆ

ಕೋಟಿ ಕಟ್ಡಿ ಕುಣಿದವರ ಬಗ್ಗೆ ಎಗರಿ ಹೇಳಬೇಡ
ಮೀಸೆ ತಿರುವಿ ಮೆರೆದವರು ಮಣ್ಣಾಗಿರುವುದನ್ನು ನಾನು ಕಂಡಿದ್ದೇನೆ

ಯಶಸ್ಸು ಪಡೆದವರ  ಕುರಿತು ಗರ್ವ ಪಡಬೇಡ
ಚುಕ್ಕಿಗಳು ಜಾರಿ ಬೀಳುವುದನ್ನು ನಾನು ಕಂಡಿದ್ದೇನೆ.
ಯಾರ  ಜ್ಞಾನದ ಆಳವನ್ನು ಕೊಂಡಾಡಬೇಡ
ಸಾಗರಗಳು ಬತ್ತಿರುವುದನ್ನು ನಾನು ಕಂಡಿದ್ದೇನೆ
ಬಾಹ್ಯ  ರೂಪದ ಬಗ್ಗೆ ಅಹಂಕಾರ ಪಡಬೇಡ
ಮೊನಾಲಿಸಾ ಮಣ್ಣು ಸೇರಿದ್ದನ್ನು ನಾನು ಕಂಡಿದ್ದೇನೆ
.
ಜೀವನದಲ್ಲಿ ಗೆದ್ದೆನೆಂದು ಸೀಜೀವಿಯ ಮುಂದೆ  ಬೀಗಬೇಡ
ಅಲೆಕ್ಸಾಂಡರ್ ಶರಣಾಗಿದ್ದನ್ನು ನಾನು ಕಂಡಿದ್ದೇನೆ
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ರಾಜ್ಯಮಟ್ಟದ ಕವಿಗೋಷ್ಟಿಯಲ್ಲಿ ನನ್ನ ಕವನ ವಾಚನ


17 ಜುಲೈ 2018

ಗಜಲ್ ೪೦ (ಸಾವು)

      *ಗಜಲ್೪೦*

ಬೇಕೆಂದು ಬಯಸಿದರೆ ಬರುವುದಿಲ್ಲ ಸಾವು
ಬೇಡವೆಂದರೂ ನಿಲ್ಲುವುದಿಲ್ಲ ಸಾವು

ಬಹುಕೃತ ವೇಷಗಳುಂಟು   ಬದುಕಲು
ಯಾವ ನಾಟಕಕು ಜಗ್ಗುವುದಿಲ್ಲ ಸಾವು

ಸಂಬಂಧಗಳಲಿ ಬಂದಿಗಳು ನಾವು
ಬಂದು ಬಾಂಧವರ ಲೆಕ್ಕವಿಡುವುದಿಲ್ಲ ಸಾವು

ಬಡವ ಬಲ್ಲಿದ ಮೇಲು ಕೀಳುಗಳ ಮೇಲಾಟ
ಎಲ್ಲರ ಸಮ ಮಾಡದೆ ಬಿಡುವುದಿಲ್ಲ ಸಾವು

ಸೀಜೀವಿಗೆ ಆಸೆ ಸಜ್ಜನರು ಬದುಕುಳಿಯಲು
ಒಳ್ಳೆಯ ಕೆಟ್ಟವರೆಂದು ಭೇದ ತೋರುವುದಿಲ್ಲ ಸಾವು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

15 ಜುಲೈ 2018

ಪಣ ತೊಡುವೆವು (ಚಿತ್ರಕವನ)




*ಪಣತೊಡುವೆವು*



ಚಿಟ ಪಟ ಮಳೆಯಲ್ಲಿ
ಟಾರು‌ ರಸ್ತೆಯ ಇಳಿಜಾರಿನಲಿ
ಇಳಿದು ಸಾಗುತಿಹೆವು ನಾವು
ಕಂಬಳಿಯ ಕೊಪ್ಪೆ ಹೊದ್ದು
ನಿತ್ಯದ ಅನ್ನ ಅರುಸುತಲಿ

ಮಳೆ ಬಂದರೆ ಬಂತಲ್ಲ ಮಳೆ
ಜಡಿ‌ಮಳೆ ಯಾಕಾದರೋ ಬಂತೋ
ಎಂದು ಗೊಣಗುವ ನಗರದವರಲ್ಲ
ಮಳೆ ಹನಿಗೆ ಮಣ್ಣ ಪರಿಮಳ
ಸವಿಯುವವರು ನಾವೆಲ್ಲ

ರೈನುಕೋಟು ಅಂಬ್ರೆಲಾಗಳ
ಗೊಡವೆ ನಮಗೆ ಬೇಕಿಲ್ಲ
ಪ್ಲಾಸ್ಟಿಕ್ ಸಿಂಥೆಟಿಕ್ ಬಳಸುವುದಿಲ್ಲ
ಪರಿಸರ ಪೂರಕವಾದ
ಬಟ್ಟೆ ಕಂಬಳಿಗಳ ಬಿಡುವುದಿಲ್ಲ

ಕಾನನದ ಮಕ್ಕಳು ನಾವು
ವನದೇವತೆಯನು  ರಕ್ಷಿಸಲು
ಎಂದಿಗೂ ಬೆನ್ನ ತೋರೆವು
ಪರಿಸರದೊಂದಿಗೆ ಬಾಳುವ
ಪಣ ತೊಡುವೆವು

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*