09 ಜುಲೈ 2018

ವಿವೇಚನೆಯಿಂದ ಬಾಳು (ಕವನ)

            *ವಿವೇಚನೆಯಿಂದ ಬಾಳು*

ಬೆಟ್ಟ ನೀರು ಗಾಳಿ ಕಾಡನು ಕೊಟ್ಟೆ ನಿನಗೆ
ಬಾಳಿ ಬದುಕದೇ ನನ್ನ ಮೇಲೆ ದಬ್ಬಾಳಿಕೆಮಾಡಿದೆ
ತಾಳಲಾರೆ ನಿಮ್ಮುಪದ್ರವಗಳ ನಿಲ್ಲಿಸು ಇಂದೆ
ಇಲ್ಲವಾದರೆ ನಿನ್ನ ಅಂತ್ಯವಾಗಲಿದೆ ಮುಂದೆ

ಕ್ಷಮಯಾ ಧರಿತ್ರಿ ನಾನು ಆಸೆಬುರುಕ ನೀನು
ಆಸೆಗಳಿಗೆ ಬಲಿಯಾಗಿ  ಕಾಡು ನಾಶಗೈಯುತಿರುವೆ
ಕಾಂಕ್ರೀಟ್ ಕಾಡನು ಬೆಳಸಿ ಮೆರೆಯುತಿರುವೆ
ನನ್ನ ನೋವನು  ನೀನು ಮರೆಯುತಿರುವೆ

ಬಗೆದೆನ್ನಯ ಒಡಲನು ದೋಚಿದೆ  ಸಾಕು
ಇನ್ನಾದರೂ ಮರ ಗಿಡ ಬೆಳಸಿ ಬಾಳು
ಬದುಕು ಬದುಕಲು ಬಿಡು ಸಕಲ ಜೀವಿಗಳ
ಇಲ್ಲವಾದರೆ ನಿನ್ನ ಬಾಳಾಗುವುದು ಗೋಳು

ಮೌನವಾಗಿರುವೆನೆಂದು ಮೆರೆಯಬೇಡ
ನನ್ನ ತಾಳ್ಮೆಗೆ ಮಿತಿಯಿದೆಯೆಂದು ಮರೆಯಬೇಡ
ನಾ ಮೈಕೊಡವಿದರೆ ನಿನ್ನಳಿವು ನೋಡ
ಇದ ತಿಳಿದ ವಿವೇಚನೆಯಿಂದ ಬಾಳು ಮೂಢ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

08 ಜುಲೈ 2018

ಗಜಲ್ ೩೯(ಕಂಡಿದ್ದೇನೆ )


ಗಜಲ್ ೩೯

ಪ್ರಖರ ಸೂರ್ಯ ಚಂದ್ರ ರಿಗೆ ಗ್ರಹಣ ಹಿಡಿದಿರುವುದನ್ನು ನಾನು ಕಂಡಿದ್ದೇನೆ
ಶಿಖರಗಳು ಕ್ಷಣಮಾತ್ರದಲ್ಲೇ ತರಗೆಲೆಯಂತೆ
ಧರೆಗುರುಳಿರುವುದನ್ನು ನಾನು ಕಂಡಿದ್ದೇನೆ

ಕೋಟಿ ಕಟ್ಡಿ ಕುಣಿದವರ ಬಗ್ಗೆ ಎಗರಿ ಹೇಳಬೇಡ
ಮೀಸೆ ತಿರುವಿ ಮೆರೆದವರು ಮಣ್ಣಾಗಿರುವುದನ್ನು ನಾನು ಕಂಡಿದ್ದೇನೆ

ಯಶಸ್ಸು ಪಡೆದವರ  ಕುರಿತು ಗರ್ವ ಪಡಬೇಡ
ಚುಕ್ಕಿಗಳು ಜಾರಿ ಬೀಳುವುದನ್ನು ನಾನು ಕಂಡಿದ್ದೇನೆ.

ಯಾರ  ಜ್ಞಾನದ ಆಳವನ್ನು ಕೊಂಡಾಡಬೇಡ
ಸಾಗರಗಳು ಬತ್ತಿರುವುದನ್ನು ನಾನು ಕಂಡಿದ್ದೇನೆ

ಬಾಹ್ಯ  ರೂಪದ ಬಗ್ಗೆ ಅಹಂಕಾರ ಪಡಬೇಡ
ಮೊನಾಲಿಸಾ ಮಣ್ಣು ಸೇರಿದ್ದನ್ನು ನಾನು ಕಂಡಿದ್ದೇನೆ .

ಜೀವನದಲ್ಲಿ ಗೆದ್ದೆನೆಂದು ಸೀಜೀವಿಯ ಮುಂದೆ  ಬೀಗಬೇಡ
ಅಲೆಕ್ಸಾಂಡರ್ ಶರಣಾಗಿದ್ದನ್ನು ನಾನು ಕಂಡಿದ್ದೇನೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

07 ಜುಲೈ 2018

ನೆನಪಾಗುವುದು (ಕವನ)

*ನೆನಪಾಗುವುದು*


ಶಾಲೆಯಿಂದ ಮನೆಗೆ ಬಂದ
ನನ್ನ ಮಗಳು ಅಮ್ಮಾ ನನಗೆ
ಗೋಬಿ ಬೇಕು ಪಿಜಾ ಬೇಕು ಎಂದಾಗ
ನನ್ನಜ್ಜಿ ನನಗೆ ಕೊಟ್ಟ ಸಜ್ಜೆ ರೊಟ್ಟಿ
ಚಿನಕುರುಳಿ ನೆನಪಾಗುವುದು

ಮಳೆಯಲಿ ನೆನೆದು ಬಂದು
ಅಪ್ಪಾ ನನಗೆ ಕೊಡೆ ಬೇಕು
ಬಣ್ಣದ್ದಿರಬೇಕು ವಿಶಿಷ್ಠವಾಗಿರಬೇಕು
ಎಂದಾಗ ಮಳೆಯಲೂ ಚಳಿಯಲೂ ನನ್ನ
ಬೆಚ್ಚಗಿಟ್ಟ ಅಜ್ಜಿಯ  ಕೌದಿಯ ನೆನಪಾಗುವುದು

ಅಮ್ಮಾ ನನಗೆ ಪೋಕೆಮಾನ್ ಬೇಕು
ಚಿಂಟು ಟೀವಿ ನೋಡಬೇಕು ಎಂದು
ಮಗಳ ಹಟ ಮಾಡಿದಾಗ ಮುಸ್ಸಂಜೆ
ತಲೆ ನೇವರಿಸಿ ಕಥೆ ಹೇಳುವ ಅಜ್ಜಿಯ
ನೆನಪಾಗುವುದು .

ಇವನ್ನೆಲ್ಲಾ ನನ್ನ ಮಗಳಿಗೆ ಹೇಳಿ
ಗೋಬಿ ಬೇಡ ಸಿರಿಧಾನ್ಯ ನೋಡು
ಟಿವಿ ಮೊಬೈಲ್ ಕಡಿಮೆ ಮಾಡು
ಎಂದರೆ ನೀನಾವ ಕಾಲದಲ್ಲಿರುವೆ
ಎಂದು ಮಗಳು‌ ಜರಿದಾಗಲೂ
ನಮ್ಮಜ್ಹಿಯ ನೆನಪಾಗುವುದು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

06 ಜುಲೈ 2018

*ನಡುಗುತಿದೆ ಕಂದಮ್ಮ*(ಕವನ)

*ನಡುಗುತಿದೆ ಕಂದಮ್ಮ*

ತುಂಬಿದೂರು ನನ್ನದು
ಆಧುನಿಕತೆ ಗಂಧ ಸುಳಿದಿಲ್ಲ
ದೇವರು ನಮ್ಮಪ್ಪ ಅಮ್ಮದೇವತೆ
ಬೆಳೆಸಿದರು ನನ್ನ ಗಿಳಿಯಂತೆ
ಕಷ್ಷಗಳು ನನ್ನ ಬಳಿ ಸುಳಿಯದಂತೆ

ಕರುಬಿದರು ನೆರೆಹೊರೆಯವರು
ನನ್ನ ಗಂಡನ ನೋಡಿ
ಒಳಗೊಳಗೆ ನಮಿಸಿದೆ ಅಪ್ಪನಿಗೆ
ನೀಡಿದ್ದಕ್ಕೆ ಉತ್ತಮ ಜೋಡಿ

ವರುಷದೊಳಗೆ ನನ್ನ ಮಡಿಲು ತುಂಬಿ
ಸೀಮಂತ ಸಡಗರ ಮನೆಯಲಿ
ಬಯಸಿದ ಎಲ್ಲಾ ವಸ್ತುಗಳು ನೀಡಿ
ನನ್ನೆತ್ತವರು ಸಂತಸಗೊಂಡರು ಮನದಲಿ

ಹೆರಿಗೆಯ ದಿನ  ನೋವ ಸಹಿಸಿ
ಜನ್ಮ ಕೊಟ್ಟೆನು ಕರುಳ ಕುಡಿಗೆ
ಸೂತಕವೆಂದು ಮನೆಯಿಂದ ಹೊರಹಾಕಿದರು
ನಡುಗುತಿದೆ ಕಂದಮ್ಮ ಕೊರೆವ ಚಳಿಗೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*


05 ಜುಲೈ 2018

ದೇವಾಲಯದಲ್ಲಿ ಎಲ್ಲಿ ನಮಸ್ಕಾರ ಮಾಡಬೇಕು (ಸಂಗ್ರಹ ಲೇಖನ)

............ನಮಸ್ಕಾರ....................

         ದೇವಾಲಯಗಳಲ್ಲಿ ಸಿಕ್ಕ ಸಿಕ್ಕ ಕಡೆ ನಮಸ್ಕರಿಸಬಾರದು. ಯಾವ ದೇವಸ್ಥಾನದಲ್ಲಿ ಯೇ ಆಗಲಿ ದೇವರ ಬಲಭಾಗದಲ್ಲಿಯೇ ನಮಸ್ಕರಿಸಬೇಕು. ಅಥವಾ ನಮ್ಮ ಬಲಭಾಗಕ್ಕೆ ದೇವರು, ದೇವರ ಬಲಭಾಗಕ್ಕೆ ನಾವು ಇರುವಂತೆ ನಮಸ್ಕರಿಸಬೇಕು. ಏಕೆಂದರೆ

  ಅಗ್ರೇ ಪೃಷ್ಟೇ ವಾಮಭಾಗೇ ಸಮೀಪೇ ಗರ್ಭಮಂದಿರೇ |
  ಜಪಹೋಮನಮಸ್ಕಾರಾನ್ ನ ಕುರ್ಯಾತ್ ಕೇಶವಾಲಯೇ ||

 ಅಂದರೆ ವಿಷ್ಣುವಿನ ದೇವಾಲಯಗಳಲ್ಲಿ ದೇವರ ಎದುರುಗಡೆ, ಹಿಂಭಾಗದಲ್ಲಿ, ದೇವರ ಎಡಭಾಗದಲ್ಲಿ, ದೇವರ ಸಮೀಪದಲ್ಲಿ, ಗರ್ಭಗೃಹದಲ್ಲಿ ನಮಸ್ಕಾರ, ಜಪ, ಹೋಮಗಳನ್ನು ಮಾಡ ಬಾರದು.

ಏಕೆಂದರೆ ವಿಷ್ಣು, ಶಿವಾಲಯಗಳಲ್ಲಿ ದೇವರ ಎದುರುಗಡೆ ನಾವು ನಮಸ್ಕರಿಸಿದಾಗ ನಮ್ಮ ಕಾಲು ಗರುಡ, ನಂದಿಯ ಕಡೆಗೆ ಇರುತ್ತದೆ. ಇದರಿಂದ ದೇವರ ಮುಂದೆ ಇರುವ ಗರುಡ, ನಂದಿ, ಮೂಷಿಕಾದಿ ದೇವತೆಗಳಿಗೆ ನಾವು ಕಾಲು ತೋರಿಸಿ ಅವರನ್ನು ತಿರಸ್ಕರಿಸಿ ದಂತಾಗುತ್ತದೆ. ಇದರಿಂದ ಪಾಪದ ಲೇಪವಾಗುವುದು.

 ಏಕೆಂದರೆ `ದೊಡ್ಡವರನ್ನು ತಿರಸ್ಕರಿಸುವುದು ಮರಣಕ್ಕೆ ಆಹ್ವಾನ ಕೊಟ್ಟಂತೆ.` ಇದೇ ಮಾತನ್ನು ಈ ಪ್ರಮಾಣ ಹೀಗೆ ಹೇಳುತ್ತದೆ. `ಅಗ್ರೇ ಮೃತ್ಯುಮವಾಪ್ನೋತಿ` ಎಂಬುದಾಗಿ. ಅಲ್ಲದೇ ಬಲಿಪೀಠ, ಧ್ವಜ ಸ್ತಂಭಗಳಿಗೆ ಪಾದವನ್ನು ತೋರಿಸಬಾರದು. ಆದುದರಿಂದ ದೇವರ ಎದುರಿಗೆ ನಮಸ್ಕರಿಸಬಾರದು.

 ದೇವರ ಮುಂಭಾಗದಂತೆ ಹಿಂಭಾಗದಲ್ಲಿಯೂ ನಮಸ್ಕರಿಸಬಾರದು. ಏಕೆಂದರೆ ಅಲ್ಲಿ ದೇವರ ಪರಿವಾರದೇವತೆಗಳಿರುತ್ತಾರೆ. ಹಿಂಭಾಗದಲ್ಲಿ ನಮಸ್ಕರಿಸಿದಾಗ ಆ ದೇವತೆ ಗಳಿಗೆ ಪಾದ ತೋರಿಸಿದಂತಾಗುವುದರಿಂದ ನಾವು ಯಾವುದೇ ಕಾರ್ಯವನ್ನು ಮಾಡಲಿ ಅದರಲ್ಲಿ ಅಪಜಯ (ಸೋಲು) ವುಂಟಾಗುವುದು. ಆದುದರಿಂದ ದೇವರ ಹಿಂಭಾಗದಲ್ಲಿ ನಮಸ್ಕರಿಸಬಾರದು.
 ದೇವರ ಎಡಭಾಗದಲ್ಲಿಯೂ ನಮಸ್ಕರಿಸಬಾರದು. ಏಕೆಂದರೆ `ವಾಮಭಾಗೇ ಭವೇನ್ನಾಶಃ` ಎಂದು ಹೇಳಿರುವುದರಿಂದ ದೇವರ ಎಡಭಾಗದಲ್ಲಿ ನಮಸ್ಕರಿಸಬಾರದು.

 ಏಕೆಂದರೆ ದೇವರ ಎಡಕೈಯಲ್ಲಿ ಗದಾ, ತ್ರಿಶೂಲ ಮೊದಲಾದ ಆಯುಧಗಳಿರುತ್ತವೆ. ಆ ಆಯುಧಗಳನ್ನು ಪರಮಾತ್ಮನು ಧರಿಸಿರುವುದರ ಉದ್ದೇಶ ಶತ್ರುಗಳ ನಾಶಕ್ಕಾಗಿ. ಒಂದು ವೇಳೆ ನಾವು ದೇವರ ಎಡಭಾಗದಲ್ಲಿ ನಮಸ್ಕರಿಸುವುದರಿಂದ ಭಗವಂತನ ಆಯುಧ ಗಳಿಂದ ನಮ್ಮ ಶರೀರದ ನಾಶವಾಗುವ ಸಂಭವವಿರುವುದರಿಂದ ದೇವರ ಎಡಭಾಗದಲ್ಲಿ ನಮಸ್ಕರಿಸಬಾರದು ಎಂದು ಹೇಳಿ ಕೊನೆಗೆ ದೇವರ ಬಲಭಾಗದಲ್ಲಿಯೇ ನಮಸ್ಕರಿಸ ಬೇಕೆಂದು ಹೇಳುತ್ತಿದ್ದಾರೆ.

 `ದಕ್ಷಿಣೇ ಸರ್ವಕಾಮದಃ` ಎಂಬುದಾಗಿ. ಅಂದರೆ ನಾವು ಯಾವಾಗ ನಮಸ್ಕರಿಸಿದರೂ ದೇವರ ಬಲಭಾಗದಲ್ಲಿಯೇ ನಮಸ್ಕರಿಸಬೇಕು. ಏಕೆಂದರೆ ದೇವರು ನಮಗೆಲ್ಲರಿಗೂ ಅಭಯವನ್ನು, ಜ್ಞಾನವನ್ನು ನೀಡುವುದು ಬಲಗೈಯಿಂದಲೇ. ಆದುದರಿಂದ ಭಗವಂತನ ಅನುಗ್ರಹ, ಅಭಯವನ್ನು ಪಡೆಯಬೇಕಾದ ನಾವು ದೇವರ ಬಲಭಾಗದಲ್ಲಿಯೇ ನಮಸ್ಕರಿಸಬೇಕು.

ಸಂಗ್ರಹಲೇಖನ