15 ಮಾರ್ಚ್ 2018

ಎಲ್ಲಿದೆ ದಾರಿ ( ಕವನ)

*ಎಲ್ಲಿದೆ ದಾರಿ?*


ನಿನ್ನ ಕರ್ಮವನು ಮಾಡು
ಮುಕ್ತಿ ದೊರೆವುದು ಎಂದರು
ಭಕುತಿಯಲಿ  ಮಿಂದೇಳು
ಮುಕ್ತಿ ಸಿಗುವುದೆಂದರು ಕೆಲವರು.

ಜ್ಞಾನ ಸಂಪಾದಿಸು ನೀನು
ಆತ್ಮ ಸಾಕ್ಷಾತ್ಕಾರವಾಗುವುದೆಂದರು
ಧ್ಯೇಯವಿರಲಿ ಬಾಳಿಗೆ ದುಡಿಯುತಿರು
ವಿಜಯಿಯಾಗುವೆ ಎಂದರು ತಿಳಿದವರು.

ಭಕ್ತಿಯಿಂದಲೇ ದಿನವೂ ಪೂಜಿಸಿದೆ
ಜ್ಞಾನ ಸಂಪಾದನೆ ಮಾಡುತಲೇ ಇರುವೆ
ಕಾಯಕವೇ ಕೈಲಾಸವೆಂದು ದುಡಿದೆ
ಆದರೂ ಮುಕ್ತಿಯ ಸುಳಿವಿಲ್ಲ.

ಇಂದು ಎಲ್ಲ ಕಾರ್ಯ ಶೀಘ್ರವಾಗಬೇಕು
ಅಡ್ಡದಾರಿಯಾದರೂ ಅದೇ ಬೇಕು
ತಿಳಿದವರಿದ್ದರೆ ಈಗಲೇ ಹೇಳಿ
ಮುಕ್ತಿ ಪಡೆಯಲು ಎಲ್ಲಿದೆ ಅಡ್ಡ ದಾರಿ ?


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*



14 ಮಾರ್ಚ್ 2018

*ವಿರಹ*(ಕವನ)


*ವಿರಹ*(ಕವನ)

ಮರೆತೆಯೆಂದರೆ ಮರೆಯಲಾರೆ
ವಿರಹವನೀಗ  ತಾಳಲಾರೆ
ಯಾರಿಗೂ ಹೇಳಲಾರೆ
ಮನದಿ ಮುಚ್ಚಿಡಲಾರೆ

ನಗುಮೊಗದ ನಲ್ಲ
ಹೃದಯವ  ಕದ್ದನಲ್ಲ.
ಬರುವೆಂದು ಹೋದವನು
ಇನ್ನೂ ಸುಳಿವಿಲ್ಲವಲ್ಲ 

ನನ್ನ  ಕೂದಲಲಿ ಕೈಯಿಟ್ಟು
ನವಿರಾಗಿ ನೇವರಿಸಿದ ನೆನಪು
ಎದೆಯಾಳದಲಿ ಸಾವಿರ ನೆನಪು
ಗೆಳೆಯ  ಬಂದು ನನ್ನ ಅಪ್ಪು

ಹೃದಯ ಹೇಳುತಿದೆ ಈಗ
ಇನಿಯ ಬರುವನು ಬೇಗ
ಮನದಲಿದೆ  ಅವನ ಚಿತ್ತಾರ
ಬಂದೇ ಬರುವ ನನ್ನ ಹತ್ತಿರ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*


ಯಾವ ಮಾಯೆ? (ಕವನ)

*ಯಾವ ಮಾಯೆ*


ಹುಟ್ಟುವಾಗ ವಿಶ್ವಮಾನವನಾಗಿ
ಬೆಳೆಯುತ ಸಂಕುಚಿತನಾಗಿ
ಬಂದಿಯಾಗುವಿಯೆಲ್ಲ
ಇದು ಯಾವ ಮಾಯೆ?

ಜಾತನಾದಾಗ ಜಾತಿಯ ಹಂಗಿಲ್ಲ
ಬೆಳೆದು ಜಾತಿವಿಷವರ್ತುಲದಿ ಸಿಲುಕಿ
ಜಗಳಗಂಟನಾಗಿ ಬದಲಾಗುವೆ
ಇದು ಯಾವ ಮಾಯೆ?

ಪ್ರಕೃತಿಯಲಿ ಹುಟ್ಟಿ ಬೆಳೆದು
ವಿಕೃತಿಯ ವಿಕಾರ ತೋರುವೆ
ಸಂಸ್ಕೃತಿ ಮರೆತು ಅನಾಗರಿಕನಾದೆ
ಇದು ಯಾವ ಮಾಯೆ?

ಬಡವ ಬಲ್ಲಿದ ಧನಿಕರ ಜೀವನ
ಮೇಲು ಕೀಳಿನ ಆಡಂಬರ
ಕೊನೆಗೆ ಸೇರುವುದು ಮಣ್ಣ
ಇದು ಯಾವ ಮಾಯೆ?

ಮುಗ್ಧ ಮಗುವಿನ ಮನಸು
ಕ್ರಮೇಣ ಆಯಿತು ಹೊಲಸು
ಮನವು ನಿಯಂತ್ರಣವಿಲ್ಲ
ಇದು ಯಾವ ಮಾಯೆ?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*


13 ಮಾರ್ಚ್ 2018

ಕೋಮಲೆ (ಹನಿಗವನ)


*ಹನಿಗವನ*
ಕೋಮಲೆ

ಚಿಂತಿಸುತಿಹಳು ಕೋಮಲೆ
ಕಟ್ಡಲಾಗುತ್ತಿಲ್ಲ ಹೂಮಾಲೆ
ಮನದಲೇನೋ ತಲ್ಲಣ
ಬರುವನೇನೋ ಮದನ
ಮನಸು ಹಿಡಿತದಲಿಲ್ಲ
ಆಸೆಯ  ಬಿಡುವಂತಿಲ್ಲ
ಸಿದ್ದಳಾಗಿಹಳು ಕಾತರದಿ
ಕಾಯುತಿಹಳು ಮುದದಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*



ಜನನಾಯಕರೆ? (ಕವನ)

*ಜನನಾಯಕರೆ?*

ಓಟಿಗಾಗಿ ನೋಟು ನೀಡಿ
ಕೋಟಿ ನುಂಗಿ ನೀರ ಕುಡಿದು
ತಮ್ಮನುದ್ದರಿಸಿಕೊಳುವ
ಇವರು ನಮ್ಮ ಜನ ನಾಯಕರೆ|೧|

ಜಾತಿ ಧರ್ಮ ಹೆಸರ ಹೇಳಿ
ನಮ್ಮನ್ನೆಲ್ಲ ಎತ್ತಿ ಕಟ್ಟಿ
ತಮ್ಮ ಬೇಳೆ ಬೇಯಿಸಿಕೊಳ್ಳುವ
ಇವರು ನಮ್ಮ  ಜನ ನಾಯಕರೆ|೨|

ಕಾಡಿ ಬೇಡಿ ಮತವ ಪಡೆದು
ಕೈಗೆ ಸಿಗದೆ ಓಡಿ ಹೋಗಿ
ಹೊರೆಯಾಗಿ ನಮ್ಮ ಕಾಡುವ
ಇವರು ನಮ್ಮ ಜನ ನಾಯಕರೆ|೩|

ಸುಳ್ಳು ಪೊಳ್ಳು ಆಸೆ ತೋರಿ
ಮಳ್ಳರಾಗಿ ಮೋಸ ಮಾಡಿ
ಮತಕ್ಕಾಗಿ ಕಾಲುಹಿಡಿವ
ಇವರು ನಮ್ಮ ಜನನಾಯರೆ|೪|

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*