10 ಮಾರ್ಚ್ 2018

ಹನಿ ಹನಿ ಇಬ್ಬನಿ ವಾಟ್ಸಪ್ ಕವಿ ಬಳಗದ ಯಶೋಗಾಥೆ (ಲೇಖನ)

*ಹನಿ ಹನಿ‌ ಇಬ್ಬನಿಯ  ವಾಟ್ಸಪ್ ಗುಂಪಿನ ಯಶೋಗಾಥೆ*

ವಾಟ್ಸಪ್ ಅನ್ನು ಕೇವಲ ಮನರಂಜನೆಯ ಮತ್ತು ಟೈಂಪಾಸ್ ಮಾಡಲು ಬಳಸುವ ಈ ಕಾಲದಲ್ಲಿ ಅದರ ಬಳಕೆಯಿಂದ ಸಾಹಿತ್ಯ ಸೇವೆ ಮಾಡಬಹುದು ಎಂಬುದನ್ನು ಸದ್ದಿಲ್ಲದೇ ಹಲವು ವಾಟ್ಸಪ್ ಕವಿ ಬಳಗಗಳು ಮಾಡಿತೋರಿಸುತ್ತಿವೆ ಅವುಗಳಲ್ಲಿ ಮುಂಚೂಣಿಯಲ್ಲಿರುವ ಗುಂಪು "ಹನಿ ಹನಿ ಇಬ್ಬನಿ ಕವಿ ಬಳಗ "

ಒಂದು ಕಾಲದಲ್ಲಿ ಸಾಹಿತ್ಯ ಕೇವಲ ಪಂಡಿತರಿಗೆ ಸೀಮಿತ ,ಕವನ ದೊಡ್ಡ ಕವಿಗಳ ಸ್ವತ್ತು ಎಂದು ನಂಬಲಾಗಿತ್ತು ಅದನ್ನು ಸುಳ್ಳು ಮಾಡಲು ಸಾಮಾನ್ಯರಲ್ಲಿರುವ ಕವಿ ಭಾವನೆಗಳನ್ನು ಬಡಿದೆಬ್ಬಿಸಲು *ಹನಿ ಹನಿ ಇಬ್ಬನಿ* ಬಳಗ ಟೊಂಕ ಕಟ್ಟಿ ನಿಂತಿದೆ


ಖುಷಿ ಕೃಷ್ಣ ರವರ ನೇತೃತ್ವದಲ್ಲಿ ಮುನ್ನೆಡಯುತ್ತಿರುವ ಈ ಬಳಗಕ್ಕೆ ಚಂದ್ರು ರವರು ಬೆನ್ನೆಲುಬಾಗಿ ನಿಂತು‌ ನಾಡಿನಾದ್ಯಂತ ಸಾಹಿತ್ಯದ ಕಂಪನ್ನು ಪಸರಿಸುತ್ತಿದ್ದಾರೆ.ಒಂದು ವಿಶ್ವವಿದ್ಯಾಲಯ ಮಾಡಬಹುದಾದ ಕನ್ನಡ ಕಟ್ಟುವ ಕೆಲಸವನ್ನು. ಒಂದೊಂದು ಪ್ರಸಾರಾಂಗ ಮಾಡಬಹುದಾದ ಪ್ರಕಟಣಾ ಕೆಲಸವನ್ನು ಸದ್ದಿಲ್ಲದೆ ಮಾಡಿ ನೂರಾರು ಉದಯೋನ್ಮುಖ ಸಾಹಿತಿಗಳನ್ನು ಬೆಳೆಸುವ ಕಾರ್ಯದಲ್ಲಿ ಬಳಗ ಯಶಸ್ವಿಯಾಗಿ ಮಾಡುತ್ತಿದೆ.
ಈಗಾಗಲೇ ಬಳಗವು
೧ *ಹನಿ ಹನಿ ಇಬ್ಬನಿ*
೨ *ಹನಿಹನಿ ಕಾವ್ಯಕಹಾನಿ*
೩*ಹನಿಹನಿ ತುಂತುರು*
೪ *ಹನಿಹನಿಭಾವಸಿಂಚನ*
೫ * ನನ್ನ ಪ್ರೀತಿಯ ಕೋತಿ ಮರಿ ಭಾಗ ೧*
೬ * ಹನಿ ಹನಿ ಕಾವ್ಯಧಾರೆ*
ಎಂಬ ಆರು ರತ್ನ ಗಳನ್ನು ಸಾಹಿತ್ಯ ಲೋಕಕ್ಕೆ ಅರ್ಪಿಸಿದೆ

ಮುಂದುವರೆದು ಬಳಗವು ರಾಜ್ಯಾದ್ಯಂತ ಸುಪ್ತ ಪ್ರತಿಭೆಯನ್ನು ಪ್ರೋತ್ಸಾಹ ಮಾಡಲು ಮೂರು ರಾಜ್ಯ ಮಟ್ಟದ ಕವಿಗೋಷ್ಟಿಗಳ ಹಮ್ಮಿಕೊಂಡು ಯಶಸ್ವಿಯಾಗಿ ಮುನ್ನೆಡೆದಿದೆ.
ಬಳಗದ ಮುಂದಿನ ಯೋಜನೆಯನ್ನು ಕರಾರುವಕ್ಕಾಗಿ ಮಾಡಿದ ಅಡ್ಮಿನ್ ದ್ವಯರು  ಮುಂದಿನ ದಿನಗಳಲ್ಲಿ ಭಾವಗೀತೆಗಳ ಸಿ.ಡಿ  ಮಾಡುವ  ಕೆಲಸವನ್ನು ಸದ್ದಿಲ್ಲದೆ ಪ್ರಾರಂಭಿಸಿದರು. ಮುಂದಿನ ದಿನಗಳಲ್ಲಿ ಬಳಗದ. ಕವಿಗಳ ವೈಯಕ್ತಿಕ ಕವಿಗಳ ಪುಸ್ತಕ ಪ್ರಕಾಶನ ಮಾಡುವ ಮಹೋನ್ನತ ಕನಸ ಕಂಡಿದ್ದು ಆ ನಿಟ್ಟಿನಲ್ಲಿ ಯಶಸ್ವಿಯಾಗಲು‌ ನಾನು  ಹಾರೈಸುವೆನು.

ಹನಿ ಹನಿ ಇಬ್ಬನಿ ಬಳಗ  ಹತ್ತರಲ್ಲಿ ಹನ್ನೊಂದಾಗದೇ ವಿಶೇಷವಾಗಿ ಬೆಳೆಯಲು‌ ಕಾರಣವಾಗಿರುವ *ದಶಾಂಶಗಳು*

೧ ಬಳಗಕ್ಕೆ ತನ್ನದೇ ಆದ ಗುರಿ ಇದ್ದು ಅದರಂತೆ ಮುನ್ನಡೆಯುತ್ತಿದೆ.

೨ ನೀನು ಬೆಳೆ ಮತ್ತು ಇತರರನ್ನು ಮಾರ್ಗದರ್ಶನ ಮಾಡಿ ಬೆಳೆಸು ಎಂಬ ಸದುದ್ದೇಶವನ್ನು ಹೊಂದಿದೆ

೩ ಬಳಗದ ಒಳಗೆ ಒಂದು ಆಂತರಿಕ ಶಿಸ್ತು ಎಲ್ಲರನ್ನು ಹಿಡಿದಿಟ್ಟಿದೆ

೪ ಬಳಗ ಕೇವಲ ಬಳಗವಲ್ಲ , ಒಂದು ಕುಟುಂಬದ ವಾತಾವರಣವು ನಿರ್ಮಾಣವಾಗಿದೆ ನೋವು ನಲಿವುಗಳಲ್ಲಿ ಬಂಧುಗಳಿಗಿಂತ ಹೆಚ್ಚಾಗಿ ಸ್ಪಂದಿಸುವ ಗುಣ

೫ ಗೊಂದಲಕ್ಕೆ ಅವಕಾಶ ನೀಡದೆ ..ಕವನ ಬರೆಯಲು  *ಹನಿಹನಿ ಇಬ್ಬನಿ*, ಅನಿಸಿಕೆ ವಿಮರ್ಶೆಗೆ *ಚಿಂತಕರ ಚಾವಡಿ*, ತೀರ್ಪು ನೀಡಲು *ತೀರ್ಪುಗಾರರ ಬಳಗ*, ಕೊನೆಗೆ ಮುಕ್ತ ಮಾತುಕತೆಗೆ *ತಾರೆಗಳ ತೋಟ* . ಎಂಬ ಸಮಾನಾಂತರ ಗುಂಪುಗಳು ಸಕ್ರೀಯವಾಗಿವೆ .

 ೬ ದಿನದ ಅಡ್ಮಿನ್, ವಾರದ ಅಡ್ಮಿನ್ ಎಂಬ ವಿಧವಿಧ ಪದನಾಮಗಳ ಸೃಷ್ಟಿಸುವ ಮೂಲಕ ಜವಾಬ್ದಾರಿ ಯ ವಿಕೇಂದ್ರೀಕರಣ ಮಾಡಲಾಗಿದೆ.

  ೭ ದಿನಕ್ಕೊಂದು *ಶೀರ್ಷಿಕೆ* ನೀಡುವುದರ ಮೂಲಕ  ಬರೆಯಲು  ಪ್ರೋತ್ಸಾಹ ಮತ್ತು ಪ್ರೇರಣೆ ನೀಡುತ್ತಿರುವುದು

೮ ವಾರದ ಸ್ಪರ್ಧೆ ಮಾಡಿ ಬಹುಮಾನ ನೀಡಿ ಬರೆಯಲು ಕವಿಗಳಿಗೆ ಪ್ರೋತ್ಸಾಹ ನೀಡುತ್ತಿರುವುದು.

೯ ಕೇವಲ ಕವನ ಬರೆಯಲು ಪ್ರೋತ್ಸಾಹ ನೀಡದೆ ಸಾಹಿತ್ಯದ ವಿವಿಧ ಪ್ರಕಾರಗಳಾದ ಭಾವಗೀತೆ, ಕಿರುಗಥೆ, ಗಜ಼ಲ್, ಶಾಹಿರಿ,ಹಾಯ್ಕು ಲೇಖನ ಬರೆಯಲು ಪ್ರೋತ್ಸಾಹ ನೀಡುತ್ತಿರುವುದು

೧೦  ಬಿ.ಆರ್ ಲಕ್ಷಣರಾವ್ . ಎಸ್ ಜಿ‌ ಸಿದ್ದ ರಾಮಯ್ಯ ಮುಂತಾದ ಕವಿಗಳೊಂದಿಗೆ ಸಂವಾದ ನಡೆಸಿ ಕವಿಗಳಿಗೆ ಪ್ರೇರಣೆ ನೀಡಿರುವುದು.

ಇಂತಹ ಕ್ರಿಯಾಶೀಲ ಬಳಗದಲ್ಲಿರುವುದು ನನಗೆ ಹೆಮ್ಮೆಯೆನಿಸುತ್ತದೆ  ಈ ಬಳಗಕ್ಕೆ ಸೇರಿದ ಮೇಲೆ ನಾನು ವಿವಿಧ ಪ್ರಕಾರಗಳಲ್ಲಿ ಬರೆಯಲು ನನಗೆ ಹಲವಾರು ಹಿರಿಯ ಕವಿಗಳು ಮಾರ್ಗದರ್ಶನ ನೀಡಿರುವುದು ನನ್ನ ಸುದೈವ ಎಲ್ಲರೂ ಕಲಿಯೋಣ ಎಲ್ಳರೂ ಬೆಳೆಯೋಣ ಎಂಬ ತತ್ವ ದಲ್ಲಿ ಬಳಗ ಮುನ್ನಡೆಯುತ್ತಿದೆ ನನ್ನಂತಹ  ಹನಿ ಹನಿ ಗಳನ್ನು ಸೇರಿಸಿ ಬಳಗವನ್ನು ಕಟ್ಟಿ ಮುನ್ನೆಡೆಸುತ್ತಿರುವ ಅಡ್ಮಿನ್ ದ್ವಯರಾದ ಖುಷಿ ಸರ್ ಹಾಗು ಚಂದ್ರು ಸರ್ ಮತ್ತು ಎಲ್ಲಾ ಕವಿಮನಗಳಿಗೆ ಹೃದಯ ಪೂರ್ವಕ ಧನ್ಯವಾದಗಳು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*




09 ಮಾರ್ಚ್ 2018

ನನ್ನಯ ಶಾಲೆ ( ಶಿಶುಗೀತೆ)

*ಶಿಶುಗೀತೆ*

*ನನ್ನಯ ಶಾಲೆ*

ಮರೆಯಲಾರೆ ನನ್ನಯ ಶಾಲೆ
ನನ್ನಯ ಅಚ್ಚುಮೆಚ್ಚಿನ ಶಾಲೆ
ವಿದ್ಯೆಗೆ ಇದುವೆ ವಿದ್ಯಾಲಯ
ಕಲಿಯುವ ಮಕ್ಕಳ ದೇವಾಲಯ|೧|

ಪುಣ್ಯವು ನನ್ನದು ಇಲ್ಲಿರಲು
ಉತ್ತಮ ಪರಿಸರ ಹೊಂದಿರಲು
ನೀಡಿಹುದೆನಗೆ ಅಧಮ್ಯ  ಚೇತನ
ಶಾಂತ ಪರಿಸರದ ಶಾಂತಿ ನಿಕೇತನ|೨|

ಪ್ರೇರಣೆ ನೀಡಿದ ಮುಖ್ಯ ಶಿಕ್ಷಕರು
ಸುಂದರ ಬೋಧನೆಗೈದ ಶಿಕ್ಷಕರು
ನೆನೆವೆನು  ಅನ್ನಪೂರ್ಣೆಯರ
ಸೇವೆ ಸಲ್ಲಿಸಿದ ಸಿಬ್ಬಂದಿಯವರ |೩|

 ಆಟಗಳ  ಪಾಠಗಳ ಕಲಿತಿಹೆನು
ಸಹಪಾಟಿಗಳೊಂದಿಗೆ ನಲಿದಿಹೆನು
ಮಾದರಿ  ಪ್ರಜೆಯು ಆಗುವೆನು
ಶಾಲೆಯ ಕೀರ್ತಿಯ ಬೆಳಗುವೆನು|೪|

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

08 ಮಾರ್ಚ್ 2018

ಅಮ್ಮ (ಕವನ)/ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ನನ್ನ ಕವನ‌ ನನ್ನ ಅಮ್ಮನಿಗೆ ಅರ್ಪಣೆ

*ಅಮ್ಮ*

ನನ್ನ ಹೊತ್ತು ಹೆತ್ತ ಅಮ್ಮ ನೀನು
ನಿನ್ನಾಸರೆಯಲಿ ಕರುವು ನಾನು
ಸಹಿಸಿದೆ ನೂರು ನೋವುಗಳ
ಸರಿಸಿದೆ ಬದುಕಿನ  ಕಷ್ಟಗಳ|೧|

ಹಗಲಿರುಳು ದುಡಿದೆ ನನಗೆ
ಮರೆತೆಬಿಟ್ಟೆ  ನಿನ್ನ ಏಳಿಗೆ
ಉಡಲಿಲ್ಲ ಉಣಲಿಲ್ಲ ನೀನು
ಉಡಿಸಿ ಉಣಿಸಿ ಸಂಭ್ರಮಿಸಿದೆ|೨|

ದಾರಿ ತಪ್ಪಿದಾಗ ತಿದ್ದಿ ತೀಡಿದೆ
ಭಾರೀ ಪ್ರೀತಿಯ ಧಾರೆಯೆರೆದೆ
ಬೆಳೆಸಿದೆ ನನ್ನಲಿ ಸಂಸ್ಕಾರ
ನಿನ್ನ ‌ಹಾರೈಕೆಯ ರೀತಿ ಸುಂದರ|೩|

ಬೆಲೆ ಕಟ್ಟಲಾಗದು ನಿನ್ನ ತ್ಯಾಗಕೆ
ನೆಲೆ ನೀಡಿದೆ ನನ್ನ  ಬದುಕಿಗೆ
ಚಿಂತೆಯೆಲ್ಲವನೀಗ ನೀಗು
ಎಲ್ಲಾ ಜನ್ಮಕು ತಾಯಿ ನೀನಾಗು|೪|

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

07 ಮಾರ್ಚ್ 2018

*ಮತದಾನ ಜಾಗೃತಿ ಮೂಡಿಸುವಲ್ಲಿ ಶಾಲೆಗಳ ಚುನಾವಣಾ ಸಾಕ್ಷರತಾ ಕ್ಲಬ್ ಗಳ ಪಾತ್ರ*(ಲೇಖನ)

*ಮತದಾನ ಜಾಗೃತಿ ಮೂಡಿಸುವಲ್ಲಿ  ಶಾಲೆಗಳ ಚುನಾವಣಾ ಸಾಕ್ಷರತಾ ಕ್ಲಬ್ ಗಳ ಪಾತ್ರ*


ಪ್ರಪಂಚದ ಬಹುದೊಡ್ಡ ಪ್ರಜಾಪ್ರಭುತ್ವ ದೇಶಗಳಲ್ಲಿ ಭಾರತವು ಅಗ್ರ ಸ್ಥಾನ ಪಡೆದಿದೆ .ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು  ಮುಕ್ತ ಹಾಗೂ ನ್ಯಾಯಸಮ್ಮತವಾದ ಚುನಾವಣೆಗಳು ಪ್ರಮುಖ ಪಾತ್ರ ವಹಿಸುತ್ತವೆ  ಮತದಾರರ ಪಾತ್ರ ಅಷ್ಟೇ ಮಹತ್ವದ್ದಾಗಿದೆ
ಆದರೆ ಇಂದು ಮತದಾರರು ತಮ್ಮ ಕರ್ತವ್ಯಗಳನ್ನು ಸರಿಯಾಗಿ ನಿಭಾಯಿಸುತ್ತಿದ್ದರೆಯೆ ? ಎಂದರೆ ಉತ್ತರ ಸ್ಪಷ್ಟವಾಗಿ ಇಲ್ಲ ಎಂದೇ ಹೇಳಬಹುದು

ನಾಲ್ಕಾರು ಜನ‌ ಒಂದೆಡೆ ಸೇರಿದರೆ ಮುಗಿಯಿತು "ಈ ಸರ್ಕಾರ ಸರಿಯಿಲ್ಲ ಆ ಸರ್ಕಾರ ಸರಿಯಿಲ್ಲ ಈ ಮುಖ್ಯಮಂತ್ರಿ ಸರಿ ಇಲ್ಲ ಆ ಮಂತ್ರಿ ಉಪಯೊಗ ಇಲ್ಲ ಈ ಎಂ ಎಲ್ ಎ ಬರೀ ಆಶ್ವಾಸನೆ ಕೊಡೋದೆ ಆಯ್ತು " ಈಗೆ ಪುಂಕಾನುಪುಂಕವಾಗಿ ಮಾತನಾಡಿ ವೀರಾವೇಶ ತೋರುವಲ್ಲಿ ಎಲ್ಲರೂ ನಾ ಮುಂದು ತಾ ಮುಂದು ಎಂದು‌  ಬೇರೆಯವರ ತೆಗಳಲು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಮನೋಭಾವ ತೋರುವರ ಸಂಖ್ಯೆ ಹೆಚ್ಚಾಗಿದೆ.

ಪ್ರಜಾತಂತ್ರ ಗಣರಾಜ್ಯ ದಲ್ಲಿ  ಪ್ರಜೆಗಳ ಜವಾಬ್ದಾರಿ ಅಗಾಧ. ಅದು ಚುನಾವಣಾ ಕಾರ್ಯದಿಂದ ಹಿಡಿದು ನೀತಿ ನಿರೂಪಣೆಯ ವರೆಗೂ ವಿಸ್ತರಿಸಿದೆ .

ಚುನಾವಣಾ ಸಂದರ್ಭದಲ್ಲಿ ದೇಶದಲ್ಲಿ ಶೇಕಡಾವಾರು ನೂರು ಮತದಾನ ಸ್ವಾತಂತ್ರ್ಯ ಬಂದಾಗಿನಿಂದ ಆಗಿಲ್ಲ .ಶೇಕಡಾ ಎಪ್ಪತ್ತು ಮತದಾನವಾದರೆ ಅದೇ ದಾಖಲೆ  ಉಳಿದ ಮತದಾರರಿಗೆ ಜವಾಬ್ದಾರಿ ಇಲ್ಲವೆ ?ಇಂತವರು ನಾಯಕರ ರಾಜಕಾರಣಿಗಳ ಸರ್ಕಾರಗಳನ್ನು ಯಾವ ನೈತಿಕತೆಯಿಂದ ಟೀಕಿಸುತ್ತಾರೆ.?

ಇನ್ನೂ ಮತದಾನ ಮಾಡುವ ಮಹಾಪ್ರಭುಗಳ ಕಥೆ ಬೇರೆಯೇ ಇದೆ ಮತದಾನಕ್ಕೆ ಮುನ್ನ ಹಣ ಹೆಂಡ ಸೀರೆ ಮುಂತಾದ  ಆಮಿಷಗಳಿಗೆ ಬಲಿಯಾಗಿ ತಮ್ಮ ಮತ ಮಾರಿಕೊಂಡು ಮೊದಲ ಬಾರಿಗೆ ಭ್ರಷ್ಟಾಚಾರ ಬೆಳೆಯಲು ಕಾರಣರಾಗಿ ಮುಂದೆ ಇದೇ ಮತದಾರರು ತಮ್ಮ ನೇತಾರರ ತೆಗಳುವುದೆಷ್ಟು ಸರಿ?

*ಹಾಗಾದರೆ ನಮ್ಮ ಜವಾಬ್ದಾರಿಯನ್ನು ಪರಿಣಾಮಕಾರಿ ಯಾಗಿ ನಿಭಾಯಿಸುವುದು ಹೇಗೆ*

ಈ ನಿಟ್ಟಿನಲ್ಲಿ ಹುಟ್ಟಿಕೊಂಡ ಯೋಜನೆ ಇಂದಿನ ಮಕ್ಕಳೇ ಮುಂದಿನ ಮತದಾರರು ಆದ್ದರಿಂದ ಶಾಲಾ ಹಂತಗಳಲ್ಲಿ  *ಚುನಾವಣಾ  ಸಾಕ್ಷರತೆ ಕ್ಲಬ್* (Election Literacy Club) ಗಳ ಸ್ಥಾಪನೆ ಮಾಡಲಾಗಿದೆ

ಚುನಾವಣಾ ಸಾಕ್ಷರತಾ ಕ್ಲಬ್‌ ಗಳ ವಿಧಗಳು

೧  ಒಂಭತ್ತನೆ ತರಗತಿಯಿಂದ ಹನ್ನೆರಡನೇ ತರಗತಿ ವರೆಗೆ ಅಭ್ಯಾಸ ಮಾಡುವ ಭಾವಿ ಮತದಾರರ ಒಳಗೊಂಡ ಚುನಾವಣಾ ಸಾಕ್ಷರತಾ  ಕ್ಲಬ್ ಗಳು

೨  ಹಾಲಿ ಮತದಾರರ ಒಳಗೊಂಡ ಪದವಿ ಕಾಲೇಜು ಗಳಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್

*ಶಾಲೆಗಳಲ್ಲಿ ಚುನಾವಣಾ ಕ್ಲಬ್‌ಗಳ ರಚನೆ*

೧ ಶಾಲೆಯ ಒಂಭತ್ತನೇ ತರಗತಿಯ ಮೇಲ್ಪಟ್ಟ ಎಲ್ಲಾ ವಿದ್ಯಾರ್ಥಿಗಳು ಚುನಾವಣಾ ಸಾಕ್ಷರತಾ ಕ್ಲಬ್ ನ ಸದಸ್ಯರು.

೨ ಪ್ರತಿಯೊಂದು ಶಾಲೆಯಲ್ಲಿ ಸಮಾಜ ವಿಜ್ಞಾನ ಶಿಕ್ಷಕರನ್ನು ಮುಖ್ಯ ಶಿಕ್ಷಕರು ನೋಡಲ್ ಶಿಕ್ಷಕರು ಎಂದು ನೇಮಕ ಮಾಡುವರು

೩ ನೋಡಲ್ ಶಿಕ್ಷಕರು ಇತರೆ ಶಿಕ್ಷಕರ ಸಹಾಯದಿಂದ ಚುನಾವಣಾ ಪ್ರಕ್ರಿಯೆಯ ಮೂಲಕ ಪ್ರತಿ ತರಗತಿಯಲ್ಲಿ ಹೆಣ್ಣು ಗಂಡು ಮಕ್ಕಳನ್ನು ಒಳಗೊಂಡಂತೆ ಪ್ರತಿನಿಧಿಗಳ ಆಯ್ಕೆ ಮಾಡುತ್ತಾರೆ.

೪ ಆಯ್ಕೆ ಮಾಡಿದ ಪ್ರತಿನಿಧಿಗಳಲ್ಲಿ ಒಬ್ಬರು ಅದ್ಯಕ್ಷ ಮತ್ತು ಒಬ್ಬರು ಉಪಾಧ್ಯಕ್ಷ ರಾಗಿ ಆಯ್ಕೆ ಆಗುತ್ತಾರೆ

೫ ಇವರು ಶಾಲೆಯಲ್ಲಿ ಶಿಕ್ಷಕರ ಮಾರ್ಗದರ್ಶನದಲ್ಲಿ ಕ್ಲಬ್‌ ನ ಚಟುವಟಿಕೆಗಳನ್ನು ನಡೆಸುವರು

೬ ಜಿಲ್ಲಾ ಹಂತದಲ್ಲಿ ಸಮಾಜ ವಿಜ್ಞಾನ ವಿಷಯ ಪರಿವೀಕ್ಷಕರು ಈ ಶಾಲಾ ಕ್ಲಬ್ ಗಳ ಮೇಲುಸ್ತುವಾರಿ ಮತ್ತು ಅನುಪಾಲನೆ ಮಾಡುವರು.


*ಚುನಾವಣಾ ಸಾಕ್ಷರತಾ ಕ್ಲಬ್(E.L.C) ಗುರಿ ಮತ್ತು ಉದ್ದೇಶಗಳು*

೧. ಚುನಾವಣಾ ಸಾಕ್ಷರತೆಯನ್ನು ಮೂಡಿಸುವುದು.
೨ ಭಾವಿ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಪ್ರೇರಣೆ ನೀಡುವುದು.
೩ ಪ್ರಜಾಪ್ರಭುತ್ವ ಪರಿಕಲ್ಪನೆಯನ್ನು ನೀಡುವ ಪಠ್ಯೇತರ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು.
೪ ಭಾವಿ  ಮತದಾರರಿಗೆ ಮತದಾನ ಪ್ರಕ್ರಿಯೆಯ ಅರಿವು ಮೂಡಿಸುವುದು.
೫ ವಿದ್ಯಾರ್ಥಿಗಳಿಗೆ ಮತದಾನದ ಮಹತ್ವ ತಿಳಿಸುವುದು.
೬ ವಿದ್ಯುನ್ಮಾನ ಮತಯಂತ್ರ (E.V..M) ಮತ್ತು (V.V.P.AT ) ಮತದಾರರು ಪರಿಶೀಲಿಸಲು ಪೇಪರ್ ಆಡಿಟ್ ಟ್ರಯಲ್ ಬಗ್ಗೆ ಶಾಲೆಯಲ್ಲಿ ಪ್ರಾತ್ಯಕ್ಷಿಕೆಯನ್ನು ಮಾಡಿ ತೋರಿಸಲು ಕ್ರಮ ಕೈಗೊಳ್ಳುವುದು.
೭ ಯಾವುದೇ ಕಾರಣಕ್ಕೆ ಮತದಾನ ವಯಸ್ಸು ತಲುಪಿದ ಮೇಲೆ ಮತಚಲಾಯಿಸುವ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ತಿಳಿಹೇಳುವುದು.


ಶಾಲೆಯಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್ ಮೂಲಕ ಕೈಗೊಳ್ಳುತ್ತಿರುವ ಚಟುವಟಿಕೆಗಳು

೧ ಚುನಾವಣೆ ಪ್ರಕ್ರಿಯೆಯ ಕುರಿತು ರಸಪ್ರಶ್ನೆ ಹಮ್ಮಿಕೊಳ್ಳಲಾಗಿದೆ
೨ ಪ್ರಬಂದ ಸ್ಪರ್ಧೆ ಏರ್ಪಡಿಸಲಾಗುತ್ತದೆ
೩ ಭಿತ್ತಿ ಪತ್ರ ರಚನೆ ಸ್ಪರ್ಧೆ ಏರ್ಪಡಿಸಲಾಗುತ್ತದೆ
೪ಚುನಾವಣೆ ಪ್ರಕ್ರಿಯೆಯ ಬಗ್ಗೆ ಚರ್ಚಾ ಸ್ಪರ್ಧೆ ಏರ್ಪಡಿಸಲಾಗುತ್ತದೆ.
೫ ಶಾಲಾ ಸಂಸತ್ ಚುನಾವಣೆ ನಡೆಯುತ್ತದೆ
೬ ಶಾಲಾ ಹಂತದ ಸರ್ಕಾರ ಮತ್ತು ಮಂತ್ರಿ ಗಳ ಆಯ್ಕೆ ಮಾಡಲಾಗುತ್ತದೆ.


*ಉಪಸಂಹಾರ*

ಮುಂಬರುವ ಎಲ್ಲಾ ಚುನಾವಣೆಯಲ್ಲಿ ಎಲ್ಲರೂ ಮತ ಚಲಾಯಿಸುವ ಪ್ರತಿಜ್ಞೆ ಮಾಡೋಣ.ನಮ್ಮ ಮುಂದಿನ ಮತದಾರರು
 ಆಮಿಷಕ್ಕೆ  ಬಲಿಯಾಗದೇ ಮತ ಚಲಾಯಿಸಲು ಪ್ರೇರಣೆ ನೀಡೋಣ
 ಶಾಸನ ಮಾಡುವಾಗ ನಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡು  ನಮ್ಮ ನೀತಿ ನಿಯಮಗಳನ್ನು ನಾವೆ ರೂಪಿಸಿಕೊಳ್ಳಲು ಪಣ ತೊಡಲು ಮಕ್ಕಳ ಸಿದ್ದಗೊಳಿಸೋಣ . ಸರಿಯಾಗಿ ಕಾರ್ಯ ನಿರ್ವಿಸದ ನಮ್ಮ ಪ್ರತಿನಿಧಿ ಗಳ ಹಿಂದಕ್ಕೆ ಕರೆಯುವ ಚಳುವಳಿ ರೂಪಿಸೋಣ
  ಕಾರ್ಯಾಂಗದ ಪ್ರಾಮಾಣಿಕ ಅಧಿಕಾರಿಗಳಿಗೆ ಬೆಂಬಲ ನೀಡಿ ಆಡಳಿತವನ್ನು ಭ್ರಷ್ಟಾಚಾರ ಮುಕ್ತವಾಗಿ ಮಾಡಲು ಪ್ರಯತ್ನ ಮಾಡಲು ಮಕ್ಕಳಿಗೆ ಈ ಕ್ಲಬ್ ಗಳ ಮೂಲಕ ತಿಳುವಳಿಕೆ ನೀಡಬಹುದು.
ಈ ಮೇಲಿನ‌ ಸಂಕಲ್ಪ ದೊಂದಿಗೆ ಎಲ್ಲಾ ಶಾಲಾ ಚುನಾವಣಾ ಕ್ಲಬ್ ಗಳು ಕಾರ್ಯ ಪ್ರವೃತ್ತವಾದರೆ  ದೇಶದಲ್ಲಿ ಶೇಕಡಾ ನೂರು ಮತದಾನ ನಡೆದು ಉತ್ತಮ ಪ್ರತಿನಿಧಿಗಳ ಆಯ್ಕೆ ಮಾಡಿ  ಆಗ ಪರಿಣಾಮಕಾರಿ ಗಣತಂತ್ರದ ಮೂಲಕ ನಮ್ಮ ದೇಶ ಪ್ರಪಂಚದಲ್ಲಿ ಮಾದರಿ ಆಗುವುದರಲ್ಲಿ  ಸಂದೇಹವಿಲ್ಲ .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*






06 ಮಾರ್ಚ್ 2018

ಕೈಯಿಂದ ಊಟ ಮಾಡೋಣ ಆರೋಗ್ಯ ಹೊಂದೋಣ (ಸಂಗ್ರಹ ಲೇಖನ)

ಬೋಜನಂ ಅಮೃತಮಸ್ತ್
________________

ಕೈಯಲ್ಲೇ ಊಟ ಮಾಡುವುದರಿಂದ ಆಗುವ ವೈಜ್ಞಾನಿಕ ಲಾಭಗಳು.

ಡೈನಿಂಗ್ ಟೇಬಲ್ ಮೇಲೆ ಸ್ಫೂನ್ಸು, ಫೋರ್ಕ್ಸ್ ಬಂದು ಕೈಯಲ್ಲಿ ಭೋಜನ ಸವಿಯುವವರನ್ನು ಅನಾಗರೀಕರ ತರಹ ನೋಡುವ ಕಾಲ ಇದು. ತಿಂಡಿ ಏನೇ ಇದ್ದರೂ ಫೋರ್ಕ್ ಕಡ್ಡಾಯ ಎಂಬಂತಾಗಿದೆ. ಹೋಟೆಲ್‌ನಲ್ಲಿ ಯಾರಾದರೂ ಕೈಯಲ್ಲಿ ಊಟ ಮಾಡುತ್ತಿದ್ದರೆ ಅವರನ್ನು ವಿಚಿತ್ರವಾಗಿ ನೋಡುವ ಮನೋಭಾವ ಇದೆ. ಇನ್ನು ಮನೆಯಲ್ಲೂ ಅಷ್ಟೇ ಮಕ್ಕಳಿಗೆ ಸ್ಫೂನ್ ಅಭ್ಯಾಸ ಮಾಡುತ್ತಿದ್ದಾರೆ ತಂದೆತಾಯಿ. ಅದಕ್ಕೆ ಅವರು ಕೊಡುತ್ತಿರುವ ಮುಖ್ಯ ಕಾರಣ…ಕೈಗಳು ಸ್ವಚ್ಛವಾಗಿರಲ್ಲ ಅನ್ನೋದು. ಆದರೆ ಒಮ್ಮೆ ಕೈಯಲ್ಲಿ ಊಟ ಮಾಡುವುದರಿಂದ ಆಗುವ ವೈಜ್ಞಾನಿಕ ಲಾಭಗಳನ್ನು ನೋಡೋಣ. ಇದನ್ನು ಓದಿದ ಮೇಲೆ ನೀವು ಎಲ್ಲೇ ಇರಿ…? ನೀವು ಮಟ್ಟಸವಾಗಿ ಕೈಯನ್ನು ಉಪಯೋಗಿಸಿ ಭೋಜನ ಮಾಡುತ್ತೀರಿ ಎಂದು ಆಶಿಸುತ್ತೇವೆ.

ಕೈಯಲ್ಲಿ ಆಹಾರ ತಿನ್ನಿವುದರಿಂದ ಆಗುವ ಪ್ರಯೋಜನಗಳು: ( As Per Science).

1. ಕೈ ಸ್ಪರ್ಶದಿಂದ ದೇಹದಲ್ಲಿ ಶಕ್ತಿ ಸಂಚಯವಾಗುತ್ತದೆ.

2. ಕೈಯಲ್ಲಿ ಆಹಾರ ತಿನ್ನುವುದರಿಂದ ಕೆಲವು ಮಿಲಿಯನ್ ನರಗಳು ನಮ್ಮ ಮಿದುಳಿಗೆ ಸಂಕೇತ ಕಳುಹಿಸುತ್ತವಂತೆ.

3. ಆಹಾರವನ್ನು ಕೈಯಲ್ಲಿ ಸ್ಪರ್ಶಿಸುತ್ತಿದ್ದಂತೆ, ಆಹಾರ ತೆಗೆದುಕೊಳ್ಳುವ ವಿಷಯ ಮಿದುಳು ಉದರಕ್ಕೆ ಸಂಕೇತ ರವಾನಿಸುತ್ತದೆ. ಆಗ ಹೊಟ್ಟೆಯಲ್ಲಿ ಜೀರ್ಣ ರಸಗಳು, ಎಂಜೈಮ್‌ಗಳು ಬಿಡುಗಡೆಯಾಗಿ ಜೀರ್ಣಕ್ರಿಯೆ ಸುಗಮವಾಗಿ ಆಗುತ್ತದೆ.

4. ಕೈಯಲ್ಲಿ ಆಹಾರ ತೆಗೆದುಕೊಳ್ಳುವುದರಿಂದ ಆರೋಗ್ಯವಾಗಿರುವುದಷ್ಟೇ ಅಲ್ಲದೆ, ಯಾವುದೇ ಆಲೋಚನೆಗಳು ಬರದೆ ಒಂದೇ ಆಲೋಚನೆಯಲ್ಲಿ ಇರುತ್ತೇವೆ.

5. ನಮ್ಮ ಆಹಾರದಲ್ಲಿ ಎಣ್ಣೆಯನ್ನು ಹೆಚ್ಚಾಗಿ ಬಳಸುತ್ತೇವೆ. ಹೀಗೆ ತಯಾರಿಸಿದ ಆಹಾರವನ್ನು ಸ್ಫೂನ್ಸ್, ಫೋರ್ಕ್ಸ್‌ನಿಂದ ತಿನ್ನುವುದರಿಂದ ಪ್ರತಿಕ್ರಿಯೆ ಏರ್ಪಟ್ಟು ರುಚಿ ಕೆಡುತ್ತದೆ.

6. ಕೈ ಬೆರಳಲ್ಲಿ ಆಹಾರವನ್ನು ಕಲೆಸಿಕೊಂಡು, ಒಂದೊಂದೇ ತುತ್ತು ತಿನ್ನುವುದರಿಂದ ರಕ್ತಸಂಚಾರ ಚೆನ್ನಾಗಿ ಆಗುತ್ತದೆ.

7. ಕೈಬೆರಳಲ್ಲಿ ಆಹಾರ ತೆಗೆದುಕೊಳ್ಳುವುದರಿಂದ, ಬೆರಳು ತುಟಿಗೆ ತಾಗುತ್ತಿದ್ದಂತೆ ಬಾಯಲ್ಲಿ ಲಾಲಾರಸ ಉತ್ಪನ್ನವಾಗುತ್ತದೆ.

8. ಇನ್ನು ಕೈ ಬೆರಳಲ್ಲಿ ಆಹಾರ ತೆಗೆದುಕೊಳ್ಳುವುದರಿಂದ ಅನಾರೋಗ್ಯ ಪಾಲಾಗದೆ, ಆರೋಗ್ಯವಾಗಿರುತ್ತೇವೆ. ಜೀರ್ಣ ಪ್ರಕ್ರಿಯೆ ಚೆನ್ನಾಗಿ ನಡೆಯುತ್ತದೆ. ಇದು ಒಂದು ರೀತಿ ವ್ಯಾಯಾಮದಂತಿರುತ್ತದೆ.

ಪುರಾಣಗಳ ಪ್ರಕಾರ…

* ಕೈಯಲ್ಲಿರುವ ಒಂದೊಂದು ಬೆರಳು ಒಂದೊಂದು ತತ್ವವನ್ನು ಹೊಂದಿರುತ್ತವೆ.

* ಹೆಬ್ಬೆರಳು: ಅಗ್ನಿತತ್ವ

* ತೋರು ಬೆರಳು: ವಾಯುತತ್ವ

* ಮಧ್ಯ ಬೆರಳು: ಆಕಾಶ

* ಉಂಗುರ ಬೆರಳು: ಭೂಮಿ

* ಕಿರುಬೆರಳು: ಜಲತತ್ವ

ಈ ಐದು ಬೆರಳುಗಳ ಸ್ಪರ್ಶ ಆಹಾರಕ್ಕೆ ತಾಕಿದಾಗ ಜೀವಶಕ್ತಿ ಉತ್ತೇಜನಗೊಳ್ಳುತ್ತದೆ.

ಫ್ಯಾಷನ್‌ಗೆ ಕೊಟ್ಟಷ್ಟು ಬೆಲೆ...

ಸಂಸ್ಕೃತಿಗೆ ಕೊಟ್ಟರೆ...

ಮಾನವ ಜೀವನ ಆರೋಗ್ಯಕರ.....

ಯೋಚಿಸಿ......

ಅಲಂಕಾರ ಬೇಕೆ ?
ಅಥವಾ
ಆರೋಗ್ಯವೇ ????