03 ಫೆಬ್ರವರಿ 2018

ಶಿಕ್ಷಕರಿಗೆ ಶಿಕ್ಷಿಸಲು ಅವಕಾಶ ನೀಡದಿದ್ದರೆ ........?



💦ಜೇನಿನ ಹನಿ💦
..........................

ಅಧ್ಯಾಪಕರು ಬೆತ್ತ ಹಿಡಿಯೋದನ್ನು ಬಿಟ್ರು....
ಮಕ್ಕಳು ಶಿಸ್ತನ್ನು ಮರೆತರು....

 📍
ಅಧ್ಯಾಪಕರು ವಿಮರ್ಶಿಸೋದನ್ನು ಬಿಟ್ರು ...
ಮಕ್ಕಳು ಹೇಡಿಗಳಾದರು...

📍
ಅಧ್ಯಾಪಕರು ಬಯ್ಯೋದನ್ನು ಬಿಟ್ರು...
ಮಕ್ಕಳು ಅಹಂಕಾರಿಗಳಾದರು...

📍
ಅಧ್ಯಾಪಕರು ಕಲಿಯದವರನ್ನು ಗೆಲ್ಲಿಸಲು ನಿರ್ಬಂಧಿತರಾದರು....
ಮಕ್ಕಳು ಮೂರ್ಖರ ಸಮೂಹ ವಾಯಿತು..

📍
ಅಧ್ಯಾಪಕರು ಒಳ್ಳೆಯದಕ್ಕೆ ಏನಾದರೂ ಅಂದರೆ ಅತ್ಮಹತ್ಯೆ ಗೆಯ್ಯುವ ಮನಸನ್ನು ಸೃಷ್ಟಿಸಿದ್ದು ಪೋಷಕ ಸಮೂಹವೇ ಆಗಿದೆ..

📍
ಅಧ್ಯಾಪಕರ ಸಣ್ಣ ಸಣ್ಣ ಶಿಕ್ಷೆಗಳಿಗೆ ದೊಡ್ಡ ಬಾಯಿಯಲ್ಲಿ ದೂರು ದಾಖಲಿಸಿದವರು....

ನನ್ನ ಮಗು ತಪ್ಪು ಮಾಡೊಲ್ಲ ಎಂದು ಹೇಳಿ ಮಗುವಿನ ಎದುರಲ್ಲೇ ಅಧ್ಯಾಪಕನನ್ನು ಅಸಭ್ಯ ನುಡಿದ ಪೋಷಕರು....

📍
ನೀವು ಮಕ್ಕಳನ್ನು ಪ್ರೀತಿಸಿ ಲಾಲಿಸಿದಿರಿ...
ಅವರ ಆತ್ಮವಿಶ್ವಾಸಕ್ಕೆ ಕೊಡಲಿ ಏಟು ಹಾಕಿದಿರಿ...

ಹೆತ್ತ ತಾಯಿಯಲ್ಲೂ ,ತಂದೆಯಲ್ಲೂ ಹೇಳಲಾರದ ಯಾವ ದುಃಖ? ಏನು ಸಮಸ್ಯೆ ಒಂದು ಮಗುವಿಗೆ ಇರೋದು?

ಆತ್ಮಹತ್ಯೆ ಗೆ ಪ್ರೇರಣೆ ನೀಡಿದವರು ಯಾರು...?

ಜೀವನದಲ್ಲಿ ವಿದ್ಯೆಯೆಂಬ ದೀಪವನ್ನು ಬೆಳಗಿಸುವ ಅಧ್ಯಾಪಕರೋ...?

ಲಾಲಿಸಿ ಮುದ್ದಿಸಿ ಕೊಂದಿರಿ ಅಲ್ಲವೇ ಪೋಷಕರೇ....?

📍
ಯೋಚಿಸಿ....
ಅಧ್ಯಾಪಕರು ಶತ್ರುಗಳಲ್ಲ...

ಎಲ್ಲಾ ಮಕ್ಕಳು ಚೆನ್ನಾಗಿರಬೇಕು ಎಂದು ಪ್ರಾರ್ಥಿಸುವವರು ಮಾತ್ರ...

📍
ಹೃದಯದಲ್ಲಿ ಬೆಂಕಿಜ್ವಾಲೆ ಉರಿಯುತ್ತಿದ್ದರೂ  ಸಮಾಜಕ್ಕೆ ಪ್ರಕಾಶವನ್ನು ಮಾತ್ರ ನೀಡಿದವರು....
ಅಧ್ಯಾಪಕರು....

🕹
ದೀಪದ ಬೆಳಕಿನಂತೆ ಪ್ರಕಾಶ ಬೀರಿದವರು....

ಹೇ ಸಮಾಜವೇ....
ನೀವೆ ಅಧ್ಯಾಪಕರು ಸರಿಯಲ್ಲವೆಂದು ಮಕ್ಕಳಿಗೆ ಕಲಿಸಿಕೊಟ್ಟವರು...

೧೦೯೮....

ಬಾಲಾವಕಾಶ....

ಪೋಕ್ಸೋ.,...

ಚೈಲ್ಡ್ ಲೈನ್.....

ಎಂದು ಹೇಳಿ ಮಗುವಿಗೆ ಧೈರ್ಯ ತುಂಬಿದವರು....

🕹ಮಗುವಿನ ಎದುರಲ್ಲಿ ಏನೆಲ್ಲ ಅಂದಿರಿ ಪೋಷಕರೆ ನೀವು...

* ಆ ಅಧ್ಯಾಪಕರು ಕಲಿಸೋದಿಲ್ಲ

ಕಲಿಸಿದರೂ ಅರ್ಥವಾಗೋದಿಲ್ಲ

ಸುಮ್ಮನೆ ಹೊಡೆಯುತ್ತಾರೆ... ಬಯ್ಯುತ್ತಾರೆ....

ನಾಲಿಗೆ ಸರಿಯಿಲ್ಲ...

*ಪಿಟಿಎ ಮೀಟಿಂಗಿನಲ್ಲಿ ಬೊಬ್ಬಿಟ್ಟು ದೂರಲಿಲ್ಲವೇ ನೀವು....

ಮಗುವಿಗೆ ಅಧ್ಯಾಪಕನ ಮೇಲೆ ಗೌರವ,ಬೆಲೆಯಿಲ್ಲದಾಗಿಸಿದ್ದು ನೀವೇ ಪೋಷಕರೇ.....

ಪ್ರತಿಫಲ.....

ಯಾವುದಕ್ಕೂ ಯೋಗ್ಯವಲ್ಲದ ನ್ಯೂ ಜನ್ ಜನಾಂಗ....

ಎಲ್ಲಾ ಪಾಪಗಳ ತುಂಬಿಕೊಂಡಿರೋ ಯುವ ಜನಾಂಗ..

ದೊಡ್ಡವರನ್ನು ಗೌರವಿಸದವರು.....

ಪೋಷಕರೇ... ನಿಮ್ಮನ್ನು ಕೂಡ ಅನುಸರಿಸದ ಮಕ್ಕಳು...

ಹೆತ್ತವರೇ ಅನುಭವಿಸಿ....

📍
ಅಧ್ಯಾಪಕರಿಗೆ ಶಿಕ್ಷಿಸಲು ಅವಕಾಶ ಕೊಡದಿದ್ದರೆ....

೧- ಸಮಾಜ ಧಾರ್ಮಿಕತೆಯನ್ನು ಕಳೆದು ಕೊಳ್ಳುತ್ತದೆ

೨- ಆತ್ಮಹತ್ಯೆ ಹೆಚ್ಚುತ್ತದೆ...

೩- ಹೆತ್ತವರನ್ನು ಧಿಕ್ಕರಿಸುವ ಮಕ್ಕಳ ಸಮೂಹವು ಬೆಳೆಯುತ್ತದೆ...

೪- ಮದ್ಯ, ಅಮಲು ಪದಾರ್ಥ, ಮೊಬೈಲ್ ಗಳಿಗೆ ಬಲಿಯಾಗುವ ಯುವ ಸಮಾಜದ ಸೃಷ್ಟಿ ಯಾಗುತ್ತದೆ....

೫- ಪ್ರೀತಿ, ದಯೆ, ದಾಕ್ಷಿಣ್ಯ, ಗೌರವ ಇಲ್ಲದ ಕೌಮಾರ, ಯುವಕರ ಸೃಷ್ಟಿ ಯಾಗುತ್ತದೆ...

೬- ಕುಟುಂಬ ಜೀವನದಲ್ಲಿ ಏರುಪೇರು ಸಂಭವಿಸಬಹುದು

೭- ಅಶಾಂತಿ ತುಂಬಬಹುದು
ನ್ಯಾಯ, ನೀತಿ,ಧರ್ಮ ನಾಶವಾಗಬಹುದು

ಪ್ರತಿಯೊಬ್ಬ ಮನುಷ್ಯನ ಮನಸ್ಸಿನಲ್ಲೂ  ಕೆಟ್ಟದ್ದು ಮಾತ್ರ ತುಂಬಬಹುದು, ಕೆಟ್ಟದ್ದನ್ನು ಮಾತ್ರ ಯೋಚಿಸುವಂತಾಗಬಹುದು..

💦💦💦

ಪೋಷಕರೇ....
ಅಧಿಕಾರಿಗಳೇ....
ಜನಸಮೂಹವೇ.....
ಅನುಭವಿಸಿ...

💦 ತಾನು ತೋಡಿದ ಹಳ್ಳಕ್ಕೆ....
ತಾನೇ... ಬಿದ್ದಂತೆ....

*ಒಂದು ಕ್ಷಣ ಚಿಂತಿಸಿ
ಹೊಸ ಸಮಾಜದ ಸಂಕಲ್ಪ...
ಅದು ನಮ್ಮ ಕೈಯಲ್ಲಿ.... ಜೇನಿನ ಗೂಡಲ್ಲಿರುವ ಜೇನಹನಿಯಂತೆ.... ..
🎯🎯🎯🎯🎯


ಕೃಪೆ : ನಾ.ಪಿ‌ ಪೆರಡಾಲ
ಸಂಗ್ರಹ: ಸಿ.ಜಿ ವೆಂಕಟೇಶ್ವರ

ಹನಿಗವನಗಳು (ಸ್ನೇಹ)

ಹನಿಗವನಗಳು

*ಸ್ನೇಹಿತ*

ಅವಳೆಂದಳು
ಬಾ ನನ್ನನಾಲಂಗಿಸು
ನನ್ನ ಸ್ನೇಹಿತ
ಅವನಂದ
ಮೊನ್ನೆ ಹೀಗೇ
ಅಂದಿದ್ದಳು' ಹಿತಾ '


*ವಿಧಿಯಿಲ್ಲ*

ಸ್ನೇಹವನ್ನು ಹಣದಿಂದ
ಕೊಳ್ಳಲು ಸಾದ್ಯವಿಲ್ಲ
ಗೊತ್ತು ಅದರೆ ಅವನ
ಸ್ನೇಹ ಹೊರಗಡೆ ಬಂದರೆ
ಹಣ ಖರ್ಚು ಮಾಡದಿದ್ದರೆ
ಇವನಿಗೆ ವಿಧಿಯಿಲ್ಲ 

30 ಜನವರಿ 2018

ಮರದ ವ್ಯಥೆ (ಸಂಗ್ರಹ)

ಒಂದು ಮರದ ಮೇಲೆ ಸದಾ ಗೂಬೆಯೊಂದು  ಕೂರುತ್ತಿತ್ತು. ಮರಕ್ಕೆ ಇಷ್ಟವಿರಲಿಲ್ಲ.

ಒಂದು ದಿನ ಬಡಗಿ ಮರವನ್ನು ಕಡಿದು ಹಾಕಿದ. ಮರಕ್ಕೆ ಎಲ್ಲಿಲ್ಲದ ಆನಂದ, ಕೊನೆಗೂ ಗೂಬೆಯಿಂದ ಬಿಡುಗಡೆ ದೊರಕಿತು ಎಂಬ ಖುಷಿ. ಆದರೆ, ಆ ಖುಷಿ ಹೆಚ್ಚು ಕಾಲ ಉಳಿಯಲಿಲ್ಲ.

ಬಡಗಿ ಆ ಮರವನ್ನು ಕತ್ತರಿಸಿ
ವಿಧಾನ ಸಭೆಯ ಕುರ್ಚಿಗಳಾಗಿ ಮಾಡಿದ

ಸಂಗ್ರಹ : ಸಿ .ಜಿ ವೆಂಕಟೇಶ್ವರ

ಗಜ಼ಲ್ ೨೨ ( ನನ್ನ ನಿನ್ನ ನಡುವೆ) ಕವಿಬಳಗ ವಾಟ್ಸಪ್ ತಂಡದ ಸ್ಪರ್ಧೆಯಲ್ಲಿ ದ್ವಿತೀಯ ಪುರಸ್ಕಾರ ಪಡೆದ ಗಜ಼ಲ್


*ಗಜ಼ಲ್ ೨೨*


ಎಷ್ಟು ನದಿಗಳು ಹರಿದುಹೋದವು ನನ್ನ ನಿನ್ನ ನಡುವೆ
ಎಷ್ಟು  ಬಿಕ್ಕುಗಳು ಸುಳಿದುಹೋದವು ನನ್ನ ನಿನ್ನ  ನಡುವೆ

ಹಮ್ಮು ಬಿಮ್ಮುಗಳ ತಾಕಲಾಟ ಮುಗಿಯದ ಜೂಟಾಟ
ಸಂಬಂಧಗಳು  ಬಳಲಿಹೋದವು ನನ್ನ ನಿನ್ನ ನಡುವೆ

ಸುಳ್ಳುಗಳ ಬೆಳಕಿನಲಿ ಸತ್ಯದ ಸತ್ಯ ಕ್ಕೆ ಕಾರ್ಮೋಡ ಮುತ್ತಿದವು
ಹಗಲುಗಳಲಿ ಕತ್ತಲು ಕವಿದುಹೋದವು ನನ್ನ ನಿನ್ನ ನಡುವೆ

ದಿನ ಮಾಸ ವರುಷಗಳು ಕಳೆದವು ಅನುಸರಿಸಿ ಒಂದನೊಂದು
ಹೊಂದಾಣಿಕೆಯಿಲ್ಲದೇ ದಿನ ಕಳೆದುಹೋದವು ನನ್ನ ನಿನ್ನ ನಡುವೆ

ಸೀಜೀವಿಗೆ ಮುಗಿಯದ ಆಸೆ ಸಂಬಂಧಗಳ ಉಳಿಸಲು  ಬೆಳೆಸಲು
ಕಟ್ಟಿದ ಸೇತುವೆಗಳೆಲ್ಲಾ ಮುರಿದುಹೋದವು ನನ್ನ ನಿನ್ನ ನಡುವೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

29 ಜನವರಿ 2018

ಭಾಗ್ಯವಿಧಾತ (ಕವನ) "ಕನ್ನಡ ಸಾಹಿತ್ಯ ಲೋಕ " ವಾಟ್ಸಪ್ ಗುಂಪಿನ ವಾರದ ಸ್ಪರ್ಧೆಯಲ್ಲಿ" ಉತ್ತಮ ಕವನ" ಪುರಸ್ಕಾರ ಪಡೆದ ಕವನ




*ಭಾಗ್ಯವಿಧಾತ*

ವಂದಿಪೆನು ನೇತಾಜಿಗೆ 
ನಮಿಪೆನು ವೀರಸಿಂಹನಿಗೆ
ಭಾರತ ರಾಷ್ಟ್ರೀಯ ಸೇನೆ ಕಟ್ಟಿದೆ
ಬ್ರಿಟಿಷರ ಧಿಮಾಕಿಗೆ ಕುಟ್ಟಿದೆ|೧|

ಜೈ ಹಿಂದ್ ಘೋಷ ಮೊಳಗಿಸಿದೆ
ದೇಶ ಭಕ್ತಿಯ ಕಿಚ್ಚು ಹತ್ತಿಸಿದೆ 
ಫಾರ್ವರ್ಡ್ ಬ್ಲಾಕ್ ಹರಿಕಾರ
ಪರಂಗಿಯರ ಎದುರಿಸಿದ ಎದೆಗಾರ|೨|

ಭಾರತ ದೇಶದ ಭಾಗ್ಯವಿಧಾತ 
ತಾಯಿಯ ಋಣವ ತೀರಿಸಿದಾತ
ಶಿಸ್ತಿನ ಸಿಪಾಯಿ ನಮಗೆಲ್ಲ
ಸ್ಪೂರ್ತಿಯ ಸೆಲೆಯು ಜಗಕೆಲ್ಲ|೩|

ಹಾತೊರೆಯಲಿಲ್ಲ ನಿಮ್ಮ ಸುಖಕೆ 
ಹೋರಾಡಿದಿರಿ ನೀವು ಸ್ವಾತಂತ್ರಕೆ 
ಉಳಿದಿದೆ ನಿಮ್ಮೆಸರು ಧರೆಯಲೆಲ್ಲ 
 ನಾವೆಂದಿಗೂ ನಿಮ್ಮನು ಮರೆಯಲ್ಲ|೪|

*ಸಿ.ಜಿ..ವೆಂಕಟೇಶ್ವರ*
*ಗೌರಿಬಿದನೂರು*