01 ಡಿಸೆಂಬರ್ 2017

*ವಸುಧೈವಕುಟುಂಬಕಂ* (ಕವನ)

*ವಸುಧೈವಕುಟುಂಬಕಂ*

ಹಚ್ಚಿಬಿಡೋಣ  ಸ್ನೇಹದ ದೀಪ
ಅಳಿಸಿಬಿಡೋಣ  ದ್ವೇಷದ ಶಾಪ||

ಜಾತಿ ಮತದ ಕೊಳೆ ತೊಳೆದು
ಮೇಲು ಕೀಳಿನ ತರತಮ ಜರಿದು
ಅಸಹಿಷ್ಣುತೆಯ ವಾದ  ತೊಡೆದು
ಎಲ್ಲರೂ ಸ್ನೇಹದ ದೀಪ ಹಚ್ಚೋಣ||

ನಗುವುದ ಎಲ್ಲರಿಗೂ ಕಲಿಸೋಣ
ನಗುತಾ ನಲಿಯುತ ಬಾಳೋಣ
ಮಗುವಿನ ನಗುವ ಕಲಿಯೋಣ
ನಾವು ನಗುವಿನ ದೀಪ ಹಚ್ಚೋಣ||

ಗಡಿಗಳ ಗೊಡವೆ ಬಿಡೋಣ
ಪ್ರತ್ಯೇಕತೆ ಕೂಗು ತಡೆಯೋಣ
ವಿಶ್ವಮಾನವತೆ ತತ್ವ ಸಾರೋಣ
ವಸುಧೈವಕುಟುಂಬಕಂ ಎನ್ನೋಣ||

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

30 ನವೆಂಬರ್ 2017

ಗಗನಯಾನ (ಲೇಖನ)


*ಗಗನಯಾನ*

ನಾನು ನಾಸಾ ಸಂಸ್ಥೆಯವರು ಏರ್ಪಡಿಸಿದ್ದ "ಮಂಗಳನ ಅಂಗಳಕ್ಕೆ ಮಾನವ" ಎಂಬ ಯೋಜನೆಯ ಜಾಹಿರಾತನ್ನು ಪತ್ರಿಕೆಯಲ್ಲಿ ನೋಡಿ ಅರ್ಜಿ ಹಾಕಿ ಮೂರು ತಿಂಗಳಾಗಿತ್ತು .ಸರ್ ನಿಮಗೊಂದು ಕೊರಿಯರ್ ಇದೆ ಎಂದು ಕೊರಿಯರ್ ಬಾಯ್ ಲೆಟರ್ ಕೈಗಿತ್ತು ಹೋದ .ನಾನು ನಾಸಾ ಸಂಸ್ಥೆಯ ಯೋಜನೆಗೆ ಪ್ರಾಥಮಿಕ ಆಯ್ಕೆ ಪ್ರಕ್ರಿಯೆಗೆ ಅಯ್ಕೆಯಾಗಿ ಬೆಂಗಳೂರಿನಲ್ಲಿ ಇಸ್ರೋ ಕಛೇರಿಗೆ ಬರಲು ತಿಳಿಸಿದ್ದರು .ಅಂದು ಬೆಳಿಗ್ಗೆ ೧೦.೩೦ ಕಚೇರಿ ತಲುಪಿದ ನನಗೆ ಇಂಗ್ಲೀಷ್ ನಲ್ಲಿ ಸಂದರ್ಶನ ಮಾಡಿ ನೀವು ಆರ್ಟ್ಸ್ ಓದಿ ವಿಜ್ಞಾನ ಸಂಬಂದಿಸಿದ ವಿಷಯಗಳ ಮೇಲೆ ಆಸಕ್ತಿಯನ್ನು ಬೆಳೆಸಿಕೊಂಡಿರುವಿರಿ ಹೇಗೆ ಎಂದರು. ನಾನು ಸಮಾಜ ವಿಜ್ಞಾನದ ಶಿಕ್ಷಕ ಎಂದೆ .
ಕಛೇರಿಯ ಹೊರಗೆ ಸಂಜೆ ೫.೩೦ ಕ್ಕೆ ೧೦೦ ಜನ ಸಂದರ್ಶಿತರಲ್ಲಿ ಇಬ್ಬರನ್ನು ಮಾತ್ರ ಯೋಜನೆಗೆ ಆಯ್ಕೆ ಮಾಡುವ ಆಯ್ಕೆ ಪಟ್ಟಿ ಪ್ರಕಟಿಸಲು ಸಿದ್ದತೆ ನಡೆದಿತ್ತು. ಇಸ್ರೋ .ಐ ಐ ಎಸ್ಸಿ ವಿಜ್ಞಾನಿಗಳು ಸಂದರ್ಶನದಲ್ಲಿ ಪಾಲ್ಗೊಂಡಿದ್ದರು ಮಾನಸಿಕವಾಗಿ ನಾನು ಆಯ್ಕೆ ಆಗಿಲ್ಲ ಎಂದು ಹೊರಡಲು ಸಿದ್ದನಾದೆ .ಮೈಕಿನಲ್ಲಿ  ಸತೀಶ್ ಧವನ್ ಮತ್ತು ಸಿ.ಜಿ.ವೆಂಕಟೇಶ್ವರ ಎಂದು ಕರೆದಾಗ ನನ್ನ ಕಿವಿ ನಾನೇ ನಂಬದೇ ಇದು ಕನಸೋ ನನಸೋ ಎಂದು ಮೈಮುಟ್ಟಿ ನೋಡಿಕೊಂಡೆ ಎಲ್ಲ ವಿಜ್ಞಾನಿಗಳು ಬಂದು ಅಭಿನಂದಿಸಿದರು .ಆಯ್ಕೆ ಪತ್ರ ನೀಡಿ ಮುಂದಿನ ತಿಂಗಳು ಅಮೆರಿಕದ ನಾಸಾದಲ್ಲಿ ತರಬೇತಿಯನ್ನು ನೀಡಲಾಗುತ್ತದೆ ಅಲ್ಲಿಗೆ ಬರಲು‌ನಿಮಗೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿಹೊರಟರು.ದೇಶ ಬಿಟ್ಟು ಹೊರಗಡೆ ಕಾಲಿಟ್ಟಿರದ ನಾನು ಅಮೆರಿಕವನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದೆ .ಮೊದಲ ವಾರ ಆಕಾಶಯಾನದ ಬಗ್ಗೆ ಮೂಲಭೂತ ವಿವರಣೆ ,ಅಂತರಿಕ್ಷದ ವಾತಾವರಣ, ಅಹಾರ ಮುಂತಾದ ವಿಷಯಗಳ ಬಗ್ಗೆ ಪ್ರಾಯೋಗಿಕ ತರಗತಿಯಲ್ಲಿ ಹೇಳಿಕೊಟ್ಟರು .ನಾಳೆಯಿಂದ ನಿಮ್ಮನ್ನು ರಾಕಟ್ನಲ್ಲಿ ಅಂತರಿಕ್ಷದಲಿ ಹಾರಿಸಿ ತರಬೇತಿ ನೀಡಲಾಗುತ್ತದೆ ಎಂದರು,ಆಗ ಒಂಥರ ಅವ್ಯಕ್ತ ಭಯ ಶುರುವಾಯಿತು. ಆದರೂ ದೈರ್ಯ ತೆಗೆದುಕೊಂಡು ಮಾರನೇದಿನ ಬೆಳಿಗ್ಗೆ ಭಾರತೀಯ ಕಾಲಮಾನ ೬.೩೦ ಕ್ಕೆ ಗಗನಯಾನಿ ದಿರಿಸಿನಲ್ಲಿ ಸಿದ್ದ ನಾಗಿ ರಾಕೆಟ್ ನಲ್ಲಿ ೭ ಜನ ಸಹ ಗಗನಯಾತ್ರಿಗಳ ಜೊತೆ ರಾಕೆಟ್ ಮೇಲೇರಿತು  ನನ್ನ ಮೈ ಜುಂ ಎಂದಿತು ರೋಮಾಂಚನಗೊಂಡು ಕಿರುಚಿದೆನು ."ರೀ ಯಾಕೆ ಕಿರಿಚುತೀರಿ ಇಗೋ ತಗೊಳ್ಳಿ ಕಾಫಿ "ಎಂದು ನನ್ನವಳು ಕಾಫಿ‌ಲೋಟ ಟೇಬಲ್ ಮೇಲಿಟ್ಟು ಅಡಿಗೆ ಮನೆಗೆ ನಡೆದಳು.

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಹನಿಗವನಗಳು (ಹೂಗಳು) ಹನಿ ಹನಿ ಇಬ್ಬನಿ ವಾಟ್ಸಪ್ ತಂಡದಿಂದ ಬಹುಮಾನ ಪಡೆದ ಹನಿಗವನಗಳು

ಜನನ
ಹನಿಗವನಗಳುಗಮನ

*೧*
*ಕೇಳಬೇಡಿ*

ಉದ್ಯಾನವನದಲ್ಲಿತ್ತು ಬೋರ್ಡ್
ಹೂಗಳನ್ನು ಕೀಳಬೇಡಿ
ನನ್ನವಳು ಕಿತ್ತೇಬಿಟ್ಟಳು
ಮುಡಿಗೇರಿಸಿ ಅಂದಳು
ಏಕೆಂದು ನೀವು
ಕೇಳಬೇಡಿ

*೨*
*ಉದ್ಯಾನವನ*

ನನ್ನವಳು ಮುಡಿದಳು
ನಾನು ಕೊಟ್ಟ ವಿವಿಧ
ಜಾತಿಯ ಹೂಗಳನ
ನೋಡಿದರೆ ಅವಳ
ತುರುಬೇ ಉದ್ಯಾನವನ

*೩*

*ಮಕರಂದ*

ಪ್ರಿಯೆ ನಾ ದುಂಬಿಯಾಗಿ
ಹೀರಲೇ ಮಕರಂದ
ಅವಳೆಂದಳು ಮೊನ್ನೆ
ನಿತ್ಯಾನಂದ ಈಗೇ ಅಂದ

*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*

29 ನವೆಂಬರ್ 2017

ಗಜ಼ಲ್ ೧೧ ಹನಿ ಹನಿ ಇಬ್ಬನಿ ಬಳಗದಿಂದ ಉತ್ತಮ ಗಜ಼ಲ್ ಬಹುಮಾನ ಪಡೆದ ಗಜ಼ಲ್. (ಮಧುರ) ನನ್ನ ಬ್ಲಾಗ್ ನ 150 ಪೋಸ್ಟ್ ಸಂಭ್ರಮ

*ಗಜ಼ಲ್  ೧೧*

ಬಾಲ್ಯದ ಮರೆಯಲಾಗದ  ಅವಿನಾಭಾವ ನೆನಪುಗಳು ಮಧುರ
ಮನದಲಿ ಬಂದು ಆಗಾಗ ಕಾಡುವ ಭಾವನೆಗಳು ಮಧುರ


ಎಮ್ಮೆಯೇರಿ ಯಮಧರ್ಮನಂತೆ ಹೆಮ್ಮೆಯ
ದನಕರು ಮೇಯಿಸಿದ ನೆನಪುಗಳು ಮಧುರ

ಮೇಲೀರಿದರೂ ಚಿಕ್ಕವನಾಗಿರು ಎಂಬ ತತ್ವ
ಸಾರಿದ ಗಾಳಿಪಟ ಹಾರಿಸಿದ ಆಟಗಳು ಮಧುರ

ಅಪ್ಪ ಅಮ್ಮನಾಟ, ನಾಟಕಗಳನ್ನು ಅಭಿನಯಿಸಿ
ಅವ್ಯಕ್ತ ಜವಾಬ್ದಾರಿ ಹೊತ್ತಿದ್ದ ಸಂಬಂಧಗಳು ಮಧುರ

ಕಾಡು ಮೇಡುಗಳಲೆದು ಹೆಜ್ಜೇನು ದಾಳಿಯಿಟ್ಟಾಗ
ಕುಗ್ಗದೆ ಜಗ್ಗದೆ ಪಶುಗಳಿಗೆ ಮೇವು ತಂದ ಕಷ್ಟಗಳು ಮಧುರ

ಸೀಜೀವಿ ತಣಿಸಿದ ಜೀರ್ಜಿಂಬೆ  ಗುಯ್ ಗುಡುವ ನಾದ
ಎಳೆಗರು,ಮಗುವಿನ ಅಳುವಿನ ಸಂಗೀತಗಳು ಮಧುರ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

28 ನವೆಂಬರ್ 2017

ಹನಿಗವನಗಳು (ಸರಸ)

ಹನಿಗವನಗಳು
*೧*

*ವಿರಸ*

ನವರಸದಲಿ ಶೃಂಗಾರ
ಹೆಚ್ಚಾದರೆ ಖಂಡಿತ
ಸರಸ
ರೌದ್ರ ಅತಿಯಾದರೆ
ತಪ್ಪಿದ್ದಲ್ಲ
ವಿರಸ

*೨*

*ಬಿರಬಿರನೆ*


ನನ್ನವಳಿಗೆ ನಾನಂದೆ
ಸರಸಕೆ ಬಾರೆ
ಸರಸರನೆ
ಅವಳೆಂದಳು ,ಉಪ್ಪು
ಬೆಲ್ಲ,ಬೇಳೆ ಇಲ್ಲ
ಮೊದಲು ತನ್ನಿ
ಬಿರಬಿರನೆ

*೩*

 *ಮನೋರಮೆ*

ಸರಸ ಸಲ್ಲಾಪಕೆ ಮಾದರಿ
ಮುದ್ದಣ ಮನೋರಮೆ
ನಾವು ಈಗಲೇ
ಸರಸವಾಡೋಣವೇ ಅಂದೆ
ಸಿಡುಕಿನಿಂದ ಅವಳೆಂದಳು
ವತ್ತಾರೆ ಏನೂ ಇಲ್ವ
ನಿಮಗೆ ಕ್ಯಾಮೆ ?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*