03 ನವೆಂಬರ್ 2017

ಉಂಡಾಡಿ ಗುಂಡ (ಕಥನ ಕವನ)

ಉಂಡಾಡಿಗುಂಡ*

ನಮ್ಮೂರ ರಾಮನಿಗೆ ಮಕ್ಕಳಿರಲಿಲ್ಲ
ದೇವರಿಗೆ ಬೇಡುವುದ ಮರೆಯಲಿಲ್ಲ
ಹಾಲುಕುಡಿದಪ್ಪನಿಗೆ ಹರಕೆ ಹೊತ್ತನು
ದಿನಕಳೆಯುತಲಿ ಸಂತಾನ  ಪಡೆದನು//

ಮಗನ ಬಾಲ ಲೀಲೆಗೆ ಮನಸೋತನು
ಅತಿಯಾಗಿ ಪ್ರೀತುಸಿ ಮುದ್ದಿಸಿದನು
ಮಗ ಉಡಾಳರ ಸಂಘ ಮಾಡಿ  ಕೆಟ್ಟನು
ವಿದ್ಯೆ ಕಲಿಯಲು ಬಿಟ್ಟು ಅಲೆದನು //

ಅಪ್ಪನ ಅಮ್ಮನ  ಮಾತಿಗೆ ಬೆಲೆಯುಲ್ಲ
ಊರಸುತ್ತುವದ ಅವನು  ಮರೆಯಲಿಲ್ಲ
ಹಣವನ್ನು ಖರ್ಚು ಮಾಡಿದ ನೀರಿನಂತೆ
ಅಪ್ಪ ಅಮ್ಮರಾದರು ಭಿಕ್ಷುಕರಂತೆ //

ಮದುವೆ ಮಾಡಿದರು ವಧುವ ತಂದು
ಚಿಗುರಿತು ಆಸೆ ಮಗ ಸುಧಾರಿಸುವನೆಂದು
ನಾಯಿಬಾಲ ಡೊಂಕು ಅವನು ಉಂಡಾಡಿ
ಸಾಕುತ್ತಿದ್ದಾಳೆ ಸೊಸೆ ಎಲ್ಲರ ಕೂಲಿ ಮಾಡಿ//

ರಾಮನಿಗೆ ಆಸೆ ಮೊಮ್ಮಕ್ಕಳ ನೋಡಲು
ಮಗನ ಹಾತೊರೆವ ಹೆಂಡ ಕುಡಿಯಲು
ಸೊಸೆಗೂ ಆಸೆ ಮಗುವ  ತಾಯಿಯಾಗಲು
ಆದರೆ ನಿರ್ಧಾರ ಮಡಿದಳು ಬಂಜೆಯಾಗಲು //

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

02 ನವೆಂಬರ್ 2017

ಸ್ಕೂಲ್ ಬಸ್ (ನ್ಯಾನೋ ಕಥೆ)

ಸ್ಕೂಲ್ ಬಸ್
(ನ್ಯಾನೋ ಕಥೆ)

"ಏಯ್ ಹುಡುಗಿ ಎಮ್ಮೆ ಆಕಡೆ ಹೊಡಿ" ಎಂದು ಸ್ಕೂಲ್ ಬಸ್ ಡ್ರೈವರ್ ಗದರಿದಾಗ ಗೌರಿ ಓಡಿಬಂದು ಎಮ್ಮೆಗಳನ್ನು ರಸ್ತೆ ಬದಿಗೆ ಒಡೆದಳು. ಆಗ ಬಸ್ ನಲ್ಲಿದ್ದ ಮಕ್ಕಳು ಇವಳಿಗೆ ಟಾಟ ಮಾಡಿದರು .ದೂಳೆಬ್ಬಿಸುತ್ತಾ ಬಸ್ ಮುಂದೆ ಚಲಿಸಿದಾಗ ಈ ಬಾಲಕಿಯ ಮನದಲ್ಲಿ ಪ್ರಶ್ನೆಗಳ ಸುರಿಮಳೆ.
" ನಮ್ಮಪ್ಪ ಹಾವು ಕಚ್ಚಿ ಸಾಯದಿದ್ದರೆ ನಾನು ಸಹ ಈ ಮಕ್ಕಳಂತೆ ಶಾಲೆಗೆ ಹೋಗುತ್ತಿರಲಿಲ್ಲವೆ? ನಮ್ಮಪ್ಪನ ಮರಣದ ನಂತರ ನಮ್ಮ ಚಿಕ್ಕಪ್ಪರು  ನಮ್ಮಮ್ಮನಿಗೆ ಮೋಸ ಮಾಡಿ ಹೆಬ್ಬೆಟ್ಟು ಹಾಕಿಸಿಕೊಂಡು ನಮ್ಮ ಆಸ್ತಿ ಲಪಟಾಯಿಸಿಕೊಂಡು ನಮ್ಮನ್ನು ಬೀದಿಪಾಲು ಮಾಡದಿದ್ದರೆ ನಾನು ಶಾಲೆಗೆ ಹೋಗುತ್ತಿರಲಿಲ್ಲವೇ? ನಮ್ಮೂರಿನ ಸಾಹುಕಾರರ ಬಳಿ ನಮ್ಮಮ್ಮ ನನ್ನ ಓದಿಗೆ ಸಾಲ ಕೇಳಿದಾಗ ಬಾಯಿಗೆ ಬಂದಂತೆ ಬೈಯದಿದ್ದರೆ.ಅಲ್ಪ ಸ್ವಲ್ಪ ಸಹಾಯ ಮಾಡಿದ್ದರೆ ನಾನು ಶಾಲೆಗೆ ಹೋಗುತ್ತಿರಲಿಲ್ವೇ? ನಾನು ಓದದಿದ್ದರೂ ಕೂಲಿ ನಾಲಿ ಮಾಡಿ ನನ್ನ ಸಾಕುವ ನನ್ನ ಅಮ್ಮನ ಸಾಕುವ ಶಕ್ತಿ ನನಗೆ ಬರುವುದಿಲ್ಲವೆ ? ಬರಿ ಓದಿದರೆ ಮಾತ್ರ ಜೀವನ ಮಾಡಬಹುದೆ?
ಈಗೇ ನೂರಾರು ಪ್ರಶ್ನೆಗಳು ತಲೆಯಲ್ಲಿ ಗುಯ್ ಗುಡುವಾಗ "ಎಯ್ ಹುಡುಗಿ ಹೊಟ್ಟೆಗೆ ಏನ್ ತಿಂತಿಯಾ ?ಎಮ್ಮೆಗಳು ರಾಗಿ ಹೊಲ ಮೇಯ್ತಾ ಅವೆ ಹೊಡ್ಕ" ಎಂದು ರಂಗಣ್ಣನವರು ಗದರಿದಾಗ ಬೆಚ್ಚಿ ಒಡೋ ಬರದಲ್ಲಿ ಕಲ್ಲಿಗೆ ಎಡವಿ ಬರಿಗಾಲಲ್ಲಿದ ಅವಳ ಕಾಲಿಗೆ ಬೆಣಚು ಕಲ್ಲು ತಾಗಿ ರಕ್ತ ಚಿಲ್ಲನೆ ಚಿಮ್ಮಿತು .ಗೌರಿಯು ನೋವಿನಿಂದ ಚೀರಿದಳು ಮಗಳ ದ್ವನಿ ಕೇಳಿ ದೂರದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ತಾಯಿ ಓಡೋಡಿ ಬಂದು ಮಗಳ ಸ್ಥಿತಿ ಕಂಡು ಅವಳ ಆಕ್ರಂದನ ಮುಗಿಲು ಮುಟ್ಟಿತು .ರಸ್ತೆಯಲ್ಲಿ ಜನಸೇರಿದರು ದೂರದಲ್ಲಿ ಒಂದು ವಾಹನ  ರಸ್ತೆಯಲ್ಲಿರುವ ಜನರ  ಚದುರಿಸಲು ಕಿವಿ ಕಿತ್ತುಹೋಗುವಂತೆ   ಹಾರ್ನ್ ಮಾಡಿತು ಎಲ್ಲರೂ ತಿರುಗಿ    ನೋಡಿದರೆ  ಮಕ್ಕಳ ಬಿಟ್ಟು ಹಿಂದಿರುಗಿದ ಅದೇ   ಶಾಲಾ ಬಸ್ .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ನಗು (ಹನಿಗವನಗಳು)

*೧*
*ಪರಿಣಾಮ*

ಕಛೇರಿಯಿಂದ ಬರುವ ನನ್ನ
ಸ್ವಾಗತಿಸುತ್ತಿದ್ದಳು ತೋರಿ
ನಗು ಮೊಗ
ಅದರ ಪರಿಣಾಮ ಮನೆಯಲ್ಲಿ
ಮಗು ನಗು

*೨*

*ಕರ್ಮ*
ನಗುವುದು ಸಹಜ ಧರ್ಮ
ನಗಿಸುವುದು ಪರ ಧರ್ಮ
ಇವೆರಡೂ ಇಲ್ಲದಿದ್ದರೆ
ನಿಮ್ಮ ಕರ್ಮ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

31 ಅಕ್ಟೋಬರ್ 2017

ಹಿತ (ಹನಿಗವನಗಳು)

 *೧*
*ಸಕ್ಕರೆ*

ವೈದ್ಯರು ಹೇಳುವರು ಹಿತಮಿತವಾಗಿ
ಸೇವಿಸಿ ಉಪ್ಪು ಸಕ್ಜರೆ
ಹೇಗೆ ಕಡಿಮೆ ಮಾಡಲಿ ಹೇಳಿ
ನನ್ನವಳ ಅಧರದ ಸಕ್ಕರೆ?

*೨*
*ಸ್ವಾಗತ*

ರಾಜಕಾರಣಿಗಳು ಚುನಾವಣಾ ಸಮಯದಲ್ಲಿ
ಹೇಳುವರು ನಮ್ಮ ಗುರಿ ಜನಹಿತ
ಗೆದ್ದಾಗ ಮರೆಯದೇ ಕೋರುವರು
ಕುಟುಂಬ ಕಲ್ಯಾಣಕ್ಕೆ ಸ್ವಾಗತ

*೩*
*ಕೊತ ಕೊತ*

ಸಂಸಾರದಲ್ಲಿ ಮಾತಿನಲ್ಲಿರಲಿ
ಹಿತ ಮಿತ
ಮಿತಿಮೀರಿದರೆ  ಮನಸುಗಳ ಜ್ವಾಲಾಮುಖಿ
ಕೊತ ಕೊತ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

30 ಅಕ್ಟೋಬರ್ 2017

ನೀನಿರದೆ(ಕವನ)

*ಮನವಿ*


ಕಾಲ್ತೆಗೆದು ಹೋಗದಿರು ನಲ್ಲೆ
ಕೈಬಿಡೆನು ವರಿಸುವೆ ನಿನ್ನ ಇಲ್ಲೆ
ತೆರೆದು ತೋರಲಾರೆ ನನ್ನ ಹೃದಯ
ಹೇಳಿ ಹೋಗದಿರು ನನಗೆ ವಿದಾಯ//

ತಿರಸ್ಕರಿಸದಿರು ನನ್ನ ಪ್ರೀತಿಯ
ಪುರಸ್ಕರಿಸಿ ನೀಡು ಸಿಹಿಯ
ಮರೆತಿಲ್ಲ ನಾನು  ಸಿಹಿಘಳಿಗೆಯ
ಮರೆತು ಬಿಡು ವಿಷಘಳಿಗೆಯ //

ಬಡವ ನಾನೆಂದು ಚಿಂತಿಸದಿರು
ಹೃದಯ ಶ್ರೀಮಂತ ಮರೆಯದಿರು
ನೀನಿರದೆ ನನಗೆ  ಬದುಕಿಲ್ಲ
ನೀನೇಕೆ  ಇದನ  ಅರಿತಿಲ್ಲ //


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*