29 ಅಕ್ಟೋಬರ್ 2017

ಮನವಿ (ಹನಿಗವನ) ರಾಜ್ಯಮಟ್ಟದ ಆನ್ಲೈನ್ ಹನಿಗವನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಹನಿ

     
 ಹನಿಗವನ 
*ಮನವಿ*

ಕಾಲ್ತೆಗೆದು ಹೋಗದಿರು ನಲ್ಲೆ
ಕೈಬಿಡೆನು ವರಿಸುವೆ ನಿನ್ನ ಇಲ್ಲೆ
ತೆರೆದು ತೋರಲಾರೆ ನನ್ನ ಹೃದಯ
ಹೇಳಿ ಹೋಗದಿರು ನನಗೆ ವಿದಾಯ
ತಿರಸ್ಕರಿಸದಿರು ನನ್ನ ಪ್ರೀತಿಯ
ಪುರಸ್ಕರಿಸಿ ನೀಡು ಸಿಹಿಯ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ನೆರಳಾಗು (ಕವನ)

           *ನೆರಳಾಗು*

ನಾ ನೀಡುವೆನೀಗ ಮೊಲೆ ಹಾಲ
ನೀ ಬೆಳಗು ಮುಂದೆ ಜಗವೆಲ್ಲ /

ತಾಯಿಯ ಎದೆ ಹಾಲು ಅಮೃತ
ಭುವಿಯಲೆಲ್ಲೂ ಸಿಗದ ಪಂಚಾಮೃತ
ಈಗ ನಾ ನೀಡುವೆ ಹಾಲನ್ನ
ಉಜ್ವಲವಾಗಲಿ ನಿನ್ನ ಜೀವನ //


ನೀ ನನ್ನ ಹೊಟ್ಟೆಯಲುದಿಸಿದ ಸಸಿ
ಚಿಗುರೊಡಿಸಿ ಬೆಳೆಸುವೆ ಇರುವಂತೆ ಹಸಿ
ಈ ಹಳೆಬೇರು ಮರೆಯದಿರು ಮಂದೆ
ಹೊಸ ಚಿಗುರೊಡೆದ ಮದದಿಂದ //

ಹರಿ ಹರರು ಕುಡಿದರು ದೇವಿ ಹಾಲ
ಅಮ್ಮನ ಋಣ ಅವರು ಮರೆಯಲಿಲ್ಲ
ತಾಯಿಯ ಹಾರೈಕೆ ನಿನಗಿದೆ ಸದಾ ಕಾಲ  ಹೆಮ್ಮರವಾಗಿ ನೆರಳಾಗು ಅನುಗಾಲ//

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

28 ಅಕ್ಟೋಬರ್ 2017

ಎದ್ದೇಳು (ಗಜಲ್)

       *ಗಜಲ್*

ಸೋತ ಹತಾಶೆಯಲಿ ಬೀಳದಿರು ಎದ್ದೇಳು/
ಗೆಲುವು ಕಾದಿದೆ ನಿನಗೆ ಬಳಲದಿರು ಎದ್ದೇಳು /


ಮೋಡ ಮುಸುಕಿದ ರವಿಯು ಬೆಳಗದಿರುವನು/
ಕತ್ತಲು ಮುಗಿದ ಮೇಲೆ ಬೆಳಕು ಬರುವಂತೆ ಎದ್ದೇಳು/

ಪಕ್ಷಿಗಳ ಗೂಡು ಎನಿತು ಸಾರಿ ಬಿದ್ದರು ಮತ್ತೆ ಕಟ್ಟುವವು/
ಜೇಡ ತನ್ನ ಬಲೆ ಹರಿದರೂ ಛಲ ಬಿಡದೆ       ಅನವರತ ನೇಯುವಂತೆ   ಎದ್ದೇಳು/


ನಡೆವರೆಡಹದೆ ಕುಳಿತವರೆಡಹರೆ ಎಡವಿದರು ನಿಲ್ಲದಿರು/
ಕಷ್ಟಗಳ  ಮಳೆಸುರಿಯೆ ಹೆಬ್ಬಂಡೆಯಂತೆ  ಎದ್ದೇಳು /

ಅದೃಷ್ಟವನು ನಂಬಿ ಬದುಕದಿರು ಅದೃಷ್ಟ ದೈರ್ಯವಂತರ ಪರ /
ನಿನ್ನ ಅಂಜುಬುರುಕನೆಂದವರು ಕರುಬುವಂತೆ ಎದ್ದೇಳು /

ಕಷ್ಟಗಳು ನಿರಂತರವಲ್ಲ ಸುಖವು ಬರದಿರವುದಿಲ್ಲ/
ವೆಂಕಟೇಶ್ವರನ ದಯೆ ಪಡೆದು   ಪರಮಶಕ್ತಿಯಂತೆ ಎದ್ದೇಳು /

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

27 ಅಕ್ಟೋಬರ್ 2017

ನವೆಂಬರ್ ಕನ್ನಡಿಗರು(ಕವನ)



*ನವೆಂಬರ್ ಕನ್ನಡಿಗರು*


ನಾವು ನವೆಂಬರ್‌ ಕನ್ನಡಿಗರು
ಕನ್ನಡದ ಬೆಳೆಸುವ ಕಟ್ಟಾಳುಗಳು /

ಬೇರೆ ಭಾಷೆಯ ವ್ಯಾಮೋಹಿಗಳು
ನಮ್ಮ ಭಾಷೆಯ ಮರೆತವರು
ಹೊರನಾಡಿಗರಿಗೆ ಔದಾರ್ಯ ತೋರುವೆವು
ಕನ್ನಡಮ್ಮನ ಸೌಂದರ್ಯ ಮರೆವೆವು //

ಕನ್ನಡ ಚಿತ್ರಗಳು ನಮಗೆ ನಗಣ್ಯ
ಇತರೆ  ಭಾಷೆ ಚಿತ್ರಗಳು ಅಗ್ರಗಣ್ಯ
ಕನ್ನಡದಲ್ಲಿ ಮಾತಾಡಿದರೆ ಅವಮಾನ
ಇತರೆ ಭಾಷಿಕರಿಗೆ  ರತ್ನ ಸಿಂಹಾಸನ //

ಕನ್ನಡ ಹಾಡುಗಳುಗೆ ಬೆಲೆಯಿಲ್ಲ
ಆಂಗ್ಲ ಹಿಂದಿಗಳಿಗೆ ನೆಲೆ ಇಲ್ಲಿ
ವರ್ಷ ಪೂರ್ತಿ ಕನ್ನಡ ನೆನೆಪಿರಲ್ಲ
ನವೆಂಬರ್‌ ತೋರಿಕೆ  ಮರೆಯಲ್ಲ //

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

26 ಅಕ್ಟೋಬರ್ 2017

ಕಾಲ್ಗೆಜ್ಜೆ (ಹನಿಗವನಗಳು)

ಹನಿಗವನಗಳು
"೧*
*ಮನದನ್ನೆ*

ಹೆಜ್ಜೆ ಮೇಲೆ ಹೆಜ್ಜೆ ಇಟ್ಟು
ಬಂದಳು ನನ್ನ ಮನದನ್ನೆ
ಲಜ್ಜೆಯ ಆಭರಣತೊಟ್ಟು
ಕದ್ದಳು  ನನ್ನ ಮನಸನ್ನೆ


*ಸದ್ದು*

ಅಮವಾಸ್ಯೆ ದಿನ ಪಾಳುಬಂಗಲೆ
ಬಳಿ ಕೇಳಿತು ಗೆಜ್ಜೆ ಸದ್ದು
ಎದ್ದೆನೋ ಬಿದ್ದೆನೋ ಎಂದು
ಓಡಿದೆನು ಎದ್ದು ಬಿದ್ದು

*ನಾಗವಲ್ಲಿ*

ಆಪ್ತ ಮಿತ್ರ ಚಿತ್ರದಲ್ಲಿನ ಗೆಜ್ಜೆ ಸದ್ದಿಗೆ
ಹೆದರಿರಲಿಲ್ಲ ಚಿತ್ರಮಂದಿರದಲ್ಲಿ
ಏಕೆಂದರೆ ನಮ್ಮನೆಯಲ್ಲಿ
ದಿನವೂ ನೋಡಿದ್ದೆನಲ್ಲ ನಾಗವಲ್ಲಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*