23 ಅಕ್ಟೋಬರ್ 2017

ಭರವಸೆ (ಕವನ ೧೦೦ರ ಸಂಭ್ರಮ)

*ಭರವಸೆ*

ಮೋಡವಿಲ್ಲದಿದ್ದರೂ ಉತ್ತು ಬಿತ್ತಿ
ಭರ್ಜರಿ ಬೆಳೆ ತೆಗೆವೆನೆಂಬ ರೈತನಿಗೆ
ಮಳೆ ಬಂದೇ ಬರುವುದೆಂಬ ಭರವಸೆ

ಆಗಸದಲ್ಲಿ ತೂರಿದ ಮಗುವು ಕಿಲ
ಕಿಲ ನಗುವುದು ನನ್ನ ತಾಯಿ ನನ್ನ
ಕೈಬಿಡಲಾರಳೆಂಬ ಭರವಸೆ

ಕಲಿಕೆಯಲ್ಲಿ ಹಿಂದಿದ್ದರೂ ಕಲಿಯಲು
ಆಸಕ್ತಿ ಇಲ್ಲದಿದ್ದರೂ ನನ್ನ ಮಕ್ಕಳು
ಸಾಧಿಸುವರೆಂಬುದು ತಾಯಿ ಭರವಸೆ

ಸಾಕಿ ಸಲುಹಿದ ಮಕ್ಕಳು ನಮ್ಮ
ಇಳಿಗಾಲಗಲಿ ಊರುಗೋಲಾಗುವರು
ಎಂಬುದು ಪೋಷಕರ ಭರವಸೆ

*ಸಿ.ಜಿ. ವೆಂಕಟೇಶ್ವರ*
*ಗೌರಿಬಿದನೂರು*

22 ಅಕ್ಟೋಬರ್ 2017

ಸುಂದರ (ಚಿತ್ರ ಕವನ)

*ಸುಂದರ*

ನನ್ನ ನಗುವಿನ ಗುಟ್ಟು
ಈ ನನ್ನ ಪುಟ್ಟು
ನೀ ನನ್ನ ಉಸಿರು
ನೀನಿದ್ದರೆ ಹಸಿರು
ನೀನು ನಗಲು
ನನ್ನ ನಗು ಜಗದಗಲ
ನೀನೀಗ ಬರಿ ಮೈ ಪೋರ
ಆದರೂ ನೋಡಲು ಸುಂದರ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಸಾಲು ದೀಪಾವಳಿ

*ಸಾಲು ದೀಪಾವಳಿ*

ನೂರು ಹೆಜ್ಜೆ ದೂರದಲಿಹರು ನಮ್ಮ ಸ್ನೇಹಿತರು/
ಮೂರು ಚಿಕ್ಕ ಗುಡಿಸಲು ನಮ್ಮ ವಾಸದ ತಾಣವು/
ಕಾರು ಬಂಗಲೆ ಮಹಲು ಅವರೆ ಕುಬೇರರು/
ಗುಡಿಸಲು ಜೋಪಡಿಗಳೇ ನಮ್ಮ ಮಹಾಲಯವು/

ಹಬ್ಬದ ಸಡಗರಕೆ ತಂದರವರು ಪಟಾಕಿಯ /
ಕಾಯುತಿಹೆವು ನಾವು ನೋಡಲು ಚಟಾಕಿಯ/
ತಂದಿಹರು ಆನೆ ಪಟಾಕಿ ಸುರ್ ಸುರ್ ಬತ್ತಿ‌/
ಹಚ್ಚುವರು ಬೆಳಗುವರು ಸಾಲು ದೀಪಾವಳಿಯ /

ಅದೋ ಹಚ್ಚಿದರು ಆನೆ ಪಟಾಕಿಯ ನೋಡು/
ಡಂ ಎಂದಿತು ಬಂದು ನಮ್ಮ ಮನೆಯಂಗಳದಿ/
ಇದೋ ಬಂತು ಭೂಚಕ್ರ ಸುತ್ತುತ್ತಾ ಬೀದಿಯ /
ಸುತ್ತಿ ಸುಳಿದು ಬೆಳಕು ನೀಡಿತು ಹೃದಯದಾಳದಿ /

ಅವರ ರಾಕೆಟ್ ನಮ್ಮಂಗಳದಿ ನಿಲ್ಲುವುದು/
ಸೂರೆಗೊಳ್ಳುವುದು ನಮ್ಮ ಕಣ್ಣುಗಳ /
ಅವರ ಮನೆಯಲ್ಲಿ ಕಟ್ಟಿದ ಆಕಾಶ ಬುಟ್ಟಿ/
ಬೆಳಗುವುದು ನಮ್ಮ ಮನೆ ಮೈ  ಮನಗಳ /

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

21 ಅಕ್ಟೋಬರ್ 2017

ಕೋರಿಕೆ (ನ್ಯಾನೋ ಕಥೆ)

       
*ನ್ಯಾನೋ ಕಥೆ*
*ಕೋರಿಕೆ*
ಕ್ಷುಲ್ಲಕ ಕಾರಣಕ್ಕೆ ರವಿಯ ಅತ್ತೆ ರವಿಯನ್ನು ಅಂದು ವಾಚಾಮಗೋಚರವಾಗಿ ಬೈದು ಹಬ್ಬಕ್ಕೆ ಬಂದ ಅಳಿಯ ಮಗಳನ್ನು ಮನೆಯಿಂದ ಓಡಿಸಿದ್ದರು .
ಅವರ ಊರಿಗೆ ಬಂದು,   ಅಂದು ಸಂಜೆ ಅದೇ ಬೇಸರ ದಲ್ಲಿ ರವಿ ಮತ್ತು ಚಂದ್ರಿಕಾ ಊಟವಾದ ಬಳಿಕ ಮನೆಯ ಅಂಗಳದಲ್ಲಿ ಆಕಾಶ ನೋಡುತ್ತ ಮಲಗಿದ್ದರು ಇದ್ದಕ್ಕಿದ್ದಂತೆ ಒಂದು ನಕ್ಷತ್ರ ದೂರದವರೆಗೆ ಚಲಿಸಿ ಬಿದ್ದು ಹೋಯಿತು "ನಕ್ಷತ್ರ ಬೀಳುವುದು ಅಶುಭ ಸೂಚನೆಯಂತೆ" ಎಂದಳು ಚಂದ್ರಿಕಾ .ಅವಳ ಮಾತನ್ನು ಅಲ್ಲಗಳೆದ ರವಿ ."ನಕ್ಷತ್ರಗಳು ಬೀಳುವುದು ನೋಡುವುದು ಶುಭವಂತೆ ಅವುಗಳು ಬೀಳುವಾಗ ನಾವೇನಾದರೂ ಕೋರಿಕೊಂಡರೆ ಅದು ಈಡೇರುವುದಂತೆ "ಎಂದನು
ಬೆಳಿಗ್ಗೆ ಯಾರೋ ಬಂದು ಮನೆಬಾಗಿಲ ಬಡಿದಾಗ ಎಚ್ಚರವಾದ ದಂಪತಿಗಳಿಗೆ ದೂರದೂರಿನಿಂದ ಬಂದ ಯುವಕ  ರವಿಯ ಅತ್ತೆಯ ಸಾವಿನ ವಿಷಯ ತಿಳಿಸಿದ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

20 ಅಕ್ಟೋಬರ್ 2017

ಬಂಧ (ಚಿತ್ರ ಕವನ)

         

*ಬಂಧ*

ನಮ್ಮ ಬದುಕು ನಮ್ಮದು
ಸುಂದರ ಲೋಕ ನಮ್ಮದು

ಅಪ್ಪ ಅಮ್ಮ ನಮಗಿಲ್ಲ
ತಪ್ಪು ಮಾಡೋದು ತಿಳಿದಿಲ್ಲ
ನಮ್ಮ ಬದುಕು ಬಣ್ಣದ ಚಿತ್ರ
ದೇವರಿಗೆ ಬರೆವೆವು ಪತ್ರ

ನಾವ್ಯಾರಿಗೂ ಕಡಿಮೆ ಇಲ್ಲ
ಅನ್ನಕೆ ಯಾರಿಗು ಕೈಯೊಡ್ಡಲ್ಲ
ಸ್ವಾಭಿಮಾನವ ಮರೆಯೋದಿಲ್ಲ
ನಮ್ಮಿಬ್ಬರ ಬಂಧ ಸಡಿಲವಾಗಲ್ಲ

ಶಾಲೆಯ ದಾರಿಯ ತುಳಿದಿಲ್ಲ
ಜೀವನ ಶಾಲೆಯ ಬಿಟ್ಟಿಲ್ಲ
ಕತ್ತಲೆ ಕೂಪದಿ  ನಾವಿಲ್ಲ
ಪ್ರತಿದಿನ ಬೆಳಕು ನಿಂತಿಲ್ಲ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*