16 ಅಕ್ಟೋಬರ್ 2017

ಅನಿಕೇತನ( ಕವನ)

       *ಅನಿಕೇತನ*


ನನ್ನ ಲೇಖನಿ ಖಡ್ಗಕ್ಕಿಂತ ಹರಿತವಲ್ಲ
ನನ್ನ ಲೇಖನಿ ಬಾಂಬಿಗಿಂತ ದೊಡ್ಡದಲ್ಲ
ಕಾರಣ ನನ್ನ ಲೇಖನಿ ಶಾಂತಿಪ್ರಿಯ
ಕೋರುತ್ತದೆ ಸರ್ವಜನಹಿತಾಯ /

ನನ್ನ ಲೇಖನಿ ಸಮಾಜವನ್ನು ಒಡೆಯಲ್ಲ
ಸಣ್ಣ ಮನಸ್ಸಿನವರ ಜರಿಯುವುದಿಲ್ಲ
ದೊಡ್ಡ ಮನದವರ ಮರೆಯುವುದಿಲ್ಲ
ಸಮಾನತೆಯನ್ನು ಎಂದೂ  ಸಾರುವುದಲ್ಲ /

ನನ್ನ ಲೇಖನಿ ಪೂರ್ವಾಗ್ರಹ ಪೀಡಿತವಲ್ಲ
ಸರಿ ತಪ್ಪುಗಳ ಲೆಕ್ಕದಲಿ ತನ್ನ ಮರೆತಿಲ್ಲ
ದೇಶವಿರೋಧಿಗಳ  ಇದು ಸಹಿಸುವುದಿಲ್ಲ
ದೇಶಭಕ್ತರ ಹಾಡಿಹೊಗಳುವುದ ಮರೆಯಲ್ಲ  /

ನನ್ನ ಲೇಖನಿಗೆ ಮಾನ ಸಮ್ಮಾನ ಬೇಕಿಲ್ಲ.
ಎಲ್ಲರ ದುಃಖ ದುಮ್ಮಾನ ಮರೆಯಲ್ಲ
ಮೇಲು ಕೀಳು ಬಡವ ಬಲ್ಲಿದ  ಭೇದವಿಲ್ಲ
 ಅನಿಕೇತನ ತತ್ವ ಪಾಲಿಸುವುದ ಮರೆಯಲ್ಲ/

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

15 ಅಕ್ಟೋಬರ್ 2017

ಸುಂದರ ಬಂದನು ಸುಂದರಿ ಮನೆಗೆ (ರಾಯರು ಬಂದರು ಮಾವನ ಮನೆಗೆ ದಾಟಿಯಲ್ಲಿ)ಕೆ..ಎಸ್ .ನ ಅವರ ಕ್ಷಮೆ ಕೋರಿ

   *ಭಾವಗೀತೆ*

ಸುಂದರ ಬಂದನು ಸುಂದರಿ ಮನೆಗೆ ರಾತ್ರಿಯಾಗಿತ್ತು /
ಒಂಭತ್ತು ಗಂಟೆ ಸೀರಿಯಲ್ ಮುಗಿದು ಕತ್ತಲೆಯಾಗಿತ್ತು/
ಕವ ಕವ ಕತ್ತಲು ಕವಿದಿತ್ತು/

ಮಾವನ ಮನೆಯಲಿ ಬಾಡೂಟದ ಘಮಲು ಮೂಗಿಗೆ ಬಡಿದಿತ್ತು/
ಮನಸಲೆ ಮಂಡಿಗೆ ತಿನ್ನುತ ಸುಂದರನ ಕಣ್ಣು ಸುಂದರಿ ಹುಡುಕಿತ್ತು /
ಸುಂದರಿ ಸುಳಿವೆ ಇರಲಿಲ್ಲ/

ತಂಬಿಗೆ ನೀರನು ತಂದರು ಅತ್ತೆ ಅಳಿಯಗೆ ಕುಡಿಯೆನಲು/
ಸುಂದರ ಕಣ್ಗಳು ಹುಡುತಲಿದ್ದವು ಸುಂದರಿ
ಎಲ್ಲೆನೆಲು/
ಅತ್ತೆಯ ಉತ್ತರವೇ ಇಲ್ಲ/

ಊಟವು ಉಪಚಾರವಾಯಿತು ಸುಂದರಗೆ ಖುಷಿಯಿಲ್ಲ/
ಒಳಹೊರಗೆಲ್ಲಾ ಹುಡುಕಾಡಿದರೂ ಸುಂದರಿ ಸುಳಿವಿಲ್ಲ/
ಅವಳ ಬಳೆಗಳ ಸದ್ದಿಲ್ಲ/

ಸಿಟ್ಟಿನಲೆದ್ದನು ಸುಂದರ ಹೊರಡಲು ಆಗಲೆ ಕತ್ತಲಿನಲಿ/
ಪಕ್ಕದ ಕೋಣೆಯಿಂದಲಿ ಬಂದಳು ಸುಂದರಿ
ವದನದಲಿ/
ಕೋಣೆಯು ಮುಳುಗಿತು ಕೇಕೆಯಲಿ

(ಕೆ .ಎಸ್ .ನ.ಅವರ ಕ್ಷಮೆ ಕೋರಿ)
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

14 ಅಕ್ಟೋಬರ್ 2017

ಆನಂದಭಾಷ್ಪ ( ನ್ಯಾನೋ ಕಥೆ)

         
*ಆನಂದಭಾಷ್ಪ* (ನ್ಯಾನೋ ಕಥೆ)

ಅಲ್ಲೆಲ್ಲ ಸ್ಪರ್ದೆಯ ವಾತಾವರಣ ಜನರಲ್ಲಿ ಕುತೂಹಲ ಯಾರು ಬಹುಮಾನ ಗಳಿಸಬಹುದು ಎಂಬ ಚರ್ಚೆ ,ಸುರೇಶನ ತಾಯಿಯು ಆತಂಕದಿಂದ ಕುಳಿತು ಇರೋ ಬರೋ ದೇವರನ್ನೆಲ್ಲಾ ಪ್ರಾರ್ಥನೆ ಮಾಡುತ್ತಿದ್ದರು ಕಾರಣ ಇಷ್ಟೇ ಮಗ ರಾಜ್ಯ ಮಟ್ಟದ ಗಾಯನ ಸ್ಪರ್ಧೆಯಲ್ಲಿ ನನ್ನ ಮಗ ಗೆಲ್ಲಲೇ ಬೇಕು ಏಕೆಂದರೆ ೧೫ ವರ್ಷಗಳ ಹಿಂದೆ ಶಾಲೆಯ ಸಂಗೀತ ಶಿಕ್ಷಕರಾದ ತಿಪ್ಪೇಸ್ವಾಮಿ ರವರು " ನಿನ್ನ ಮಗನಿಗೆ ಸಂಗೀತ ಬಾರದು ಸುಮ್ಮನೆ ಯಾಕೆ ಸಂಗೀತ ಪಾಠ ನಿಲ್ಲಸಿ ಬೇರೆ ಓದಿನ ಕಡೆ ಗಮನ ಹರಿಸಲು ಹೇಳಿ ಡಾಕ್ಟರ್ ಅಥವಾ ಇಂಜಿನಿಯರ್ ಆಗಬಹುದು "ಎಂದಿದ್ದು ಕಿವಿಯಲ್ಲಿ ಗುಯ್ ಗುಟ್ಟಿತು." ಈ ಸಾಲಿನ ರಾಜ್ಯಮಟ್ಟದ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆವರು ಸರಸ್ವತಿ " ಎಂದು ಧ್ವನಿವರ್ಧಕದಲ್ಲಿ ಬಂದಾಗ ತಾಯಿಗೆ ಅತೀವ ನಿರಾಸೆ .ಮುಂದುವರೆದು "ದ್ವಿತೀಯ ಬಹುಮಾನ ಸುರೇಶ್ "ಎಂದಾಗ ಆ ತಾಯಿಯ ಆನಂದ ತಾಳಲಾರದೇ ಆನಂದಭಾಷ್ಪ ಉಕ್ಕಿ  ಅಲ್ಲೇ ಕಣ್ಮುಚ್ಚಿದರು .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

13 ಅಕ್ಟೋಬರ್ 2017

ಸಮರಸವೇ ಜೀವನ (ಕವನ)

   

  *ಸಮರಸವೇ ಜೀವನ*


ಬಾಳ ಪಯಣದಲಿ ನೂರಾರು ತಿರುವುಗಳು
ಜೀವಿಸಬೇಕು  ನೀನು ಸಂತಸದಿ ಹಗಲಿರುಳು

ನಿಂದಕರಿಹರು ಹಂದಿಯಂತೆ ಜಗದಿ
ಅವರ ನಿಂದನೆ ಸ್ವೀಕರಿಸು ಮುದದಿ
ಕಾಲೆಳೆವರು ನೀ ಮೇಲೇರಿದರೆ ಇಲ್ಲಿ
ಸಾಧಿಸಿ ತೋರಿಸವರಿಗೆ  ಜೀವನದಲ್ಲಿ

ಕಷ್ಟ ಕೋಟಲೆಗಳು ನೂರು ಇರಲಿ
ಇಷ್ಟ ಪಟ್ಟು ಬದುಕುವುದು  ನೀ ಕಲಿ
ಎಲ್ಲರೊಳಗೊಂದಾಗಿ ಬಾಳಬೇಕು
ಸಮರಸವೇ ಜೀವನ ತಿಳಿಯಬೇಕು

ಮಿಡಿತವಿರಲಿ ಅಶಕ್ತ ಮನಗಳಿಗೆ
ತುಡಿತವಿರಲಿ ಹೊಸ ಕಲಿಕೆಗಳಿಗೆ
ದಯೆಯಿರಲಿ  ಸಕಲ ಜೀವಗಳಲಿ
ಪರಿಸರದ ಬಗ್ಗೆ ಕಾಳಜಿಯಿರಲಿ


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

12 ಅಕ್ಟೋಬರ್ 2017

ನಾಲ್ಕು ಹನಿಗವನಗಳು.

               
              *ಹನಿಗವನಗಳು*

*೧*

*ತಾ*

ನನ್ನವಳೆಂದರೆ ನನಗೆ ಅದೇನೋ ಸೆಳೆತ
ನನ್ನವಳೆಂದಳು ಮೊದಲು ಎ.ಟಿ.ಎಮ್ ನಿಂದ ಹಣ ಸೆಳೆ
ನಂತರ ತಾ

*೨*

*ಇಳಿತ*

 ಮೊದಲು ನನ್ನವಳ ಕಂಡರೆ
ಆಯಸ್ಕಾತದಂತೆ ಸೆಳೆತ
ಈಗೀಗ ಏಕೋ ಆಕರ್ಷಣೆಯಲ್ಲಿ
ಬಹಳ ಇಳಿತ

*೩*

*ಅಲೆತ*


ಸರ್ಕಾರಿ ನೌಕರಿ ಪಡೆಯಲು
ಎಲ್ಲರ ಅಲೆತ
ಅವರಿಗೆ ಗೊತ್ತು ಮುಂದೆ ಇದ್ದೇಇದೆ
ಲಂಚದ ಸೆಳೆತ

*೪*

*ಬೇಕಿತ್ತಾ*

ಮೊದಲು
ಅವಳೆಂದರೆ ಇವನಿಗೆ ಸೆಳೆತ
ಇವಳೆಂದರೆ ಅವನಿಗೆ ಸೆಳೆತ
ನಂತರ
ಇವಳ ಮಾತು ಅವನಿಗೆ ಕೊರೆತ
ಅವನ ಮಾತು ಇವಳಿಗೆ ಕೊರೆತ
ಕೊನೆಗೆ
ಇದೆಲ್ಲಾ ನಮಗೆ ಬೇಕಿತ್ತಾ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*