11 April 2025

ಒಮ್ಮೆ ನಕ್ಜಾಗ...ತ ರಾ ಸು ಕೃತಿ





"ಒಮ್ಮೆ ನಕ್ಕ ನಗು" ಕೊನೆಗೆ ಅಳು ಬರಿಸಿತು.

ಕಳೆದ ತಿಂಗಳು ತ ರಾ ಸು ರವರ ಐತಿಹಾಸಿಕ ಕಾದಂಬರಿಗಳಾದ ಕಸ್ತೂರಿ ಕಂಕಣ, ಕಂಬನಿಯ ಕುಯಿಲು, ರಾಜ್ಯದಾಹ, ತಿರುಗುಬಾಣ, ಹೊಸ ಹಗಲು ಕಾದಂಬರಿಗಳನ್ನು  ಓದಿದ ನಾನು ಇಂದು ಅವರ "ಒಮ್ಮೆ ನಕ್ಕ ನಗು" ಕಾದಂಬರಿ ಓದಿದೆ. ‌ಇದೊಂದು ಸಂಪೂರ್ಣ ವಿಭಿನ್ನವಾದ ಕಾದಂಬರಿ ಇಲ್ಲಿ ತ ರಾ ಸು ರವರ ಸರಳ ನಿರೂಪಣೆ ಅವರ ಭಾಷೆಯ ಬಳಕೆ ಬಹು ಸುಂದರ. ಓದುವಾಗ ನಾನು ಒಬ್ಬನೇ ನಕ್ಕಿರುವೆ. ಆ ನಗು ಕೆಲವೊಮ್ಮೆ ನಾಯಿಡೂ ನ ಹುಚ್ಚುತನ ಕಂಡಾಗ  ನಗು, ಕನಕಲಿಂಗಂ ನ ಅಸಹಾಯಕತೆಯಿಂದ ಮಾಡುವ ಕುತಂತ್ರಗಳು ತನಗೇ ತಿರುಗುಬಾಣವಾದಾಗ ಅದನ್ನು ಓದಿ ನಗು ಬಂದಿದೆ.ಆದರೆ ಕೋಮಲಾ ಪರಿಸ್ಥಿತಿಯ ಕೈಗೊಂಬೆಯಾಗಿ ಜೀವನದಲ್ಲಿ ಹಲವಾರು ನೋವು ನುಂಗಿ ಅವಿವಾಹಿತೆಯಾದರೂ ಗರತಿಯಂತೆ ಬಾಳಿ ಕೊನೆಗೂ ತನ್ನ ಆಸೆ ಕೈಗೂಡದಿದ್ದಾಗ ಅವಳು ನೋವಿನಿಂದ ನಗುವುದನ್ನು ಓದುವಾಗ ನಗುವಿನ ಬದಲು ಅಳು ಬರುತ್ತದೆ. 
ಈ ಕಾದಂಬರಿಯು ವಸ್ತು
 ಕಳೆದ ಶತಮಾನದ ಅರವತ್ತರ ದಶಕದಲ್ಲಿ ನಡೆಯುವ ಘಟನೆಗಳ ಆಧಾರದಲ್ಲಿ ರಚಿತವಾಗಿದೆ. ಆಂದ್ರಪ್ರದೇಶ ತಮಿಳುನಾಡಿನ ಭಾಗದಲ್ಲಿ ನಡೆಯುವ ಕಥೆಯಾದ್ದರಿಂದ  ತೆಲುಗು ಪದಗಳು ಮತ್ತು ಹೆಸರುಗಳು ಧಾರಾಳವಾಗಿ ಬಂದು ಹೋಗುತ್ತವೆ.  ಪುಸ್ತಕ ಹಳೆಯದಾದರೂ  ಆ ಸಾಹಿತ್ಯ ಸೌಗಂಧ ಇನ್ನೂ ಉತ್ತಮ.
 ಮೂರು ಪಾತ್ರಗಳ ಮನದಲ್ಲಿ ಮೂಡುವ ಯೋಚನೆ ಮತ್ತು ಭಾವನೆಗಳ ಮಹಾಪೂರವನ್ನು ತರಾಸು ಅವರು ಈ ಕಾದಂಬರಿಯಲ್ಲಿ ನಮಗೆ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ಹಾಗೂ ಆ ಪ್ರಯತ್ನದಲ್ಲಿ ಅವರು ಸಫಲರೂ ಆಗಿದ್ದಾರೆ. ಇಲ್ಲದಿದ್ದರೆ  ಕಾದಂಬರಿ ಪ್ರಕಟವಾದ ಅರವತ್ತೈದು ವರ್ಷಗಳ ನಂತರದಲ್ಲಿ ಓದಿ ಇದರ ಬಗ್ಗೆ ನಾನು ನಾಲ್ಕು ಮಾತು ಬರೆಯುತ್ತಿರಲಿಲ್ಲ.
  ಈ  ಕಾದಂಬರಿಯಲ್ಲಿ ಬರುವ ಮೂರು ಪ್ರಮುಖ ಪಾತ್ರದಲ್ಲಿ ಭಾವನೆಗಳು ಮತ್ತು ಆಲೋಚನಾ ತರಂಗಗಳಿಗೆ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಒಬ್ಬ ನಾಯಿಡೂ ಅವನು ದುಡ್ಡಿನ ಅಮಲಿನಲ್ಲಿ ಬೇಕಾಗಿದ್ದನ್ನು ಪಡೆಯುವ ಹುನ್ನಾರದಲ್ಲಿರುವವ. ಇನ್ನೊಬ್ಬ  ಕನಕಲಿಂಗಂ  ನಾಯಿಡೂನ  ಕೆಳಗಿದ್ದುಕೊಂಡು ಅವನ ಬಯಕೆಗಳನ್ನು ಕೇವಲ ನೋಡಿಕೊಂಡು ಸುಮ್ಮನಿರುವವ. ಮತ್ತೊಂದು ಕೋಮಲ ಎಂಬ ಹೆಸರಿಗೆ ಮಾತ್ರ ಕೋಮಲವಾದ ಕಾದಂಬರಿಯಲ್ಲಿ ನೋವನ್ನು ಪ್ರತಿಬಿಂಬಿಸುವ ಪಾತ್ರ. ಸಮಾಜದಲ್ಲಿ ಹೆಣ್ಣಾಗಿ, ಮನೆಯಲ್ಲಿ ಗಂಡಾಗಿ ದುಡಿದು, ಸಂತೋಷವನ್ನು ಕಾಣದ ಕಷ್ಟಜೀವಿ. ಮೊದಲೆರಡು ಪಾತ್ರಗಳು ದುಡ್ಡಿನ ದೃಷ್ಟಿಕೋನದಿಂದ ಸುಖಜೀವಿಗಳು ಆದರೆ ಆಸೆಯೆಂಬ ಪರ್ವತದ ತುದಿಯನ್ನು ಎಂದೂ ಹತ್ತಿ ಸುಮ್ಮನಾಗದ ಅತಿಯಾಸೆ ಜೀವಿಗಳು.  ಇತ್ತ ಹೆಣ್ಣುಜೀವ ಆಸೆಯನ್ನು ಮುಚ್ಚಿಟ್ಟುಕೊಂಡು ಬಾಳುತ್ತಿದ್ದರೂ ಧನದ ಅಭಾವ. ಹೀಗೆ ಮಾನವ ತನ್ನ ಜೀವನದಲ್ಲಿ ಎಷ್ಟು ಸುಖವಾಗಿ ಇರಲು ಪ್ರಯತ್ನಿಸಿದರೂ ಯಾವುದೊ ಒಂದು ರೂಪದಲ್ಲಿ ದುಃಖದ ಛಾಯೆ ಕೆಲವು ಬಾರಿ ಅವನ ಮೇಲೆ ಮೂಡುತ್ತದೆ. ಅದೇ ಜೀವನವೆಂಬ   ಚಿತ್ರಣವನ್ನು ತರಾಸು ಅವರು ಈ ಕಾದಂಬರಿಯ ಮುಖಾಂತರ ತಿಳಿಸಲು ಪ್ರಯತ್ನಿಸಿದ್ದಾರೆ.ಕನಕಲಿಂಗಂ ಒಬ್ಬ ಸಾಧಾರಣ ಮನುಷ್ಯ ಹಾಗೆಯೇ ಒಬ್ಬ ಸ್ವಯಂಘೋಷಿತ ಕವಿಯೂ ಕೂಡ! ಅವನಿಗೆ ಸಿನಿಮಾದ ಗೀಳು, ಅದಕ್ಕೆ ಹಾಡು ಚಿತ್ರಕಥೆ ಬರೆಯುವುದು ಇತ್ಯಾದಿ ಬರೆಯುವ ಹುಚ್ಚು. ಆದರೆ ಎಂದೂ ಅದರಲ್ಲಿ ಅವನು ಸಫಲವಾದವನಲ್ಲ. ಅವರ ಇವರ ಕಾಲುಹಿಡಿದು ಹೇಗೋ ಜೀವನವನ್ನು ನಡೆಸುತ್ತಿದ್ದನು. ನಾಯಿಡು ಆಗರ್ಭ ಶ್ರೀಮಂತ, ಚಲನಚಿತ್ರದ ನಿರ್ಮಾಪಕನಾಗಬೇಕೆಂದು ಚೆನ್ನೈ ಗೆ ಬಂದು  ಕನಕಲಿಂಗಂ  ಜೊತೆಗೆ ಇರಲಾರಂಭಿಸಿರುತ್ತಾನೆ. ನಾಯಿಡು ಬಹಳ ಜಾಲಿ ಮನುಷ್ಯ. ಸದಾ ವಿಲಾಸಿ ಜೀವನವನ್ನು ನಡೆಸುತ್ತಿದ್ದವ, ಸದಾ ಹೆಣ್ಣಿನ ಸಂಗವನ್ನು ಬಯಸುವ ಕಾಮಾಂಧ. ಅವನ ಹದ್ದಿನ ಕಣ್ಣು ಯಾವುದಾದರೂ ಹುಡುಗಿಯ ಮೇಲೆ ಬಿದ್ದರೆ ಅವಳನ್ನು ಪಡೆಯಲೇಬೇಕು ಎಂಬ ಹಠಮಾರಿ ಗುಣ ಅವನದು. ಅದಕ್ಕೆ ಸಹಾಯಕ್ಕೆ ಬರುತ್ತಿದ್ದವ ಈ  ಕನಕಲಿಂಗಂ. ಆ ಹುಡುಗಿಯನ್ನು ಪತ್ತೆ ಹಚ್ಚಿ ನಾಯಿಡುಗೆ ಅವಳು ದಕ್ಕುವಂತೆ ಮಾಡುತ್ತಿದ್ದ. ಒಂದು ದಿನ ನಾಯಿಡು ಊರಿನಲ್ಲಿರದಾಗ ಕನಕಲಿಂಗಂ ಮನೆಯ ಚಾವಣಿಯ ಮೇಲೆ ಸಿಗರೇಟ್ ಸೇದುತ್ತಾ ಬಿಸಲಿಗೆ ನಿಂತಿದ್ದಾಗ ಅಲ್ಲಿ ಒಂದು ಹುಡುಗಿ ಬಸ್ಸಿಗಾಗಿ ಕಾಯುತ್ತ ನಿಂತಿರುತ್ತಾಳೆ. ಹಾಗೆಯೇ ಸಂಜೆಯೂ   ಮತ್ತೆ ಬಸ್ಸಿನಿಂದ ಇಳಿಯುವುದನ್ನು ನೋಡುತ್ತಾನೆ. ಅವಳ ನಾಜೂಕುತನ, ತಲೆ ಕೆಳಗೆ ಹಾಕಿಕೊಂಡು ನಡೆಯುವ ನಾಚಿಕೆಯ ಸ್ವಭಾವ ಯಾಕೋ ಕನಕಲಿಂಗಂನಿಗೆ ತುಂಬಾ ಇಷ್ಟವಾಯಿತು. ಅವಳ ಮೇಲೆ ನಿಧಾನವಾಗಿ ಅನುರಕ್ತನಾದ. ಕೆಲದಿನಗಳ ನಂತರ ನಾಯಿಡುವಿನ ಆಗಮನವಾಯಿತು. ಅವನು ಕನಕಲಿಂಗಂ ಬೆಳಿಗ್ಗೆ-ಸಾಯಂಕಾಲ ಛಾವಣಿಯಲ್ಲಿ ನೋಡುತ್ತಿದ್ದ ಆ ಹುಡುಗಿಯ ಬಗ್ಗೆ ತಿಳಿದುಕೊಂಡ. ಆ ಹುಡುಗಿಯನ್ನು ಪಡೆಯಬೇಕೆಂಬ ದಾಹ ಅವನಲ್ಲಿ ಮೂಡಿತು. ತನ್ನ ಆಸೆಯನ್ನು ಕನಕಲಿಂಗಂ ಮುಂದೆ ವ್ಯಕ್ತಪಡಿಸಿದ. ಕನಕಲಿಂಗಂಗೆ ಸ್ವಲ್ಪ ದುಃಖವಾದರೂ ಹುಡುಗಿಯನ್ನು ದೊರಕಿಸಿಕೊಡುವುದು ತನ್ನ ಕರ್ಮ. ಸುಮ್ಮನೆ ಅವಳ ಮೇಲೆ ಒಲವು ತೋರಿಸಿದೆನೆಂದು ತಾನೇ ಹಳಿದುಕೊಂಡನು. ಸಮೀಪದ ಅಂಗಡಿಯಲ್ಲಿ ಆ ಹುಡುಗಿಯ ಬಗ್ಗೆ ವಿಚಾರಿಸಿದನು.ಆ ಹುಡುಗಿಯ ಹೆಸರು ಕೋಮಲ. ಮನೆಯಲ್ಲಿ ಬಡತನ. ತಂದೆಗೆ ಖಾಯಿಲೆಯಾಗಿ ಕೆಲಸವನ್ನು ಬಿಟ್ಟರು. ಕೋಮಲ ದುಡಿದು ಮನೆಗೆ ಬಂದು ಹಾಕಬೇಕು. ಅವಳದು ಮದುವೆಯ ವಯಸ್ಸು ಆದರೂ ಮನೆಯಲ್ಲಿ ಮದುವೆಯಾಗಲು ಬಿಡದೆ ಅವಳನ್ನು ಹೀಗೆ ದುಡಿಸುತ್ತಿರುವುದು ವಿಪರ್ಯಾಸ. ಅವಳು ಕೆಲಸ ಮಾಡುತ್ತಿದ್ದಲ್ಲಿಯ ಮಾಲೀಕ ವಾರಿಯರ್ ಮದುವೆಯ ಪ್ರಸ್ತಾಪ ಆಕೆಯ ಮುಂದೆ ಇಟ್ಟಿದ್ದ. ಆದರೆ ಅವಳ ತಂದೆಯ ನಿಯಮ ಕೇವಲ ಅವಳನ್ನಷ್ಟೇ ಅಲ್ಲ ಅವಳ ಸಂಸಾರವನ್ನೂ ಸಾಕಬೇಕು ಎಂಬುದು. ಅದಕ್ಕಾಗಿ ಅವಳಿಗೆ ಸೂಕ್ತವಾದ ವರವೇ ಸಿಕ್ಕಿರಲಿಲ್ಲ. ವಾರಿಯರ್ ಕೂಡ ಬೇಸತ್ತು ಅವಳನ್ನು ಕೈಬಿಟ್ಟಿದ್ದ. ಅವಳು ಬೇರೆಯ ಕಡೆ ನೌಕರಿ ಹಿಡಿದಾಗ ಅಲ್ಲಿಯ ಒಬ್ಬ ಸಹೋದ್ಯೋಗಿಯ ಅಸಭ್ಯ ವರ್ತನೆ ಅವಳನ್ನು ಇನ್ನೂ ಮಂಕು ಮಾಡಿತ್ತು. ಮನೆಯಲ್ಲಿ ಅದರಿಂದ ತಂದೆಗೆ ಅವಳ ಮೇಲೆ ಬಹಳ ಕೋಪ ಆದರೂ ತನ್ನ ಕುಟುಂಬ ಎಂದು ಅವಳು ಸಲಹುತ್ತಿದ್ದಾದರೂ ಅವಳಿಗೆ ತಲೆ ಕೆಡುತ್ತಿತ್ತು. ಇವಳು ಪ್ರತಿದಿನ ನಾಯಿಡು ಮನೆಯ ಮುಂದೆ ನಡೆದುಕೊಂಡು ಹೋಗುವಾಗ ಅವನ ಕಣ್ಣು ಇವಳ ಮೇಲೆಯೇ ನೆಟ್ಟಿರುತ್ತಿತ್ತು. ಇವಳು ಕಣ್ಣೆತ್ತಿ ಕೂಡ ಅವನತ್ತ ನೋಡುತ್ತಿರಲಿಲ್ಲ. ಆದರೆ ಮನೆಯಲ್ಲಿ  ತಂದೆ ಅವಳನ್ನು ನಿರ್ದಯವಾಗಿ ನಿಂದಿಸಿ, ತಾಯಿಯೂ ಅನವಶ್ಯಕ ಅನುಮಾನ ವ್ಯಕ್ತಪಡಿಸಿದ್ದರಿಂದ   ಮರುದಿನ ಅವಳಿಗೆ ಏನೋ ಮನದಲ್ಲಿ ತಾನು ಬೇರೆಯವನೊಬ್ಬನ ಸುಖವನ್ನು ಬಯಸಿತು. ಅದು ಕೇವಲ ಸುಖ ಮಾತ್ರವಾಗಿರದೇ ಮದುವೆಯಾಗದಿದ್ದರೂ ಮಗುವನ್ನು ಪಡೆಯಲೇಬೇಕು ಎಂಬ ಉತ್ಕಟವಾದ ಬಯಕೆಯುಂಟಾಯಿತು.
 ಹಾಗೆಯೇ ಅವಳ  ಸಹೋದ್ಯೋಗಿ ಚಂದ್ರನ್ ಮಾಡಿದ್ದ ಮೋಸಕ್ಕೆ ಬಲಿಯಾದರೂ ಒಂದು ಸಲ ಅವನಿಂದ ಸುಖಪಡೆಯಬಹುದಾಗಿತ್ತು ಎಂಬ ಕೊರಗು ಅವಳನ್ನು ಕಾಡಿತು. ಮಹಾನ್ ಕಾಮಾಂಧ  ನಾಯಿಡುವನ್ನು ನೋಡಿದಾಗ ಆ ಆಸೆ ಮತ್ತೆ ಅವಳಿಗೆ   ಚಿಗುರೊಡೆಯಿತು. ಅವನ ಆ ಸಿರಿವಂತನ ಕಳೆಗೆ ಅವಳು ಮಾರಿಹೋಗಿದ್ದಳು. ಒಂದು ದಿನ ನಾಯಿಡು ಬಯಸುತ್ತಿದ್ದ ಹಕ್ಕಿ ತಾನೇ ತನಾಗಿ ಅವನ ರೂಂ ಬಳಿ ಬಂದು ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದ ಅನುಭವವಾಯಿತು. ನೂರಾರು ಹೆಣ್ಣುಗಳು ಹುರಿದು ಮುಕ್ಕಿದ್ದ ನಾಯ್ಡು ಕೋಮಲಗಾಗಿ ತಿಂಗಳುಗಟ್ಟಲೇ ಹುಚ್ಚನಾಗಿ ಕಾತರಿಸಿದ್ದ.ಅಂತಹ ಕೋಮಲಾ ತಾನೇ ನಾಯ್ಡುವನ್ನು ಹುಡುಕಿಕೊಂಡು ಬಂದು ನನಗೆ ಸುಖ ಕೊಡು ಎಂದಾಗ ನಾಯ್ಡು ಅವಳ   ಬಯಕೆಯನ್ನು ಈಡೇರಿಸಲು ವಿಫಲನಾದ.ತನ್ನ ಗಂಡಸ್ತನದ ಬಗ್ಗೆ   ನಾಯ್ಡು ತಾನೇ ಅಸಹ್ಯ ಪಟ್ಟುಕೊಂಡ.
ತನಗೆ ಸುಖ ನೀಡು ಎಂದು ನಾಚಿಕೆ ತೊರೆದು ಬಂದ ಹೆಣ್ಣಿಗೆ   ನಾಯ್ಡು  ಏಕೆ ಸುಖ ನೀಡಲಾಗಲಿಲ್ಲ ಎಂಬುದನ್ನು ನೀವು ಕಾದಂಬರಿ ಓದಿಯೇ ತಿಳಿಯಬೇಕು.

ಸಿಹಿಜೀವಿ ವೆಂಕಟೇಶ್ವರ.
ತುಮಕೂರು

No comments: