10 September 2021

ವಾಡಿವಾಸಲ್ .ಕಾದಂಬರಿ ವಿಮರ್ಶೆ

 


ವಾಡಿವಾಸಲ್ .ಕಾದಂಬರಿ ವಿಮರ್ಶೆ


ಓದಿ ಓದಿ ಮರುಳಾಗಿ ಎಂಬ ಟ್ಯಾಗ್ ಲೈನ್ ಹೊಂದಿರುವ ಛಂದ ಪುಸ್ತಕ ಹೊರ ತಂದ ಹೊಸ ಪುಸ್ತಕ ವಾಡಿವಾಸಲ್ ಎಂಬ ಕಾದಂಬರಿ. ಒಂದೇ ಗುಕ್ಕಿಗೆ ಓದಿ ಮುಗಿಸಿದೆ . ಈ ಕಾದಂಬರಿ ಓದಿದಾಗ ನಮ್ಮ ಮುಂದೆ ಜಲ್ಲಿಕಟ್ಟು ನಡೆಯುತ್ತಿದೆ ಎಂಬಂತೆ ಚಿತ್ರಣ ಮೂಡುತ್ತದೆ.


ವಾಡಿವಾಸಲ್ ಮೂಲ  ಕಾದಂಬರಿಯ  ಲೇಖಕರಾದ 

ಚಿ.ಸು. ಚೆಲ್ಲಪ್ಪ  ರವರು 

ಹುಟ್ಟಿದ್ದು ಮದುರೈ ಜಿಲ್ಲೆಯ ವತ್ತಲಗುಂಡು ತಾಲೂಕಿನ ಚಿನ್ನಮಣೂರ್ ಗ್ರಾಮದಲ್ಲಿ. ಸಣ್ಣಕತೆ, ಕಾದಂಬರಿ, ವಿಮರ್ಶೆ, ಕವಿತೆ, ಅನುವಾದ ಮೊದಲಾದ ಕ್ಷೇತ್ರಗಳಿಗೆ ಚೆಲ್ಲಪ್ಪನವರ ಕೊಡುಗೆ ಅಪಾರ. ಚಂದ್ರೋದಯ, ದಿನಮಣಿ ಪತ್ರಿಕೆಗಳಲ್ಲಿ ಸಹಸಂಪಾದಕರಾಗಿ ಕೆಲಸ ಮಾಡಿದ್ದ ಚೆಲ್ಲಪ್ಪನವರು ರಚಿಸಿದ ವಾಡಿವಾಸಲ್ ಕಾದಂಬರಿಯು ಜಲ್ಲಿಕಟ್ಟು ಕುರಿತ ಮೊದಲ ಕೃತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದನ್ನು ಕನ್ನಡಕ್ಕೆ ತಂದವರು 

ಸತ್ಯಕಿ. ಇತ್ತೀಚಿಗೆ ಕನ್ನಡ  ಕಿರುತೆರೆಯಲ್ಲಿ ಸಂಚಲನವನ್ನು ಮೂಡಿಸಿದ "ಜೊತೆ ಜೊತೆಯಲಿ" ಧಾರವಾಹಿಯ ಸಂಭಾಷಣೆಯಿಂದ ಮನೆ ಮಾತಾದವರು.

 ಅವರ ಜನ್ಮಭೂಮಿ, ಕರ್ಮಭೂಮಿ ಎರಡೂ ಬೆಂಗಳೂರೇ. ಓದಿದ್ದು ಮೆಕ್ಯಾನಿಕಲ್ ಇಂಜಿನಿಯರಿಂಗ್. ಸಿನಿಮಾ ಕ್ಷೇತ್ರದಲ್ಲಿ ಸಹಾಯಕ ನಿರ್ದೇಶಕನಾಗಿ, ಸಂಭಾಷಣೆಕಾರನಾಗಿ ವೃತ್ತಿಜೀವನ ಪ್ರಾರಂಭಿಸಿರುವ ಸತ್ಯಕಿ ರವರು ಬಹಳ ಸೊಗಸಾಗಿ ವಾಡಿವಾಸಲ್ ಕಾದಂಬರಿಯನ್ನು ಅದೇ ಹೆಸರಲ್ಲಿ ಕನ್ನಡಿಗರಿಗೆ ತಂದಿದ್ದಾರೆ .


ಸುಪ್ರೀಂ ಕೋರ್ಟ್ ತೀರ್ಮಾನ ಮತ್ತು ವಿವಾದದ ಹಿನ್ನೆಲೆಯಲ್ಲಿ ಈ ಕಾದಂಬರಿ ಗಮನ ಸೆಳೆಯುತ್ತದೆ. 1959 ರಲ್ಲಿ ಬರೆದ ಈ ಕಾದಂಬರಿ ಇಂದಿಗೂ ಪ್ರಸ್ತುತ ವಾಗಿದೆ.


ವಾಡಿವಾಸಲ್ ಎಂಬ ತಮಿಳು ಪದ ಜಲ್ಲಿಕಟ್ಟು ನಡೆವ ಸ್ಥಳದಲ್ಲಿ ಗೂಳಿಗಳನ್ನು ಕೂಡಿಹಾಕಿರುವ ಪ್ರದೇಶದಿಂದ ಮೊದಲ ಬಾರಿಗೆ ಹೊರ ಬರುವ ಸ್ಥಳ .

ಮನುಷ್ಯನಿಗೂ ಮೃಗಕ್ಕೂ ನಡೆಯುವ  ಕಾಳಗಕ್ಕೆ ಜಲ್ಲಿಕಟ್ಟು ಎಂದು ಹೆಸರು. ಅದು ನಡೆಯುವ ಜಾಗ  ವಾಡಿವಾಸಲ್ 


ಪಿಚ್ಚಿ ಮತ್ತು ಅವನ ಬಾಮೈದ ಜಲ್ಲಿಕಟ್ಟು ಕ್ರೀಡೆಯಲ್ಲಿ ಭಾಗವಹಿಸಲು ಬರುವ ಹಿನ್ನೆಲೆಯಲ್ಲಿ ಆರಂಭವಾಗುವ ಈ  ಕಾದಂಬರಿಯು ಜಲ್ಲಿಕಟ್ಟು ಕ್ರೀಡೆಯ ಸಣ್ಣ ಅಂಶಗಳನ್ನು ಸಹ ಕಣ್ಣಿಗೆ ಕಟ್ಟುವಂತೆ ಓದುಗರಿಗೆ ತೋರಿಸುತ್ತಾ ಹೋಗುತ್ತಾರೆ ಕಾದಂಬರಿಕಾರರು.


ತಂದೆಯ  ಸಾವಿಗೆ ಕಾರಣವಾದ ಕಾರಿ ಎಂಬ ಗೂಳಿಯ ಸೋಲಿಸಿ ತಂದೆಯ ಆಸೆ ಈಡೇರಿಸಲು ಪಿಚ್ಚಿ ತನ್ನ ಬಾಮೈದನೊಂದಿಗೆ ಬಂದು ಗುರಿ ಮುಟ್ಟಿದನೇ ಅಪ್ಪನ ಆಸೆ ಈಡೇರಿಸಿದನೇ ಎಂಬುದನ್ನು ನೀವು ಕಾದಂಬರಿ ಓದಿಯೇ ಎಂಜಾಯ್ ಮಾಡಬೇಕು.

ಕಾದಂಬರಿಯಲ್ಲಿ ಬರುವ ಕೆಲ ದೃಶ್ಯಗಳನ್ನು ಲೇಖಕರು ಕುತೂಹಲಕಾರಿ ಚಿತ್ರ ನೋಡುವಾಗ ಸೀಟಿನ ಮುಂಬಾಗದಲ್ಲಿ ಕುಳಿತು  ನೋಡುವಂತೆ ಉಸಿರು ಬಿಗಿ ಹಿಡಿದು ಓದುವಂತೆ ಮಾಡಿದ್ದಾರೆ 

ಅದಕ್ಕೆ ಕೆಲ ಉದಾಹರಣೆ ಎಂದರೆ


"ಒಂದು ಜಿಗಿತ, ಎರಡು ಜಿಗಿತ; ಮೂರನೇ ಜಿಗಿತಕ್ಕೆ ಆತ ನಿಂತು ಬಿಟ್ಟ, ಮೂರು ಬಾರಿಯೂ ಗೂಳಿಯು ಅವನನ್ನು ಎತ್ತಿ ಎಸೆಯಲು ಯತ್ನಿಸಿತ್ತು".


"ಅಪ್ಪನ ಬಯಕೆಗೆ ಮಾತ್ರವಲ್ಲ, ಬದುಕಿಗೆ ಯಮನಾಗಿ ನಿಂತ

ಕಾರಿಯ ಕೊಂಬಿನಲ್ಲಿ ಈಗಲೂ ತಂದೆಯ ರಕ್ತ ಅಂಟಿದಂತೆ ಭ್ರಮೆ ಉಂಟಾಯಿತು. ಆ ಭ್ರಮೆಯಿಂದ ಹೊರ ಬಂದು ತನ್ನ ಎದುರಿಗೆ ನೋಡಿದನು ಪಿಚ್ಚಿ, ಆತನ ಎದುರಿಗೆ ಕಾರಿ ನಿಂತಿತ್ತು".


ಕಾದಂಬರಿಯ ಕೊನೆಯ ವಾಕ್ಯಗಳನ್ನು ಓದುವಾಗ ಓದುಗರು ಬಾವುಕರಾಗುವುದು ಸುಳ್ಳಲ್ಲ 

“ಮೈಗಕ್ಕೆ ರೋಸ ಬಂದ್ರೂ ಅಸ್ಟೇ  ಮನುಸಂಗೆ ರೋಸ ಬಂದ್ರೂ ಅಸ್ಟೇ ,

ಏನೇಂದ್ರೂ  ಅದು ಮೃಗಾನೇ ಅಲ್ವಾ" ಎಂಬ ಹಳ್ಳಿಯ ಬನರು ಮಾತು ನಮ್ಮ ನ್ನು ಚಿಂತನೆಗೆ ಹಚ್ಚುತ್ತವೆ.


ಈ ಕಾದಂಬರಿಯಲ್ಲಿ ರಾಷ್ಟ್ರೀಯ ಚಿತ್ರಕಾರರಾದ ಕೆ ಎಂ ಆದಿ ಮೂಲನ್    ರವರ ರೇಖಾಚಿತ್ರಗಳು ಕಥೆಗೆ ಪೂರಕವಾಗಿ ಓದುಗರ ಮನ ಸೆಳೆಯುತ್ತವೆ .

ಒಟ್ಟಾರೆಯಾಗಿ ಒಂದು ಕ್ಲಾಸಿಕ್ ಕಾದಂಬರಿ ಓದಿದ ಅನುಭವ ಆಗಬೇಕಂದರೆ ನೀವೂ ಒಮ್ಮೆ ವಾಡಿವಾಸಲ್ ಓದಿ .


ಕಾದಂಬರಿಯ ಹೆಸರು: ವಾಡಿವಾಸಲ್

ಲೇಖಕರು: ಚಿ.ಸು. ಚೆಲ್ಲಪ್ಪ

ಅನವಾದ: ಸತ್ಯಕಿ.

ಪ್ರಕಾಶನ: ಛಂದ ಪ್ರಕಾಶನ

ಬೆಲೆ : 70 ರೂಗಳು


ಸಿಹಿಜೀವಿ 

ಸಿ ಜಿ ವೆಂಕಟೇಶ್ವರ


No comments: