ಬೆಳಗು ಕತ್ತಲೆಯ ನುಂಗಿ
ಸೂಫಿ ಕಥೆಗಳು . ವಿಮರ್ಶೆ
ಎಂ. ವಿ ಶಂಕರಾನಂದ ರವರ ಬೆಳಕು ಕತ್ತಲೆಯ ನುಂಗಿ ಎಂಬ ಕಥಾ ಸಂಕಲನದ ಶೀರ್ಷಿಕೆಯ ನೋಡಿ ಓದಲು ಆರಂಭ ಮಾಡಿದ ನನಗೆ ಪುಸ್ತಕ ಓದಿ ಮುಗಿಸಿದಾಗ ಹೊಸ ಚಿಂತನೆಗಳು, ಹೊಳವುಗಳು ಗೋಚರಿಸಲಾರಂಬಿಸಿದವು.
ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಕೋಡ್ಲಾಪುರದಲ್ಲಿನ ಒಂದು ಪುರೋಹಿತ ಕುಟುಂಬದಲ್ಲಿ,ಜನಿಸಿದ ಶಂಕರಾನಂದ ರವರು ಹುಟ್ಟೂರಿನಲ್ಲೇ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ವಿದ್ಯಾಭ್ಯಾಸ ಮುಗಿಸಿ ,ಮುಂದೆ ಮಧುಗಿರಿಯಲ್ಲಿ ಪಿಯುಸಿ, ಪದವಿ ವ್ಯಾಸಂಗ ಮಾಡಿ ಮೈಸೂರಿನಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡಿದ್ದಾರೆ. ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಪ್ನ ಬುಕ್ಹೌಸಿನಲ್ಲಿ ಸಂಪಾದಕರಾಗಿ, ಚೆನ್ನೈನ ಪ್ರಕಾಶನ ಸಂಸ್ಥೆ ಸುರಾ ಬುಕ್ಸ್ (ಪ್ರೈ) ಲಿ.ನಲ್ಲಿ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದಲ್ಲಿ ಐವತ್ತಕ್ಕೂ ಹೆಚ್ಚಿನ ಸ್ವತಂತ್ರ, ಅನುವಾದ, ಸಂಪಾದನಾ ಕೃತಿಗಳ ರಚನೆ ಮಾಡಿರುವ ಇವರಿಗೆ
ಮಧುಗಿರಿ, ಗೌರಿಬಿದನೂರು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಓಂಶಕ್ತಿ ಸಾಹಿತ್ಯ ಪ್ರಶಸ್ತಿ ಮತ್ತು ಹೇಮಂತ ಸಾಹಿತ್ಯ ಪುರಸ್ಕಾರಗಳು ಹುಡುಕಿಕೊಂಡು ಬಂದಿವೆ . ಇವರು ಹಲವು ರಾಜ್ಯಮಟ್ಟದ, ಪ್ರಾದೇಶಿಕ, ಜಿಲ್ಲಾ ಪತ್ರಿಕೆಗಳ ಉಪ ಸಂಪಾದಕರೂ, ಅಂಕಣಕಾರರೂ ಆಗಿ ಕಾರ್ಯ ನಿರ್ವಹಿಸಿದ್ದಾರೆ.
ಇವರ ಕೃತಿ ಬೆಳಗು ಕತ್ತಲೆಯ ನುಂಗಿ ಎಂಬ ಸೂಫಿ ಕಥಾ ಸಂಕಲನದಲ್ಲಿ 40 ಕಥೆಗಳಿವೆ ಪ್ರತಿ ಕಥೆಗಳು ವಿಭಿನ್ನ ,ಮಕ್ಕಳ ಆದಿಯಾಗಿ ಸರ್ವರಿಗೂ ಇಷ್ಟ ಆಗುವ ಕಥೆಗಳಿವೆ .
ಈ ಕಥೆಗಳನ್ನು ಓದಿದ ಮೇಲೆ ನಮ್ಮಲ್ಲಿ ಹೊಸ ಬೆಳಕು ಮೂಡುವುದರಲ್ಲಿ ಸಂದೇಹವಿಲ್ಲ.
ಮೊದಲ ಕಥೆಯಲ್ಲಿ
ಮೂಢನಂಬಿಕೆ ಎಂಬುದು ಒಂದು ಕೆಟ್ಟ ಅವಸ್ಥೆ ಒಳ್ಳೆಯ ಅಧ್ಯಯನ ಮತ್ತು ಚಿಂತನೆ ಮುಖಾಂತರ ಬಹಳ ಸುಲಭವಾಗಿ ಮೂಢನಂಬಿಕೆ ಆದಾರದ ಮೇಲೆ ನಡೆಯುವ ವಂಚನೆಗಳನ್ನು ತಡೆಯಬಹುದು ಎಂದು ಸೂಫಿ ಸಂತರ ಮಾತುಗಳಲ್ಲೇ ಹೇಳುತ್ತಾ ಪುಸ್ತಕದ ಶೀರ್ಷಿಕೆ ಯನ್ನು ಈ ಕಥೆ ನೆನಪಿಸುತ್ತದೆ.
ಪರ್ಷಿಯನ್ ಮೂಲದ ಸೂಫಿ ಸಂತರ ಕಥೆ "ಮರಣವಾರಿಗೂ ಮನ್ನಣೆಯಿಲ್ಲ "ಎಂಬ ಕಥೆಯಲ್ಲಿ ಮಾನವ ಜೀವನದ ಅನಿಶ್ಚಿತತೆಯ ಬಗ್ಗೆ ಬೆಳಕು ಚೆಲ್ಲಿರುವರು .
"ಭವಿಯೆಂಬುದು ಹುಸಿ" ಎಂಬ ಕಥೆಯಲ್ಲಿ ಹಾವು ಮತ್ತು ನವಿಲಿನ ಜಗಳದ ಪ್ರತಿಮೆಗಳನ್ನು ಬಳಸಿಕೊಂಡು,
ಮನುಷ್ಯನು ಹಾವಿನಂತೆ ಭೂಮಿಗೆ ಅಂಟಿಕೊಂಡವನು ಎಂಬುದು ಎಷ್ಟು ನಿಜವೋ ಹಾಗೆಯೇ ನವಿಲಿನ ಕಲ್ಪನೆ ಮತ್ತು ಮಹತ್ವಾಕಾಂಕ್ಷೆಗಳು ಅವನಲ್ಲಿರುವುದು ಅಷ್ಟೇ ನಿಜ. ಆದರೆ ಅವನು ಹಾವಿನಂತೆ ಲೋಭಿ, ಭೂಮಿಯನ್ನು ನವಿಲಿನಂತೆ ಸ್ವಾರ್ಥ ಮತ್ತು ಆತ್ಮಪ್ರತ್ಯಯಗಳನ್ನು ಬಿಟ್ಟುಕೊಡಲಾರ. ಅವನಲ್ಲಿ ಅಹಂಭಾವ ಗರಿಗೆದರುತ್ತದೆ. ಬಿಂಕ ಮೆರೆಯುತ್ತಾನೆ. ಸಾಧ್ಯತೆಗಳನ್ನು ನಿರಾಕರಿಸುತ್ತಾನೆ. ಹಾವು ಪೊರೆ ಕಳಚುವ ಕ್ರಿಯೆಯಲ್ಲಿ ಸೌಂದರ್ಯದ ಸಾಧ್ಯತೆಯು ವ್ಯಕ್ತವಾದರೆ ನವಿಲಿನ ಆಡಂಬರದಲ್ಲಿ, ಆ ಸಾಧ್ಯತೆಯು ನಿರಸನಗೊಳ್ಳುತ್ತದೆ ಎಂದು ಸೂಫಿ ಸಂತರು ನಮ್ಮನ್ನು ಚಿಂತನ ಮಂತನ ಮಾಡುವಂತೆ ಮಾಡುತ್ತಾರೆ.
ಭಾರತದಲ್ಲಿ ಹೊಸ ಶಿಕ್ಷಣ ನೀತಿಯ ಜಾರಿಯ ಹಿನ್ನೆಲೆಯಲ್ಲಿ ಅಹ್ಮದ್ ಇಲ್ ಬೆದಾಮಿ ಎಂಬ ಸಂತರ "ಊರೊಳಗಣ ಕಿಚ್ಚು ಕಾನನದಲ್ಲಿ ಉರಿಯಿತು" ಎಂಬ ಕಥೆಯು ಇಂದಿಗೂ ಪ್ರಸ್ತುತ ಎನಿಸುತ್ತದೆ. ಈ ಕಥೆಯಲ್ಲಿ
ಗುರುಗಳು ತನ್ನ ಶಿಷ್ಯರಿಗೆ: “ಮನುಷ್ಯನಿಗೆ ಕಲಿಯುವ ಇಚ್ಛೆ ಇಲ್ಲದಿರುವುದರಿಂದ ಆತನಿಗೆ ಹೇಗೆ ಕಲಿಸಬೇಕು ಎಂಬುದನ್ನು ನೀವು ಮೊದಲು ಕಲಿತುಕೊಳ್ಳಬೇಕು, ಮೊದಲನೇಯದಾಗಿ ಅವರು ಹೇಗೆ ಕಲಿಯಬಹುದು ಎಂಬುದನ್ನು ತೋರಿಸಿಕೊಡಬೇಕು. ಅದಕ್ಕೂ ಮುನ್ನ ಅವರೆಲ್ಲಾ ಕಲಿಯಬಹುದಾದದ್ದು ಇನ್ನೂ ಇದೆ ಎಂಬುದನ್ನು ಮನದಟ್ಟು ಮಾಡಬೇಕು. ಆಗ ಅವರೆಲ್ಲಾ ಕಲಿಯಲಿಕ್ಕೆ ಸಿದ್ಧರಾಗಿದ್ದೇವೆ ಎಂದು ಭಾವಿಸುತ್ತಾರೆ. ಆದರೆ ಅವರು ಕಲಿಸಬೇಕಾಗಿರುವುದಕ್ಕಿಂತ ಅವರು ಏನನ್ನು ಕಲಿಯಬೇಕು ಎಂದು ಭ್ರಮಿಸುತ್ತಾರೋ ಅದೇ ಅವರಿಗೆ ಮುಖ್ಯವಾಗಿರುತ್ತದೆ. ಇದನ್ನೆಲ್ಲಾ ನೀವು ಅರ್ಥ ಮಾಡಿಕೊಂಡ ನಂತರವೇ ಅವರಿಗೆ ಕಲಿಸುವ ಕ್ರಮವನ್ನು ನೀವು ಸಿದ್ಧಪಡಿಸಬೇಕು. ಜ್ಞಾನ ಮತ್ತು ಸಾಮರ್ಥ್ಯ ಇದ್ದರೆ ಮಾತ್ರ ಸಾಲದು, ಅದನ್ನು ಕಲಿಸಿಕೊಡುವ ವಿಶೇಷ ಶಕ್ತಿಯೂ ಬೇಕು” ಎಂದು ಹೇಳುವ ಮಾತನ್ನು ನಾವು ಪಾಲಿಸಬೇಕಿದೆ.
ಜೀವನದಲ್ಲಿ ಯಶಸ್ಸು ಗಳಿಸಲು ನಿರಂತರ ಶ್ರಮಕ್ಕೆ ಪರ್ಯಾಯ ಯಾವುದೂ ಇಲ್ಲ ಎಂಬ ಸಂದೇಶವನ್ನು ಕೃತಿಯ ಶೀರ್ಷಿಕೆಯ ಕಥೆ ಚೆನ್ನಾಗಿದೆ ಪ್ರತಿಧ್ವನಿಸುತ್ತದೆ.
"ಪ್ರತಿಯೊಂದಕ್ಕೂ ಇಂತಿಷ್ಟು ಪರಿಶ್ರಮ ಎಂಬುದೊಂದಿರುತ್ತದೆ. ಬೆಲೆಯುಳ್ಳ ಕೆಲಸ ಮಾಡಲು ಬೇಕಾಗುವ ಕನಿಷ್ಟ ಶ್ರಮವನ್ನು ನಾವೆಲ್ಲಾ ಹಾಕಲೇಬೇಕು".ಎಂದು ಸೂಫಿ ಸಂತರ ಹೇಳುವ ಮಾತು ನಮ್ಮ ಕಿವಿಯಲ್ಲಿ ಗುಯ್ ಗುಡುತ್ತವೆ.
"ಮನದ ಆಸೆಯೆ ಮಾಯೆ ಕಾಣಾ " ಎಂಬ ಕಥೆಯು ಅಬ್ದುಲ್ಲಾ ನ ಅತಿಯಾಸೆಯಿಂದ ದೊರೆತ ಸಂಪತ್ತನ್ನು ಸದುಪಯೋಗ ಪಡಿಸಿಕೊಳ್ಳದೇ ಬೆಪ್ಪನಾದ ಬಗೆಯನ್ನು ತಿಳಿಸುತ್ತದೆ ಮತ್ತು ನಮಗೆಲ್ಲ ಉತ್ತಮ ಸಂದೇಶ ನೀಡುತ್ತದೆ.
"ವಿಚಾರವೆಂಬ ಹೂವಾಯಿತ್ತು " ಎಂಬ ಕಥೆಯಲ್ಲಿ
ಸೂಫಿಯು, ಬಾದಶಹನಿಗೆ ಕಲಿಯಲಾರದವರಿಗೆ ಕೊಡುವ ವಿದ್ಯೆ ವ್ಯರ್ಥ. ಹಾಗೇ ಆಹಾರದ ಹಿಂದಿನ ಉದ್ದೇಶ ಅನುಮಾನಿಸುವವರಿಗೆ ಅದನ್ನು ನೀಡುವುದೂ ಸಹ ವ್ಯರ್ಥ. ಆದ್ದರಿಂದ, 'ಏನನ್ನು ನೀಡಿದರೂ ಸೂಕ್ತವಾದದ್ದೇ' ಎಂದು ಹೇಳುವುದು ಸಮಂಜಸವಲ್ಲ ಎಂಬುದನ್ನು ಸಾಕ್ಷಿ ಸಮೇತ ತೋರಿಸುವರು .ಇದು ಅಪಾತ್ರರಿಗೆ ಏನನ್ನೂ ನೀಡಬಾರದು ಎಂಬ ಹಿರಿಯರ ಮಾತು ನೆನೆಯುವಂತೆ ಮಾಡುತ್ತದೆ.
"ಎನ್ನ ಮನವು ಅತ್ತಿಯ ಹಣ್ಣು ನೋಡಯ್ಯ" ಎಂಬ ಕಥೆಯಲ್ಲಿ ಬರುವ ಸೂಫಿಯು ರಾಜನಿಗೆ ದಾನ ಮಾಡಿ ಅಹಂ ನಿಂದ ತಾಳ್ಮೆ ಕಳೆದುಕೊಂಡ ಸುಲ್ತಾನ್ ನಿಗೆ ಹೇಳುವ ಮಾತು ನಮಗೂ ಅನ್ವಯಿಸುತ್ತದೆ. " ದಾನ ಮಾಡುವವನಿಗೆ ತಾನು ದಾನ ಕೊಡುತ್ತಿದ್ದೇನೆ ಎಂಬ ಭಾವನೆ ಇರಬಾರದು. ಇದು ದಾನದ ಮೊದಲ ಲಕ್ಷಣ, ತಾಳ್ಮೆ ಎರಡನೆ ಲಕ್ಷಣ, ಸಂಶಯ ಪಡದಿರುವುದು ಮೂರನೆ ಲಕ್ಷಣ, ಈ ಮೂರು ಲಕ್ಷಣಗಳಿಲ್ಲದ ಜಾಗದಲ್ಲಿ ದಾನವೆಂಬ ಗುಣವಿರದು" ಎಂತಹ ಸಾರ್ವಾಕಾಲಿಕ ಸತ್ಯ ಅಲ್ಲವೇ?
ಹೀಗೆ ನಲವತ್ತು ಕಥೆಗಳು ಒಂದಕ್ಕಿಂತ ಒಂದು ಚಿಂತನೆಗೆ ಹಚ್ಚುವ ಬುದ್ಧಿ ಹೇಳುವ ಮತ್ತು ನಮ್ಮ ತಿದ್ದುವ ಕಥೆಗಳಾಗಿವೆ ಮತ್ತೊಮ್ಮೆ ಓದಲು ಪ್ರೇರಣೆ ನೀಡುವ ಕಥೆಗಳು ಇನ್ನೊಂದು ಬಾರಿ ಓದುವಾಗ ಬೇರೆ ಹೊಳವು ಕಾಣುತ್ತದೆ.
ಈ ಕಥಾಸಂಕಲನದ ಕಥೆಗಳ ಶೀರ್ಷಿಕೆಗಳು ನನಗೆ ಬಹಳ ಇಷ್ಟ ಆದವು ಅವು ಕಥೆಗೆ ಅಷ್ಟೇ ಚೆನ್ನಾಗಿ ಹೊಂದಿಕೆಯಾಗಿವೆ .
ಬೆಳಗಿನೊಳಗಣ ಬೆಳಗು, ಮರಣವಾರಿಗೂ, ಮನ್ನಣೆಯಿಲ್ಲ,ಭವಿಯೆಂಬುದು ಹುಸಿ, ಊರೊಳಗಣ ಕಿಚ್ಚು ಕಾನನದಲ್ಲಿ ಉರಿಯಿತ್ತು,ಬೆಳಗು ಕತ್ತಲೆಯ ನುಂಗಿ, ಕೆಂಡದ ಮಳೆ ಕರೆವಲ್ಲಿ ಉದಕವಾಗಿರಬೇಕು, ಆಗದಂತೆ ಆದೆನು , ಅವ ಕಾಯಕವಾದೊಡೂ ಒಂದೇ,
ಇದಂ ಮಿತ್ತಂ,
ನೆಲದ ಮುಂದಣ ಬಾಗಿಲು,
ಸಾವಿಗಿಂತ ಮುಂಚೆ ಸಾವು, ಆದಿಯ ಕಂಡೆ, ಅನಾದಿಯ ಕಂಡೆ,
ದೇವನ ಆಟ ಬಲ್ಲವರಾರು?ಹಿಂದನರಿಯದದು ಮುಂದೇನಬಲ್ಲುದೊ?
ಬಯಲು ಆಲಯದೊಳಗೋ!
ಅಂತಕನ ದೂತರಿಗೆ ಕಿಂಚಿತ್ತೂ ದಯವಿಲ್ಲ,
ಮನದ ಆಸೆಯೇ ಮಾಯೆ ಕಾಣಾ, ತನಗೆ ತಾನೇ ಪ್ರಮಾಣ,
ವಿಚಾರವೆಂಬ ಹೂವಾಯಿತ್ತು,
ನೀ ಮಾಯೆಯೋ ನಿನ್ನೊಳು ಮಾಯೆಯೋ?
ಇಂತಹ ವಚನಗಳ ಸಾಲಿನ ಆಧಾರದ ಶೀರ್ಷಿಕೆಗಳ ಕಥೆಯಲ್ಲಿರುವ ಸಾರವನ್ನು ನೀವು ಓದಿಯೇ ಸವಿಯಬೇಕು.
ಇಂತಹ ಸದಭಿರುಚಿಯ ಪುಸ್ತಕ ಪ್ರಕಾಶನ ಮಾಡಿದ ಕಲ್ಪತರು ಪ್ರಕಾಶನ ಕ್ಕೆ ಮತ್ತು ಲೇಖಕರಾದ ಎಂ ವಿ . ಶಂಕರಾನಂದ ರವರಿಗೆ ಧನ್ಯವಾದಗಳು ಅವರ ಲೇಖನಿಯಿಂದ ಇನ್ನಷ್ಟು ಪುಸ್ತಕಗಳು ಕನ್ನಡಿಗರ ಮನೆ ಮನ ಸೇರಲಿ ಎಂದು ಹಾರೈಸುವೆ .
ಪುಸ್ತಕ: ಬೆಳಗು ಕತ್ತಲೆಯ ನುಂಗಿ
ಸೂಫಿ ಕಥೆಗಳು
ಲೇಖಕರು: ಎಂ ವಿ ಶಂಕರಾನಂದ
ಪ್ರಕಾಶನ: ಕಲ್ಪತರು ಪ್ರಕಾಶನ. ತುಮಕೂರು.8971302974
ಬೆಲೆ:150
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
9900925529
No comments:
Post a Comment