30 September 2021

ಯೇಗ್ದಾಗೆಲ್ಲಾ ಐತೆ . ವಿಮರ್ಶೆ


 



ಯೇಗ್ದಾಗೆಲ್ಲಾ ಐತೆ 

ವಿಮರ್ಶೆ

ಬೆಳಗೆರೆ ಕೃಷ್ಣಶಾಸ್ತ್ರಿಗಳು


ಮುಕುಂದೂರು ಸ್ವಾಮಿಗಳೊಂದಿಗೆ ಕಳೆದ ಸುಮಧುರ ಕ್ಷಣಗಳು , ಅವರಿಂದ  ಅರಿವು  ಪಡೆದ  ಘಳಿಗೆಗಳನ್ನು ತಮ್ಮ ನೆನಪುಗಳ ಭಂಢಾರದಿಂದ  ಬುತ್ತಿಯನ್ನು ಬಿಚ್ಚಿ ಉಣಬಡಿಸಿದ ಪುಸ್ತಕವೇ ಏಗ್ದಾಗೆಲ್ಲಾ ಐತೆ. 

ಕಾಮದೇನು ಪುಸ್ತಕ ಭವನ ಪ್ರಕಾಶನ

ಸಂಸ್ಥೆ ಪ್ರಕಟಿಸಿದ ಈ ಪುಸ್ತಕ 1995 ರಿಂದ 2015 ರ ವೇಳೆಗೆ 

ಹನ್ನೊಂದು ಬಾರಿ ಮುದ್ರಣ ಕಂಡಿರುವುದು ಆ ಪುಸ್ತಕಕ್ಕೆ ಇರುವ ಬೇಡಿಕೆ ಮತ್ತು  ಮಹತ್ವ  ಸೂಚಿಸುತ್ತದೆ.


೫೪ ಚಿಕ್ಕ ಅಧ್ಯಾಯಗಳು ಇರುವ ಪುಟ್ಟ ಪುಸ್ತಕದಲ್ಲಿ ಏನುಂಟು ಏನಿಲ್ಲ?  ಇಡೀ ಜೀವನದ ರಹಸ್ಯವಿದೆ . ಆಧ್ಯಾತ್ಮ ಇದೆ, ಜೀವನ ಪ್ರೀತಿ ಇದೆ, ತಿಳುವಳಿಕೆ ಇದೆ, ಸಂದೇಶವಿದೆ ಒಟ್ಟಾರೆ ಸರ್ವರೂ ಈ ಪುಸ್ತಕ ಓದಿದರೆ ಸಾಲದು ,ಆಗಾಗ್ಗೆ ಅದರ ತಿರುಳನ್ನು ಚಿಂತನ ಮಂಥನ ಮಾಡಿಕೊಳ್ಳಬೇಕು.


ಮಧ್ಯ ಕರ್ನಾಟಕದ ಹಳ್ಳಿಯ ಭಾಷೆಯಲ್ಲಿ ಮಾತನಾಡುವ ಸ್ವಾಮೀಜಿ ಸರಳ ಪದಗಳಲ್ಲಿ  ಮಾತನಾಡುತ್ತಾ, ನಗುತ್ತಾ ನಗಿಸುತ್ತಾ, ಜೀವನ ದರ್ಶನ ಮಾಡಿಸಿಬಿಡುವರು.


ಒಮ್ಮೆ ಕೃಷ್ಣ ಶಾಸ್ತ್ರಿಗಳಿಗೆ ತೀವ್ರವಾದ ಅನಾರೋಗ್ಯ ಕಾಡಿದಾಗ ತಮ್ಮ ಶಿಷ್ಯ ನ ಕಾಣಲು ಬಂದು ಹೀಗೆ ಧೈರ್ಯ ಹೇಳುತ್ತಾರೆ

"ಆರೈಕೆ ಮಾಡೋರ ಮೈಯಾಗೆ ಆರು ತಿಂಗಳು ಇರ್ತೀನಿ ಅನ್ನುತ್ತೆ ಕಾಯಿಲೆ. ಏನೂ ಮಾಡಬೇಡ.ಅವನ್ಯಾರ್ ಕರೆದಿದ್ದು? ಮುತುವರ್ಜಿ ಮಾಡಿದಷ್ಟು ಮೇಲೇರುತ್ತಾನೆ .ತಿರುಗಿ ನೋಡದಂತೆ ಸುಮ್ನಿದ್ರೆ ,ಇವರ್ಯಾಕೋ ಮರ್ಯಾದೆ ಕೊಡೊಲ್ಲ ಅಂತ ಜಾಗ ಬಿಡ್ತಾನೆ ಅಷ್ಟೇ" ಎಂದು ಧೈರ್ಯ ಹೇಳಿದರು ಪವಾಡ ಸದೃಶವಾಗಿ ಕಾಯಿಲೆ ವಾಸಿಯಾಯಿತು.

ಈ ಪ್ರಕರಣ ಗಮನವಿಟ್ಟು ನೋಡಿದರೆ ಇಂದಿಗೂ ಪ್ರಸ್ತುತ. ಇತ್ತೀಚಿನ ದಿನಗಳಲ್ಲಿ ನಮ್ಮ ಬಾಧಿಸುವ ವಿವಿಧ ರೋಗಗಳಿಗೆ ಹೆದರಿ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ರೋಗಕ್ಕಿಂತ ಅವರಲ್ಲಿ ಇರುವ ಅವ್ಯಕ್ತ ಭಯ ಕೆಲವೊಮ್ಮೆ ರೋಗಿಗಳನ್ನು ಸಾವಿನ ಮನೆಗೆ ಕೊಂಡೊಯ್ಯುತ್ತದೆ.


ಕಾಡಿನ ಹೂಗಳೊಂದಿಗೆ ಸ್ವಾಮೀಜಿ ಮಾತನಾಡುವ ಬಗೆ ಸುಂದರ ಇದು ನಾವು ಪ್ರಕೃತಿಯ ಜೊತೆಗೆ ಹೊಂದಿಕೊಂಡು ಹೋಗಬೇಕು ಎಂಬ ಸಂದೇಶವನ್ನು ನೀಡುತ್ತದೆ.

"ಮನುಸ್ಯ ತಾನೇ ತಿರನಾಗಿ ಬಾಳೋನು ಅಂಬಂಗೆ ಕಣ್ಣಿಗೆ ಕಂಡದ್ದನ್ನೆಲ್ಲಾ ತನ್ನ ಸುಖಕ್ಕೇಂತ ಹಾಳು ಮಾಡೋದನ್ನು ಕಲಿತು ತಾನೂ ಹಾಳಾಗ್ತಾನೆ " ಎಂಬ ಸ್ವಾಮೀಜಿಯವರ ಮಾತಿನಲ್ಲಿ ಪರಿಸರದ ಬಗ್ಗೆ ಕಾಳಜಿ ಇದೆ ಇತರ ಜೀವಗಳ ಬಗ್ಗೆ ಸಹಾನುಭೂತಿ ಇದೆ ಸುಸ್ಥಿರ ಅಭಿವೃದ್ಧಿಯ ಬಗ್ಗೆ ಬರೀ ಯೋಜನೆ ಮಾಡಿ ಭಾಷಣ ಬಿಗಿವ ನಾಯಕರು ಸ್ವಾಮೀಜಿ ರವರ ಈ ಸಂದೇಶಗಳನ್ನು ಅಳವಡಿಸಿಕೊಂಡು ಬಾಳಬೇಕಿದೆ.


ಇಂದಿನ ನಮ್ಮ ಬಹುತೇಕ ರೋಗಿಗಳಿಗೆ ನಮ್ಮ ಅಹಾರ ಪದ್ದತಿ, ಜೀವನ ಶೈಲಿ ಕಾರಣ ಎಂದು ಬಿಡಿಸಿ ಹೇಳಬೇಕಿಲ್ಲ  .ಇದರ ಹಿನ್ನೆಲೆಯಲ್ಲಿ ಸ್ವಾಮೀಜಿ ರವರ ಮಾತುಗಳು ಹೀಗಿವೆ

"ಮುದ್ದೆ ಅಂತ ಊಟ ಇಲ್ಲ ಸಿದ್ದಪ್ಪನಂತ ದೇವ್ರಿಲ್ಲ ಅಂತಾರೆ.ಆದ್ರೆ ಒಂದ್ಮಾತು ಈ ಮುದ್ದೆಗೆ ತಕ್ಕಷ್ಟು ಕಷ್ಟ ಮಾಡಿದ್ದೀನಿ ಅಂತ ನಿಮಗೆ ನೀವೇ ಹೇಳ್ಕಂಡು ಮುದ್ದೆ ಮುರೀರಪ್ಪಾ ಅದರಾಗೈತೆ ಮುಕುಂದೂರಿನ ಸೊಗಸು"

ಹಳ್ಳಿಯ ಜನರ ಆಧ್ಯಾತ್ಮಿಕ ಜೀವನದ ಕಡೆಗೆ ಗಮನ ನೀಡಿದ್ದ ಸ್ವಾಮೀಜಿ ರವರು

ಭಜನೆಯ ಮೂಲಕ ಸತ್ಸಂಗಗಳ ಮೂಲಕ   ಕುಂಡಲಿನಿ ಯೋಗದ ಬಗ್ಗೆ 

ವಿವಿಧ ಚಕ್ರ ಗಳ ಬಗ್ಗೆ ಆಂಗಿಕ ಅಭಿನಯ ಮಾಡಿ ಜನರಿಗೆ ಪ್ರವಚನ ನೀಡುತ್ತಿದ್ದ ಬಗ್ಗೆ ಕೃಷ್ಣ ಶಾಸ್ತ್ರಿಗಳು ತಮ್ಮ ಪುಸ್ತಕದಲ್ಲಿ ಚೆನ್ನಾಗಿ ವಿವರಗಳನ್ನು ನೀಡಿದ್ದಾರೆ.


ಅರಿಷಡ್ ವರ್ಗಗಳು ನಮ್ಮ ನಿಜವಾದ ಶತ್ರುಗಳು ಅವು ಒಂದಕ್ಕೊಂದು ಪೂರಕವಾಗಿ ನಮ್ಮ ನಾಶಮಾಡಲು ಹೊಂಚು ಹಾಕುತ್ತವೆ ಎಂಬುದನ್ನು ಸ್ವಾಮೀಜಿ ರವರು ಹೀಗೆ ಹೇಳಿದರು.

"ಅರಿಷಡ್ ವರ್ಗ ದಲ್ಲಿ ಕಾಮ ಎಂಬ ಒಂದನ್ನು ಹತ್ತಿರ ಕರೆದರೆ ಉಳಿದ ಐದು ಒಳಹೊಕ್ಕು ನಮ್ಮನ್ನು ನಾಶ ಮಾಡಿ ಬಿಡುತ್ತವೆ " 


ಅಹಂ ನಿಂದ ಏನೆಲ್ಲಾ ಅನಾಹುತಗಳಾಗಿವೆ ಎಂದು ನಾವು ನೋಡಿದ್ದೇವೆ ಅದನ್ನೇ ಸ್ವಾಮೀಜಿಯವರು ತಮ್ಮ ಭಾಷೆಯಲ್ಲಿ

"ಗರಾ ಬುಟ್ರೇನೆ ಗುರು ನೋಡಪ್ಪ

ಸಾವ್ಕಾರಂತಾವ ದುಡ್ಡಿರೋದು ಸಂನ್ಯಾಸಿತಾವ ಸಿದ್ದಿ ಇರೋದು ಎಳ್ಡು ಒಂದೇ ಕಣೋ ಮಗ ಅವ್ನಿಗೂ ಹಾಂಕಾರ ಬಿಟ್ಟಿಲ್ಲ ,ಇವ್ನಿಗೂ ಹಾಂಕಾರ ಬಿಟ್ಟಿಲ್ಲ" .ಎಂದು ಅರ್ಥ ನೀಡಿರುವರು.

"ಸಮಾಧಿ ಏನಿದ್ದರೂ ಬದುಕಿದ್ದಾಗಲೂ ಆಗೋದನ್ನು ಕಲೀಬೇಕು "ಎಂದು ಹೇಳುವ ಮೂಲಕ ಜೀವನವೇ ಯೋಗವಾಗಬೇಕು ,ನಾವು ಬದುಕಿರುವಾಗ ಸಮಾಧಿ ಸ್ಥಿತಿ ತಲುಪಬೇಕು ಎಂದು ಸೂಚ್ಯವಾಗಿ ಹೇಳಿರುವರು.

ಸ್ವಾಮೀಜಿರವರು ರಾಮಾಯಣ, ಮಹಾಭಾರತ, ಭಗವದ್ಗೀತೆ ಗಳ  ವಿವರಣೆಯನ್ನು ಬಹಳ ಸರಳವಾಗಿ ಎಲ್ಲರಿಗೂ ತಿಳಿಯುವ ಭಾಷೆಯಲ್ಲಿ ಅರ್ಥ ಮಾಡಿಸುತ್ತಿದ್ದರು.


ಮುಕುಂದೂರು ಸ್ವಾಮೀಜಿ ರವರ ಕುರಿತು ಕೃಷ್ಣ ಶಾಸ್ತ್ರಿಗಳು ಹೇಳುವಂತೆ

"ಅವರ ಒಂದೊಂದು ಮಾತಿಗೂ ವಿಶೇಷವಾದ ಅರ್ಥವುಂಟು ,ಹರವುಉಂಟು,ಆಳ ಎತ್ತರಗಳುಂಟು .ಅದೆಲ್ಲಾ ತಿಳಿಯುವವರ ಸಾಮರ್ಥ್ಯವನ್ನು ಅನುಸರಿಸಿ ಬಿಚ್ಚಿಕೊಳ್ಳುತ್ತವೆ " 

ಹೌದು ಈ ಮಾತು ಶತ ಪ್ರತಿಶತ ಸತ್ಯ ಈ ಅನುಭವ ನಿಮಗೆ ಆಗಬೇಕಾದರೆ ನೀವೂ ಒಮ್ಮೆ, ಅಲ್ಲ ಹಲವು ಬಾರಿ ಈ ಪುಸ್ತಕ ಓದಲೇಬೇಕು.


ಕೃತಿ: ಏಗ್ದಾಗೆಲ್ಲಾ ಐತೆ.

ಲೇಖಕರು: ಬೆಳಗೆರೆ ಕೃಷ್ಣಶಾಸ್ತ್ರಿಗಳು

ಪ್ರಕಾಶನ;ಕಾಮದೇನು ಪುಸ್ತಕ ಭವನ ಪ್ರಕಾಶನ

ಬೆಲೆ: ೬೦


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.


No comments: