ಹೊಳಲ್ಕೆರೆ ನರಭಕ್ಷಕ ಮತ್ತು ಇತರ ಕಥೆಗಳು
ವಿಮರ್ಶೆ
ಕನ್ನಡದ ಓದುಗರಿಗೆ ಕೆನೆತ್ ಅಂಡರ್ಸನ್ ನ ಅತ್ಯುತ್ತಮ ಕಥೆಗಳಲ್ಲಿ ಕೆಲವನ್ನು ಲೇಖಕಿಯಾದ ಸಾಕ್ಷಿ ರವರು ಕನ್ನಡಕ್ಕೆ ತಂದಿರುವರು.
ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ `ಕಾಡಿನ ಕಥೆಗಳು' ಸರಣಿಯನ್ನು ಓದಿದವರಿಗೆ ಈ ಪುಸ್ತಕ ಖಂಡಿತವಾಗಿ ಇಷ್ಟ ಆಗುವುದು. ಆಂಡರ್ಸನ್ ನಮ್ಮ ಕಾಲದ ಅದ್ಭುತ ಕಥೆಗಾರ ಮತ್ತು ಪರಿಸರ ಬರಹಗಾರ. ಅವನ ಬೇಟೆಯ ಕಥೆಗಳು ನಮ್ಮ ಪರಿಸರವನ್ನು ಸಮಗ್ರವಾಗಿ ಅರ್ಥೈಸಿಕೊಳ್ಳಲು ಅನುವುಮಾಡಿಕೊಡುತ್ತವೆ, ಚುರುಕಿನ ಬೇಟೆಗಾರ ಮತ್ತು ಬರಹಗಾರನಾಗಿದ್ದ ಆಂಡರ್ಸನ್ ಪರಿಚಯ ಇಲ್ಲದವರಿಗೆ, ದಕ್ಷಿಣ ಭಾರತದ ಕಾಡುಗಳಲ್ಲಿನ ಅವನ ಬದುಕು ಮತ್ತು ಸಾಹಸಗಳನ್ನು ಅರಿಯಲು ಇದೊಂದು ಒಳ್ಳೆಯ ಅವಕಾಶ, ಸದಾ ಹಾಸ್ಯ ಮತ್ತು ಜೀವಂತಿಕೆ ತುಂಬಿರುವ ಇವನ ಬರವಣಿಗೆ ನಮ್ಮನ್ನು ಪ್ರಕೃತಿಯಲ್ಲಿ ಇನ್ನಷ್ಟು ಮುಳುಗೇಳಲು ಈ ಪುಸ್ತಕ ನಮ್ಮನ್ನು ಹುರಿದುಂಬಿಸುತ್ತದೆ.
ಕೆನೆತ್ ಅಂಡರ್ಸನ್ ಒಬ್ಬ ಮಾನವೀಯ ಅಂತಃಕರಣ ಉಳ್ಳ ಬೇಟೆಗಾರ . ಅವನು ಭಾರತದಲ್ಲಿ ಅದರಲ್ಲೂ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಕೆಲ ಅರೆಮಾಲೆನಾಡಿನ ಕಾಡುಗಳಲ್ಲಿ ಜನರಿಗೆ ತೊಂದರೆ ಕೊಡುವ ನರಭಕ್ಷಕ ಚಿರತೆ ಮತ್ತು ಹುಲಿಗಳ ಬೇಟೆಯ ಬಗ್ಗೆ ಈ ಪುಸ್ತಕದಲ್ಲಿ ಬಹಳ ಸೊಗಸಾಗಿ ಚಿತ್ರಿಸಿರುವರು.
ಮೊದಲ ಕಥೆಯಾದ"ನರಭಕ್ಷಕನ ಕಥೆ"ಇದರಲ್ಲಿ ಕೆನೆತ್ ರವರು ಗುಂಜೂರು ,ಜೋಳದಾಳು ಸುತ್ತ ಮುತ್ತಲಿನ ಪರಿಸರದ ಬಗ್ಗೆ ವಿವರಣೆ ನೀಡುತ್ತಾ ಪರಿವೀಕ್ಷಣಾ ಬಂಗಲೆಯ ಮೇಟಿಯಾದ
ಅನಂತ ಸ್ವಾಮಿ ರವರ ಮಗಳು ನೀರು ತರಲು ಹೋದಾಗ ಹುಲಿ ಅವಳನ್ನು ಕೊಂದ ದಾರುಣ ಘಟನೆಯಿಂದ ಅನಂತಸ್ವಾಮಿಯು ಬಹಳ ಬೇಸರ ದಲ್ಲಿ ಇರುವನು . ಮಗಳ ಸಾವಿಗೆ ನ್ಯಾಯ ಒದಗಿಸಲು ಹುಲಿ ಸಾಯಲೇ ಬೇಕು ಎಂಬ ಹಠದಿಂದ ಅಂಡರ್ಸನ್ ಗೆ ಮನವಿ ಮಾಡಿದ .
ಬಹಳ ತಯಾರಿಯಿಂದ ಮತ್ತು ಮುನ್ನೆಚ್ಚರಿಕೆಯಿಂದ ಪ್ಲಾನ್ ಮಾಡಿ ಆ ನರಭಕ್ಷಕ ಹುಲಿ ಬೇಟೆಯಾಡುವ ಪ್ರಯತ್ನ ಮೊದಲ ಬಾರಿ ಮಿಸ್ ಆಗಿದ್ದನ್ನು ನೀವು ಪುಸ್ತಕ ಓದಿಯೇ ಎಂಜಾಯ್ ಮಾಡಬೇಕು .
ಕತ್ತಲಲ್ಲಿ ಟಾರ್ಚ್ ಬಿಡುವ ರೀತಿ ,ಬಟ್ಟೆ ಆಕೃತಿ ಮಾಡಿ ಮಾನವರ ರೀತಿ ನೀರ ಬಳಿ ನಿಲ್ಲಿಸಿ ಬೇಟೆಗೆ ಸಿದ್ದರಾದ ರೀತಿ ನಮಗೆ ಹೊಸತು ಎನಿಸದಿರದು.ನರಿಯ ,ಮತ್ತು ಇತರೆ ಪ್ರಾಣಿಗಳ ಕೂಗು. "
ಬ ಊ...ಅ"
"ವೀವ್ ವೀವ್ ...ಕೊಕ್ ಕೊಕ್ಕಾ" ಮುಂತಾದ ವಿವರಣೆಯನ್ನು ಓದುವಾಗ ,ಯಾವುದೋ ಪ್ರಾಣಿಗಳ ಟಿ .ವಿ ಚಾನೆಲ್ ನೋಡುವಂತೆ ಭಾಸವಾಗುತ್ತದೆ.
ಮೂರನೆಯ ಕಥೆಯಲ್ಲಿ ತಲೈನೊವ್ವಿನ ನರದ್ವೇಷಿ. ಬಗ್ಗೆ ಚಿತ್ರಣ ಇದೆ .
ಚಿರತೆಯೊಂದು ತನ್ನ ಪಾಡಿಗೆ ಕಾಡಲ್ಲಿ ತನ್ನ ಮರಿಗಳೊಂದಿಗೆ ಇತ್ತು ತನ್ನ
ನಾಲ್ಕು ಮರಿಗಳನ್ನು ಸಾಯಿಸಿದ ಮಾನವರ ಹುಡುಕಿ ಹುಡುಕಿ ಕೊಲ್ಲಲು ಆರಂಭ ಮಾಡಿದಾಗ ಬೆದರಿದ ಊರ ಜನ ಆಂಡರ್ಸನ್ ಮೊರೆ ಹೋದಾಗ ಆ ಚಿರತೆ ಅಂತ್ಯ ಹೇಗಾಯಿತು ಎಂಬುದನ್ನು ಮಾನವ ಪ್ರಾಣಿಗಳ ಸಂಘರ್ಷ ದ ಹಿನ್ನೆಲೆಯಲ್ಲಿ ಬಹಳ ಸುಂದರವಾಗಿ ಬರೆದಿದ್ದಾರೆ ಆಂಡರ್ಸನ್ .ಅಷ್ಟೇ ಉತ್ತಮವಾಗಿ ಕನ್ನಡಕ್ಕೆ ತಂದಿದ್ದಾರೆ ಲೇಖಕಿ ಸಾಕ್ಷಿ ರವರು.
ಆಂಡರ್ಸನ್ ಕೇವಲ ಕೋವಿ ಹಿಡಿದು ಪ್ರಾಣಿಗಳ ಬೇಟೆಯಾಡುವ ಕಟುಕನಾಗದೇ ಸೂಕ್ಷ್ಮ ಮನಸಿನ ಸಂಶೋದಕರು ಎಂಬುದನ್ನು ಇದೇ ಪುಸ್ತಕದಲ್ಲಿ ಬರುವ ಕೆಳಗಿನ ವಾಕ್ಯಗಳಲ್ಲಿ ಕಾಣಬಹುದು .
"ನರಭಕ್ಷಕ ಹುಲಿ ಅಥವಾ ಚಿರತೆ ಬರೀ ಮನುಷ್ಯ ಮಾಂಸವನ್ನು ನಂಬಿ ಕುಂತಿರುತ್ತದೆ ಎನ್ನುವುದು ಸುಳ್ಳಾದೀತು. ಹಾಗೇನಾದರೂ ಆದಲ್ಲಿ ಹುಲಿ ವಾರಕ್ಕೆರಡು ಬಾರಿ ಬೇಟೆಯಾಡಲೇಬೇಕಾಗಿರುವುದರಿಂದ, ಸಾಯುವ ಜನರ ಸಂಖ್ಯೆ ವಿಪರೀತವಾಗಿ ಹೆಚ್ಚುತ್ತದೆ.ಇದರಿಂದ ಜಾಗರೂಕವಾಗುವ ಜನರು ಹುಲಿಯ ಬಾಯಿಗೆ ಸಿಗದಂತೆ ಎಚ್ಚರವಹಿಸಿ, ನಂತರ ಹುಲಿಯೇ ಹೊಟ್ಟೆಗಿಲ್ಲದೆ ಸಾಯಬೇಕಾಗುತ್ತದೆ. ದೊಡ್ಡ ಪ್ರಾಣಿಗಳನ್ನು ಹಿಡಿಯಲು ಅಶಕ್ತವಾದ ಹುಲಿಗಳು ಮಾತ್ರ ನರಭಕ್ಷಕನಾಗುವುದು, ಯಾಕೆಂದರೆ ಮನುಷ್ಯನನ್ನು ಅಸಹಾಯಕ ಪ್ರಾಣಿ ಇನ್ನೊಂದಿಲ್ಲ! ಒಮ್ಮೆ ಹುಲಿಗೆ ರುಚಿ ಹತ್ತಿದಮೇಲೆ ಬೇರೆ ಪ್ರಾಣಿಯನ್ನು ಕಷ್ಟಪಟ್ಟು ಬೇಟೆಯಾಡಲ್ಲವಷ್ಟೆ! ಮಾನವ ಪ್ರಾಣಿಯೇನಾದರೂ ಸಿಗದೇ ಹೋದರೆ, ಅದು ತನ್ನ ಸಹಜ ಆಹಾರಗಳ ಕಡೆ ತಿರುಗುತ್ತದೆ, ಅವಕಾಶ ಸಿಕ್ಕಿದಾಗ ಮಾತ್ರ ನರಬೇಟೆಯಲ್ಲಿ ತೊಡಗುತ್ತದೆ. ಆದರೆ ಒಂದು ನರಭಕ್ಷಕ ಎಷ್ಟೇ ಪ್ರಾಣಿಗಳನ್ನು ಮನುಷ್ಯರನ್ನು ಹಿಡಿದು ತಿಂದರೂ, ಮನುಷ್ಯರ ಬಗೆಗಿನ ಮೂಲಭೂತವಾದ ಭಯ ಅದನ್ನು ಬಿಟ್ಟುಹೋಗುವುದೇ ಇಲ್ಲ. ಎಂಥ ಭೀಕರವಾದ ನರಭಕ್ಷಕನೇ ಆಗಲಿ, ಮಾನವರು ತಿರುಗಿಬಿದ್ದಾಗ ಬಾಲ ಮುದುರಿ ಓಡಿಹೋಗಿರುವ ಘಟನೆಗಳೇ ಹೆಚ್ಚು. ಆದರೆಂದೂ ಆನೆಯನ್ನು ಹೊರತುಪಡಿಸಿ ದನಗಳಾಗಲಿ ಬೇರೆ ಸಾಕು ಪ್ರಾಣಿಗಳಾಗಲಿ ಇವ್ಯಾವುದಕ್ಕೂ ನರಭಕ್ಷಕಗಳು ಹೆದರುವುದೇ ಇಲ್ಲ"
ಕೆನೆತ್ ಆಂಡರ್ಸನ್ ಕಥೆಗಳು ನಮಗೆ ಕಾಡಿನ ಚಿತ್ರಣ, ಮತ್ತು ಪ್ರಾಣಿ ಮಾನವ ಸಂಘರ್ಷದ ಹಿನ್ನೆಲೆಯಲ್ಲಿ ನಮ್ಮನ್ನು ಚಿಂತನೆಗೆ ಹಚ್ಚುತ್ತದೆ . ಎಲ್ಲಾ ಹನ್ನೊಂದು ಕಥೆಗಳು ಬಹಳ ಸುಂದರವಾಗಿವೆ . ಇಂತಹ ಕಥೆಗಳನ್ನು ಕನ್ನಡಕ್ಕೆ ತಂದ ಸಾಕ್ಷಿ ರವರಿಗೆ ಅಭಿನಂದನೆಗಳು ಮತ್ತು ಧನ್ಯವಾದಗಳು ಅವರಿಂದ ಇನ್ನೂ ಉತ್ತಮವಾದ ಕೃತಿಗಳು ಹೊರಹೊಮ್ಮಲಿ .
ಪುಸ್ತಕದ ಹೆಸರು: ಕೆನೆತ್ ಆಂಡರ್ಸನ್ ಕಥೆಗಳು
ಅನುವಾದ: ಸಾಕ್ಷಿ.
ಪ್ರಕಾಶನ: ಆಕೃತಿ ಪುಸ್ತಕ ಬೆಂಗಳೂರು.
ಬೆಲೆ : ೨೭೫.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
No comments:
Post a Comment