ಮಾತು...
ವೈರಿಗಳ ಮುಂದೆ
ನಮ್ಮ ಮಾತಿಗಿರಲಿ ಗತ್ತು|
ಆತ್ಮೀಯರ ಮಂದೆ
ನಮ್ಮ ಸೊಲ್ಲಾಗಲಿ ಮುತ್ತು
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಕಸ್ತೂರಿ ಕಂಕಣ..
ಶಾ ಮಂ ಕೃಷ್ಣ ರಾಯರವರ ಸಂಪಾದಕತ್ವದ ತ ರಾ ಸು ಸಾಹಿತ್ಯ ಸಂಪದ ಸಂಪುಟ ಒಂದರ ಐತಿಹಾಸಿಕ ಕಾದಂಬರಿಗಳ ಸೆಟ್ ನಲ್ಲಿ ಮೂರು ಕಾದಂಬರಿಗಳು ಇವೆ. ಅದರಲ್ಲಿ "ಕಸ್ತೂರಿ ಕಂಕಣ" ಕಾದಂಬರಿಯನ್ನು ಈ ವಾರ ಬಿಡುವಿನ ವೇಳೆಯಲ್ಲಿ ಓದಿದೆ.
ಚಿತ್ರದುರ್ಗದ ಮೇಲೆ ಸೇಡು ತೀರಿಸಿಕೊಳ್ಳಲು ಸೀರ್ಯದವರು ಮತ್ತು ತರೀಕೆರೆಯವರು ಜೊತೆ ಸೇರಿ ಕುಟಿಲ ತಂತ್ರ ರೂಪಿಸಿ ಸೀರ್ಯದ ರಂಗಪ್ಪ ನಾಯಕನ ಮಗ ಕೃಷ್ಣಪ್ಪನಾಯಕನ ಜೊತೆ ಕಸ್ತೂರಿ ರಂಗಪ್ಪನ ಮಗಳ ಜೊತೆಯಲ್ಲಿ ಜಾತಕ ಕೂಡಿ ಬರದಿದ್ದರೂ ಮದುವೆ ಮಾಡಿಸುತ್ತಾರೆ. ಇದರಲ್ಲಿ ತರೀಕೆರೆಯ ವಕೀಲ ವೆಂಕಪ್ಪಯ್ಯ ಸಹಜಾನಂದ ಸ್ವಾಮಿಯ ವೇಷ ಧರಿಸಿ ದುರ್ಗದ ನಕ್ಷೆ ಸಮೇತವಾಗಿ ರಹಸ್ಯ ಮಾಹಿತಿಗಳನ್ನು ಸೀರ್ಯ ಮತ್ತು ತರೀಕೆರೆಗೆ ರವಾನಿಸಿ ದುರ್ಗದ ಮೇಲೆ ಆಕ್ರಮಣ ಮಾಡಲು ಸಂಚು ರೂಪಿಸುತ್ತಾನೆ.
ಈ ಮದುವೆಯ ಮಾತುಕತೆ ಶುರುವಾದಾಗಿನಿಂದ ದುರ್ಗದ ಹಿತೈಷಿಯಾದ ಹಿರಿಯೂರಿನ ಕೆಂಚಣ್ಣ ನಾಯಕನಿಗೆ ಸೀರ್ಯದವರ ಮೇಲೆ ಅನುಮಾನವಿರುತ್ತದೆ ಈ ಕಾರಣದಿಂದ ಅವರ ಬೇಹುಗಾರರನ್ನು ಸೀರ್ಯದಲ್ಲಿ ಬಿಟ್ಟಿರುತ್ತಾನೆ.
ಇತ್ತ ಸೀರ್ಯದವರು ದುರ್ಗದ ಸೇನೆಯ ಗಮನ ಸೆಳೆಯಲು ಯಾವುದೇ ಸುಳಿವು ಕೊಡದೆ ಹಿರಿಯೂರಿನ ಮೇಲೆ ದಾಳಿ ಮಾಡುತ್ತಾರೆ.ಈ ಸಂದರ್ಭದಲ್ಲಿ ದುರ್ಗದವರು ತಮ್ಮ ಸೈನ್ಯವನ್ನು ತೆಗೆದುಕೊಂಡು ಇತ್ತ ಬಂದಾಗ ಇನ್ನೊಂದು ಕಡೆಯಿಂದ ತರೀಕೆರೆಯವರಿಂದ ದುರ್ಗದ ಮೇಲೆ ದಾಳಿ ನಡೆಸುವ ಯೋಜನೆ ಸಿದ್ದವಾಗಿರುತ್ತದೆ.ಇದರ ಜೊತೆಗೆ ದುರ್ಗದಲ್ಲಿರುವ ತಮ್ಮ ಕಡೆಯವರಿಂದ ಆದಷ್ಟು ದುರ್ಗವನ್ನು ನಾಶ ಮಾಡಲು ಹುನ್ನಾರ ಮಾಡಿರುತ್ತಾರೆ.ಇದರಲ್ಲಿ ನೀರಿನ ಮೂಲಗಳಿಗೆ ವಿಷ ಬೆರೆಸುವುದು, ಪ್ರಸಾದ ರೂಪದಲ್ಲಿ ವಿಷಪ್ರಾಶನ ಮತ್ತು ಕಗ್ಗೊಲೆ ಮಾಡುವ ಮೂಲಕ ದುರ್ಗದಲ್ಲಿ ಸ್ಮಶಾನದ ವಾತಾವರಣ ನಿರ್ಮಿಸುವುದು ವಿರೋಧಿಗಳ ಸಂಚಾಗಿರುತ್ತದೆ.ಕೆಂಚಪ್ಪನಾಯಕ, ದುರ್ಗದ ಯುವರಾಜ ಸರ್ಜಾನಾಯಕ ,ಸುಬ್ಬರಾಯ ಶಾಸ್ತ್ರಿ ಮುಂತಾದ ನಿಷ್ಠಾವಂತ ಪ್ರಜೆಗಳ ಸಾಂಘಿಕ ಪ್ರಯತ್ನದಿಂದ ದುರ್ಗಕ್ಕೆ ಒದಗಿದ ಗಂಡಾಂತರ ನೀಗುತ್ತದೆ. ತಮ್ಮನ್ನು ನಂಬಿದ ಸಾಮಂತರನ್ನು ಕಸ್ತೂರಿ ರಂಗಪ್ಪ ನಾಯಕ ಅಭಯ ನೀಡಿ ಕಾಯುತ್ತಾನೆ. ಅದು ಹೇಗೆ ಎಂಬುದನ್ನು ನೀವು ಕಾದಂಬರಿ ಓದಿಯೇ ಅನುಭವಿಸಬೇಕು.
ಈ ಕಾದಂಬರಿಯ ಸಂಭಾಷಣೆಗಳು ನನಗೆ ಬಹಳ ಹಿಡಿಸಿದವು.ಅದರಲ್ಲೂ ಪ್ರತಿ ಪೇಜ್ ಗೆ ಒಂದಾದರೂ ಸಮಯೋಚಿತವಾದ ಗಾದೆಗಳನ್ನು ಬಳಕೆ ಮಾಡಿರುವುದು ನನ್ನ ಗಮನ ಸೆಳೆದ ಮತ್ತೊಂದು ಅಂಶ.ಪ್ರಸ್ತುತ ಚಿತ್ರದುರ್ಗ ಜಿಲ್ಲೆಯಲ್ಲಿ ವಾಸವಾಗಿರುವವರು ಮತ್ತು ಚಿತ್ರದುರ್ಗದ ಕೋಟೆ ಮತ್ತು ಜಿಲ್ಲೆಯ ವಿವಿಧ ತಾಲ್ಲೂಕುಗಳ ಬಗ್ಗೆ ಮಾಹಿತಿ ಇರುವವರಿಗೆ ಈ ಕಾದಂಬರಿ ಓದುವಾಗ ಆ ಸ್ಥಳಗಳಲ್ಲಿ ನಮ್ಮ ಕಣ್ಮುಂದೆಯೇ ಘಟನೆಗಳು ನಡೆಯುತ್ತಿವೆಯೇನೋ ಎಂಬಂತೆ ಚಿತ್ರಿಸಿದ್ದಾರೆ ತ ರಾ ಸು ರವರು.
ಇದೇ ಸಂಪುಟದಲ್ಲಿರುವ ಮತ್ತೆರಡು ಕಾದಂಬರಿಗಳಾದ ಕಂಬನಿಯ ಕುಯಿಲು ಮತ್ತು ರಾಜ್ಯ ದಾಹ ಓದಿ ಮತ್ತೆ ನಿಮ್ಮೊಂದಿಗೆ ಹಂಚಿಕೊಳ್ಳುವೆ.
ರಿಯಾಯಿತಿ ದರದಲ್ಲಿ ಪುಸ್ತಕ ನೀಡಿದ ಆತ್ಮೀಯರಾದ ಎಂ ವಿ ಶಂಕರಾನಂದ ರವರನ್ನು ಸಂದರ್ಭದಲ್ಲಿ ಸ್ಮರಿಸುತ್ತೇನೆ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
"ಜೈ ಭವಾನಿ","ಹರ ಹರ ಮಹಾದೇವ" "ಜಗದಂಬಾ" ಈ ಘೋಷಣೆಗಳು ಚಿತ್ರ ಮಂದಿರದಿಂದ ಹೊರಬಂದಾಗಲೂ ನನ್ನ ಕಿವಿಯಲ್ಲಿ ಮಾರ್ಧನಿಸುತ್ತಿದ್ದವು.
ಪ್ರೇಮಿಗಳ ದಿನ ದೇಶಪ್ರೇಮಿಗಳಿಗಾಗಿ ಮಾಡಿದ ಛಾವ ಚಲನಚಿತ್ರ ನೋಡಿದೆ.
ಬಹಳ ದಿನಗಳ ನಂತರ ಒಂದು ಉತ್ತಮ ಐತಿಹಾಸಿಕ ಚಿತ್ರ ನೋಡಿದ ಸಮಾಧಾನವಾಯ್ತು.ಇದು ಹಿಂದಿ ಭಾಷೆಯ ಐತಿಹಾಸಿಕ ಆಕ್ಷನ್ ಚಿತ್ರವಾಗಿದ್ದು ಮರಾಠಾ ಸಾಮ್ರಾಜ್ಯದ ಶಿವಾಜಿಯ ಮಗ ಸಂಭಾಜಿಯ ಜೀವನವನ್ನು ಆಧರಿಸಿದೆ. ವಿಕ್ಕಿ ಕೌಶಲ್ ಈ ಚಿತ್ರದಲ್ಲಿ ಛತ್ರಪತಿ ಸಂಭಾಜಿ ಪಾತ್ರದಲ್ಲಿ ನಟಿಸಿಲ್ಲ ಬದಲಿಗೆ ಜೀವಿಸಿದ್ದಾರೆ. ಶಿವಾಜಿ ಸಾವಂತ್ ಅವರ ಮರಾಠಿ ಕಾದಂಬರಿ ಆಧಾರಿತ ಈ ಚಿತ್ರವನ್ನು ಲಕ್ಷ್ಮಣ್ ಉಟೇಕರ್ ಬಹಳ ಅಚ್ಚುಕಟ್ಟಾಗಿ ನಿರ್ದೇಶನ ಮಾಡಿದ್ದಾರೆ.
ಶಿವಾಜಿಯ ಮರಣದ ನಂತರ ಮೊಘಲ್ ಚಕ್ರವರ್ತಿ ಔರಂಗಜೇಬನ ಆಸ್ಥಾನದಲ್ಲಿ ಸಂತೋಷದ ಪಾರ್ಟಿ ಮಾಡುವ ಚರ್ಚೆಯಿಂದ ಆರಂಭವಾಗುವ ಸಿನಿಮಾ ಕುತಂತ್ರದಿಂದ ಸಂಭಾಜಿಯ ಸೆರೆಹಿಡಿದು ಹಿಂಸೆ ನೀಡುವ ದೃಶ್ಯಗಳಿಂದ ಚಿತ್ರ ಮುಕ್ತಾಯವಾಗುತ್ತದೆ.ಚಿತ್ರದ ಮಧ್ಯ ಮಧ್ಯ ಮರಿ ಸಿಂಹದ ಘರ್ಜನೆ, ತಂತ್ರಗಳು ಮತ್ತು ಬುದ್ಧಿವಂತಿಕೆಯಿಂದ ಜನರು ಥಿಯೇಟರ್ ನಲ್ಲಿ ಶಿಳ್ಳೆ ಚಪ್ಪಾಳೆ ಹೊಡೆಯುತ್ತಾರೆ. ಕೊನೆಯ ಇಪ್ಪತ್ತು ನಿಮಿಷಗಳು ಪ್ರೇಕ್ಷಕರ ಕಣ್ಣಾಲಿಗಳು ತೇವವಾಗುತ್ತವೆ. ಶಿವಾಜಿ ಮರಣದ ನಂತರ ಪ್ರಮುಖ ಮೊಘಲ್ ಆಡಳಿತ ಮತ್ತು ವಾಣಿಜ್ಯ ಕೇಂದ್ರವಾದ ಬುರ್ಹಾನ್‌ಪುರದ ಮೇಲೆ ಹಠಾತ್ ಸಂಭಾಜಿ ದಾಳಿ ಮಾಡಿ ಅಲ್ಲಿನ ಸಂಪತ್ತನ್ನು ವಶಪಡಿಸಿಕೊಳ್ಳುವಾಗ ಯುದ್ಧಭೂಮಿಯಲ್ಲಿ ಸಿಲುಕಿದ ಶತೃಪಡೆಯ ಪುಟ್ಟ ಮಗುವನ್ನು ಅದರ ತಾಯಿಯ ಮಡಿಲಿಗೆ ಸುರಕ್ಷಿತವಾಗಿ ತಲುಪಿಸಿ ಯುದ್ದವನ್ನು ಮುಂದುವರೆಸಿದ ಸಂಭಾಜಿಯ ಬಗ್ಗೆ ನನಗೆ ಬಹಳ ಹೆಮ್ಮೆ ಎನಿಸಿತು.
ಇದೇ ಯುದ್ಧದಲ್ಲಿ ಸಂಭಾಜಿ ಸಿಂಹವಿರುವ ಬೋನಿಗೆ ಬಿದ್ದಾಗ ತನ್ನ ಬರಿ ಕೈಗಳಿಂದಲೇ ಅದನ್ನು ಕೊಂದು ಅಸಲಿ ಛಾವ ಅಂದರೆ ಸಿಂಹದ ಮರಿಯಾಗಿ ಅಬ್ಬರಿಸಿತ್ತಾ ಬಂದು "ನಾನು ಘರ್ಜಿಸೋಲ್ಲ, ಬೇಟೆಯಾಡ್ತೇನೆ" ಎಂಬ ಡೈಲಾಗ್ ಗೆ ಪ್ರೇಕ್ಷಕರ ಶಿಳ್ಳೆ ಚಪ್ಪಾಳೆ ಹೊಡೆದುಬಿಟ್ಟರು.
ಔರಂಗಜೇಬನ ಪಾತ್ರದಲ್ಲಿ ನಟಿಸಿರುವ ಅಕ್ಷಯ್ ಖನ್ನಾ ತಣ್ಣನೆಯ ಕ್ರೌರ್ಯ ಹೊರ ಹಾಕುತ್ತಾ ಸಂಭಾಜಿಯನ್ನು ಸೋಲಿಸದ ಹೊರತು ತನ್ನ ಕಿರೀಟಧಾರಣೆ ಮಾಡಲಾರೆ ಎಂದು ಶಪಥ ಮಾಡಿದ. ತನ್ನ ಲಕ್ಷಗಟ್ಟಲೆ ಸೈನ್ಯದ ಮುಂದೆ ಸಾವಿರ ಲೆಕ್ಕಾಚಾರದ ಮರಾಠರ ಸೈನ್ಯ ಲೆಕ್ಕವಿಲ್ಲ ಎಂದು ಹಗುರವಾಗಿ ಯೋಚಿಸಿ ದಖ್ಖನ್ ಮೇಲೆ ದಾಳಿ ಮಾಡಲು ಆದೇಶ ಮಾಡುತ್ತಾನೆ. ಶಿವಾಜಿಯ ಕಾಲದಿಂದಲೂ ಗೆರಿಲ್ಲಾ ಯುದ್ಧ ತಂತ್ರದಲ್ಲಿ ಪಳಗಿದ ಮರಾಠರು ಛತ್ರಪತಿ ಸಂಭಾಜಿಯ ನೇತೃತ್ವದಲ್ಲಿ ಮೊಘಲರ ಸೇನೆಯನ್ನು ಸೋಲಿಸಿ ಹಿಮ್ಮೆಟ್ಟಿಸುತ್ತಾರೆ.
ಸಂಭಾಜಿಯನ್ನು ಪತ್ನಿ ಯೇಸುಬಾಯಿ ಆಗಿ ರಶ್ಮಿಕಾ ಮಂದಣ್ಣ ಉತ್ತಮವಾಗಿ ಅಭಿನಯಿಸಿದ್ದಾರೆ. ಎಲ್ಲಾ ಕಡೆ ಇರುವಂತೆ ಮರಾಠಾ ಆಸ್ಥಾನದಲ್ಲಿ ಗುಂಪುಗಾರಿಕೆ, ಒಳಸಂಚು ಬೆಳೆಯುತ್ತದೆ. ಸಂಭಾಜಿಯ ಮಲಸಹೋದರ ರಾಜಾರಾಮ್‌ನನ್ನು ಆಡಳಿತಗಾರನನ್ನಾಗಿ ಪ್ರತಿಷ್ಠಾಪಿಸಲು ಪಿತೂರಿಗಳು ನಡೆಯುತ್ತಲೇ ಇರುತ್ತವೆ. ಮೊಘಲ್ ರಾಜಕುಮಾರ ಮಿರ್ಜಾ ಅಕ್ಬರ್ ಔರಂಗಜೇಬನ ವಿರುದ್ಧ ದಂಗೆ ಏಳಲು ಸಂಭಾಜಿಯ ಸಹಾಯವನ್ನು ಕೋರುವಾಗ ಮಲತಾಯಿ ಸೋಯಾರಾಬಾಯಿ ಮತ್ತು ರಾಜಕುಮಾರನ ಜೊತೆಯಲ್ಲಿ ಪಿತೂರಿಯ ಭಾಗವಾದವರನ್ನು ಆನೆಯ ಕಾಲಿನಿಂದ ತುಳಿಸಿ ಸಾಯಿಸುವ ದೃಶ್ಯಗಳನ್ನು ನೋಡಿದಾಗ ಮರಾಠರು ಮೋಸಗಾರರಿಗೆ ಕರುಣೆಗೆ ಅವಕಾಶವಿಲ್ಲದೇ ತಕ್ಕ ಶಿಕ್ಷೆಗೆ ಗುರಿಪಡಿಸುತ್ತಿದ್ದರು ಎಂಬುದು ತಿಳಿದುಬರುತ್ತದೆ.
ಔರಂಗಜೇಬನು ಮತ್ತೆ ದಖ್ಖನ್ ಕಡೆ ಯುದ್ಧಕ್ಕೆ ಬರುವ ಸುದ್ದಿ ತಿಳಿದು ನಿರ್ಣಾಯಕ ಯುದ್ದದಲ್ಲಿ ಸಂಗಮೇಶ್ವರದಲ್ಲಿ ಕೇವಲ ನೂರರ ಲೆಕ್ಕದಲ್ಲಿ ಇರುವ ಸೈನಿಕರಿಗೆ ಛತ್ರಪತಿಯು ಹುರಿದುಂಬಿಸುವ ಮಾತುಗಳು ಪ್ರೇಕ್ಷಕರ ಮೈ ನವಿರೇಳಿಸುತ್ತದೆ.ನಾವೂ ಅವರ ಜೊತೆಯಲ್ಲಿ ಹರ ಹರ ಮಹಾದೇವ್ ,ಜೈ ಭವಾನಿ ಎನ್ನಬೇಕು ಎಂಬ ಭಾವ ಮೂಡುತ್ತದೆ.
ಸಂಭಾಜಿಯ ಮೇಲೆ ಸಾವಿರದ ಲೆಕ್ಕದಲ್ಲಿ ಮುತ್ತಿಗೆ ಹಾಕಿದ ಮೊಘಲರ ಸೈನ್ಯಕ್ಕೆ ಮರಾಠರಲ್ಲಿ ಕೆಲ ದ್ರೋಹಿ ಬಂಧುಗಳು ರಹಸ್ಯ ಮಾಹಿತಿ ನೀಡಿದ್ದು ಕಂಡು ಸಂಭಾಜಿ ಮರುಗುತ್ತಾನೆ.
ಯುದ್ದದಲ್ಲಿ ಗಾಯಗೊಂಡ ಸಂಭಾಜಿಯನ್ನು ಸರಪಳಿ ಹಾಕಿ ಬಂಧಿಸಿ ಅವನೊಂದಿಗೆ ಅವನ ಗೆಳೆಯ ಕವಿ ಕಲಾಷ್ ನನ್ನ ಚಿತ್ರ ಹಿಂಸೆ ನೀಡಿ ಮತಾಂತರ ಮಾಡಲು ಬಲವಂತ ಮಾಡುವಾಗ ಸಂಭಾಜಿಯು ಪ್ರತಿರೋಧ ತೋರಿದ ರೀತಿಯನ್ನು ಚೆನ್ನಾಗಿ ಚಿತ್ರಿಸಲಾಗಿದೆ. ಸಂಭಾಜಿಯ ಕಣ್ಣುಗಳನ್ನು ಕಾದ ಕಬ್ಬಿಣದ ಕೆಂಪನೆಯ ಸರಳುಗಳಿಂದ ಕೀಳುವಾಗ ಸಂಕಟವಾಗುತ್ತದೆ. ಅವರ ಉಗುರು ಕೀಳುತ್ತಾರೆ, ಗಾಯಕ್ಕೆ ಉಪ್ಪು ಕಾರ ಹಾಕಿ ಹಿಂಸಿಸುವಾಗ ಸಂಭಾಜಿಯ ನರಳದೇ ಒಂದೇ ಪದ ಉಚ್ಚಾರ ಮಾಡುತ್ತಾರೆ ಅದೇ "ಜಗದಂಬಾ"
ಕೊನೆಗೆ ನಾಲಿಗೆ ಕೀಳಿಸಿದಾಗಲೂ ಅಸ್ಪಷ್ಟವಾಗಿ ತಾಯಿ ನಾಮ ಸ್ಮರಣೆ ಮಾಡುತ್ತಾನೆ ಸಂಭಾಜಿ!
ಹೀಗೆ ಹಿಂಸಿಸುವಾಗ ದಖ್ಖನ್ ನಿಂದ ಒಂದು ಸುದ್ದಿ ಬರುತ್ತದೆ. ಅದು ಯೇಸುಬಾಯಿ ರಾಜಾರಾಮ್ ನನ್ನ ಛತ್ರಪತಿ ಸ್ಥಾನದಲ್ಲಿ ಪ್ರತಿಷ್ಟಾಪಿಸಿದ್ದಾರೆ ಎಂಬುದನ್ನು ತಿಳಿದಾಗ ಸಂಭಾಜಿಗೆ ನೋವಿನಲ್ಲೂ ನಲಿವಾದರೆ.ಔರಂಗಜೇಬ್ ನಿಂತಲ್ಲೇ ಕುಸಿಯುತ್ತಾನೆ.
ಒಟ್ಟಾರೆ ಛಾವ ಒಂದು ಐತಿಹಾಸಿಕವಾದ ಸ್ವರಾಜ್ಯ ಕಲ್ಪನೆಯನ್ನು ಎತ್ತಿ ಹಿಡಿಯುವ ಚಿತ್ರ ದೇಶಭಕ್ತಿ ಸಾರುವ ಇಂತಹ ಚಿತ್ರವನ್ನು ಎಲ್ಲರೂ ನೋಡಬಹುದು.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
ಶತೃಗಳ ತಲೆ ತೆಗೆಯುವ ಬದಲಿಗೆ
ನಮ್ಮ ತಲೆಯಿಂದ ಅವರನ್ನು ತೆಗೆಯೋಣ.
ಮೊನ್ನೆ ಮಕ್ಕಳಿಗೆ ಶಾಲಾ ಪ್ರಾರ್ಥನೆಯ ಅವಧಿಯಲ್ಲಿ ಪತ್ರಿಕೆಯನ್ನು ಓದಿಸುವಾಗ ಅಂದಿನ ಸುಭಾಷಿತ ನನ್ನನ್ನು ಬಹಳ ಆಕರ್ಷಿಸಿತು ಅದು ಹೀಗಿತ್ತು.
"ನಮ್ಮ ಶತ್ರುವಿನ ಬಗ್ಗೆ ಸೇಡು ತೀರಿಸಿಕೊಳ್ಳಬೇಕು ಎಂದು ನಿಮಗನಿಸಿದರೆ ಶತೃವಿನ ತಲೆ ತೆಗೆಯ ಬೇಕಿಲ್ಲ.ಅವರನ್ನು ನಮ್ಮ ತಲೆಯಿಂದ ತೆಗೆದರೆ ಸಾಕು" ಹೌದಲ್ಲವಾ? ಇದರ ಬಗ್ಗೆ ಮಕ್ಕಳಿಗೆ ಬಿಡಿಸಿ ಹೇಳಿದೆ.ಇದೇ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ಗೆಳೆಯರೊಬ್ಬರು ಕಳಿಸಿದ ಸಂದೇಶ ಪೂರಕವಾಗಿದೆ.
ಜೀವನದಲ್ಲಿ ಕೆಲವರನ್ನು ನಾವೇ ಮೊದಲು ಕ್ಷಮಿಸಿಬಿಡಬೇಕು.
ಅವರು ಕ್ಷಮೆಗೆ ಅರ್ಹರು ಎಂದಾಗಲೀ, ಅವರು ಮಾಡಿದ ತಪ್ಪು ಕ್ಷುಲ್ಲಕ ಎಂದಾಗಲೀ ಅಲ್ಲ.
ಅವರು ಕ್ಷಮೆಗೆ ಅರ್ಹರು ಎಂಬುದಕ್ಕಿಂತ ನಮ್ಮ ಮನಃಶಾಂತಿ, ನೆಮ್ಮದಿ, ಸಮಾಧಾನ ಬಹಳ ಮುಖ್ಯ.
ಒಮ್ಮೆ ಅಂಥವರನ್ನು ಕ್ಷಮಿಸಿಬಿಟ್ಟರೆ ಅವರು ತಮ್ಮ ಪಾಡಿಗೆ ಹೋಗುತ್ತಾರೆ. ನಮ್ಮ ಪಾಡಿಗೆ ನಾವಿರಬಹುದು.
ಒಂದು ವೇಳೆ ಕ್ಷಮಿಸಲಿಲ್ಲ ಎಂದುಕೊಳ್ಳಿ. ಅವರ ವಿರುದ್ಧ ಇನ್ನೂ ಹಗೆ, ವೈರತ್ವ ಮುಂದುವರಿಸಿದರೆ ಏನಾಗುವುದೆಂದರೆ ನಾವು ಅವರ ಬಗ್ಗೆ ಅನಗತ್ಯ ಯೋಚಿಸಬೇಕಾಗುತ್ತದೆ.*
ನಮ್ಮ ಆಲೋಚನೆಯಲ್ಲಿ ಅವರು ನೆಲೆಸುತ್ತಾರೆ. ಅವರ ಬಗ್ಗೆ ಯೋಚಿಸಿದಾಗಲೆಲ್ಲ ನಮ್ಮ ಮೂಡು ಹಾಳಾಗುತ್ತದೆ. ಮನಸ್ಸು ಕದಡಿದ ನೀರಿನಂತಾಗುತ್ತದೆ. ಇದರಿಂದ ನಮ್ಮ ಗುಣಮಟ್ಟದ ಸಮಯವೂ ಇಂಥ ಕ್ಷುಲ್ಲಕ ಸಂಗತಿಗಳಿಗಾಗಿ ಹಾಳಾಗುತ್ತದೆ.
ಹೀಗೆ ಮಾಡುವುದರಿಂದ ಅವರದ್ದೇನೂ ಹೋಗುವುದಿಲ್ಲ. ನಮ್ಮ ಸಮಯ, ನೆಮ್ಮದಿಯೇ ಹಾಳಾಗುತ್ತದೆ.
ಅದರ ಬದಲು ಅಂಥ ವ್ಯಕ್ತಿಗಳನ್ನು ಕ್ಷಮಿಸಿ ಬಿಡಬೇಕು. ಅಷ್ಟರಮಟ್ಟಿಗೆ ನಮ್ಮ ಮನಸ್ಸು ನಿರ್ಮಲವಾಗುತ್ತದೆ, ಹಗುರವಾಗುತ್ತದೆ. ನಾವು ಆ ಹಾಳು ಯೋಚನೆಗಳಿಂದ ದೂರಾಗುತ್ತೇವೆ.
ಅಷ್ಟಕ್ಕೂ ಇಂಥ ಸಂಗತಿಗಳಲ್ಲೇ ಕಾಲ ಕಳೆಯಲು ನಾವೇನು ಸಾವಿರಾರು ವರ್ಷಗಳ ಕಾಲ ಇಲ್ಲಿ ಗೂಟ ಹೊಡೆದುಕೊಂಡು ಇರುತ್ತೇವಾ? ಕೆಲವು ವ್ಯಕ್ತಿ, ಸಂಗತಿ, ಬದುಕು ವಿಷಯಗಳನ್ನು ಅಲ್ಲಲ್ಲಿಯೇ ಬಿಟ್ಟು ಮುಂದಕ್ಕೆ ಹೋಗುತ್ತಿರಬೇಕು. ನಮ್ಮ ನೆಮ್ಮದಿಗೆ ಅದು ಅನಿವಾರ್ಯ.ಅಲ್ಲವೆ?
ಸಿಹಿಜೀವಿ ವೆಂಕಟೇಶ್ವರ
ತುಮಕೂರು
ಕೆಲ ಬ್ಯಾಂಕುಗಳು ಗ್ರಾಹಕ ಸ್ನೇಹಿಯಲ್ಲ.ಕರ್ನಾಟಕದ ಬ್ಯಾಂಕುಗಳಲ್ಲಿ ಕನ್ನಡೇತರ ಸಿಬ್ಬಂದಿಯಿಂದ ಕನ್ನಡ ಮಾತನಾಡದೇ ಅನ್ಯಭಾಷೆ ಮಾತನಾಡುವ ಪರಿಣಾಮ ಅಲ್ಲಲ್ಲಿ ಗ್ರಾಹಕ ಮತ್ತು ಬ್ಯಾಂಕ್ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯುತ್ತಿರುವುದನ್ನು ನೋಡುತ್ತೇವೆ. ಅದರ ಜೊತೆಗೆ ಸೇವೆಗಳನ್ನು ನೀಡುವಾಗ ಅನವಶ್ಯಕ ವಿಳಂಬ ಮಾಡುವುದು. ಗ್ರಾಹಕರೊಂದಿಗೆ ಸೌಜನ್ಯವಾಗಿ ವರ್ತಿಸದಿರುವುದು ಅಲ್ಲಲ್ಲಿ ಕಂಡು ಬರುತ್ತವೆ. ನಿನ್ನೆ ದಿನ ಕ್ಯಾತ್ಸಂದ್ರ ದ ಕೆನರಾ ಬ್ಯಾಂಕ್ ಶಾಖೆಗೆ ಹಣ ಪಾವತಿ ಮಾಡಲು ಹೋದಾಗ ಹಣ ಪಾವತಿ ಸ್ಲಿಪ್ ಅನ್ಯ ರಾಜ್ಯದ ಭಾಷೆ ಪ್ರಿಂಟ್ ಇರುವುದನ್ನು ನೀಡಿದರು. ಕನ್ನಡ ಮತ್ತು ಇಂಗ್ಲೀಷ್ ಮುದ್ರಣದ ಸ್ಲಿಪ್ ಕೊಡಿ ಎಂದಾಗ ಅಲ್ಲಿಯ ಸಿಬ್ಬಂದಿ ಉಡಾಫೆಯಿಂದ ಉತ್ತರಿಸಿದರು. ನಾನು ಮ್ಯಾನೇಜರ್ ಭೇಟಿ ಮಾಡಿ ವಿಷಯ ಮುಟ್ಟಿಸಿದಾಗ ಅವರು ಕ್ಷಮೆ ಕೇಳಿ ಕನ್ನಡ ಚಲನ್ ಕೊಟ್ಟರು. ಬೇಕಾಬಿಟ್ಟಿ ಸರ್ವೀಸ್ ಚಾರ್ಜ್ ಹಾಕುವ ಈ ಬ್ಯಾಂಕ್ ಗಳು ಸೇವೆ ನೀಡುವಲ್ಲಿ ಅಸಡ್ಡೆ ತೋರುವ ತನ್ನ ಸಿಬ್ಬಂದಿಗಳಿಗೆ ಯಾಕೆ ಬುದ್ದಿ ಕಲಿಸಲ್ಲ. ಕೆಲ ಬ್ಯಾಂಕ್ ಸಿಬ್ಬಂದಿ ಯಾಕೆ ಹೀಗೆ?ಇವರು ಗ್ರಾಹಕ ಸ್ನೇಹಿ ಆಗುವುದು ಯಾವಾಗ?
ಸಿಹಿಜೀವಿ ವೆಂಕಟೇಶ್ವರ
ತುಮಕೂರು