11 ಫೆಬ್ರವರಿ 2025

ಜ್ಞಾನಂ ಭಾರತಂ ಮಿಷನ್.


 


ಜ್ಞಾನಂ ಭಾರತಂ ಮಿಷನ್.


ಈ ವರ್ಷದ ಕೇಂದ್ರ ಬಜೆಟ್ ನಲ್ಲಿ ಹೆಚ್ಚು ಚರ್ಚೆ ಆದ ವಿಷಯ ಹಾಗೂ ಸಂತಸಕ್ಕೆ ಕಾರಣವಾದ ವಿಷಯ ಐಟಿಯಲ್ಲಿ ವಿನಾಯಿತಿ.ನಿಜಕ್ಕೂ ಇದು ಮದ್ಯಮ ವರ್ಗದ ನಮ್ಮಂತವರಿಗೆ  ಉತ್ತಮ ನೀತಿ ಎಂಬುದರಲ್ಲಿ ಸಂಶಯವಿಲ್ಲ. ಈ ಬಜೆಟ್ ನಲ್ಲಿ ನನಗೆ ಸಂತಸ ಕೊಟ್ಟ ಮತ್ತೊಂದು ವಿಷಯ ಎಂದರೆ 

ಭಾರತದ ಪ್ರಾಚೀನ ಜ್ಞಾನವನ್ನು ರಕ್ಷಿಸಲು ಹೊಸ 'ಜ್ಞಾನ ಭಾರತಂ ಮಿಷನ್' ಒಂದು ಕೋಟಿಗೂ ಹೆಚ್ಚು ಹಸ್ತಪ್ರತಿಗಳನ್ನು ದಾಖಲಿಸಬೇಕು ಮತ್ತು ಸಂರಕ್ಷಿಸಬೇಕು ಎಂಬ ಉದ್ದೇಶದಿಂದ ಹಮ್ಮಿಕೊಂಡ ಯೋಜನೆ.

2025-26 ರ ಕೇಂದ್ರ ಬಜೆಟ್‌ನಲ್ಲಿ, ಹಣಕಾಸು ಸಚಿವೆರವರು  ಜ್ಞಾನ ಭಾರತಂ ಮಿಷನ್ ಅನ್ನು ಪರಿಚಯಿಸಿದರು.ಇದರ ಅಡಿಯಲ್ಲಿ ಒಂದು ಕೋಟಿ ಹಸ್ತಪ್ರತಿಗಳನ್ನು ಸಂರಕ್ಷಿಸಿ ದಾಖಲಿಸಲಾಗುತ್ತದೆ.

ಈ ಉಪಕ್ರಮವು ಭಾರತದ ವಿಶಾಲ ಬೌದ್ಧಿಕ ಪರಂಪರೆಯನ್ನು ರಕ್ಷಿಸಲು ಮತ್ತು ಹೆಚ್ಚಿಸಲು ಪ್ರಯತ್ನಿಸುತ್ತದೆ ಮತ್ತು ಈ ಕ್ರಮವು ಪ್ರಸ್ತುತ ಸರ್ಕಾರದ ವಿಶಾಲ ದೃಷ್ಟಿಕೋನಕ್ಕೆ ಅನುಗುಣವಾಗಿದೆ ಆಧುನಿಕ ಶಿಕ್ಷಣ ಮತ್ತು ತಂತ್ರಜ್ಞಾನದೊಂದಿಗೆ ಪ್ರಾಚೀನ ಜ್ಞಾನವನ್ನು ಸಂಯೋಜಿಸುತ್ತದೆ.

ಈ ಯೋಜನೆಯ ಅಂಗವಾಗಿ

ಶೈಕ್ಷಣಿಕ ಸಂಸ್ಥೆಗಳು, ವಸ್ತು ಸಂಗ್ರಹಾಲಯಗಳು, ಗ್ರಂಥಾಲಯಗಳು ಮತ್ತು ಖಾಸಗಿ ಸಂಗ್ರಾಹಕರೊಂದಿಗೆ ನಮ್ಮ ಹಸ್ತಪ್ರತಿ ಪರಂಪರೆಯ ಸಮೀಕ್ಷೆ, ದಾಖಲೀಕರಣ ಮತ್ತು ಸಂರಕ್ಷಣೆಗಾಗಿ ಜ್ಞಾನ ಭಾರತಂ ಮಿಷನ್ ಅನ್ನು 1 ಕೋಟಿಗೂ ಹೆಚ್ಚು ಹಸ್ತಪ್ರತಿಗಳನ್ನು ಒಳಗೊಳ್ಳಲು ಕೈಗೊಳ್ಳಲಾಗುತ್ತದೆ.

ಜ್ಞಾನ ಹಂಚಿಕೆಗಾಗಿ ಭಾರತೀಯ ಜ್ಞಾನ ವ್ಯವಸ್ಥೆಗಳ ರಾಷ್ಟ್ರೀಯ ಡಿಜಿಟಲ್ ಭಂಡಾರವನ್ನು (ಐಕೆಎಸ್) ಸ್ಥಾಪಿಸುವ ಯೋಜನೆಯನ್ನು ಸಹ ಈ ಬಜೆಟ್ ನಲ್ಲಿ ಪ್ರಸ್ತಾಪಿಸಿರುವುದು ಶ್ಲಾಘನೀಯ.

ಭಾರತದ ರಾಷ್ಟ್ರೀಯ ಆರ್ಕೈವ್ಸ್ ತನ್ನ ವ್ಯಾಪಕವಾದ ದಾಖಲೆಗಳು ಮತ್ತು ಹಸ್ತಪ್ರತಿಗಳ ಸಂಗ್ರಹವನ್ನು ಡಿಜಿಟಲೀಕರಣಗೊಳಿಸುವ ಮೂಲಕ ಈ ಸಾಂಸ್ಕೃತಿಕ ಪ್ರಯತ್ನದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ತನ್ಮೂಲಕ ಭವಿಷ್ಯದ ಪೀಳಿಗೆಗೆ ಅವುಗಳನ್ನು ಸಂರಕ್ಷಿಸಿ  ನೀಡಲು 

ಸಹಾಯಕವಾಗಲಿದೆ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು


 

25 ಜನವರಿ 2025

ಕುಣಿಯೋಣ ಬಾರ .ಹನಿಗವನ


 

#ಹನಿಗವನ

#ಕುಣಿಯೋಣುಬಾರ

ಸೋಮವಾರದಂದು ಕೆಲಸಕ್ಕೆ ಹೋಗಲು ಮನಸ್ಸು ಭಾರ। ಶನಿವಾರ,ಭಾನುವಾರವಾದರೆ ಮನ ಹೇಳುವುದು ಕುಣಿಯೋಣ ಬಾರ॥

ಸಿಹಿಜೀವಿ ವೆಂಕಟೇಶ್ವರ

#sihijeeviVenkateshwara
#ಕವನ #kavana #kannada #poem

22 ಜನವರಿ 2025

ಪ್ರತಿ ವಸ್ತು, ಜೀವಿ ಅಮೂಲ್ಯ.


 ಪ್ರತಿ ವಸ್ತು, ಜೀವಿ ಅಮೂಲ್ಯ.


ಸಾಮಾನ್ಯವಾಗಿ ನಾವೆಲ್ಲರೂ ಚೆನ್ನಾಗಿರುವ ವಸ್ತುಗಳನ್ನು ಬಳಸುತ್ತೇವೆ.ಸ್ವಲ್ಪ ಹಳತಾದ ಒಡೆದ ವಸ್ತುಗಳನ್ನು ಬಳಸುವುದೇ ಇಲ್ಲ. ಇದು ಮಾನವರ ವಿಷಯದಲ್ಲೂ ಅಷ್ಟೇ ಚೆನ್ನಾಗಿ ದುಡಿಯುತ್ತಿರುವವರಿಗೆ ಬೆಲೆ ಸ್ವಲ್ಪ ದಕ್ಷತೆ ಕಡಿಮೆಯಾದರೆ ಇನ್ನೆಲ್ಲಿಯ ನೆಲೆ? ಗೇಟ್ ಪಾಸ್ ಸಿದ್ದ.


ಒಬ್ಬ  ಮಹಿಳೆ ಎರಡು ದೊಡ್ಡ ಮಡಿಕೆಗಳಿಂದ ದಿನವೂ ತನ್ನ ಮನೆಗೆ ದೂರದ ಹೊಳೆಯಿಂದ  ನೀರು ತರುತ್ತಿದ್ದಳು. ಒಂದನ್ನು ತಲೆಯ ಮೇಲೆ ಮತ್ತೊಂದನ್ನು ಕಂಕುಳಲ್ಲಿ ಇಟ್ಟುಕೊಂಡು ನೀರು ತರುವ ಕಾರ್ಯ ಮುಂದುವರೆದಿತ್ತು.

ಅವಳು ಕಂಕಳುಲ್ಲಿಟ್ಟುಕೊಂಡ  ಮಡಿಕೆಯಲ್ಲಿ ಬಿರುಕು ಇತ್ತು.ತಲೆ ಮೇಲಿನ  ಮಡಿಕೆ ಚೆನ್ನಾಗಿತ್ತು ಆ ಮಡಿಕೆಯಿಂದ ಹಳ್ಳದ  ನೀರು ಪೂರ್ಣ ಪ್ರಮಾಣದಲ್ಲಿ ಮನೆ ಸೇರುತ್ತಿತ್ತು. ಬಿರುಕು ಬಿಟ್ಟ ಮಡಿಕೆಯಿಂದ ಅರ್ಧದಷ್ಟು ಮಾತ್ರ ನೀರು ಮನೆಗೆ ತಲುಪುತ್ತಿತ್ತು.


ಹೀಗೆ ದಿನಗಳುರುಳಿದವು. ಎರಡು ವರ್ಷಗಳ ಕಾಲ ಆಕೆ ಇದು ಪ್ರತಿದಿನವೂ  ಮನೆಗೆ ಕೇವಲ ಒಂದೂವರೆ ಮಡಿಕೆ ನೀರು ತರುತ್ತಿದ್ದಳು.

ತಲೆ ಮೇಲಿರುತ್ತಿದ್ದ ಮಡಿಕೆಯು  ತನ್ನ ಪೂರ್ಣ ನೀರು ತರುವ  ಸಾಧನೆಯ  ಬಗ್ಗೆ ಹೆಮ್ಮೆಪಡುತ್ತಿತ್ತು. ಆದರೆ  ಬಿರುಕು ಬಿಟ್ಟ ಮಡಿಕೆಯು ತನ್ನ ಅಪೂರ್ಣತೆಯ ಬಗ್ಗೆ ನಾಚಿಕೆಪಡುತ್ತಾ  ದುಃಖದಲ್ಲಿತ್ತು.

ಅದು ಒಂದು ದಿನ ಹೊಳೆಯ ಬಳಿ ಆ ಮಹಿಳೆಯೊಂದಿಗೆ ತನ್ನ ‌ನೋವನ್ನು ವಿವರಿಸಿ "ನೀವೇಕೆ ನನ್ನ ಅರ್ಧ ತುಂಬಿದ ನೀರಿಗಾಗಿ ನನ್ನ ಬಳಸುವಿರಿ.ಮತ್ತೊಂದು ಪೂರ್ಣ ಮಡಿಕೆ ಪಡೆದು ನನಗೆ ವಿಶ್ರಾಂತಿ ನೀಡಿ" ಎಂದಿತು.

ಈ ಮಾತುಗಳನ್ನು ಕೇಳಿದ ಮಹಿಳೆ ನಗುತ್ತಾ 

 "ನಾನು ನೀರು ತರುವ  ದಾರಿಯ ಒಂದು ಬದಿಯಲ್ಲಿ ಹೂವುಗಳಿವೆ, ಆದರೆ ಇನ್ನೊಂದು  ಬದಿಯಲ್ಲಿ ಹೂವಿಲ್ಲ  ಗಮನಿಸಿದ್ದೀಯಾ? 

ನೀನು‌ ಒಡೆದ ಮಡಿಕೆ ಎಂಬ ಕೀಳರಿಮೆ ಬಿಡು. ನಾನು ನಿನ್ನ ಹಾದಿಯ ಬದಿಯಲ್ಲಿ ಹೂವಿನ ಬೀಜಗಳನ್ನು ನೆಟ್ಟಿದ್ದೇನೆ.  ನಾವು ಹೊಳೆಯಿಂದ  ಹಿಂತಿರುಗುವಾಗ ಪ್ರತಿದಿನ ನೀನು ನಿನಗರಿವಿಲ್ಲದೇ ಅವುಗಳಿಗೆ ನೀರು ಹಾಕುತ್ತೀದ್ದೀಯ.ಈ ಎರಡು ವರ್ಷಗಳಿಂದ ನಾನು ಈ ಸುಂದರವಾದ ಹೂವುಗಳನ್ನು ದೇವರ ಪೂಜೆಗೆ ಬಳಸುತ್ತಿದ್ದೇನೆ" ಎಂದಳು.  ಒಡೆದ ಮಡಿಕೆ ಸಾರ್ಥಕ ಭಾವದಿಂದ ಮಹಿಳೆಗೆ ಧನ್ಯವಾದಗಳನ್ನು ಅರ್ಪಿಸಿತು.

ನಮ್ಮಲ್ಲಿ ಪ್ರತಿಯೊಬ್ಬರಿಗೂ ನಮ್ಮದೇ ಆದ ಶಕ್ತಿ ಇರುವಂತೆ ಬಲಹೀನತೆಯು ಇವೆ. ಜೀವ ವೈವಿಧ್ಯತೆ ಜಗದ ನಿಯಮ. ಅಶಕ್ತರು, ಅಸಹಾಯಕರು,ಕೆಲಸಕ್ಕೆ ಬಾರದವರು ಎಂದು ಯಾರನ್ನೂ ನಾವು ಹೀಗಳೆದು ಅವರಿಂದ ಏನೂ ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬರಬಾರದು.ಈ ಜಗದ ಪ್ರತಿ ವಸ್ತು ಹಾಗೂ  ಜೀವಿಯೂ ಅನನ್ಯ, ವಿಶೇಷ, ವಿಭಿನ್ನ ಮತ್ತು ಅಮೂಲ್ಯ ಅಲ್ಲವೆ?


ಸಿಹಿಜೀವಿ ವೆಂಕಟೇಶ್ವರ

ತುಮಕೂರು

 

17 ಜನವರಿ 2025

ಹೇಳಿದಂತೆ ಕೇಳುವ ದುಬಾರಿ ಗರ್ಲ್ ಫ್ರೆಂಡ್


 


ಹೇಳಿದಂತೆ ಕೇಳುವ ದುಬಾರಿ ಗರ್ಲ್ ಫ್ರೆಂಡ್.


 ಇನ್ನು ಮುಂದೆ ಯಾರೂ ಕೂಡ ತನಗೆ  ಪ್ರಿಯತಮೆ ಇಲ್ಲವೆಂದು ಬೇಸರ ಮಾಡಿಕೊಳ್ಳುವ ಅಗತ್ಯವಿಲ್ಲ. ನೀವು ಬಯಸಿದಂತೆಯೇ ನಿಮ್ಮೊಂದಿಗಿರುವ ರೋಬೋ ಪ್ರಿಯತಮೆ ಬರುತ್ತಾಳೆ! ಆದರೆ 

ನಿಮ್ಮ ಪರ್ಸ್ ಗಟ್ಟಿಯಾಗಿರಬೇಕಷ್ಟೇ.

ಈ ತಂತ್ರಜ್ಞಾನ ಯುಗದಲ್ಲಿ ಇಂತದೊಂದು ಸುದ್ದಿಯನ್ನು ನಂಬಬೇಕೋ ಬೇಡವೋ ಎಂದು ವಿಚಾರ ಮಾಡುವ ಅಗತ್ಯವಿಲ್ಲ. ನಂಬಲೇಬೇಕು. ಏಕೆಂದರೆ, ಇದು AI ಯುಗ ಸ್ವಾಮಿ! ಈ ವರ್ಷದ CES-2025 ಪ್ರದರ್ಶನದಲ್ಲಿ ಈ ಸಾಧ್ಯತೆ ಕಣ್ಣ ಮುಂದೆ ಬಂದಿದೆ.


ಈ ಪ್ರದರ್ಶನದಲ್ಲಿ ಒಂದು ಗಮನಾರ್ಹವಾದ ಆವಿಷ್ಕಾರವನ್ನು Realbotix ಎಂಬ ಕಂಪನಿ ಮಾನವನ ರೀತಿಯ ವಾಸ್ತವಿಕ ಕೃತಕ ಬುದ್ದಿಮತ್ತೆ (AI) ಗೆಳತಿಯನ್ನು ಸಿದ್ದಪಡಿಸಿದೆ. ಇವಳ ಹೆಸರು Aria. ಈ AI ರೋಬೋಟ್ ಅನ್ನು ಸ್ತ್ರೀ ಒಡನಾಡಿಯಾಗಿ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ.


ವರದಿಯ ಪ್ರಕಾರ ರೋಬೋಟ್‌ನ ಬೆಲೆ ಅಂದಾಜು 1.5 ಕೋಟಿ Aria ವಾಸ್ತವಿಕ ಮಾನವ ಲಕ್ಷಣಗಳು ಮತ್ತು ಮುಖದ ಅಭಿವ್ಯಕ್ತಿಗಳಿಗೆ ಹೋಲಿಕೆಯಾಗುವಂತಿದೆ. ಅಲ್ಲದೆ, Aria ವನ್ನು ನಮಗೆ ಬೇಕಾದಂತೆ ಕಸ್ಟಮೈಸ್ ಮಾಡಬಹುದು. ಬಳಕೆದಾರರು ಅದರ ಬಣ್ಣ, ಮುಖ, ಕೂದಲಿನ ಬಣ್ಣವನ್ನು ಸಹ ಬದಲಾಯಿಸಬಹುದು. ಈ AI ಪ್ರಿಯತಮೆಯ ಸಾಮರ್ಥ್ಯಗಳನ್ನು ಪ್ರದರ್ಶಿಸಲು ಕಸ್ಟಮೈಸಬಿಲಿಟಿ, ಸಾಮಾಜಿಕ ಬುದ್ದಿಮತ್ತೆ ಮತ್ತು ವಾಸ್ತವಿಕ ಮಾನವ ವೈಶಿಷ್ಟ್ಯಗಳ ಅನ್ನೋನ್ಯತೆ ಮತ್ತು ಒಡನಾಟವನ್ನೂ ಹೊಂದಿದೆ.


ಕೃತಕ ಗರ್ಭಾಶಯ  ಶೀಘ್ರದಲ್ಲೇ ಅಳವಡಿಸಲಾಗುವುದಂತೆ. ಇನ್ನು...ಪ್ರಿಯತಮೆ ಹೇಳಿದಂತೆ ಕೇಳುವುದಿಲ್ಲ. ತನ್ನನ್ನು ಕಾಳಜಿ ಮಾಡುವುದಿಲ್ಲ ಎಂಬ ದೂರುಗಳು ದೂರಾಗಬಹುದೇನೋ! 


ಸಿಹಿಜೀವಿ ವೆಂಕಟೇಶ್ವರ.


14 ಜನವರಿ 2025

ಮಕರ ಸಂಕ್ರಾಂತಿಯ ಪುರಾಣ ಐತಿಹ್ಯ*




*ಮಕರ ಸಂಕ್ರಾಂತಿಯ ಪುರಾಣ ಐತಿಹ್ಯ* 


1) ಈದಿನ ಭಗೀರಥನು ತಪಸ್ಸು ಮಾಡಿ ಶಿವನ ಜಟೆಯಿಂದ ಗಂಗೆಯನ್ನು ಭೂಮಿಗೆ ತಂದ ದಿನ,


2) ಮಹಾಭಾರತದ ಆದಿಪರ್ವದಲ್ಲಿ, ದಕ್ಷಪ್ರಜಾಪತಿಯ ಮಗಳು ವಸುವಿನ ಎಂಟು ಮಕ್ಕಳಾದ ಧರ, ಧ್ರುವ, ಸೋಮ, ಅಹ, ಅನಿಲ, ಅನಲ, ಪ್ರತ್ಯೂಷ, ಪ್ರಭಾಸ ಎಂಬ ಇವರು ಒಮ್ಮೆ ವಸಿಷ್ಠ ಮಹರ್ಷಿಯ ಆಶ್ರಮದಲ್ಲಿ ಸಂಚರಿಸುತ್ತ, ನಂದಿನೀ ಧೇನುವನ್ನು ಕದ್ದೊಯ್ಯಲು ಹವಣಿಸಿ, ವಸಿಷ್ಠರಿಂದ ಶಾಪಗ್ರಸ್ತರಾಗಿ ಭೂಲೋಕದಲ್ಲಿ ಶಂತನುವಿನ ಹೆಂಡತಿ ಗಂಗೆಯ ಅಷ್ಟ ಮಕ್ಕಳಾಗಿ ಹುಟ್ಟಿದರು. 


ಹಿರಿಯವನಾದ ಧರನೇ ಭೀಷ್ಮನಾಗಿ ಜನ್ಮವೆತ್ತಿದ. ಈದಿನ ಭೀಷ್ಮರ ಆತ್ಮವು ಶರಶಯ್ಯಯಿಂದ ದೇಹತ್ಯಾಗ ಮಾಡಿ ಶಾಪದಿಂದ ವಿಮೋಚನೆ ಆದ ದಿನ


3) ಈದಿನ ಭಾಗಿರತಿಯು ಕಪಿಲರ ಆಶ್ರಮದಲ್ಲಿ ಸುಟ್ಟು ಕರಕಲಾಗಿ ಭೂದಿಯಾದ ಸಗರನ ಒಂದು ಸಾವಿರ ಮಕ್ಕಳ ಅಸ್ಥಿಗಳು ಗಂಗೆಯಲ್ಲಿ ಸಂಚಯನವಾಗಿ ಮೋಕ್ಷ ಹೊಂದಿದ ದಿನ 


4) ಈದಿನ ಗಂಗೆಯು ಸಾಗರ ಸೇರಿದ ದಿನ.


5) ಈ ದಿನ ಸೂರ್ಯ ಧನುರ್ ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಉತ್ತರಾಯಣ ಪುಣ್ಯಕಾಲದ ಪರ್ವದಿನ, ಆಸ್ಥೀಕರು ಸೂರ್ಯನನ್ನು ಪ್ರಾರ್ಥಿಸುತ್ತಾರೆ.


6) ಈದಿನ ಆಸ್ತಿಕರು ಗಂಗಾ , ಯಮುನಾ , ಗೋದಾವರಿ , ಕೃಷ್ಣ ಮತ್ತು ಕಾವೇರಿ ನದಿಗಳಲ್ಲಿ, ಪುಣ್ಯ ನದಿಗಳ ಸಂಗಮ ಕ್ಷೇತ್ರಗಳಲ್ಲಿ ಪವಿತ್ರ ಸ್ನಾನ ಮಾಡಿ  ತರ್ಪಣಾದಿ ಪಿತೃ ಕಾರ್ಯ ಮಾಡಿದರೆ ಪಾಪ ವಿಮೋಚನೆಯಾಗುತ್ತದೆ ಎಂದು ನಂಬಲಾಗಿದೆ.