17 ಜನವರಿ 2025

ಹೇಳಿದಂತೆ ಕೇಳುವ ದುಬಾರಿ ಗರ್ಲ್ ಫ್ರೆಂಡ್


 


ಹೇಳಿದಂತೆ ಕೇಳುವ ದುಬಾರಿ ಗರ್ಲ್ ಫ್ರೆಂಡ್.


 ಇನ್ನು ಮುಂದೆ ಯಾರೂ ಕೂಡ ತನಗೆ  ಪ್ರಿಯತಮೆ ಇಲ್ಲವೆಂದು ಬೇಸರ ಮಾಡಿಕೊಳ್ಳುವ ಅಗತ್ಯವಿಲ್ಲ. ನೀವು ಬಯಸಿದಂತೆಯೇ ನಿಮ್ಮೊಂದಿಗಿರುವ ರೋಬೋ ಪ್ರಿಯತಮೆ ಬರುತ್ತಾಳೆ! ಆದರೆ 

ನಿಮ್ಮ ಪರ್ಸ್ ಗಟ್ಟಿಯಾಗಿರಬೇಕಷ್ಟೇ.

ಈ ತಂತ್ರಜ್ಞಾನ ಯುಗದಲ್ಲಿ ಇಂತದೊಂದು ಸುದ್ದಿಯನ್ನು ನಂಬಬೇಕೋ ಬೇಡವೋ ಎಂದು ವಿಚಾರ ಮಾಡುವ ಅಗತ್ಯವಿಲ್ಲ. ನಂಬಲೇಬೇಕು. ಏಕೆಂದರೆ, ಇದು AI ಯುಗ ಸ್ವಾಮಿ! ಈ ವರ್ಷದ CES-2025 ಪ್ರದರ್ಶನದಲ್ಲಿ ಈ ಸಾಧ್ಯತೆ ಕಣ್ಣ ಮುಂದೆ ಬಂದಿದೆ.


ಈ ಪ್ರದರ್ಶನದಲ್ಲಿ ಒಂದು ಗಮನಾರ್ಹವಾದ ಆವಿಷ್ಕಾರವನ್ನು Realbotix ಎಂಬ ಕಂಪನಿ ಮಾನವನ ರೀತಿಯ ವಾಸ್ತವಿಕ ಕೃತಕ ಬುದ್ದಿಮತ್ತೆ (AI) ಗೆಳತಿಯನ್ನು ಸಿದ್ದಪಡಿಸಿದೆ. ಇವಳ ಹೆಸರು Aria. ಈ AI ರೋಬೋಟ್ ಅನ್ನು ಸ್ತ್ರೀ ಒಡನಾಡಿಯಾಗಿ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ.


ವರದಿಯ ಪ್ರಕಾರ ರೋಬೋಟ್‌ನ ಬೆಲೆ ಅಂದಾಜು 1.5 ಕೋಟಿ Aria ವಾಸ್ತವಿಕ ಮಾನವ ಲಕ್ಷಣಗಳು ಮತ್ತು ಮುಖದ ಅಭಿವ್ಯಕ್ತಿಗಳಿಗೆ ಹೋಲಿಕೆಯಾಗುವಂತಿದೆ. ಅಲ್ಲದೆ, Aria ವನ್ನು ನಮಗೆ ಬೇಕಾದಂತೆ ಕಸ್ಟಮೈಸ್ ಮಾಡಬಹುದು. ಬಳಕೆದಾರರು ಅದರ ಬಣ್ಣ, ಮುಖ, ಕೂದಲಿನ ಬಣ್ಣವನ್ನು ಸಹ ಬದಲಾಯಿಸಬಹುದು. ಈ AI ಪ್ರಿಯತಮೆಯ ಸಾಮರ್ಥ್ಯಗಳನ್ನು ಪ್ರದರ್ಶಿಸಲು ಕಸ್ಟಮೈಸಬಿಲಿಟಿ, ಸಾಮಾಜಿಕ ಬುದ್ದಿಮತ್ತೆ ಮತ್ತು ವಾಸ್ತವಿಕ ಮಾನವ ವೈಶಿಷ್ಟ್ಯಗಳ ಅನ್ನೋನ್ಯತೆ ಮತ್ತು ಒಡನಾಟವನ್ನೂ ಹೊಂದಿದೆ.


ಕೃತಕ ಗರ್ಭಾಶಯ  ಶೀಘ್ರದಲ್ಲೇ ಅಳವಡಿಸಲಾಗುವುದಂತೆ. ಇನ್ನು...ಪ್ರಿಯತಮೆ ಹೇಳಿದಂತೆ ಕೇಳುವುದಿಲ್ಲ. ತನ್ನನ್ನು ಕಾಳಜಿ ಮಾಡುವುದಿಲ್ಲ ಎಂಬ ದೂರುಗಳು ದೂರಾಗಬಹುದೇನೋ! 


ಸಿಹಿಜೀವಿ ವೆಂಕಟೇಶ್ವರ.


14 ಜನವರಿ 2025

ಮಕರ ಸಂಕ್ರಾಂತಿಯ ಪುರಾಣ ಐತಿಹ್ಯ*




*ಮಕರ ಸಂಕ್ರಾಂತಿಯ ಪುರಾಣ ಐತಿಹ್ಯ* 


1) ಈದಿನ ಭಗೀರಥನು ತಪಸ್ಸು ಮಾಡಿ ಶಿವನ ಜಟೆಯಿಂದ ಗಂಗೆಯನ್ನು ಭೂಮಿಗೆ ತಂದ ದಿನ,


2) ಮಹಾಭಾರತದ ಆದಿಪರ್ವದಲ್ಲಿ, ದಕ್ಷಪ್ರಜಾಪತಿಯ ಮಗಳು ವಸುವಿನ ಎಂಟು ಮಕ್ಕಳಾದ ಧರ, ಧ್ರುವ, ಸೋಮ, ಅಹ, ಅನಿಲ, ಅನಲ, ಪ್ರತ್ಯೂಷ, ಪ್ರಭಾಸ ಎಂಬ ಇವರು ಒಮ್ಮೆ ವಸಿಷ್ಠ ಮಹರ್ಷಿಯ ಆಶ್ರಮದಲ್ಲಿ ಸಂಚರಿಸುತ್ತ, ನಂದಿನೀ ಧೇನುವನ್ನು ಕದ್ದೊಯ್ಯಲು ಹವಣಿಸಿ, ವಸಿಷ್ಠರಿಂದ ಶಾಪಗ್ರಸ್ತರಾಗಿ ಭೂಲೋಕದಲ್ಲಿ ಶಂತನುವಿನ ಹೆಂಡತಿ ಗಂಗೆಯ ಅಷ್ಟ ಮಕ್ಕಳಾಗಿ ಹುಟ್ಟಿದರು. 


ಹಿರಿಯವನಾದ ಧರನೇ ಭೀಷ್ಮನಾಗಿ ಜನ್ಮವೆತ್ತಿದ. ಈದಿನ ಭೀಷ್ಮರ ಆತ್ಮವು ಶರಶಯ್ಯಯಿಂದ ದೇಹತ್ಯಾಗ ಮಾಡಿ ಶಾಪದಿಂದ ವಿಮೋಚನೆ ಆದ ದಿನ


3) ಈದಿನ ಭಾಗಿರತಿಯು ಕಪಿಲರ ಆಶ್ರಮದಲ್ಲಿ ಸುಟ್ಟು ಕರಕಲಾಗಿ ಭೂದಿಯಾದ ಸಗರನ ಒಂದು ಸಾವಿರ ಮಕ್ಕಳ ಅಸ್ಥಿಗಳು ಗಂಗೆಯಲ್ಲಿ ಸಂಚಯನವಾಗಿ ಮೋಕ್ಷ ಹೊಂದಿದ ದಿನ 


4) ಈದಿನ ಗಂಗೆಯು ಸಾಗರ ಸೇರಿದ ದಿನ.


5) ಈ ದಿನ ಸೂರ್ಯ ಧನುರ್ ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಉತ್ತರಾಯಣ ಪುಣ್ಯಕಾಲದ ಪರ್ವದಿನ, ಆಸ್ಥೀಕರು ಸೂರ್ಯನನ್ನು ಪ್ರಾರ್ಥಿಸುತ್ತಾರೆ.


6) ಈದಿನ ಆಸ್ತಿಕರು ಗಂಗಾ , ಯಮುನಾ , ಗೋದಾವರಿ , ಕೃಷ್ಣ ಮತ್ತು ಕಾವೇರಿ ನದಿಗಳಲ್ಲಿ, ಪುಣ್ಯ ನದಿಗಳ ಸಂಗಮ ಕ್ಷೇತ್ರಗಳಲ್ಲಿ ಪವಿತ್ರ ಸ್ನಾನ ಮಾಡಿ  ತರ್ಪಣಾದಿ ಪಿತೃ ಕಾರ್ಯ ಮಾಡಿದರೆ ಪಾಪ ವಿಮೋಚನೆಯಾಗುತ್ತದೆ ಎಂದು ನಂಬಲಾಗಿದೆ. 


 






12 ಜನವರಿ 2025

ನಮ್ಮ ಕೈಲಿ ಏನೂ ಇಲ್ಲ..

 ಕಾರಿಂದ ಪ್ರಜ್ಞಾಹೀನ ಮಹಿಳೆಯನ್ನು ಇಳಿಸಿ ಲಗುಬಗೆಯಿಂದ ಎಮರ್ಜೆನ್ಸಿ ಗೆ ಸೇರಿಸಿ ಐದು ನಿಮಿಷದಲ್ಲಿ  ಡಾಕ್ಟರ್ ಹೊರ ಬಂದು ಪೇಶೆಂಟ್ ಇನ್ನಿಲ್ಲ ಅಂದರು. ಗಂಡನ ದುಃಖ ನೋಡಲಾಗಲಿಲ್ಲ.ಮೂರು ಮಕ್ಕಳ ತಾಯಿ ಕುಟುಂಬ ಅಗಲಿದ್ದಾರೆ.ಆ ಮಕ್ಕಳ ನೋಡುವವರಾರು?  ಬಳ್ಳಾರಿ ಮೂಲದ ದಂಪತಿಗಳು ಬೆಂಗಳೂರಿನ ನಿಮ್ಹಾನ್ಸ್ ಗೆ ಚಿಕಿತ್ಸೆಗೆ  ಹೊರಟಿದ್ದರು.ಉಸಿರಾಟದ ತೊಂದರೆಯಿಂದ ತುಮಕೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರು.

ಉಸಿರಿಲ್ಲದ ಮಹಿಳೆಯನ್ನು ಕಣ್ಣ ಮುಂದೆ ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದನ್ನು ನೋಡಿ ಮನಸ್ಸು ಭಾರವೆನಿಸಿತು.

08 ಜನವರಿ 2025

ಗುಡ್ಲು ಹೋಟೆಲ್ .ಹಿರಿಯೂರು.


 ಇಂದು  ತುಮಕೂರಿನಿಂದ  ಚಿತ್ರದುರ್ಗಕ್ಕೆ ಹೋಗುವಾಗ ಹಿರಿಯೂರಿನಲ್ಲಿ ಗುಡ್ಲು ಹೋಟೆಲ್ ಅಥವಾ ಸುಂದ್ರಣ್ಣ ಹೋಟೆಲ್ ನಲ್ಲಿ ಇಡ್ಲಿ ,ವಡೆ ಪಲಾವ್ ತಿಂದೆ.  ಟಿ ಬಿ ಸರ್ಕಲ್ ನ ಚಾನಲ್ ದಡದಲ್ಲಿ ಇರುವ  ಈ ಹೋಟೆಲ್‌ ಗೆ ಬೋರ್ಡ್ ಇಲ್ಲ.ದಿನಕ್ಕೆ 5000 ಇಡ್ಲಿಗಳು  ಖರ್ಚಾಗುವ ಈ ಹೋಟೆಲ್ ಹಿರಿಯೂರು ನಗರದಲ್ಲಿ ಹಾಗೂ ನಾಡಿನಲ್ಲಿ ಮನೆಮಾತಾಗಿದೆ. ಶುಚಿ ,ರುಚಿ ಮತ್ತು ಕೈಗೆಟುಕುವ ಬೆಲೆ ಈ ಹೋಟೆಲ್ ವಿಶೇಷ. ನಾನು ಮೊದಲು ಶಿಕ್ಷಕನಾಗಿ ಕೆಲಸ ಮಾಡಿದ ಹುಚ್ಚವ್ವನಹಳ್ಳಿಯ ಇಬ್ಬರು ಈ ಹೋಟೆಲ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.ಬಹಳ ಆತ್ಮೀಯತೆಯಿಂದ ಮಾತನಾಡಿಸಿದರು.

ನೀವು ಈ ಹೋಟೆಲ್ ನಲ್ಲಿ ಟಿಫನ್ ಮಾಡಿದ್ದರೆ ಮಾಹಿತಿ ಹಂಚಿಕೊಳ್ಳಬಹುದು.

#sihijeeviVenkateshwara #hotel #hiriyur

03 ಜನವರಿ 2025

ಮಾಧುರಿ ಲೇಕ್..ಪ್ರವಾಸ ಕಥನ


 


#ಮಾಧುರಿಲೇಕ್..

ಅರುಣಾಚಲ ಪ್ರದೇಶದ ತವಾಂಗ್ ನಿಂದ ಬುಮ್ಲಾ ಪಾಸ್ ಕಡೆಗೆ ಪಯಣಿಸುವಾಗ ನಮಗೆ ಸಿಗುವ ಪ್ರಾಕೃತಿಕ ತಾಣವೇ ಮಾಧುರಿ ಸರೋವರ!
ಮಾಧುರಿ ದೀಕ್ಷಿತ್ ತನ್ನ ನೃತ್ಯ ಹಾಗೂ ಮಾದಕ ನೋಟದಿಂದ ರಸಿಕರ ಸೆಳೆದಂತೆ ಈ ಸರೋವರದ
ಬಣ್ಣ ಬಣ್ಣದ ನೀರು ನಯನ ಮನೋಹರ ನೋಟವು ಪ್ರವಾಸಿಗರನ್ನು  ಸೆಳೆಯುತ್ತದೆ. ಸರೋವರದ ಹಿನ್ನೆಲೆಯಲ್ಲಿ ಹಸಿರೊದ್ದ ಬೆಟ್ಟದ ಮೇಲೆ ಅಲ್ಲಲ್ಲಿ ಮಂಜಿನ ಹನಿಗಳನ್ನು ಯಾರೋ ಪೋಣಿಸಿದಂತೆ ಕಾಣುವ ಈ ಸರೋವರದ ಸೌಂದರ್ಯ ವರ್ಣಿಸಲಸದಳ. ನಾವು ಅಲ್ಲಿಗೆ ಹೋದಾಗ  ಮೈನಸ್ 6 ಡಿಗ್ರಿ ಸೆಲ್ಸಿಯಸ್ ಚಳಿಯ ವಾತಾವರಣದಲ್ಲಿ ಆ ಸುಂದರ ದೃಶ್ಯಗಳನ್ನು ನೋಡುತ್ತ ಪೋಟೋ ತೆಗೆದುಕೊಂಡು ವೀಡಿಯೋ ಮಾಡಿಕೊಂಡು ಸಂತಸಪಟ್ಟೆವು.ಹೊರ ರಾಜ್ಯದ ಆ ಸುಂದರ ತಾಣದಲ್ಲಿ ಹಲವಾರು ಅಪರಿಚಿತ ಕನ್ನಡದ ಮನಸುಗಳು ನಮ್ಮ ಜೊತೆಯಲ್ಲಿ ಸೇರಿಕೊಂಡು ಪರಿಚಿತರಾಗಿ ನಮ್ಮ ಆನಂದವನ್ನು ಇಮ್ಮಡಿಗೊಳಿಸಿದರು.
ಸಂಗೆಸ್ಟಾರ್ ತ್ಸೋ , ಹಿಂದೆ ಶೋಂಗಾ-ತ್ಸರ್ ಸರೋವರ ಎಂದು ಕರೆಯಲಾಗುತ್ತಿತ್ತು ಈಗ  ಮಾಧುರಿ ಸರೋವರ ಎಂದು ಜನಪ್ರಿಯವಾಗಿದೆ‌.  ಇದು ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯ ತವಾಂಗ್‌ನಿಂದ ಬುಮ್ ಲಾ ಪಾಸ್‌ಗೆ ಹೋಗುವ ದಾರಿಯಲ್ಲಿದೆ , ಸಮುದ್ರದಿಂದ 3,708 ಮೀಟರ್ ಮೇಲಿರುವ ಭಾರತ-ಚೀನಾ ಗಡಿಯ ಸಮೀಪದಲ್ಲಿದೆ.
ಉತ್ತರಕ್ಕೆ ತಕ್ಪೋ ಶಿರಿ ಹಿಮನದಿಯ ಕೆಳಗೆ ಹುಟ್ಟುವ ತಕ್ತ್ಸಾಂಗ್ ಚು ನದಿಯು ಈ ಪ್ರದೇಶದ ಮೂಲಕ ಹರಿಯುತ್ತದೆ. ಇದು ಪಶ್ಚಿಮಕ್ಕೆ ಹರಿದು  ನಂತರ ನೈಮ್ಜಂಗ್ ಚು ನದಿಯನ್ನು 8 ಮೈಲುಗಳು  ಕೆಳಗೆ ಸೇರುತ್ತದೆ . ತಕ್ತ್ಸಂಗ್ ಗೊಂಪಾ ಪಶ್ಚಿಮಕ್ಕೆ 1.5 ಮೈಲಿಗಳು  ಪ್ರದೇಶದಲ್ಲಿದೆ.
ಇಲ್ಲಿ ಶಾರುಖ್.ಖಾನ್   ಮಾಧುರಿ ಅಭಿನಯದ ಕೋಯ್ಲಾ ಚಿತ್ರದ "ತನ್ಹಾಯಿ ತನ್ಹಾಯಿ ತನ್ಹಾಯಿ  ದೊನೋ ಕಾ ಪಾಸ್ ಲೇ ಆಯಿ"  ಹಾಡನ್ನು ಚಿತ್ರೀಕರಣ ಮಾಡಿದ ನೆನಪಿಗಾಗಿ ಇಂದು ಮಾಧುರಿ ಲೇಕ್ ಎಂದು ಜನಪ್ರಿಯವಾಗಿದೆ. ಚಲನ ಚಿತ್ರದಲ್ಲಿ ಈ ಹಾಡು ನೋಡಿದ್ದೆ.ಅದೇ ಸ್ಥಳವನ್ನು ನೇರವಾಗಿ ನೋಡಿದಾಗ ಮತ್ತೆ ಮಾಧುರಿ ನೆನಪಾದಳು..
ಸಮಯ ಸಿಕ್ಕರೆ ಮತ್ತೊಮ್ಮೆ ಮಾಧುರಿಯನ್ನು, ಹಾಡನ್ನು ,ಲೇಕನ್ನು ನೋಡುವ ಬಯಕೆ ಇದ್ದೇ ಇದೆ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು
#sihijeeviVenkateshwara #ArunachalPradesh #tawang #madhuridixit #madhurilake #tourism