25 ಡಿಸೆಂಬರ್ 2024

ಮಡಿಕೆ ಸೋಡಾ


 #ಮಡ್ಕೆ_ಮಿರ್ಚಿ_ಸೋಡ


ಧರ್ಮಸ್ಥಳದಿಂದ ಕುಕ್ಕೆ ಮಾರ್ಗ ನೀವು ಪ್ರಯಾಣ ಮಾಡುವಾಗ ಪ್ರಯಾಣದ ಆಯಾಸ ಕಡಿಮೆ ಮಾಡಲು ಅಲ್ಲಲ್ಲಿ ಪುಲ್ಜಾರ್ ಸೋಡಾ, ಮಡ್ಕೆ ಸೋಡಾ, ಜೋಳದ ತೆನೆ ,ಅನಾನಸ್ ಮಾರುವ ಗೂಡಂಗಡಿ ಕಾಣಬಹುದು. ಇಂದು ನಾನು ಈ ಮಾರ್ಗವಾಗಿ ಹೋಗುವಾಗ ಮಡ್ಕೆ ಸೋಡ ಕುಡಿದೆ.ಸೋಡ, ಪುದೀನ ,ಜಲ ಜೀರಾ ನಿಂಬೆ ಹಣ್ಣು, ಮೆಣಸಿನ ಕಾಯಿ ಹಾಕಿ ಹದವಾಗಿ ಮಾಡಿದ ಸೋಡಾ ಸ್ವಲ್ಪ ಖಾರ ಸ್ವಲ್ಪ ಸಿಹಿ ಯೊಂದಗಿನ ರುಚಿ ವಿಭಿನ್ನವಾಗಿತ್ತು. ಈ ಕಡೆ ಬಂದರೆ ನೀವು ಒಮ್ಮೆ ರುಚಿ ನೋಡಬಹುದು.

#sihijeeviVenkateshwara 

#soda #cool #drinks #cooldrinks

ಕಲೋತ್ಸವ

 

ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧೆಗಳು .ತುಮಕೂರು ಜಿಲ್ಲೆ. prathiba karanji and kalotsava 

ಇದು ತುಮಕೂರು ಜಿಲ್ಲಾ ಮಟ್ಟದ ಮಕ್ಕಳ  ಸಾಂಸ್ಕೃತಿಕ ಕಲರವ .ಜಿಲ್ಲೆಯ ವಿವಿಧ ತಾಲ್ಲೂಕಿನಿಂದ ಬಂದ ಮಕ್ಕಳು ತಮ್ಮ ಪ್ರತಿಭೆ ಪ್ರದರ್ಶನ ಮಾಡಿ .ಅರ್ಹರು ರಾಜ್ಯ ಮಟ್ಟಕ್ಕೆ ಆಯ್ಕೆಯಾದರು.

#school #education #kalotsavam #kalotsav #prathibhakaranji @school  #education @Blippi  @VijayKarnataka  #sihijeevivenkateshwara

22 ಡಿಸೆಂಬರ್ 2024

ಪ್ರಯತ್ನ ಜಾರಿಯಲ್ಲಿರಲಿ...


 


 1. ಬಲವಾದ ಗಾಳಿ ,ಮಳೆಯಿಂದ  ತನ್ನ ಗೂಡು ಎಷ್ಟೇ ಬಾರಿ ನಾಶವಾದರೂ  ತನ್ನ ಗೂಡು ಕಟ್ಟುವುದನ್ನು ಪಕ್ಷಿಯು   ಬಿಟ್ಟುಬಿಡುವುದಿಲ್ಲ.

 

 2.  ಬಂಡೆಗಳು ಎದುರಾದಾಗ ನದಿಯು ಹರಿಯುವುದನ್ನು ನಿಲ್ಲಿಸುವುದಿಲ್ಲ. ತನ್ನ ದಾರಿಯನ್ನು ಕಂಡುಕೊಂಡು   ನಿರಂತರವಾಗಿ ಹರಿದು ಸಮುದ್ರ ಸೇರುತ್ತದೆ.

 

 3. ಮರದ   ಕೊಂಬೆಗಳು ಮುರಿದಾಗ ಮರವು ಬೆಳೆಯುವುದನ್ನು ನಿಲ್ಲಿಸುವುದಿಲ್ಲ.ಬದಲಿಗೆ ಚಿಗುರುತ್ತಾ ಬೆಳೆಯುತ್ತಾ ಮತ್ತೆ ಮರವಾಗಿ ಕಂಗೊಳಿಸುತ್ತದೆ. 


 4. ಮೋಡಗಳು ಅಡ್ಡಿಯಾದವು ಎಂದು  ಸೂರ್ಯನು  ಹೊಳೆಯುವುದನ್ನು ನಿಲ್ಲಿಸುವುದಿಲ್ಲ. ಇನ್ನೂ ಪ್ರಖರವಾಗಿ ಬೆಳಗುತ್ತದೆ.

 

 5. ಜೇಡದ ಬಲೆ  ಹರಿದಾಗ ಅದು  ಸುಮ್ಮನಿರುವುದಿಲ್ಲ. ಅದು ತಾಳ್ಮೆಯಿಂದ ಮತ್ತೊಮ್ಮೆ ನೇಯ್ಗೆ ಮಾಡುತ್ತದೆ.

 

 6. ಮಣ್ಣು ಗಟ್ಟಿಯಾಗಿರುವುದರಿಂದ ಬೀಜವು ಮೊಳಕೆಯೊಡೆಯುವುದನ್ನು ನಿಲ್ಲಿಸುವುದಿಲ್ಲ.


ಈ ಮೇಲಿನ ಆರು ಪ್ರೇರಣಾದಾಯಕ ಘಟನೆಗಳು ನಮ್ಮನ್ನು ಸಾಧಿಸಲು ಪ್ರೇರಣೆ ನೀಡಬೇಕು.ನಮ್ಮ ಮೇಲೆ ನಮಗೆ ನಂಬಿಕೆ ಇದ್ದು ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದರೆ ಯಾವ ಗುರಿಯೂ ಕಠಿಣವಲ್ಲ.

ಪ್ರಯತ್ನಿಸುತ್ತಿರೋಣ ನಮ್ಮ ಗುರಿ ಮುಟ್ಟೋಣ.


10 ಡಿಸೆಂಬರ್ 2024

ಮಾನವ ಹಕ್ಕುಗಳ ದಿನ..

 


#ಮಾನವ_ಹಕ್ಕುಗಳ_ದಿನ


ಜಗತ್ತಿನಲ್ಲಿ ಜನಿಸಿದ ಪ್ರತಿ ಮನುಷ್ಯನಿಗೂ ನಿರ್ದಿಷ್ಟ ಹಕ್ಕುಗಳಿವೆ. ಮನುಷ್ಯನ ಹಕ್ಕಿನ ಬಗ್ಗೆ ಪ್ರತಿಪಾದಿಸುವ ದಿನ ಮಾನವ ಹಕ್ಕುಗಳ ದಿನ. ಪ್ರತಿವರ್ಷ ಡಿಸೆಂಬರ್ 10ರಂದು ಮಾನವ ಹಕ್ಕುಗಳ ದಿನ ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯು 1948ರಲ್ಲಿ ಮಾನವ ಹಕ್ಕುಗಳ ದಿನ ಆಚರಣೆಗೆ ಅನುಮೋದನೆ ನೀಡಿತು.

ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಗೂ ಬದುಕುವ ಹಕ್ಕಿನ ಜೊತೆಗೆ ಒಂದಿಷ್ಟು ಮೂಲಭೂತ ಹಕ್ಕುಗಳಿವೆ. ಪ್ರತಿಯೊಬ್ಬರಿಗೂ ಅರ್ಹವಾಗಿರುವ ಮೂಲಭೂತ ಸ್ವಾತಂತ್ರ್ಯಗಳು ಹಾಗೂ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಅಂತರರಾಷ್ಟ್ರೀಯ ಮಟ್ಟದಲ್ಲಿ ಡಿಸೆಂಬರ್ 10ರಂದು ಮಾನವ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ.

ಈ ಜಗತ್ತಿನಲ್ಲಿ ಎಲ್ಲರಿಗೂ ಸಮಾನ ಹಕ್ಕಿರುವ ಕಾರಣ ಲಿಂಗ, ರಾಷ್ಟ್ರೀಯತೆ, ಜನಾಂಗೀಯತೆ, ಜನಾಂಗ ಅಥವಾ ಧರ್ಮವನ್ನು ಲೆಕ್ಕಿಸದೆ ಪ್ರತಿ ವ್ಯಕ್ತಿಯ ಹಕ್ಕುಗಳನ್ನು ಗೌರವಿಸಬೇಕು. ಮಾಡಿದ ಕೆಲಸವನ್ನು ಗುರುತಿಸಲು ಮತ್ತು ಪ್ರತಿಯೊಬ್ಬರ ಹಕ್ಕುಗಳನ್ನು ರಕ್ಷಿಸಲು ಉದ್ದೇಶವನ್ನು ಈ ದಿನವು ಸಾರಿ ಹೇಳುತ್ತದೆ. ಸಮಾನತೆ, ನ್ಯಾಯ ಮತ್ತು ಮಾನವ ಘನತೆಯ ರಕ್ಷಣೆಗಾಗಿ ಶ್ರಮಿಸಲು ಎಲ್ಲೆಡೆ ಸರ್ಕಾರಗಳು, ಸಂಸ್ಥೆಗಳು ಜನರಿಗೆ ಕರೆ ನೀಡುವ ಕೆಲಸವನ್ನು ಮಾಡುತ್ತವೆ. ಈ ಜಗತ್ತಿನಲ್ಲಿ ಎಲ್ಲರೂ ಸಮಾನರು, ಪ್ರತಿ ಮನುಷ್ಯನಿಗೂ ಸಮಾನತೆಯಲ್ಲಿ ಬದುಕುವ ಹಕ್ಕಿದೆ ಎಂಬುದನ್ನು ಸಾರುವ ದಿನ ಇದಾಗಿದೆ.

ಮಾನವ ಹಕ್ಕುಗಳು ಎಂದರೆ ಮನುಷ್ಯನ ಬದುಕಿಗಾಗಿ ಇರುವ, ಮನುಷ್ಯನ ಅಸ್ತಿತ್ವಕ್ಕಾಗಿ ಇರುವ ಹಕ್ಕುಗಳು. ಈ ದಿನದಂದು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನವ ಹಕ್ಕುಗಳಿಗಾಗಿ ಹೋರಾಡಿದ ಎಲ್ಲಾ ಪ್ರಮುಖರನ್ನು ನೆನಪಿಸಿಕೊಳ್ಳಲಾಗುತ್ತದೆ. ಮಾನವ ಹಕ್ಕುಗಳಿಗಾಗಿ ಈ ಹಿಂದೆ ರೂಪಿಸಿದ ಕ್ರಮಗಳು ಮತ್ತು ಜವಾಬ್ದಾರಿಗಳನ್ನು ಪ್ರತಿಬಿಂಬಿಸಲು ಹಾಗೂ ಹಕ್ಕುಗಳನ್ನು ರಕ್ಷಿಸಲು ಶ್ರಮಿಸಲು ಅವಕಾಶವನ್ನು ನೀಡಲಾಗುತ್ತದೆ.

ವಿಶ್ವಸಂಸ್ಥೆಯ ಸಾಮಾನ್ಯಸಭೆಯು ಡಿಸೆಂಬರ್ 10, 1948 ರಂದು ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯನ್ನು ಅಂಗೀಕರಿಸಿತು. ಇದು ಮಾನವ ಹಕ್ಕುಗಳ ರಕ್ಷಣೆಗಾಗಿ ಮೊದಲ ಜಾಗತಿಕ ಮಾನದಂಡವನ್ನು ನಿಗದಿಪಡಿಸಿದ ಹೆಗ್ಗುರುತಾಗಿದೆ. ಜೀವನ, ಸ್ವಾತಂತ್ರ್ಯ, ಶಿಕ್ಷಣ, ಕೆಲಸ ಮತ್ತು ತಾರತಮ್ಯದಿಂದ ಸ್ವಾತಂತ್ರ್ಯ ಸೇರಿದಂತೆ ಪ್ರತಿಯೊಬ್ಬ ವ್ಯಕ್ತಿಯು ಅರ್ಹರಾಗಿರುವ ಮೂಲಭೂತ ಹಕ್ಕುಗಳ ಗುಂಪನ್ನು ಘೋಷಣೆಯಲ್ಲಿ ಉಲ್ಲೇಖಿಸಲಾಗಿದೆ.

ಈ ದಿನವನ್ನು ಮೊದಲು 1950 ರಲ್ಲಿ UNDHR ಅಳವಡಿಸಿಕೊಳ್ಳಲಾಯಿತು.

ಪ್ರತಿಯೊಬ್ಬ ವ್ಯಕ್ತಿಯ ಹಕ್ಕುಗಳನ್ನು ಗೌರವಿಸಬೇಕು ಮತ್ತು ರಕ್ಷಿಸಬೇಕು ಎಂಬುದನ್ನು ನೆನಪಿಸಲು ಮಾನವ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ. ಜನರು ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ಸಮಾನತೆ ಮತ್ತು ನ್ಯಾಯವನ್ನು ಮುನ್ನಡೆಸುವಲ್ಲಿ ಸಕ್ರಿಯ ಪಾತ್ರವನ್ನು ವಹಿಸುವ ಗುರಿಯನ್ನು ಹೊಂದಿದೆ. ಮಾನವ ಹಕ್ಕುಗಳ ಕಾರ್ಯಕರ್ತರು ಈ ದಿನವನ್ನು ಸ್ವಾತಂತ್ರ್ಯ ಮತ್ತು ಘನತೆಗಾಗಿ ಪ್ರಸ್ತುತ ಕದನಗಳತ್ತ ಗಮನ ಸೆಳೆಯಲು ಮತ್ತು ನಿಂದನೆಗಳನ್ನು ಪರಿಹರಿಸುವಲ್ಲಿ ಸಹಕಾರವನ್ನು ಒತ್ತಾಯಿಸಲು ಬಳಸುತ್ತಾರೆ.
ಪ್ರತಿ ವರ್ಷವೂ ಮಾನವ ಹಕ್ಕುಗಳ ದಿನಕ್ಕಾಗಿ ಒಂದು ನಿರ್ದಿಷ್ಟ ಥೀಮ್ ಇದೆ, ಅದು ಜಾಗತಿಕ ಗಮನ ಅಗತ್ಯವಿರುವ ಪ್ರಮುಖ ಮಾನವ ಹಕ್ಕುಗಳ ಸಮಸ್ಯೆಯನ್ನು ಎತ್ತಿ ತೋರಿಸುತ್ತದೆ. ಮಾನವ ಹಕ್ಕುಗಳ ದಿನದ 2024 ರ ಥೀಮ್‌ 'ಎಲ್ಲರಿಗೂ ಸಮಾನತೆ: ಅಸಮಾನತೆಯನ್ನು ಕಡಿಮೆ ಮಾಡುವುದು ಮತ್ತು ಮಾನವ ಹಕ್ಕುಗಳನ್ನು ಮುನ್ನಡೆಸುವುದು‘ ಎಂಬುದಾಗಿದೆ.

#sihijeeviVenkateshwara
#kannada #article #tumkur #humanrights #HumanRightsDay


08 ಡಿಸೆಂಬರ್ 2024

ಬಾರೆ ಹಣ್ಣು ತಿನ್ನೋಣ ಬಾರೆ


 


ಬಾರೆ ಹಣ್ಣು ತಿನ್ನೋಣ ಬಾರೆ


ನಾನು ಬಾಲ್ಯದಲ್ಲಿ ಬಹಳ ಇಷ್ಟ ಪಟ್ಟು ತಿಂದ ಹಣ್ಣುಗಳೆಂದರೆ  ಬಾರೆ ಹಣ್ಣು ಮತ್ತು ಕಾರೆ ಹಣ್ಣು.ಕಾರೆ ಹಣ್ಣು ಕೀಳಲು ಹೋಗಿ ಅಂಗೈ ಮುಂಗೈ ತರಚು ಗಾಯಗಳಾದರೂ ಬಾಯಲ್ಲಿ ಆ ಹಣ್ಣಿನ ಸ್ವಾದದ ಮುಂದೆ ಅವು ಮಾಯವಾಗುತ್ತಿದ್ದವು.

ನಮ್ಮ ಊರಿನ ನಮ್ಮ ಮನೆಯ ಹಿಂದೆ ಚಿಕ್ಕಜ್ಜರ ರೊಪ್ಪವಿತ್ತು.ರೊಪ್ಪವೆಂದರೆ    ಪ್ರಾಣಿಗಳಿಗೆ  ಒಣ ಹುಲ್ಲು ಸಂಗ್ರಹಿಸುವ ಸಂರಕ್ಷಿತತಾಣ.ಅಲ್ಲಿ ಒಂದು ಬಾರೆ ಮರವಿತ್ತು.ಅದು ಹಣ್ಣು ಬಿಡುವ ಕಾಲಕ್ಕೆ ಊರಿನ ನನ್ನ ವಯಸ್ಸಿನ ಹುಡುಗರೆಲ್ಲ ಆ ಮರಕ್ಕೆ ಆಳಿಗೊಂದು ಕಲ್ಲು ಎಸೆದು ಹಣ್ಣು ಬೀಳಿಸಿಕೊಂಡು ತಿನ್ನುತ್ತಿದ್ದೆವು.ಬಾರೆ ಹಣ್ಣುಗಳಲ್ಲಿ ಮೂರು ರೀತಿ. ಹಸಿರು ಬಣ್ಣದಿಂದ ಕೂಡಿದ ಹಣ್ಣು ಬಹಳ ಕಹಿ ಮತ್ತು ಒಗರು.ಸುಕ್ಕಾದ ಕೆಂಪು ಬಣ್ಣದ ಹಣ್ಣುಗಳು ಸಿಹಿಯಾಗಿದ್ದರೂ ಅದರಲ್ಲಿ ಹುಳುಗಳು ಜಾಸ್ತಿ. ನನಗೆ ದೋರೆಗಾಯಿ ಬಾರೆ ಹಣ್ಣು ಬಹಳ ಇಷ್ಟವಾಗುತ್ತಿತ್ತು.ಇಂತಹ ಹಣ್ಣುಗಳಲ್ಲೂ ಕೆಲವೊಮ್ಮೆ ಹುಳುಗಳ ಇರುವಿಕೆಯನ್ನು ಗಮನಿಸಿ ಬಿಸಾಡಿದ ನೆನಪು.

ಬಾಲ್ಯದಲ್ಲಿ ನಾವು ಬರೀ ಸಂತೋಷಕ್ಕಾಗಿ ಮತ್ತು ಹೊಟ್ಟೆ ತುಂಬಲು ತಿನ್ನುತ್ತಿದ್ದ ಹಣ್ಣು ಔಷಧಿಗಳ ಆಗರ ಎಂಬುದು ಹಲವಾರು ಪುಸ್ತಕ ಓದಿದಾಗ ತಿಳಿಯಿತು.

ಬೇರೆ ಬೇರೆ ಭಾಗದಲ್ಲಿ ಈ ಹಣ್ಣನ್ನು ವಿವಿಧ ಹೆಸರುಗಳಿಂದ ಕರೆಯುತ್ತಾರೆ.

ಬೋರೆ ಹಣ್ಣು, ಬಾರೆ ಹಣ್ಣು, ಬುಗುರಿ ಹಣ್ಣು ಹೀಗೆ ನಾನಾ ಹೆಸರುಗಳಿಂದ ಕರೆಸಿಕೊಳ್ಳುವ

ಈ   ಹಣ್ಣಿನಲ್ಲಿ ವಿಟಮಿನ್ ಎ, ಸಿ ಮತ್ತು ಖನಿಜ ಪೋಷಕಾಂಶಗಳು ಸಮೃದ್ಧವಾಗಿದೆ. ಇದು ಸ್ನಾಯುಗಳು, ನರಮಂಡಲ ಮತ್ತು ಚರ್ಮಕ್ಕೆ ಅಗತ್ಯವಿರುವ ಅನೇಕ ಪೋಷಕಾಂಶಗಳಿಂದ ತುಂಬಿದೆ. ಬೋರೆ ಹಣ್ಣುಗಳಲ್ಲಿರುವ ಪೊಟ್ಯಾಸಿಯಮ್, ರಂಜಕ, ಮ್ಯಾಂಗನೀಸ್, ಕಬ್ಬಿಣ ಹಾಗೂ ಸತು ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ. ಇದರಲ್ಲಿರುವ ಕಬ್ಬಿಣದ ಅಂಶವು ಹಿಮೋಗ್ಲೋಬಿನ್ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ರಕ್ತಹೀನತೆಯನ್ನು ಕಡಿಮೆ ಮಾಡುತ್ತದೆ.


   ಇದರಲ್ಲಿರುವ ಕಬ್ಬಿಣದ ಅಂಶವು ಹಿಮೋಗ್ಲೋಬಿನ್ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ರಕ್ತಹೀನತೆಯನ್ನು ಕಡಿಮೆ ಮಾಡುತ್ತದೆ. ಬೋರೆ ಹಣ್ಣುಗಳಲ್ಲಿ ವಿಟಮಿನ್ ಸಿ ಹೇರಳವಾಗಿದ್ದು ಇದು ಮೈಬಣ್ಣಕ್ಕೆ ಹೆಚ್ಚಿನ ಕಾಂತಿ ನೀಡಲು ಸಹಕಾರಿಯಾಗಿದೆ. ಅಲ್ಲದೆ ಮೊಡವೆಗಳು ಇಲ್ಲದಂತೆ ಚರ್ಮವನ್ನು ರಕ್ಷಿಸುತ್ತದೆ. ಈ ಹಣ್ಣನ್ನು ಒಣಗಿಸಿ ತಿನ್ನುವುದರಿಂದ ಇದರಲ್ಲಿರುವ ಕ್ಯಾಲ್ಸಿಯಂ ಮತ್ತು ರಂಜಕದ ಅಂಶ ಮೂಳೆಗಳನ್ನು ಬಲಪಡಿಸಲು ಬಹಳ ಉಪಯುಕ್ತವಾಗಿದೆ. ಅಲ್ಲದೆ ಈ ಹಣ್ಣುಗಳಲ್ಲಿರುವ ಫೈಬರ್ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮಲಬದ್ಧತೆ ಮತ್ತು ಅಜೀರ್ಣ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಇದರಲ್ಲಿರುವ ಆಂಟಿಆಕ್ಸಿಡೆಂಟ್ ಫೈಟೊಕೆಮಿಕಲ್ಸ್, ಪಾಲಿಸ್ಯಾಕರೈಡ್ಗಳು, ಫ್ಲೇವನಾಯ್ಡ್ಗಳು ಮತ್ತು ಸಪೋನಿನ್ಗಳು ಉತ್ತಮ ನಿದ್ರೆಗೆ ಸಹಾಯ ಮಾಡುತ್ತವೆ. ಅದಲ್ಲದೆ ಇದು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುವ ಗುಣವನ್ನು ಹೊಂದಿರುವುದರಿಂದ ಮಧುಮೇಹಿಗಳಿಗೂ ಒಳ್ಳೆಯದು. ಮಲಬದ್ಧತೆಯ ಸಮಸ್ಯೆ ಇರುವವರು ಇದನ್ನು ನಿಯಮಿತವಾಗಿ ಸೇವನೆ ಮಾಡುವುದು ಉತ್ತಮ.


ಬೋರೆ ಹಣ್ಣು ಆಸ್ಟಿಯೋಆರ್ಥ್ರೈಟಿಸ್ ತಡೆಗಟ್ಟಲು ಸಹಾಯ ಮಾಡುತ್ತದೆ. ಈ ಹಣ್ಣುಗಳು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದಲ್ಲದೆ ರಕ್ತ ಪರಿಚಲನೆಯನ್ನು ಸುಧಾರಿಸುತ್ತವೆ. ಇದು ಹೃದಯವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ ಮತ್ತು ಹೃದ್ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಈ ಹಣ್ಣಿನ ಪೇಸ್ಟ್ ಮಾಡಿ ಅದನ್ನು ಚರ್ಮದ ಮೇಲೆ ಹಚ್ಚುವುದರಿಂದ ಗಾಯವು ಗುಣವಾಗುತ್ತದೆ ಮತ್ತು ಚರ್ಮವನ್ನು ಮೃದುಗೊಳಿಸುತ್ತದೆ. ಅಲ್ಲದೆ ಈ ಹಣ್ಣಿನ ಆಂಟಿಮೈಕ್ರೊಬಿಯಲ್ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಂದಾಗಿ ಇದು ಸೋಂಕುಗಳನ್ನು ತಡೆಯುತ್ತದೆ. ಜೊತೆಗೆ ಹಸಿವನ್ನು ತಡೆದು ಜೀರ್ಣಾಂಗ ವ್ಯವಸ್ಥೆಯ ಕಾರ್ಯನಿರ್ವಹಣೆಗೆ ಸಹಾಯಮಾಡುತ್ತದೆ.

ಪ್ರಸ್ತುತ ನಗರದಲ್ಲಿ ವಾಸಿಸುವ ನಾನು 

ಇಂತಹ ಬಹೂಪಯೋಗಿ ಬಾರೆ ಹಣ್ಣನ್ನು  ಕಂಡರೆ ಮೊದಲು ಕೊಂಡು ಮನೆಗೆ ತೆಗೆದುಕೊಂಡು ಹೋಗಿ ಕುಟುಂಬಸಮೇತ ತಿನ್ನುತ್ತೇನೆ.

ನಿಮ್ಮ ಕಣ್ಣಿಗೆ ಈ ಹಣ್ಣು ಬಿದ್ದರೆ ನೀವೂ ಸೇವಿಸಬಹುದು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು