22 ಡಿಸೆಂಬರ್ 2024

ಪ್ರಯತ್ನ ಜಾರಿಯಲ್ಲಿರಲಿ...


 


 1. ಬಲವಾದ ಗಾಳಿ ,ಮಳೆಯಿಂದ  ತನ್ನ ಗೂಡು ಎಷ್ಟೇ ಬಾರಿ ನಾಶವಾದರೂ  ತನ್ನ ಗೂಡು ಕಟ್ಟುವುದನ್ನು ಪಕ್ಷಿಯು   ಬಿಟ್ಟುಬಿಡುವುದಿಲ್ಲ.

 

 2.  ಬಂಡೆಗಳು ಎದುರಾದಾಗ ನದಿಯು ಹರಿಯುವುದನ್ನು ನಿಲ್ಲಿಸುವುದಿಲ್ಲ. ತನ್ನ ದಾರಿಯನ್ನು ಕಂಡುಕೊಂಡು   ನಿರಂತರವಾಗಿ ಹರಿದು ಸಮುದ್ರ ಸೇರುತ್ತದೆ.

 

 3. ಮರದ   ಕೊಂಬೆಗಳು ಮುರಿದಾಗ ಮರವು ಬೆಳೆಯುವುದನ್ನು ನಿಲ್ಲಿಸುವುದಿಲ್ಲ.ಬದಲಿಗೆ ಚಿಗುರುತ್ತಾ ಬೆಳೆಯುತ್ತಾ ಮತ್ತೆ ಮರವಾಗಿ ಕಂಗೊಳಿಸುತ್ತದೆ. 


 4. ಮೋಡಗಳು ಅಡ್ಡಿಯಾದವು ಎಂದು  ಸೂರ್ಯನು  ಹೊಳೆಯುವುದನ್ನು ನಿಲ್ಲಿಸುವುದಿಲ್ಲ. ಇನ್ನೂ ಪ್ರಖರವಾಗಿ ಬೆಳಗುತ್ತದೆ.

 

 5. ಜೇಡದ ಬಲೆ  ಹರಿದಾಗ ಅದು  ಸುಮ್ಮನಿರುವುದಿಲ್ಲ. ಅದು ತಾಳ್ಮೆಯಿಂದ ಮತ್ತೊಮ್ಮೆ ನೇಯ್ಗೆ ಮಾಡುತ್ತದೆ.

 

 6. ಮಣ್ಣು ಗಟ್ಟಿಯಾಗಿರುವುದರಿಂದ ಬೀಜವು ಮೊಳಕೆಯೊಡೆಯುವುದನ್ನು ನಿಲ್ಲಿಸುವುದಿಲ್ಲ.


ಈ ಮೇಲಿನ ಆರು ಪ್ರೇರಣಾದಾಯಕ ಘಟನೆಗಳು ನಮ್ಮನ್ನು ಸಾಧಿಸಲು ಪ್ರೇರಣೆ ನೀಡಬೇಕು.ನಮ್ಮ ಮೇಲೆ ನಮಗೆ ನಂಬಿಕೆ ಇದ್ದು ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದರೆ ಯಾವ ಗುರಿಯೂ ಕಠಿಣವಲ್ಲ.

ಪ್ರಯತ್ನಿಸುತ್ತಿರೋಣ ನಮ್ಮ ಗುರಿ ಮುಟ್ಟೋಣ.


10 ಡಿಸೆಂಬರ್ 2024

ಮಾನವ ಹಕ್ಕುಗಳ ದಿನ..

 


#ಮಾನವ_ಹಕ್ಕುಗಳ_ದಿನ


ಜಗತ್ತಿನಲ್ಲಿ ಜನಿಸಿದ ಪ್ರತಿ ಮನುಷ್ಯನಿಗೂ ನಿರ್ದಿಷ್ಟ ಹಕ್ಕುಗಳಿವೆ. ಮನುಷ್ಯನ ಹಕ್ಕಿನ ಬಗ್ಗೆ ಪ್ರತಿಪಾದಿಸುವ ದಿನ ಮಾನವ ಹಕ್ಕುಗಳ ದಿನ. ಪ್ರತಿವರ್ಷ ಡಿಸೆಂಬರ್ 10ರಂದು ಮಾನವ ಹಕ್ಕುಗಳ ದಿನ ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯು 1948ರಲ್ಲಿ ಮಾನವ ಹಕ್ಕುಗಳ ದಿನ ಆಚರಣೆಗೆ ಅನುಮೋದನೆ ನೀಡಿತು.

ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಗೂ ಬದುಕುವ ಹಕ್ಕಿನ ಜೊತೆಗೆ ಒಂದಿಷ್ಟು ಮೂಲಭೂತ ಹಕ್ಕುಗಳಿವೆ. ಪ್ರತಿಯೊಬ್ಬರಿಗೂ ಅರ್ಹವಾಗಿರುವ ಮೂಲಭೂತ ಸ್ವಾತಂತ್ರ್ಯಗಳು ಹಾಗೂ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಅಂತರರಾಷ್ಟ್ರೀಯ ಮಟ್ಟದಲ್ಲಿ ಡಿಸೆಂಬರ್ 10ರಂದು ಮಾನವ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ.

ಈ ಜಗತ್ತಿನಲ್ಲಿ ಎಲ್ಲರಿಗೂ ಸಮಾನ ಹಕ್ಕಿರುವ ಕಾರಣ ಲಿಂಗ, ರಾಷ್ಟ್ರೀಯತೆ, ಜನಾಂಗೀಯತೆ, ಜನಾಂಗ ಅಥವಾ ಧರ್ಮವನ್ನು ಲೆಕ್ಕಿಸದೆ ಪ್ರತಿ ವ್ಯಕ್ತಿಯ ಹಕ್ಕುಗಳನ್ನು ಗೌರವಿಸಬೇಕು. ಮಾಡಿದ ಕೆಲಸವನ್ನು ಗುರುತಿಸಲು ಮತ್ತು ಪ್ರತಿಯೊಬ್ಬರ ಹಕ್ಕುಗಳನ್ನು ರಕ್ಷಿಸಲು ಉದ್ದೇಶವನ್ನು ಈ ದಿನವು ಸಾರಿ ಹೇಳುತ್ತದೆ. ಸಮಾನತೆ, ನ್ಯಾಯ ಮತ್ತು ಮಾನವ ಘನತೆಯ ರಕ್ಷಣೆಗಾಗಿ ಶ್ರಮಿಸಲು ಎಲ್ಲೆಡೆ ಸರ್ಕಾರಗಳು, ಸಂಸ್ಥೆಗಳು ಜನರಿಗೆ ಕರೆ ನೀಡುವ ಕೆಲಸವನ್ನು ಮಾಡುತ್ತವೆ. ಈ ಜಗತ್ತಿನಲ್ಲಿ ಎಲ್ಲರೂ ಸಮಾನರು, ಪ್ರತಿ ಮನುಷ್ಯನಿಗೂ ಸಮಾನತೆಯಲ್ಲಿ ಬದುಕುವ ಹಕ್ಕಿದೆ ಎಂಬುದನ್ನು ಸಾರುವ ದಿನ ಇದಾಗಿದೆ.

ಮಾನವ ಹಕ್ಕುಗಳು ಎಂದರೆ ಮನುಷ್ಯನ ಬದುಕಿಗಾಗಿ ಇರುವ, ಮನುಷ್ಯನ ಅಸ್ತಿತ್ವಕ್ಕಾಗಿ ಇರುವ ಹಕ್ಕುಗಳು. ಈ ದಿನದಂದು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನವ ಹಕ್ಕುಗಳಿಗಾಗಿ ಹೋರಾಡಿದ ಎಲ್ಲಾ ಪ್ರಮುಖರನ್ನು ನೆನಪಿಸಿಕೊಳ್ಳಲಾಗುತ್ತದೆ. ಮಾನವ ಹಕ್ಕುಗಳಿಗಾಗಿ ಈ ಹಿಂದೆ ರೂಪಿಸಿದ ಕ್ರಮಗಳು ಮತ್ತು ಜವಾಬ್ದಾರಿಗಳನ್ನು ಪ್ರತಿಬಿಂಬಿಸಲು ಹಾಗೂ ಹಕ್ಕುಗಳನ್ನು ರಕ್ಷಿಸಲು ಶ್ರಮಿಸಲು ಅವಕಾಶವನ್ನು ನೀಡಲಾಗುತ್ತದೆ.

ವಿಶ್ವಸಂಸ್ಥೆಯ ಸಾಮಾನ್ಯಸಭೆಯು ಡಿಸೆಂಬರ್ 10, 1948 ರಂದು ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯನ್ನು ಅಂಗೀಕರಿಸಿತು. ಇದು ಮಾನವ ಹಕ್ಕುಗಳ ರಕ್ಷಣೆಗಾಗಿ ಮೊದಲ ಜಾಗತಿಕ ಮಾನದಂಡವನ್ನು ನಿಗದಿಪಡಿಸಿದ ಹೆಗ್ಗುರುತಾಗಿದೆ. ಜೀವನ, ಸ್ವಾತಂತ್ರ್ಯ, ಶಿಕ್ಷಣ, ಕೆಲಸ ಮತ್ತು ತಾರತಮ್ಯದಿಂದ ಸ್ವಾತಂತ್ರ್ಯ ಸೇರಿದಂತೆ ಪ್ರತಿಯೊಬ್ಬ ವ್ಯಕ್ತಿಯು ಅರ್ಹರಾಗಿರುವ ಮೂಲಭೂತ ಹಕ್ಕುಗಳ ಗುಂಪನ್ನು ಘೋಷಣೆಯಲ್ಲಿ ಉಲ್ಲೇಖಿಸಲಾಗಿದೆ.

ಈ ದಿನವನ್ನು ಮೊದಲು 1950 ರಲ್ಲಿ UNDHR ಅಳವಡಿಸಿಕೊಳ್ಳಲಾಯಿತು.

ಪ್ರತಿಯೊಬ್ಬ ವ್ಯಕ್ತಿಯ ಹಕ್ಕುಗಳನ್ನು ಗೌರವಿಸಬೇಕು ಮತ್ತು ರಕ್ಷಿಸಬೇಕು ಎಂಬುದನ್ನು ನೆನಪಿಸಲು ಮಾನವ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ. ಜನರು ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ಸಮಾನತೆ ಮತ್ತು ನ್ಯಾಯವನ್ನು ಮುನ್ನಡೆಸುವಲ್ಲಿ ಸಕ್ರಿಯ ಪಾತ್ರವನ್ನು ವಹಿಸುವ ಗುರಿಯನ್ನು ಹೊಂದಿದೆ. ಮಾನವ ಹಕ್ಕುಗಳ ಕಾರ್ಯಕರ್ತರು ಈ ದಿನವನ್ನು ಸ್ವಾತಂತ್ರ್ಯ ಮತ್ತು ಘನತೆಗಾಗಿ ಪ್ರಸ್ತುತ ಕದನಗಳತ್ತ ಗಮನ ಸೆಳೆಯಲು ಮತ್ತು ನಿಂದನೆಗಳನ್ನು ಪರಿಹರಿಸುವಲ್ಲಿ ಸಹಕಾರವನ್ನು ಒತ್ತಾಯಿಸಲು ಬಳಸುತ್ತಾರೆ.
ಪ್ರತಿ ವರ್ಷವೂ ಮಾನವ ಹಕ್ಕುಗಳ ದಿನಕ್ಕಾಗಿ ಒಂದು ನಿರ್ದಿಷ್ಟ ಥೀಮ್ ಇದೆ, ಅದು ಜಾಗತಿಕ ಗಮನ ಅಗತ್ಯವಿರುವ ಪ್ರಮುಖ ಮಾನವ ಹಕ್ಕುಗಳ ಸಮಸ್ಯೆಯನ್ನು ಎತ್ತಿ ತೋರಿಸುತ್ತದೆ. ಮಾನವ ಹಕ್ಕುಗಳ ದಿನದ 2024 ರ ಥೀಮ್‌ 'ಎಲ್ಲರಿಗೂ ಸಮಾನತೆ: ಅಸಮಾನತೆಯನ್ನು ಕಡಿಮೆ ಮಾಡುವುದು ಮತ್ತು ಮಾನವ ಹಕ್ಕುಗಳನ್ನು ಮುನ್ನಡೆಸುವುದು‘ ಎಂಬುದಾಗಿದೆ.

#sihijeeviVenkateshwara
#kannada #article #tumkur #humanrights #HumanRightsDay


08 ಡಿಸೆಂಬರ್ 2024

ಬಾರೆ ಹಣ್ಣು ತಿನ್ನೋಣ ಬಾರೆ


 


ಬಾರೆ ಹಣ್ಣು ತಿನ್ನೋಣ ಬಾರೆ


ನಾನು ಬಾಲ್ಯದಲ್ಲಿ ಬಹಳ ಇಷ್ಟ ಪಟ್ಟು ತಿಂದ ಹಣ್ಣುಗಳೆಂದರೆ  ಬಾರೆ ಹಣ್ಣು ಮತ್ತು ಕಾರೆ ಹಣ್ಣು.ಕಾರೆ ಹಣ್ಣು ಕೀಳಲು ಹೋಗಿ ಅಂಗೈ ಮುಂಗೈ ತರಚು ಗಾಯಗಳಾದರೂ ಬಾಯಲ್ಲಿ ಆ ಹಣ್ಣಿನ ಸ್ವಾದದ ಮುಂದೆ ಅವು ಮಾಯವಾಗುತ್ತಿದ್ದವು.

ನಮ್ಮ ಊರಿನ ನಮ್ಮ ಮನೆಯ ಹಿಂದೆ ಚಿಕ್ಕಜ್ಜರ ರೊಪ್ಪವಿತ್ತು.ರೊಪ್ಪವೆಂದರೆ    ಪ್ರಾಣಿಗಳಿಗೆ  ಒಣ ಹುಲ್ಲು ಸಂಗ್ರಹಿಸುವ ಸಂರಕ್ಷಿತತಾಣ.ಅಲ್ಲಿ ಒಂದು ಬಾರೆ ಮರವಿತ್ತು.ಅದು ಹಣ್ಣು ಬಿಡುವ ಕಾಲಕ್ಕೆ ಊರಿನ ನನ್ನ ವಯಸ್ಸಿನ ಹುಡುಗರೆಲ್ಲ ಆ ಮರಕ್ಕೆ ಆಳಿಗೊಂದು ಕಲ್ಲು ಎಸೆದು ಹಣ್ಣು ಬೀಳಿಸಿಕೊಂಡು ತಿನ್ನುತ್ತಿದ್ದೆವು.ಬಾರೆ ಹಣ್ಣುಗಳಲ್ಲಿ ಮೂರು ರೀತಿ. ಹಸಿರು ಬಣ್ಣದಿಂದ ಕೂಡಿದ ಹಣ್ಣು ಬಹಳ ಕಹಿ ಮತ್ತು ಒಗರು.ಸುಕ್ಕಾದ ಕೆಂಪು ಬಣ್ಣದ ಹಣ್ಣುಗಳು ಸಿಹಿಯಾಗಿದ್ದರೂ ಅದರಲ್ಲಿ ಹುಳುಗಳು ಜಾಸ್ತಿ. ನನಗೆ ದೋರೆಗಾಯಿ ಬಾರೆ ಹಣ್ಣು ಬಹಳ ಇಷ್ಟವಾಗುತ್ತಿತ್ತು.ಇಂತಹ ಹಣ್ಣುಗಳಲ್ಲೂ ಕೆಲವೊಮ್ಮೆ ಹುಳುಗಳ ಇರುವಿಕೆಯನ್ನು ಗಮನಿಸಿ ಬಿಸಾಡಿದ ನೆನಪು.

ಬಾಲ್ಯದಲ್ಲಿ ನಾವು ಬರೀ ಸಂತೋಷಕ್ಕಾಗಿ ಮತ್ತು ಹೊಟ್ಟೆ ತುಂಬಲು ತಿನ್ನುತ್ತಿದ್ದ ಹಣ್ಣು ಔಷಧಿಗಳ ಆಗರ ಎಂಬುದು ಹಲವಾರು ಪುಸ್ತಕ ಓದಿದಾಗ ತಿಳಿಯಿತು.

ಬೇರೆ ಬೇರೆ ಭಾಗದಲ್ಲಿ ಈ ಹಣ್ಣನ್ನು ವಿವಿಧ ಹೆಸರುಗಳಿಂದ ಕರೆಯುತ್ತಾರೆ.

ಬೋರೆ ಹಣ್ಣು, ಬಾರೆ ಹಣ್ಣು, ಬುಗುರಿ ಹಣ್ಣು ಹೀಗೆ ನಾನಾ ಹೆಸರುಗಳಿಂದ ಕರೆಸಿಕೊಳ್ಳುವ

ಈ   ಹಣ್ಣಿನಲ್ಲಿ ವಿಟಮಿನ್ ಎ, ಸಿ ಮತ್ತು ಖನಿಜ ಪೋಷಕಾಂಶಗಳು ಸಮೃದ್ಧವಾಗಿದೆ. ಇದು ಸ್ನಾಯುಗಳು, ನರಮಂಡಲ ಮತ್ತು ಚರ್ಮಕ್ಕೆ ಅಗತ್ಯವಿರುವ ಅನೇಕ ಪೋಷಕಾಂಶಗಳಿಂದ ತುಂಬಿದೆ. ಬೋರೆ ಹಣ್ಣುಗಳಲ್ಲಿರುವ ಪೊಟ್ಯಾಸಿಯಮ್, ರಂಜಕ, ಮ್ಯಾಂಗನೀಸ್, ಕಬ್ಬಿಣ ಹಾಗೂ ಸತು ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ. ಇದರಲ್ಲಿರುವ ಕಬ್ಬಿಣದ ಅಂಶವು ಹಿಮೋಗ್ಲೋಬಿನ್ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ರಕ್ತಹೀನತೆಯನ್ನು ಕಡಿಮೆ ಮಾಡುತ್ತದೆ.


   ಇದರಲ್ಲಿರುವ ಕಬ್ಬಿಣದ ಅಂಶವು ಹಿಮೋಗ್ಲೋಬಿನ್ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ರಕ್ತಹೀನತೆಯನ್ನು ಕಡಿಮೆ ಮಾಡುತ್ತದೆ. ಬೋರೆ ಹಣ್ಣುಗಳಲ್ಲಿ ವಿಟಮಿನ್ ಸಿ ಹೇರಳವಾಗಿದ್ದು ಇದು ಮೈಬಣ್ಣಕ್ಕೆ ಹೆಚ್ಚಿನ ಕಾಂತಿ ನೀಡಲು ಸಹಕಾರಿಯಾಗಿದೆ. ಅಲ್ಲದೆ ಮೊಡವೆಗಳು ಇಲ್ಲದಂತೆ ಚರ್ಮವನ್ನು ರಕ್ಷಿಸುತ್ತದೆ. ಈ ಹಣ್ಣನ್ನು ಒಣಗಿಸಿ ತಿನ್ನುವುದರಿಂದ ಇದರಲ್ಲಿರುವ ಕ್ಯಾಲ್ಸಿಯಂ ಮತ್ತು ರಂಜಕದ ಅಂಶ ಮೂಳೆಗಳನ್ನು ಬಲಪಡಿಸಲು ಬಹಳ ಉಪಯುಕ್ತವಾಗಿದೆ. ಅಲ್ಲದೆ ಈ ಹಣ್ಣುಗಳಲ್ಲಿರುವ ಫೈಬರ್ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮಲಬದ್ಧತೆ ಮತ್ತು ಅಜೀರ್ಣ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಇದರಲ್ಲಿರುವ ಆಂಟಿಆಕ್ಸಿಡೆಂಟ್ ಫೈಟೊಕೆಮಿಕಲ್ಸ್, ಪಾಲಿಸ್ಯಾಕರೈಡ್ಗಳು, ಫ್ಲೇವನಾಯ್ಡ್ಗಳು ಮತ್ತು ಸಪೋನಿನ್ಗಳು ಉತ್ತಮ ನಿದ್ರೆಗೆ ಸಹಾಯ ಮಾಡುತ್ತವೆ. ಅದಲ್ಲದೆ ಇದು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುವ ಗುಣವನ್ನು ಹೊಂದಿರುವುದರಿಂದ ಮಧುಮೇಹಿಗಳಿಗೂ ಒಳ್ಳೆಯದು. ಮಲಬದ್ಧತೆಯ ಸಮಸ್ಯೆ ಇರುವವರು ಇದನ್ನು ನಿಯಮಿತವಾಗಿ ಸೇವನೆ ಮಾಡುವುದು ಉತ್ತಮ.


ಬೋರೆ ಹಣ್ಣು ಆಸ್ಟಿಯೋಆರ್ಥ್ರೈಟಿಸ್ ತಡೆಗಟ್ಟಲು ಸಹಾಯ ಮಾಡುತ್ತದೆ. ಈ ಹಣ್ಣುಗಳು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದಲ್ಲದೆ ರಕ್ತ ಪರಿಚಲನೆಯನ್ನು ಸುಧಾರಿಸುತ್ತವೆ. ಇದು ಹೃದಯವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ ಮತ್ತು ಹೃದ್ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಈ ಹಣ್ಣಿನ ಪೇಸ್ಟ್ ಮಾಡಿ ಅದನ್ನು ಚರ್ಮದ ಮೇಲೆ ಹಚ್ಚುವುದರಿಂದ ಗಾಯವು ಗುಣವಾಗುತ್ತದೆ ಮತ್ತು ಚರ್ಮವನ್ನು ಮೃದುಗೊಳಿಸುತ್ತದೆ. ಅಲ್ಲದೆ ಈ ಹಣ್ಣಿನ ಆಂಟಿಮೈಕ್ರೊಬಿಯಲ್ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಂದಾಗಿ ಇದು ಸೋಂಕುಗಳನ್ನು ತಡೆಯುತ್ತದೆ. ಜೊತೆಗೆ ಹಸಿವನ್ನು ತಡೆದು ಜೀರ್ಣಾಂಗ ವ್ಯವಸ್ಥೆಯ ಕಾರ್ಯನಿರ್ವಹಣೆಗೆ ಸಹಾಯಮಾಡುತ್ತದೆ.

ಪ್ರಸ್ತುತ ನಗರದಲ್ಲಿ ವಾಸಿಸುವ ನಾನು 

ಇಂತಹ ಬಹೂಪಯೋಗಿ ಬಾರೆ ಹಣ್ಣನ್ನು  ಕಂಡರೆ ಮೊದಲು ಕೊಂಡು ಮನೆಗೆ ತೆಗೆದುಕೊಂಡು ಹೋಗಿ ಕುಟುಂಬಸಮೇತ ತಿನ್ನುತ್ತೇನೆ.

ನಿಮ್ಮ ಕಣ್ಣಿಗೆ ಈ ಹಣ್ಣು ಬಿದ್ದರೆ ನೀವೂ ಸೇವಿಸಬಹುದು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು


04 ಡಿಸೆಂಬರ್ 2024

ಬಾಳಿಗೆ ತಂಪು ನೀಡಿದ ಚಂದ್ರ


 


ಬಾಳಿಗೆ ತಂಪು ನೀಡಿದ ಚಂದ್ರ


ಕೆಲವರೇ ಹಾಗೇ ತಮ್ಮ ಪಾಡಿಗೆ ತಾವು ಅಗತ್ಯವಿರುವವರಿಗೆ  ಒಳಿತು ಮಾಡುತ್ತಾ ಯಾರಿಗೂ ಹೇಳದೇ  ನಿರ್ಲಿಪ್ತವಾಗಿ ಇದ್ದುಬಿಡುತ್ತಾರೆ.ಅಂತಹ ಪುಟ್ಟ ಸಹಾಯ ಪಡೆದವರ ಜೀವನದಲ್ಲಿ ಅಪಾರವಾದ ಬದಲಾವಣೆಯಾಗಿ ಸಮಜದಲ್ಲಿ ತುಸು ಶಾಂತಿ ನೆಮ್ಮದಿ ನೆಲೆಸಲು ಸಾಧ್ಯವಾಗುತ್ತದೆ. 

    ಅದು  ಅರ್ಧರಾತ್ರಿಯ ಸಮಯ. ಆ ಡಾಕ್ಟರ್ ತಮ್ಮ ಕೆಲಸವೆಲ್ಲಾ ಮುಗಿಸಿ ಮಲಗಿ ಹತ್ತು ನಿಮಿಷವಾಗಿಲ್ಲ, ಯಾರೋ ಬಾಗಿಲು ತಟ್ಟಿದರು.

    ‌ಡಾಕ್ಟರು ಬಹಳ ನಿಯತ್ತಿನ ಮನುಷ್ಯ. ಬೇಸರ ಪಟ್ಟುಕೊಳ್ಳದೆ ಹೋಗಿ ತೆಗೆದರು. ಬಂದ ಮನುಷ್ಯ ಇವರ ಕಾಲು ಹಿಡಿದುಕೊಂಡು "ಸಾರ್, ಒಬ್ಬ ಗರ್ಭಿಣಿ ಹೆಂಗಸು ಬಹಳ ಪ್ರಸವವೇದನೆ ಅನುಭವಿಸುತ್ತಿದ್ದಾಳೆ ಸಾರ್. ಆಕೆಯನ್ನು ನೀವೇ ಕಾಪಾಡಬೇಕು ಸಾರ್. ದಯಮಾಡಿ ನೀವೇ ಬಂದು ಅವಳನ್ನು ಉಳಿಸಬೇಕು, ಆಗಲ್ಲ ಅನ್ನಬೇಡಿ ಸಾರ್" ಎಂದು ಅಲವತ್ತುಕೊಂಡ.

 ಸುಮಾರು ೭೦ ವರ್ಷಗಳ ಕೆಳಗೆ ಮಹಾರಾಷ್ಟ್ರದ ಮೂಲೆಯಲ್ಲೊಂದು ಗ್ರಾಮದಲ್ಲಿನ ಡಾಕ್ಟರ್ ಅವರು. ತಕ್ಷಣ ಅವನೊಂದಿಗೆ ಹೊರಟರು.

    ಆ ಹೆಂಗಸು 19-20ರ ವಯಸ್ಸಿನವಳಿದ್ದಿರಬೇಕು.  ಆಕೆಗೆ ಪ್ರಸವ ನಿಜಕ್ಕೂ ಕಷ್ಟದಾಯಕವಾಗಿತ್ತು.ಬೆಳಗಿನ ಜಾವವಾಗಿತ್ತು. ಆ ಹೆಂಗಸು ಡಾಕ್ಟರ ಕೈಹಿಡಿದುಕೊಂಡು "ಡಾಕ್ಟರ್ ಸಾಹೇಬರೇ, ನನ್ನ ಗಂಡ ನನ್ನ ಬಿಟ್ಟು ಹೋದ. ನಾನು ದಟ್ಟ ದಾರಿದ್ರ್ಯದಲ್ಲಿದ್ದೇನೆ. ನಾನು ಹುಟ್ಟುವ ಮಗುವನ್ನು ಸಾಕುವ ಸ್ಥಿತಿಯಲ್ಲಿ ಇಲ್ಲ. ನನ್ನನ್ನು ಉಳಿಸಬೇಡಿ. ಬೇಡಿಕೊಳ್ಳುತ್ತೇನೆ ನನ್ನನ್ನು ಸಾಯಿಸಿಬಿಡಿ. ಬದುಕಿ ಏನೂ ಉಪಯೋಗವಿಲ್ಲ".

    ಡಾಕ್ಟರ್ ಗೇ ಮನಸ್ಸಿನಲ್ಲಿ ಕಸಿವಿಸಿಯಾಯಿತು. ಎಲ್ಲಾ ಪೇಷಂಟ್ ಗಳೂ 'ಹೇಗಾದರೂ ಮಾಡಿ ನನ್ನನ್ನು ಉಳಿಸಿ' ಎಂದು ಬೇಡಿಕೊಂಡರೆ ಈ ಅಸಹಾಯಕ ಹೆಂಗಸು ನನ್ನನ್ನು ಉಳಿಸಬೇಡಿ ಎಂದು ಬೇಡಿಕೊಳ್ಳುತ್ತಿದ್ದಾಳೆ. ಅಂದಮೇಲೆ ಅವಳಿಗೆ ಬದುಕು ಎಷ್ಟು ದುರ್ಭರವೆನಿಸಿರಬೇಡ, ಎನಿಸಿ ಹೇಳಿದರು "ನಾನು ಡಾಕ್ಟರ್ ಆಗಿ ನನಗೆ ಪೇಷಂಟ್ ಗಳನ್ನು ಉಳಿಸುವುದು ಮಾತ್ರ ಗೊತ್ತು ಹೊರತು ಸಾಯಿಸುವುದು ಗೊತ್ತಿಲ್ಲವಮ್ಮಾ. ನೀನು ಯೋಚನೆ ಮಾಡಬೇಡ. ಅದರ ವಿಚಾರ ಹೆರಿಗೆಯ ನಂತರ ನೋಡಿಕೊಳ್ಳೋಣ" ಎಂದು‌ ಹೇಳಿ ಸಮಾಧಾನ ಪಡಿಸಿ ಪ್ರಸವದ ಕಾರ್ಯವನ್ನು ಮುಂದುವರೆಸಿದರು.

ಕೆಲವು ಗಂಟೆಗಳ ಕಾಲ ಪ್ರಯಾಸ ಪಟ್ಟಮೇಲೆ ಕೊನೆಗೆ ಹೆರಿಗೆಯಾಗಿ ಹೆಣ್ಣು ಮಗುವನ್ನು ಹೆತ್ತಳು. ಸಂತೋಷ ಪಡಬೇಕೋ ದುಃಖ ಪಡಬೇಕೋ‌ ತಿಳಿಯದ ಸ್ಥಿತಿಯಲ್ಲಿದ್ದಳು ಆಕೆ.

     ಡಾಕ್ಟರ್ ಹೊರಡಲು ಸಿದ್ಧರಾಗುತ್ತಾ ಆಕೆಗೆ ಆಶ್ವಾಸನೆ ಕೊಟ್ಟರು "ನೀನು ಚಿಂತೆ ಮಾಡಬೇಡ ತಾಯಿ. ನಾನೇನು ಫೀಸ್  ತಗೋಳ್ತಾ ಇಲ್ಲ. ಬದಲು ನಾನೇ ನಿನಗೆ ಈ ನೂರು ರೂಪಾಯಿ ಕೊಡ್ತಿದ್ದೀನಿ ಇಟ್ಟುಕೋ.

ನಿನಗೆ ಯಾರೂ ಇಲ್ಲ ಅಂದುಕೋಬೇಡ. ನಾನಿದ್ದೀನಿ. ನೀನು ಸುಧಾರಿಸಿಕೊಂಡಮೇಲೆ ಹತ್ತಿರದ ಪುಣೆಗೆ ಹೋಗಿ ಅಲ್ಲಿನ ನರ್ಸಿಂಗ್ ಕಾಲೇಜಿನಲ್ಲಿ ಇಂಥ ಹೆಸರಿನ ಗುಮಾಸ್ತ ಒಬ್ಬರಿದ್ದಾರೆ, ಅವರಿಗೆ ಈ ಪತ್ರ ಕೊಡು. ನಿನಗೆ ಸಹಾಯ ಮಾಡುತ್ತಾರೆ."  

ಡಾಕ್ಟರು ಏನೋ ಒಂದು ಸಂತೃಪ್ತಿಯಿಂದ ವಾಪಸ್ ಹೊರಟರು.

     ಅವರು ಹೇಳಿದಂತೆ ಆಕೆ ಪುಣೆಗೆ ಹೋಗಿ ಆ ಗುಮಾಸ್ತನನ್ನು ಭೇಟಿಯಾಗಿ ಡಾಕ್ಟರ್ ಕೊಟ್ಟ ಪತ್ರವನ್ನು ಕೊಟ್ಟಳು. ಆ ಪತ್ರ ಓದಿದ ಕೂಡಲೇ ಆತ ಆಕೆಯನ್ನು ನರ್ಸಿಂಗ್ ಟ್ರೈನಿಂಗ್ ಗೆ ಸೇರಿಸಿಕೊಂಡು ಹಾಸ್ಟೆಲ್ನಲ್ಲಿ ವಾಸಕ್ಕೂ ಅನುವುಮಾಡಿಕೊಡುತ್ತಾರೆ. 

8 ತಿಂಗಳ ಟ್ರೈನಿಂಗ್ ಮುಗಿದ ನಂತರ ಉದ್ಯೋಗವನ್ನೂ ಕೊಡಿಸುತ್ತಾರೆ.

     ಇಪ್ಪತ್ತೈದು ವರ್ಷಗಳು ಕಳೆದಿವೆ. ಆ ಡಾಕ್ಟರ್ ಈಗ ಮೆಡಿಕಲ್ ಕಾಲೇಜಿನಲ್ಲಿ ಸೀನಿಯರ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಒಂದು ಯೂನಿವರ್ಸಿಟಿಯವರು

ತಮ್ಮ ಮೇಧಾವಿ ವಿದ್ಯಾರ್ಥಿಗಳಿಗೆ ಬಂಗಾರದ ಮೆಡಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಲು ಇವರನ್ನು ಆಹ್ವಾನಿಸಿದ್ದಾರೆ. ಆ ಕಾರ್ಯಕ್ರಮ ಮುಗಿದ‌ನಂತರ 'ಚಂದ್ರಾ' ಹೆಸರಿನ ಒಬ್ಬ ಯುವತಿ ಬಂದು ಈ ಡಾಕ್ಟರ್ ರನ್ನು ಭೇಟಿಯಾಗಿ 'ಸರ್, ತಾವು ದಯವಿಟ್ಟು ನಮ್ಮ ಮನೆಗೆ ಬರಬೇಕು' ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಾಳೆ. ಇನ್ಯಾವುದೇ ಡಾಕ್ಟರ್ ಆಗಿದ್ದರೆ ಸಾಧ್ಯವಿಲ್ಲ ಎಂದು ಹೊರಟುಬಿಡುತ್ತಿದ್ದರೇನೋ. ಆದರೆ ಈತ ಸ್ವಲ್ಪ ಮೃದುಮನಸ್ಸಿನವರು. ವಾಪಸ್ ಮನೆಗೆ‌ಹೋಗುವಾಗ ಹಾಗೇ ಈ ಹುಡುಗಿಯ ಮನೆಗೆ ಹೊಕ್ಕು ಹೋದರೇನಾಯ್ತು, ಎಂದುಕೊಂಡು ಆಗಲಿ ಎಂದೊಪ್ಪಿ ಅವಳ ಜೊತೆ ಹೊರಡುತ್ತಾರೆ.

      ಅಲ್ಲಿ ಆ ಹುಡುಗಿಯ ತಾಯಿ ಟೀ ತಂದು ಕೊಡುತ್ತಾ ತನ್ನ ಪರಿಚಯ, ಊರು ಇತ್ಯಾದಿ ಹೇಳುವಾಗ ಡಾಕ್ಟರರ ಮನಸ್ಸು ತಾವು ಅದೇ ಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದ ದಿನಗಳನ್ನು ನೆನೆಯುತ್ತದೆ. ಅಷ್ಟರಲ್ಲಿ ಆ ಯುವತಿ ಡಾಕ್ಟರ್ ರ ಕಾಲು ಮುಟ್ಟಿ ನಮಸ್ಕಾರ ಮಾಡುತ್ತಾಳೆ. ಡಾಕ್ಟರಿಗೆ ಬಹಳ ಸಂಕೋಚವೆನಿಸಿ ', ಯಾಕಮ್ಮ ನನಗೆ ನಮಸ್ಕಾರ ಮಾಡುತ್ತಿದ್ದೀಯ' ಎಂದು ಕೇಳಿದಾಗ ಅವಳ ತಾಯಿ ಹೇಳುತ್ತಾಳೆ ' ಡಾಕ್ಟರ್ ಸಾಹೇಬರೇ, ಅವತ್ತು ರಾತ್ರಿ ನನ್ನ ಗುಡಿಸಿಲಿಗೆ ಬಂದು ನನಗೆ ಹೆರಿಗೆ ಮಾಡಿಸಿದಿರಲ್ಲ, ನೆನಪಿದೆಯೇ. ಆಗ ಹುಟ್ಟಿದ ಹೆಣ್ಣು ಮಗುವೇ ಈ ಹುಡುಗಿ.  ಅಂದು ನೀವು ನನಗೆ ತೋರಿಸಿದ ದಯೆಯಿಂದಾಗಿ ನಾನು ಆ ಮಗುವನ್ನು ಬೆಳೆಸಿ ದೊಡ್ಡವಳನ್ನಾಗಿ ಮಾಡಿ ಹೆಚ್ಚಿನ ವಿದ್ಯಾಭ್ಯಾಸ ಕೂಡಾ ಕೊಡಿಸಲಿಕ್ಕಾಯಿತು. ನೀವು ನನ್ನ ಪಾಲಿನ ದೇವರಾಗಿ ಬಂದು ನನ್ನನ್ನು ಕಾಪಾಡಿದಿರಿ. ನನ್ನ ಬದುಕಿಗೊಂದು ದಾರಿಮಾಡಿಕೊಟ್ಟಿರಿ. ಅದಕ್ಕೇ ಅವಳಿಗೆ ನಿಮ್ಮ ಹೆಸರನ್ನೇ ಇಟ್ಟಿದ್ದೇನೆ, 'ಚಂದ್ರಾ' ಎಂದು"

ಎಂದು ಕಣ್ಣೊರೆಸಿಕೊಂಡಳು.  

ಚಂದ್ರಾ ಹೇಳಿದಳು "ಇಷ್ಟರಲ್ಲೇ ನಾವು ಬಡವರಿಗಾಗಿ ಉಚಿತ ಆಸ್ಪತ್ರೆಯನ್ನು ಪ್ರಾರಂಭಿಸುತ್ತಿದ್ದೇವೆ. ಅದಕ್ಕೂನಿಮ್ಮ ಹೆಸರೇ ಇಡುತ್ತೇವೆ. ದಯಮಾಡಿ ಅದರ ಉದ್ಘಾಟನೆಗೆ ನೀವೇ ಬರಬೇಕು ಸರ್". ಅವಳ ಮಾತು ಡಾಕ್ಟರ ಕಣ್ಣಲ್ಲೂ ನೀರು ತರಿಸಿತು. ಆಗಲಿ ಎಂದು ತಲೆಯಾಡಿಸಿದರು.

      ಆ ಡಾಕ್ಟರ್ ಯಾರು ಗೊತ್ತೇ?

ಇನ್ಯಾರೂ ಅಲ್ಲ ಡಾಕ್ಟರ್ ರಾಮಚಂದ್ರ ಕುಲಕರ್ಣಿಯವರು.

ಇನ್ಫೋಸಿಸ್ ಖ್ಯಾತಿಯ ಶ್ರೀಮತಿ ಸುಧಾಮೂರ್ತಿ ಯವರ ತಂದೆ. ಅವರೂ ತಂದೆಯ ಹೆಜ್ಜೆಗಳಲ್ಲೇ ಮುಂದುವರೆದು ಕರುಣಾಮಯಿ ಸಮಾಜಸೇವಕಿಯಾಗಿ ಸೇವೆ ಸಲ್ಲಿಸುತ್ತಿರುವ ವಿಷಯ ನಮಗೆಲ್ಲ ತಿಳಿದಿದೆ.


 ಸಿಹಿಜೀವಿ ವೆಂಕಟೇಶ್ವರ

ತುಮಕೂರು

19 ನವೆಂಬರ್ 2024

ಮುತ್ತಿನಂಥಹ ಮಾತು..


 

#ಮುತ್ತಿನಂಥಮಾತು..

ಸಂಬಂಧಗಳು ಯಾವಾಗಲೂ ಆಗಿರಬೇಕು ಶ್ರೀಗಂಧ|
ಹಲವಾರು ತುಂಡುಗಳಾದರೂ
ಬೀರುತ್ತಿರಬೇಕು  ಸುಗಂಧ||

ಸಿಹಿಜೀವಿ ವೆಂಕಟೇಶ್ವರ..
#sihijeeviVenkateshwara
#personaldevelopment #quotes #articlewriting #tumkur