06 ನವೆಂಬರ್ 2021

ಸಾವಯವ ಕೃಷಿ .ಪ್ರಬಂಧ


 ಸಾವಯವ ಕೃಷಿ 

ಪ್ರಬಂಧ


ಪೀಠಿಕೆ


 ನಗರೀಕರಣ ಮತ್ತು ಕೈಗಾರಿಕೀಕರಣದ ಪರಿಣಾಮವಾಗಿ  ಪರಿಸರ ಮಲಿನವಾಗಿರುವುದು ನಮಗೆ ತಿಳಿದೇ ಇದೆ .ಇದರ ಜೊತೆಯಲ್ಲಿ   ನಮ್ಮ ಬೆಳೆಯುತ್ತಿರುವ ಜನಸಂಖ್ಯೆಯ ಹಸಿವನ್ನು ಪೂರೈಸಲು, ಕೃತಕ ವಿಧಾನಗಳ ಮೂಲಕ ಬೆಳೆ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಉತ್ಪಾದನೆಯ ಸಮಯವನ್ನು ಕಡಿಮೆ ಮಾಡಲು ಹಾನಿಕಾರಕ ಕೃಷಿ ಪದ್ಧತಿಗಳನ್ನು ಬಳಸುತ್ತಿದ್ದೇವೆ . ಈ ವಿಧಾನಗಳಲ್ಲಿ ರಾಸಾಯನಿಕ ಗೊಬ್ಬರಗಳು, ಹಾನಿಕಾರಕ ಕೀಟನಾಶಕಗಳು, ಶಿಲೀಂಧ್ರನಾಶಕಗಳು, ಸಸ್ಯನಾಶಕಗಳು ಮತ್ತು ಕೀಟನಾಶಕಗಳ ಬಳಕೆಯನ್ನು ಬೆಳೆಗಳ ಉತ್ಪಾದನಾ ದರವನ್ನು ಸುಧಾರಿಸಲು ಬಳಸುತ್ತಿದ್ದೇವೆ. ಈ ತಂತ್ರಗಳು ರೈತರಿಗೆ ತಮ್ಮ ಇಳುವರಿಯನ್ನು ಸುಧಾರಿಸಲು ಸಹಾಯ ಮಾಡಬಹುದಾದರೂ, ಅವು ಪ್ರಕೃತಿಗೆ ವಿರುದ್ದವಾಗಿವೆ  ಮತ್ತು ನಾವು ಸೇವಿಸುವ ಆಹಾರವನ್ನು ವಿಷಯವನ್ನಾಗಿ ಪರಿವರ್ತಿಸುತ್ತಿವೆ. ಆದ್ದರಿಂದ ಮಾನವ ನಾಗರಿಕತೆಯ ಮೇಲೆ ಈ ದುರಂತವನ್ನು ತಡೆಗಟ್ಟಲು ಸಾವಯವ ಕೃಷಿಯು ಅಂತಿಮ ಪರಿಹಾರವಾಗಿದೆ.

ವಿಷಯ ವಿವರಣೆ.


 ಸಾವಯವ ಕೃಷಿಯು ಒಂದು ತಂತ್ರವಾಗಿದ್ದು, ಇದರಲ್ಲಿ ಗಾಳಿ, ನೀರು ಮತ್ತು ಮಣ್ಣಿನಂತಹ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಸುಸ್ಥಿರ ವಿಧಾನದ ಮೂಲಕ ಭೂಮಿಯ ಬಳಕೆ ಮಾಡಿಕೊಂಡು ಬೆಳೆಗಳನ್ನು ಬೆಳೆಸಲಾಗುತ್ತದೆ.  ಸಾವಯವ ಕೃಷಿ ಎಂದರೆ ಮಾನವ ನಿರ್ಮಿತ ರಾಸಾಯನಿಕಗಳನ್ನು ಬಳಸುವುದಿಲ್ಲ ಎಂದು ಅರ್ಥವಲ್ಲ.  ಅನೇಕ ಸಾವಯವ ಕೃಷಿ ವಿಧಾನಗಳಲ್ಲಿ, ಮಾನವ ನಿರ್ಮಿತ ರಸಗೊಬ್ಬರಗಳು ಮತ್ತು ಕೀಟನಾಶಕಗಳನ್ನು ಬೆಳೆ ಉತ್ಪಾದನೆಯನ್ನು ಸುಧಾರಿಸಲು ಬಳಸಲಾಗುವುದಿಲ್ಲ ಆದರೆ ಮಣ್ಣಿನ ಫಲವತ್ತತೆಯನ್ನು ಸುಧಾರಿಸಲು ಬಳಸಲಾಗುತ್ತದೆ.  ಅಂದರೆ ಈ ರಾಸಾಯನಿಕಗಳು ನೇರವಾಗಿ ಮಣ್ಣಿಗೆ ಹೋಗುತ್ತಿವೆಯೇ ಹೊರತು ನಾವು ಸೇವಿಸುವ ಆಹಾರಕ್ಕೆ ಅಲ್ಲ.  ಸಾವಯವ ಮತ್ತು ಅಜೈವಿಕ ಕೃಷಿಯ ನಡುವಿನ ವ್ಯತ್ಯಾಸವೆಂದರೆ ಸಾವಯವ ಕೃಷಿಯಲ್ಲಿ ರಾಸಾಯನಿಕಗಳು ಮಣ್ಣಿನ ಫಲವತ್ತತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಬೆಳೆಗಳಿಗೆ ತೊಂದರೆಯಾಗುವುದಿಲ್ಲ ಆದರೆ ಅಜೈವಿಕ ಕೃಷಿಯಲ್ಲಿ, ರಾಸಾಯನಿಕಗಳು ಮಣ್ಣಿನ ಫಲವತ್ತತೆಯನ್ನು ಕೆಡಿಸುತ್ತವೆ ಮತ್ತು ಕೃಷಿ ಉತ್ಪನ್ನಗಳಲ್ಲಿ ವಿಷ ಸಂಗ್ರಹವಾಗುತ್ತದೆ. ಅಂತಿಮವಾಗಿ ನಮ್ಮ ಆಹಾರ ಸರಪಳಿಗಳಿಗೆ ಕಂಟಕವಾಗುತ್ತದೆ.ಕೀಟನಾಶಕಗಳು ಮತ್ತು ಸಸ್ಯನಾಶಕಗಳಲ್ಲಿ ಇರುವ ಸತು, ಸೀಸ ಮತ್ತು ಮ್ಯಾಂಗನೀಸ್‌ನಂತಹ ಹಾನಿಕಾರಕ ರಾಸಾಯನಿಕಗಳನ್ನು ಮನುಷ್ಯರು ಸೇವಿಸುತ್ತಾರೆ, ಇದು ನಮ್ಮ ಆರೋಗ್ಯದ ಮೇಲೆ ಗಂಭೀರ ಅಪಾಯವನ್ನುಂಟುಮಾಡುತ್ತದೆ.


 ಸಾವಯವ ಕೃಷಿಯ ಕೆಲವು ಪ್ರಮುಖ ಪ್ರಯೋಜನಗಳೆಂದರೆ ಅಜೈವಿಕ ಕೃಷಿಗೆ ಹೋಲಿಸಿದರೆ ಆರೋಗ್ಯಕರ ಮತ್ತು ಗುಣಮಟ್ಟದ ಕೃಷಿ ಉತ್ಪಾದನೆಯು ತುಲನಾತ್ಮಕವಾಗಿ ಹೆಚ್ಚು.  ಅಲ್ಲದೆ, ಸಾವಯವ ಕೃಷಿಯು ಪರಿಸರ ಸ್ನೇಹಿಯಾಗಿದೆ ಏಕೆಂದರೆ ಇದು ಮಣ್ಣಿನ ಫಲವತ್ತತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಆ ಮೂಲಕ ಕೃಷಿ ಉದ್ದೇಶಗಳಿಗಾಗಿ ನಿರ್ದಿಷ್ಟ ಭೂಪ್ರದೇಶದ ಪುನರಾವರ್ತಿತ ಬಳಕೆ ಸಾಧ್ಯ.  ಇದು ಸ್ಥಳಾಂತರ ಕೃಷಿ ಪದ್ಧತಿಗಳಿಂದ ಉಂಟಾಗುವ ಅರಣ್ಯನಾಶವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.  ಸಾವಯವ ಕೃಷಿಯ ಇತರ ಪ್ರಯೋಜನಗಳೆಂದರೆ ಮಾರುಕಟ್ಟೆಯಲ್ಲಿ ಸಾವಯವ ಉತ್ಪನ್ನದ ಬೆಲೆ ಹೆಚ್ಚು ಅಂದರೆ ರೈತರಿಗೆ ಲಾಭದ ಪ್ರಮಾಣವೂ ಹೆಚ್ಚು.  ಈ ನಿರಂತರ ಕೃಷಿ ವಿಧಾನವು ರೈತರಿಗೆ ಬೆಳೆ ಇಳುವರಿಯಲ್ಲಿ ನಿರಂತರ ಮತ್ತು ನ್ಯಾಯಯುತ ಸಮತೋಲನವನ್ನು ಕಾಪಾಡಿಕೊಳ್ಳಲು ಮತ್ತು ನಮ್ಮ ಪರಿಸರವನ್ನು ಉಳಿಸಲು ಸಹಾಯ ಮಾಡುತ್ತದೆ.  ಸಾವಯವ ಕೃಷಿಯ ಮತ್ತೊಂದು ದೊಡ್ಡ ಪ್ರಯೋಜನವೆಂದರೆ ಅದು ಮಣ್ಣಿನ ಮಾಲಿನ್ಯವನ್ನು ತಡೆಯಲು ಸಹಾಯ ಮಾಡುತ್ತದೆ.


 ಸಾಂಪ್ರದಾಯಿಕ ಕೃಷಿ ಪದ್ಧತಿಗಳಿಗೆ ಹೋಲಿಸಿದರೆ, ಬೆಳೆಗಳ ಅವಶೇಷಗಳನ್ನು ಸುಡುವುದು, ಕೃಷಿ ಇಳುವರಿಯನ್ನು ಹೆಚ್ಚಿಸಲು ಹಾನಿಕಾರಕ ರಾಸಾಯನಿಕಗಳನ್ನು ಬಳಸುವುದು, ಮಣ್ಣಿನ ಮಾಲಿನ್ಯ ಮತ್ತು ತಳೀಯವಾಗಿ ಮಾರ್ಪಡಿಸಿದ ಜೈವಿಕ ತಂತ್ರಜ್ಞಾನದ ಬೆಳೆಗಳ ಅಭಿವೃದ್ಧಿಯನ್ನು ಸಾವಯವ ಕೃಷಿಯಲ್ಲಿ ಬಳಸಲಾಗುವುದಿಲ್ಲ.  ರಾಸಾಯನಿಕ ಗೊಬ್ಬರಗಳ ಬಳಕೆಯ ಮೇಲೆ ಸಂಪೂರ್ಣ ನಿಷೇಧವು ಮಣ್ಣಿನ ಹ್ಯೂಮಸ್ ಅಂಶ ಮತ್ತು ಸಾರಜನಕದ ಅಂಶವನ್ನು ಸುಧಾರಿಸಲು ಸಹಾಯ ಮಾಡುತ್ತದೆ.  ಅಲ್ಲದೆ, ದ್ವಿದಳ ಧಾನ್ಯಗಳನ್ನು ಅಂತರ ಬೆಳೆಯಾಗಿ ಮತ್ತು ಗೊಬ್ಬರದ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.



ಉಪಸಂಹಾರ 


 ಅರಣ್ಯನಾಶ, ಮಣ್ಣಿನ ಮಾಲಿನ್ಯ ಮತ್ತು ಜಲಮಾಲಿನ್ಯವನ್ನು ಒಳಗೊಂಡಿರುವ ಹಾನಿಕಾರಕ ಸಾಂಪ್ರದಾಯಿಕ ಕೃಷಿ ಪದ್ಧತಿಗಳಿಗೆ ಸಾವಯವ ಕೃಷಿಯು ಉತ್ತಮ ಪರ್ಯಾಯ ಕೃಷಿ ಪದ್ದತಿಯಾಗಿದೆ‌ .   ನಮ್ಮ ಕೃಷಿ-ಪರಿಸರ ವ್ಯವಸ್ಥೆ ಮತ್ತು ಜೀವವೈವಿಧ್ಯವನ್ನು ಉಳಿಸಲು ಸಹಾಯ ಮಾಡುವ ಸಾವಯವ ಕೃಷಿಯನ್ನು ಪ್ರಚಾರ ಮಾಡಲು ಸರ್ಕಾರಗಳು ಮತ್ತು ಅಂತರರಾಷ್ಟ್ರೀಯ ಸಮುದಾಯಗಳು ರೈತರಿಗೆ ಆರ್ಥಿಕವಾಗಿ ಸಹಾಯ ಮಾಡಬೇಕು.  ಅಲ್ಲದೆ, ಸಾವಯವ ಕೃಷಿಯನ್ನು ನಾವು ವಾಯು ಮಾಲಿನ್ಯವನ್ನು ಕಡಿಮೆ ಮಾಡುವ, ನೀರನ್ನು ಸಂರಕ್ಷಿಸುವ, ಮಣ್ಣಿನ ಸವೆತವನ್ನು ಕಡಿಮೆ ಮಾಡುವ, ಮಣ್ಣಿನ ಫಲವತ್ತತೆಯನ್ನು ಸುಧಾರಿಸುವ ಮತ್ತು ಆಹಾರದಲ್ಲಿ ವಿಷಕಾರಿ ರಾಸಾಯನಿಕಗಳು ಮತ್ತು ಕೃತಕ ಪದಾರ್ಥಗಳ ಬಳಕೆಯನ್ನು ಕಡಿಮೆ ಮಾಡುವ ಮಾರ್ಗವೆಂದು ಪರಿಗಣಿಸಬಹುದು.


 

ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು


 

05 ನವೆಂಬರ್ 2021

ಐ ಮಿಸ್ ಯೂ ಅಪ್ಪು. ಲೇಖನ


 


*ಐ ಮಿಸ್ ಯೂ ಅಪ್ಪು*

ನಾನು ಮೊದಲ ಬಾರಿ ಸಿನಿಮಾ ನೋಡಿದ್ದು ನಮ್ಮ ಶಿಕ್ಷಕರಾದ ತಿಪ್ಪೇಶಪ್ಪ ಮಾಸ್ಟರ್ ಜೊತೆ ಚಿತ್ರದುರ್ಗದ ರೂಪಾವಣಿ ಥಿಯೇಟರ್ ನಲ್ಲಿ. ಎರಡು ನಕ್ಷತ್ರಗಳು ಚಿತ್ರವನ್ನು ಥಿಯೇಟರ್ ನಲ್ಲಿ ನೋಡಿ ಬಂದು ನಮ್ಮ ಸ್ನೇಹಿತರಿಗೆ ಅದನ್ನು ರಸವತ್ತಾಗಿ ವರ್ಣನೆ ಮಾಡಿದ್ದೆ .ಜೊತೆಗೆ ಆ ಚಿತ್ರದ ಹಾಡುಗಳ ಪಲ್ಲವಿಯನ್ನು ಅದೇ ರಾಗದಲ್ಲಿ ಹಾಡುವುದನ್ನು ಕೇಳಿ ಕೆಲವರು ಖುಷಿಪಟ್ಟರೆ ಕೆಲವರು ಈ ಮೇಷ್ಟ್ರು ದುರ್ಗಕ್ಕೆ  ಬರೀ ಇವನನ್ನೇ ಕರ್ಕೊಂಡು ಹೋಗ್ತಾರೆ ಅಂತ ಉರ್ಕೊಳ್ಳೊರು ಹೆಚ್ಚಿದ್ದರು .ಆ ಚಿತ್ರದಲ್ಲಿ ಬರುವ" ನನ್ನ ಉಡುಪು ನಿನ್ನದು ನಿನ್ನ ಉಡುಪು ನನ್ನದು.....". ಹೌದು ಎಂದರೆ ಹೌದು...ಹೌದ....ಅಲ್ಲ ಎಂದರೆ ಅಲ್ಲ ...ಅಲ್ಲ..." ಎಂದು ಆಗಾಗ್ಗೆ ಗುನುಗುತ್ತಿದ್ದೆ.

ಮತ್ತೊಂದು ಭಾನುವಾರ ನಮ್ಮ ಶಿಕ್ಷಕರು ದುರ್ಗಕ್ಕೆ ಕರೆದುಕೊಂಡು ಹೋದಾಗ  "ಚಲಿಸುವ ಮೋಡಗಳು" ಚಿತ್ರ ತೋರಿಸಿದರು .ನನ್ನ ಗೆಳೆಯರು ನಾನು ಹಾಡುವ ರೀತಿಯನ್ನು ಮೆಚ್ಚಿದ್ದರಿಂದ ಈ ಬಾರಿ ಚಿತ್ರದ ಕಥೆ ಕಡೆಗೆ ಹೆಚ್ಚು ಗಮನ ಕೊಡದೇ ಬರಿ ಹಾಡುಗಳನ್ನು ಗಮನಿಸಿದ್ದೆ .
ಅದರ ಫಲವಾಗಿ  " ಚಂದಿರ ತಂದ ಹುಣ್ಣಿಮೆ ರಾತ್ರಿ.... ಗಾಳಿಯು ತಂದ ತಣ್ಣನೆ ರಾತ್ರಿ..... ಹಾಡನ್ನು ಥಿಯೇಟರ್ ನಿಂದ ಹೊರಬರುತ್ತಲೇ ಗುನುಗುತ್ತಿದ್ದೆ. ಬಸ್ ನಲ್ಲಿ ನಮ್ಮ ಊರಿಗೆ ಬರುವಾಗ " ಕಾಣದಂತೆ ಮಾಯವಾದನು...... ನಮ್ಮ ಶಿವ ಕೈಲಾಸ ಸೇರಿಕೊಂಡನು......" ಹಾಡನ್ನು ಸ್ವಲ್ಪ ಜೋರಾಗೆ ಹೇಳಿಕೊಂಡೆ  .ಬಸ್ ನ ಪ್ರಯಾಣಿಕರೊಬ್ಬರು ಹುಡುಗ ಚೆನ್ನಾಗಿ ಹಾಡ್ ಹೇಳ್ತಾನೆ ಇನ್ನೊಂದು ಸಲ ಹೇಳು ಎಂದರು .ನಾನು ನನ್ನ ಮಾಸ್ಟರ್ ಮುಖ ನೋಡಿದೆ ಅವರು ರಾಜ್ ಕುಮಾರ್ ಅಪ್ಪಟ ಅಭಿಮಾನಿ ಅದಕ್ಕೆ ಮತ್ತೊಮ್ಮೆ ಅಣ್ಣಾ ರವರ ಹಾಡು ಕೇಳಲು ಹಾಡು ಎಂಬಂತೆ ಸನ್ನೆ ಮಾಡಿದರು .ಬಸ್ ಚಿತ್ರಹಳ್ಳಿಗೆ ಬರುವವರೆಗೆ ನಾಲ್ಕು ಬಾರಿ ಅದೇ ಹಾಡನ್ನು ಕೇಳುಗರ ಒತ್ತಾಯದ ಮೇರೆಗೆ ಹಾಡಿದ್ದೆ ಅದರಲ್ಲಿ ಕೆಲವರು ಅಭಿಮಾನದಿಂದ ಐವತ್ತು ಪೈಸೆ ,ಮತ್ತು ಇಪ್ಪತ್ತೈದು ಪೈಸೆ ಕಾಯಿನ್  ನೀಡಿದರು!

ಬಸ್ ಇಳಿದು ನಮ್ಮ ಊರಿಗೆ ನಡೆದುಕೊಂಡು ಹೋಗುವಾಗ "ವೆಂಕಟೇಶ ಅಂತೂ ಹಾಡುಗಾರ ಆಗ್ ಬಿಟ್ಟೆಯಲ್ಲೊ.ವೆರಿ ಗುಡ್ ಇವತ್ತು ನಾವು ನೋಡಿದ್  ಪಿಚ್ಚರ್ ನಲ್ಲಿರೋ
ಇನ್ನೊಂದು ಹಾಡು ಹೇಳು ಅಂದರು.
ಜೇನಿನ ಹೊಳೆಯೊ....ಅಂದು ನಾನು ಹೇಳಿದೆ ಹಾಲಿನ ಹೊಳೆಯೊ...ಅಂತ ನಮ್ಮ ಮಾಸ್ಟರ್ ಧ್ವನಿ ಸೇರಿಸಿದರು. ಇಬ್ಬರೂ ಹಾಡುತ್ತಾ ನಡೆದಾಗ ನಮ್ಮ ಊರು ಬಂದದ್ದೇ ಗೊತ್ತಾಗಲಿಲ್ಲ ನಮ್ಮ ಹಾಡು ಕೇಳಿ ಗೊಲ್ಲರ ಚಿಕ್ಕಜ್ಜರ ನಾಯಿ ಬೊಗುಳಿದಾಗ ಹಾಡು ನಿಲ್ಲಿಸಿ ಮನೆ ಸೇರಿದೆವು.

ನಾನು ಹಾಡು ಹೇಳುವುದು ಬಹುತೇಕ ಹುಡುಗರಿಗೆ ಮತ್ತು ಸುಮಾರು ದೊಡ್ಡವರಿಗೆ ಪ್ರಚಾರ ಆಗಿತ್ತು .ನನಗರಿವಿಲ್ಲದೆ ನಾನಾಗ ನಮ್ಮ ಶಾಲೆಯ ಅನಧಿಕೃತವಾದ ಆಸ್ಥಾನ ಗಾಯಕನಾಗಿ ಹೊರಹೊಮ್ಮಿದ್ದೆ. ಶಾಲಾ ಸಮಾರಂಭದಲ್ಲಿ  , ಹೊರಸಂಚಾರ ಹೋದಾಗ ನನ್ನ ಹಾಡು ಮತ್ತು ಗಾಯನ ಖಾಯಂ ಅಗಿತ್ತು .ನನ್ನ ಜೊತೆಗೆ ನನ್ನ ಗೆಳೆಯ  ಆನಂದ ಸೇರಿಕೊಂಡು ಕೆಲವು ತೆಲುಗು ಹಾಡುಗಳನ್ನು ಹಾಡಿ ಎಲ್ಲರನ್ನೂ ರಂಜಿಸುತ್ತಿದ್ದೆವು .ಒಟ್ಟಿನಲ್ಲಿ ಆ ವಯಸಿನಲ್ಲಿ ನನ್ನದೇ ಪುಟ್ಟ ಆರ್ಕೆಸ್ಟ್ರಾ ತಂಡ ಸಿದ್ಧವಾಗಿತ್ತು. ಆದರೆ ವಾದ್ಯ ಪರಿಕರಗಳು ಇರಲಿಲ್ಲ!

ನನ್ನ ಗಾಯನ ಕೀರ್ತಿ ಹೇಗೋ ನಮ್ಮ ಮಾವನವರ ಊರಾದ ಯರಬಳ್ಳಿಗೂ ಹಬ್ಬಿತ್ತು . ಶಾಲೆಗೆ ನಮಗೆ  ಬೇಸಿಗೆ ರಜೆ ಇದ್ದಿದ್ದರಿಂದ  ಮಾರಮ್ಮನ ಜಾತ್ರೆಗೆ ಒಂದು ವಾರ ಮೊದಲೆ ಯರಬಳ್ಳಿ ಸೇರಿದ್ದೆ .ಅಲ್ಲಿ ನಮ್ಮ ಜಯರಾಂ ಮಾವನ ಮನೆ ಬಳಿ ಒಮ್ಮೆ ಕಾಣದಂತೆ ಮಾಯವಾದನು.....ಹಾಡು ಹಾಡಿದೆ. ಅಕ್ಕ ಪಕ್ಕದ ಮನೆಯವರು ಬಂದು ಕೇಳಿ ಖುಷಿ ಪಟ್ಟು ಕೆಲವರು ಐವತ್ತು ಪೈಸೆ ಕೆಲವರು ಒಂದು ರುಪಾಯಿ ಬಹುಮಾನ ನೀಡಿದರು. ಇದೇ ರೀತಿಯಲ್ಲಿ ಅಲ್ಲಲ್ಲಿ ಜನರ ಅಪೇಕ್ಷೆಯ ಮೇರೆಗೆ ಹಾಡಿ ಜಾತ್ರೆಯ ವೇಳೆಗೆ ನನ್ನ ಜೇಬಿನಲ್ಲಿ ಹತ್ತು ರೂಪಾಯಿ ಸಂಗ್ರಹವಾಗಿತ್ತು ಅಮ್ಮನಿಗೆ ಈ ವಿಷಯ ಹೇಳಿ ದುಡ್ಡು ತೋರಿಸಿದೆ. ಅಮ್ಮ ಒಳಗೊಳಗೇ ಖುಷಿ ಪಟ್ಟರೂ" "ಬರೇ ಪದಗಿದ ಹೇಳ್ಕೆಂಡು ತಿರಾಗದ್ ಬಿಟ್ಟು ಓದಾ ಕಡೆ ಮನಸ್ ಕೊಡು"  ಎಂದು ಗದರಿದರು.

ಇತ್ತೀಚಿಗೆ ಅಪ್ಪುರವರು ನಮ್ಮನ್ನು ಅಗಲಿದ ಸಮಯದಲ್ಲಿ ಅವರ ಕಾಣದಂತೆ ಮಾಯವಾದನು ಹಾಡು ಮತ್ತು ನಾನು ಹಾಡಿದ ಕಾಣದಂತೆ ಮಾಯವಾದನು ಹಾಡು ಯಾಕೋ ಬಹಳ ನೆನಪಾಯಿತು ಮತ್ತು ದೊಡ್ಮನೆ ಹುಡುಗನ ಅಕಾಲಿಕ ಅಗಲಿಕೆ ಬಹಳ ಕಾಡಿತು ಮತ್ತು ಕಾಡುತ್ತಿದೆ.ಐ ಮಿಸ್ ಯು ಅಪ್ಪು.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
990925529

ರೈತರ ಆತ್ಮಹತ್ಯೆ ನಿಲ್ಲಬೇಕಿದೆ. ಲೇಖನ

 


ರೈತರ ಆತ್ಮಹತ್ಯೆಗೆ ಕಾರಣಗಳು ಮತ್ತು ಪರಿಹಾರೋಪಾಯುಗಳು.  ಪ್ರಬಂಧ

ಪೀಠಿಕೆ

ಪ್ರತಿ ವರ್ಷ, ಭಾರತದಲ್ಲಿ 12000 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಭಾರತದಲ್ಲಿ ಅನ್ನದಾತನ ಆತ್ಮಹತ್ಯೆ ಮಾಮೂಲಿ ಎಂಬಂತೆ ಕಾಣುತ್ತಿದೆ. 
ಭಾರತವು ಕೃಷಿ  ಪ್ರಧಾನವಾದ ಆರ್ಥಿಕತೆಯಾಗಿದ್ದು, ಜನಸಂಖ್ಯೆಯ 70% ರಷ್ಟು ಜನರು ನೇರವಾಗಿ ಅಥವಾ ಪರೋಕ್ಷವಾಗಿ ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿದ್ದಾರೆ.  ಭಾರತದಲ್ಲಿ ದ್ವಿತೀಯ ಮತ್ತು ತೃತೀಯ ವಲಯಗಳ ವೇಗದ ಬೆಳವಣಿಗೆಯ ಹೊರತಾಗಿಯೂ, ಬಹುಪಾಲು ಜನರು ತಮ್ಮ ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿದ್ದಾರೆ.  ಹಸಿರು ಕ್ರಾಂತಿಯು ದಿನನಿತ್ಯದ ಬಳಕೆಗಾಗಿ ಆಹಾರ ಧಾನ್ಯ ಉತ್ಪಾದನೆಯಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಿದೆ.  ಇಂದು, ಹೆಚ್ಚು ಹೆಚ್ಚು ರೈತರು ಕೃಷಿಗಾಗಿ ಆಧುನಿಕ ವಿಧಾನಗಳು ಮತ್ತು ಸಾಧನಗಳನ್ನು ಬಳಸಿ ಕೃಷಿ ಮಾಡುತ್ತಿದ್ದಾರೆ. ಆದರೂ ರೈತರ ಆತ್ಮಹತ್ಯೆಯ ಪ್ರಕರಣಗಳು ಹೆಚ್ಚಾಗುತ್ತಿರುವುದು ಬೇಸರದ ಸಂಗತಿಯಾಗಿದೆ.

ವಿಷಯ ವಿವರಣೆ.

ದೇಶದ ಏಳು ರಾಜ್ಯಗಳು ಕೃಷಿ ವಲಯದ ಆತ್ಮಹತ್ಯೆಗಳಲ್ಲಿ 87.5% ಪಾಲನ್ನು ಹೊಂದಿವೆ.  ಅವುಗಳೆಂದರೆ ಮಹಾರಾಷ್ಟ್ರ, ತೆಲಂಗಾಣ, ಕರ್ನಾಟಕ, ಛತ್ತೀಸ್ಗಢ, ಮಧ್ಯಪ್ರದೇಶ, ತಮಿಳುನಾಡು ಮತ್ತು ಆಂಧ್ರಪ್ರದೇಶ.  ಈ ರಾಜ್ಯಗಳಲ್ಲಿ ಮಹಾರಾಷ್ಟ್ರವು ಅತಿ ಹೆಚ್ಚು ಆತ್ಮಹತ್ಯೆಯ ಪ್ರಕರಣಗಳು ದಾಖಲಾಗಿವೆ.
ಹಸಿರು ಕ್ರಾಂತಿಯಿಂದ ಗರಿಷ್ಠ ಲಾಭ ಪಡೆದ ಪಂಜಾಬ್ ರಾಜ್ಯವೂ ರೈತರ ಆತ್ಮಹತ್ಯೆಯ ಪಾಲು ಹೊಂದಿದೆ ಎಂಬುದು ದುರದೃಷ್ಟಕರ ಸಂಗತಿಯಾಗಿದೆ. 1995 ರಿಂದ 2015 ರವರೆಗೆ, ಪಂಜಾಬ್ನಲ್ಲಿ 4687 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಮಾನ್ಸಾ ಜಿಲ್ಲೆ  ಒಂದರಲ್ಲೇ  1334 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದವು.

ಭಾರತದಲ್ಲಿ ರೈತರ ಆತ್ಮಹತ್ಯೆಗೆ ಕಾರಣಗಳು.

೧ ಕೃಷಿಯ ಉತ್ಪಾದನಾ  ವೆಚ್ಚದಲ್ಲಿ ಏರಿಕೆಯಾಗಿದೆ.

ಬೀಜಗಳು ಮತ್ತು ರಸಗೊಬ್ಬರಗಳು ಮತ್ತು ಕೀಟನಾಶಕಗಳಂತಹ ರಾಸಾಯನಿಕಗಳ ಬೆಲೆಗಳು ಹೆಚ್ಚಾಗಿವೆ ಕೃಷಿ ಉಪಕರಣಗಳ ವೆಚ್ಚ - ಟ್ರಾಕ್ಟರ್ಗಳು, ಪಂಪ್ಗಳು ಮುಂತಾದ ಕೃಷಿ ಉಪಕರಣಗಳ  ಬೆಲೆಗಳು ಏರಿವೆ.ಕಾರ್ಮಿಕ ವೆಚ್ಚಗಳು  ಪ್ರಾಣಿಗಳು ಮತ್ತು ಕಾರ್ಮಿಕರನ್ನು ನೇಮಿಸಿಕೊಳ್ಳುವುದು ಸಹ ಹೆಚ್ಚು ದುಬಾರಿಯಾಗುತ್ತಿದೆ.  ಇದರ ಜೊತೆಯಲ್ಲಿ ಇತ್ತೀಚಿನ ದಿನಗಳಲ್ಲಿ ಡೀಸೆಲ್ ಬೆಲೆ ಗಗನಮುಖಿಯಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

೨ ಸಾಲದ ತೊಂದರೆ .
"ಭಾರತದ ರೈತ ಸಾಲದಲ್ಲಿ ಹುಟ್ಟಿ ಸಾಲದಲ್ಲಿ ಬೆಳೆದು ಸಾಲದಲ್ಲೇ ಸಾಯುತ್ತಾನೆ " ಎಂಬ ಒ.ಹೆಚ್ ಕೆ ಸ್ಟೇಟ್ಸ್ ರವರ ಮಾತು ಇಂದಿಗೂ ನಿಜವಾಗಿದೆಯೇನು ಎನಿಸದಿರದು.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಪ್ರಕಾರ, 2015 ರಲ್ಲಿ  3000 ರೈತರ ಆತ್ಮಹತ್ಯೆಗಳಲ್ಲಿ 2474  ಸಾಲವನ್ನು ತೀರಸಲಾರದೆ ಮಾಡಿಕೊಂಡ ಪ್ರಕರಣಗಳು ಎಂದು ತಿಳಿದು ಬಂದಿದೆ.  ಬ್ಯೂರೋದ ದತ್ತಾಂಶವು ರೈತರ ಆತ್ಮಹತ್ಯೆ ಮತ್ತು ಸಾಲದ ನಡುವಿನ ಬಲವಾದ ಸಂಬಂಧವನ್ನು ತೋರಿಸುತ್ತದೆ.  ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಈ ಎರಡು ರಾಜ್ಯಗಳು ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮಾಣವೂ ಹೆಚ್ಚು.

೩ ನೇರ ಮಾರುಕಟ್ಟೆ ಏಕೀಕರಣದ ಕೊರತೆ .
ಇ-ನ್ಯಾಷನಲ್ ಅಗ್ರಿಕಲ್ಚರಲ್ ಮಾರ್ಕೆಟ್ (eNAM) ನಂತಹ ನವೀನ ಸರ್ಕಾರಿ ಯೋಜನೆಗಳ ಹೊರತಾಗಿಯೂ, ಈ ವಲಯದಲ್ಲಿ ಮಧ್ಯವರ್ತಿಗಳನ್ನು ತೆಗೆದುಹಾಕುವುದು ಹೆಚ್ಚು ಕಷ್ಟಕರವಾಗಿದೆ. ಇದು ರೈತರ ಶೋಷಣೆ ಮುಂದುವರೆಯುವಂತೆ ಮಾಡಿದೆ.

೪ ಅರಿವಿನ ಕೊರತೆ 
ರೈತರಿಗೆ ಸಹಾಯ ಮಾಡುವ ಉದ್ದೇಶದಿಂದ ಯೋಜನೆಗಳು ಮತ್ತು ನೀತಿಗಳಿದ್ದರೂ, ಭಾರತದಲ್ಲಿ ಅನಕ್ಷರತೆ ಮತ್ತು ಡಿಜಿಟಲ್ ಸಾಕ್ಷರತೆಯ ಕೊರತೆಯಿಂದ   ಬಹಳಷ್ಟು ರೈತರನ್ನು, ಈ ಯೋಜನೆಗಳು ತಲುಪುವುದಿಲ್ಲ  ಅವರು ಸರ್ಕಾರದಿಂದ ನೀಡಲಾಗುವ ಸವಲತ್ತುಗಳನ್ನು ಹೇಗೆ ಪಡೆಯುವುದು ಎಂದು ತಿಳಿಯದೆ ಬಳಲುತ್ತಿದ್ದಾರೆ.

೫ ನೀರಿನ ಬಿಕ್ಕಟ್ಟು 
ಆತ್ಮಹತ್ಯೆಗಳ ಅಂಕಿಅಂಶಗಳನ್ನು ಗಮನಿಸಿದರೆ ಮಹಾರಾಷ್ಟ್ರ ಮತ್ತು ಕರ್ನಾಟಕದಂತಹ ನೀರಿನ ಕೊರತೆಯ ಪ್ರದೇಶಗಳಲ್ಲಿ ಆತ್ಮಹತ್ಯೆಗಳ ಕೇಂದ್ರೀಕರಣವಿದೆ ಎಂದು ತೋರಿಸುತ್ತದೆ.  ಮುಂಗಾರು ವಿಫಲವಾಗುತ್ತಿರುವುದು ರೈತರ ಮೊಗದಲ್ಲಿ ಮಂದಹಾಸ ಮರೆಯಾಗಿಸಿದೆ. ಅಂತಾರಾಜ್ಯ ಜಲವಿವಾದಗಳು ರೈತರನ್ನು ಅನಗತ್ಯ ಸಂಕಷ್ಟಕ್ಕೆ ದೂಡುತ್ತಿವೆ.  ನೀರಿನ ಕೊರತೆಯು ಉತ್ಪಾದನೆಯನ್ನು ಬೇಡಿಕೆಗೆ ತಕ್ಕಂತೆ ಪೂರೈಸುವಲ್ಲಿ ವಿಫಲವಾಗಿದೆ.

೬ ಹವಾಮಾನ ಬದಲಾವಣೆ.  ಹವಾಮಾನ ಬದಲಾವಣೆಯು ರೈತರು ಮತ್ತು ಕೃಷಿಯ ಮೇಲೂ ಪರಿಣಾಮ ಬೀರುತ್ತಿದೆ.  ಅನಿಶ್ಚಿತ ಮಾನ್ಸೂನ್ ವ್ಯವಸ್ಥೆಗಳು, ಹಠಾತ್ ಪ್ರವಾಹ ಇತ್ಯಾದಿಗಳು ಬೆಳೆ ನಷ್ಟಕ್ಕೆ ಕಾರಣವಾಗಿವೆ.  ಅಕಾಲಿಕ  ಮಾನ್ಸೂನ್ ನಿಯಮಿತವಾಗಿ ಉತ್ಪಾದನೆಯ ಕೊರತೆಯನ್ನು ಉಂಟುಮಾಡುತ್ತದೆ.

ರೈತರ ಆತ್ಮಹತ್ಯೆ ತಡೆಯಲು ಕೈಗೊಳ್ಳಬೇಕಾದ ಕ್ರಮಗಳು .

ಸರ್ಕಾರಗಳ ಆರ್ಥಿಕ ನೀತಿಗಳು ಗ್ರಾಹಕರ ಪರವಾಗಿದ್ದು, ಬೆಲೆ ಏರಿಕೆಯ ಸಂದರ್ಭದಲ್ಲಿ ರೈತರ ಉತ್ಪನ್ನವನ್ನು ಅಗತ್ಯ ವಸ್ತುಗಳ ಪಟ್ಟಿಯ ಅಡಿಯಲ್ಲಿ ತರುವುದು ಮತ್ತು ಬೆಲೆ ನಿಯಂತ್ರಣಕ್ಕೆ ತರಲು  ರೈತರ ಉತ್ಪನ್ನಗಳ ಬೆಲೆ ಕಡಿತ ಮಾಡುವರು ಇದರ ಬದಲಾಗಿ ರೈತರಿಗೆ ನಷ್ಟ ಆಗದ ಹಾಗೆ ಬೆಲೆ ನೀತಿ ರೂಪಿಸಬೇಕಿದೆ.
ಕೆಲವೊಮ್ಮೆ  ಸರ್ಕಾರಗಳು ಸಾಲ ಮನ್ನಾ ಮಾಡಿವೆ.ಸಾಲ ಮನ್ನಾಕ್ಕಿಂತ ಹೆಚ್ಚಾಗಿ, ಪ್ರಾಥಮಿಕ ವಲಯವನ್ನು ಸುಧಾರಿಸಲು ಮರುಹೂಡಿಕೆ ಮತ್ತು ಪುನರ್ರಚನಾ ಕ್ರಮಗಳತ್ತ ಸರ್ಕಾರ ಗಮನಹರಿಸಬೇಕು.
ಪರಿಣಾಮಕಾರಿ ನೀರು ನಿರ್ವಹಣಾ ತಂತ್ರಗಳನ್ನು ಬಳಸುವುದು.  ಬೆಳೆಹಾನಿ ತಡೆಗಟ್ಟಲು ಸರಕಾರ ಗಮನಹರಿಸಬೇಕು.ಪ್ರತಿ ರೈತರಿಗೆ, ವಿಶೇಷವಾಗಿ ಬಡ ರೈತರಿಗೆ ಸಾಂಸ್ಥಿಕ ಹಣಕಾಸು ಲಭ್ಯವಾಗುವಂತೆ ಮಾಡುವುದು.  ಈ ನಿಟ್ಟಿನಲ್ಲಿ  ಭ್ರಷ್ಟಾಚಾರ ಕಡಿಮೆ ಮಾಡಬೇಕು.
ಕೃಷಿಯ ಆರ್ಥಿಕ ವಿಧಾನಗಳ ಬಗ್ಗೆ ರೈತರಿಗೆ ಪರಿಣಾಮಕಾರಿ ಮತ್ತು ಸಮಯೋಚಿತ ಸಮಾಲೋಚನೆ ನೀಡಬೇಕು.ಕೃಷಿಯಲ್ಲಿನ ತಾಂತ್ರಿಕ ಪ್ರಗತಿ ಬಡ ರೈತರಿಗೂ ದೊರೆಯಬೇಕು.ಸರ್ಕಾರವು ಸಣ್ಣ ರೈತರ ಜಮೀನುಗಳನ್ನು ಒಟ್ಟುಗೂಡಿಸಿ ಆರ್ಥಿಕವಾಗಿ ಕೃಷಿಯೋಗ್ಯ ಭೂಮಿಯಾಗಿ ಪರಿವರ್ತಿಸಲು ಪ್ರಯತ್ನಿಸಬೇಕು. ಸಣ್ಣ ರೈತರಿಗೆ ಪರ್ಯಾಯ ಆದಾಯದ ಮೂಲಗಳ ಬಗ್ಗೆ ಸಲಹೆ ನೀಡಬೇಕು ಮತ್ತು ಅದಕ್ಕಾಗಿ ತರಬೇತಿ ನೀಡಬೇಕು.
  ಸರ್ಕಾರವು ರೈತರೊಂದಿಗೆ  ಪಾಲುದಾರರೊಂದಿಗೆ ಸಮಾಲೋಚಿಸಿ, ರೈತರ ಸಾಲವನ್ನು ಕಡಿಮೆ ಮಾಡಲು, ಬೆಳೆ ಇಳುವರಿಯನ್ನು ಸುಧಾರಿಸಲು, ನೀರಿನ ಸಂಪನ್ಮೂಲಗಳನ್ನು ಸಮರ್ಥವಾಗಿ ನಿರ್ವಹಿಸಲು ಮತ್ತು ರೈತರಿಗೆ ಪರ್ಯಾಯ ಆದಾಯದ ಮೂಲಗಳನ್ನು ಮಾಡಲು ಪರಿಣಾಮಕಾರಿ ಮತ್ತು ದೀರ್ಘಕಾಲೀನ ಕ್ರಮಗಳನ್ನು ಕೈಗೊಳ್ಳಬೇಕಿದೆ.

ಉಪಸಂಹಾರ.

ನಮ್ಮ ದೇಶದ ನೇಗಿಲಯೋಗಿಯು ಇಂದು ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸಲು ಸರ್ಕಾರಗಳು ಪ್ರಾಮಾಣಿಕ ಪ್ರಯತ್ನ ಮಾಡಿದರೆ, ಸಮುದಾಯದ ಸಕಾಲಿಕ ಬೆಂಬಲ ದೊರತರೆ, ಅನ್ನದಾತ ಎದುರಿಸುವ ಬಹುತೇಕ ಸಮಸ್ಯೆಗಳು ದೂರಾಗಿ ಅವರು ಎಲ್ಲರಂತೆ ಗೌರವಯುತವಾದ ಜೀವನ ನಡೆಸುವುದರಲ್ಲಿ ಸಂದೇಹವಿಲ್ಲ.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ. ತುಮಕೂರು
9900925529


04 ನವೆಂಬರ್ 2021

ಎರಡು ಲಕ್ಷ..! ಮತ್ತೂ ಓದುಗರು...!


 


ಎರಡು ಲಕ್ಷ.....! ಮತ್ತೂ ಓದುಗರು!

ಮೊದಲಿಗೆ ನನ್ನ ಎಲ್ಲಾ ಓದುಗ ಬಂಧುಗಳಿಗೆ ಇದೋ ನನ್ನ ನಮನಗಳು .

ಇಂದು ದೀಪಾವಳಿಯ ದೀಪಗಳ ಜೊತೆಗೆ 200000 ಓದುಗರ ಸಂಭ್ರಮದ ಪಟಾಕಿ ನನ್ನ ಮನದಲ್ಲಿ ಸಿಡಿಯುತ್ತಿದೆ.ಇನ್ನೇನು ಬೇಕು? ಈ ಹಬ್ಬ ನನ್ನ ಜೀವನದಲ್ಲಿ ಮರೆಯಲಾಗದ ಹಬ್ಬ.

2017 ನೇ ಇಸವಿಯಲ್ಲಿ ಯೂಟ್ಯೂಬ್ ‌ನೋಡಿಕೊಂಡು ಏಕಲವ್ಯ ನಂತೆ ಆರಂಭಮಾಡಿದ ಶ್ರೀದೇವಿತನಯ.ಬ್ಲಾಗ್ಸ್ಪಾಟ್.ಕಾಮ್ sridevitanya.blogspot.com
ಇಂದು ಪ್ರಪಂಚದಲ್ಲಿ ಎರಡು ಲಕ್ಷ ಓದುಗರ ತಲುಪಿರುವುದು ಬಹಳ ಸಂತಸ ತಂದಿದೆ. ಈ ಸಂತಸಕ್ಕೆ ಕಾರಣ ನೀವು ಮತ್ತು ನೀವು .
ಮತ್ತೊಮ್ಮೆ ನಿಮ್ಮೆಲ್ಲರಿಗೂ ಸಾಷ್ಟಾಂಗ ನಮಸ್ಕಾರಗಳು .

03 ನವೆಂಬರ್ 2021

ನನ್ನ ಬಾಲ್ಯದ ತಿಂಡಿ ತಿನಿಸುಗಳು.


 


 



ಬಾಲ್ಯದ. ತಿಂಡಿ ತಿನಿಸುಗಳು.. 


ಬಾಲ್ಯಕ್ಕೂ ತಿಂಡಿ ತಿನಿಸುಗಳಿಗೂ ಅವಿನಾಭಾವ ಸಂಬಂಧವಿದೆ. ನಾನು ಬಾಲ್ಯದಲ್ಲಿ ಅಂಗಡಿಗಳಲ್ಲಿ ತಿಂಡಿ ತಿನಿಸುಗಳನ್ನು ತಿಂದಿದ್ದು ಕಡಿಮೆ. ಪರಿಸರದಲ್ಲಿ ಹೊಲದಲ್ಲಿ ,ತೋಟದಲ್ಲಿ ಬೆಳೆಯುವ ತಿನಿಸುಗಳನ್ನು ತಿಂದದ್ದೇ ಹೆಚ್ಚು.


ನಮ್ಮೂರಿನ ಅಂದಿನ ಎರಡು ಅಂಗಡಿಗಳಾದ  ಐಯ್ಯನೋರ ಅಂಗಡಿ ಮತ್ತು ಗುಂಡಜ್ಜನವರ ಅಂಗಡಿಗಳಲ್ಲಿ ಆಗಾಗ್ಗೆ ಕೆಲವು ತಿನಿಸುಗಳನ್ನು ಪಡೆದು ತಿನ್ನುತ್ತಿದ್ದೆ ಅಮ್ಮನಿಂದ ಕಾಡಿ ಬೇಡಿ ಹಣ ಪಡೆದು ಹತ್ತು ಪೈಸೆ ಗಳನ್ನು ಪಡೆದು ಹತ್ತು ಸೊಂಡಿಗೆ (ಬೋಟಿ) ಪಡೆದು ಕೈಯ ಹತ್ತು ಬೆರಳುಗಳಿಗೆ ಸಿಕ್ಕಿಸಿಕೊಂಡು ಒಂದೊಂದೇ ಬೆರಳ ಕಚ್ಚಿ ತಿನ್ನುತ್ತಾ ಆನಂದಿಸುತ್ತಿದ್ದೆ. ಕೆಲವೊಮ್ಮೆ ನಿಂಬೇ ಹುಳಿ ಪೆಪ್ಪರ್ ಮೆಂಟ್ ಚಿಕ್ಕ ಪೆಪ್ಪರ್ ಮೆಂಟ್ ಗಳನ್ನು ಕೊಂಡು ಜೇಬಿನಲ್ಲಿ ಹಾಕಿಕೊಂಡು ಒಂದೊಂದೇ ತಿನ್ನುತ್ತಿದ್ದೆ. ಇನ್ನೂ ಕೆಲವೊಮ್ಮೆ ಗಿರಗಿಟ್ಲೇ ಕೊಂಡು ಅದರೊಂದಿಗೆ ಇರುವ ದಾರವನ್ನು ನನ್ನ ಎರಡೂ ಕೈಗಳ ಬೆರಳಿಗೆ ಸಿಕ್ಕಿಸಿಕೊಂಡು ಗಿರಗಿಟ್ಲೇ ಆಡಿಸಿ ದಾರ ಕಿತ್ತು ಬಂದಾಗ ಗಿರಗಿಟ್ಲೇ ನೇರವಾಗಿ ಬಾಯಿಗೆ ಸೇರುತ್ತಿತ್ತು. ಶುಂಠಿ ಪೇಪರ್ ನಂತಹ ರುಚಿ ಇರುವ ಗಿರಗಿಟ್ಲೇ ಒಂಥರಾ ರುಚಿ ಈಗಲೂ ನೆನಪಲ್ಲಿದೆ.


  ನಾನು ನನ್ನ ಬಾಲ್ಯದಲ್ಲಿ ಅಂಗಡಿಯ ತಿನಿಸುಗಳಿಗಿಂತ ಪರಿಸರದಲ್ಲಿ ಬೆಳೆದ ತಿನಿಸು ತಿಂದದ್ದೇ ಹೆಚ್ಚು. ಮಳೆಗಾಲದಲ್ಲಿ ನಮ್ಮೂರ ಸುತ್ತಲೂ ಹಸಿರೋ ಹಸಿರು ರಾಗಿ,ಜೋಳ, ನವಣೆ ಸಜ್ಜೆ ಹೊಲಗಳು ನಮ್ಮ ಮನೆಯಿಂದ ನೂರಾರು ಹೆಜ್ಜೆಗಳನ್ನು ದಾಟಿದರೆ ಸಿಗುತ್ತಿದ್ದವು .ಈ ಹೊಲಗಳಲ್ಲಿ ಹೆಗಲಿಗೊಂದು ಚೀಲ ತಗುಲಾಕಿಕೊಂಡು ನಾನು ಮತ್ತು ನಮ್ಮ ಪಕ್ಕದ ಮನೆಯ ಸಣ್ಣಪ್ಪನವರ ಮಗ ಸೀನ ಗೊರ್ಜಿ ಸೊಪ್ಪ, ಕಿರ್ಕ್ಸಾಲೆ ಸೊಪ್ಪು, ಕೋಲನ್ನೇ ಸೊಪ್ಪು, ಪುಂಡಿ ಸೊಪ್ಪು, ಇನ್ನೂ  ಯಾವಾವುದೋ ಬೆರಕೆ  ಸೊಪ್ಪು ತಂದು ನನ್ನ ಅಮ್ಮನಿಗೆ ಕೊಟ್ಟರೆ ಅಮ್ಮ ಸಂಜೆಗೆ ಕುಕ್ಸೆಪ್ಪು ಎಂಬ ಸಾರು ಮಾಡುತ್ತಿದ್ದರು ಅದರ ಜೊತೆಗೆ ಒಂದು ಬಿಸಿಮುದ್ದೆ ಊಟ ಮಾಡುವ ಸ್ವಾದವನ್ನು ಸವಿದೇ ಅನುಭವಿಸುತ್ತಿದ್ದೆ.


ರಾಗಿಯು ಬೆಳೆಯ ತೆನೆ  ಸ್ವಲ್ಪ ಬೆಳಸೆ ಆದ ತಕ್ಷಣ ಯಾರ ಹೊಲವಾದರೂ ಸರಿ ನುಗ್ಗಿ  ಎಂಟರಿಂದ ಹತ್ತು ರಾಗಿ ತೆನೆ ಕಿತ್ತು ತಂದು ಅದರಿಂದ ಕಾಳು ಬೇರ್ಪಡಿಸಿ, ಅದಕ್ಕೆ ಸ್ವಲ್ಪ ಉಪ್ಪು, ಹಸಿಮೆಣಸಿನಕಾಯಿ, ಬೆಳ್ಳುಳ್ಳಿ ಸೇರಿಸಿ, ಟವಲ್ ನಲ್ಲಿ ಹಾಕಿ ಗಂಟುಕಟ್ಟಿ  ಮಡಿಚಿ ಕೈ ಮುಷ್ಟಿಯಲ್ಲಿ ಚೆನ್ನಾಗಿ ಗುದ್ದಿ ಬಿಚ್ಚಿ ನೋಡಿದರೆ " ಗುದ್ ಬೆಳಸೆ" ರೆಡಿ .ಗೆಳೆಯರೆಲ್ಲ ಸೇರಿ ತಿನ್ನುತ್ತಾ ಕುಳಿತರೆ ಅದರ ಮಜಾನೆ ಬೇರೆ.


ರಜಾ ದಿನಗಳಲ್ಲಿ ದನ ಕಾಯಲು ಹೋಗುತ್ತಿದ್ದ ನಾವು ದನ ಮೇಯಲು ಬಿಟ್ಟು ಬಿಳಿಜೋಳದ  ತೆನೆಗಳನ್ನು ಮುರಿದು ತೆನೆಯಿಂದ  ಜೋಳದ ಕಾಳು ಬೇರ್ಪಡಿಸಿ ಅಲ್ಲೆ ಮೂರು ಕಲ್ಲಿನ  ಗುಂಡುಗಳಿಂದ  ಒಲೆ  ಮಾಡಿ ಒಡೆದ ಮಡಿಕೆಯಲ್ಲಿ ಸ್ವಲ್ಪ ನೀರು ಹಾಕಿ ಅದರಲ್ಲಿ ಬಿಡಿಸಿದ ಹಸಿ ಜೋಳದ ಕಾಳು ಹಾಕಿ ಅಲ್ಲೇ ಸಿಗುವ ಸೌದೆಗಳಿಂದ ಬೇಯಿಸಿದಾಗ " ಜೋಳದ ಗುಗ್ಗುರಿ " ಸಿದ್ದವಾಗುತ್ತಿತ್ತು. ನಮ್ಮ ದನಗಳು ಹುಲ್ಲನ್ನು ಮೇಯುತ್ತಿದ್ದರೆ ನಾವು ಗುಗ್ಗರಿ ತಿನ್ನುತ್ತಾ ಅವುಗಳಿಗೆ ಕಂಪನಿ ನೀಡುತ್ತಿದ್ದೆವು.

ಇದೇ ತರಹ ಅವರೇ ಕಾಯಿ ಸೀಸನ್ ನಲ್ಲಿ ಹೊಲದಲ್ಲೇ ಹಸಿ ಅವರೆ ಕಾಯಿ ಬೇಸಿ ತಿಂದು ,ರಾತ್ರಿ ಮಲಗಿದಾಗ ಅಪಾನ ವಾಯು ಹೆಚ್ಚಾದಾಗ ಅಮ್ಮ " ಯಾರ್ ಹೊಲದ್ದು ಅವರೇ ಕಾಯಿನೋ ಇದು ಗಬ್ಬು ನಾತ"  ಅಂದರೂ ಕೇಳಿದರೂ ಕೇಳದಂತೆ ದುಪ್ಪಡಿ ಗುಬಾರಾಕಿಕೊಂಡು ಮಲಗುತ್ತಿದ್ದೆ.


ಕೊಟಗೇಣಿಯಿಂದ ಉಪ್ಪೇರಿಗೇನಹಳ್ಳಿಗೆ ಕಾಲು ದಾರಿಯಲ್ಲಿ ನಡೆದು ಶಾಲೆಗೆ ಹೋಗುವಾಗ ನಾನು ನನ್ನ ಗೆಳೆಯರು ದಿನವೂ ಗೊಲ್ಲರ ಹಳ್ಳಿಯ ಅಣ್ಣಪ್ಪನವರ ಹೊಲದ ಸಜ್ಜೆ ತೆನೆ ಗಳನ್ನು ತಿಂದು ಅರ್ಧ ಹೊಲದ ತೆನೆ ತಿಂದು ಮುಗಿಸಿದ್ದೆವು .ಹೊಲದ ಮಾಲಿಕ ಸಿಟ್ಟಿನಿಂದ ನಮ್ಮ ರಾಜಪ್ಪ ಮಾಸ್ಟರ್ ಗೆ ಹೇಳಿ ಬೆತ್ತದ ರುಚಿ ತೋರಿಸಿದ್ದ.


ಇನ್ನೂ ನನಗೆ ಪ್ರಿಯವಾದ ಮತ್ತೊಂದು ವಸ್ತು ಕಡ್ಲೆಕಾಯಿ.ನಮ್ಮೂರಲ್ಲಿ ಕಡ್ಲೇ ಕಾಯಿ ಬೆಳೆಯುತ್ತಿರಲಿಲ್ಲ.ನಮ್ಮ ಮಾವನವರ ಊರಾದ ಯರಬಳ್ಳಿಗೆ ಹೋದಾಗ ನನಗೆ ಕಡ್ಲೇಕಾಯಿ ಸುಗ್ಗಿ .ನಮಗೆ ಬೇಸಿಗೆ ರಜಾ ಬಿಡುವುದು ಮತ್ತು ಕಡಲೇಕಾಯಿ ಸೀಸನ್ ಒಂದೇ ಬಾರಿಗೆ ಬರುತ್ತಿದ್ದುದು ನನಗೆ ಎಲ್ಲಿಲ್ಲದ ಸಂತಸ.

ಯರಬಳ್ಳಿಗೆ ಹೋದ ತಕ್ಷಣ ನಮ್ಮ ಕರಿಯಪ್ಪ ಮಾವನ ಜೊತೆ ಕಡ್ಲೇಕಾಯಿ ಹೊಲ ಕಾಯಲು ರಾತ್ರಿ ಹೊರಡುತ್ತಿದ್ದೆ. ಹೊಲ ತಲುಪಿದ ಮೇಲೆ ನಮಗೆ ಎಷ್ಟು ಬೇಕೋ ಅಷ್ಟು ಕಡ್ಲೇಗಿಡ ಕಿತ್ತು ಅಲ್ಲೇ ಇರುವ ಸೌದೆ ಒಟ್ಟುಗೂಡಿಸಿ ಬೆಂಕಿ ಹಚ್ಚಿ ಸುಟ್ಟು ತಿನ್ನಲು ಶುರು ಮಾಡುತ್ತಿದ್ದೆವು

ಕೆಲವೊಮ್ಮೆ ಕಡ್ಲೇಕಾಯಿ ಜೊತೆಗೆ ಉಪ್ಪು ,ಹಸಿಮೆಣಸಿನ ಕಾಯಿ ಸೇರಿಸಿ , ಮತ್ತೆ ಕೆಲವು ಸಲ ಬೆಲ್ಲ ಸೇರಿಸಿ ಸುಟ್ಟ ಕಡ್ಲೇಕಾಯಿ ಸ್ವಾದ ಸವಿದ ನೆನಪು ಈಗಲೂ ಮರುಕಳಿಸುತ್ತಿದೆ.

ಈ ವರ್ಷ 

ದಸರಾ ಹಬ್ಬಕ್ಕೆ ಯರಬಳ್ಳಿಗೆ ಹೋದಾಗ ಕೆಲವೇ ಕೆಲವು ಕಡ್ಲೇಗಿಡದ ಹೊಲ ನೋಡಿದಾಗ ಅಂದು ನಾವು ಕಡ್ಲೇಗಿಡದ ಕಾಯಿ ಸುಟ್ಟು ತಿಂದ ನೆನಪಾಯಿತು.



ಸಿಹಿಜೀವಿ

ಸಿ ಜಿ ವೆಂಕಟೇಶ್ವರ