03 ನವೆಂಬರ್ 2021

ಬೆಳಕಾಗಬೇಕು.ಹನಿಗವನ


 ಸರ್ವರಿಗೂ ನರಕ ಚತುರ್ದಶಿ ಮತ್ತು ದೀಪಾವಳಿ ಹಬ್ಬದ ಶುಭಾಶಯಗಳು🪔💐🌷🪔💐🌷


*ಬೆಳಕಾಗಬೇಕು*


ಈ ಹಿರಿಯ ಜೀವಗಳು

ಎಷ್ಟೋ ಜೀವಿಗಳಿಗೆ 

ತಮ್ಮ ಜೀವನದಲ್ಲಿ ಎಣ್ಣೆ 

ಸುರಿದು ಬೆಳಕಾಗಿದ್ದರು .

ಈ ಇಳಿ ವಯಸ್ಸಿನಲ್ಲಿ 

ದೀಪವನ್ನು ನೀಡುತ್ತಿದ್ದಾರೆ

ಬತ್ತಿ ಮತ್ತು ಎಣ್ಣೆಯನ್ನು ನಾವೇ 

ಹಾಕಿಕೊಳ್ಳಬೇಕು ಇಂತಹ ಇಳಿವಯಸ್ಸಿನವರಿಗೆ

ಬೆಳಕಾಗಬೇಕು. 


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

02 ನವೆಂಬರ್ 2021

ನನ್ನ ಬಾಲ್ಯದ ಮೊದಲ ಪ್ರವಾಸ. ಲೇಖನ


ನಾನಾಗ  ಉಪ್ಪರಿಗೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಓದುತ್ತಿದ್ದೆ. ನಮ್ಮ ಮುಖ್ಯ ಶಿಕ್ಷಕರಾದ ರಾಜಪ್ಪ ಸರ್ ರವರು ಕಚ್ಚೆ ಪಂಚೆ ಹಾಕಿ ಬಲಗೈಯಲ್ಲಿ ಪಂಚೆಯ ಸೆರಗು ಮಡಿಚಿದರೆಂದರೆ ಯಾರಿಗೋ ಒದೆ ಬೀಳುವುದು ಖಚಿತವಾಗಿತ್ತು. ಅವರು ಹಾಗೆ ಒದೆ ಕೊಟ್ಟು ಕಲಿಸಿದ್ದಕ್ಕೆ ನಾನು ಇಂದು ಇಂಗ್ಲಿಷ್ ಅಲ್ಪ ಸ್ವಲ್ಪ ಕಲಿತು ಮಕ್ಕಳಿಗೆ ಕಲಿಸುತ್ತಿರುವುದು.


ಅಂದು ರಾಜಪ್ಪ ಮಾಸ್ಟರ್ ಬಲಗೈಯಲ್ಲಿ ಪಂಚೆಯ ಸೆರಗು ಮಡಿಚಿದರು. ನಾವು ಮನದಲ್ಲೇ ಇವತ್ತು ಯಾವಾನೋ  ಹುಡುಗನಿಗೆ ಗ್ರಾಚಾರ ಇದೆ ಎಂದು ತುಟಿಕ್ ಪಿಟಿಕ್ ಅನ್ನದೇ ಕುಳಿತಿದ್ದೆವು . 

"ಏ ನಿಮಗೆ ಸ್ಕಾಲಾರ್ಷಿಪ್ ಬಂದೈತೆ ಕಣ್ರಲಾ, ನಾಳೆ ನಿಮ್ಮ ಅಪ್ಪ ಅಮ್ಮನ ಕರ್ಕಂಬಂದು ಸೈನ್ ಮಾಡುಸ್ ಬೇಕು " ಅಂದರು .ನಾವು ಹೊಸ ಇಂಗ್ಲಿಷ್ ಪದ ಕೇಳಿ ಪಿಳಿ ಪಿಳಿ ಕಣ್ ಬಿಡುವುದು ನೋಡಿ ಅರ್ಥ ಮಾಡಿಕೊಂಡ ರಾಜಪ್ಪ ಸರ್ " ಏ ಸರ್ಕಾರದಿಂದ ನಿಮಿಗೆ ಓದಾಕೆ ದುಡ್ ಕೊಟ್ಟಾದಾರೆ ಅದೇ ಸ್ಕಾಲರ್ಶಿಪ್  , ನಾಳೆ ನಿಮ್ ಅಪ್ಪ ಅಮ್ನನ ಕರ್ಕಂಬರ್ರಿ " ಎಂದು ಗಡುಸಾದ ಧನಿಯಲ್ಲಿ ಹೇಳಿದರು.


ಮಾರನೇ ದಿನ ನನ್ನ ಅಮ್ಮ ಶಾಲೆಗೆ  ಬಂದು ರಿಜಿಸ್ಟರ್ ಗೆ ಸೈನ್ ಹಾಕಿದ ಮೇಲೆ " ನೋಡಮ್ಮ ಶ್ರೀದೇವಮ್ಮ ನಿಮ್ ಮಗುಂಗೆ ಎಪ್ಪತ್ತು ರುಪಾಯಿ ಸ್ಕಾಲರ್ಶಿಪ್ ಬಂದೈತೆ .ಈಗ ನಾನು ನಿಮಿಗೆ ದುಡ್ ಕೊಡಲ್ಲ , ನಿಮ್ ಹುಡ್ಗುನ್ನ ಮೈಸೂರು, ತಲಕಾಡು, ಶಿವನ ಸಮುದ್ರ ದ ಕಡೆ ಮೂರ್ ದಿನ ಟೂರ್ ಕರ್ಕಂಡು ಹೋಗ್ತೀವಿ" ಎಂದರು ನಮ್ಮ ಮುಖ್ಯ ಶಿಕ್ಷಕರು.

" ಅಲ್ಲಾ ಸಾ , ನಮ್ ಹುಡ್ಗ ಅಷ್ಟು ದೂರಾ ಯಾವಾಗ್ಲೂ ಹೋಗಿಲ್ಲ,......." ಅಂದು ಏನೋ ಹೇಳಲು ಮುಂದಾದರು ನಮ್ಮ ಅಮ್ಮ. ಮಧ್ಯದಲ್ಲಿ  ತಡೆದು "ಅದೆಲ್ಲಾ ಯೋಚ್ನೆ ಮಾಡ್ಬೇಡ ಕಣಮ್ಮ ನಿಮ್ ಹುಡ್ಗನ ಜವಾಬ್ದಾರಿ ನಮ್ದು ಸುಮ್ಮನೆ ಕಳ್ಸು" ಅಂದರು ರಾಜಪ್ಪ ಮಾಸ್ಟರ್. ಅಮ್ಮ ಸುಮ್ಮನಾದರು ನನ್ನ ಮೊಗದಲ್ಲಿ ಮಂದಹಾಸ ಆಗಲೇ ಮೈಸೂರು ಹೇಗಿರಬಹುದೆಂದು ಕಲ್ಪನಾ ಲೋಕಕ್ಕೆ ಜಾರಿದ್ದೆ.


ಪ್ರಾಥಮಿಕ ಶಾಲಾ ಶಿಕ್ಷಕರಾದ ತಿಪ್ಪೇಶಪ್ಪ ಮಾಸ್ಟರ್ ಜೊತೆಯಲ್ಲಿ ನಾಲ್ಕನೇ ತರಗತಿಯಲ್ಲಿ ಒಂದು ದಿನದ ಪ್ರವಾಸ ಹೋದ ನಂತರ ಹೊರಡುತ್ತಿರುವ ಮೂರು ದಿನದ ಪ್ರವಾಸಕ್ಕೆ ನನ್ನಮ್ಮ ಮೂರು ದಿನದಿಂದ ಸಿದ್ದತೆ ಮಾಡಿದರು. ಮಂಡಕ್ಕಿ ಉರಿದು ಕೊಟ್ಟರು, ಕಡ್ಲೇಕಾಯಿ ಉರಿದು ಕೊಟ್ಟರು. ಚಿನಕುರುಳಿ ಮಾಡಿದ್ದರು. ನಮ್ಮ ಕೇರಿಯ ಎಲ್ಲರಿಗೂ ನನ್ನ ಮಗ ಟೂರ್ ಹೊಗ್ತಾನೆ ಎಂದು ಸಂತಸ ಮತ್ತು ಆತಂಕದಿಂದ  ಹೇಳಿಕೊಂಡು ಬಂದಿದ್ದರು.


ಟೂರ್ ಹೋಗುವ ದಿನ ಬಂದೇ ಬಿಟ್ಟಿತು. ಅಂದು ಸಂಜೆ  ನಾಲ್ಕು ಗಂಟೆಗೆ  ಸ್ನಾನ ಮಾಡಿ ಸಿದ್ಧವಾಗಿ ನಮ್ಮ ಊರಿನಿಂದ ಉಪ್ಪರಿಗೇನಹಳ್ಳಿಗೆ ಬಂದು  ನಮ್ಮ ಶಾಲೆಯ ಮುಂದೆ ನಿಂತಿದ್ದ ಕೆಂಪು ಬಣ್ಣದ ಗೌರ್ಮೆಂಟ್ ಬಸ್ ನೋಡಿದೆವು .ಅದು ನಮ್ಮ ಮೊದಲ ಗೌರ್ಮೆಂಟ್ ಬಸ್ ಪ್ರಯಾಣ. ರಾತ್ರಿ ಬಸ್ ಗೆ ಪೂಜೆ ಕೊಲ್ಲಾಪುರದಮ್ಮ ಗುಡಿಯ ಮುಂದೆ ನಿಲ್ಲಿಸಿ ಪೂಜೆ ಮಾಡಿಸಿ ಅಧಿಕೃತವಾಗಿ ಪ್ರವಾಸ ಹೊರಟಾಗ ರಾತ್ರಿ  ಹತ್ತೂವರೆ .ನಮ್ಮಮ್ಮ ಟಾಟಾ ಮಾಡುತ್ತಾ ಹುಸಾರು ಕಣೋ ಎಂದು ಹೇಳುವುದು ಬಸ್ ದೂರ ಹೋದರೂ ಕತ್ತಲಲ್ಲಿ ಅಸ್ಪಷ್ಟವಾಗಿ ಕಾಣುತ್ತಿತ್ತು.


ರಾತ್ರಿ ಹನ್ನೆರಡು ಗಂಟೆಯವರೆಗೂ ಗೌರ್ಮೆಂಟ್ ಬಸ್ ಪ್ರಯಾಣದ ಅನಂದ ಅನುಭವಿಸುತ್ತಾ ಅಂತ್ಯಾಕ್ಷರಿ ಹಾಡುತ್ತಾ ಒಬ್ಬೊಬ್ಬರೇ ನಿದ್ರೆಗೆ ಜಾರಿದ್ದೆವು. ಬೆಳಗಿನ ಜಾವ ಐದೂವರೆಗೆ ನಮ್ಮ ಶಿಕ್ಷಕರು ನಮ್ಮ ಎಬ್ಬಿಸಿದರು. ಬಸ್ ಒಂದು ಹೊಳೆಯ ಬಳಿ ನಿಂತಿರುವುದು ಕಂಡಿತು. ಹೊಳೆಯ ಪಕ್ಕದಲ್ಲಿ ನಮ್ಮ ನಿತ್ಯ ಕರ್ಮ ಮುಗಿಸಿಕೊಂಡು ಹಲ್ಲುಜ್ಜಿ ಮುಖ ತೊಳೆದುಕೊಂಡು ಬಸ್ ನಲ್ಲಿ ಬಂದು ಕುಳಿತೆವು.ಬೆಳಿಗ್ಗೆ ಎಂಟು ಗಂಟೆಗೆ ಬಸ್ ಚಾಮುಂಡಿ ಬೆಟ್ಟ ಹತ್ತುತ್ತಾ ಇದೆ ಎಂದರು ದ್ಯಾಮಪ್ಪ ಮೇಷ್ಟ್ರು. ನಮಗೆ ಬಹಳ ಕುತೂಹಲದಿಂದ ಆ ಕಡೆ ನೋಡುತ್ತ ಮೈಸೂರ ಸೊಬಗ ಸವಿಯಲು ಆರಂಬಿಸಿದೆವು. ಕ್ರಮೇಣ ಬಸ್ ಬೆಟ್ಟದ ಮೇಲೆ ಚಲಿಸಿದಂತೆ ನಾಲ್ಕೈದು ಜನ ನನ್ನ ಸ್ನೇಹಿತರು ವಾಂತಿ ಮಾಡಲು ಶುರು ಮಾಡಿದರು." ಈ ಮುಂಡೆ ಮಕ್ಕಳಿಗೆ ಎಷ್ಟು ಸತಿ ಹೇಳಿದಿನಿ ಟೂರ್ ಗೆ ಬರೊವಾಗ ಸ್ವಲ್ಪ ಆಳ್ತಾಕ್ಕೆ ತಿನ್ರಿ ಅಂತ , ನೋಡ್ರಿ ಈಗ ಎರ್ರಾ ಬಿರ್ರಿ ತಿಂದು ಅಬ್ಕು...ಅಬ್ಕು... ಅಂತ ಕಕ್ಕೆಂಬತಾವೆ " ಎಂದು ಸಿಟ್ಟಿನಿಂದ ಎಲ್ಲರಿಗೂ ಬೈದರು ರಾಜಪ್ಪ ಮಾಸ್ಟರ್.


ಚಾಮುಂಡಿ ಬೆಟ್ಟದ ಮೇಲೆ ಬಸ್ ಇಳಿದು ಚಾಮುಂಡೇಶ್ವರಿ ದರ್ಶನ ಪಡೆದು ದೇವಾಲಯದ ದೊಡ್ಡ ಗೋಪುರವನ್ನು ಬೆರಗುಗಣ್ಣಿನಿಂದ ನೋಡಿ ಕಣ್ಗಳಲ್ಲೇ ಪೋಟೋ ತೆಗೆದುಕೊಂಡೆವು ಯಾಕೆಂದರೆ ಆಗ ನಮ್ಮ ಬಳಿ ಕ್ಯಾಮೆರಾಗಳು ಇರಲಿಲ್ಲ!



ಚಾಮುಂಡೇಶ್ವರಿಯ ದರ್ಶನದ ನಂತರ ತಿಂಡಿ ತಿಂದು ಬೆಟ್ಟ ಇಳಿಯುವಾಗ ಮತ್ತೆ ಕೆಲವರು ವಾಂತಿ ಮಾಡಿದಾಗ ರಾಜಪ್ಪ ಮಾಸ್ಟರ್ ಗುರಾಯಿಸಿದರು. 

ಮೊದಲ ಬಾರಿಗೆ ಜೂಗೆ ನಾವು ಹೊರಟೆವು ವಿಧ ವಿಧದ ಪ್ರಾಣಿ ಪಕ್ಷಿಗಳ ಕಂಡು ಬಹಳ ಸಂತಸ ಪಟ್ಟೆವು. ನಂತರ ಅರಮನೆಯ ವೈಭವ ನೋಡಿದೆವು ಸಂಜೆ ಕನ್ನಂಬಾಡಿ ಕಟ್ಟೆ ಮತ್ತು ಉದ್ಯಾನವನ, ಸಂಗೀತ ಕಾರಂಜಿ ನೋಡಿದೆವು ಅಷ್ಟೊತ್ತಿಗೆ ಧಣಿದಿದ್ದ ನಮಗೆ ಊಟ ಕೊಡಿಸಿ ಒಂದು ಕಲ್ಯಾಣ ಮಂಟಪದಲ್ಲಿ ಮಲಗಲು ನಮ್ಮ ಶಿಕ್ಷಕರು ವ್ಯವಸ್ಥೆ ಮಾಡಿದ್ದರು.


ಬೆಳಿಗ್ಗೆ ಐದಕ್ಕೆ ನಮ್ಮನ್ನು ಎಬ್ಬಿಸಿದ ನಮ್ಮ ಶಿಕ್ಷಕರು ನಮ್ಮನ್ನು ಮುಂದಿನ ದಿನದ ಪ್ರವಾಸಕ್ಕೆ ಅಣಿಗೊಳಿಸಿದರು. ಹೀಗೆ ತಲಕಾಡು, ಶಿವನಸಮುದ್ರ ಮುಂತಾದ ಸ್ಥಳಗಳನ್ನು ನೋಡಿದ ನಾವು ಸುರಕ್ಷಿತವಾಗಿ ಊರಿಗೆ ಬಂದೆವು . 


ಈಗ ಭಾರತದ ಬಹುತೇಕ ಪ್ರದೇಶದಲ್ಲಿ ಪ್ರವಾಸ ಮಾಡುವ ಜೊತೆಗೆ ನೇಪಾಳದ ಪ್ರವಾಸ ಕೂಡಾ ಮಾಡಿರುವೆ .ಸಾವಿರಾರು ರೂಪಾಯಿಗಳ ಖರ್ಚು ಮಾಡಿ ಎಷ್ಟೇ ದಿನಗಳ ಪ್ರವಾಸ ಮಾಡಿದ್ದರೂ ನಮ್ಮ ರಾಜಪ್ಪ ಮಾಸ್ಟರ್ ಎಪ್ಪತ್ತು ರೂಪಾಯಿಗಳಲ್ಲಿ ಮೂರು ದಿನದ ಪ್ರವಾಸ ಕರೆದುಕೊಂಡು ಹೋದ ನೆನಪುಗಳನ್ನು ಮರೆಯಲು ಸಾದ್ಯವಿಲ್ಲ. ಇತ್ತೀಚಿಗೆ ಗೂಳಿಹೊಸಹಳ್ಳಿಗೆ ಹೋದಾಗ ರಾಜಪ್ಪ ಮಾಸ್ಟರ್ ನೋಡಿದಾಗ ಎಲ್ಲಾ ಮತ್ತೆ ನೆನಪಾಯಿತು.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

 

31 ಅಕ್ಟೋಬರ್ 2021

ಅಪ್ಪುಗೆ ನಾಲ್ಕು ಹನಿ ನಮನ


 



*ಅಪ್ಪು ಗೆ ನಾಲ್ಕು ಹನಿ ನಮನ*




ನಡೆನುಡಿಯಲಿ 

ಯಾವಾಗಲೂ 

ವಿನೀತ|

ಅವರೇ ಕನ್ನಡ

ನಾಡಿನ ಹೆಮ್ಮೆಯ

ಪುನೀತ||




ಇವರ ತಂದೆ 

ಮೇರು ನಟ 

ರಾಜಕುಮಾರ|

ಇವರೇನು 

ಕಡಿಮೆಯಲ್ಲ

ಗುಣದಲಿ ಬಂಗಾರ||



ಬೌತಿಕವಾಗಿ ನಮ್ಮನ್ನು

ಅಗಲಿದ್ದಾರೆ

ದೊಡ್ಮನೆ ಹುಡುಗ|

ಅವರ ಚಿತ್ರಗಳು 

ಅವರ ಸಮಾಜ ಸೇವೆಯ

ಸದಾ ಸ್ಮರಿಸುವುದು ಜಗ||



ಮೇಲು ಕೀಳು

ಬಡವ ಬಲ್ಲಿದ

ಭೇದವಿರಲಿಲ್ಲ

ನಮ್ಮ ಅಪ್ಪುಗೆ|

ಕಷ್ಟದಲ್ಲಿರುವವರಿಗೆ

ನೊಂದವರಿಗೆ ನೀಡುತ್ತಿದ್ದರು

ಸಾಂತ್ವನದ ಬಿಸಿ ಅಪ್ಪುಗೆ||



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

ನಾಡಿಗಾಗಿ ನಾಡಿ ಮಿಡಿಯಲಿ

 


    

*ನಾಡಿಗಾಗಿ ಒಟ್ಟಾಗೋಣ* 


ಕನ್ನಡದ ಕವಿಗಳು, ಮುತ್ಸದ್ದಿಗಳ ಅವಿರತ ಹೋರಾಟದ    ಫಲವಾಗಿ ನಮ್ಮ  ಕರುನಾಡು ಉದಯವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅನ್ಯ ಭಾಷೆಗಳ ವ್ಯಾಮೋಹದ ಫಲವಾಗಿ ಕನ್ನಡ ಭಾಷೆ ಬಳಸುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿರುವುದು ದುರದೃಷ್ಟಕರ. ನಮ್ಮ ನಾಡಿನ ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ವೈಜ್ಞಾನಿಕವಾಗಿ ಅದ್ಯಯನ ಮಾಡಿ  ಉತ್ಕೃಷ್ಟವಾದ ಭಾಷೆ ಮತ್ತು ಸಾಹಿತ್ಯವನ್ನು  ಗಮನಿಸಿ ಇತ್ತೀಚೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಲಾಗಿದೆ.ಕನ್ನಡಿಗರಾದ ನಾವು ಸ್ವಾಭಿಮಾನ ಬೆಳೆಸಿಕೊಳ್ಳಬೇಕಿದೆ.ಕೀಳರಿಮೆ ಬಿಟ್ಟು ನಮ್ಮ ಭಾಷೆಯ ಮಹತ್ವದ ಬಗ್ಗೆ ಇತರರಿಗೆ ಮನದಟ್ಟು ಮಾಡಿಕೊಡಬೇಕಿದೆ.ಗಡಿನಾಡಿನಲ್ಲಿ ಪ್ರಾಬಲ್ಯ ಮೆರೆಯಲು  ಕಾಲುಕೆರೆದುಕೊಂಡು ಜಗಳ ಕಾಯುವ ಪುಂಡರಿಗೆ ತಕ್ಕ ಶಾಸ್ತಿ ಮಾಡಬೇಕಿದೆ.ನೆಲ ಜಲದ ವಿಷಯಗಳಲ್ಲಿ ನಿರಭಿಮಾನ ತೊರೆದು ಒಗ್ಗಟ್ಟು ಪ್ರದರ್ಶನ ಮಾಡಿ ಕನ್ನಡಿಗರು ಎದ್ದರೆ ಯಾವುದೂ ಅಸಾಧ್ಯವಿಲ್ಲ ಎಂಬುದನ್ನು ತೋರಿಸಬೇಕಿದೆ.  ನಮ್ಮ ನಾಡಿನ ಹಿರಿಮೆ ಗರಿಮೆಯನ್ನು ಎತ್ತಿ ಹಿಡಿಯುವ ಎಕೈಕ ಉದ್ದೇಶ ನಮ್ಮದಾಗಿ ಒಗ್ಗಟ್ಟನ್ನು ಪ್ರದರ್ಶಿಸಿದರೆ ಯಾವ ದುಷ್ಟ ಶಕ್ತಿಗಳು ಕನ್ನಡಮ್ಮನ ಕೂದಲು ಕೊಂಕಿಸಲು ಸಾದ್ಯವಿಲ್ಲ.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು