25 ಅಕ್ಟೋಬರ್ 2021

ನನ್ನ ಬಾಲ್ಯದ ಆಟಗಳು ಮತ್ತು ತಿನಿಸುಗಳು.


 

ನನ್ನ ಬಾಲ್ಯದ ಆಟಗಳು ಮತ್ತು ತಿನಿಸುಗಳು

ನಾವು ಬಾಲ್ಯದಲ್ಲಿ ಆಡಿದ ಆಟಗಳು ಮತ್ತು ತಿಂದ ತಿಂಡಿಗಳು ಒಂದು ಎರಡಲ್ಲ .ಆ ಎಲ್ಲಾ ಆಟಗಳಿಂದ ನಮ್ಮ ದೇಹ ದೃಢವಾಗಿತ್ತು, ಆರೋಗ್ಯಕ್ಕೆ ಪೂರಕವಾಗಿತ್ತು ಎಂಬುದು ದೊಡ್ಡವರಾದ ಮೇಲೆ ಈಗ ನಮಗೆ ಅರಿವಾಗುತ್ತದೆ . ಸದಾ ಮೊಬೈಲ್ ,ಕಂಪ್ಯೂಟರ್ ಮುಂದೆ ಕುಳಿತು ಕೆಲಸಕ್ಕೆ ಬಾರದ ಗೇಮ್ ಆಡುವ ಮಕ್ಕಳ ಕಂಡರೆ ನಮ್ಮ ಬಾಲ್ಯದ ಆಟಗಳು ನೆನಪಾಗುತ್ತವೆ. ಗೋಲಿ, ಟಿಕ್ಕಿ, ಬುಗರಿ, ಜೂಟ್ ಮುಟ್ಟಾಟ, ಪಳ್ಳಂ ,ಅಳುಗುಣಿ ಮನೆಯಾಟ, ಗಾಳಿಪಟವ ಹಾರಿಸುವುದು, ಗಣೇಶನ ವಿಗ್ರಹ ಮಾಡಿ ಆಡುವುದು ಸೆಪ್ಪೇದಂಟಿನಲ್ಲಿ ಎತ್ತಿನ ಗಾಡಿಯ ಮಾದರಿ ಮಾಡಿಕೊಂಡು ಆಡುವುದು, ಚೌಕಾಬಾರ, ಬಸವನಕಟ್ಟೆ ,   ಹೀಗೆ ಆಟಗಳ ಪಟ್ಟಿ ಬೆಳೆಯುತ್ತಿತ್ತು .


ಆಟದಲ್ಲಿ ನನಗೆ ಬುಗುರಿ ಆಟ ಅಚ್ಚುಮೆಚ್ಚು ಬುಗುರಿ ಕೊಳ್ಳಲು ನನಗೆ ಹಣವಿರಲಿಲ್ಲ .ನಮ್ಮ ಮನೆಯ ಮುಂದೆ ಬೈರಜ್ಜ ಎಂಬುವವರು ಇಡೀ ಊರಿಗೆ ಪರಿಚಿತವಾದ ಉತ್ತಮ ಬಡಗಿ. ಬೇಟೆಗಾರ  ಮತ್ತು ನಮ್ಮೂರ ಚೌಡಮ್ಮನ ಪೂಜಾರಿ.ಅವರ ಹತ್ತಿರ ಹೋಗಿ ದುಂಬಾಲು ಬಿದ್ದು ಬೈಸಿಕೊಂಡು ಒಂದು ಬುಗುರಿ ಮಾಡಿಸಿಕೊಂಡು ಅದಕ್ಕೆ ಕತ್ತಾಳಿಯ ಚಾಟಿ ಮಾಡಿಕೊಂಡು ಆಡುವಾಗ ಸ್ವರ್ಗಕ್ಕೆ ಮೂರೇ ಗೇಣಿತ್ತು.
ಬುಗುರಿ ಆಟವಾಡುವಾಗ ನನಗಿಂತ ಎರಡು ವರ್ಷ ದೊಡ್ಡವನಾದ ಬಸವರಾಜ ಅವನ ಬುಗುರಿಯಿಂದ ನನ್ನ ಬುಗುರಿಗೆ ಹೊಡೆದು ಗುನ್ನ ಮಾಡಿದಾಗ ನನ್ನ ದೇಹಕ್ಕೇ ಗುನ್ನ ಬಿದ್ದಂತೆ ಬೇಸರ ಮಾಡಿಕೊಂಡಿದ್ದೆ. ಮಾರನೇ ದಿನ ಸಮಯಸಾಧಿಸಿ ಬಸವರಾಜನ ದೊಡ್ಡ ಬುಗುರಿಗೆ ನಾನು ಗುನ್ನ ಹೊಡೆದು ಬೀಗಿದ್ದೆ .ಇದೇ ಸಿಟ್ಟಿನಲ್ಲಿ ವಾರಗಳ ನಂತರ ಬಸವರಾಜ ಅವನ ಬುಗುರಿಯಿಂ ಹೊಡೆದು ನನ್ನ ಬುಗುರಿ ಎರಡು ಹೋಳಾಗುವಂತೆ ಹೊಡೆದು ಗಹಗಹಿಸಿ ನಕ್ಕಿದ್ದ. ಆಗ ನನ್ನ ಎದೆ ಚೂರಾಗಿತ್ತು.

ಆಟಗಳಂತೆ ತಿನ್ನುವ ಪದಾರ್ಥಗಳಲ್ಲಿ ನಾವು ಪರಿಸರದಲ್ಲಿ ಸಿಗುವ ಬಹುತೇಕ ಹಣ್ಣುಗಳನ್ನು ತಿಂದಿರುವೆವು.ಅದರಲ್ಲಿ ಕವಳಿ ಹಣ್ಣು, ದ್ಯಾದಾರೆ ಹಣ್ಣು  ,ಲಂಟನ್ ಹಣ್ಣು, ಸಣ್ಣ ಟೊಮೊಟೋ ಹಣ್ಣು, ಬುಡುಮೆ ಕಾಯಿ, ಕಾರೇ ಹಣ್ಣು , ತೊಂಡೆಹಣ್ಣು, ಗೇರ್ ಹಣ್ಣು, ಪಾಪಸ್ ಕಳ್ಳಿ ಹಣ್ಣು  ಹೀಗೆ ಆಯಾ ಕಾಲಕ್ಕೆ ಸಿಗುವ ಎಲ್ಲಾ ಹಣ್ಣುಗಳನ್ನು ತಿಂದಿರುವೆವು.

ಕಾರೆ ಹಣ್ಣುಗಳನ್ನು ತಿನ್ನಲು ಅವುಗಳನ್ನು ಬಿಡಿಸುವಾಗ ಅದರ ಮುಳ್ಳುಗಳು ನಮ್ಮ ಮುಂಗೈಗೆ ತರಚಿ ರಕ್ತ ಬಂದರೂ ಆ ಕಾರೆ ಹಣ್ಣಿನ ರುಚಿಯ ಮುಂದೆ ಆ ತರಚುಗಾಯಗಳು ನಗಣ್ಯವಾಗುತ್ತಿದ್ದವು .

ಪಾಪಸ್ ಕಳ್ಳಿಯ ಹಣ್ಣುಗಳನ್ನು ಕಿತ್ತು ಸವಿಯುವಿದೇ ಒಂದು ಮಜಾ ಎಂದು ಬಾವಿಸಿದ್ದೆವು. ಪಾಪಾಸ್ ಕಳ್ಳಿಯ ಹಣ್ಣು ಕಿತ್ತು, ಅದರಲ್ಲಿನ ಸಣ್ಣ ಮುಳ್ಳುಗಳನ್ನು ಉಜ್ಜಿ ತೆಗೆದು ,ಒಂದು ಜಾಲಿ ಮುಳ್ಳಿನಿಂದ ಅದರ ಮೇಲ್ಬಾಗದ ಚಕ್ರಕಾರದ ಮುಳ್ಳನ್ನು ತೆಗೆದು ಪಾಪಾಸ್ ಕಳ್ಳಿಯ ಹಣ್ಣು ಸವಿದ ಮೇಲೆ ಬಾಯಿಯ ತುಂಬಾ ಉಚಿತವಾದ ಕೆಂಪನೆಯ ಬಣ್ಣ ! ಮನೆಗೆ ಬಂದಾಗ ಅಮ್ಮನಿಂದ ಮಾಮೂಲಿ ಬೈಗುಳು" ಯಾವಾನ್ ಜೊತೆಗೋ ಬೇಲಿ ಸುತ್ತಾಕ್ ಹೋಗ್ತಿಯಾ ? ಇನ್ನೊಂದ್ ಸತಿ ಹೋಗು, ಕಾಲ್ ಮುರಿತಿನಿ ".  ಮುಂದಿನ ಭಾನುವಾರ ಅದೇ ಗೆಳೆಯರು ಅದೇ ತಿನ್ನುವ ಆಟ ಮತ್ತೆ ಅಮ್ಮನ ಪ್ರೀತಿಯ ಬೈಗುಳ.

ಈಗ ಮಾರುಕಟ್ಟೆಯಲ್ಲಿ ಬಹಳ ತರಹದ ಹಣ್ಣುಗಳು ಲಭ್ಯವಿವೆ ಅದಕ್ಕೆ ಉಚಿತವಾಗಿ ಕ್ರಿಮಿನಾಶಕ ಸಹ ಸೇರಿಸಿರುವರು ,ಕೊಳ್ಳಲು ಜೇಬಲ್ಲಿ ಹಣವೂ ಇದೆ ,ಕೊಂಡು ತಂದು ತಿಂದರೆ,  ಬಾಲ್ಯದಿ ಗೆಳೆಯರ ಜೊತೆಯಲ್ಲಿ ಬೇಲಿ ಸುತ್ತಿ ತಿಂದ ಆ ಹಣ್ಣಿನ ರುಚಿಯ ಮುಂದೆ ಈ ಹಣ್ಣುಗಳು ಯಾಕೋ ಅಷ್ಟು ರುಚಿ ಇಲ್ಲ ಅನಿಸುತ್ತಿದೆ.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು.


*ಈ ವಾರದ ಸುಧಾ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಮಕ್ಕಳ ಗೀತೆ "ಚಿನ್ನಮ್ಮನ ಸೈಕಲ್"*


 

*ಈ ವಾರದ ಸುಧಾ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಮಕ್ಕಳ ಗೀತೆ "ಚಿನ್ನಮ್ಮನ ಸೈಕಲ್"*

24 ಅಕ್ಟೋಬರ್ 2021

*ಇಂದಿನ ವೈಬ್ರಂಟ್ ಮೈಸೂರು ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ*೨೪/೧೦/೨೧


 *ಇಂದಿನ ವೈಬ್ರಂಟ್ ಮೈಸೂರು ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ*

ಹಾಸನವಾಣಿ ೨೪/೧೦/೨೧


 

ತಂದೆಯ ಕನಸು. ನ್ಯಾನೋ ಕಥೆ


 


*ತಂದೆಯ ಕನಸು*

ನ್ಯಾನೋ ಕಥೆ

"ನನ್ನ ಕನಸು ನನಸಾಯಿತು. ಇಂದು ನೀನು ಇಂಜಿನಿಯರಿಂಗ್ ಪದವಿ ಪಡೆದಿರುವೆ‌. ನಿನಗೆ ಒಳ್ಳೆಯ ಉದ್ಯೋಗ ಖಂಡಿತವಾಗಿ ಸಿಗುತ್ತದೆ. ಅದು ಖಾಸಗಿ ಅಥವಾ ಸರ್ಕಾರಿ ಕೆಲಸವಾಗಲಿ ನಾನು ಕಷ್ಟ ಪಟ್ಟು ನಿನ್ನ ಓದಿಸಿದ್ದು ಸಾರ್ಥಕವಾಯಿತು. ತಾಯಿ ಭಾರತಾಂಬೆಯ ಸೇವೆ ಗೆ ನಿನ್ನ ಜೀವ ಮುಡಿಪಾಗಿರಲಿ" ಶ್ಯಾಮರಾಯರು ಮಗನೆಡೆ ಸಂತೋಷದ ನೋಟ ಬೀರುತ್ತಾ ಹೆಮ್ಮೆಯಿಂದು ನುಡಿದರು.
ತಲೆಕೆರೆದು ಕೊಳ್ಳುತ್ತಾ" ಅಪ್ಪಾ ನಾನು ಈಗಾಗಲೇ ಜರ್ಮನಿಯ ಒಂದು ಕಂಪನಿಯ ಜಾಬ್ ಆಪರ್ ಒಪ್ಪಿ ಸಹಿ ಮಾಡಿರುವೆ . ಮುಂದಿನ ತಿಂಗಳು ವೀಸಾ ಪಾಸ್‌ಪೋರ್ಟ್ ರೆಡಿ ಆದಮೇಲೆ ,ಇವಳನ್ನು ಮದುವೆಯಾಗಿ  ಜರ್ಮನಿಗೆ ಕರೆದುಕೊಂಡು ಹೋಗುವೆ, ಪ್ರತಿ ತಿಂಗಳು ನಿಮ್ಮ ಅಕೌಂಟ್ ಗೆ ಹಣ ಹಾಕುವೆ " ಎಂದು ತಾನು ಮದುವೆ ಆಗಬೇಕಿರುವ ಹುಡುಗಿಯ ಪೋಟೋ ತೋರಿಸಿದ ಪುರುಶೋತ್ತಮ.
ಪೋಟೋ ನೋಡಿದ ಶ್ಯಾಮರಾಯರು ನಿಧಾನವಾಗಿ ತಮ್ಮ ಕೊಠಡಿಯ ಕಡೆ ಹೆಜ್ಜೆ ಹಾಕಿದರು. ಅವರ ಕಣ್ಣಲ್ಲಿದ್ದ ಎರಡು ಹನಿಗಳನ್ನು ಅವರ ಹೆಂಡತಿ ಸುನಂದಮ್ಮ ಮಾತ್ರ ಗುರುತಿಸಿದರು...

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
9900925529