14 ಅಕ್ಟೋಬರ್ 2021

ಮಕ್ಕಳಲ್ಲಿ ರಾಷ್ಟ್ರೀಯ ಮನೋಭಾವ ಬೆಳೆಸುವಲ್ಲಿ ಪೋಷಕರ ಪಾತ್ರ.


 


ಮಕ್ಕಳಲ್ಲಿ ರಾಷ್ಟ್ರೀಯತೆ ಬೆಳೆಸುವಲ್ಲಿ ಪೋಷಕರ ಪಾತ್ರ.

ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದ ಕೆಲ ಪ್ರಜೆಗಳೆನಿಸಿಕೊಂಡವರು ನಮ್ಮ  ಭಾರತದ ಧ್ವಜವನ್ನು ಕಾಲ್ಲಲಿ ಒಸಕಿ, ಬೆಂಕಿ ಹಂಚಿ ಸಾಮಾಜಿಕ ಮಾದ್ಯಮಗಳಲ್ಲಿ ಹಂಚಿಕೊಂಡು ವಿಕೃತಿ ಮೆರೆದಿರುವರು. ಇನ್ನೂ ಕೆಲ ಕಿಡಿಗೇಡಿಗಳು ನಮ್ಮ ಭಾರತ ಮಾತೆಯ ಅವಮಾನಿಸುತಾ  ಪರದೇಶಗಳ ಹೊಗಳಿ ಬುದ್ದಿ ಜೀವಗಳೆನಿಸಿಕೊಂಡು ತಿರುಗುತ್ತಿದ್ದಾರೆ .ಇಂತಹ ನೀಚ ಕೃತ್ಯ ಕಂಡಾಗ ನಿಜವಾದ ದೇಶಭಕ್ತರ ಹೃದಯ ಕುದಿಯದೇ ಇರದು.

"ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ ...."ಎಂಬಂತೆ ನಮ್ಮ ತಾಯ್ನಾಡು ನಮಗೆ ಸ್ವರ್ಗಕ್ಕೂ ಮಿಗಿಲು ಎಂಬುದನ್ನು ನಾವೆಲ್ಲರೂ ಒಪ್ಪಿಕೊಂಡರೂ ನಮ್ಮಲ್ಲಿ ದೇಶಭಕ್ತಿ ಕಡಿಮೆ ಎಂದರೆ ಕೆಲವರಿಗೆ ಬೇಸರವಾದರೂ ಅದೇ ಕಹಿ ಸತ್ಯ . ಇತ್ತೀಚಿನ ದಿನಗಳಲ್ಲಿ ಉಗ್ರರಿಗೆ ನಮ್ಮ ದೇಶದವರೇ ಆಶ್ರಯ ನೀಡಿ  ಸಹಕಾರ ನೀಡಿ ವರ್ಷಗಳ ಕಾಲ ಅವರಿಗೆ ಅನ್ನ ನೀಡಿದ ದೇಶದ್ರೋಹಿಗಳಿಗೆ ಏನು ಹೇಳೋಣ?.

ಮಾತೆತ್ತಿದರೆ ಸಂವಿಧಾನ, ಹಕ್ಕು ಮತ್ತು ಕರ್ತವ್ಯಗಳು ಸರ್ಕಾರದ ನೀತಿ ನಿಯಮಗಳ ಬಗ್ಗೆ ಪುಂಕಾನುಪುಂಕವಾಗಿ ಮಾತನಾಡುವ ಬುದ್ದಿವಂತರು ದೇಶಭಕ್ತಿ ,ದೇಶದ ಬಗೆಗಿನ ವಿಚಾರಗಳಲ್ಲಿ ಜಾಣ ಮೌನ ವಹಿಸುತ್ತಾರೆ.

ನಮ್ಮ ರಾಷ್ಟ್ರ ಲಾಂಛನ , ರಾಷ್ಟ್ರಗೀತೆ, ರಾಷ್ಟ್ರೀಯ ಪರಂಪರೆಯ ಮತ್ತು ರಾಷ್ಟ್ರವನ್ನು ಗೌರವಿಸಬೇಕಾದ್ದು ನಮ್ಮ ಕರ್ತವ್ಯ ಎಂದು ಸಂವಿಧಾನದಲ್ಲಿ ಉಲ್ಲೇಖವಿದೆ .ಆದರೆ ಕೆಲವರಿಗೆ ಇದು ಕಾಣದು. ಬಲವಂತವಾಗಿ ಯಾರಲ್ಲೂ  ದೇಶಭಕ್ತಿ ಮೂಡಿಸಲು ಸಾಧ್ಯವಿಲ್ಲ. ಅದು ನಮ್ಮ ಅಂತರಗದಲ್ಲಿ ಬರಬೇಕು.ಇದಕ್ಕೆ ಸಮುದಾಯ, ಮನೆ ,ಪೋಷಕರ ಪಾತ್ರ ಮಹತ್ತರವಾದದ್ದು.

ಮಕ್ಕಳಲ್ಲಿ ರಾಷ್ಟ್ರೀಯತೆ ಬೆಳಸಲು ಪೋಷಕರು ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳಬಹುದು.ರಾಷ್ಟ್ರೀಯ ಹಬ್ಬಗಳಂದು ಮಕ್ಕಳ ಜೊತೆಗೆ ಪಾಲ್ಗೊಳ್ಳುವುದು. ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ದಿನಾಚರಣೆ ಎಂದರೆ ಶಾಲಾ ಮಕ್ಕಳು ಮತ್ತು ಶಿಕ್ಷಕರಿಗೆ ಮಾತ್ರ ಎಂಬ ಅಲಿಖಿತ ನಿಯಮ ಪಾಲಿಸುವರು. ಆ  ದಿನ ಒಂದು ದಿನ ರಜೆ ಸಿಕ್ಕಿತು ಎಂದು ಬಹುತೇಕ ಪೋಷಕರು ರಜೆಯ ಮಜಾ ಅನುಭವಿಸಲು ಯಾವುದೋ  ಪ್ರವಾಸ ಅಥವಾ ರೆಸಾರ್ಟ್ಸ್ ಗೆ ತೆರಳುವುದು ಸಾಮಾನ್ಯವಾಗಿದೆ.  ಅದರ ಬದಲಿಗೆ ಎಲ್ಲಾ ಪೋಷಕರು ಅಂದು ತಮ್ಮ ಮಕ್ಕಳ ಜೊತೆಯಲ್ಲಿ ಕನಿಷ್ಠ ಒಂದು ರಾಷ್ಟ್ರೀಯ ಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ ಆ   ಮೂಲಕ ಮಕ್ಕಳಿಗೆ ಅಪರೋಕ್ಷವಾಗಿ  ದೇಶಭಕ್ತಿಯ ಪಾಠ ಹೇಳಿದಂತಾಗುತ್ತದೆ.ಇದು ಮಕ್ಕಳಲ್ಲಿ ರಾಷ್ಟ್ರೀಯತೆ ಬೆಳೆಯಲು ಪೂರಕವಾಗುತ್ತದೆ.

ರಾಷ್ಟಗೀತೆ ಹಾಡುವಾಗ ಎದ್ದು ನಿಂತ ಗೌರವ ಸಲ್ಲಿಸುವುದು. ಸಾದ್ಯವಾದರೆ ಮಕ್ಕಳ ಜೊತೆ ಪೋಷಕರು ರಾಷ್ಟ್ರಗೀತೆ ಹಾಡಬೇಕು .ಕಡೆಯಲ್ಲಿ ಒಮ್ಮೆ ಭಾರತ ಮಾತೆಗೆ ಜೈಕಾರ ಹಾಕಬೇಕು ಈ ರೀತಿ ಯಲ್ಲಿ ನಾವು ಮಾಡಿದರೆ ಮಕ್ಕಳು ನಮ್ಮ ಅನುಕರಿಸುವರು ಈ ನಿಟ್ಟಿನಲ್ಲಿ ಚಲನಚಿತ್ರ ಮಂದಿರಗಳಲ್ಲಿ ರಾಷ್ಟ್ರಗೀತೆ ಮತ್ತು ಅದಕ್ಕೆ ಗೌರವ ಸೂಚಿಸುವ ಕಾರ್ಯಕ್ರಮ ಯಶಸ್ವಿಯಾದರೂ ಕೆಲ ಕಿಡಿಗೇಡಿಗಳ ವಿತಂಡವಾದದಿಂದ ಅರ್ಧಕ್ಕೆ ನಿಂತದ್ದು ಬೇಸರದ ಸಂಗತಿ.

ನಮ್ಮ ದೇಶದ ಸಾಂವಿಧಾನಿಕ ಮೌಲ್ಯಗಳಾದ ಸಮಾನತೆ, ಸ್ವಾತಂತ್ರ್ಯ, ಬ್ರಾತೃತ್ವ, ಸಾಮಾಜಿಕ ನ್ಯಾಯ, ಮುಂತಾದ ಮೌಲ್ಯಗಳನ್ನು ಮಕ್ಕಳಿಗೆ ವಿವರಿಸಿ ನಮ್ಮ ದೇಶದ ಮಹತ್ವವನ್ನು ತಿಳಿಸಿ ನಮ್ಮ ದೇಶದ ಬಗ್ಗೆ ಹೆಮ್ಮೆ ಮೂಡಿಸಿ ರಾಷ್ಟ್ರೀಯತೆಯನ್ನು ಬೆಳೆಸಬಹುದು.

ನಮ್ಮ ಐತಿಹಾಸಿಕ, ಸಾಂಸ್ಕೃತಿಕ ,ಪ್ರಾಕೃತಿಕ  ಪರಂಪರೆಯನ್ನು ಮಕ್ಕಳಿಗೆ ವಿವರಿಸಿ ಪ್ರಪಂಚದ ಇತರೆ ದೇಶಗಳಲ್ಲಿ  ನಮ್ಮ ದೇಶದ ಬಗ್ಗೆ ಇರುವ ಸಕಾರಾತ್ಮಕ ಮತ್ತು ಗೌರವದ ಭಾವನೆಗಳನ್ನು ಉಲ್ಲೇಖಿಸಿ ನಮ್ಮ ಮಕ್ಕಳಲ್ಲಿ ರಾಷ್ಟ್ರೀಯ ಮನೋಭಾವ ಬೆಳೆಸಬೇಕು.

ಸುತ್ತಲೂ ಶತೃಗಳಿದ್ದರೂ ಮನೆಗೊಬ್ಬರು ಸೈನಿಕರಾಗಿ ದುಡಿದು ತಮ್ಮ ದೇಶದ ಬಗ್ಗೆ ಕೆಟ್ಟದಾಗಿ ಮಾತಾಡಿದರೂ ಅವರಿಗೆ ಪಾಠ ಕಲಿಸುವ ಇಸ್ರೇಲ್ ನ ಪ್ರಜೆಗಳಂತಹ  ದೇಶಭಕ್ತಿ ಮತ್ತು ರಾಷ್ಟ್ರೀಯತೆ ನಮ್ಮದಾಗಬೇಕು. ಯಾವುದೇ ಪಕ್ಷ ,ಸಿದ್ದಾಂತ, ಜಾತಿ, ಮತ, ಪಂಥಗಳು ನಮ್ಮ ರಾಷ್ಟ್ರೀಯತೆ ಮತ್ತು ದೇಶಾಭಿಮಾನಕ್ಕೆ ಅಡ್ಡಿಯಾಗಲೇಬಾರದು. ಇಲ್ಲವಾದರೆ ಮತ್ತೊಮ್ಮೆ ನಾವು  ದಾಸ್ಯದ ಸಂಕೋಲೆಗೆ ಸಿಲುಕಿ ನಮ್ಮ ರಾಷ್ಟ್ರೀಯತೆ ಮತ್ತು ಅಸ್ತಿತ್ವಕ್ಕೆ ಪರದಾಡಬೇಕಾದೀತು.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
9900925529

13 ಅಕ್ಟೋಬರ್ 2021

ನೀ ಬಂದು ಮುತ್ತನಿಡು. ಕವನ


 

ನೀ ಬಂದು ಮುತ್ತನಿಡು.

ಬೇಸರಿನ ಸಂಜೆಯಿದು
ಬೇಕೆನೆಗೆ ನಿನ್ನ ಜೊತೆ
ನೇಸರನು ನಡೆದನು
ಕೇಳೀಗ ನನ್ನ ಕಥೆ .

ತಂಗಾಳಿಯಿದ್ದರೂ ಕೂಡಾ
ಮೈಯಲ್ಲ ಏತಕೊ ಬಿಸಿ
ನೀ ಬಂದು ಮುತ್ತನಿಡು
ಖಾಯಿಲೆಯಾಗುವುದು ವಾಸಿ .

ದಿನಕರನು ತೆರೆಮರೆಗೆ ಸರಿದ
ಕತ್ತಲಾಗುತಿದೆ ಮನಕೆ
ಉಷೆಯಂತೆ ಬಂದು ಬಿಡು
ಬೆಳಕು ತೋರಲು  ಪ್ರೇಮಕೆ .

ಸಿಹಿಜೀವಿ
ಸಿ ಜಿ ವೆಂಕಟೇಶ್ವರ


ದುರ್ಗಾದೇವಿಗೆ ನಮನ.ದುರ್ಗಾಷ್ಠಮಿಯ ಶುಭಾಷಯಗಳು.DURGASHTAMI


 *ದುರ್ಗಾ ದೇವಿಗೆ ನಮನ*


ದುರ್ಗಾಷ್ಠಾಮಿಯ ಶುಭಾಶಯಗಳೊಂದಿಗೆ 



ದುರ್ಗಾ ದೇವಿಯೆ ನಿನಗೆ

ನನ್ನ ನಮನ

ದಯಮಾಡಿ ನೀಡು

ನಮ್ಮೆಡೆಗೆ ಗಮನ.


ಮನದಲೇನೋ ಬೇಗೆ

ನಿಂತಲ್ಲೆ ತಲ್ಲಣ

ದುಷ್ಷರ ಹಿಂಸೆ, ದುರ್ಗುಣಕೆ

ತಳಮಳಿಸಿದೆ ಜನಗಣ.


ರಕ್ಕಸರ ತರಿದವಳೆ 

ಶಿಷ್ಟರ ರಕ್ಷಿಪಳೆ

ತರಿದು ಬಿಡು ಖೂಳರ

ಸ್ವಚ್ಚವಾಗಲಿ ಇಳೆ .


ಅಜ್ಞಾನಿಗಳಲಿ ಜ್ಞಾನ 

ಬೀಜವ ಬಿತ್ತಿ ಬಿಡು

ಜಗವಾಗಲಿ ಸುಖ

ಶಾಂತಿಯ ಬೀಡು.


ಸಿಹಿಜೀವಿ 

ಸಿ ಜಿ ವೆಂಕಟೇಶ್ವರ 

ತುಮಕೂರು

9900925529


ಸಿಂಹ ಧ್ವನಿ ೧೩/೧೦/೨೧


 

12 ಅಕ್ಟೋಬರ್ 2021

ಕಪ್ಪು ಬಿಳುಪಿನ ಪಟದ ಬಣ್ಣದ ನೆನಪುಗಳು . ಬಾಲ್ಯದ ನೆನಪಿನ ಮೆರವಣಿಗೆ.


 


*ಕಪ್ಪು ಬಿಳುಪಿನ ಪಟದ ಬಣ್ಣದ ೆನೆಪುಗಳು*

ಅದು 1984 ರ ವರ್ಷ ನಾನಾಗ ನನ್ನೂರು  ಚೌಡಗೊಂಡನಹಳ್ಳಿಯಲ್ಲಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದೆ.ಏಕೋಪಾದ್ಯಾಯ ಶಾಲೆಗೆ ತಿಪ್ಪೇಶಪ್ಪ ಎಂಬ ಶಿಕ್ಷಕರು ನಮಗೆ ಬೋಧಿಸುತ್ತಿದ್ದರು. ಒಂದರಿಂದ ನಾಲ್ಕು ತರಗತಿಗಳನ್ನು ಅವರು ನಿಭಾಯಿಸುತ್ತಾ ನಮಗೆ ಪಾಠ ಮಾಡುತ್ತಿದ್ದ ಕೌಶಲ್ಯ ನೆನದು ಈಗಲೂ ನನಗೆ ಅವರ ಬಗ್ಗೆ ಹೆಮ್ಮೆ ಅನಿಸುತ್ತದೆ. ಕಾರಣ ಪ್ರಸ್ತುತ ಶಿಕ್ಷಕನಾದ ನಾನು ಕೇವಲ ಒಂದು ವಿಭಾಗಕ್ಕೆ  ಸೀಮಿತವಾದ ಮಕ್ಕಳಿಗೆ ಬೋಧಿಸುವ ವೇಳೆ ಹಲವಾಯ ಸವಾಲುಗಳು ಎದುರಾಗುತ್ತವೆ, ಅಂತದ್ದರಲ್ಲಿ ಅಂದು ನಾಲ್ಕು ತರಗತಿಯ ಮಕ್ಕಳನ್ನು ಅವರು ನಿಭಾಯಿಸುತ್ತಿದ್ದರು ಜೊತೆಗೆ ಈಗಿನಂತೆ ಆಗ ವಿಷಯವಾರು ಶಿಕ್ಷಕರು ಇರಲಿಲ್ಲ ,ಕನ್ನಡ , ಗಣಿತ, ಸಮಾಜ ಪರಿಚಯ, ವಿಜ್ಞಾನ ಹೀಗೆ ಎಲ್ಲಾ ವಿಷಯಗಳನ್ನು ಅವರೇ ನಮಗೆ ಕಲಿಸುತ್ತಿದ್ದರು ಅವರ ಜ್ಞಾನ ಮತ್ತು ಚಾಕಚಕ್ಯತೆಯನ್ನು ಮೆಚ್ಚಲೇ ಬೇಕು.

ಪಾಠವನ್ನು ಬಹಳ ಸೊಗಸಾಗಿ ಮಾಡುತ್ತಿದ್ದ ಜೊತೆಗೆ ನಮಗೆ ಕ್ರೀಡೆ, ಹೊರಸಂಚಾರ, ಪ್ರವಾಸ ಹೀಗೆ ನಮ್ಮ ನ್ನು ಸದಾ ಸಂತೋಷಪಡಿಸುತ್ತಾ ನಮಗರಿವಿಲ್ಲದೇ ಜ್ಞಾನದ ಊಟ ಬಡಿಸುತ್ತಿದ್ದರು.
ವಾರಕ್ಕೊಮ್ಮೆ ಎಂಬಂತೆ, ಕೆರೆಯಾಗಲ ಹಳ್ಳಿಯ ಕೆರೆ, ಹೊರಕೆರೆದೇವರಪುರದ ಕಲ್ಯಾಣಿ, ದೇವಸ್ಥಾನ ಹೀಗೆ ಹೊರಸಂಚಾರ ಮಾಡಿಸಿ ನಮಗರಿವಿಲ್ಲದ ಹೊಸ ಜಗತ್ತಿನ ದರ್ಶನ ಮಾಡಿಸಿದ್ದರು ನಮ್ಮ ಮೇಷ್ಟ್ರು.
ಮುಂದಿನ ವಾರ ದುರ್ಗ ಕ್ಕೆ ಟೂರ್  ಕರೆದುಕೊಂಡು ಹೋಗುತ್ತೇನೆ ಬರುವವರು ಹತ್ತು ರೂಪಾಯಿಗಳನ್ನು ನಿಮ್ಮ ಮನೆಯಲ್ಲಿ ಕೇಳಿ ತಂದು ಕೊಡಿ ಎಂದಿದ್ದರು. ನಾನು ನನ್ನ ಅಮ್ಮನ ಬಳಿ ವಿಷಯ ಹೇಳಿದೆ ಅಮ್ಮ ಸೀರೆ ಸೆರಗಿನ ಕೊನೆಯ ಗಂಟು ಬಿಚ್ಚಿ ಹತ್ತು ರೂಗಳ ನೋಟು ಕೊಟ್ಟರು. ಅರ್ಧ ಗಂಟೆಯ ಹಿಂದೆ    ಗೌಡರ ಮನೆಗೆ ಹೋಗಿ ಒಂದು ದಿನ ಕೂಲಿ ಮಾಡಿದ ದುಡ್ಡು ಇಸ್ಕಂಬರಬೇಕು ಎಂದು ಅಮ್ಮ ಅಂದದ್ದು ನಂತರ ನನಗೆ ನೆನಪಾಯಿತು.

ದುರ್ಗಕ್ಕೆ ಟೂರ್ ಹೋಗುವ ಹಿಂದಿನ ದಿನ ಬಹುಶಃ ನನ್ನಮ್ಮ ನಿದ್ದೆ ಮಾಡಿರಲಿಲ್ಲ ಎನಿಸುತ್ತದೆ. ಎರಡು ಗಂಟೆಗೇ ಎದ್ದು ಮೊಸರನ್ನದ ಬುತ್ತಿ ಕಟ್ಟಿದ್ದರು , ಅದನ್ನು ಸ್ಟೀಲ್ ಟಿಪನ್ ಕ್ಯಾರಿಯರ್ ಗೆ ಹಾಕಿ ರಡಿ ಮಾಡಿದ್ದರು. ನಾಲ್ಕು ಗಂಟೆಗೆ ನನ್ನ ಎಬ್ಬಿಸಿ ಬಿಸಿ ನೀರಿನ ಸ್ನಾನ ಮಾಡಿಸಿ ಬಟ್ಟೆಗಳನ್ನು ಹಾಕಿ ಕ್ರಾಪು ತೆಗೆದು , ಕಣ್ಣಾಸರ ತೆಗೆದು ನೆಟಿಗೆ ಮುರಿದು , "ಹುಸಾರು ಕಣಪ್ಪ ,ದುರ್ಗ ದೊಡ್ಡ ಪೇಟೆ ಮೇಷ್ಟ್ರು ನ  ಬಿಟ್ಟು ಎಲ್ಲೂ ಹೋಗಬ್ಯಾಡಾ , ತಗಾ ಇದನ್ನ ಖರ್ಚಿಗೆ ಇಕ್ಯಾ"
ಎಂದು ಮನೆಯ ಜೀರಿಗೆ ಡಬ್ಬಿಯಿಂದ ತೆಗೆದು ಒಂದು ರೂಪಾಯಿ ಕೊಟ್ಟರು.

ನಮ್ಮೂರಿನಿಂದ ನೇರವಾಗಿ ದುರ್ಗ ಕ್ಕೆ ಹೋಗಲು ಬಸ್ ಸೌಲಭ್ಯವಿರಲಿಲ್ಲ ಈಗಲೂ ಇಲ್ಲ ಅದು ಬೇರೆ ಮಾತು.
ಬೆಳಗಿನ ಜಾವದ ಐದೂವರೆಗೆ ನಮ್ಮ ಸ್ನೇಹಿತರು ಅವರ ಪೋಷಕರು  ಮೇಷ್ಟ್ರು ನಡೆದುಕೊಂಡು ಉಪ್ಪರಿಗೇನಹಳ್ಳಿಗೆ ಹೋದೆವು ಅಲ್ಲಿ ಖಂಡೇನಹಳ್ಳಿ ತಿಪ್ಪೇಸ್ವಾಮಿ ಬಸ್ ಹತ್ತಿ ಅಮ್ಮನಿಗೆ ಟಾಟಾ ಮಾಡಿದೆ. ಬಸ್  ಪಶ್ಚಿಮಾಭಿಮುಖವಾಗಿ ಚಲಿಸಿತು. ಗೆಳೆಯರ ಜೊತೆಯಲ್ಲಿ ಬಸ್ ಪಯಣದ ಅನಂದ ಅನುಭವಿಸುತ್ತಾ ನಂದನ ಹೊಸೂರು, ಹೊರಕೆರೆದೇವರಪುರ, ಮತಿಘಟ್ಟ, ಈಚಘಟ್ಟ, ಚಿತ್ರ ಹಳ್ಳಿ, ಹೀಗೆ ಪ್ರತಿ ಊರಿಗೆ ಬಸ್ ಬಂದಾಗ ಆ ಊರಿನ ಬೋರ್ಡ್ ಜೋರಾಗಿ ಎಲ್ಲಾ ಗೆಳೆಯರು ಸೇರಿ ಓದುತ್ತಿದ್ದೆವು ಅದನ್ನು ನೋಡುತ್ತಾ ನಮ್ಮ ಮೇಷ್ಟ್ರು ಒಳಗೊಳಗೆ ಖುಷಿ ಪಟ್ಟರು .ಯಾರೋ ಸಹಪ್ರಯಾಣಿಕರು "ಸೆನಾಗಿ ಬೋರ್ಡ್ ಒದ್ತೀರಾ ಕಣ್ರಾ ಹುಡುಗ್ರಾ,ಯಾರೋ ಮೇಷ್ಟ್ರು ಸೆನಾಗಿ ಹೇಳ್ಕೊಟ್ಟದಾರೆ" ಎಂದಾಗ ನಮಗೂ ಖುಷಿಯಾಯಿತು.

ದುರ್ಗ ಯಾರ್ ಇಳೀರಿ ಎಂದರು ಕಂಡಕ್ಟರ್ ,ಆಗಲೇ ನನಗೆ ಅರ್ಥವಾಗಿದ್ದು ನಾನು ಮೊದಲ ಬಾರಿಗೆ ದುರ್ಗ ತಲುಪಿದೆ ಎಂದು.
ಮೊದಲ ಬಾರಿಗೆ ಚಿತ್ರದುರ್ಗದ ದೊಡ್ಡ ಕಟ್ಟಡಗಳನ್ನು ನೋಡುತ್ತಾ ನಡೆದುಕೊಂಡು ರಂಗಯ್ಯನ ಬಾಗಿಲ ದಾಟಿ ದುರ್ಗದ ಕೋಟೆ ನೋಡಲು ಹೊರಟೆವು . ಮದ್ದು ಅರೆಯುವ ಕಲ್ಲುಗಳು, ಏಕನಾಥೇಶ್ವರಿ ದೇವಾಲಯ, ಮದ್ದಿನ ಮನೆ , ಅಕ್ಕತಂಗೇರ ಹೊಂಡ, ಓಬವ್ವನ ಕಿಂಡಿ ,ಹೀಗೆ ದುರ್ಗದ ಕೋಟೆಯ ಸ್ಥಳಗಳನ್ನು ಬೆರಗಿನಿಂದ ನೋಡಿದೆವು ಆ ಸ್ಥಳಗಳ ಬಗ್ಗೆ ಕೋಟೆಯ ಬಗ್ಗೆ ನಮ್ಮ ಮೇಷ್ಟ್ರು ನೀಡಿದ ವಿವರಣೆ ದುರ್ಗದ ಬಗ್ಗೆ ಹೆಮ್ಮೆ ಮೂಡಿಸಿತು.
"ಅಗೋ ನೋಡ್ರಿ ಅದು ಕುದುರೆ ಹೆಜ್ಜೆ ಅಲ್ಲಿಗೆ ನೀವು ಹತ್ತಾಕೆ ಆಗಲ್ಲ ದೊಡ್ಡಾರಾದ ಮೇಲೆ ಹತ್ತುವಿರಂತೆ ಬನ್ನಿ ಈಗ ಕೆಳಗೆ ಹೋಗೋಣ " ಅಂದ್ರು ನಮ್ಮ ಮೇಷ್ಟ್ರು.

ಏಳು ಸುತ್ತಿನ ಕೋಟೆ ಇಳಿದು
ಚಂದವಳ್ಳಿಯ ಕೆರೆಗೆ ಹೋದೆವು ಅಲ್ಲಿ ಗುಹೆಗಳನ್ನು ಹೊರಗಿನಿಂದಲೇ ನೋಡಿದೆವು ಆ ವೇಳೆಗಾಗಲೆ ನಮ್ಮ ಹೊಟ್ಟೆಗಳು ತಾಳ ಹಾಕುತ್ತಿದ್ದವು ಇದನ್ನು ಅರಿತ ನಮ್ಮ ಮೇಷ್ಟ್ರು "ಮಕ್ಕಳ .. ನಿಮ್ ಬುತ್ತಿ ಬಿಚ್ಚಿ ತಿನ್ರಿ, ಇಲ್ಲೇ ಕುಡಿಯಾಕೂ ನೀರಿದೆ" ಅಂದರು ಎಲ್ಲರ ಬುತ್ತಿ ಬಿಚ್ಚಿ, ಎಲ್ಲರ ತರ ತರದ ತಿಂಡಿಗಳನ್ನು ಹಂಚಿಕೊಂಡು ತಿಂದೆವು . ಅಲ್ಲೇ ಇರುವ ಪಾರ್ಕ್ ನಲ್ಲಿ ಸ್ವಲ್ಪ ಹೊತ್ತು ಆಟ ಆಡಿದೆವು.

ನಂತರ ನಡೆದುಕೊಂಡು ಗಾಯತ್ರಿ ಹೋಟೆಲ್, ದಾಟಿ ನೀಲಕಂಠೇಶ್ವರ ದೇವಾಲಯದಲ್ಲಿ ಕೈಮುಗಿದು ಮುಂದೆ ಸಾಗಿದೆವು .ನಮ್ಮ ಮೇಷ್ಟ್ರು ಒಂದು ದೊಡ್ಡ ಕಟ್ಟಡದ ಮುಂದೆ ನಿಲ್ಲಲು ಹೇಳಿದರು .ಆ ಕಟ್ಟಡದ ಮೇಲೆ ಪ್ರಭಾತ್ ಸ್ಟುಡಿಯೋ ಎಂಬ ಬೋರ್ಡ್ ಇತ್ತು , ಎಲ್ಲರೂ ಒಳಗೆ ನಡೆಯಿರಿ ಎಂದರು ,ಒಳಗೆ ಹೋದಾಗ ಪೋಟೊಗ್ರಾಪರ್ ನಮ್ಮನ್ನು ಸಾಲಾಗಿ ಕುಳ್ಳಿರಿಸಿ ಪೋಟೋ ತೆಗೆದರು.
ಪೋಟೋ ಸ್ಟುಡಿಯೋ ದಿಂದ ಹೊರಬಂದಾಗ ಸಂಜೆಯಾಗುತ್ತಿದ್ದದು ನಮ್ಮ ಗಮನಕ್ಕೆ ಬಂದಿತು , ಬಸ್ ಸ್ಟ್ಯಾಂಡ್ ಗೆ ಬಂದು  ರಾಜ್ ನೀನ್ ಬಸ್ ಹತ್ತಿ ಕುಳಿತೆವು .ಓಡಾಡಿ ಸುಸ್ತಾದ ನಾವು ಬಸ್ ನಲ್ಲಿ ತೂಕಡಿಸಲು ಶುರುಮಾಡಿದೆವು ಕೆಲವರು ನಿದ್ರೆಯನ್ನು ಮಾಡಿದರು .ನಮ್ಮ ಬಸ್ ಉಪ್ಪರಿಗೇನಹಳ್ಳಿ ತಲುಪಿದಾಗ ಕತ್ತಲಾಗಿತ್ತು .ಅಮ್ಮ ಬಸ್ಟಾಂಡ್ ನಲ್ಲಿ ನನಗಾಗಿ ಕಾದಿದ್ದರು. ನನ್ನ ಮಗ ಟೂರ್ ಹೋಗಿ ಬಂದ ಎಂಬ ಸಂತಸ ಅಮ್ಮನ ಮೊಗದಲ್ಲಿ ಇತ್ತು ಅದೇ ಆನಂದ ನನ್ನಲ್ಲೂ ಇತ್ತು.

ಒಂದು ವಾರದ ಬಳಿಕ ನಮ್ಮ ಮೇಷ್ಟ್ರು ನಮಗೆ ಒಂದೊಂದು ರಟ್ಟಿನ ಗ್ರೂಪ್ ಪೋಟೋ ಕೊಟ್ಟರು. ಅದರಲ್ಲಿ ನಮ್ಮನ್ನು ನಾವು ನೋಡಿ ಹಿರಿಹಿರಿ ಹಿಗ್ಗಿದೆವು .ನಾನಂತೂ ಯಾವಾಗಲೂ ಅದೇ ಪೋಟೋ ನೋಡುತ್ತಾ ಕೂರುತ್ತಿದ್ದೆ , ಏಕೆಂದರೆ ಅದು ನನ್ನ ಜೀವನದ ಮೊದಲ ಪಟ!

ನಲವತ್ತಾರು ವರ್ಷಗಳಲ್ಲಿ ಹೊರದೇಶ ನೇಪಾಳ ಸೇರಿದಂತೆ ನೂರಾರು ಸ್ಥಳಗಳಲ್ಲಿ ಪ್ರವಾಸ ಮಾಡಿರುವೆ ಆದರೆ ನನ್ನ ಮೊದಲ ದುರ್ಗದ ಪ್ರವಾಸವೇ ನನಗೆ ವಿಶೇಷವಾದ ಮತ್ತು ಹೆಚ್ಚು ಖುಷಿ ನೀಡಿದ ಪಯಣ ಎಂಬುದಂತೂ ಸತ್ಯ.
ವಿವಿಧ ಲೆನ್ಸ್ ಕ್ಯಾಮೆರಾಗಳಲ್ಲಿ  ,ಹೊಸ ಮಾದರಿಯ ಹೆಚ್ಚು ಮೆಗಾಪಿಕ್ಸಲ್ ಮೊಬೈಲ್ ಕ್ಯಾಮೆರಾಗಳಲ್ಲಿ ಸಾವಿರಾರು ಪೋಟೋ ತೆಗೆದುಕೊಂಡಿರುವೆ. ನಮ್ಮದೇ ಪೋಟೋಗಳು ಹೇಗಿದ್ದರೂ ನಮಗೆ ಚೆಂದ ಆದರೆ  ಮೊದಲ ಬಾರಿಗೆ ಪ್ರಭಾತ್ ಸ್ಟುಡಿಯೋದಲ್ಲಿ ಅಂದು  ತೆಗೆದ ಕಪ್ಪು ಬಿಳುಪಿನ ನನ್ನ ಜೀವನದ ಮೊದಲ ಪಟ ಅತ್ಯಂತ ಸುಂದರ ಪಟ. ಆ ಪಟದಲ್ಲಿ ನನ್ನ ಬಾಲ್ಯದ ನೂರಾರು ಬಣ್ಣದ ನೆನಪುಗಳಿವೆ.

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
990092529