15 ಜುಲೈ 2021

ಚಿಂತೆ ಬಿಡಿ ,ನಕ್ಕುಬಿಡಿ .ಲೇಖನ


 


ಚಿಂತೆ ಬಿಡಿ ,ಒಮ್ಮೆ ನಕ್ಕು ಬಿಡಿ

ನವರಸಗಳಿರದ ಜೀವನ ಊಹಿಸಲೂ ಅಸಾಧ್ಯ, ನನಗೆ ಎಲ್ಲಾ ರಸಗಳೂ ಇಷ್ಟ ಮನರಂಜನೆಗಾಗಿ ಈ ರಸಗಳ ಹದವಾದ ಮಿಶ್ರಣ ನಮ್ಮನ್ನು  ಕೆಲವೊಮ್ಮೆ ಬೇರೆಯದೇ ಲೋಕಕ್ಕೆ ಕೊಂಡೊಯ್ದು ನಮ್ಮ ಒತ್ತಡದ , ಯಾಂತ್ರಿಕ ಜೀವನಕ್ಕೆ ಟಾನಿಕ್ ನಂತೆ ಕಾರ್ಯ ಮಾಡುತ್ತವೆ.

ಯಾವುದಾದರೂ ಒಂದು ರಸವನ್ನು ಆಯ್ಕೆ ಮಾಡಿಕೋ ಎಂದರೆ ಹಾಸ್ಯವೇ ನನಗಿರಲಿ ಎನ್ನುವೆ. ಕೆಲವರು ಯಾವಾಗಲೂ ಹಳ್ಳೆಣ್ಣೆ ಕುಡಿದವರಂತೆ ಮುಖ ಮಾಡಿಕೊಂಡಿರುವರು,ಮತ್ತೆ ಕೆಲವರು ಸಿಡುಕು ಮೂತಿ ಸಿದ್ದಪ್ಪಗಳು, ಏನೂ ಬರೀ ಗಂಡಸರ ಹೆಸರೇ ಬಂದವೆಂದು ಬೇಸರ ಪಡಬೇಕಿಲ್ಲ, ಕೆಲ ಮಹಿಳಾ ಮಣಿಗಳು ಸುಂದರ ವದನವಿದ್ದರೂ ನಗಲು ಚೌಕಾಸಿ ಮಾಡುವರು. ಇಂಥವರನ್ನು ನೋಡಿಯೇ ನಮ್ಮ ಡುಂಡಿರಾಜರು

ಕ್ಯಾಷ್ ಕೌಂಟರಿನ
ಹುಡುಗಿಯರ
ಮುಖದಲ್ಲಿ ನಗು
ಹುಡುಕಿದ ಸಿಗದು|
ಅದಕ್ಕೆ ಇರಬೇಕು
ಹಾಕಿದ್ದಾರೆ ಬೋರ್ಡ್
"ನಗದು"!!

ಎಂದು ಹನಿಗವನ ಬರೆದಿರುವರು

ನಗಲು ಕಡಿಮೆ ಶಕ್ತಿ ಬೇಕು ಸಿಟ್ಟಾಗಲು ಬಹಳ ಶಕ್ತಿ ಬೇಕು ನಗುತ್ತಿರಿ ಎಂದರೆ " ಅದೆಲ್ಲಾ ನಿನಗೇಕೆ ನಿನ್ದೇನೋ ಅದನ್ನು ನೋಡ್ಕೊ "  ಎಂದು ಉರಿದು ಬೀಳುವರಿಗೇನೂ ಕಡಿಮೆಯಿಲ್ಲ.

ಕೆಲವು ಹೆಣ್ಣು ಮಕ್ಕಳಿಗೆ ಗಂಡ ಕೇಳಿದ್ದು ಕೊಡಿಸಿದರೆ ಮಾತ್ರ ನಗು ಇಲ್ಲದಿರೆ ನಗು ಮಾಯ

ಅಂತಹವರ ಕಂಡು ಹೀಗೆ ಹೇಳಬಹುದು

ನನ್ನವಳು ಕೇಳಿದ್ದು
ಕೊಡಿಸಿದರೆ
ಮನೆಯೆಲ್ಲಾ
ನಗುಮಯ|
ಕೊಡಿಸದಿದ್ದರೆ
ನಗು ಮಾಯ||

ಇನ್ನೂ ಕೆಲವು ಮಹಿಳೆಯರಿಗೆ ಬಂಗಾರವೆಂದರೆ ಎಲ್ಲಿಲ್ಲದ  ಪ್ರಾಣ ಅದಕ್ಕೆ ಹೀಗೆ ಹೇಳಬಹುದು

ಅವಳ ವದನದಲಿ
ಮೂರು ದಿನದಿಂದ
ನಗುವಿಲ್ಲ|
ಕಾರಣವಿಷ್ಟೇ
ಅವಳ ಗಂಡನ
ಕಾಡಿ ಬೇಡಿದರೂ
ನಗವ ಕೊಡಿಸಿಲ್ಲ||

ಇತ್ತಿಚಿನ ದಿನಗಳಲ್ಲಿ ನಗುವ ಮಹತ್ವ ತಿಳಿದು ನಗರಗಳಲ್ಲಿ ಅಲ್ಲಲ್ಲಿ ನಗೆ ಕ್ಲಬ್ ಗಳು ,ನಗೆ ಕೂಟಗಳು ತಲೆ ಎತ್ತಿವೆ.

ಅವನು ಮನಸಾರೆ
ನಗಲು ಕಾರಣ
ನಗೆ ಕೂಟ|
ಯಾಕೋ ನಗೆ
ಮಾಯವಾಗುತ್ತದೆ
ನೋಡಿದ ತಕ್ಷಣ
ತಾಳಿ ಕಟ್ಟಿದ ಪೋಟ||

ಹೀಗೆ ದುಃಖ ಪಡಲು ಬೇಕಾದಷ್ಟು ಕಾರಣಗಳು ಸಿಗುತ್ತವೆ ನಗಬೇಕೆಂದು ನಾವು ತೀರ್ಮಾನವನ್ನು ಮಾಡಿದರೆ ನಮ್ಮ ಮನಸ್ಥಿತಿಯನ್ನು ಸಕಾರಾತ್ಮಕವಾಗಿ  ಬದಲಾಯಿಸಿಕೊಂಡರೆ ನಗುವುದು ಕಷ್ಟವೇನಲ್ಲ.

ಚಾರ್ಲಿ ಚಾಪ್ಲಿನ್ ರವರು ಹೇಳಿದಂತೆ "ನಾವು ಇಡೀ ದಿನದಲ್ಲಿ ಒಮ್ಮೆಯೂ ನಗದಿದ್ದರೆ  ಆ ದಿನ ವ್ಯರ್ಥ " ಹಾಗಾಗಿ ದಿನಗಳನ್ನು ಅನಗತ್ಯವಾಗಿ ವ್ಯರ್ಥ ಮಾಡದಿರೋಣ , ನಗು ನಗುತ್ತಾ, ನಗಿಸತ್ತಾ ಜೀವಿಸೋಣ ,ಈ ಲೇಖನ ಓದಿದ ಮೇಲೆ ಸಿಟ್ಟು ಬಿಡಿ, ಚಿಂತೆ ಬಿಡಿ,ಒಮ್ಮೆ ನಕ್ಕುಬಿಡಿ

ಸಿಹಿಜೀವಿ
ಸಿ ಜಿ ವೆಂಕಟೇಶ್ವರ

14 ಜುಲೈ 2021

ಕನಸು .ಹನಿಗವನ


 



*ಕನಸು*


ಅವಳ ಸೌಂದರ್ಯ 

ನೆಟ್ಟ ಕಂಗಳ ಕೀಳದಂತಹ

ಸೊಗಸು|

ಆದರೆ ನನ್ನ ಗಮನ ಮಾತ್ರ

ಅವಳ ಕಂಗಳಲಿರುವ

ಕೋಟಿ ಕನಸು||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಭಗವಂತನ ಸೇರೋಣ. ಲೇಖನ


 


ಭಗವಂತನ ಸೇರೋಣ ಕಿರುಲೇಖನ


ಭಗವಂತ ಸರ್ವಾಂತರ್ಯಾಮಿ, ನಿರಾಕಾರ,‌ನಿರ್ಗುಣ, ಸರ್ವಶಕ್ತ ಎಂಬುದು ನಮಗೆ ತಿಳಿದ ವಿಚಾರವೇ ಆಗಿದೆ.

 ಭಗವಂತನ ಇರುವಿಕೆ ,ಒಲಿಸಿಕೊಳ್ಳುವಿಕೆ , ಪೂಜಿಸುವಿಕೆಯ ವಿಚಾರದಲ್ಲಿ ಅನಾದಿ ಕಾಲದಿಂದಲೂ ಹಲವಾರು ಚರ್ಚೆಗಳು ನಡೆದಿದ್ದರೂ ಇದಮಿತ್ತಂ ಎಂಬ ತೀರ್ಮಾನಕ್ಕೆ ಬರಲಾಗಿಲ್ಲ,  ದ್ವೈತ, ಅದ್ವೈತ, ವಿಶಿಷ್ಟಾದ್ವೈತ, ಶಕ್ತಿ ವಿಶಿಷ್ಟಾದ್ವೈತ ಹೀಗೆ ವಿವಿಧ ಸಿದ್ದಾಂತಗಳು ಮಂಡನೆಯಾದರೂ ಯಾವುದೂ ಸರ್ವ ಸಮ್ಮತವಾದ ಸಿದ್ದಾಂತಗಳಲ್ಲ 


ಭಗವಂತನ ಆರಾಧನೆಗೆ ಮೊದಲು ಮೂರ್ತ ಸ್ವರೂಪದ ಆರಾಧನೆ ಮಾಡುವುದು ಒಳಿತು ,ಕ್ರಮೇಣ ನಮ್ಮ ಸಾಧನೆ , ಧ್ಯಾನ ,ಪ್ರಾರ್ಥನೆ, ಅನುಸಂಧಾನ , ಮುಂತಾದವುಗಳ ಆಧಾರದ ಮೇಲೆ ಅಮೂರ್ತವಾದ ಆರಾಧನೆ ಗೆ ಮುಂದಾಗಬಹುದು ಕೊನೆಗೆ ಅಹಂ ಬ್ರಹ್ಮಾಸ್ಮಿ ಎಂಬ ಸ್ತಿತಿಗೆ ತಲುಪಿ ಆತ್ಮ ಸಾಕ್ಷಾತ್ಕಾರ ಪಡೆಯಬಹುದು.


ಮೂರ್ತ ಅಮೂರ್ತಗಳ

ಗೊಡವೆಯಿಲ್ಲದೆ 

ಆರಾಧಿಸುವ ನಾವು

ಸರ್ವ ಶಕ್ತನ|

ಭಕ್ತಿಯ ಏಣಿಯ 

ಒಂದೊಂದೇ ಕಾಲನ್ನು

ಹತ್ತಿ ಸೇರೋಣ

ಭಗವಂತನ||



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

13 ಜುಲೈ 2021

ಮಕ್ಕಳು ದೇವರಾಗಲಿ .ಲೇಖನ


 


ಮಕ್ಕಳು ದೇವರಾಗಲಿ

ಒಂಭತ್ತನೆಯ ತರಗತಿಯಲ್ಲಿ ಸಮಾಜ ವಿಜ್ಞಾನ ಪಾಠ ಮಾಡುತ್ತಿದ್ದೆ ಧಾರ್ಮಿಕ ಸುಧಾರಣಾ ಚಳುವಳಿ ಗೆ ಸಂಬಂಧಿಸಿದಂತೆ ಬೋಧನೆ ಮಾಡುವಾಗ   ನಮ್ಮೆಲ್ಲರಲ್ಲೂ ಆತ್ಮವಿದೆ ಈ ಆತ್ಮ "ಪರಮ" ಆತ್ಮನಲ್ಲಿ ಲೀನವಾದರೆ ನಾವು ಮುಕ್ತಿ ಪಡೆದಂತೆ, ಹಾಗಾಗಿ ಪ್ರತಿಯೊಂದು ಜೀವಿಯಲ್ಲಿ ಆತ್ಮವಿದೆ, ಹಾಗಾಗಿ  ಅವೆಲ್ಲವೂ ದೇವರ ಸಮಾನ ,ನೀವೂ ಸಹ ಎಂದೆ ,ತಟ್ಟನೆ ಒಬ್ಬ ವಿದ್ಯಾರ್ಥಿ ನಿಂತು ಸಾರ್ ಮತ್ತೆ‌ ನೀವು ತಪ್ಪು ಮಾಡಿದಾಗ ನನ್ನ ಹೊಡೆಯುತ್ತೀರಲ್ಲ, ಅದು ದೇವರನ್ನು ಹೊಡೆದಂತೆ ಅಲ್ಲವೇ? " ಎಂದನು. "ಹೌದು, ನನ್ನಲ್ಲೂ ಆತ್ಮ ಇದೆ ಹಾಗಾಗಿ ನಾನೂ ದೇವರೇ ಅಲ್ಲವೆ?  ದೇವರು ತಪ್ಪು ಮಾಡಿದಾಗ ದಂಡಿಸುವ ಹಕ್ಕು  ದೇವರಿಗೆ ಇರುವುದು ಅಲ್ಲವೇ ? ಎಂದು ನಗುತ್ತಾ ಕೇಳಿದಾಗ ನಗುತ್ತಲೆ ಆ ವಿದ್ಯಾರ್ಥಿ ಕುಳಿತ.

ದೇವರು ಸರ್ವಾಂತರ್ಯಾಮಿ, ಅವನು ಎಲ್ಲಾ ಕಡೆ ವಿವಿದ ರೂಪದಲ್ಲಿ ಇರುವನು ಅದರ ಮುಂದುವರೆದ ಭಾಗವಾಗಿ ಸಕಲ ಚರಾಚರಗಳಲ್ಲಿ ದೇವರ ಇರುವನ್ನು ಗುರ್ತಿಸಬಹುದು.

ಅದೇ ಅರ್ಥದಲ್ಲಿ ಮಕ್ಕಳು ದೈವಸ್ವರೂಪ ಎಂದು ಕರೆಯುವರು. ಮಕ್ಕಳ ಕಂಡರೆ ಎಲ್ಲರಿಗೂ ಅಚ್ಚುಮೆಚ್ಚು ಮಕ್ಕಳ ಅಗಲವಾದ ಬಟ್ಟಲುಗಣ್ಣುಗಳು, ಬೊಚ್ಚುಬಾಯಿ, ದುಂಡಾದ ಕೆನ್ನೆಗಳು, ನಿಶ್ಕಲ್ಮಶ ನಗು, ಸುಂದರ ನೋಟ ಎಂತವರನ್ನೂ ಮಂತ್ರ ಮುಗ್ದಗೊಳಿಸಿ ಒಮ್ಮೆ ಆ ಮಗುವನ್ನು ಎತ್ತಿ ಮುದ್ದಾಡಬೇಕು ಎನಿಸುತ್ತದೆ, ಪ್ರೀತಿಯಿಂದ ಕೈಚಾಚಿ ಕರೆದರೆ ಮಕ್ಕಳು ನಮ್ಮ ಕಡೆ ಬಂದೇ ಬರುತ್ತವೆ, ಭಕ್ತಿಯಿಂದ ಪೂಜಿಸಿದ ಭಕ್ತರ ಇಷ್ಟಾರ್ಥ ಸಿದ್ದಿಸುವ ದೇವರಂತೆ.

ಕೆಲವು ಕಡೆ ಮಕ್ಕಳನ್ನು ಅಕ್ಷರಶಃ ದೇವರಂತೆ ಅಲಂಕಾರ ಮಾಡಿ ಪೂಜಿಸುವ ಸಂಪ್ರದಾಯವಿದೆ, ನೇಪಾಳ ,ಪಿಲಿಪೈನ್ಸ್ ಮುಂತಾದ ದೇಶಗಳಲ್ಲಿ ಋತುಮತಿಯಾಗದ ಕನ್ಯೆಯನ್ನು ದೇವರೆಂದು ಪೂಜಿಸುವರು,ನಮ್ಮ ದೇಶದಲ್ಲೂ ಕೆಲವೆಡೆ ಮಕ್ಕಳಿಗೆ ಬ್ರಹ್ಮಚಾರಿ ಪೂಜೆ ಎಂಬ ಆಚರಣೆಯ ಮೂಲಕ ಮಕ್ಕಳಲ್ಲಿ ದೇವರ ಕಾಣುವರು.

ಇತ್ತೀಚಿನ ದಿನಗಳಲ್ಲಿ ಮಾದ್ಯಮಗಳ ಪ್ರಭಾವ ಮತ್ತು ಆಧುನಿಕತೆಯ ಭರಾಟೆಯಲ್ಲಿ ಮಕ್ಕಳು ಮಕ್ಕಳಾಗಿಲ್ಲ ಇನ್ನೂ ದೇವರಾಗುವುದು ಕನಸಿನ ಮಾತು, ಪೋಷಕರ ಕಣ್ ತಪ್ಪಿಸಿ ಮೊಬೈಲ್ ನಲ್ಲಿ ನೋಡಬಾರದ್ದನ್ನು ನೋಡುವುದರಿಂದ ಹಿಡಿದು ,ದೇಶದ್ರೋಹಿಗಳ ಜೊತೆಗೂಡಿ  ಸಮಾಜ ವಿದ್ರೋಹಿ ಚಟುವಟಿಕೆಗಳಲ್ಲಿ ಪಾಲ್ಗೊಂಡು, ದೇಶಕ್ಕೆ ಕಂಟಕವಾದ ಉದಾಹರಣೆಗಳೂ ಇವೆ .

ಸಜ್ಜನ,ಸುಸಂಸ್ಕೃತ
ಮಕ್ಕಳ ಕುರಿತು ಅವರ
ಪೋಷಕರು
ಹೇಳಿಕೊಳ್ಳುವರು
ಇವರು ನನ್ನ ಮಕ್ಕಳು|
ದಾರಿ ತಪ್ಪಿದ ಮಕ್ಕಳ
ನೆನೆದು ಬೇಸರದಿ ಕೆಲವರು
ಬೈದು ಕೊಳ್ಳುವರು
ಕಳ್ ನನ್ ಮಕ್ಕಳು||

ಹೀಗೆ ಮಕ್ಕಳು ಬೆಳೆಯುವ ಪರಿಸರ ಸಮಾಜದ ಸ್ಥಿತಿಗಳು ಮುಂತಾದ ಅಂಶಗಳು ಹುಟ್ಟಿನಿಂದ ದೇವರಾಗಿರುವ ಮಕ್ಕಳು ದಾನವರಾಗಬಹುದು ,ಕೆಲವೊಮ್ಮೆ ದೈವಿಕ ಗುಣವಿರುವ ವಿಶಾಲ ಮನೋಭಾವದ ಅನಿಕೇತನ ಪರಿಕಲ್ಪನೆಯು ಮಕ್ಕಳನ್ನು ಜಾತಿ, ಮತ ,ಪಂತಗಳ ಹೆಸರಲ್ಲಿ ಸಂಕುಚಿತರನ್ನಾಗಿಸುತ್ತದೆ.

ಮಕ್ಕಳು ದೇವರಾಗಲಿ, ದೇವರು ನಮ್ಮ ದೇಶ,ಸಂಸ್ಕೃತಿ ಮತ್ತು ಮಾನವ ಜನಾಂಗವನ್ನು ಕಾಪಾಡಲಿ ಎಂಬುದೇ ಸಿಹಿಜೀವಿಗಳ ಆಶಯ.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ

ಮಿಕ .ಹನಿಗವನ


 


ಮಿಕ


ಮುಖಪುಟದಲ್ಲಿ

ಪರಿಚಿತರಾಗಿದ್ದವರಿಗೆ

ಮೋಸ ಮಾಡಿದ ರಾಣಿ

ಮನದಲೆ ಅಂದುಕೊಂಡಳು

"ರಾತ್ರಿಯೇ ಇವನ ಆಭರಣ 

ಹಣ,ದೋಚಬೇಕು ಇವನು

ಹತ್ತರಲ್ಲಿ ಹನ್ನೊಂದನೇ ಮಿಕ|

ಬೆಳಿಗ್ಗೆ ಎಚ್ಚರವಾದಾಗ

ಹಾಸಿಗೆಯಲ್ಲಿ ಅವನಿರಲಿಲ್ಲ

ಅವಳ ಬಂಗಾರದ ಸರ 

ಮತ್ತು ಬಳೆಗಳೂ 

ಅಲ್ಲೇ ಇದ್ದ ಪತ್ರ 

ಓದಿದಳು ನಿನ್ನ

"ಬಂಗಾರವ ನೀಡಿದ

ಬಂಗಾರಿಗೆ ಧನ್ಯವಾದಗಳು"

ಇಂತಿ ಅನಾಮಿಕ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ