09 ಜೂನ್ 2021

ಪ್ರೌಢಿಮೆ ಎಂದರೇನು.ಲೇಖನ


 


*ಪ್ರೌಢಿಮೆ ಎಂದರೇನು. ಲೇಖನ


ವ್ಯಕ್ತಿಯ ಪ್ರೌಡಿಮೆಯು ಅವರ ನಡವಳಿಕೆಯಿಂದ ನಿರ್ಧರಿತವಾಗುತ್ತದೆ, ನಡವಳಿಕೆಯಲ್ಲಿ, ಅವರ ಮಾತು, ಸಂಸ್ಕಾರ, ಸಹಾಯಮಾಡುವ ಗುಣ, ಇವುಗಳೂ ಸೇರಿರುತ್ತವೆ.

ಪ್ರೌಢಿಮೆ ಎಂದರೆ ಸಾಮರ್ಥ್ಯ, ಶಕ್ತಿ, ಅಥವಾ ಕೌಶಲ್ಯ ಎಂದು ಹೇಳಲಾಗುತ್ತದೆ. ಓದಿದವರು, ಬುದ್ದಿವಂತರು,

ಜ್ಞಾನವಂತರು ಪ್ರೌಢಿಮೆ ಹೊಂದಿರುವರು  ಎಂದು ಹೇಳಲಾಗುವುದಿಲ್ಲ, ಅನಕ್ಷರಸ್ಥರೂ ಕೂಡ ಉತ್ತಮ ಪ್ರೌಢಿಮೆ ಹೊಂದಿರುವುದನ್ನು ಕಾಣಬಹುದು.

ಉದಾಹರಣೆಗೆ ಅನಕ್ಷರಸ್ಥ ಗ್ರಾಮೀಣ ಜನರು ಉತ್ತಮ ಭಾಷಾಪ್ರೌಢಿಮೆ ಹೊಂದಿರುವರು, ಅವರು ಮಾತನಾಡುವಾಗ ನಾವು ತಲೆದೂಗದೆ ಇರಲಾರೆವು, ಹೈಸ್ಕೂಲ್ ಪೇಲಾದ ವ್ಯಕ್ತಿ ಕೆಟ್ಟ ಬಸ್, ಲಾರಿ ಇಂಜಿನ್ ರಿಪೇರಿ ಮಾಡುವುದನ್ನು ಕೆಲ ಮೆಕಾನಿಕಲ್ ಇಂಜಿನಿಯರ್ ಕಣ್ ಬಿಟ್ಟು ನೋಡುವುದನ್ನು ಕಂಡಿದ್ದೇವೆ.


ಪ್ರೌಢಿಮೆ  ವ್ಯಕ್ತಿಯ ವ್ಯಕ್ತಿತ್ವಕ್ಕೆ ಭೂಷಣ, ಅದು ಆತ್ಮ ಪ್ರೌಢಿಮೆ ಹಂತ ತಲುಪಿದರೆ ಅದು ವ್ಯಕ್ತಿಯ ನಾಶದ ಸೂಚಕ ಆದ್ದರಿಂದ ನಾವೆಲ್ಲರೂ ಪ್ರೌಢಿಮೆಯನ್ನು ಬೆಳೆಸಿಕೊಳ್ಳೋಣ ಆತ್ಮ ಪ್ರೌಢಿಮೆ ಕಡಿಮೆ ಮಾಡಿಕೊಳ್ಳೋಣ ಎಲ್ಲರೂ ಕಲಿಯೋಣ ,ಎಲ್ಲರೂ ಬೆಳೆಯೋಣ . ನೀವೇನಂತೀರಿ 


ಸಿಹಿಜೀವಿ

ಸಿ ಜಿ ಹಳ್ಳಿ


08 ಜೂನ್ 2021

ದೂರುವುದೀಗ ಯಾರನ್ನ?.ಕವನ


 


ದೂರುವುದೀಗ ಯಾರನ್ನ? 


ದೂರದೂರಿನಿಂದಲೇ

ನನ್ನವಳಿಗೆ ವಾರಕ್ಕೊಂದು

ಪತ್ರ ಬರೆಯುತ್ತಲೇ ಇದ್ದೆ.


ದೂರವಿದ್ದರೂ ನಾ ನಿನ್ನವನು

ನಂಬು ನೀ ನನ್ನ

ನಾ ನಿನ್ನವನೆಂದು


ದೂರುವವರ ಮಾತ ಕೇಳದಿರು

ಎಂದು ಬುದ್ದಿಮಾತನೇಳಿದೆ

ಅವಳು ದುಡುಕಿದಳು


ಅವಳೀಗೆ ದೂರ ದೂರ

ದೂರುವುದೀಗ ಯಾರನ್ನ

ದೂರಾಗಿದ್ದು ನಾನೋ? ಅವಳೋ?


ಸಿಹಿಜೀವಿ

ಸಿ ಜಿ‌ ವೆಂಕಟೇಶ್ವರ

ತುಮಕೂರು 

ನಾನೂ ಒಬ್ಬ ಕೋಟ್ಯಾದೀಶ ಲೇಖನ


 


*ನಾನೂ ಒಬ್ಬ ಕೋಟ್ಯಾದೀಶ*

ಒಮ್ಮೆ ನನ್ನ ಸ್ನೇಹಿತರು ಹೇಳಿದ್ದು ನೆನಪಿಗೆ ಬಂತು.

"ನೀವು ಮಲಗಿ ಅರ್ಧ ಗಂಟೆಯಲ್ಲಿ ನಿದ್ರೆ ಬಂದರೆ ನೀವೇ ಶ್ರೀಮಂತರು,
ಮಲಗಿದ ಹತ್ತು ನಿಮಿಷಗಳಲ್ಲಿ ‌ನಿದಿರಾದೇವಿ ನಿಮ್ಮನ್ನು ಆಲಂಗಿಸಿದರೆ ನೀವೇ ಲಕ್ಷಾದೀಶರು,
ಹಾಸಿಗೆಯಲ್ಲಿ ತಲೆ ಇಟ್ಟ ತಕ್ಷಣ ನಿದ್ರೆ ಬಂದರೆ ನೀವು ಕೋಟ್ಯಾದೀಶರು."

ಹೌದು ಈ ವಿಷಯದಲ್ಲಿ ನಾನು ಕೋಟ್ಯಾದೀಶನೆ . ದೇವರು ಮಾನವನಿಗೆ ಕೊಟ್ಟ ಹಲವು ವರಗಳಲ್ಲಿ ಈ ನಿದ್ರೆಯೂ ಒಂದು.

ದೇಹ ಮನಸ್ಸು ಸಂಪೂರ್ಣ ವಿಶ್ರಾಂತಿ ಪಡೆಯುವ ಸ್ಥಿತಿಯನ್ನು ಸಾಮಾನ್ಯವಾಗಿ ನಾವು ನಿದ್ರೆ ಎಂದು ಕರೆಯುತ್ತೇವೆ.

ಒಬ್ಬ ವ್ಯಕ್ತಿ ಆರೋಗ್ಯವಾಗಿರಲು ಕನಿಷ್ಠ ಆರರಿಂದ ಎಂಟು ಗಂಟೆಗಳ ನಿದ್ರೆ ಅವಶ್ಯಕ ಎಂದು ಸಂಶೋಧನೆಗಳು ,ಮತ್ತು ವೈದ್ಯರು ಶಿಫಾರಸು ಮಾಡಿದ್ದರೂ ಕೆಲವೊಮ್ಮೆ ಇದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುವುದು.

ನಿದ್ರೆಯಿಂದ ನಮಗೆ ನೂರಾರು ಪ್ರಯೋಜನಗಳಿವೆ ಅದಕ್ಕಾಗಿ‌ನಾವು ನಿದ್ರೆ ಮಾಡಲೇಬೇಕು.
ನಿದ್ರೆಯಿಂದ ನಮ್ಮ ದೇಹ ಮತ್ತು ಮನಸ್ಸಿಗೆ ವಿಶ್ರಾಂತಿ ದೊರೆತು ಅದು ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮವನ್ನು ಬೀರುತ್ತದೆ,ನಿದ್ರೆಯು ನಮ್ಮ ಮನಸ್ಸಿನ ಮತ್ತು ದೇಹಕ್ಕಾದ ನೋವಿನ‌ ಉಪಶಮನದಲ್ಲಿ ಪರಿಣಾಮಕಾರಿಯಾದ ಪಾತ್ರ ವಹಿಸುತ್ತದೆ,ನಿದ್ರೆ ಯ ನಂತರ ನಮ್ಮ ಮನಸ್ಸು ಮುದಗೊಂಡು ಯಾವುದೇ ಕೆಲಸ ಮಾಡಲು ಇನ್ನೂ ಹೆಚ್ಚಿನ ಆಸಕ್ತಿ ಬರುವುದು.

"ಚಿಂತೆ ಇಲ್ಲದೋನಿಗೆ ಸಂತೇಲೂ ನಿದ್ದೆ ಬಂತು " ಎಂಬ ಗಾದೆಯಂತೆ ಕೆಲವರು ಜನಜಂಗುಳಿ ಯಲ್ಲೇ ಗೊರಕೆ ಹೊಡೆಯುತ್ತಾ ನಿದ್ದೆ ಗೆ ಜಾರಿಬಿಡುವರು,ಇನ್ನೂ ಕೆಲವರು  ಬಸ್ನಲ್ಲಿ ನಿಂತೇ ನಿದ್ದೆಗೆ ಜಾರಿರುತ್ತಾರೆ, ಆಫೀಸ್ ನಲ್ಲಿ ಕೆಲ ಮಹಾಷಯರು ವೃತ್ತಪತ್ರಿಕೆಯನ್ನು ಅಡ್ಡವಿಡಿದು ಒಂದು ನಿದ್ದೆ ತೆಗೆದು ಆಕಳಿಸಿ ಆಮೇಲೆ  ಪೈಲ್ ಕಡೆ ನಿದ್ದೆಗಣ್ಣಲ್ಲೇ ನೋಡುವವರಾಗಿದ್ದರೆ ಇನ್ನೂ ಹಲವರು ನಿದ್ದೆಯಲ್ಲಿ ಕುಂಭಕರ್ಣರು .ಇಂತಿಪ್ಪ ನಿದ್ರೆ ಯು ಜನರಲ್ಲಿ ತಾರತಮ್ಯ ಮಾಡುತ್ತಿದೆ ಎಂಬುದು ಕೆಲವರ ಅಂಬೋಣ, ಅವರ ವಾದದಲ್ಲಿ ಹುರಳಿಲ್ಲ ಎಂದು ಹೇಳಲಾಗದು, ಏಕೆಂದರೆ ಐಷಾರಾಮಿ ಬಂಗಲೆಯಲ್ಲಿ ಮಲಗಿದರೂ ಸಾವಿರಾರು ರೂ ಬೆಲೆಯ ಸ್ಲೀಪ್ ವೆಲ್ ಬೆಡ್ ಮೇಲೆ ಮಲಗಿದರೂ ಸ್ಲೀಪ್ ಮಾತ್ರ ಮರ್ಸಿಲೆಸ್ ಆಗಿ   ಅಂತವರಿಂದ  ‌ನೂರು ಮೈಲು ದೂರ ಓಡುತ್ತಲೇ ಇರುತ್ತದೆ.

ಹೀಗೆ ಕೆಲವರಿಗೆ ನಿದ್ರೆ ಬರದಿರಲು ಕಾರಣಗಳು ಹಲವಾರು, ಅದು ಮಲಗುವ ಕೋಣೆ ಸರಿ ಇಲ್ಲದೇ ಇರಬಹುದು, ಮಾನಸಿಕವಾಗಿ ಚಿಂತೆಮಾಡುವುದಾಗಿರಬಹುದು,ಮೆದುಳಿನ ಕಾಯಿಲೆ ಇರಬಹುದು, ಖಿನ್ನತೆ ಇರಬಹುದು, ಚಟುವಟಿಕೆ ರಹಿತ ಜೀವನಶೈಲಿ ಇರಬಹುದು, ಖಿನ್ನತೆ ಇರಬಹುದು.

ಒಮ್ಮೆ ಒಬ್ಬ ಮಹಾರಾಜನು ತಿಂಗಳುಗಟ್ಟಲೆ ನಿದ್ರೆ ಬಾರದೆ ರಾಜ ವೈದ್ಯರಿಂದ ಚಿಕಿತ್ಸೆ ಪಡೆದರೂ ನಿದಿರೆ ಬಾರದಿರಲು ,ಕಡೆಯ ಪ್ರಯತ್ನ ಎಂಬಂತೆ   ಮಂತ್ರಿಯ ಸಲಹೆಯ ಮೇರೆಗೆ ಕಾಡಿನ ಅಂಚಿನಲ್ಲಿರುವ ಋಷಿಯ ಆಶ್ರಮಕ್ಕೆ ತೆರಳಿ ತನ್ನ ಸಮಸ್ಯೆ ಹೇಳಿಕೊಂಡನು,
" ಮಹಾರಾಜ ಇದೇನು ಸಮಸ್ಯೆಯೇ ಅಲ್ಲ, ನಾನು ಹೇಳಿದಂತೆ ಮಾಡು ನಿನಗೆ ನಿದ್ರೆ ಖಂಡಿತವಾಗಿಯೂ ಬರುವುದು, ಇಂದಿನಿಂದ ಬೇರೆಯವರ ಸಹಾಯವಿಲ್ಲದೆ  ನೀನೊಬ್ಬನೇ ಎಂಟು ಅಡಿ ಬಾವಿ ತೆಗೆದು ಅದರಿಂದ ನೀರು ಕುಡಿದು ಬಂದು ನನ್ನ ಕಾಣು" ಎಂದರು ಋಷಿ.

ಹದಿನೈದು ದಿನಗಳ ಕಾಲದಲ್ಲಿ ತಾನೊಬ್ಬನೆ ಬಾವಿ ತೆಗೆದು  ಬಾವಿಯಿಂದ
ನೀರು ಕುಡಿದು, ಲವಲವಿಕೆಯಿಂದ ಋಷಿಗಳ ಮುಂದೆ ನಿಂತು ನಮಸ್ಕಾರ ಮಾಡಿ, " ಗುರುವರ್ಯ ನೀವು ಹೇಳಿದಂತೆ, ದಿನವೂ ಬಾವಿ ತೆಗೆದ ದಣಿವಿನಿಂದ ಉತ್ತಮ ನಿದ್ರೆ ಬರುತ್ತಿದೆ, ನಿಮಗೆ ಧನ್ಯವಾದಗಳು" ಎಂದನು
ಸಂತೋಷ ಇದೇ ರೀತಿಯಲ್ಲಿ ದಿನವೂ ಯಾವುದಾದರೂ ಕೆಲಸವನ್ನು ಮಾಡು ನಿದ್ದೆ ನಿನ್ನ ಹುಡುಕಿಕೊಂಡು ಬರವುದು ಎಂದರು ಋಷಿಗಳು.

ಉತ್ತಮ ನಿದ್ರೆ ನಮ್ಮದಾಗಬೇಕಾದರೆ, ಶ್ರಮವಹಿಸಿ ಕೆಲಸಮಾಡಬೇಕು, ಉತ್ತಮ ಸಾತ್ವಿಕ ಆಹಾರ ಸೇವನೆ ಮಾಡಬೇಕು,ಆರೋಗ್ಯಕರ ಹವ್ಯಾಸಗಳಿರಬೇಕು, ಮಲಗುವ ವೇಳೆಯಲ್ಲಿ ನಿಯಮಿತವಾದ ವೇಳಾಪಟ್ಟಿ ಇರಬೇಕು, ಮನಸ್ಸು ಸಂತೋಷವಾಗಿರಬೇಕು ಸಾಧ್ಯವಾದರೆ, ಯೋಗಾಸಾನ, ಧ್ಯಾನ, ಪ್ರಾಣಾಯಾಮ, ಪ್ರಾರ್ಥನೆಗಳನ್ನು ರೂಢಿ ಮಾಡಿಕೊಳ್ಳಬೇಕು, ಇಷ್ಟೆಲ್ಲಾ ಮಾಡಿದ ಮೇಲೂ ನಿದ್ದೆ ಬರದಿದ್ದರೆ ವೈದ್ಯರ ಸಲಹೆ ಅಗತ್ಯವಿರುತ್ತದೆ.

ಒಟ್ಟಾರೆ ಮೊದಲ ಸಾಲಿನಲ್ಲಿ ಹೇಳಿದಂತೆ ಕೋಟಿ ಇರೋನು ಮಾತ್ರ  ಕೊಟ್ಯಾಧೀಶನಲ್ಲ  ನಿದ್ರೆ ಬಂದೋನೆ ಅದೃಷ್ಟವಂತ ,ಶ್ರೀಮಂತ, ಕೋಟ್ಯಾದೀಶ,
ಹಾಗಾಗಿ ನಾನು ಹೆಮ್ಮೆಯಿಂದ ಹೇಳುವೆ ನಾನೂ ಒಬ್ಬ ಕೋಟ್ಯಾದೀಶ . ನೀವು....?

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು

*ಇಂದಿನ ಜನಮಿಡಿತ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ ಸಾವು ಗೆದ್ದ ಸುನಿತ* ಸಿಹಿಜೀವಿ ಸಿ ಜಿ ವೆಂಕಟೇಶ್ವರ ೮/೬/೨೧