*ನಾನು ಮತ್ತು ಟೀ*
ಟೀ ಮತ್ತು ನನಗೆ
ಬಹಳ ಸಾಮ್ಯತೆ ಇದೆ
ಹೊರಗಿಂದ ನೋಡಿದಾಗ
ಹೊಗೆ ಮತ್ತು ಬಿಸಿ|
ಒಳಗಡೆ ಉತ್ತಮ ಸ್ವಾದ
ಒಮ್ಮೆ ಕುಡಿಯಲು
ಶುರು ಮಾಡಿದರೆ
ನಿಲ್ಲಿಸುವುದಿಲ್ಲ
ಬರುವವರೆಗೂ ಗಸಿ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಟೀ ಮತ್ತು ನನಗೆ
ಬಹಳ ಸಾಮ್ಯತೆ ಇದೆ
ಹೊರಗಿಂದ ನೋಡಿದಾಗ
ಹೊಗೆ ಮತ್ತು ಬಿಸಿ|
ಒಳಗಡೆ ಉತ್ತಮ ಸ್ವಾದ
ಒಮ್ಮೆ ಕುಡಿಯಲು
ಶುರು ಮಾಡಿದರೆ
ನಿಲ್ಲಿಸುವುದಿಲ್ಲ
ಬರುವವರೆಗೂ ಗಸಿ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ಲಕ್ಷ್ಮೀ ಪೋಟೋ*
ನಾನು ಗೌರಿಬಿದನೂರಿನ ಎಸ್ .ಎಸ್ ಇ. ಎ . ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ,ಒಬ್ಬ ಪೋಷಕರು ಸ್ಟಾಪ್ ರೂಮ್ ಹತ್ತಿರ ಬಂದು ಸಂಕೋಚದಿಂದ ಹೊರಗೇ ನಿಂತಿದ್ದರು, ನಾನು ಒಳಗಡೆ ಬನ್ನಿ ,ಎಂದೆ ಮಾಸಲು ಅಂಗಿ ಅಲ್ಲಲ್ಲಿ ತೂತು ಬಿದ್ದ ಪ್ಯಾಂಟ್ ಧರಿಸಿದ್ದರು ,ತಲೆಗೂದಲು ನೋಡಿದರೆ ಎಣ್ಣೆ ಕಂಡು ಬಹು ದಿನಗಳಾಗಿರಬಹುದು ಎಂದು ಅರ್ಥವಾಗುತ್ತಿತ್ತು, ಎರಡೂ ಕೈಗಳನ್ನು ಎದೆಯಭಾಗಕ್ಕೆ ಗಟ್ಟಿಯಾಗಿ ತಬ್ಬಿ ಹಿಡಿದುಕೊಂಡಿದ್ದರು, ನಾನು ಕರೆದದ್ದಕ್ಕೆ ಅಲ್ಲಲ್ಲಿ ಕಿತ್ತು ಹೋಗಿ ಒಂದೆರಡು ಬಾರಿ ಹೊಲಿಗೆ ಹಾಕಿದ್ದ ಹವಾಯ್ ಚಪ್ಪಲಿಗಳನ್ನು ಹೊರಗೆ ಬಿಟ್ಟು ಕೊಠಡಿ ಒಳಗೆ ಬರಲು ಸಿದ್ದರಾದರು,
" ಚಪ್ಪಲಿ ಹಾಕಿಕೊಂಡು ಬನ್ನಿ ಪರವಾಗಿಲ್ಲ " ಎಂದೆ
ಬ್ಯಾಡ ಸಾ, ಅಲ್ಲೇ ಇರಲಿ ಎಂದು ಒಳಗೆ ಬಂದು ಮತ್ತೆ ವಿಧೇಯ ವಿದ್ಯಾರ್ಥಿಯಂತೆ ನಿಂತರು,
"ನಾನೇ ಮತ್ತೆ ಕೇಳಿದೆ ಯಾರು ಬೇಕು ? ಏನಾಗಬೇಕಿತ್ತು ? "
"ಅದೇ ಸಾ, ನಮ್ ಅತಾವುಲ್ಲ ಅವನ ಬಗ್ಗೆ ಕೇಳ್ ಬೇಕಿತ್ತು, " ಎಂದರು
" ಯಾವ್ ಅತಾವುಲ್ಲ, ಯಾವ ಸೆಕ್ಷನ್ ಯಾವ ಮೀಡಿಯಂ? ಮತ್ತೆ ಪ್ರಶ್ನೆ ಹಾಕಿದೆ.
" ಒಂಭತ್ತನೆಯ ಕ್ಲಾಸು ಸಾ, " ಅಂದರು
ಆಗ ನನಗೆ ಅರ್ಥವಾಯಿತು ನಿಧಾನ ಕಲಿಕೆಯ ಅತಾವುಲ್ಲ ನಿಗೆ ಕಳೆದ ದಿನ ಅವರ ತಂದೆ ಕರೆದುಕೊಂಡು ಬರಲು ಹೇಳಿದ್ದು ,
" ಏನ್ ಸಾಹೇಬ್ರೇ ನಿಮ್ ಹುಡುಗ,ಅಷ್ಟು ಚೆನ್ನಾಗಿ ಓದ್ತಾ ಇಲ್ಲ ಮನೇನಲ್ಲಿ ಸ್ವಲ್ಪ ಗಮನ ಕೊಡಿ " ಎಂದೆ
" ನಮಿಗೆ ಓದು ಬರಲ್ಲ ಸಾ, ನಾನು ನಮ್ ಮನೆಯವರು ಕೂಲಿ ಮಾಡಾಕೆ ಹೋಗ್ತೀವಿ , ನೀವೇ ಏನಾನಾ ಮಾಡಿ ಸಾ, ಇವನ್ ಒಬ್ನೇ ಮಗ ಚೆಂದಾಕೆ ಓದ್ಲಿ ಅಂತ ನನ್ ಆಸೆ ಸಾ," ಮುಗ್ದತೆಯಿಂದ ಕೈಜೋಡಿಸಿ ಹೇಳಿದರು.
ಮುಂದೆ ನನಗೆ ಏನು ಹೇಳಬೇಕು ಎಂದು ತೋಚದೇ ಒಂದು ಸಹಿ ಮಾಡಿಸಿಕೊಂಡು ಸರಿ ಹೋಗಿ ಬನ್ನಿ ಎಂದೆ ,ಕೊಠಡಿಯ ಹೊರಗೆ ಹೋಗಿ ಚಪ್ಪಲಿ ಹಾಕಿಕೊಂಡು ಮತ್ತೊಮ್ಮೆ ಎರಡೂ ಕೈ ಎತ್ತಿ ಮುಗಿದು ಹೊರಟರು.
ಆ ತರಗತಿಯ ಇತರ ಮಕ್ಕಳಿಗೆ ಹೋಲಿಸಿದರೆ ಅತಾವುಲ್ಲ ಅಂತಹ ತರಲೇ ವಿದ್ಯಾರ್ಥಿ ಆಗಿರಲಿಲ್ಲ, ಆದರೆ ಓದುವುದು ಬರೆಯುವುದರಲ್ಲಿ ಹಿಂದು, ಇದೇ ಕಾರಣದಿಂದಾಗಿ
ಒಂದೆರಡು ಬಾರಿ ಏಟು ಕೊಟ್ಟದ್ದೂ ಇದೆ
ಪಾಪ ಅವನಿಗೆ ವಿದ್ಯೆ ತಲೆಗೆ ಹತ್ತಲೇ ಇಲ್ಲ ಅವನ ಕಲಿಕೆ ಸುಧಾರಿಸಲು ನಾನೂ ವಿವಿಧ ತಂತ್ರಗಳನ್ನು ಬಳಸಿದರೂ ಪ್ರಯೋಜನ ಆಗಲಿಲ್ಲ,
ಈ ಮಧ್ಯೆ ರಸ್ತೆಯಲ್ಲಿ, ಬಸ್ಟ್ಯಾಂಡ್ ನಲ್ಲಿ ಎಲ್ಲಿ ಸಿಕ್ಕರೂ ಅತಾವುಲ್ಲ ನ ತಂದೆ ಎಷ್ಟೇ ಜನರಿದ್ದರೂ ಚಪ್ಪಲಿ ಬಿಟ್ಟು ಕೈಮುಗಿದು" "ಈಗ ಎಂಗೆ ಓದ್ತಾನೆ ಸಾಮಿ ನನ್ ಮಗ" ಎಂದು ಧೈನ್ಯತೆಯಿಂದ ಕೇಳುತ್ತಿದ್ದರು.
ವಾರ್ಷಿಕ ಪರೀಕ್ಷೆ ಮುಗಿದು ಮೂರು ದಿನ ವಾಗಿತ್ತು , ಬೆಳಿಗ್ಗೆ ಒಂಭತ್ತು ಗಂಟೆಯ ಸಮಯ ಯಾರೋ ಮನೆಯ ಬಾಗಿಲು ಬಡಿದ ಸದ್ದಾಯಿತು,ಬಾಗಿಲು ತೆರೆದು ನೋಡಿದರೆ ಅದೇ ವಿಧೇಯತೆಯಿಂದ ನಿಂತಿದ್ದರು ಸಾಹೇಬರು, ಕೈಯಲ್ಲಿ ಏನೋ ಹಿಡಿದಿದ್ದರು,
" ಏನ್ ಸಾಹೆಬ್ರೆ ,ಯಾಕೆ ಬಂದಿದ್ದು "ಎಂದೆ
" ಏನೂ ಅಂದ್ಕಾ ಬ್ಯಾಡಿ ಸಾ, ಇದನ್ ತಕಳಿ, " ಮೆಲು ದನಿಯಲ್ಲಿ ಹೇಳಿದರು
" ಏನು ಇದು, ಇದೆಲ್ಲಾ ಬೇಡ,ಮನೆಗೆ ಹೋಗಿ " ಎನ್ನುತ್ತಿರುವಾಗಲೇ ಬಲವಂತವಾಗಿ ಅದನ್ನು ನನ್ನ ಕೈಯಲ್ಲಿ ಇಟ್ಟರು , ನನ್ನ ಕೈಗೆ ಬಂದಾಗ ಅದು ಏನೆಂದು ಸ್ಪಷ್ಟವಾಗಿತ್ತು ಇಂದೂವರೆ ಬೈ ಎರಡು ಅಡಿಯ ಲಕ್ಷ್ಮಿ ಪೋಟೋ!
ಆಗ ನನಗೆ ಧರ್ಮ ಸಂಕಟ ಶುರುವಾಯಿತು, ಈ ಪೋಟೋ ಪಡೆಯಲೇ ಅಥವಾ ಹಿಂದಕ್ಕೆ ಕೊಡಲೆ , ನಮ್ಮ ಸಂಭಾಷಣೆ ಕೇಳಿದ ನಮ್ಮ ಮನೆಯವರು ಹೊರಬಂದು
"ಶುಕ್ರವಾರ ಅಣ್ಣ ಮನೆಗೆ ಪೋಟೋ ತಂದ್ ಕೊಟ್ಟಿದ್ದಾರೆ ಇಸ್ಕೊಳ್ಲಿ" ಎಂದು ನನ್ನ ಕೈಯಿಂದ ಪೋಟೋ ತೆಗೆದುಕೊಂಡು ಒಳಗೆ ಹೋಗೇ ಬಿಟ್ಟರು.
ಮತ್ತೊಮ್ಮೆ ನನಗೆ ಕೈಮುಗಿದು ಬತ್ತಿನಿ ಸಾ, ನಮ್ ಹುಡ್ಗನ್ನ ನೋಡಿಕೊಳ್ಳಿ ಅಂದರು.
ಆಗ ನನಗೆ ಅರ್ಥವಾಯಿತು ಮಕ್ಕಳ ಆ ವರ್ಷದ ರಿಸಲ್ಟ್ ಮುಂದಿನ ಸೋಮವಾರ ಪ್ರಕಟಮಾಡಬೇಕೆಂಬುದು!
ಸರ್ಕಾರದ ಶಿಕ್ಷಣ ನೀತಿಯ ಪ್ರಕಾರ ಒಂದರಿಂದ ಒಂಬತ್ತನೆಯ ತರಗತಿಯ ಮಕ್ಕಳನ್ನು ಫೇಲ್ ಮಾಡುವಂತಿರಲಿಲ್ಲ ಹಾಗಾಗಿ ಅತಾವುಲ್ಲ ಸಹ ಪಾಸಾಗಿದ್ದ,
ಅವರ ತಂದೆ ನಾನೇ ಪಾಸು ಮಾಡಿಸಿದೆ ಎಂದುಕೊಂಡರು.
ಹತ್ತನೇ ತರಗತಿಯಲ್ಲಿ ಅವನ ಕಲಿಕೆ ಅದೇ ರೀತಿಯಲ್ಲಿ ಮಂದಗತಿಯಲ್ಲಿ ಸಾಗಿತ್ತು ,ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಅವರ ತಂದೆ ಕೈಮುಗಿದು ಅದೇ ಮಾತು
"ನನ್ ಮಗನ್ನ ನೋಡ್ಕಳಿ ಸಾ"
"ಈ ವರ್ಷ ನಾವೇನೂ ಮಾಡಾಕಾಗಲ್ಲ ಸಾಹೇಬ್ರೆ ಪಬ್ಲಿಕ್ ಪರೀಕ್ಷೆ "ಎಂದೆ
ಅದರೂ ನಾನೇ ಅವರ ಮಗನನ್ನು ಪಾಸು ಮಾಡಿಸುವೆ ಎಂಬ ಅದಮ್ಯ ವಿಶ್ವಾಸ ಅವರಿಗೆ .
ಹತ್ತನೇ ತರಗತಿಯ ಫಲಿತಾಂಶದ ದಿನ ಶಾಲೆಯ ಹತ್ತಿರ ತಂದೆ ಮಗ ಇಬ್ಬರೂ ಬಂದರು ಮಗ ಎಲ್ಲಾ ವಿಷಯಗಳಲ್ಲಿ ಪೇಲ್ ಆಗಿರುವುದನ್ನು ತಿಳಿದು ತಂದೆ ಅಲ್ಲೇ ಗಳಗಳನೆ ಅತ್ತು ಬಿಟ್ಟರು,ಅವರ ಮಗ ನಿರ್ಭಾಹುಕನಾಗಿ ನಿಂತಿದ್ದನು.
ಇಂದು ಬೆಳಿಗ್ಗೆ ದೇವರ ಕೋಣೆಯಲ್ಲಿ ಪೂಜೆ ಮಾಡುವಾಗ ಅವರು ಕೊಟ್ಟ ಲಕ್ಷ್ಮಿ ಪೋಟೋ ನೋಡಿ ಯಾಕೋ ಮತ್ತೊಮ್ಮೆ ಅತಾವುಲ್ಲ ಮತ್ತು ಅವರ ತಂದೆ ನೆನಪಾದರು.....
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
*ಟೈಟ್ ಲಾಕ್ಡೌನ್*
ಹೌದು ನಿಜ
ರಾಜ್ಯದಲ್ಲಿ ಬಹಳ
ಕಟ್ಟು ನಿಟ್ಟಾಗಿ
ಪಾಲನೆಯಾಗುತ್ತಿದೆ
ಲಾಕ್ ಡೌನ್ |
ನಾವು ಕಟ್ಟಿದಂತೆ ಲುಂಗಿ
ಮೇಲೆ ಮಾತ್ರ ಟೈಟ್
ಕೆಳಗೆ ಓಪನ್||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
ಆ ದಿನದ ನೆನಪಾಯಿತು...
ಕ್ಯಾಲೆಂಡರ್ ನೋಡುತ್ತಾ ಕುಳಿತಾಗ ..
ಆ ದಿನದ ನೆನಪಾಯಿತು...
ಅಂದು ಮನೆಯಲ್ಲಿ ಯಾರೂ ಊಟ ಮಾಡಿರಲಿಲ್ಲ , ಹಳ್ಳಿಯಲ್ಲಿ ಆಗಿದ್ದರೆ ಯಾರಾದರೂ ಬಂದು ಊಟ ಮಾಡಿ ಎಂದು ಬಲವಂತ ಮಾಡುತ್ತಿದ್ದರೇನೋ? ಬಲವಂತಕ್ಕೆ ನಾವು ತಿನ್ನುತ್ತಿದ್ದೆವೇನೋ? ಆದರೆ ನಾವು ಇದ್ದದ್ದು ತೋಟದ ಮನೆಯಲ್ಲಿ. ಹಿರಿಯೂರು ಚಳ್ಳಕೆರೆ ಹೆದ್ದಾರಿಯ ಮಧ್ಯದಲ್ಲಿ ಹರ್ತಿಕೋಟೆ ಆದ ನಂತರ ಬರುವ ಕಳವೀಭಾಗಿ ಗೇಟ್ ಹತ್ತಿರವಿರುವ ತೋಟದ ಮನೆಯಲ್ಲಿ ನಮ್ಮ ವಾಸ. ಎಲ್ಲರಿಗೂ ಧೈರ್ಯ ಹೇಳಬೇಕಾದ ಎಪ್ಪತ್ತೈದು ವರ್ಷಕ್ಕಿಂತ ಹೆಚ್ಚು ವಯಸ್ಸಿನ ಲಕ್ಷ್ಮಜ್ಜಿ ಅಳು ಬೆಳಗಿನಿಂದ ನಿಂತಿಲ್ಲ, ಊಟ ಬೇಯಿಸಬೇಕಾದ ರತ್ನಮ್ಮ, ಅಡಿಗೆ ಮನೆ ಕಡೆ ಹೋಗಲಿಲ್ಲ, ಮೂವರು ಅಣ್ಣ ತಮ್ಮಂದಿರು ಮರಣ ಹೊಂದಿದ ಅವನನ್ನೇ ನೋಡುತ್ತಾ ,ತಲೆ ಮೇಲೆ ಕೈಹೊತ್ತು ಕುಳಿತಿದ್ದರು, ಅವನ ಒಡನಾಟ ನೆನೆದು ನಾನು ಮತ್ತು ನನ್ನ ಅಣ್ಣನೂ ಅಳಲು ಶುರು ಮಾಡಿದೆವು. ಸಂಜೆಯಾಗುತ್ತಾ ಬಂದಂತೆ ಹಿರಿಯ ಮಾವ ಕೃಷ್ಣ ಮೂರ್ತಿರವರು ಧೈರ್ಯ ತೆಗೆದುಕೊಂಡವರಂತೆ ಎದ್ದು " ಆಗಿದ್ದು ಆತು ,ಹೋಗಿರೋ ಜೀವ ಬರಲ್ಲ ,ಬರ್ರೀ ... ಮುಂದಿನ ಕಾರ್ಯ ಮಾಡಾನಾ "ಎಂದು ಎಲ್ಲರನ್ನೂ ಕರೆದರು. ಎಲ್ಲರೂ ಭಾರವಾದ ಮನಸ್ಸಿನಿಂದ, ದುಃಖವನ್ನು ತಡೆದುಕೊಂಡು
ಭಾರವಾದ ಆ ದೇಹವನ್ನು ಹೊತ್ತು ತೆಂಗಿನ ಗಿಡದ ಕೆಳಗೆ ಗುಂಡಿ ತೋಡಿ ಮಣ್ಣಿನಲ್ಲಿ ಇಟ್ಟು " ಬಸವ ಹೋಗಿ ಬಾ , ನಿಮ್ಮ ಅವ್ವ ಗೌರಿ ನಿನ್ನ ಈದ ದಿನ ಬಸವ ಜಯಂತಿ ಅದಕ್ಕೆ ನಿನಗೆ ಬಸವ ಅಂತ ಹೆಸರು ಇಟ್ವಿ, ಇವತ್ತು ಬಸವ ಜಯಂತಿ ಏನ್ ವಿಧಿಯಾಟ ಇದು? ನೀನು ನಮ್ ಮನೆನಾಗೆ ಒಬ್ಬ ಆಗಿದ್ದೆ ,ಕರುವಾಗಿದ್ದಾಗ ನೀನು ಆಡ್ತಿದ್ದ ಚಿನ್ನಾಟ, ಬೆಳೆದಾಗ ಗೊಬ್ಬರದ ಗಾಡಿ ಎಳೆಯೋ ನಿನ್ ಶಕ್ತಿ ಎಂಗ್ ಮರೀಲಿ " ಎಂದು ಲಕ್ಷ್ಮಜ್ಜಿ ಮತ್ತೆ ಅಳಲು ಶುರುಮಾಡಿದರು.
ಮನೆಯ ಸದಸ್ಯರೆಲ್ಲರೂ ಒಂದೊಂದು ಇಡಿ ಮಣ್ಣು ಹಾಕಿದರು.
ವಿಷಯ ತಿಳಿದು ಯರಬಳ್ಳಿಯಿಂದ ಮಹತ್ವಾಕಾಂಕ್ಷೆಯಿಂದ ಬಂದ ಕೆಳವರ್ಗದ ಪಾತಲಿಂಗ ದೂರದಲ್ಲಿ ನಿಂತು ಮಣ್ಣು ಮಾಡುವುದನ್ನೇ ನೋಡುತ್ತಾ " ಎಂತಾ ನೆಣ, ಇರೋ ಎತ್ತು ಅನ್ಯಾಯವಾಗಿ ಈ ಗೌಡ್ರು ಮಣ್ಣು ಪಾಲು ಮಾಡಿ ಬಿಟ್ರಲ್ಲಪ್ಪ " ಎಂದು ಕೈ ಕೈ ಹಿಸುಕಿಕೊಳ್ಳತೊಡಗಿದ ......
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
ಮಾನವರಾಗೋಣ ಲೇಖನ ೨
ನಮ್ಮನ್ನು ನಾವು ಉದ್ಧರಿಸಿಕೊಳ್ಳೋಣ
ಬೆಳಗಿನ ವಾಯುವಿಹಾರದ ನಡಿಗೆಯ ನಂತರ, ವೈದ್ಯರ ಒಂದು ಗುಂಪು ಟೀ ಅಂಗಡಿಯಲ್ಲಿ ಟೀ ಕುಡಿಯುತ್ತಿದ್ದರು.
ಒಬ್ಬ ಮನುಷ್ಯ ದೂರದಿಂದ ಕುಂಟುತ್ತಾ ಬಹಳ ಶೋಚನೀಯವಾಗಿ ಬರುತ್ತಿದ್ದ..
ಅವನನ್ನು ನೋಡಿದ ಒಬ್ಬ ವೈದ್ಯರು ಇನ್ನೊಬ್ಬರಲ್ಲಿ ಮಾತನಾಡತೊಡಗಿದರು.
ಮೊದಲ ವೈದ್ಯರು ಹೇಳಿದರು - ಇವನಿಗೆ ನನ್ನ ಪ್ರಕಾರ ಎಡ ಮೊಣಕಾಲು ಸಂಧಿವಾತ ಆಗಿದೆ.ಎರಡನೇ ವೈದ್ಯರು" ಇಲ್ಲ ಇಲ್ಲ ನನ್ನ ಪ್ರಕಾರ 'ಪ್ಲಾಂಟರ್ ಫೆಸಿಟಿಸ್' ಆಗಿದೆ.
ಮೂರನೆಯ ವೈದ್ಯರು ಹೇಳಿದರು ಇಲ್ಲಪ್ಪ ಇವನಿಗೆ ಖಂಡಿತವಾಗಿ ಪಾದದ ಉಳುಕು ಇದೆ.
ನಾಲ್ಕನೇ ವೈದ್ಯರು ಹೇಳಿದರು - ಅವನನ್ನು ಸರಿಯಾಗಿ ನೋಡಿ ಆ ಮನುಷ್ಯನಿಗೆ ಒಂದು ಕಾಲು ಸರಿಯಾಗಿ ಎತ್ತಲು ಆಗುತ್ತಿಲ್ಲ ಅವನಿಗೆ ಕಾಲು ಹನಿ ಆಗಿದೆ.
ಐದನೇ ವೈದ್ಯರು ಹೇಳಿದರು - " ನನಗೆ ಅನಿಸುತ್ತದೆ ಹೆಮಿಪ್ಲೆಜಿಯಾದದಂತಹ ದೊಡ್ಡ ರೋಗ ಅವನನ್ನು ಆವರಿಸಿದೆ
ಆರನೇ ವೈದ್ಯರು ಏನಾದರೂ ಹೇಳುವ ಹೊತ್ತಿಗೆ, ಆ ಮನುಷ್ಯ ಅವರ ಬಳಿ ಬಂದು ಬಹಳ ನಯವಾಗಿ ಕೇಳಿದರು.
"ಸ್ವಾಮಿ ಹತ್ತಿರದಲ್ಲಿ ಎಲ್ಲಾದರೂ ಒಂದು ಚಮ್ಮಾರನ ಅಂಗಡಿ ಇದೆಯೇ?"
ಬರುವ ದಾರಿಯಲ್ಲಿ ನನ್ನ ಚಪ್ಪಲಿ ಹರಿದು ಹೋಯಿತು. ಎಂದಾಗ ಬೇಸ್ತು ಬೀಳುವ ಸರದಿ ವೈದ್ಯರದು.
ನಿರ್ದಿಷ್ಟವಾಗಿ ಒಂದು ವಿಷಯದ ಬಗ್ಗೆ ಎಲ್ಲರಿಗೂ ಮಾಹಿತಿ ಇದೆಯೋ ಇಲ್ಲವೋ, ಆದರೆ ತೋರ್ಪಡಿಸಿಕೊಳ್ಳಲು ಮಾತ್ರ ಎಲ್ಲರೂ ಜ್ಞಾನಿಗಳೇ....
ವ್ಯಕ್ತಿಗಳ ನಿಜವಾದ ಸಮಸ್ಯೆ, ಅವರ ಹಿನ್ನೆಲೆ ತಿಳಿಯದೇ ಇವರೇ ಒಂದು ತೀರ್ಮಾನಕ್ಕೆ ಬಂದು ಬಿಡುತ್ತಾರೆ, ಏನೂ ಗೊತ್ತಿಲ್ಲದೇ ಅವರ ವ್ಯಕ್ತಿತ್ವಕ್ಕೆ ಒಂದು ಸರ್ಟಿಫಿಕೇಟ್ ಸಹ ನೀಡಿ ಬಿಡುತ್ತಾರೆ .ಅದು ಬಹುತೇಕ ಬಾರಿ ನೆಗೆಟೀವ್ ಸರ್ಟಿಫಿಕೇಟ್ ಆಗಿರುತ್ತದೆ.
ನಮ್ಮಲ್ಲಿ ಬಹುತೇಕರಿಗೆ ಬೇರೆಯವರ ವಿಚಾರ ಎಂದರೆ ಏನೋ ಕೆಟ್ಟ ಕುತೂಹಲ, ಇನ್ನೂ ಕೆಲವರಿಗೆ ಬೇರೆಯವರ ಬಗ್ಗೆ ಮಾತನಾಡಿಕೊಳ್ಳದಿದ್ದರೆ ಅವರು ತಿಂದ ಅನ್ನ ಜೀರ್ಣವಾಗುವುದಿಲ್ಲ .ಇನ್ನೂ ಕೆಲವರು ತಮ್ಮ ಸಮಸ್ಯೆಗಳು ನೂರಿದ್ದರೂ ಬೇರೆಯವರ ಸಮಸ್ಯೆಗಳನ್ನು ಬಗೆಹರಿಸಲು ತಜ್ಞರಂತೆ ಮುಂದುಬೀಳುವರು, ತಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ ಇತರೆಯವರ ತಟ್ಟೆಯಲ್ಲಿ ನೊಣ ಹುಡುಕುವ ಪ್ರವೀಣರು ಇವರು.
ಅದಕ್ಕೆ ಅಣ್ಣನವರು " ನೆರೆಮನೆಯವರ ದುಃಖಕ್ಕೆ ಅಳುವವರ ಮೆಚ್ಚ ಕೂಡಲಸಂಗಮದೇವ" ಎಂದು ಹೇಳಿರುವುದು.ಈ ನಿಟ್ಟಿನಲ್ಲಿ ನಾವು ಯೋಚಿಸಿದಾಗ ನಮ್ಮ ನ್ಯೂನತೆಗಳನ್ನು ಸರಿಪಡಿಸಿಕೊಂಡು ನಮ್ಮನ್ನು ನಾವು ಉದ್ದಾರ ಮಾಡಿಕೊಳ್ಳುವ ಕಡೆಗೆ ಗಮನ ಕೊಡಬೇಕು, ಅಂತೆಯೇ ಸ್ವಾಮಿ ವಿವೇಕಾನಂದರು ಹೇಳುತ್ತಾರೆ
" ನಿನ್ನನ್ನು ನೀ ಸುಧಾರಿಸಿಕೋ , ಜಗತ್ತಿನಲ್ಲಿ ಓರ್ವ ಮೂರ್ಖ ಕಡಿಮೆಯಾಗುತ್ತಾನೆ".
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು