20 ಮೇ 2021

ಆ.. ದಿನದ ನೆನಪಾಯಿತು .ಲೇಖನ


 ಲೇಖನ 


ಆ  ದಿನದ ನೆನಪಾಯಿತು...


ಕ್ಯಾಲೆಂಡರ್ ನೋಡುತ್ತಾ ಕುಳಿತಾಗ ..

ಆ ದಿನದ ನೆನಪಾಯಿತು...

ಅಂದು ಮನೆಯಲ್ಲಿ ಯಾರೂ ಊಟ ಮಾಡಿರಲಿಲ್ಲ , ಹಳ್ಳಿಯಲ್ಲಿ ಆಗಿದ್ದರೆ ಯಾರಾದರೂ ಬಂದು ಊಟ ಮಾಡಿ ಎಂದು ಬಲವಂತ ಮಾಡುತ್ತಿದ್ದರೇನೋ? ಬಲವಂತಕ್ಕೆ ನಾವು ತಿನ್ನುತ್ತಿದ್ದೆವೇನೋ? ಆದರೆ ನಾವು ಇದ್ದದ್ದು ತೋಟದ ಮನೆಯಲ್ಲಿ. ಹಿರಿಯೂರು ಚಳ್ಳಕೆರೆ ಹೆದ್ದಾರಿಯ ಮಧ್ಯದಲ್ಲಿ ಹರ್ತಿಕೋಟೆ ಆದ ನಂತರ ಬರುವ ಕಳವೀಭಾಗಿ ಗೇಟ್ ಹತ್ತಿರವಿರುವ ತೋಟದ ಮನೆಯಲ್ಲಿ ನಮ್ಮ ವಾಸ. ಎಲ್ಲರಿಗೂ ಧೈರ್ಯ ಹೇಳಬೇಕಾದ ಎಪ್ಪತ್ತೈದು ವರ್ಷಕ್ಕಿಂತ ಹೆಚ್ಚು ವಯಸ್ಸಿನ ಲಕ್ಷ್ಮಜ್ಜಿ ಅಳು ಬೆಳಗಿನಿಂದ ನಿಂತಿಲ್ಲ, ಊಟ ಬೇಯಿಸಬೇಕಾದ  ರತ್ನಮ್ಮ, ಅಡಿಗೆ ಮನೆ ಕಡೆ  ಹೋಗಲಿಲ್ಲ, ಮೂವರು ಅಣ್ಣ ತಮ್ಮಂದಿರು ಮರಣ ಹೊಂದಿದ ಅವನನ್ನೇ ನೋಡುತ್ತಾ ,ತಲೆ ಮೇಲೆ ಕೈಹೊತ್ತು ಕುಳಿತಿದ್ದರು, ಅವನ ಒಡನಾಟ ನೆನೆದು ನಾನು ಮತ್ತು ನನ್ನ ಅಣ್ಣನೂ ಅಳಲು ಶುರು ಮಾಡಿದೆವು. ಸಂಜೆಯಾಗುತ್ತಾ ಬಂದಂತೆ ಹಿರಿಯ ಮಾವ ಕೃಷ್ಣ ಮೂರ್ತಿರವರು ಧೈರ್ಯ ತೆಗೆದುಕೊಂಡವರಂತೆ ಎದ್ದು " ಆಗಿದ್ದು ಆತು ,ಹೋಗಿರೋ ಜೀವ ಬರಲ್ಲ ,ಬರ್ರೀ ... ಮುಂದಿನ ಕಾರ್ಯ ಮಾಡಾನಾ "ಎಂದು ಎಲ್ಲರನ್ನೂ ಕರೆದರು. ಎಲ್ಲರೂ ಭಾರವಾದ ಮನಸ್ಸಿನಿಂದ, ದುಃಖವನ್ನು ತಡೆದುಕೊಂಡು 

ಭಾರವಾದ ಆ ದೇಹವನ್ನು ಹೊತ್ತು ತೆಂಗಿನ ಗಿಡದ ಕೆಳಗೆ ಗುಂಡಿ ತೋಡಿ ಮಣ್ಣಿನಲ್ಲಿ ಇಟ್ಟು " ಬಸವ ಹೋಗಿ ಬಾ , ನಿಮ್ಮ ಅವ್ವ ಗೌರಿ ನಿನ್ನ ಈದ ದಿನ ಬಸವ ಜಯಂತಿ ಅದಕ್ಕೆ ನಿನಗೆ ಬಸವ ಅಂತ ಹೆಸರು ಇಟ್ವಿ, ಇವತ್ತು ಬಸವ ಜಯಂತಿ ಏನ್ ವಿಧಿಯಾಟ ಇದು?   ನೀನು ನಮ್ ಮನೆನಾಗೆ ಒಬ್ಬ ಆಗಿದ್ದೆ ,ಕರುವಾಗಿದ್ದಾಗ ನೀನು ಆಡ್ತಿದ್ದ ಚಿನ್ನಾಟ, ಬೆಳೆದಾಗ ಗೊಬ್ಬರದ ಗಾಡಿ ಎಳೆಯೋ ನಿನ್ ಶಕ್ತಿ ಎಂಗ್ ಮರೀಲಿ " ಎಂದು ಲಕ್ಷ್ಮಜ್ಜಿ ಮತ್ತೆ ಅಳಲು ಶುರುಮಾಡಿದರು.

ಮನೆಯ ಸದಸ್ಯರೆಲ್ಲರೂ ಒಂದೊಂದು ಇಡಿ ಮಣ್ಣು ಹಾಕಿದರು.

ವಿಷಯ ತಿಳಿದು ಯರಬಳ್ಳಿಯಿಂದ ಮಹತ್ವಾಕಾಂಕ್ಷೆಯಿಂದ ಬಂದ  ಕೆಳವರ್ಗದ  ಪಾತಲಿಂಗ ದೂರದಲ್ಲಿ ನಿಂತು ಮಣ್ಣು ಮಾಡುವುದನ್ನೇ ನೋಡುತ್ತಾ " ಎಂತಾ ನೆಣ, ಇರೋ ಎತ್ತು ಅನ್ಯಾಯವಾಗಿ ಈ ಗೌಡ್ರು ಮಣ್ಣು ಪಾಲು ಮಾಡಿ ಬಿಟ್ರಲ್ಲಪ್ಪ " ಎಂದು ಕೈ ಕೈ ಹಿಸುಕಿಕೊಳ್ಳತೊಡಗಿದ ......


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

19 ಮೇ 2021

ನಮ್ಮನ್ನು ನಾವು ಉದ್ಧರಿಸಿಕೊಳ್ಳೋಣ .ಲೇಖನ


 


ಮಾನವರಾಗೋಣ ಲೇಖನ ೨


ನಮ್ಮನ್ನು ನಾವು ಉದ್ಧರಿಸಿಕೊಳ್ಳೋಣ  


ಬೆಳಗಿನ ವಾಯುವಿಹಾರದ ನಡಿಗೆಯ ನಂತರ, ವೈದ್ಯರ ಒಂದು ಗುಂಪು  ಟೀ ಅಂಗಡಿಯಲ್ಲಿ ಟೀ ಕುಡಿಯುತ್ತಿದ್ದರು.


ಒಬ್ಬ ಮನುಷ್ಯ ದೂರದಿಂದ ಕುಂಟುತ್ತಾ ಬಹಳ ಶೋಚನೀಯವಾಗಿ ಬರುತ್ತಿದ್ದ..

ಅವನನ್ನು ನೋಡಿದ ಒಬ್ಬ ವೈದ್ಯರು ಇನ್ನೊಬ್ಬರಲ್ಲಿ ಮಾತನಾಡತೊಡಗಿದರು.

 ಮೊದಲ ವೈದ್ಯರು ಹೇಳಿದರು - ಇವನಿಗೆ ನನ್ನ ಪ್ರಕಾರ ಎಡ ಮೊಣಕಾಲು ಸಂಧಿವಾತ ಆಗಿದೆ.ಎರಡನೇ ವೈದ್ಯರು" ಇಲ್ಲ ಇಲ್ಲ ನನ್ನ ಪ್ರಕಾರ  'ಪ್ಲಾಂಟರ್ ಫೆಸಿಟಿಸ್' ಆಗಿದೆ.

ಮೂರನೆಯ ವೈದ್ಯರು ಹೇಳಿದರು ಇಲ್ಲಪ್ಪ ಇವನಿಗೆ  ಖಂಡಿತವಾಗಿ ಪಾದದ ಉಳುಕು ಇದೆ.

ನಾಲ್ಕನೇ ವೈದ್ಯರು ಹೇಳಿದರು - ಅವನನ್ನು ಸರಿಯಾಗಿ ನೋಡಿ  ಆ ಮನುಷ್ಯನಿಗೆ ಒಂದು ಕಾಲು ಸರಿಯಾಗಿ ಎತ್ತಲು ಆಗುತ್ತಿಲ್ಲ ಅವನಿಗೆ ಕಾಲು ಹನಿ ಆಗಿದೆ.


ಐದನೇ ವೈದ್ಯರು ಹೇಳಿದರು - " ನನಗೆ ಅನಿಸುತ್ತದೆ ಹೆಮಿಪ್ಲೆಜಿಯಾದದಂತಹ  ದೊಡ್ಡ ರೋಗ ಅವನನ್ನು ಆವರಿಸಿದೆ

ಆರನೇ ವೈದ್ಯರು ಏನಾದರೂ ಹೇಳುವ ಹೊತ್ತಿಗೆ, ಆ ಮನುಷ್ಯ ಅವರ ಬಳಿ ಬಂದು ಬಹಳ ನಯವಾಗಿ ಕೇಳಿದರು.


"ಸ್ವಾಮಿ ಹತ್ತಿರದಲ್ಲಿ ಎಲ್ಲಾದರೂ ಒಂದು ಚಮ್ಮಾರನ ಅಂಗಡಿ ಇದೆಯೇ?"

ಬರುವ ದಾರಿಯಲ್ಲಿ ನನ್ನ ಚಪ್ಪಲಿ ಹರಿದು ಹೋಯಿತು. ಎಂದಾಗ ಬೇಸ್ತು ಬೀಳುವ ಸರದಿ ವೈದ್ಯರದು.


ನಿರ್ದಿಷ್ಟವಾಗಿ ಒಂದು ವಿಷಯದ ಬಗ್ಗೆ ಎಲ್ಲರಿಗೂ ಮಾಹಿತಿ ಇದೆಯೋ ಇಲ್ಲವೋ, ಆದರೆ ತೋರ್ಪಡಿಸಿಕೊಳ್ಳಲು ಮಾತ್ರ ಎಲ್ಲರೂ ಜ್ಞಾನಿಗಳೇ....

ವ್ಯಕ್ತಿಗಳ ನಿಜವಾದ ಸಮಸ್ಯೆ, ಅವರ ಹಿನ್ನೆಲೆ ತಿಳಿಯದೇ ಇವರೇ ಒಂದು ತೀರ್ಮಾನಕ್ಕೆ ಬಂದು ಬಿಡುತ್ತಾರೆ, ಏನೂ ಗೊತ್ತಿಲ್ಲದೇ ಅವರ ವ್ಯಕ್ತಿತ್ವಕ್ಕೆ ಒಂದು ಸರ್ಟಿಫಿಕೇಟ್ ಸಹ ನೀಡಿ ಬಿಡುತ್ತಾರೆ .ಅದು ಬಹುತೇಕ ಬಾರಿ ನೆಗೆಟೀವ್ ಸರ್ಟಿಫಿಕೇಟ್ ಆಗಿರುತ್ತದೆ.


ನಮ್ಮಲ್ಲಿ ಬಹುತೇಕರಿಗೆ ಬೇರೆಯವರ ವಿಚಾರ ಎಂದರೆ ಏನೋ ಕೆಟ್ಟ ಕುತೂಹಲ, ಇನ್ನೂ ಕೆಲವರಿಗೆ ಬೇರೆಯವರ ಬಗ್ಗೆ ಮಾತನಾಡಿಕೊಳ್ಳದಿದ್ದರೆ ಅವರು ತಿಂದ ಅನ್ನ ಜೀರ್ಣವಾಗುವುದಿಲ್ಲ  .ಇನ್ನೂ ಕೆಲವರು ತಮ್ಮ ಸಮಸ್ಯೆಗಳು ನೂರಿದ್ದರೂ ಬೇರೆಯವರ ಸಮಸ್ಯೆಗಳನ್ನು ಬಗೆಹರಿಸಲು ತಜ್ಞರಂತೆ ಮುಂದುಬೀಳುವರು, ತಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ ಇತರೆಯವರ ತಟ್ಟೆಯಲ್ಲಿ ನೊಣ ಹುಡುಕುವ ಪ್ರವೀಣರು ಇವರು.

ಅದಕ್ಕೆ ಅಣ್ಣನವರು " ನೆರೆಮನೆಯವರ ದುಃಖಕ್ಕೆ ಅಳುವವರ ಮೆಚ್ಚ ಕೂಡಲಸಂಗಮದೇವ" ಎಂದು ಹೇಳಿರುವುದು.ಈ ನಿಟ್ಟಿನಲ್ಲಿ ನಾವು ಯೋಚಿಸಿದಾಗ ನಮ್ಮ ನ್ಯೂನತೆಗಳನ್ನು ಸರಿಪಡಿಸಿಕೊಂಡು   ನಮ್ಮನ್ನು ನಾವು ಉದ್ದಾರ ಮಾಡಿಕೊಳ್ಳುವ ಕಡೆಗೆ ಗಮನ ಕೊಡಬೇಕು, ಅಂತೆಯೇ ಸ್ವಾಮಿ ವಿವೇಕಾನಂದರು ಹೇಳುತ್ತಾರೆ 


" ನಿನ್ನನ್ನು ‌ನೀ ಸುಧಾರಿಸಿಕೋ , ಜಗತ್ತಿನಲ್ಲಿ ಓರ್ವ ಮೂರ್ಖ ಕಡಿಮೆಯಾಗುತ್ತಾನೆ".


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

 


ಧೈರ್ಯವಂತರಾಗೋಣ .ಲೇಖನ


 

ಮಾನವರಾಗೋಣ ೩

*ಧೈರ್ಯವಂತರಾಗೋಣ*

ನಮ್ಮಲ್ಲಿ ಬಹಳ ಜನರು ಸಣ್ಣ ವಿಷಯಗಳಿಗೂ ಭಯ ಬಿದ್ದು ಮುಂಬರುವ ಅಪಾಯಗಳ ನೆನದು ಮತ್ತೂ ಭಯಗೊಳ್ಳುತ್ತಾರೆ.ಆದರೆ ಈ ಘಟನೆ ನೋಡೋಣ,
ಅಟ್ಲಾಂಟಿಕ್ ಮಹಾಸಾಗರದಲ್ಲಿ ಸುಮಾರು ವರ್ಷಗಳ ಹಿಂದೆ ಒಂದು ವಿಮಾನ ಪತನ ಆಯಿತು...
ವಿಮಾನ ನಾಪತ್ತೆ ಆದ ಸುದ್ದಿ ತಿಳಿದರು ಅದು ಎಲ್ಲಿ ಪತನ ಆಯಿತು ಎಂದು ತಿಳಿಯದೇ ಹುಡುಕಾಟ ನಡೆಸಿದರು ನಾಲ್ಕು ಐದು ದಿನಗಳ ನಂತರ
ವಿಮಾನ ಅಟ್ಲಾಂಟಿಕ್ ಮಹಾಸಾಗರದಲ್ಲಿ ಪತನ ಆಗಿದೆ ಎಂದು ತಿಳಿದುಬಂತು..
ಅದರಲ್ಲಿ ಯಾರಾದರೂ ಬದುಕಿ ಉಳಿಯುವ ಸಾಧ್ಯತೆ ಎಲ್ಲರೂ ಕೈ ಬಿಟ್ಟಿದ್ದರು
ಸೈನಿಕರ ಸರ್ಚ್ ಟೀಂ ಸಾಗರದಲ್ಲಿ ಹುಡುಕಾಟ ಶುರು ಮಾಡಿದರು
ಕೊನೆಗೂ ಸರ್ಚ್ ಟೀಂ ವಿಮಾನದ ಅವಶೇಷ ಪತ್ತೆ ಹಚ್ಚಿದರು
ಎಲ್ಲಿ ನೋಡಿದರೂ ಹೆಣಗಳು ಕಾಣುತ್ತಿದ್ದವು
ಅನತಿ ದೂರದಲ್ಲಿ ಅವರಿಗೆ ಕಂಡು ಬಂದ ದೃಶ್ಯ ನೋಡಿ ಸೈನಿಕರಿಗೆ ತಮ್ಮ ಕಣ್ಣುಗಳನ್ನೇ ನಂಬಲು ಆಗಲಿಲ್ಲ
ತೇಲುತ್ತಿರುವ ವಿಮಾನದ ಒಂದು ತುಂಡು ಮೇಲೆ ಒಬ್ಬಳು ಮಹಿಳೆ ಒಂದು ಸಣ್ಣ ಮಗುವನ್ನು ಎದೆಗೆ ಅಪ್ಪಿಕೊಂಡು ಮಲಗಿರುವ ದೃಶ್ಯ ಕೂಡಲೇ ಅಲ್ಲಿಗೆ ಹೋಗಿ ಅವರನ್ನು ಪರೀಕ್ಷೆ ಮಾಡಿ ನೋಡಿದರು ತಾಯಿ ಮಗು ಇನ್ನೂ ಉಸಿರಾಡುತ್ತಿದ್ದರು..
ಅವರು ಜೀವಂತ ಇರುವುದು ಖಾತ್ರಿ ಮಾಡಿಕೊಂಡು ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಬದುಕಿಸಿಸಿದರು..
ಇಡೀ ಜಗತ್ತಿಗೆ ಇದೊಂದು ಪವಾಡ ಎಂದು ಅನಿಸಿತು..
ಮೈ ಹೆಪ್ಪುಗಟ್ಟಿಸುವ ಚಳಿ ಸುತ್ತಲೂ ನೀರು ತೇಲುತ್ತಿರುವ ಹೆಣಗಳು ಆಹಾರ ಇಲ್ಲ ನೀರು ಇಲ್ಲ ಎಂತಹ ಗಟ್ಟಿ ಗುಂಡಿಗೆ ಇದ್ದರೂ ಅಂತಹ ಸನ್ನಿವೇಶದಲ್ಲಿ ಬದುಕಿ ಉಳಿಯುವುದು ನಿಜಕ್ಕೂ ಒಂದು ಪವಾಡ..
ಆಕೆ ಚೇತರಿಸಿಕೊಂಡ ಬಳಿಕ ಅವಳನ್ನು ಸಂದರ್ಶನ ಮಾಡಿದಾಗ ಆಕೆ ಹೇಳಿದ ಮಾತು
ಆಕಾಶದಲ್ಲಿ ವಿಮಾನ ಸ್ಪೋಟ ಆಯಿತು ಏನಾಯಿತು ಎಂದು ಅರಿವು ಆಗುವಷ್ಟರಲ್ಲಿ ನಾವು ವಿಮಾನದಿಂದ ಸಿಡಿದು ಗಾಳಿಯಲ್ಲಿ ತೇಲುತ್ತಾ ನೀರಿಗೆ ಬಂದು ಬಿದ್ದೆವು
ಸುತ್ತಲೂ ನೋಡಿದಾಗ ಬರೀ ನೀರು ಕೆಲವರು ಈಜಲು ಪ್ರಯತ್ನಿಸಿದರು ಕೆಲವರು ಆದ ಅಪಘಾತಕ್ಕೆ ನೀರಿಗೆ ಬೀಳುವ ಮೊದಲೇ ಮೃತಪಟ್ಟಿದ್ದರು
ಮಗು ನನ್ನ ತೊಡೆ ಮೇಲೆ ಇದ್ದುದರಿಂದ ನೀರಿಗೆ ಬೀಳುವ ವರೆಗೆ ಮಗುವನ್ನು ಅಪ್ಪಿಕೊಂಡೆ ಇದ್ದೆ ನಾನು ಈಜಲು ಪ್ರಯತ್ನಿಸಿದೆ ಮಗು ಹಿಡಿದುಕೊಂಡು ಈಜಲು ಆಗಲಿಲ್ಲ..
ತೇಲುತ್ತಿರುವ ವಿಮಾನದ ತುಣುಕು ಕಣ್ಣಿಗೆ ಬಿತ್ತು ಏನಾದರೂ ಆಗಲಿ ನಾನು ಸಾಯುವುದಿಲ್ಲ ಬದುಕಿಯೇ ಬದುಕುತ್ತೇನೆ ಎಂದು ಕಷ್ಟಪಟ್ಟು ಈಜಿ ಅದರ ಮೇಲೆ ಏರಿ ಕುಳಿತೆ
ನನಗೆ ಭರವಸೆ ಇತ್ತು ಯಾರಾದರೂ ಕಾಪಾಡುತ್ತಾರೆ ಎಂದು
ನನ್ನ ಧೈರ್ಯವೇ ನನ್ನನ್ನು ಬದುಕಿಸಿತು ...

ಈ ಮೇಲಿನ ಘಟನೆ ಗಮನಿಸಿದಾಗ ಕಷ್ಟ ಕಾಲದಲ್ಲಿ ಧೈರ್ಯ ನಮ್ಮ ಅಸ್ತ್ರವಾಗಬೇಕು ಎಂಬುದು ಮನವರಿಕೆಯಾಗುತ್ತದೆ ,ಇತ್ತೀಚಿನ ಕೆಲವು ಘಟನೆಗಳಲ್ಲಿ ಒಂದು ರೋಗಾಣುವಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡವರ ಸುದ್ದಿ ಓದಿದಾಗ ಇಂತಹ ದಿಟ್ಟ ಮಹಿಳೆಯ ಧೈರ್ಯ ಎಲ್ಲರಲ್ಲೂ ಎಲ್ಲಾ ಕಾಲದಲ್ಲೂ ಬರಬೇಕಿದೆ ,"ಧೈರ್ಯಂ ಸರ್ವತ್ರ ಸಾಧನಂ "ಎಂಬಂತೆ  ಧೈರ್ಯ ನಮ್ಮ ಮೂಲಮಂತ್ರವಾಗಬೇಕು .ಜೀವನದಲ್ಲಿ ಏನೇ ಕಷ್ಟಗಳು ಎದುರಾದರೂ ಅವುಗಳನ್ನು ಎದುರಿಸಿ ಬಾಳಬೇಕು.

" ಹಿಂತಿರುಗಿ ನೋಡಬೇಡಿ,ಯಾವಾಗಲೂ ಮುನ್ನೆಡಿಯಿರಿ,ಅನಂತ ಶಕ್ತಿ, ಅನಂತ ಉತ್ಸಾಹ,ಅನಂತ ಸಾಹಸ,ಅನಂತ ತಾಳ್ಮೆ,ಇವುಗಳಿದ್ದರೆ ಮಾತ್ರ ಮಹತ್ಕಾರ್ಯ ಸಾಧಿಸಲು ಸಾಧ್ಯ " ಎಂಬ ಸ್ವಾಮಿ ವಿವೇಕಾನಂದರ ವಾಣಿ ನಮಗೆ ಮಾರ್ಗದರ್ಶನವಾಗಲಿ.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು

ಬೈಬ್ರಂಟ್ ಮೈಸೂರು . ೧೯.೫.೩೧


 

ಪ್ರತಿನಿಧಿ ಕಥೆ ೧೯.೫ ೨೧