02 ಮೇ 2021

ವಿಲ್ .ನ್ಯಾನೋ ಕಥೆ


 



ನ್ಯಾನೋ ಕಥೆ


*ವಿಲ್*


ಮೂರು ಜನ ಗಂಡು ಮಕ್ಕಳು ಆಸ್ತಿಗೋಸ್ಕರ ಕಚ್ವಾಟ ಆಡುವುದನ್ನು ಕಂಡ ರಾಯರು " ನಾನು ಬದುಕಿರುವವರೆಗೂ 159ಕೋಟಿ ರೂ ನ ಈ ಆಸ್ತಿಯನ್ನು ಯಾರಿಗೂ ಹಂಚುವುದಿಲ್ಲ ನಾನು ವಿಲ್ ಮಾಡುವೆ " ಎಂದು ಖಡಾಖಂಡಿತವಾಗಿ ಹೇಳಿದರು.


ಹತ್ತು ವರ್ಷಗಳ ನಂತರ ಅನಾಥಾಶ್ರಮದಿಂದ ತಂದ ರಾಯರ ಪಾರ್ತೀವ ಶರೀರಕ್ಕೆ ಬೆಂಕಿ ಹಾಕಿದ ಮಕ್ಕಳು, ಬೆಂಕಿ ಇನ್ನೂ ಆರಿರಲಿಲ್ಲ,ಮನೆಗೆ ಬಂದು ವಿಲ್ ಹುಡುಕಿದರು...

ವಿಲ್ ಓದಿದ ಮಕ್ಕಳು ದಂಗಾದರು..

ವಿಲ್ ನಲ್ಲಿ ಈಗಿತ್ತು " ನನ್ನ ಎಲ್ಲಾ ಆಸ್ತಿಯು ಶ್ರೀ ವೆಂಕಟೇಶ್ವರ ಅನಾಥಾಶ್ರಮಕ್ಕೆ ಸೇರತಕ್ಕದ್ದು......



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

ಮಾತುಕತೆ .ನ್ಯಾನೋ ಕಥೆ


 


ನ್ಯಾನೋ ಕಥೆ 


*ಮಾತುಕತೆ*


ಇಬ್ಬರ ನಡುವಿನ ಕೋಪ ಕಡಿಮೆಯಾಗಿರಲಿಲ್ಲ ,

ನಾಲ್ಕು ದಿನವಾದರೂ ಒಬ್ಬರಿಗೊಬ್ಬರು ಕನಿಷ್ಠ ಮುಖವನ್ನು ಸಹ ನೋಡಿರಲಿಲ್ಲ ಮೊದಲಾಗಿದ್ದರೆ ಎಷ್ಟೇ ಜಗಳವಾಡಿದ್ದರೂ ಅರ್ಧಗಂಟೆಯೊಳಗೆ "ಯಾಕೋ ತಲೆ ನೋವು ಟೀ ಮಾಡು ಚಿನ್ನ" ಎಂದು ರವಿ ಕೇಳಿದಾಗ "ಬೇಕಾದ್ರೆ ಬಂದು ಮಾಡಿಕೊಂಡು ಕುಡಿ" ಎಂದು ಕರಗದ ಸಿಟ್ಟಿನಿಂದ ಹೇಳಿದರೂ ಹತ್ತು ನಿಮಿಷಗಳ ಬಳಿಕ ಬಂದು ನೊರೆ ಹಾಲಿನ ಕಾಫಿ ಕೊಟ್ಟ ಉಷಾ " ಹೇಗಿದೆ ಕಾಫಿ ಎಂದು ಮುಖ ಊದಿಸಿಕೊಂಡು " ಕೇಳುತ್ತಿದ್ದಳು " ಆಹಾ... ಅಮೃತ ಚಿನ್ನ" ....

ಈಗೆ ಮಾತುಕತೆ ಮುಂದುವರಿದು ಮೋಡ ಕವಿದ ವಾತಾವರಣವು ತಿಳಿಯಾಗಿ ಇಬ್ಬರ ಮನವೆಂಬ ಆಗಸ ಶುಭ್ರವಾಗುತ್ತಿತ್ತು .


ಆದರೆ ಈ ಬಾರಿ ಮುನಿಸು ನಾಲ್ಕು ದಿನಗಳಿಗಿಂತ ವಿಸ್ತರಿಸಿ ಮುಂದುವರೆದಿತ್ತು ,

ಅಂದು ಸಂಜೆ ಉಷಾಳ ತಂದೆ ಊರಿಂದ ಬಂದರು, ದಂಪತಿಗಳು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು . ಅವರಿಬ್ಬರೂ ಮುನಿಸು ಮರೆತು ಪರಸ್ಪರ ಮಾತನಾಡಲಾರಂಭಿಸಿದರು , ರಾತ್ರಿಯ ಊಟದ ಬಳಿಕ " ನನಗೆ ಪ್ರಯಾಣದ ಆಯಾಸ ಬೇಗ ಮಲಗುವೆ "ಎಂದು ರಾಯರು ಮಲಗಿದರು ನಾವೂ ಮಲಗುವೆವು ಎಂದು ಕೋಣೆಗೆ ಹೋದ ದಂಪತಿಗಳು ನಾಲ್ಕು ದಿನದಿಂದ ಆಡದೇ ಉಳಿದ ಮಾತುಗಳನ್ನು ಒಂದೇ ದಿನ ಮಾತನಾಡಿದರು ಅವರ ಜೊತೆ ಮಂಚವೂ ತುಸು ಜೋರಾಗಿಯೇ ಮಾತನಾಡುವ ಸದ್ದು ಹೊರಗೇನೂ ಕೇಳಿಸಲಿಲ್ಲ.......



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

ಪ್ರಜಾ ಪ್ರಗತಿ ೨/೫/೨೧


 

ಒಂದೂರಲ್ಲಿ ಒಂದು ದಿನ .ನ್ಯಾನೋ ಕಥೆ


 *ನ್ಯಾನೋ ಕಥೆ *


ಒಂದೂರಿನಲ್ಲಿ ಒಂದು ದಿನ 

ಪರ ಊರಿನ ವ್ಯಕ್ತಿ ನಡದುಕೊಂಡು ಹೋಗುತ್ತಿದ್ದ, ಸಂಜೆಯಾಗುತ್ತಾ ಕತ್ತಲಾದಾಗಾ ಅದೇ ಊರಿನಲ್ಲಿ ತಂಗಲು ಯೋಚಿಸುವಾಗ ರಸ್ತೆಯ ಪಕ್ಕ ಒಂದು ಮನೆ ಕಾಣಿಸಿತು,

ಮನೆಯ ಹೊರಗೆ ನೋಡಿದರೆ ತಿಳಿಯುತ್ತಿತ್ತು ಅದು ಪಾಳು ಬಿದ್ದ ಮನೆಯೆಂದು, ಅಂಜುತ್ತಲೇ ಮನೆಯ ಒಳಗೆ ಕತ್ತಲಲ್ಲಿ ನಡೆದವನಿಗೆ," ನಿನ್ನ ಮನೆಗೆ ಆತ್ಮೀಯ ಸ್ವಾಗತ ಬಾ ಗೆಳೆಯ ಎಂಬ ಹೆಣ್ಣು ಧ್ವನಿ " ಕೇಳಿತು 

ನೋಡಲು ಅಲ್ಲಿ ಯಾರೂ ಇರಲಿಲ್ಲ.


ಬೆಳಿಗ್ಗೆ ಅಪರಿಚಿತ ವ್ಯಕ್ತಿಯ ಶವ ನೋಡಲು ಊರಿನ ಬಹಳ ಜನ ಸೇರಿದ್ದರು......


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

ಸಿಹಿಜೀವಿಯ ಹಾಯ್ಕುಗಳು

 

*ನಗುವಿನ ದಿನದ ಪ್ರಯುಕ್ತ ಸಿಹಿಜೀವಿಯ ಹಾಯ್ಕುಗಳು*


*೧*


ನಗೋಣ ಬನ್ನಿ

ನಗಲೊಂದು ದಿನವು

ಮರೆ ನೋವನು.


*೨*


ಯುಕ್ತಿಯಿರಲಿ 

ಶತ್ರುಗಳನ್ನು ಗೆಲ್ಲು

ನಗುತ್ತಲಿರು.


*೩*


ನಕ್ಕರೆ ಸ್ವರ್ಗ

ನರಕವು ಏತಕ್ಕೆ?

ನಗು ಉಚಿತ.


*೪*


ನಗವಿಲ್ಲವೆ?

ಚಿಂತೆಯೇಕೆ ನಿನಗೆ?

ನಗುವು ಇದೆ !


*೫*


ಬಂಗಾರ ಬೇಡ

ನಗುವೇ ಆಭರಣ

ನೀನೇ ಶ್ರೀಮಂತ.


*೬*


ದುಗುಡ ಕಾಲ

ನಗುವೊಂದು ಔಷಧಿ 

ವೈದ್ಯರೇತಕೆ? 




*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು