22 ಜುಲೈ 2019

ಮಾಂತ್ರಿಕ (ಕವನ)

*ಮಾಂತ್ರಿಕ*

ಅದು
ನೋಡಲು ಕಾಣದಿದ್ದರೂ
ತಿಳಿದವರು ,ಕಂಡವರು
ಹೇಳಿದಂತೆ ,ಚಿತ್ರದಲ್ಲಿ
ನೋಡಿದಂತೆ ಮೆದುವಾಗಿರುವುದು.

ಅದರ ಮಾಯೆ ಒಂದೇ ಎರಡೇ
ಅದು ಸರಿಯಿದ್ದರೆ ಸನ್ಮಾನ
ಬಹುಮಾನ , ಪುರಸ್ಕಾರ ಎಲ್ಲವೂ.
ಸ್ವಲ್ಪ ಸರಿಯಿಲ್ಲದಿದ್ದರೆ
ತಿರಸ್ಕಾರ ,ಕೊಂಕು ನುಡಿಗಳು.

ಗಾತ್ರದಲಿ ಒಂದೇ ಇದ್ದರೂ
ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾದ
ಬಳಕೆ ,ತಿಳುವಳಿಕೆ
ಮಾನವನ‌ ಸಕಲ ಅಂಗಗಳ
ನಿಯಂತ್ರಕ ,ಮಾಂತ್ರಿಕ .

ಕೆರಳಿಸುವುದೊಮ್ಮೆ ,
ಅರಳಿಸುವುದೊಮ್ಮೆ
ಬಳಸಿದರೆ ಬೆಳೆಸುವುದು
ಬಳಸದಿರರೆ  ಹಳಸುವುದು
ಏನೆಂದು ಬಣ್ಣಿಸಲಿ ನಿನ್ನ ಲೀಲೆಯ
ಓ ನನ್ನ ಮೆದುಳು
ನೀನು ಆರೋಗ್ಯವಾಗಿದ್ದರೆ
ಹಸನಾಗುವುದು ನಮ್ಮ ಬಾಳು .

*ಸಿ.ಜಿ  ವೆಂಕಟೇಶ್ವರ*
*ಗೌರಿಬಿದನೂರು*

(ಇಂದು ವಿಶ್ವ ಮೆದುಳು ದಿನ)

14 ಜುಲೈ 2019

*ಬಂಧ ಮುಕ್ತ* (ಕವನ)


*ಬಂಧ ಮುಕ್ತ?*

ಹಣ್ಣೆಲೆಯಾಗಿ ಉದುರಿ
ಮಣ್ಣಲ್ಲಿ‌ ಮಣ್ಣಾದಾಗ
ಸಣ್ಣದಾಗಿ ನೆನಪು
ಬಿಚ್ಚುತ್ತಾ ಹೋಯಿತು

ಸುಬೀಜ ಫಲವತ್ತಾದ ಮಣ್ಣು
ಗೊಬ್ಬರ ನೀರೆರೆದಾಗ ಮೊಳತು ಚಿಗುರೊಡೆದು ಕ್ರಮೇಣ ಸಸಿಯಾಯಿತು
ಬೆಳೆದು ಹೆಮ್ಮರವಾಗಿ ಸೌಂದರ್ಯದ ಖಣಿಯಾಗಿ ಸಕಲರಿಗೆ ಸಕಲದಿ
ನೆರವಾಗಿ ತನಗೆ ತಾನೇ ಸಂತಸಪಟ್ಟು
ನನ ಜೀವನ ಸಾರ್ಥಕ ಎಂಬ ಭಾವ

ಕಾಲ ಸರಿದಂತೆ ಕಾಲನ ಪ್ರಭಾವ
ಎಲೆಗಳುದರಲು ಆರಂಭ ಪೇಲವತೆ
ಮರದ ಟೊಂಗೆಗಳಲಿ ಕಸುವಿಲ್ಲ
ಸಹಾಯ ಪಡೆದವರ ಸುಳಿವಿಲ್ಲ
ನೀರೆರೆವ ಮನಗಳ ಸುಳಿವಿಲ್ಲ
ಬೀಸಿದ ಬಿರುಗಾಳಿಗೆ ಮರದ ಮರಣ
ಗೆದ್ದಲಿಗೆ ಆಹಾರವಾದಾಗ ಆಗಲೂ
ಮರಕ್ಕೆ ಒಳಗೊಳಗೇ ಆನಂದ
ನಾನು ಈಗಲೂ ಉಪಯುಕ್ತ
ಮಣ್ಣಿನಿಂದ ಋಣಮುಕ್ತ.
ಬಗೆಹರಿಯದ ಪ್ರಶ್ನೆ ಮನದಲಿ
ಯಾವಾಗ ?
ಹುಟ್ಟು ಸಾವುಗಳ ಬಂಧ ಮುಕ್ತ?

*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*

02 ಜುಲೈ 2019

ಗಜ್ಹಲ್ ೫೭

*ಗಜ್ಹಲ್ ೫೭*

ಕುಟ್ಟಿ ಪುಡಿಮಾಡು ಕಷ್ಟಗಳೆಂಬ ಹೆಬ್ಬಂಡೆಗಳ ಗೆಲ್ಲುವೆ  ನೀನು
ಬಿದ್ದವನೆಂದು ಕೊರಗದಿರು ಮುಂದೆ  ಎದ್ದೇಳುವೆ ನೀನು

ಅವಮಾನ ಅಪಮಾನಗಳೆ  ಸಾಧನೆಗಳ ಮೆಟ್ಟಿಲು
ದಾರಿಯಿಲ್ಲವೆಂದು ಮರುಗದಿರು ದೊರೆಯಾಗುವೆ  ನೀನು

ಸಂತೆಯಲಿ ನಿಂತು ಸದ್ದಿಗಂಜತ ಕಳವಳಪಡಬೇಡ
ಸಂತನಾಗಲು ಸಹಿಸುವುದ ಕಲಿ ಯೋಗಿಯಾಗುವೆ ನೀನು

ಕಳೆದು ಕೊಳ್ಳಲು ನೀನೇನು ತಂದಿಲ್ಲ ಇಲ್ಲಿ
ಕಳೆದಲ್ಲೇ ಹುಡುಕು  ಮುಕ್ತಿ ಹೊಂದುವೆ ನೀನು

ಮುಳ್ಳುಗಳು ನಡುವೆಯೂ ನಗುವುದು ಗುಲಾಬಿ
ಕಷ್ಟದಲೂ ನಗುವುದ ಕಲಿ ಸಿಹಿಜೀವಿಯಾಗುವೆ ನೀನು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*



30 ಜೂನ್ 2019

ಎಲ್ಲೆಡೆ ಬಾ ಮಳೆಯೇ(ಕವನ)

 *ಎಲ್ಲೆಡೆ ಬಾ ಮಳೆಯೇ*

ಮಲೆನಾಡಿನಲಿ ಶುರುವಾಗಿದೆ
ಮಳೆ ಹಾಡು
ನೋಡಲು ‌ಕಣ್ಣಿಗೆ ಹಬ್ಬದ
ಮಳೆ ಕಾಡು
ತಂಗಾಳಿ ಬೀಸುತ
ಮರದ ನಡುವೆ ನುಸುಳಿ
ಬೀಳುವ ಹನಿಗಳು
ಎಲೆಗಳ ಮೇಲೆ ಬಿದ್ದು
ತೊಳೆದು ಸ್ವಚ್ಚಗೊಳಿಸಿ
ಸ್ವಚ್ಚತಾ ಅಭಿಯಾನ ಮಾಡಿ
ಚಿಟ ಪಟ ಚಿಟ ಪಟ
ಸದ್ದು ಮಾಡುವ ಕಾಡುವ
ಮಳೆರಾಯ  ಬರೀ ಕಾಡಲೇ
ಬರ ಬೇಡ
ಬರದಿಂದ  ಕಂಗೆಟ್ಟ ನಾಡಿಗೂ
ಬಾ
ಸಿಡಿಲು ಬಡಿದು ಗುಡು ಗುಡಿಗಿ
ಬರುವ ವರ್ಷವೇ
ಬರಸಿಡಿಲಿನಾಘಾತ ತಪ್ಪಿಸಲು
ಈಗಲೇ ಎಲ್ಲೆಡೆ ಬಾ

*ಸಿ ಜಿ ವೆಂಕಟೇಶ್ವರ*

26 ಜೂನ್ 2019

*ಜೀವಿಸು* (ಇಂದು ವಿಶ್ವ ಮಾದಕವಸ್ತು ವಿರೋಧಿ ದಿನ)

*ಜೀವಿಸು*
(ಇಂದು ವಿಶ್ವ ಮಾದಕವಸ್ತು ವಿರೋಧಿ ದಿನ)

ನಶೆಯಲೇ ತೇಲುತಾ ಬದುಕಬೇಕೆ?
ಉಷೆಯ ಬೆಳಕಿನ‌ಆನಂದ ಬೇಡವೆ?
ಖುಷಿಯಲಿ ಬದುಕ ಸಾಗಿಸಲು
ಪಶುಪತಿಯ ನೀ ನೆನೆ ಸಾಕು

ಕ್ಷಣಿಕ ಸುಖಕೆ ಹಾತೊರೆಯಬೇಡ
ಪ್ರಾಣ ತೆಗೆವ ಚಟಕೆ ಬಲಿಯಾಗಬೇಡ
ಮಾದಕ ವಸ್ತುಗಳಿಂದ ದೂರವಿರು
ಮೋದಕಪ್ರಿಯನಲಿ‌ ಮನಸಿಡು

ದೇಹವ ಹಿಂಡುವ ಆತ್ಮವಿಶ್ವಾಸ ಅಳಿವ
ಮೋಹವೇಕೆ ಅಮಲೇರಿಸುವ ವಸ್ತುವಿಗೆ
ಕಾಯಕದ ಮೇಲೆ ಮನಸಿಡು ನೀನು
ಪವಿತ್ರವಾದ ಆತ್ಮವ ನೆನೆದು ಜೀವಿಸು

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*