20 ಆಗಸ್ಟ್ 2018

ಕರ್ಮ (ಕವನ) ಕವಿ ಸಾಹಿತಿಗಳ ಜೀವಾಳ ಗುಂಪಿನಲ್ಲಿ ನಡೆದ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದ ಕವನ

     
                   *ಕರ್ಮ*

ಅಳಿಯದಿರಿ ನನ್ನ
ಇಳೆಯ ಮಕ್ಕಳೆ
ಅಳಿಸಲಿಲ್ಲ ನಾನು ನಿಮ್ಮನು
ಬಾಳಿಸಿದೆನು ಸರ್ವರನು

ಅಳುತಿರುವಿರಿ ಈಗ
ಕೇಳಲಿಲ್ಲ ನನ್ನ ಮೊರೆ ಅಂದು
ಅನಭವಿಸುತಲಿರುವಿರಿ ಇಂದು
ಮೌನವಾಗಿ ಸಹಿಸಿದೆ
ನಿಮ್ಮಗಳ ಹುಚ್ಟಾಟ
ಉಪದ್ರವ ಉಡಾಪೆಗಳ
ನಾ ಕ್ಷಮಾಯಾಧರಿತ್ರಿ ನಿಜ
ಎಲ್ಲಿಯವರೆಗೆ ಸಹನೆ
ಮಿತಿ ಇಲ್ಲವೆ ನನ್ನ ಸಹನೆಗೆ ?

ಅಂತರ್ ಜಲಕೆ ನೀನಿರಬೇಕು
ಬಾರೋ ಮಳೆರಾಯ ಎಂದು
ಗೋಗರೆದಿರಿ ನಾ ಬಂದರೆ
ತೊಲಗು ನೀನೆಂದು ಹೇಳುವಿರಿ
ಕೆರೆ ನದಿಗಳ ಆಕ್ರಮಿಸಿ
ಬೆಟ್ಟ ಗುಡ್ಡಗಳ ಕೊರೆದು
ಸಮುದ್ರದ ತಟಗಳಲಿ ಮನೆಕಟ್ಟಿ
ಪ್ರವಾಹಕ್ಕೆ ನೀನೆ ಕಾರಣ ಎನ್ನುವುದು ತರವೆ?

ಪ್ರಕೃತಿಯ ದೂರುವುದ ನಿಲ್ಲಿಸಿ ಮನುಜರೆ
ವಿಕೃತಿಯನ್ಮು ತೊಡೆದು ಹಾಕಿ
ಪರಿಸರವಿರುವುದು ನಿಮ್ಮ ಆಸೆ ತೀರಿಸಲು
ದುರಾಸೆಗಳನಲ್ಲ
ಈಗಲಾದರೂ ಎಚ್ಚರ ಗೊಂಡು
ಜಾಗೃತರಾಗಿ ಬದುಕಿ
ಬದುಕಲು ಬಿಡಿ
ಮಾಡಿರಿ ಒಳ್ಳೆಯ ಕರ್ಮ
ಇಲ್ಲದಿದ್ದರೆ ನಿಮ್ಮ ಕರ್ಮ!?

*ಸಿ ಜಿ.ವೆಂಕಟೇಶ್ವರ*
*ಗೌರಿಬಿದನೂರು*

19 ಆಗಸ್ಟ್ 2018

*ಗಜ಼ಲ್43*

               *ಗಜ಼ಲ್*

ಸೂರ್ಯ ಚಂದ್ರರು ನಮಗೆ ಬೆಳಕು ನೀಡಿ ತೋರುವರು ಸಮತೆ
ಭೂದೇವಿ ಜಲದೇವತೆ ವಾಯುದೇವ ತೋರುವರು ಮಮತೆ

ಪ್ರಕೃತಿಯ ಮೇಲೆ ಮಾನವನ ವಿಕೃತಿ ದಬ್ಬಾಳಿಕೆ ನಿರಂತರ
ಮಾಡಿದ್ದುಣ್ಣೋ ಮಹರಾಯ ಎಂದು ಜಲ ಗಾಳಿ ಭೂಮಿ ತೋರುತಿದೆ ರೌದ್ರತೆ

ತಿಳಿದು ತಿಳಿಯದೆ ಮಾಡಿದ ಅಪರಾಧಗಳು ನೂರಾರು ಸಾವಿರಾರು
ಅಳಿದ ಜನ ಜಾನುವಾರು ನೋಡಿ ಹೇಳುವರೀಗ ರೂಢಿಸಿಕೊಳ್ಳೊಣ ಸರಳತೆ

ವಿಕೋಪ ಕ್ಕೆ ಮೊದಲು‌ ಜಾತಿ ಮತದ ಜಂಜಾಟ ಈಗ ಅನ್ನ ನೀರಿಗೆ ಹಾಹಾಕಾರ
ಕರ್ಮಟ ಸಂಪ್ರದಾಯವಾದಿಯೂ ಕೈಯ್ಯೋಡ್ಡಿ ಬೇಡಿ ಪ್ರತಿಪಾದಿಸುವ ಏಕತೆ

ಪಾಪ ಕಾರ್ಯ ಮಾಡಲು ಹಿಂಜರಿತವಿಲ್ಲ ಎಲ್ಲರೂ ಕೂಪಮಂಡೂಕಗಳು
ಸಂಕಟ ಬಂದಾಗ ವೆಂಟರಮಣ ಇದು ಹಿಂದಿನಿಂದಲೂ ಬಂದ ಕಥೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

17 ಆಗಸ್ಟ್ 2018

ಗಜ಼ಲ್42 (ಅಟಲ್ ಜಿ ರವರಿಗೆ ನುಡಿನಮನ)


ಗಜ಼ಲ್42 (ಅಟಲ್ ಜಿ ರವರಿಗೆ ನುಡಿನಮನ)

ಅಜಾತಶತ್ರುವಾಗಿ  ಭಾರತ ಭಾಗ್ಯವಿಧಾತನಾದ ಅಭಿವೃದ್ಧಿ ಯ ಚಾಲಕ ಅಟಲ್ ಜಿ
ದೊಡ್ಡಣ್ಣನಿಗೆ ಸಡ್ಡುಹೊಡೆದು ಬುದ್ದನ ನಗಿಸಿದ ನಾಯಕ ಅಟಲ್ ಜಿ

ಮುತ್ತಿನ ಹಾರ ಸ್ಪಟಿಕದ ಸಲಾಕೆಯ  ಚುಂಬಕ ಶಕ್ತಿಯ ಮಾತುಗಾರ
ಉತ್ತಮ ಸಂಸದೀಯ ಪಟು
ರಾಜ ಧರ್ಮ ಪಾಲಕ  ಅಟಲ್ ಜಿ

ಓಜಸ್ಸು ತೇಜಸ್ಸು ಸುಮನಸು  ಅವರಲ್ಲಿ ರಕ್ತಗತ
ಬಟ್ಟೆಗೆಟ್ಟ ಹಾದಿಗಳನು ಸರಿಪಡಿಸಿ ಗಟ್ಟಿ ನಿರ್ಧಾರ ಕೈಗೊಂಡ ಸುವರ್ಣ ಚತುಷ್ಪಥದ ಜನಕ ಅಟಲ್ ಜಿ

ವಿಶ್ವ ಸಂಸ್ಥೆಯಲಿ ರಾಷ್ಟ್ರ ಭಾಷೆ ರಾಷ್ಟ್ರದ ಘನತೆಯನ್ನು ಎತ್ತಿ ಹಿಡಿದ ಧೀರ
ಶಾಯರಿ ಕವಿತೆಗಳ ರಚಿಸಿ ಕವಿಮನಹೊಂದಿದ ಮುತ್ಸದ್ದಿ ಚಿಂತಕ  ಅಟಲ್ ಜಿ

ಸೀಜೀವಿಯಂತವರ  ಹೃದಯದಲಿ  ಶಾಶ್ವತವಾಗಿ ನೆಲೆಸಿದ ಅಮರ ಆತ್ಮ
ಜನನಿ ಜನ್ಮಭೂಮಿಯ ಋಣ ತೀರಿಸಲು ಶ್ರಮಿಸಿದ ಪ್ರೇರಕ ಅಟಲ್ ಜಿ


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

09 ಆಗಸ್ಟ್ 2018

ನಿನ್ನೇ ಧ್ಯಾನಿಸುವೆ (ಕವನ)

   
         
*ನಿನ್ನೇ ಧ್ಯಾನಿಸುವೆ*


ಸಂಗಾತಿ ನೀ ಜೊತೆಗಿರಲು
ಅನ್ಯರ ಸಂಗ  ಬೇಕಿಲ್ಲ
ಚಿನ್ನ ನೀನಿರೆ ಇನ್ನಾವ
ಸಿರಿ ಬೇಕು ನೀನೆ ನನಗೆಲ್ಲ

ನನ್ನ ಶ್ವಾಸವಿರುವವರೆಗೆ ನಿನ್ನ
ಬಿಡೆನು ವಿಶ್ವಾಸವಿಡು ನನ್ನ ಮೇಲೆ
ನೀ ಕಿರುನಗೆಯಲಿ‌ ನೋಡದಿರು
ನನಗೆ ಮತ್ತೇರುವುದು
ಅಮಲುಗಣ್ಣಿನಲ್ಲಿ ನೋಡದಿರು
ನಲ್ಲೆ ಇನ್ನಿಲ್ಲದ ಆಸೆಯುಕ್ಕುವುದುು


ಕಪಟತನವರಿಯೆನು ನಾನು
ಅಪ್ಪಟ ಪ್ರೇಮಿ ಪ್ರೀತಿಸುವೆ ಕೊನೆವರೆಗೆ
ನಿನ್ನೆ ನಾಳೆಗಳ ಚಿಂತೆ ನನಗಿಲ್ಲ
ಅಡಿಗಡಿಗೆ ನಿನ್ನೇ ಧ್ಯಾನಿಸುವೆ
ಕುಡಿನೋಟ ಬೀರು ಸಾಕು
ಆನಂದ ಸಾಗರದಿ ತೇಲುವೆ


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*


07 ಆಗಸ್ಟ್ 2018

*ಗಜ್ಹಲ್41*(ಸುಮ)


                       *ಗಜ್ಹಲ್41*

ಪ್ರಕೃತಿಯ ಸೌಂದರ್ಯ ಅಡಗಿಸಿ ಕೊಂಡು ಸುಗಂಧ ಸೂಸುವುದು  ಸುಮ
ವಿಕೃತ ಮನಸ್ಸು ಗಳಿಗೆ ಉಚಿತ ಪಾಠ ಹೇಳುವುದು ಸುಮ

ವ್ರತ ಉಪವಾಸ ನಾನ ತಂತ್ರ ಅಡ್ಡ ದಾರಿಗಳು ಭಗವಂತನ ಕಾಣಲು
ಎಲ್ಲ ದೇವರ ಅಲಂಕರಿಸಿ ಹೆಮ್ಮೆಯಿಂದ
ನಗುವುದು ಸುಮ

ಎಲೆ ಕಾಯಿ ಹಣ್ಣು ಬೀಜವಾಗಲು ಮೂಲ ಹೂ
ಆದರೂ ಎಂದಿಗೂ ನಾನು ನನ್ನಿಂದ ಎಂದು ಬೀಗದು ಸುಮ

ಸಾವಿಗಂಜಿ ಯಾಯಾತಿಯಾಗಲು ಚಡಪಡಿಸುವರು ಜನ ಸುರಿಯುವರು ಧನ
ಒಂದೇ ದಿನ ಬಾಳಿದರೂ ಸೌಂದರ್ಯದಿ ಬಾಳಿ ಸಾರ್ಥಕ್ಯ ಪಡೆವುದು ಸುಮ

ಸ್ವಾರ್ಥದ ಸಂಕುಚಿತ ಭಾವನೆಯ ಜಗದಲಿ ಬಂದಿಯಾಗಿಹರು ಮಂದಿ
ಸೀಜೀವಿಯಂತೆ  ಪರಹಿತ ಬಯಸೆಂದು ಸಂದೇಶ ನೀಡುವುದು ಸುಮ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*