ಅವರೊಬ್ಬ ಸಾಮಾನ್ಯ ಲಾರಿ ಚಾಲಕ ದಿನಕ್ಕೆ ₹150 ಮಾತ್ರ ಸಂಪಾದಿಸುತ್ತಿದ್ದ ಅವರ ಬ್ರಾಂಡ್ ಮೌಲ್ಯ ಈಗ 5 ಕೋಟಿ ಇದೊಂತರ ನಮ್ಮ ವಿ ಅರ್ ಎಲ್ ಓನರ್ ವಿಜಯ್ ಸಂಕೇಶ್ವರ ಕಥೆಯಂತಿದ್ದರೂ ಸ್ವಲ್ಪ ವಿಭಿನ್ನ. ನಾನೀಗ ನಿಮಗೆ ಪರಿಚಯ ಮಾಡುವ ವ್ಯಕ್ತಿಯ ಹೆಸರು ರಾಜೇಶ್! ಜಾರ್ಖಂಡ್ ಮೂಲದ ರಾಜೇಶ್ ರವರ ಪೂರ್ಣ ಹೆಸರು ರಾಜೇಶ್ ರವಾನಿ. ಈಗಲೂ ಲಾರಿ ಚಾಲಕನಾಗಿ ಕೆಲಸ ಮಾಡುತ್ತಾರೆ. ಬರೀ ಲಾರಿ ಡ್ರೈವರ್ ಆಗಿದ್ರೆ ಅವರು ಲಕ್ಷದಲ್ಲಿ ಒಬ್ಬ ಸಾಮಾನ್ಯ ಡ್ರೈವರ್ ಆಗಿರುತ್ತಿದ್ದರು ಆದರೆ ಯೂಟ್ಯೂಬ್ ಅವರನ್ನು ಸ್ಟಾರ್ ಆಗಿ ಪರಿವರ್ತಿಸುವ ಮೂಲಕ ಕೋಟಿ ಸಂಪಾದಿಸುವ ಡಿಜಿಟಲ್ ಕ್ರಿಯೇಟರ್,ಹಾಗೂ ಯೂಟ್ಯೂಬರ್ ಆಗಿ ಪರಿವರ್ತಿಸಿದೆ.
ಬಿಸಿಲು, ಮಳೆ,ಚಳಿ,ಹಗಲು,ರಾತ್ರಿಗಳ ಪರಿವೆ ಇಲ್ಲದೆ ಸಂಸಾರದಿಂದ ವಾರ, ಮಾಸಗಳ ಕಾಲ ದೂರವಿರುವ ಲಾರಿ ಡ್ರೈವರ್ ಗಳ ಲೋಕವೇ ವಿಶಿಷ್ಟ. ಅಂತಹ ಕಾಯಕ ಮಾಡುವ ರಾಜೇಶ್ ಒಮ್ಮೆ ಕುತೂಹಲಕ್ಕೆ ತನ್ನ ಲಾರಿ ಡ್ರೈವಿಂಗ್ ಅನುಭವಗಳನ್ನು ಪುಟ್ಟ ವೀಡಿಯೋ ಮಾಡಿ ಹರಿಬಿಟ್ಟರು. ಜನರು ಅವರ ವೀಡಿಯೋ ನೋಡಿ ಖುಷಿ ಪಟ್ಟು ಸಬ್ಸ್ಕ್ರೈಬ್ ಲೈಕ್ ಶೇರ್ ಮಾಡಿ ಬೆಂಬಲಿಸಿದರು.ಅಲ್ಲೊಂದು ಪವಾಡವೇ ಜರುಗಿತು.ಈಗ ಅವರ "ಆರ್ ರಾಜೇಶ್ ವ್ಲಾಗ್" ಹೆಸರಿನ ಯೂಟ್ಯೂಬ್ ಚಾನೆಲ್ ಗೆ ಬರೋಬ್ಬರಿ ಕಾಲು ಕೋಟಿ ಚಂದಾದಾರರರು.ಎಂಬತ್ತು ಕೋಟಿಗಿಂತ ಹೆಚ್ಚು ವೀಕ್ಷಣೆ ಕಂಡ ಅವರ ಸಂಪಾದನೆ ತಿಂಗಳಿಗೆ ಐದರಿಂದ ಹತ್ತು ಲಕ್ಷಗಳು!
ರಾಜೇಶ್ ತಮ್ಮ ವ್ಲಾಗ್ ಗಳಲ್ಲಿ ಚಾಲಕರ ದಿನನಿತ್ಯದ ಸಂಕಷ್ಟಗಳು, ರಸ್ತೆಗಳಲ್ಲಿ ಕಂಡುಬರುವ ಅದ್ಭುತ ದೃಶ್ಯಗಳು, ವಾಹನ ಸಂಬಂಧವಾದ ಸಲಹೆಗಳು, ರಸ್ತೆ ಸುರಕ್ಷತಾ ಮಾಹಿತಿಗಳನ್ನು ಅವರು ಹಂಚಿಕೊಳ್ಳುತ್ತಿದ್ದರು. ಮೊದಲಿಗೆ ಕೆಲವರು ಮಾತ್ರ ನೋಡುತ್ತಿದ್ದರು, ಆದರೆ ನಿಧಾನವಾಗಿ ಸಾವಿರಾರು ಜನರು ಅವರ ವಿಡಿಯೋಗಳನ್ನು ನೋಡಲು ಪ್ರಾರಂಭಿಸಿದರು.
ರಾಜೇಶ್ ಅವರ ಸರಳತೆ, ನಿಜವಾದ ಅನುಭವ ಮತ್ತು ಮನಸಾರೆ ಆಡುವ ಮಾತುಗಳು ಜನರನ್ನು ಆಕರ್ಷಿಸಿದವು. ಅತಿರೇಕವಿಲ್ಲದೆ ತಾನು ಬದುಕುತ್ತಿದ್ದ ಜೀವನವನ್ನೇ ಜನರಿಗೆ ತೋರಿಸುತ್ತಿದ್ದುದರಿಂದ ಎಲ್ಲರೂ ಅವರಿಗೆ ಹತ್ತಿರವಾದರು.
ಕಾಲಕಳೆದಂತೆ ಅವರ ಯೂಟ್ಯೂಬ್ ಚಾನೆಲ್ ಬೆಳೆಯಿತು. ಹವ್ಯಾಸವಾಗಿ ಪ್ರಾರಂಭಿಸಿದ ಕೆಲಸವೇ ಅವರಿಗೆ ಎರಡನೇ ಉದ್ಯೋಗವಾಯಿತು. ಈಗ ಬ್ರಾಂಡ್ಗಳು ಅವರನ್ನು ಸಂಪರ್ಕ ಮಾಡಿ ಕಾರ್ಯಕ್ರಮಗಳಿಗೆ ಆಹ್ವಾನಿಸುತ್ತವೆ.ಯಾಕೆಂದರೆ ಈಗ ಅವರೇ ಒಂದು ಬ್ರಾಂಡ್!
ದುಡ್ಡು ಬಂತು ಎಂದು ರಾಜೇಶ್ ಅರ್ಧ ರಾತ್ರಿಯಲ್ಲಿ ಛತ್ರಿ ಹಿಡಿಯಲಿಲ್ಲ ಬದಲಿಗೆ
ಇಂದಿಗೂ ರಾಜೇಶ್ ತಮ್ಮ ಲಾರಿಯನ್ನು ಓಡಿಸುತ್ತಲೇ ಇದ್ದಾರೆ. ಜೊತೆಗೆ ಸಾವಿರಾರು ಜನರಿಗೆ ಪ್ರೇರಣೆಯೂ ಆಗಿದ್ದಾರೆ. ಮೋಟಾರು ವಾಹನ ತಯಾರಿಕಾ ದೈತ್ಯ ಕಂಪನಿಯ ಮಾಲಿಕರಲ್ಲಿ ಒಬ್ಬರಾದ ಆನಂದ್ ಮಹಿಂದ್ರ ರಾಜೇಶ್ ರವರನ್ನು ಮನಸಾರೆ ಹೊಗಳಿದ್ದಾರೆ.ಪ್ರಸ್ತುತ ಅವರು ಒಂದು ಕೋಟಿ ಬೆಲೆ ಬಾಳುವ ಮನೆಯನ್ನು ಕಟ್ಟಿಸಿದ್ದಾರೆ.ಅವರ ಮೂವರು ಮಕ್ಕಳು ಅವರ ಯೂಟ್ಯೂಬ್ ವೀಡಿಯೋಗಳನ್ನು ಎಡಿಟ್ ಮಾಡುವ ಪ್ರಮೋಟ್ ಮಾಡುವಲ್ಲಿ ತಂದೆಗೆ ಸಹಾಯ ಮಾಡುತ್ತಿದ್ದಾರೆ.
ಯಾವುದೇ ಕೆಲಸವನ್ನು ಶ್ರದ್ಧೆ, ಮತ್ತು ಅಚ್ಚುಕಟ್ಟಾಗಿ ಮಾಡಿದರೆ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡರೆ ಯೂಟ್ಯೂಬ್ ನಂತಹ ವೇದಿಕೆಗಳು ಹೇಗೆ ನಮ್ಮ ಜೀವನವನ್ನು ಧನಾತ್ಮಕವಾಗಿ ಬದಲಾಯಿಸುತ್ತವೆ ಎಂಬುದಕ್ಕೆ ರಾಜೇಶ್ ರವರ ಬದುಕೇ ಉದಾಹರಣೆ. ಇಂದಿನ ಯುವ ಜನರಿಗೆ ರಾಜೇಶ್ ಬಹುದೊಡ್ಡ ಪ್ರೇರಣೆ. ನಮ್ಮ ಹಿನ್ನಲೆ ಏನೇ ಇರಲಿ ಕೆಲಸದೆಡೆಗಿನ ಒಲವು ಮತ್ತು ನಿರಂತರ ಪರಿಶ್ರಮ ಇದ್ದರೆ ಜೀವನವನ್ನು ಬದಲಾಯಿಸಬಹುದು ಎಂಬುದನ್ನು ರಾಜೇಶ್ ಸಾಬೀತು ಮಾಡಿದ್ದಾರೆ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು