*ಶುಭತರಲಿ*
ನಮ್ಮ ಪ್ರಯತ್ನಗಳು ನಿರಂತರವಾಗಿರಲಿ
ಕಷ್ಟಗಳಿದ್ದರೂ ನೂರಾರು |
ಸರ್ವರಿಗೂ ಶುಭ ತರಲಿ
ಬರುವ ಎರಡು ಸಾವಿರದ ಇಪ್ಪತ್ಮೂರು ||
ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು💐🌹🌷
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
*ಶುಭತರಲಿ*
ನಮ್ಮ ಪ್ರಯತ್ನಗಳು ನಿರಂತರವಾಗಿರಲಿ
ಕಷ್ಟಗಳಿದ್ದರೂ ನೂರಾರು |
ಸರ್ವರಿಗೂ ಶುಭ ತರಲಿ
ಬರುವ ಎರಡು ಸಾವಿರದ ಇಪ್ಪತ್ಮೂರು ||
ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು💐🌹🌷
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
2023 ಕ್ಕೆ ನನ್ನ ಸಂಕಲ್ಪಗಳು...
ಹೊಸ ವರ್ಷ ಅಂತ ಅಲ್ಲದಿದ್ದರೂ ಒಂದು ಕ್ಯಾಲೆಂಡರ್ ಇಯರ್ ಲೆಕ್ಕದಲ್ಲಿ ನಾವು ಮಾಡಲೇಬೇಕಾದ ಕೆಲಸಗಳ ಪಟ್ಟಿ ಮಾಡಲು ಮತ್ತು ಪುನಃ ಜ್ಞಾಪಿಸಿಕೊಂಡು ಮೈ ಕೊಡವಿಕೊಂಡು ಕಾರ್ಯ ಪ್ರವೃತ್ತವಾಗಲು ಈ ಸಂಕಲ್ಪಗಳು ನಮಗೆ ಬೇಕು. ಕಳೆದ ನಾಲ್ಕಾರು ವರ್ಷಗಳ ಈ ಹವ್ಯಾಸ ಈಗ ಅಭ್ಯಾಸವಾಗಿ ವರ್ಕೌಟ್ ಆಗ್ತಾಯಿದೆ ಅನಸ್ತಾಇದೆ.
2022 ರಲ್ಲಿ ನನ್ನ ಸಂಕಲ್ಪಗಳು ಹೀಗಿದ್ದವು.
ನನ್ನ ತರಗತಿಯನ್ನು ಇನ್ನೂ ಆಕರ್ಷಕವಾಗಿ ಮಾಡಿ ಮಕ್ಕಳಿಗೆ ಇನ್ನೂ ಉತ್ತಮ ಕಲಿಕೆ ಮಾಡಿಸುವುದು.ಕನಿಷ್ಟಪಕ್ಷ ೫ ಹೊಸ ಪುಸ್ತಕಗಳನ್ನು ಬರೆದು ಪ್ರಕಟ ಮಾಡುವುದು.ಕಡಿಮೆಯೆಂದರೂ ೨೫ ಪುಸ್ತಕಗಳನ್ನು ಓದುವುದು.ಐತಿಹಾಸಿಕ ಸ್ಥಳಗಳಿಗೆ ಪ್ರವಾಸ ಮಾಡುವುದು .
ಹಿಂತಿರುಗಿ ನೋಡಿದಾಗ ಬಹುತೇಕ ಸಂಕಲ್ಪಗಳು ಈಡೇರಿವೆ ಕೆಲವು ಗುರಿಮೀರಿದ ಸಾಧನೆ ಎಂದು ಬೆನ್ನು ತಟ್ಟಿಕೊಳ್ಳಬಹುದು. ಮೊದಲನೆಯದಾಗಿ ಶಿಕ್ಷಕನಾದ ನಾನು ನನ್ನ ತರಗತಿಯನ್ನು ಹೆಚ್ಚು ಆಸಕ್ತಿಕರವಾಗಿ ಮಾಡಲು ಪಣ ತೊಟ್ಟಿದ್ದೆ ಆ ನಿಟ್ಟಿನಲ್ಲಿ ಸಾಗಿ ಮಕ್ಕಳಿಗೆ ಉತ್ತಮ ಕಲಿಕೆ ಉಂಟಾಗಲು ಒಬ್ಬ ಅನುಕೂಲಕಾರನಾಗಿ ಕಾರ್ಯ ನಿರ್ವಹಿಸಿದ ತೃಪ್ತಿ ನನಗಿದೆ.ಈ ಕಾರ್ಯದಲ್ಲಿ ನಮ್ಮ ಶಾಲೆಯ ಮುಖ್ಯ ಶಿಕ್ಷಕರು, ಸಹೋದ್ಯೋಗಿ ಮಿತ್ರರು, ಇಲಾಖೆಯ ಅಧಿಕಾರಿ ಬಂಧುಗಳ ಸಲಹೆ ಮಾರ್ಗದರ್ಶನ ಮರೆಯಲಾಗುವುದಿಲ್ಲ.ಇದೆಲ್ಲದರ ಪರಿಣಾಮವಾಗಿ ನಮ್ಮ ಶಾಲೆಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇಕಡಾ ನೂರು ಫಲಿತಾಂಶ ಬಂದಿದೆ! ನನ್ನ ಸಮಾಜ ವಿಜ್ಞಾನ ವಿಷಯದಲ್ಲಿ ಗುಣಮಟ್ಟದ ಫಲಿತಾಂಶದೊಂದಿಗೆ ಒಂಭತ್ತು ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆದದ್ದು ಒಂದು ಅವಿಸ್ಮರಣೀಯ ಘಟನೆ.
ನಮ್ಮ ಶಾಲೆಯ ಎಲ್ಲರ ಸಹಕಾರದಿಂದ ನಮ್ಮ ಶಾಲೆಯ ಮಕ್ಕಳು ಜಿಲ್ಲಾ ಮತ್ತು ತಾಲ್ಲೂಕು ಹಂತದ ಪಠ್ಯ ಮತ್ತು ಸಹಪಠ್ಯ ಚಟುವಟಿಕೆಗಳಲ್ಲಿ ಉತ್ತಮ ಬಹುಮಾನ ಪಡೆದದ್ದು ಮತ್ತೊಂದು ಸಂತಸದ ಸಂಗತಿ.
ಇನ್ನೂ ನನ್ನ ಎರಡನೇ ಸಂಕಲ್ಪವಾದ ಕನಿಷ್ಟ ಐದು ಪುಸ್ತಕ ಬರೆದು ಪ್ರಕಟಿಸಬೇಕು ಎಂಬ ವಿಚಾರಕ್ಕೆ ಬಂದರೆ ಇದರಲ್ಲಿ ಗುರಿಮೀರಿದ ಸಾಧನೆ ಮಾಡಿರುವುದು ತೃಪ್ತಿ ಇದೆ. ಈ ವರ್ಷ
ರಂಗಣ್ಣನ ಗುಡಿಸಲು ಎಂಬ ಕಥಾಸಂಕಲನ ,
ಉದಕದೊಳಗಿನ ಕಿಚ್ಚು ಎಂಬ ಕಾದಂಬರಿ ,ಶಿಕ್ಷಣವೇ ಶಕ್ತಿ ಎಂಬ ಶೈಕ್ಷಣಿಕ ಲೇಖನಗಳ ಸಂಕಲನ,
ಬಾರೋ ಬಾರೋ ಗುಬ್ಬಚ್ಚಿ ಎಂಬ ಶಿಶುಗೀತೆಗಳ ಸಂಕಲನ,
ಭಾಷಣ ಕಲೆ ಎಂಬ ಮಕ್ಕಳ ಪುಸ್ತಕ
ಬಹುಮುಖಿ ಎಂಬ ವಿಮರ್ಶೆ ಕೃತಿ ಸೇರಿ ಒಟ್ಟು ಆರು ಪುಸ್ತಕಗಳನ್ನು ಸಹೃದಯ ಗೆಳೆಯರ ಸಹಾಯದಿಂದ ಪ್ರಕಟಿಸಲು ಸಾದ್ಯವಾಗಿರುವುದು ಬಹಳ ಸಂತಸ ತಂದಿದೆ. ಈ ಪುಸ್ತಕಗಳು ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಗಣ್ಯರ ಮತ್ತು ಕವಿಗಳ ಸಮ್ಮುಖದಲ್ಲಿ ಲೋಕಾರ್ಪಣೆ ಗೊಂಡಾಗ ಸಾರ್ಥಕ ಭಾವ ಮೂಡಿತು.
ದೇಶ ಸುತ್ತುವುದು ಹಾಗೂ ಕೋಶ ಓದುವುದು ನನ್ನ ಸಂಕಲ್ಪದಲ್ಲಿ ಸೇರಿದ್ದವು ಕನಿಷ್ಟ25 ಪುಸ್ತಕ ಓದಲು ಸಂಕಲ್ಪ ಮಾಡಿದ್ದೆ ಅದರಲ್ಲೂ ಗುರಿ ಮೀರಿದ ಸಾಧನೆ ಮಾಡಿ 52 ಪುಸ್ತಕಗಳ ಓದಿ ಆ ಪುಸ್ತಕಗಳ ವಿಮರ್ಶೆ ಮಾಡಿ "ಬಹುಮುಖಿ "ಎಂಬ ವಿಮರ್ಶಾ ಕೃತಿ ಹೊರತಂದಿರುವೆ.
ಇನ್ನೂ ದೇಶ ಸುತ್ತುವ ವಿಚಾರದಲ್ಲಿ ಕೆಲ ಐತಿಹಾಸಿಕ ಕೆಲ ಪಾರಂಪರಿಕ ತಾಣಗಳಲ್ಲಿ ಸಮಾನ ಮನಸ್ಕರೊಂದಿಗೆ ಅಲೆದಾಡಿ ಆ ಅನುಭವ ಕುರಿತಾದ ಲೇಖನಗಳು ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡು ಓದುಗರ ಮೆಚ್ಚುಗೆಯನ್ನು ಪಡೆದ ಖುಷಿ ಮರೆಯಲಾಗದು.
ಇದರ ಜೊತೆಯಲ್ಲಿ ವಿವಿಧ ವಿಷಯಗಳ ಲೇಖನ ,ಕಥೆ, ಕವಿತೆ ಹನಿಗವನ ಮುಂತಾದ80 ಕ್ಕೂ ಹೆಚ್ಚು ಬರೆಹಗಳು ರಾಜ್ಯದ ವಿವಿಧ ಪತ್ರಿಕೆಯಲ್ಲಿ ಪ್ರಕಟವಾದಾಗ ಆನಂದ ಪಟ್ಟಿದ್ದೇನೆ.
ಅದರಲ್ಲೂ ಈ ವರ್ಷ ಪ್ರಜಾ ಪ್ರಗತಿ ಪತ್ರಿಕೆಯ ರಾಜ್ಯ ಮಟ್ಟದ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪುರಸ್ಕಾರಕ್ಕೆ ಪಾತ್ರವಾದ ಖುಷಿಯನ್ನು ಆಗಾಗ್ಗೆ ಮೆಲುಕು ಹಾಕುತ್ತೇನೆ.
ಈ ವರ್ಷದಲ್ಲಿ ಕೆಲ ಸಂಘ ಸಂಸ್ಥೆಗಳು ನನ್ನ ಕಿರು ಸಾಧನೆಯನ್ನು ಗುರ್ತಿಸಿ ಸನ್ಮಾನಿಸಿವೆ ತೆಲುಗು ಜಂಗಮ ಅಭಿವೃದ್ಧಿ ಟ್ರಸ್ಟ್ ನವರು ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದರೆ, ವಿಶ್ವ ಮಾನವ ಟ್ರಸ್ಟ್ ನವರು ಬೆಸ್ಟ್ ಟೀಚರ್ ಎಂದು ಗುರ್ತಿಸಿ ಬಹುಮಾನ ನೀಡಿವೆ ಆ ಸಂಸ್ಥೆಗೆ ನನ್ನ ಧನ್ಯವಾದಗಳು .ನನ್ನೆಲ್ಲ ಈ ಕಿರು ಸಾಧನೆಗೆ ನನ್ನ ಕುಟುಂಬದ ಎಲ್ಲಾ ಸದಸ್ಯರ ಬೆಂಬಲ ಸಹಕಾರ ನೆನೆಯದೇ ಇರುವುದಾದರೂ ಹೇಗೆ ?
ಅನೇಕ ಏಳು ಬೀಳುಗಳ ನಡುವೆ 2022 ಸಮಾಧಾನ ತಂದ ವರ್ಷ ಬಹುತೇಕ ಸಂಕಲ್ಪಗಳು ಈಡೇರಿದ ವರ್ಷ ಇದೇ ಜೋಷ್ ನಲ್ಲಿ ಮುಂಬರುವ 2023 ರಲ್ಲಿ ನನ್ನ ಸಂಕಲ್ಪಗಳು ಹೀಗಿವೆ...
ನನ್ನ ತರಗತಿಯನ್ನು ಇನ್ನೂ ಆಕರ್ಷಕವಾಗಿ ಮಾಡಿ ಮಕ್ಕಳಿಗೆ ಇನ್ನೂ ಉತ್ತಮ ಕಲಿಕೆ ಮಾಡಿಸುವುದು ಮತ್ತು ನಮ್ಮ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದು.
ಕನಿಷ್ಟಪಕ್ಷ ೫ ಹೊಸ ಪುಸ್ತಕಗಳನ್ನು ಬರೆದು ಪ್ರಕಟ ಮಾಡುವುದು.
ಕಡಿಮೆಯೆಂದರೆ 50 ಪುಸ್ತಕಗಳನ್ನು ಓದಿ ಜ್ಞಾನಾರ್ಜನೆ ಮಾಡಿಕೊಳ್ಳುವುದು.
ಸಾಧ್ಯವಾದಷ್ಟು ಪ್ರವಾಸ ಮಾಡುತ್ತಾ ಹೊಸ ಸ್ಥಳಗಳ ಪರಿಚಯ ಮಾಡಿಕೊಳ್ಳುವುದು. ಕುಟುಂಬದೊಂದಿಗೆ ಗುಣಾತ್ಮಕ ಸಮಯ ಕಳೆಯುತ್ತಾ ಮಕ್ಕಳಿಗೆ ಸಲಹೆ ಮಾರ್ಗದರ್ಶನ ನೀಡುವುದು. ಯೋಗ ,ಧ್ಯಾನ ,ಪ್ರಾಣಾಯಾಮ ಮತ್ತು ಪ್ರಾರ್ಥನೆ ಮುಂತಾದವುಗಳನ್ನು ಮಾಡುವುದನ್ನು ಮುಂದುವರೆಸಿಕೊಂಡು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು. ಈ ಸಂಕಲ್ಪಗಳೊಂದಿಗೆ ಹೊಸ ಕ್ಯಾಲೆಂಡರ್ ವರ್ಷ 2023 ಸ್ವಾಗತಿಸುತ್ತಿದ್ದೇನೆ ..
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
ವಿಶ್ವ ಮಾನವರಾಗೋಣ...
ತುಮಕೂರಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಾಲ್ಕು ದಿನಗಳ ಕುವೆಂಪು ನಾಟಕೋತ್ಸವದಲ್ಲಿ ಪ್ರೇಕ್ಷಕನಾಗಿ ಕುವೆಂಪು ಕೃತಿಗಳ ಕಣ್ತುಂಬಿಕೊಳ್ಳುವ ಸದವಕಾಶ ಲಭಿಸಿತ್ತು. ಹಿರಿಯ ರಂಗಕರ್ಮಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು ಆದ ಸಿ ಲಕ್ಷ್ಮಣ ರವರ ಮಗ ಓಹಿಲೇಶ್ವರ ಬಹಳ ಅಚ್ಚುಕಟ್ಟಾಗಿ ನಾಟಕಗಳ ಪ್ರದರ್ಶನ ಆಯೋಜಿಸಿದ್ದರು ಎಲ್ಲಾ ನಾಟಕ ತಂಡಗಳ ಅಭಿನಯ ಪ್ರೇಕ್ಷಕರ ಮನಗೆದ್ದಿತು. ರಂಗಭೂಮಿಗೆ ಭವಿಷ್ಯವಿಲ್ಲ ಇದು ಟಿ ವಿ ಸಿನಿಮಾಗಳ ಕಾಲ ಎಂಬ ಕೂಗಿನ ನಡುವೆ ಎಲ್ಲಾ ದಿನಗಳಲ್ಲಿ ಕಲಾಕ್ಷೇತ್ರ ತುಂಬಿದ ಪ್ರೇಕ್ಷಕರಿಂದ ಕಂಗೊಳಿಸಿದ್ದು ನನಗೆ ಅತೀವ ಸಂತೋಷ ಉಂಟುಮಾಡಿತು. ಮನದಲ್ಲೆ ಅಂದುಕೊಂಡೆ ಯಾವ ಮಾದ್ಯಮ ಬಂದರೂ ರಂಗಭೂಮಿ ಮಣಿಸಲು ಸಾದ್ಯವಿಲ್ಲ.
ಬೊಮ್ಮನ ಹಳ್ಳಿ ಕಿಂದರಿಜೋಗಿ, ಮೋಡಣ್ಣನ ತಮ್ಮ, ಯಮನಸೋಲು ,ಸ್ಮಶಾನ ಕುರುಕ್ಷೇತ್ರ ಮುಂತಾದ ನಾಟಕಗಳನ್ನು ಕಲಾವಿದರು ಅಭಿನಯಿಸುವಾಗ ಪ್ರತಿ ದೃಶ್ಯದ ಕೊನೆಗೆ ಪ್ರೇಕ್ಷಕರ ಕರತಾಡನ ಕಲಾಕ್ಷೇತ್ರದಲ್ಲಿ ಪ್ರತಿಧ್ವನಿಸುತ್ತಿತ್ತು.
ನಾನು ಈಗಾಗಲೇ ಈ ಕೃತಿಗಳನ್ನು ಹಲವಾರು ಬಾರಿ ಓದಿದ್ದರೂ ,ನಾಟಕಗಳನ್ನು ಕೆಲವು ಸಲ ನೋಡಿದ್ದರೂ ಆ ನಾಟಕಗಳ ಸಂಭಾಷಣೆಗಳು ಇಂದು ನನಗೆ ಹೊಸ ದಾಗಿ ಕಂಡವು .ಚಿಂತನೆಗೆ ಹಚ್ಚಿದವು.ಅದೇ ಅಲ್ಲವೇ ಕುವೆಂಪು ಸಾಹಿತ್ಯದ ತಾಕತ್ತು!
ಆಡುಮುಟ್ಟದ ಸೊಪ್ಪಿಲ್ಲ ಎಂಬಂತೆ
ಕುವೆಂಪುರವರು ಎಲ್ಲಾ ತರಹದ ಸಾಹಿತ್ಯ ರಚಿಸಿದ್ದಾರೆ.ಅವರ ಸಾಹಿತ್ಯ ಓದಿದವರಿಗೆ ಅವರ ಸಾಹಿತ್ಯದ ಗಟ್ಟಿತನ ತಿಳಿಯುತ್ತದೆ. ಪ್ರತೀ ಪುಸ್ತಕದ ಕೆಲ ಸಂಭಾಷಣೆಗಳು, ಹೇಳಿಕೆಗಳು ಪ್ರತಿ ದಿನ ನಮಗೆ ಮಾರ್ಗದರ್ಶನ ಮಾಡುತ್ತವೆ .ಎಚ್ಚರಿಸುತ್ತವೆ. ಪ್ರೇರೇಪಿಸುತ್ತವೆ.
ಅದಕ್ಕೆ ಉದಾಹರಣೆ ನೀಡುವುದಾರೆ
ಸ್ಮಶಾನ ಕುರುಕ್ಷೇತ್ರ ದ ಎರಡು ಪಾತ್ರಗಳ ಸಂಭಾಷಣೆಯ ನಡುವೆ ಪರಸ್ಪರ ವಿರೋಧ ಗುಂಪುಗಳಾದ ಪಾಂಡವರ ಮತ್ತು ಕೌರವರ ಸೈನಿಕರ ಮರಣದ ವಿಷಯ ತಿಳಿದು ನಾವು ಪರಸ್ಪರ ವಿರೋಧ ಗುಂಪುಗಳಲ್ಲವೇ ಎಂದು ಮಹಿಳೆ ಕೇಳಿದಾಗ ಅಜ್ಜಿ ನೀಡುವ ಉತ್ತರ
"ನಮಗೆಂತಹ ಹಗೆ ನಾವು ಅವರ ಕೈಗೊಂಬೆಗಳು...ಅವರು ಅಧಿಕಾರಕ್ಕೆ ನಮ್ಮ ಕುಟುಂಬದ ಬಲಿಯಾಗುತ್ತಿವೆ " ಎಂಬ ಮಾತುಗಳು ನನ್ನನ್ನು ಬಹಳ ಕಾಡಿದವು.
ಅದೇ ರೀತಿಯಲ್ಲಿ ಯಮನ ಸೋಲು ನಾಟಕ ಸಂಭಾಷಣೆಯ ಮಾತುಗಳಲ್ಲಿ ಸಾವಿತ್ರಿಯ
"ಕರುಣೆಯಿರದ ಕಾಲ ಚಕ್ರ ಇದು..
ನಿನ್ನ ಧರ್ಮ ನೀನು ಮಾಡು ನನ್ನ ಧರ್ಮವ ನಾನು ಮಾಡುವೆ..
ಧರ್ಮದಿಂ ಧರ್ಮವ ಗೆಲ್ವೆನ್ ....
ನರಕ ನಾಕಗಳನು ಸೃಜಿಸುವುದು ಮನಸು..." ಮುಂತಾದ ಮಾತುಗಳು ಈಗಲೂ ಕಿವಿಯಲ್ಲಿ ಅನುರಣಿಸುತ್ತವೆ.
ಹೀಗೆ ಕುವೆಂಪು ರವರ ಪ್ರತಿ ಕೃತಿಯಲ್ಲೂ ನಮ್ಮನ್ನು ಚಿಂತನೆಗೆ ಹಚ್ಚುವ ಕೆಲ ಸಾಲುಗಳಿವೆ. ಅವುಗಳನ್ನು ಮೆಲುಕು ಹಾಕುತ್ತಾ ಇರಬೇಕು.ಕೆಲ ಮೂಲಗಳಿಂದ ಸಂಗ್ರಹಿಸಿದ ಅಂತಹ ಸಾರಂಶಯುಕ್ತ ಸಾಲುಗಳನ್ನು ಒಂದೆಡೆ ತರುವ ಪ್ರಯತ್ನ ಮಾಡಿರುವೆ...
ಮನುಜ ಮತ ವಿಶ್ವ ಪಥ ಪುಸ್ತಕದಲ್ಲಿ ಬರುವ
"ಪಾಶ್ಚಾತ್ಯರಲ್ಲಿ ಅನೇಕರು, ವಿಶ್ವವಿದ್ಯಾನಿಲಯಗಳ ಮೆಟ್ಟಿಲನ್ನು ಕೂಡ ಹತ್ತದೇ ಇರುವವರು, ಎಷ್ಟೋಜನ ವಿಜ್ಞಾನದಲ್ಲಿ ದೊಡ್ಡ ಆವಿಷ್ಕಾರಗಳನ್ನು ಮಾಡಿದ್ದಾರೆ. ಕಾರಣ ಏನೆಂದರೆ ಅವರವರ ಭಾಷೆಗಳಲ್ಲಿ ಅವರು ಚಿಂತನೆ ನಡೆಸಿದ್ದಾರೆ" ಎಂಬುದು ನಮ್ಮ ಭಾಷೆಯ ಮಹತ್ವ ಸಾರುತ್ತವೆ.
ಇತ್ತೀಚಿನ ದಿನಗಳಲ್ಲಿ ಮುಗಿಯದ ಭಾಷಾ ಸಂಘರ್ಷಗಳನ್ನು ಗಮನಿಸಿದಾಗ ಕುವೆಂಪುರವರ ಮನುಜಮತ ವಿಶ್ವ ಪಥ ಪುಸ್ತಕದ ಮಾತುಗಳು ನಮ್ಮನ್ನು ಚಿಂತನೆಗೆ ಹಚ್ಚುತ್ತವೆ.ಅವರೇ ಹೇಳುವಂತೆ
" ಹಿಂದಿಯನ್ನಾಗಲಿ, ಇಂಗ್ಲೀಷನ್ನಾಗಲಿ ಎಲ್ಲರೂ ಕಲಿಯಬೇಕು ಅನ್ನುವಂಥ ಅವಿವೇಕ ಮತ್ತೊಂದಿಲ್ಲ.
ಆದರ್ಶಗಳ ಬಗ್ಗೆ ತಮ್ಮ ಅಣ್ಣನ ನೆನಪು ಪುಸ್ತಕದ ಮಾತು ಎಲ್ಲರೂ ನೆನೆಯಲೇಬೇಕು.
"ಆದರ್ಶಗಳು ನಾವು ದಿನಾ ಪಠಣ ಮಾಡಬೇಕಾದ ಗೊಡ್ಡು ಮಂತ್ರಗಳಲ್ಲ. ಅವು ನಮ್ಮ ಜೀವನದ ಉಸಿರು".
ವಿಚಾರ ಕ್ರಾಂತಿಗೆ ಆಹ್ವಾನ ಎಂಬ ಪುಸ್ತಕದಲ್ಲಿ ಅವರು ಅಂದು ಹೇಳಿದ ಮಾತುಗಳು ಇಂದಿನ ಸಮಾಜ ನೋಡಿಯೇ ಹೇಳಿದಂತಿದೆ.
"ಮತಭಾವನೆ ಪ್ರಚೋದಿಸಿರುವ ಜಾತಿಭೇದ ಬುದ್ಧಿ, ಮತ್ತು ಚುನಾವಣೆ ಅನುಸರಿಸುತ್ತಿರುವ ಕುಟೀಲ ಕುನೀತಿ. ಈ ಎರಡು ಜನಕ ಅನಿಷ್ಟಗಳನ್ನೂ ನೀವು ತೊಲಗಿಸಿದರೆ ಉಳಿದ ಎಲ್ಲ ಜನ್ಯ ಅನಿಷ್ಟಗಳನ್ನೂ ಬಹುಬೇಗನೆ ತೊಲಗಿಸಲು ನೀವು ಖಂಡಿತವಾಗಿಯೂ ಸಮರ್ಥರಾಗುತ್ತೀರಿ". ಹೌದಲ್ಲವೇ ಎಷ್ಟೊಂದು ಸತ್ಯ.
ಕೊಳಲು ಕವನ ಸಂಕಲನದ ನೇಗಿಲಯೋಗಿ ಕವಿತೆ ನೀಡುವ ಸಂದೇಶ ಅನನ್ಯ
"ಯಾರೂ ಅರಿಯದ ನೇಗಿಲ ಯೋಗಿಯೆ
ಲೋಕಕೆ ಅನ್ನವನೀಯುವನು
ಹೆಸರನು ಬಯಸದೆ ಅತಿಸುಖಕೆಳಸದೆ
ದುಡಿವನು ಗೌರವಕಾಶಿಸದೆ
ನೇಗಿಲಕುಳದೊಳಗಡಗಿದೆ ಕರ್ಮ
ನೇಗಿಲ ಮೇಲಿಯೆ ನಿಂತಿದೆ ಧರ್ಮ"
ನಮ್ಮ ಅನ್ನದಾತನ ಮಹತ್ವವನ್ನು ನಾವು ಇನ್ನಾದರೂ ಮನಗಾಣಬೇಕಿದೆ.
ಇನ್ನೂ ಕುವೆಂಪುರವರ ಸಂದೇಶಗಳನ್ನು ನೋಡುವುದಾದರೆ
"ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು
ನೀ ಮೆಟ್ಟುವ ನೆಲ-ಅದೆ ಕರ್ನಾಟಕ
ನೀನೇರುವ ಮಲೆ ಸಹ್ಯಾದ್ರಿ" ಎನ್ನುತ್ತಾ ನಾಡು ನುಡಿಯ ಬಗ್ಗೆ ತಿಳಿಹೇಳಿದ್ದಾರೆ.
ಸಂಕುಚಿತ ಬುದ್ದಿ ಬಿಟ್ಟು ವಿಶಾಲ ಮನೋಭಾವ ಬೆಳೆಸಿಕೋ ಎನ್ನುತ್ತಾ
ಓ ನನ್ನ ಚೇತನ
ಆಗು ನೀ ಅನಿಕೇತನ ಎಂದರು ನಮ್ಮ ರಸ ಋಷಿ.
ಹೀಗೆ ಕುವೆಂಪುರವರ ವಿಚಾರಗಳನ್ನು ಹೇಳುತ್ತಾ ಹೋದರೆ ಕೊನೆಯೆಂಬುದಿಲ್ಲ ವಿಶ್ವ ಮಾನವ ದಿನದ ಅಂಗವಾಗಿ ಇವೆಲ್ಲವೂ ನೆನಪಾದವು. ಕುವೆಂಪುರವರ ಸಾಹಿತ್ಯ ಓದೋಣ ,ಓದಿಸೋಣ, ಅವರ ಬಗ್ಗೆ ಅವರ ಕೃತಿಗಳ ಬಗ್ಗೆ ಚರ್ಚಿಸೋಣ.ಚಿಂತನಮಂಥನ ಮಾಡೋಣ. ರಸ ಋಷಿಯ ಸಂದೇಶಗಳಲ್ಲಿ ಕೆಲವನ್ನಾದರೂ ನಾವು ಅಳವಡಿಕೊಂಡರೆ ನಾವು ವಿಶ್ವಮಾನವರಾಗುವುದರಲ್ಲಿ ಸಂದೇಹವಿಲ್ಲ.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಶಿಕ್ಷಕರು
ತುಮಕೂರು
9900925529.