22 ಏಪ್ರಿಲ್ 2019

ವಚನ ೧ ( earth day)

           *ವಚನ೧*

ಮರಗಿಡ ಕಡಿದು
ಕಟುಕರಾಗದೆ
ಪರಿಸರ ಉಳಿಸಲು
ಕಟಿಬದ್ದರಾದರೆ
ಧರೆಯೆ ಸ್ವರ್ಗವು
ನೋಡು ಶ್ರೀದೇವಿತನಯ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
(ಇಂದು ವಿಶ್ವ ಭೂ ದಿನ)



16 ಏಪ್ರಿಲ್ 2019

ಬೆವರು (ಹನಿ)

               *ಬೆವರು*

ಒಂದೇ ದಿನದಲ್ಲಿ ಹೊರಹೊಮ್ಮಲಿಲ್ಲ
ಬಿಲ್ ಗೇಟ್ಸ್, ಟಾಟಾ, ಅಂಬಾನಿಯವರು.
ಎಲ್ಲಾ ಸಿರಿ ಸಂಪತ್ತು ಐಶ್ವರ್ಯದ ತವರು
ನಮ್ಮ ಆತ್ಮವಿಶ್ವಾಸ, ಪ್ರಾಮಾಣಿಕ ಬೆವರು.

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*


07 ಏಪ್ರಿಲ್ 2019

ಆರೋಗ್ಯ (ಹನಿ)

*ಆರೋಗ್ಯ*

ಯುಗಾದಿಗೆ ಬೇಳೆ
ನಂತರದ ದಿನ ಮೂಳೆ
ಏನೇ ತಿನ್ನಿ ನಾಳೆ
ತಿನ್ನಲು ಯೋಗ್ಯವಾಗಿರಲಿ
ಪೌಷ್ಟಿಕ ಆಹಾರವಾಗಿರಲಿ
ನಿಮ್ಮ ಬಾಳು ಆರೋಗ್ಯವಾಗಿರಲಿ

*ಸಿ.ಜಿ.ವೆಂಕಟೇಶ್ವರ*
(ಇಂದು ವಿಶ್ವ ಆರೋಗ್ಯ ದಿನ)

ಗಜಲ್ ೫೬(ಸಾವು)

   
*ಗಜ್ಹಲ್ ೫೬*
ಸಾಸಿರ ಕೋಟಿಗಳ ಒಡೆಯನಿಗೆ ತಪ್ಪದು ಸಾವು
ಸಾಧು ಸಂತರಿಗು ಬಿಡದೆ  ಬಪ್ಪುದು ಸಾವು .

ಬಡವ ಬಲ್ಲಿದ ಮೇಲು‌ಕೀಳು‌ ನೋಡುವುದಿಲ್ಲ
ಸಮಾನತೆಯ ಸಂದೇಶ ಸಾರಲು ಬರುವುದು ಸಾವು.

ಬೆಳಗಾದ ಮೇಲೆ ಮಧ್ಯಾಹ್ನ ಸಂಜೆಯಾಗಲೇಬೇಕು
ಕರುಣಾಮಯಿಗಳಿಗೂ ಕರುಣೆ ತೋರದೆ ಆಗಮಿಸುವುದು ಸಾವು.

ಬರಿಗೈಲಿ ಬಂದರೂ ಕೈ ತುಂಬಾ ಸಂಪತ್ತು ಸಂಪಾದನೆಯ ಜಪ
ಆರಡಿ ಮೂರಡಿ‌ ತಾಣವ ಸೇರಿಸಲು ಬರದೇ ಇರದು ಸಾವು.

ದೇವತೆಗಳಂತೆ ಅಮರನಾಗಲು‌‌ ಸಿಹಿಜೀವಿಗೂ ಹಂಬಲ
ಕಾಲನು ಕರೆ ಮಾಡಲು ಮನೆ ಬಾಗಿಲಲಿ ನಿಲ್ಲುವುದು ಸಾವು.

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*


ಯುಗಾದಿ (ಹನಿ)

       
*ಯುಗಾದಿ*

 ಜಗವೆಲ್ಲಾ ಸಂತಸದಿ ಆಚರಿಸಿದೆ *ಯುಗಾದಿ*
ಈ ರಾಜಕಾರಣಿಗಳಿಗೆ ಒಂದೇ ಚಿಂತೆ ಯಾವಾಗ ಸಿಗುವುದು *ಗಾದಿ*