11 ಮೇ 2019

ನಾವೆಲ್ಲ ಒಂದು(ದೇಶ ಭಕ್ತಿ ಗೀತೆ)

*ನಾವೆಲ್ಲ ಒಂದು*

ಬನ್ನಿ ಸೇವೆ ಮಾಡೋಣ
ತಾಯ ಸೇವೆ ಮಾಡೋಣ

ಯಾರೂ ಇಲ್ಲ ಹಿಂದೆ ಮುಂದು
ಕೂಗಿ ಹೇಳಿ ನಾವೆಲ್ಲ ಒಂದು

ಭಾರತಾಂಭೆ ಪುತ್ರರು ನಾವು
ಕೊಡದಿರೋಣ ಮಾತೆಗೆ ನೋವು

ಸರ್ವ ಜನಾಂಗದ ಬೀಡಿದು
ಸಾಧು ಸಂತರ ನಾಡಿದು

ಹಚ್ಚೋಣ ದೇಶಭಕ್ತಿಯ ದೀವಿಗೆ
ಜಯಘೋಷ ಮೊಳಗಲಿ ತಾಯಿಗೆ

ದೇಶಭಕ್ತಿ ಇರಲಿ ಕಣ ಕಣದಲಿ
ಮಾತೆಗೆ ನಮಿಸೋಣ ತನು ಮನದಲಿ‌


*ಸಿ ಜಿ.ವೆಂಕಟೇಶ್ವರ*
*ಗೌರಿಬಿದನೂರು*

05 ಮೇ 2019

ಪ್ರಕೃತಿಯೇ ದೈವವು (ಕವನ)

*ಪ್ರಕೃತಿಯೆ ದೈವವು*

ಧರಣಿಯಲಿ ಭರಣಿಯಾಗಮನದಿ
ಹಸಿರೊದ್ದ ಭೂಮಾತೆಯ
ನೋಡಲು ನಯನಾನಂದ

ತರುಲತೆಗಳ ತೋರಣ
ಭೂಮಾತೆಗೆ ಅಲಂಕಾರ
ತರಣಿಯ ಸೊಬಗೇ ಅಂದ

ಪುಷ್ಪಗಳ ಮತ್ತುವ
ಪತಂಗಗಳ ಹಿಂಡು
ಪುಷ್ಪಪಾತ್ರೆಯಾದ ಭುವಿಯೇ ಚೆಂದ

ಸುಜಲದ ಹಿನ್ನಲೆಯಲ್ಲಿ
ಸುಫಲವ ಹೊಂದಿರುವ
ಕಣ್ಣಿಗೌತಣವ ನೀಡುವ ಧರೆಯೇ ಅಂದ

ಭುವಿಗೂ ಬಾನಿಗೂ
ಹಬ್ಬಿದ ಇಂದ್ರಚಾಪದ ವರ್ಣಗಳು
ಭೂಮಿಗೆ ಅಲಂಕಾರ

ಪ್ರಕೃತಿಗೆ ಸಮವಿಲ್ಲ
ಪ್ರಕೃತಿಯೆ ದೈವವು
ಪ್ರಕೃತಿಯು ನಮ್ಮ ಜೀವವು

*ಸಿ ಜಿ.ವೆಂಕಟೇಶ್ವರ*
*ಗೌರಿಬಿದನೂರು*



04 ಮೇ 2019

ವಚನ೫

*ವಚನ೫*

ಗುರಿಯಿರಲಿ ಬಾಳಿಗೆ
ಗುರಿಯ ತಲುಪಲು
ದಾರಿಯು ಶುದ್ದವಿರಲಿ
ಸರಿತಪ್ಪಿನ ಅರಿವಿರಲಿ
ಅರಿತು ಮುನ್ನಡೆ ಬಾಳಲಿ
ಹರಿಯ ಕರುಣೆಯಿಂದ
ಬಾಳು ಬಂಗಾರವಾಗುವುದು
ನೋಡಾ ಶ್ರೀದೇವಿತನಯ

 *ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*


03 ಮೇ 2019

ಶ್ರೀದೇವಿ ತನಯನ ವಚನಗಳು

*ಶ್ರೀದೇವಿ ತನಯನ ವಚನಗಳು*

*ವಚನ೧*

ನೂರೂರು ಸುತ್ತಿ
ನೂರ್ಕಾಸು ಕಳೆದು
ನದಿಗಳಲಿ ಮಿಂದು
ದೇವ ದೇವತೆಗಳ
ನೋಡುವ ಬದಲು
ನಿನ್ನ ಅಂತರಂಗದ
ರಂಗನ ನೆನೆಯೆಂದ
ಶ್ರೀದೇವಿತನಯ

*ವಚನ೨*

ನಾನು ನನ್ನದು
ನಮ್ಮವರು ಎಂಬ
ಬಂಧನದಿ ಬಿದ್ದು
ನರಳದಿರು ನೀ
ಬನ್ನಪಡುವಾಗ
ಬಂಧುಗಳ ಸದ್ದಿಲ್ಲ
ಕರೆಯದೇ ಬಂದು
ಕಾಪಾಡುವ ನಮ್ಮ
ಹರಿಯಲಿ ಮನಸಿಡು
ಎಂದ ಶ್ರೀದೇವಿತನಯ

*ವಚನ೩*

ವಂಚಕರಿಹರು ಜಗದಲಿ
ಸಂಚುಮಾಡಿ ಮೆರೆವರು
ಕೊಂಚವೂ ವಿಚಲಿತನಾಗಬೇಡ
ಮಿಂಚಿನಂತೆ ಕಾರ್ಯಮಾಡುತ
ಅಂಜದಲೆ  ಮುನ್ನಡೆ
ನಂಜನುಂಡ ಹರ ಕಾಯವನು
ಶ್ರೀದೇವಿತನಯನ ದಯವಿವುದು


*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*

ವಚನ (ಗೋವಿಂದ)

*ವಚನ*

ವ್ಯಸನವಾಗಲಿ ಹರಿಯ
ನಾಮಸ್ಮರಣೆ
ಹಸಿವು ನಿದಿರೆಯ ಪರಿವೆಯಿರದೆ
ನೆನಯಬೇಕವನ
ಬಸಿದರೆ ಭಕ್ತಿಯ ಜಲ
ಹಸಿದಿರುವೆಯಾ ಶ್ರೀದೇವಿತನಯ
ಎಂದು ಬರದಿರನು ಗೋವಿಂದ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*