ಕಾಶ್ಮೀರದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಕೃತಿ.
ಲೇಖಕ ಕೋಟಾ ವೆಂಕಟಾಚಲಂ ಒಬ್ಬ ಭಾರತೀಯ ವಿದ್ವಾಂಸ ಮತ್ತು ಲೇಖಕರಾಗಿದ್ದು ಭಾರತೀಯ ಕಾಲಗಣನೆ ಮತ್ತು ಇತಿಹಾಸದ ಅಧ್ಯಯನಕ್ಕೆ ಅವರ ಕೊಡುಗೆ ಅಪಾರ. ಅವರ ಬರಹಗಳು ಪ್ರಾಚೀನ ಭಾರತೀಯ ಮಹಾನ್ ಕೃತಿಗಳ ಆಳವಾದ ಅಧ್ಯಯನ ಮಾಡಿ ಪಾಶ್ಚಿಮಾತ್ಯ ವಿದ್ವಾಂಸರು ಪ್ರಸ್ತಾಪಿಸಿದ ಐತಿಹಾಸಿಕ ಅಂಶಗಳ ಆಧಾರದ ಮೇಲೆ ವಿಮರ್ಶಾತ್ಮಕ ದೃಷ್ಟಿಕೋನದಲ್ಲಿ ಹತ್ತಾರು ಪುಸ್ತಕಗಳನ್ನು ಬರೆದಿದ್ದಾರೆ. ಅವರು ತೆಲುಗು ಮತ್ತು ಇಂಗ್ಲಿಷ್‌ನಲ್ಲಿ ಹಲವಾರು ಕೃತಿಗಳನ್ನು ಬರೆದಿದ್ದಾರೆ.
"ಕ್ರೋನಾಲಜಿ ಆಪ್ ಕಾಶ್ಮೀರ್ ಹಿಸ್ಟರಿ ರಿಕನ್ಸ್ಟಕ್ಟೆಡ್ " ಎಂಬ ಪುಸ್ತಕವು ಆಂಗ್ಲ ಭಾಷೆಯಲ್ಲಿದ್ದು
ಇದು ಕಾಶ್ಮೀರದ ಐತಿಹಾಸಿಕ ಕಾಲಗಣನೆಯ ವಿಮರ್ಶಾತ್ಮಕ ಮರುಮೌಲ್ಯಮಾಪನವನ್ನು ನೀಡುತ್ತದೆ. ಈ ಪುಸ್ತಕವು ಪಾಶ್ಚಿಮಾತ್ಯ ವಿದ್ವಾಂಸರು ನಮ್ಮ ಮೇಲೆ ಹೇರಿದ ಕಾಲಗಣನೆಯನ್ನು ಪ್ರಶ್ನಿಸುತ್ತಾ
ಭಾರತೀಯ ಇತಿಹಾಸದಲ್ಲಿ ಹೇಗೆ ತಿರುಚಿದ್ದಾರೆ ಎಂದು ಹೇಳಿದ್ದಾರೆ. ವಿಶೇಷವಾಗಿ ಭಾರತೀಯ ನಾಗರಿಕತೆಯ ಪ್ರಾಚೀನತೆಗೆ ಸಂಬಂಧಿಸಿದಂತೆ ಪೂರ್ವಭಾವಿ ಕಲ್ಪನೆಗಳಿಂದ ಕೂಡಿದೆ ಎಂದು ವೆಂಕಟಾಚಲಂ ವಾದಿಸುತ್ತಾರೆ.
ಭಾರತೀಯ ಇತಿಹಾಸದ ಪುನರ್ನಿರ್ಮಾಣದಲ್ಲಿ ಭಾರತೀಯ ಪುರಾಣಗಳು, ಮಹಾಕಾವ್ಯಗಳು ಮತ್ತು ಐತಿಹಾಸಿಕ ಕೃತಿಗಳಿಗೆ ಆದ್ಯತೆ ನೀಡುವ ಪ್ರಾಮುಖ್ಯತೆಯನ್ನು ವೆಂಕಟಾಚಲಂ ಪ್ರತಿಪಾದಿಸುತ್ತಾರೆ. ಈ ಮೂಲಗಳನ್ನು ಪಾಶ್ಚಿಮಾತ್ಯ ವಿದ್ವಾಂಸರು ನಿರ್ಲಕ್ಷಿಸಿದ್ದಾರೆ.ಇದರ ಪರಿಣಾಮವಾಗಿ ಭಾರತದ ಐತಿಹಾಸಿಕ ಪಥದ ತಪ್ಪಾದ ಮತ್ತು ಅಪೂರ್ಣ ತಿಳುವಳಿಕೆ ಉಂಟಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಭಾರತೀಯ ಇತಿಹಾಸದಲ್ಲಿನ ಮಹತ್ವದ ಘಟನೆಗಳು ಮತ್ತು ವ್ಯಕ್ತಿಗಳಿಗೆ ಪರಿಷ್ಕೃತ ಕಾಲಗಣನೆಯನ್ನು ಲೇಖಕರು ಪ್ರಸ್ತಾಪಿಸಿದ್ದಾರೆ. ಉದಾಹರಣೆಗೆ ಅವರು ಮಹಾಭಾರತ ಯುದ್ಧವನ್ನು ಕ್ರಿ.ಪೂ. 3138 ರ ಸುಮಾರಿಗೆ ನಡೆದಿದೆ ಎಂದು ಅಭಿಪ್ರಾಯಪಡುತ್ತಾರೆ.
ಈ ಪುಸ್ತಕವು ಕಾಶ್ಮೀರದ ಪ್ರಮುಖ ಐತಿಹಾಸಿಕ ಪಠ್ಯವಾದ ಕಲ್ಹಣನ "ರಾಜತರಂಗಿಣಿ" ಯ ಆಳವಾದ ವಿಶ್ಲೇಷಣೆಯನ್ನು ಮಾಡಿದೆ.ಅದರ ಮಹತ್ವ, ಮೂಲಗಳು ಮತ್ತು ವಿದ್ವತ್ಪೂರ್ಣ ವ್ಯಾಖ್ಯಾನಗಳನ್ನು ಚರ್ಚಿಸುತ್ತದೆ.
ವೆಂಕಟಾಚಲಂ ಅವರು ಬುಹ್ಲರ್, ಹಲ್ಟ್ಜ್ ಮತ್ತು ಸ್ಟೈನ್ ಅವರಂತಹ ಪಾಶ್ಚಿಮಾತ್ಯ ಇತಿಹಾಸಕಾರರ ಕೃತಿಗಳನ್ನು ಟೀಕಿಸಿದ್ದಾರೆ. ಅವರ ವ್ಯಾಖ್ಯಾನಗಳನ್ನು ಪ್ರಶ್ನಿಸುತ್ತಾ ಭಾರತೀಯ ಇತಿಹಾಸದ ತಪ್ಪು ನಿರೂಪಣೆಗಳನ್ನು ಖಂಡಿಸಿದ್ದಾರೆ.
ಈ ಪುಸ್ತಕವು ಮಹಾಭಾರತ ಯುದ್ಧದ ಡೇಟಿಂಗ್, ಕಲಿಯುಗ ಮತ್ತು ಬುದ್ಧ, ವಿಕ್ರಮಾದಿತ್ಯ ಮತ್ತು ಕಾನಿಷ್ಕನಂತಹ ವ್ಯಕ್ತಿಗಳ ಕಾಲಗಣನೆ ಸೇರಿದಂತೆ ಭಾರತೀಯ ಇತಿಹಾಸದಲ್ಲಿನ ವಿವಾದಾತ್ಮಕ ಕಾಲಾನುಕ್ರಮದ ಸಮಸ್ಯೆಗೆ ಪರಿಹಾರವನ್ನು ಸೂಚಿಸುವ ಪ್ರಯತ್ನ ಮಾಡಿದ್ದಾರೆ.
ಜೊತೆಗೆ ಈ ಪುಸ್ತಕವು ಮುಸ್ಲಿಂ ಆಳ್ವಿಕೆ, ಚಕ್ಸ್, ಮೊಘಲರು, ಆಫ್ಘನ್ನರು, ಸಿಖ್ಖರು ಮತ್ತು ಡೋಗ್ರಾಗಳನ್ನು ಒಳಗೊಂಡ ಕಾಶ್ಮೀರದ ಐತಿಹಾಸಿಕ ಅವಧಿಗಳ ಅವಲೋಕನವನ್ನು ಸಹ ಒದಗಿಸುತ್ತದೆ.
ಒಟ್ಟಾರೆ ನಮ್ಮನ್ನು ಚಿಂತನೆಗೆ ಹಚ್ಚುವ ಇದು ಭಾರತೀಯರು ಓದಲೇ ಬೇಕಾದ ಕೃತಿ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
No comments:
Post a Comment