25 October 2023

ಕಾರ್ಬಿನ್ ಕೋವ್ ಬೀಚ್.ನನ್ನ ಬ್ಲಾಗ್ ನ .2000 ಪೋಸ್ಟ್ ನ ಸಂಭ್ರಮ

 


ನಯನ ಮನೋಹರ ಕೋರ್ಬಿನ್ ಕೋವ್ ಬೀಚ್..



ನಯನ ಮನೋಹರ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಮತ್ತು ಜಲ ಸಾಹಸ ಕ್ರೀಡೆಗಳಿಗೆ ಹೆಸರಾದ ಅಂಡಮಾನ್ ನ ಬೀಚ್ ಗಳಲ್ಲಿ ಕಾರ್ಬಿನ್ ಕೋವ್ ಪ್ರಮುಖ ಬೀಚ್.


ಇದು  ಪೋರ್ಟ್ ಬ್ಲೇರ್ನ ಅತಿ ಹೆಚ್ಚು ಭೇಟಿ ನೀಡುವ ಬೀಚ್ ಸಹ  ಆಗಿದೆ.  ಎಟರ್ನಲ್ ಅಂಡಮಾನ್ನ 2017 ರ ಸಮೀಕ್ಷೆಯ ಪ್ರಕಾರ  10 ರಲ್ಲಿ 7 ಜನರು ಅಂಡಮಾನ್  ದ್ವೀಪಗಳಿಗೆ ಭೇಟಿ ನೀಡುವ ಪ್ರವಾಸಿಗರು  ತಮ್ಮ ಪ್ರವಾಸದಲ್ಲಿ  ಈ  ಬೀಚ್ಗೆ ಭೇಟಿ ನೀಡುತ್ತಾರೆ. 


ಕಾರ್ಬಿನ್ಸ್ ಕೋವ್ ಕಡಲತೀರವು ಪೋರ್ಟ್ ಬ್ಲೇರ್ನಲ್ಲಿ 1.5 ಕಿಮೀ ಉದ್ದದವರೆಗೆ ಅರ್ಧಚಂದ್ರಾಕಾರದ ಆಕಾರದಲ್ಲಿ ನಿರ್ಮಿಸಲಾದ ಅತ್ಯಂತ ಉದ್ದವಾದ ತೀರವನ್ನು ಹೊಂದಿದೆ.

ಆ ತೀರದಗುಂಟ ಸಮಾನ ಮನಸ್ಕರ ಜೊತೆಯಲ್ಲಿ ನಡೆಯುವುದೇ ಒಂದು ಸುಂದರ ಅನುಭವ. ಪ್ರೇಮಿಗಳು ದಂಪತಿಗಳು ,ಕುಟುಂಬ ಸಮೇತವಾಗಿ ಸಂಜೆಗೆ ಈ ಬೀಚ್ ಗೆ ಭೇಟಿ ನೀಡುವ ಜನ ಹೆಚ್ಚಾಗಿರುವರು.


ಬಲಭಾಗದಲ್ಲಿ ಸಾಲಾಗಿ ನಿಂತ ತೆಂಗಿನ ಮರಗಳು ಎಡಭಾಗದಲ್ಲಿ ಬಿಳಿ ಮರಳು ಹಸಿರು ಮತ್ತು ನೀಲಿ ಬಣ್ಣದ ನೀರು ನಮ್ಮ ಮನಸ್ಸನ್ನು ಪ್ರಫುಲ್ಲವಾಗಿಸುತ್ತದೆ. ನಾವು ಬೀಚ್ ನಲ್ಲಿ ನಡೆಯುವಾಗ ಐಸ್ ಕ್ಯಾಂಡಿ ,ಚುರುಮುರಿ ಮಾರುವವರು ಅಡ್ಡಲಾಗಿ ತಮ್ಮ ಪದಾರ್ಥಗಳನ್ನು ಮಾರಲು ಪ್ರಯತ್ನಿಸುವರು.

ನಾವು ಒಂದು ಚುರುಮುರಿ ಕೊಂಡು ತಿಂದೆವು. ರುಚಿ ಕರ್ನಾಟಕದ ರುಚಿಗೆ ಹತ್ತಿರವಿತ್ತು ಆದರೆ ಪ್ರಮಾಣ ಕಡಿಮೆ ಹಣ ಜಾಸ್ತಿ! 


ತೀರದಲ್ಲಿ  ಒಂದು ಕಿಲೋಮೀಟರ್ ವಾಕ್ ಮಾಡಿದ ಮೇಲೆ ನಮಗೆ ಕೆಲವು ಶಿಥಿಲವಾದ ಬಂಕರ್ ಗಳು ಕಾಣುತ್ತವೆ. ಅವು ಎರಡನೇ ಮಹಾಯುದ್ಧದ ಸಮಯದಲ್ಲಿ ಜಪಾನ್ ನವರು ನಿರ್ಮಿಸಿದ ಬಂಕರ್ ಗಳು ಎಂದು ನಮ್ಮ ಟ್ರಾವೆಲ್ ಗೈಡ್ ಮಾಹಿತಿ ನೀಡಿದನು.  

ನಾವು ಬೀಚ್ ನಲ್ಲಿ ವಾಕ್ ಮಾಡುತ್ತಾ ಸೌಂದರ್ಯವನ್ನು ಸವಿಯುವಾಗ ಜೆಟ್ ಸ್ಕಿ, ಬೋಟ್ ರೈಡಿಂಗ್ , ಮುಂತಾದ ವಾಟರ್ ಗೇಮ್ಸ್  ನಲ್ಲಿ ‌ನಿರತ ಯುವಕರು ನೀರಾಟದಲ್ಲಿ ಮೈಮರೆತಿರುವುದನ್ನು ಗಮನಿಸಿದೆ.


ಸ್ವಲ್ಪ ದೂರ ಸಾಗಿದ ನಮಗೆ ಮತ್ತೊಂದು ಬಂಕರ್ ಎದುರಾಯಿತು.

 ಅಲ್ಲಿ ನಿಂತು ನೋಡಿದರೆ  ಹಾವು ದ್ವೀಪವನ್ನು ಕಾಣಬಹುದು.

ಕಡಲತೀರದ ಕೆಳಗೆ ಮತ್ತಷ್ಟು ಬಲಕ್ಕೆ ನಡೆದರೆ, ನೀವು ದೊಡ್ಡ ಮೀನುಗಾರಿಕೆ ದೋಣಿಗಳನ್ನು ಕಾಣಬಹುದು ಮತ್ತು ಹೇರಳವಾಗಿ ದಟ್ಟವಾದ ಮ್ಯಾಂಗ್ರೋವ್ ಕಾಡುಗಳ ಕಾಣಬಹುದು.

 ಹೀಗೆ ಕಾರ್ಬಿನ್ ಕೋವ್ ಬೀಚ್ ನ ಸೌಂದರ್ಯ ಸವಿಯುವ ನಮ್ಮ ಮನಗಳಿಗೆ ಸೂರ್ಯ ದೇವ ಸಂಜೆ 4 .45 ಕ್ಕೆ ಅಸ್ತಂಗತವಾಗಿ  ತಣ್ಣೀರೆರಚಿಬಿಟ್ಟ! ಅಂಡಮಾನ್ ನಲ್ಲಿಯೇ ಹಾಗೆ ಬೆಳಿಗ್ಗೆ ನಾಲ್ಕುವರೆಗೆ ಸೂರ್ಯೋದಯ ಸಂಜೆ ನಾಲ್ಕುಮಕ್ಕಾಲಿಗೆ ಸೂರ್ಯಾಸ್ತ!


ಒಟ್ಟಾರೆಯಾಗಿ ನೀವು ಅಂಡಮಾನ್ ಪ್ರವಾಸ ಕೈಗೊಂಡರೆ  ಪೋರ್ಟ್ ಬ್ಲೇರ್ನಲ್ಲಿ ನೀವು ಭೇಟಿ ನೀಡಬಹುದಾದ ಅತ್ಯುತ್ತಮ ಕಡಲತೀರಗಳಲ್ಲಿ ಕಾರ್ಬಿನ್ ಕೋವ್ ಬೀಚ್ ಸಹ   ಒಂದಾಗಿದೆ. ಎಂದು ಹೇಳಬಹುದು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

 





1 comment:

www.nallanalle.blogspot.com said...

ಅಭಿನಂದನೆಗಳು ಸರ್‌, ಶುಭವಾಗಲಿ...