ಅಂಬಿಕಾ I P S
ಅರ್ಧದಲ್ಲೇ ಶಾಲೆ ಬಿಟ್ಟ ಬಾಲಕಿ...ಬಾಲ್ಯಾವಿವಾಹವಾದ ಯುವತಿ ಇಂದು IPS ಅಧಿಕಾರಿ...
ಜೀವನದಲ್ಲಿ ಸಣ್ಣ ಪುಟ್ಟ ಅಡೆತಡೆಗಳನ್ನು ಎದುರಿಸಿದಾಗ ಎದೆಗುಂದಿ ತಮ್ಮ ಗುರಿಯೆಡೆಗೆ ಸಾಗುವುದನ್ನು ನಿಲ್ಲಿಸಿ ತಮ್ಮ ಹಣೆಬರಹ ಎಂದು ತಮ್ಮನ್ನೇ ಹಳಿದುಕೊಂಡು ಕೆಲವೊಮ್ಮೆ ದೇವರ ಶಪಿಸುತ್ತಾ ತಲೆ ಮೇಲೆ ಕೈಹೊತ್ತುಕೊಂಡು ಕುಳಿತವರನ್ನು ಬಹಳ ಮಂದಿಯನ್ನು ನೋಡುತ್ತೇವೆ.ಇದಕ್ಕೆ ಅಪವಾದವೆಂಬಂತೆ ಇಲ್ಲೊಬ್ಬ ಮಹಿಳೆ ಛಲದಿಂದ ತನ್ನ ಗುರಿಸಾಧಿಸಿ ಇತರರಿಗೆ ಸ್ಪೂರ್ತಿಯಾಗಿದ್ದಾರೆ.
ತಮಿಳುನಾಡು ಮೂಲದ ಆಕೆಯ ಹೆಸರು ಅಂಬಿಕಾ. ಬಾಲ್ಯವಿವಾಹ ಪದ್ದತಿಗೆ ಬಲಿಯಾಗಿ ಸಾಧಾರಣ ಗೃಹಿಣಿಯಾಗಿದ್ದ ಅಂಬಿಕಾ I P S ಪಾಸು ಮಾಡಿ ಅಧಿಕಾರಿಯಾಗಿರುವ ಕಥೆಯೇ ರೋಚಕ ಮತ್ತು ಸ್ಪೂರ್ತಿದಾಯಕ.
ತಮಿಳುನಾಡಿನ ಬಡ ಕುಟುಂಬದಲ್ಲಿ ಜನಿಸಿದ ಎನ್ ಅಂಬಿಕಾರವರಿಗೆ ಪೋಷಕರು 14 ವರ್ಷಕ್ಕೆ ಮದುವೆ ಮಾಡಿ ಬಿಟ್ಟರು. ಪತಿ ಪೊಲೀಸ್ ಪೇದೆಯಾಗಿದ್ದರು. 18ನೇ ವಯಸ್ಸಿಗೆ ಅವರು ಇಬ್ಬರು ಹೆಣ್ಣುಮಕ್ಕಳ ತಾಯಿಯಾದರು. ಜೀವನ ಸುಖವಾಗಿ ಸಾಗುತ್ತಿತ್ತು. ಇಬ್ಬರು ಮಕ್ಕಳ ತಾಯಿಯಾಗಿದ್ದ ಅಂಬಿಕಾ ಅವರು ಒಮ್ಮೆ ತಮ್ಮ ಪತಿಯೊಂದಿಗೆ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ತೆರಳಿದ್ದರು. ಅಲ್ಲಿ ಪತಿ ಅಧಿಕಾರಿಗಳಿಗೆ ಸೆಲ್ಯೂಟ್ ಹೊಡೆದರು. ಆ ಘಟನೆ ಅಂಬಿಕಾ ರವರ ಜೀವನವನ್ನೇ ಬದಲಾಯಿಸುವ ಘಟನೆಯಾಗುತ್ತದೆ ಎಂದು ಸ್ವತಃ ಅವರಿಗೇ ಗೊತ್ತಿರಲಿಲ್ಲ. ತನ್ನ ಪತಿ ಇತರ ಅಧಿಕಾರಿಗೆ ಸೆಲ್ಯೂಟ್ ಹೊಡೆದ ಆ ಕ್ಷಣ ಆಕೆಯ ಮನಸ್ಸಿನಲ್ಲಿ ಉಳಿಯಿತು.
ಪತಿ ನಮಸ್ಕರಿಸಿದ್ದು ಉನ್ನತ ಅಧಿಕಾರಿಗೆ ಎಂದು ಕೇಳಿ ತಿಳಿದುಕೊಂಡರು. ತಾನೂ ಅದೇ ರೀತಿ ಅಧಿಕಾರಿ ಆಗಬೇಕೆಂದು ದೃಢ ಸಂಕಲ್ಪ ಮಾಡಿದರು. ಆಗ ಅವರಿಗೆ ನೆನಪಾಯಿತು ಪ್ರೌಢಶಾಲೆ ಅರ್ಧಕ್ಕೆ ಬಿಡಿಸಿ ಮದುವೆ ಮಾಡಿಸಿದ್ದು. ತಾನಿನ್ನೂ ಹತ್ತನೆ ತರಗತಿ ಪಾಸಾಗಿಲ್ಲ ಎಂದು ಅರಿವಿಗೆ ಬಂದ ಕ್ಷಣದಿಂದ 10ನೇ ತರಗತಿಯನ್ನು ದೂರ ಶಿಕ್ಷಣದ ಮೂಲಕ ಮಾಡಲು ಆರಂಭಿಸಿದರು. ಅದೇ ರೀತಿಯಲ್ಲಿ ಪಿಯು ಸಿ ಮತ್ತು ಪದವಿಯನ್ನು ಸಹ ಕರಾಸ್ಪಾಂಡನ್ಸ್ ಕೋರ್ಸ್ ಮೂಲಕ ಪೂರೈಸಿದರು.
ಪದವಿಯ ನಂತರ ಅಂಬಿಕಾ ನಾಗರಿಕ ಸೇವೆಗಳ ಪರೀಕ್ಷೆಗೆ ತಯಾರಿ ಪ್ರಾರಂಭಿಸಲು ಬಯಸಿದ್ದರು. ಆದರೆ ಅವರು ವಾಸಿಸುತ್ತಿದ್ದ ಸ್ಥಳದಲ್ಲಿ UPSC ಪರೀಕ್ಷೆಗೆ ತಯಾರಾಗಲು ಕೋಚಿಂಗ್ ಸೆಂಟರ್ ಸೇರಿದಂತೆ ಯಾವುದೇ ಸೌಲಭ್ಯವಿರಲಿಲ್ಲ.
ಬೇರೆ ದಾರಿ ಇಲ್ಲದೆ ಯುಪಿಎಸ್ ಸಿ ಕೋಚಿಂಗ್ ಗಾಗಿ ಚೆನ್ನೈಗೆ ಹೋಗಲು ಅಂಬಿಕಾ ನಿರ್ಧರಿಸಿದ್ರು. ಮಕ್ಕಳನ್ನು ಬಿಟ್ಟು ಹೋಗುವುದು ಅತ್ಯಂತ ಕಷ್ಟಕರವಾದ ಕೆಲಸವಾಗಿತ್ತು. ಆಗ ಅವರ ಪತಿ ಬೆಂಬಲ ನೀಡಿದರು.
ಅಂಬಿಕಾ ಅವರ ಯಶಸ್ಸಿನಲ್ಲಿ ಪತಿ ಪ್ರಮುಖ ಪಾತ್ರ ವಹಿಸಿದರು. ಅಂಬಿಕಾ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಗ ಮಕ್ಕಳನ್ನು ಪತಿಯೇ ನೋಡಿಕೊಂಡರು. ಆದರೆ ಕಠಿಣವಾದ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಅಂಬಿಕಾ ಮೊದಲ ಮೂರು ಬಾರಿ ಅನುತ್ತೀರ್ಣ ರಾದರು.
3 ವರ್ಷ ವಿಫಲರಾದಾಗ ಪತಿ ಅಂಬಿಕಾರನ್ನು ಮನೆಗೆ ಮರಳಲು ವಿನಂತಿಸಿದರು. ಆದರೆ ಅಂಬಿಕಾ ಪಟ್ಟು ಬಿಡದೆ ಕೊನೆಯ ಬಾರಿಗೆ ಪರೀಕ್ಷೆಗೆ ಹಾಜರಾಗಲು ಪತಿಯಿಂದ ಅನುಮತಿ ಕೋರಿದರು.
2008 ರಲ್ಲಿ ಅವರ ನಾಲ್ಕನೇ ಪ್ರಯತ್ನದಲ್ಲಿ ಯುಪಿಎಸ್ ಸಿ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಅಂಬಿಕಾ ತೇರ್ಗಡೆಯಾದರು. ಹಿಂದಿನ ತಪ್ಪುಗಳನ್ನು ತಿದ್ದಿಕೊಂಡು ತನ್ನ ನಾಲ್ಕನೇ ಪ್ರಯತ್ನದಲ್ಲಿ ಯಶಸ್ವಿಯಾದರು. ಅವರು ಪ್ರಸ್ತುತ ಐ ಪಿ ಎಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಅವರ ದಿಟ್ಟ ಪೋಲಿಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವುದಕ್ಕಾಗಿ ಜನರು ಅಭಿಮಾನದಿಂದ ಲೇಡಿ ಸಿಂಗಂ ಎಂಬ ಬಿರುದು ನೀಡಿದ್ದಾರೆ.
ಮನಸ್ಸಿದ್ದರೆ ಮಾರ್ಗವುಂಟು ಸತತ ಪ್ರಯತ್ನಕ್ಕೆ ಸೋಲಿಲ್ಲ ಎಂಬುದಕ್ಕೆ ಅಂಬಿಕಾ ರವರು ಮಾದರಿಯಾಗಿ ನಿಂತಿದ್ದಾರೆ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529
No comments:
Post a Comment