19 August 2023

ಶ್ರಾವಣ ಮತ್ತು ಸಣ್ಣಪ್ಪ...

 


ಶ್ರಾವಣ ಮತ್ತು ಸಣ್ಣಪ್ಪ...


ಶ್ರಾವಣ ಪದವೇ ಒಂದು ಸಂಭ್ರಮ. ಬೇಂದ್ರೆ ಅಜ್ಜ ಹೇಳಿದಂತೆ ಶ್ರಾವಣ ಬರೀ ನಾಡಿಗೆ ಬರದೇ ಕಾಡಿಗೆ ಸಕಲ ಜೀವಿಗಳಿಗೆ ಹೊಸ ಚೈತನ್ಯ ಮೂಡಿಸುತ್ತದೆ. ಶ್ರಾವಣವೆಂದರೆ ಹೊಲ ಗದ್ದೆಗಳು ಹಸಿರೊದ್ದು ನಲಿವ ಕಾಲ. ಹಬ್ಬಹರಿದಿನಗಳ ಶ್ರದ್ಧಾ ಭಕ್ತಿಯ ಆಚರಣೆಗಳ ಕಾಲ. ನಾಡಿನ ಬಹುತೇಕ ಕಡೆ ಶ್ರಾವಣ ಶನಿವಾರ ಮತ್ತು ಸೋಮವಾರಗಳನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ. ಕೆಲವೆಡೆ ಧಾರ್ಮಿಕ ಪುರಾಣಗಳನ್ನು ಶ್ರದ್ಧಾ ಭಕ್ತಿಯಿಂದ ಪಾರಾಯಣ ಮಾಡುವರು ಜೊತೆಗೆ ಕೆಲ ವ್ರತಗಳನ್ನು ಆಚರಿಸುವರು.ಅದರಲ್ಲಿ ಪ್ರಮುಖವಾದ ವ್ರತವೆಂದರೆ ವರಮಹಾಲಕ್ಷಿ ವ್ರತ. ಮೊದಲು ಕೆಲವೇ ಜನರು ಆಚರಿಸುತ್ತಿದ್ದ ವರಮಹಾಲಕ್ಷ್ಮಿ ಹಬ್ಬ ಇಂದು ಹಳ್ಳಿಗಳಿಗೂ ವ್ಯಾಪಿಸಿ ಸಾಂಸ್ಕೃತಿಕ ಬದಲಾವಣೆ ಮತ್ತು ಸಾಮಾಜಿಕ ಬದಲಾವಣೆಗೂ ಸಾಕ್ಷಿಯಾಗಿದೆ. ಶ್ರಾವಣ ಮಾಸವು ನನ್ನ ಬಾಲ್ಯವನ್ನು  ಬಹು ಸಂತಸಗೊಳಿಸಿದೆ ಅದಕ್ಕೆ ಶ್ರವಣಕ್ಕೆ ಧನ್ಯವಾದಗಳನ್ನು ಹೇಳಲೇಬೇಕು. ನಮ್ಮ ಬಾಲ್ಯದ ದಿನಗಳಲ್ಲಿ ನಮ್ಮ ಊರ ಸುತ್ತ ಮುತ್ತಲಿನ ಊರುಗಳಲ್ಲಿ ಶನಿವಾರಗಳಂದು ಶನಿಮಹಾತ್ಮೆ ಓದುವ ಮತ್ತು ಓದಿಸುವ ಕಾರ್ಯ ಸಾಮಾನ್ಯವಾಗಿತ್ತು ಆಗ ಶನಿಮಹಾತ್ಮೆ ಕಥೆ ಓದಲು ಎಲ್ಲರಿಗೂ ಬರುತ್ತಿರಲಿಲ್ಲ ಕಾರಣವೆಂದರೆ ಆ ಪುಸ್ತಕದಲ್ಲಿ ಬರುವ ,ಜಂಪೆ ತ್ರಿಹುಡಿ, ಆದಿತಾಳ ಮುಂತಾದ ಸಂಗೀತ ತಾಳ ಲಯಬದ್ಧವಾಗಿ ಓದಬೇಕಿತ್ತು. ಇದರಿಂದಾಗಿ  ಸಾಮಾನ್ಯವಾಗಿ ಓದಲು ಬರುವ ಎಲ್ಲರಿಗೂ ಸುಲಭವಾಗಿ ಶನಿಮಹಾತ್ಮೆ ಓದಲಾಗುತ್ತಿರಲಿಲ್ಲ. ನಮ್ಮ ಬೀದಿಯಲ್ಲಿ ನಮ್ಮ ಮನೆಯ ಪಕ್ಕದಲ್ಲೇ ವಾಸವಿದ್ದ ಸಣ್ಣಪ್ಪ ಶನಿಮಹಾತ್ಮೆ ಓದಲು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಬಹಳ ಪ್ರಸಿದ್ಧರು. ಕೃಷ ದೇಹದ ಸಣ್ಣಪ್ಪ ನವರು ಅರವತ್ತು ದಾಟಿದ್ದರೂ ಅವರ  ಕಂಚಿನ ಕಂಠ ಇತರ ಬೀದಿಗೂ ಕೇಳಿಸುತ್ತಿತ್ತು. ಅವರು ಶನಿಮಹಾತ್ಮೆ ಓದಲು ನಮ್ಮ ಊರು ಮತ್ತು  ಬೇರೆ ಹಳ್ಳಿಗಳಿಗೆ ಹೊರಟರೆ ನನಗೆ ಖುಷಿಯೋ ಖುಷಿ ಯಾಕಂದರೆ ಮರುದಿನ ನನಗೆ ಮತ್ತು ಅವರ ಮಗ ಹಾಗೂ ನನ್ನ ಗೆಳೆಯ ಸೀನನಿಗೆ ಸಣ್ಣಪ್ಪರವರು ದೇವರ ಪ್ರಸಾದ ನೀಡುತ್ತಿದ್ದ  ತಂಬಿಟ್ಟು, ಮಂಡಕ್ಕಿ, ಬಾಳೆಹಣ್ಣು ಇತಹಣ್ಣುಗಳು ! ನಾವಿಬ್ಬರು ಬಾಲಕರು ಆ ಎಲ್ಲಾ ತಿನಿಸುಗಳನ್ನು ತಿಂದು ಮಿಕ್ಕಿದರೆ ಉಳಿದ ನಮ್ಮ ಸ್ನೇಹಿತರಿಗೆ ಕೊಡುತ್ತಿದ್ದೆವು.ಮುಂದಿನ ಶನಿವಾರ ಕಳೆದು ಭಾನುವಾರಕ್ಕೆ ಕಾಯುತ್ತಿದ್ದೆವು. ಹೆಂಡತಿ ತೀರಿಕೊಂಡ ಮೇಲೆ ಸಣ್ಣಪ್ಪನವರು  ಮಗನಿಗೆ ತಾಯಿಯ ಪ್ರೀತಿ ಕಡಿಮೆಯಾಗದಂತೆ  ಸಾಕುತ್ತಿದ್ದರು.  ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿದ್ದ  ಅವರೇ ತಮ್ಮ ಮಗನಿಗೆ ಊಟ ಮಾಡಿ ಬಡಿಸುತ್ತಿದ್ದರು. ಈಗ ಸಣ್ಣಪ್ಪನವರು ಇಲ್ಲ.ಅವರ ಮಗ ಸೀನ ಇದ್ದಾನೆ  ಮೊನ್ನೆ ಊರಿಗೆ ಹೋದಾಗ ಅವನನ್ನು ಮಾತಾಡಿಸಿ ಬಂದೆ.ಅವರ ಮನೆಯಲ್ಲಿ ಸಣ್ಣಪ್ಪ ನೆನಪಾದರು. ಶ್ರಾವಣ ಮಾಸ ಬಂದಾಗಲೆಲ್ಲ ಇಂತಹ ಸಾರ್ಥಕ ಹಿರಿಯ ಜೀವಿಗಳ ನೆನಪಾಗುತ್ತದೆ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು.

No comments: