ಆಗಸ್ಟ್ ಮಾಸದ ನೆನಪುಗಳು...
೨ ಖುದಿರಾಮ್ ಬೋಸ್...
ಟೀನೇಜ್ ನಲ್ಲಿ ಹುಡುಗರು ತಮ್ಮದೇ ಲೋಕದಲ್ಲಿ ಮುಳುಗಿ ವೈಯಕ್ತಿಕ ಆಸೆ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಹಾತೊರೆಯುತ್ತಾರೆ. ಇದಕ್ಕೆ ವಿರುದ್ಧವಾಗಿ ಹದಿನೆಂಟರ ಹರೆಯದಲ್ಲೇ ಬ್ರಿಟಿಷರ ವಿರುದ್ಧ ಕ್ರಾಂತಿಯ ಕಿಡಿಯೆಬ್ಬಿಸಿ ದೇಶಕ್ಕಾಗಿ ತನ್ನ ತಲೆಯನ್ನು ನೇಣುಗಂಬಕ್ಕೆ ಒಡ್ಡಿಕೊಂಡ ಮಹಾನ್ ಚೇತನವೇ ಖುದಿರಾಮ್ ಬೋಸ್.
1889 ರ ಡಿಸೆಂಬರ್ ಮೂರರಂದು ಮಿಡ್ನಾಪುರ ಜಿಲ್ಲೆಯ ಅಬೀಬ್ ಪುರದಲ್ಲಿ ಜನ್ಮತಾಳಿದ ಖುದಿರಾಮ್ ಬೋಸ್ ರವರು ಚಿಕ್ಕ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡರು. ಅವರ ಅಕ್ಕ ಭಾವನ ಅಕ್ಕರೆಯಲ್ಲಿ ಬೆಳೆದ ಖುದಿರಾಮ್ ಬೋಸರು ಅತಿ ಚಿಕ್ಕ ವಯಸ್ಸಿನಲ್ಲಿಯೇ ಕ್ರಾಂತಿಕಾರಿಗಳೊಂದಿಗೆ ಗುರುತಿಸಿಕೊಂಡರು. ಬಂಕಿಮಚಂದ್ರರು ಬರೆದ ‘ಆನಂದ ಮಠ’ ಮತ್ತು ‘ಆನಂದದಾತ’ ಕಾದಂಬರಿಗಳೂ ಅವರ ಮೇಲೆ ಅತ್ಯಂತ ಪ್ರಭಾವ ಬೀರಿದ್ದವು. `ವಂದೇ ಮಾತರಂ’ ಗೀತೆಯಂತೂ ಇವರ ನರನಾಡಿಗಳಲ್ಲಿ ದೇಶ ಭಕ್ತಿ ಉಕ್ಕಿ ಹರಿಯುವಂತೆ ಮಾಡಿತ್ತು. ಹೀಗಾಗಿ ಸುಮಾರು ಹದಿನೈದರ ಹರೆಯದಲ್ಲಿಯೇ ದೇಶಭಕ್ತಿಯನ್ನು ಮೈಗೂಡಿಸಿಕೊಂಡ ಬೋಸ್ ಕ್ರಾಂತಿಕಾರಿ ಸಂಘಟನೆಗಳ ಜೊತೆಗೆ ನಿಕಟ ಸಂಬಂಧವನ್ನಿಟ್ಟುಕೊಂಡುದೇ ಅಲ್ಲದೇ ಅದರ ಪ್ರಚಾರ ಕಾರ್ಯಕ್ಕೆ ತೊಡಗಿ ಕರಪತ್ರಗಳನ್ನು ಹಂಚುತ್ತಿದ್ದಾಗ ಸಿಕ್ಕಿಬಿದ್ದು ಪುನಃ ಬಿಡುಗಡೆಗೊಂಡರು.
ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಕಾಳ್ಗಿಚ್ಚಾಗಿ ಭುಗಿಲೆದ್ದ ಕಾಲವದು. ಇದಕ್ಕೆ ಹಲವಾರು ಪತ್ರಿಕೆಗಳು ಕುಮ್ಮಕ್ಕು ನೀಡುತ್ತಿದ್ದವು. ಹೀಗಾಗಿ ಬ್ರಿಟಿಷರ ವಿರುದ್ಧವಾಗಿ ಬರೆದ ಪತ್ರಿಕೆಗಳ ಮೇಲೆ ಮೊಕದ್ದಮೆ ಹೂಡಲಾಗುತ್ತಿತ್ತು. ಅರವಿಂದ ಘೋಷರ ಪ್ರಕಾಶನದಲ್ಲಿ ಹೊರಬರುತ್ತಿದ್ದ ‘ವಂದೇ ಮಾತರಂ’ ಪತ್ರಿಕೆಯೂ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಮೊಕದ್ದಮೆಯ ವಿಚಾರಣೆಯನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದ ನಿರಾಯುಧ ಗುಂಪಿನ ಮೇಲೆ ಬ್ರಿಟಿಷರು ಅನವಶ್ಯಕವಾಗಿ ಲಾಠಿ ಪ್ರಹಾರ ಮಾಡಿದರು. ಇದರಿಂದ ಕೆರಳಿದ ಹದಿನೈದು ವರ್ಷದ ಸುಶೀಲ್ ಸೇನ್ ಬ್ರಿಟಿಷ್ ಅಧಿಕಾರಿಗೆ ತಿರುಗಿಸಿ ಹೊಡೆದರು. ಇದರಿಂದ ರೊಚ್ಚಿಗೆದ್ದ ಬ್ರಿಟಿಷ್ ಅಧಿಕಾರಿ ಕಿಂಗ್ಸ್ ಫೋರ್ಡನು ಆ ಯುವಕನನ್ನು ಮ್ಯಾಜಿಸ್ಟ್ರೇಟ್ ಮುಂದೆ ನಿಲ್ಲಿಸಿ ಆತನ ವಯಸ್ಸನ್ನು ಲೆಕ್ಕಿಸದೆ 15 ಛಡಿ ಏಟಿನ ಶಿಕ್ಷೆ ವಿಧಿಸಿ ವಿಕೃತಿ ಮೆರೆದನು.
ಸುಶೀಲ್ ಕುಮಾರರೇನೋ ಶಿಕ್ಷೆಯನ್ನು ಸಂತೋಷದಿಂದಲೇ ಸ್ವೀಕರಿಸಿದರು. ಆದರೆ ಈ ಅಪ್ರಾಪ್ತ ಬಾಲಕನ ಮೇಲೆ ಲಾಠಿ ಬೀಸಿದ್ದಲ್ಲದೆ, ಉಗ್ರಶಿಕ್ಷೆಗಳನ್ನು ನೀಡುತ್ತಿದ್ದ ಬ್ರಿಟಿಷರ ದಬ್ಬಾಳಿಕೆಯನ್ನು ಸಹಿಸದ ಕ್ರಾಂತಿಕಾರಿಗಳು ಕಿಂಗ್ಸ್ ಫೋರ್ಡನನ್ನು ಮುಗಿಸಲು ತೀರ್ಮಾನಿಸಿದರು. ಇದರ ಸುಳಿವು ಹತ್ತಿದ ಬ್ರಿಟಿಷ್ ಸರ್ಕಾರ ಕಿಂಗ್ಸ್ ಫೋರ್ಡನನ್ನು ಮುಜಾಫರಪುರಕ್ಕೆ ವರ್ಗ ಮಾಡಿತು.
ಹೇಗಾದರಾಗಲಿ ಕಿಂಗ್ಸ್ ಫೋರ್ಡನನ್ನು ಕೊಲ್ಲಲೇಬೇಕು ಎನ್ನುವ ದೃಢ ನಿರ್ಧಾರ ಮಾಡಿದ್ದ ಕ್ರಾಂತಿಕಾರಿಗಳು, ಈ ಕಾರ್ಯವನ್ನು `ಯುಗಾಂತರ ಗುಂಪಿನ ನಾಯಕರಾದ ಸತ್ಯೇಂದ್ರನಾಥ ಬೋಸ್, ಖುದಿರಾಮ್ ಬೋಸ್ ಮತ್ತು ಆತನ ಸಹ ಕ್ರಾಂತಿಕಾರಿ ಪ್ರಫುಲ್ಚಾಕಿಗೆ ವಹಿಸಿದರು. ಆಜ್ಞೆಯಂತೆ ತೆರಳಿದ ಈ ಕ್ರಾಂತಿಕಾರಿಗಳು ಕಿಂಗ್ಸ್ ಫೋರ್ಡನ ಚಲನವಲನಗಳನ್ನು ಗಮನಿಸತೊಡಗಿದರು.
ಕಿಂಗ್ಸ್ ಫೋರ್ಡನು ಸಂಜೆ ಕ್ಲಬ್ಬಿನಿಂದ ಮನೆಗೆ ಬರುವ ದಾರಿಯಲ್ಲಿ ಕಾರಿನ ಮೇಲೆ ಬಾಂಬ್ ಹಾಕಲು ನಿರ್ಧರಿಸಲಾಗಿತ್ತು. ಎಂದಿನಂತೆ ಕಾರು ಹೊರಟು ಬಂದಿತು. ಅದರೊಳಗೆ ಯಾರಿದ್ದಾರೆಂದು ಗಮನಿಸದೆ ಬೋಸ್ ಮತ್ತು ಚಾಕಿ ಬಾಂಬ್ ಎಸೆದರು. ಕಿಂಗ್ಸ್ ಫೋರ್ಡ್ ಬದಲಾಗಿ ಅದರಲ್ಲಿದ್ದ ಇಬ್ಬರು ಮಹಿಳೆಯರು ಅಸುನೀಗಿದರು. ಇತ್ತ ಕಿಂಗ್ಸ್ ಫೋರ್ಡನನ್ನು ಕೊಂದೆವೆಂದುಕೊಂಡ ಈ ಹುಡುಗರು ಒಂದೊಂದು ದಿಕ್ಕಿಗೊಬ್ಬರು ಓಡಿದರು.
ಕ್ರಾಂತಿಕಾರಿಗಳು ಎಸೆದ ಬಾಂಬು ಕಿಂಗ್ಸ್ ಫೋರ್ಡನನ್ನು ಕೊಲ್ಲಲಿಲ್ಲವಾದರೂ, ಇಡೀ ಬ್ರಿಟಿಷ್ ಸಾಮ್ರಾಜ್ಯಕ್ಕೇ ಮೊದಲ ನಡುಕ ಹುಟ್ಟಿಸಿಬಿಟ್ಟಿತ್ತು. ಈ ಹುಡುಗರು ಎಸೆದ ಬಾಂಬು ಕೇವಲ ಕಿಂಗ್ಸ್ ಫೋರ್ಡನ ವಾಹನ ಚೂರು ಚೂರು ಮಾಡಿದ್ದಲ್ಲದೆ ಬ್ರಿಟಿಷ್ ಸಾಮ್ರಾಜ್ಯದ ಅಹಂಕಾರ ಮತ್ತು ದರ್ಪವನ್ನು ನುಚ್ಚುನೂರು ಮಾಡಿತ್ತು.ಇದರಿಂದ ರೊಚ್ಚಿಗೆದ್ದ ಬ್ರಿಟಿಷರು ಖುದಿರಾಮ್ ಬೋಸ್ ಮತ್ತು ಸಂಗಡಿಗರನ್ನು ಸೆರೆಹಿಡಿಯಲು ಸತತವಾಗಿ ಪ್ರಯತ್ನಿಸಿದರು.ಭೂಗತರಾದ ಅವರು ಅಷ್ಟು ಸುಲಭವಾಗಿ ಸಿಗಲಿಲ್ಲ. ಕೊನೆಗೆ
ಮುಜಾಫುರದಿಂದ ಸುಮಾರು ,25 ಮೈಲುಗಳಾಚೆ ಯುವಕ ಖುದಿರಾಮ್ ಬೋಸರನ್ನು ಸೆರೆಹಿಡಿಯಲಾಯಿತು. ತಪ್ಪಿಸಿಕೊಳ್ಳಲು ಆತ ಮಾಡಿದ ಎಲ್ಲ ಸಾಹಸಗಳು ವ್ಯರ್ಥವಾಗಿ ಬಂಧನವಾಗಿ ಹೋಯಿತು. ಅವರ ಮೇಲೆ ವಿಚಾರಣೆ ಎಂಬ ನಾಟಕ ನಡೆದು ಕೊನೆಗೆ ಮರಣದಂಡನೆಯನ್ನು ವಿಧಿಸಲಾಯಿತು. 1908ರ ಆಗಸ್ಟ್ 11ರಂದು ಅವರನ್ನು ಗಲ್ಲಿಗೇರಿಸಲಾಯಿತು.
ಸಿಹಿಜೀವಿ ವೆಂಕಟೇಶ್ವರ
ತುಮಕೂರು.
9900925529
No comments:
Post a Comment