ಆಗಸ್ಟ್ ಮಾಸದ ನೆನಪುಗಳು...
ಭಾಗ _9
ಕ್ವಿಟ್ ಇಂಡಿಯಾ ಚಳುವಳಿ...
ನೂರಾರು ವರ್ಷಗಳ ಕಾಲದ
ಬಳಿಕ ಸ್ವಾತಂತ್ರ್ಯ ಹೋರಾಟಕ್ಕೆ
ದೊರಕಿತು ಸರಿಯಾದ ಹಳಿ|
ಅದುವೆ ಮಾಡು ಇಲ್ಲವೇ ಮಡಿ
ಎಂಬ ಘೋಷಣೆ ಮೊಳಗಿಸಿದ
ಕ್ವಿಟ್ ಇಂಡಿಯಾ ಚಳುವಳಿ||
ಅಹಿಂಸಾ ತತ್ವಗಳನ್ನು ಪಾಲಿಸುವ ಶಾಂತಿದೂತನಿಗೆ ಸಿಟ್ಟು ಬಂದಾಗ ಏನಾಗುತ್ತದೆ ಎಂಬುದಕ್ಕೆ ಉದಾಹರಣೆ ಕ್ವಿಟ್ ಇಂಡಿಯಾ ಚಳುವಳಿ! ಗುಲಾಮಗಿರಿಯ ಸಂಕೋಲೆ ಬಿಡಿಸಲು ಮೊದಲಿನಿಂದಲೂ ಶಾಂತಿಯುತ ಪ್ರತಿಭಟನೆಗಳನ್ನು ಹಮ್ಮಿಕೊಂಡು ಬ್ರಿಟಿಷರ ಗಮನ ಸೆಳೆದ ಮಹಾತ್ಮ ಗಾಂಧೀಜಿಯವರು ಆಗಸ್ಟ್ 9 ರಂದು "ಮಾಡು ಇಲ್ಲವೇ ಮಡಿ" ಕರೋ ಯಾ ಮರೋ" ಎಂದು ಘರ್ಜಿಸಿ "ಬ್ರಿಟಿಷರೆ ಭಾರತ ಬಿಟ್ಟು ತೊಲಗಿ "ಎಂಬ ನೇರ ಸಂದೇಶ ರವಾನಿಸಿದರು. ಆ ದಿನದ ನೆನಪಿಗಾಗಿ ಪ್ರತಿ ವರ್ಷ ಆಗಸ್ಟ್ 9 ರ ದಿನವನ್ನು "ಕ್ವಿಟ್ ಇಂಡಿಯಾ ದಿನ " ವಾಗಿ ದೇಶಾದ್ಯಂತ ಆಚರಿಸುತ್ತೇವೆ.
1600 ರಲ್ಲಿ ವ್ಯಾಪಾರಕ್ಕೆ ಬಂದ ಆಂಗ್ಲರು ಕ್ರಮೇಣ ನಮ್ಮನ್ನು ಆಳಲು ಶುರು ಮಾಡಿದಾಗ ಅಲ್ಲಲ್ಲಿ ನಡೆದ ಕೆಲ ಪ್ರತಿರೋಧಗಳು 1857 ರಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ರೂಪ ಪಡೆದ ಬ್ರಿಟಿಷರನ್ನು ನಡುಗಿಸಿದ್ದು ಸುಳ್ಳಲ್ಲ.ಇದರಿಂದ ಪ್ರೇರಣೆಗೊಂಡ ಭಾರತೀಯರು ಅಸಹಕಾರ ಚಳವಳಿ, ಕಾನೂನು ಭಂಗ ಚಳುವಳಿಗಳನ್ನು ಸಂಘಟಿಸಿದರು. ಆದರೂ ಬಗ್ಗದ ಆಂಗ್ಲರಿಗೆ 1948 ರ ಜುಲೈ 14 ರಂದು
ಖಡಕ್ ಸಂದೇಶ ಹೊರಡಿಸಿದ ಕಾಂಗ್ರೆಸ್ ಪಕ್ಷವು ಬ್ರಿಟನ್ನಿನಿಂದ ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಗೊತ್ತುವಳಿ ಹೊರಡಿಸಿತು. ಈ ಬೇಡಿಕೆ ನೆರವೇರದಿದ್ದರೆ, ಅಸಹಕಾರ ಚಳುವಳಿಯನ್ನು ನಡೆಸುವುದಾಗಿಯೂ ಘೋಷಿಸಲಾಯಿತು. ಆದರೆ ಪಕ್ಷದಲ್ಲಿಯೇ ಹಲವಾರು ನಾಯಕರು ಇದನ್ನು ವಿರೋಧಿಸಿದರು. ಚಕ್ರವರ್ತಿ ರಾಜಗೋಪಾಲಾಚಾರಿಯವರು ಈ ಕಾರಣದಿಂದ ಹಲವಾರು ಪ್ರಾದೇಶಿಕ ನಾಯಕರುಗಳೊಂದಿಗೆ ಕಾಂಗ್ರೆಸ್ ಪಕ್ಷವನ್ನು ತೊರೆದರು. ಜವಾಹರಲಾಲ್ ನೆಹರು ಮತ್ತು ಮೌಲಾನಾ ಆಜಾದ್ ಈ ಗೊತ್ತುವಳಿಯನ್ನು ಟೀಕಿಸದರೂ ಕೂಡ ತಮ್ಮ ಬೆಂಬಲ ಸೂಚಿಸಿ ಗಾಂಧೀಜಿಯ ನಾಯಕತ್ವದಲ್ಲಿ ವಿಶ್ವಾಸ ಸೂಚಿಸಿದರು. ಸರ್ದಾರ್ ಪಟೇಲ್ ಮತ್ತು ಡಾ. ರಾಜೇಂದ್ರ ಪ್ರಸಾದ್ ಈ ನಿಲುವಳಿಯನ್ನು ಬಹಿರಂಗವಾಗಿ ಬೆಂಬಲಿಸಿದರು.
ಆದರೆ ಬೇರೆ ಪಕ್ಷಗಳು ಇದಕ್ಕೆ ಸಹಮತ ಸೂಚಿಸಲಿಲ್ಲ. ಭಾರತೀಯ ಕಮ್ಯೂನಿಸ್ಟ್ ಪಕ್ಷ ಮತ್ತು ಹಿಂದೂ ಮಹಾಸಭಾ ಇದನ್ನು ವಿರೋಧಿಸಿದವು. ಮೊಹಮ್ಮದ್ ಅಲಿ ಜಿನ್ನಾರ ವಿರೋಧದ ಕಾರಣ ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿ ಬ್ರಿಟಿಷರ ಪರವಾಗಿ ನಿಂತರು. ಇದರಿಂದ ಮುಸ್ಲಿಂ ಲೀಗ್ ಪಕ್ಷಕ್ಕೆ ಪ್ರಾಂತೀಯ ಸರ್ಕಾರಗಳಲ್ಲಿ ಅಧಿಕಾರ ದೊರೆಯಿತು.
1942ರ ಆಗಸ್ಟ್ 8 ರಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಮುಂಬಯಿ ಅಧಿವೇಶನದಲ್ಲಿ ಭಾರತ ಬಿಟ್ಟು ತೊಲಗಿ ಎಂಬ ಗೊತ್ತುವಳಿಯನ್ನು ಹೊರಡಿಸಲಾಯಿತು. ಗಾಂಧೀಜಿಯವರು ಮುಂಬಯಿಯ ಗೊವಾಲಿಯ ಮೈದಾನದಲ್ಲಿ ಭಾರತೀಯರಿಗೆ ಅಹಿಂಸಾತ್ಮಕ ಅಸಹಾಕಾರ ಮಾಡುವಂತೆ ಕರೆ ಕೊಟ್ಟರು. ಜನರಿಗೆ ಬ್ರಿಟಿಷ್ ಸರ್ಕಾರವನ್ನು ಅನುಸರಿಸದೇ ಸ್ವತಂತ್ರರಾಗಿ ಬಾಳುವುದಕ್ಕೆ ಕರೆಕೊಟ್ಟರು. ಗಾಂಧೀಜಿಯವರ ಈ ಕರೆಗೆ ಭಾರತೀಯರು ಬೃಹತ್ ಸಂಖ್ಯೆಯಲ್ಲಿ ಓಗೊಟ್ಟರು. ಬೆಂಬಲ ಸೂಚಿಸಿದವರಲ್ಲಿ ಗಾಂಧೀಜಿಯವರ ಅಹಿಂಸಾತ್ಮಕ ತತ್ವದ ವಿರೋಧಿಗಳಾದ ಕ್ರಾಂತಿಕಾರಿಗಳೂ ಸೇರಿದ್ದರು.
ಬ್ರಿಟಿಷರು ಮುನ್ನೆಚ್ಚರಿಕೆ ಕ್ರಮವಾಗಿ ಗಾಂಧಿಯವರನ್ನು ಬಂಧಿಸಿದರು. ಕಾಂಗ್ರೆಸ್ಸಿನ ಎಲ್ಲ ರಾಷ್ಟ್ರೀಯ ನಾಯಕರನ್ನೂ ಬಂಧಿಸಲಾಯಿತು. ನಂತರ ಕಾಂಗ್ರೆಸ್ ಪಕ್ಷವನ್ನು ನಿಷೇಧಿಸಲಾಯಿತು. ಇದರಿಂದ ಜನರಲ್ಲಿ ವಿರೋಧಿ ಭಾವನೆ ಇನ್ನೂ ಹೆಚ್ಚಾಯಿತು. ಪಕ್ಷ ನಾಯಕತ್ವದ ಅಭಾವದ ಹೊರತಾಗಿಯೂ ಬೃಹತ್ ಪ್ರಮಾಣದಲ್ಲಿ ವಿರೋಧಿ ಪ್ರದರ್ಶನ ಮತ್ತು ಧರಣಿಗಳು ನಡೆದವು. ಆದರೆ ಎಲ್ಲ ವಿರೋಧಗಳು ಅಹಿಂಸಾತ್ಮಕವಾಗೇನೂ ಉಳಿಯಲಿಲ್ಲ. ಬಾಂಬುಗಳನ್ನು ಸ್ಫೋಟಿಸಲಾಯಿತು, ಸರ್ಕಾರೀ ಕಟ್ಟಡಗಳನ್ನು ಸುಡಲಾಯಿತು, ವಿದ್ಯುತ್ತನ್ನು ನಿಲ್ಲಿಸಲಾಯಿತು, ಮತ್ತು ಸಾರಿಗೆ ಮತ್ತು ಸಂಪರ್ಕಗಳನ್ನು ಸ್ಥಗಿತಗೊಳಿಸಲಾಯಿತು.
ಆದರೆ ಬ್ರಿಟಿಷರು ತ್ವರಿತವಾಗಿ ಪ್ರದರ್ಶನಕಾರರನ್ನು ಬಂಧಿಸಿದರು. ಒಂದು ಲಕ್ಷಕ್ಕಿಂತಲೂ ಹೆಚ್ಚು ಜನರನ್ನು ಬಂಧಿಸಲಾಯಿತು, ಬೃಹತ್ ಪ್ರಮಾಣದಲ್ಲಿ ದಂಡಗಳನ್ನು ವಿಧಿಸಲಾಯಿತು, ಬಾಂಬುಗಳನ್ನು ವಿರೋಧಿಗಳ ಮೇಲೆ ಬಳಸಲಾಯಿತು, ಮತ್ತು ಪ್ರದರ್ಶನಾಕಾರರನ್ನು ಸಾರ್ವಜನಿಕವಾಗಿ ದಂಡಿಸಲಾಯಿತು. ಬಹಳಷ್ಟು ರಾಷ್ಟ್ರೀಯ ನಾಯಕರು ಭೂಗತರಾಗಿ ರೇಡಿಯೋ ಸ್ಟೇಷನ್ ಗಳಿಂದ ಜನರಿಗೆ ಸಂದೇಶ ಕೊಡುತ್ತಿದ್ದರು. ಬ್ರಿಟಿಷರು ಇದರಿಂದ ಎಷ್ಟು ಕಂಗಾಲಾಗಿದ್ದರೆಂದರೆ, ಗಾಂಧೀಜಿ ಮತ್ತು ಇತರ ನಾಯಕರನ್ನು ಬಂಧಿಸಿ ದಕ್ಷಿಣ ಆಫ್ರಿಕಾ ಅಥವಾ ಯೆಮೆನ್ ದೇಶಕ್ಕೆ ಕೊಂಡೊಯ್ಯಲು ಯುದ್ಧನೌಕೆಯನ್ನು ಕರೆಸುವ ಏರ್ಪಾಡು ಮಾಡಲಾಯಿತು. ಆದರೆ ಇದರಿಂದ ಸಂಘರ್ಷಣೆ ಇನ್ನೂ ತೀವ್ರವಾಗುವುದೆಂಬ ಭಯದಿಂದ ಹೀಗೆ ಮಾಡದಿರಲು ನಿರ್ಧಾರ ಮಾಡಲಾಯಿತು.
ಕಾಂಗ್ರೆಸ್ ಪಕ್ಷದ ನಾಯಕರು ಇಡೀ ಪ್ರಪಂಚದಿಂದ ಮೂರು ವರ್ಷಗಳ ಕಾಲ ಸಂಪರ್ಕ ಕಳೆದುಕೊಂಡರು. ಗಾಂಧೀಜಿಯವರ ಪತ್ನಿ ಕಸ್ತೂರ್ ಬಾ ಗಾಂಧಿ ಮತ್ತು ಕಾರ್ಯದರ್ಶಿ ಮಹಾದೇವ ದೇಸಾಯಿ ಮರಣದ ನಂತರ ಗಾಂಧಿಯವರ ಆರೋಗ್ಯ ಹದಗೆಟ್ಟಿತು. ಇದರ ಹೊರತಾಗಿಯೂ, ಮಹಾತ್ಮಾ ಗಾಂಧಿಯವರು 21 ದಿನಗಳ ಉಪವಾಸವನ್ನು ಕೈಗೊಂಡು ಚಳುವಳಿಯನ್ನು ಮುಂದುವರೆಸಿದರು ಅವರ ಆರೋಗ್ಯ ಇನ್ನೂ ಹದಗೆಟ್ಟ ಕಾರಣ ಬ್ರಿಟಿಷರು ಗಾಂಧಿಯವರನ್ನು ಬಿಡುಗಡೆಗೊಳಿಸಿದರೂ ಕೂಡ, ಅವರು ಕಾಂಗ್ರೆಸ್ ನಾಯಕರ ಬಿಡುಗಡೆಗೆ ಒತ್ತಾಯಿಸಿ ಧರಣಿಯನ್ನು ಮುಂದುವರೆಸಿದರು.
ಕೆಲವು ಚರಿತ್ರೆಕಾರರ ಪ್ರಕಾರ ಈ ಚಳುವಳಿಗೆ ಸೋಲುಂಟಾಯಿತು. ಕಾಂಗ್ರೆಸ್ ಪಕ್ಷವೂ ಕೂಡ ಆಗ ಇದೇ ನಿಲುವನ್ನು ಹೊಂದಿತ್ತು. ಸರ್ಕಾರದ ಕಾರ್ಯವನ್ನು ನಿಲ್ಲಿಸುವ ಇರಾದೆಯಲ್ಲಿ ಸೋಲುಂಟಾದರೂ, ಸರ್ಕಾರಕ್ಕೆ ಇದರಿಂದ ಸಾಕಷ್ಟು ಮುಜುಗರ ಮತ್ತು ಆತಂಕ ಉಂಟಾದವು. ಶೀಘ್ರವಾಗಿ ಸ್ವಾತಂತ್ರ್ಯ ಪಡೆಯುವುದರಲ್ಲಿ ಇದು ವಿಫಲವಾಯಿತು. ಆರಂಭದ ಐದು ತಿಂಗಳಲ್ಲಿಯೇ ಬಹುತೇಕವಾಗಿ ಸ್ತಬ್ಧವಾಯಿತು. ಇದಕ್ಕಿದ್ದ ಒಂದೇ ಕಾರಣವೆಂದರೆ ಸರ್ಕಾರದ ಪರವಾಗಿ ಸೇನೆಗಿದ್ದ ಸ್ವಾಮಿತ್ವ. ಬ್ರಿಟಿಷ್ ಪ್ರಧಾನಮಂತ್ರಿ ಕ್ಲೆಮೆಂಟ್ ಅಟ್ಲೀ ಪ್ರಕಾರ ಈ ಚಳುವಳಿಯ ಕಾಣಿಕೆ ಅತೀ ಕಡಿಮೆಯದ್ದಾಗಿತ್ತು. ಆದರೆ ಭಾರತೀಯ ವಾಯುಪಡೆಯ ಅತೃಪ್ತಿಯನ್ನು ಮುಖ್ಯವಾಗಿ ಉದಾಹರಿಸುತ್ತಾರೆ.
ರಾಷ್ಟ್ರೀಯ ಮಟ್ಟದಲ್ಲಿ ಚಳುವಳಿಗೆ ಯಶಸ್ಸು ಸಿಗದಿದ್ದರೂ ಸತಾರಾ, ತಲಚೇರ್, ಮತ್ತು ಮಿಡ್ನಾಪುರಗಳಲ್ಲಿ ಬಹು ಯಶಸ್ವಿಯಾಯಿತು. ಮಿಡ್ನಾಪುರದಲ್ಲಿ ಜನರು ಪರ್ಯಾಯ ಸರ್ಕಾರವನ್ನೂ ಸ್ಥಾಪಿಸಿದರು. ನಂತರ ಗಾಂಧೀಜಿಯ ಕರೆಗೆ ಓಗೊಟ್ಟು ಇದನ್ನು ಬಿಟ್ಟುಕೊಟ್ಟರು.
ಕಲ್ಕತ್ತಾ ಉಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಾಧೀಶರಾದ ಪಿ.ವಿ. ಚಕ್ರಬರ್ತಿಯವರ ಒಂದು ಲೇಖನದ ಪ್ರಕಾರ, "ನಾನು ಪಶ್ಚಿಮ ಬಂಗಾಳದ ರಾಜ್ಯಪಾಲನಾಗಿ 1956ರಲ್ಲಿ ನಿಯುಕ್ತನಾಗಿದ್ದಾಗ ಕ್ಲೆಮೆಂಟ್ ಅಟ್ಲೀಯವರನ್ನು ಬ್ರಿಟಿಷರು ಭಾರತವನ್ನು ಬಿಟ್ಟು ಹೋಗಲು ಪ್ರಮುಖ ಕಾರಣವೇನೆಂದು ಕೇಳಿದಾಗ ದೊರೆತ ಉತ್ತರ: 'ಭಾರತ ಬಿಟ್ಟು ತೊಲಗಿ ಚಳುವಳಿ' ಎಂಬ ಉತ್ತರ ಬಂದಿದ್ದು ಈ ಚಳುವಳಿಯ ಯಶಸ್ಸು ತೋರಿಸುತ್ತದೆ"
ಭಾರತದ ಸ್ವಾತಂತ್ರ್ಯದ ನಿಜವಾದ ಕಾರಣ ಭಾರತೀಯರ ವಿರೋಧವೇ ಅಥವಾ ಸೈನಿಕರ ಬಂಡಾಯವೇ ಎಂಬುದು ವಿವಾದಾತ್ಮಕವಾಗಿದ್ದರೂ ನಿಸ್ಸಂಶಯವಾಗಿ ಹೇಳಬಹುದಾದ ಸಂಗತಿಯೆಂದರೆ ಲಕ್ಷಾಂತರ ಜನರು ಪ್ರೇರಿತರಾಗಿ ಸ್ವಾತಂತ್ರಕ್ಕಾಗಿ ಹೋರಾಡಿದರೆಂಬುದು. ಬ್ರಿಟಿಷರ ಪ್ರತಿಯೊಂದು ನಡೆಯೂ ಇದನ್ನು ಮತ್ತಷ್ಟು ಪ್ರೇರೇಪಿಸಿತು. ಸುಭಾಷ್ ಚಂದ್ರ ಬೋಸ್ ರ ಭಾರತೀಯ ರಾಷ್ಟ್ರೀಯ ಸೇನೆ ಮತ್ತು ಮುಂಬಯಿ ದಂಗೆ ಬ್ರಿಟಿಷ್ ಆಡಳಿತದ ಬುಡವನ್ನು ಅಲುಗಾಡಿಸಿದವು. 1946ರ ವೇಳೆಗೆ ಎಲ್ಲ ಬಂಧಿತ ರಾಜಕೀಯ ಅಪರಾಧಿಗಳನ್ನು ಬಿಡುಗಡೆ ಮಾಡಲಾಯಿತು. ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಬಿಟ್ಟಕೊಡುವ ಬಗ್ಗೆ ಸಾರ್ವಜನಿಕವಾಗಿ ಮಾತುಕತೆಗಳು ನಡೆದವು. 1947 ರ ಆಗಸ್ಟ್ 15 ರಂದು ಭಾರತವನ್ನು ಸ್ವತಂತ್ರ ದೇಶವೆಂದು ಘೋಷಿಸಲಾಯಿತು.
ಒಂದು ಹೊಸ ಯುವ ಪೀಳಿಗೆಯು ಗಾಂಧೀಜಿಯವರ ಕರೆಗೆ ಓಗೊಟ್ಟಿತ್ತು. ಈ ಚಳುವಳಿಯಲ್ಲಿ ಹೋರಾಡಿದ ಭಾರತೀಯರು ಸ್ವತಂತ್ರ ಭಾರತದ ಪ್ರಥಮ ಪೀಳಿಗೆಯವರಾಗಿ ವಸಾಹತುಶಾಹಿ ಕಾಲದ ನಂತರ ಪ್ರಪಂಚದ ಅತಿ ಗಟ್ಟಿಯಾದ ಪ್ರಜಾಪ್ರಭುತ್ವವನ್ನು ಸ್ಥಾಪಿಸಿದರು. ಇದನ್ನು ಮಾನವಕುಲದ ದೂರದರ್ಶಿತ್ವದ ಮಹತ್ತರ ಉದಾಹರಣೆಯೆಂದು ಹೇಳಬಹುದು.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529.
No comments:
Post a Comment