ಆಗಸ್ಟ್ ಮಾಸದ ನೆನಪುಗಳು...
ಭಾಗ _7
ಮದನ ಮೋಹನ ಮಾಳವೀಯ
ಸ್ವಾತಂತ್ರ್ಯ ಹೋರಾಟಗಾರ, ಶಿಕ್ಷಣತಜ್ಞ, ಬಹುಮುಖ ವ್ಯಕ್ತಿತ್ವದ ಪ್ರತಿಭೆ , ಸ್ವಾತಂತ್ರ್ಯ ಹೋರಾಟದ ವೇಳೆ ಸೌಮ್ಯವಾದಿಗಳು ಮತ್ತು ತೀವ್ರವಾದಿಗಳ ನಡುವಿನ ಸೇತುವೆಯಂತೆ ಕಾರ್ಯನಿರ್ವಹಿಸಿದವರು,ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸ್ಥಾಪಿಸಿದವರೇ ಮದನ ಮೋಹನ ಮಾಳವೀಯ.
ಮಾಳವೀಯರು 1861 ನೇ ಡಿಸೆಂಬರ್ 25 ಅಲಹಾಬಾದ್ ನಲ್ಲಿ 'ಶ್ರೀ ಗೌಡ್ ಬ್ರಾಹ್ಮಣ ಕುಟುಂಬ'ದಲ್ಲಿ ಜನಿಸಿದರು. ಅವರ ತಂದೆ 'ಪಂಡಿತ್ ಬ್ರಿಜ್ ನಾಥ್', ಮತ್ತು ತಾಯಿ 'ಮೂನಾ ದೇವಿ'. ಮೂಲತಃ ಅವರು ಮಧ್ಯಪ್ರದೇಶದ 'ಮಾಲ್ವಾ'ದವರು. ಅವರ ಪೂರ್ವಜರು ಸಂಸ್ಕೃತ ಪಾಂಡಿತ್ಯದಲ್ಲಿ ಹೆಸರುವಾಸಿಯಾಗಿದ್ದರು.
ಮಾಳವೀಯ ರವರು ಸಾಂಪ್ರದಾಯಿಕವಾಗಿ ಎರಡು ಸಂಸ್ಕೃತ ಪಾಠಶಾಲೆಯಲ್ಲಿ ವ್ಯಾಸಂಗ ಮಾಡಿದರು. ನಂತರ ಒಂದು ಇಂಗ್ಲೀಷ್ ಶಾಲೆಯಲ್ಲಿ ಶಿಕ್ಷಣ ಮುಂದುವರಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು 'ಹರದೇವ ಧರ್ಮ ಜ್ಞಾನೋಪದೇಶ ಪಾಠಶಾಲೆ'ಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದರು. ನಂತರ 'ವಿದ್ಯಾವರ್ಧಿನಿ ಸಭಾ ಶಾಲೆ'ಯಲ್ಲಿ ಓದು ಮುಂದುವರೆಸಿದರು. ಅನಂತರ ಅಲಹಾಬಾದ್ ಜಿಲ್ಲಾ ಶಾಲೆಗೆ ಸೇರಿದರು. ಅಲ್ಲಿದ್ದಾಗ ಮಕರಂದ್ ಕಾವ್ಯನಾಮದ ಅಡಿಯಲ್ಲಿ ಕವನಗಳನ್ನು ಬರೆಯಲು ಪ್ರಾರಂಭಿಸಿದರು.
ಅವು ನಂತರದಲ್ಲಿ ಪತ್ರಿಕೆಗಳಲ್ಲಿ ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡವು. ಅಲಹಾಬಾದ್ ವಿಶ್ವವಿದ್ಯಾಲಯದ 'ಮುಯಿರ್ ಸೆಂಟ್ರಲ್ ಕಾಲೇಜ್'ನಲ್ಲಿ 1879 ರಲ್ಲಿ ಮೆಟ್ರಿಕ್ಯುಲೇಶನ್ ಮುಗಿಸಿದರು. ಆಗ 'ಹ್ಯಾರಿಸನ್ ಕಾಲೇಜ್`ನ ಪ್ರಾಂಶುಪಾಲರು ಅವರ ಕುಟುಂಬದ ಆರ್ಥಿಕ ಕಷ್ಟಗಳನ್ನು ಎದುರಿಸುತ್ತಿರುವುದನ್ನು ನೋಡಿ, ಮಾಳವೀಯರಿಗೆ ಒಂದು 'ಮಾಸಿಕ ವಿದ್ಯಾರ್ಥಿವೇತನ' ಒದಗಿಸಿದರು. ತಮ್ಮ 'ಬಿಎ ಪದವಿ'ಯನ್ನು ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಪೂರ್ಣಗೊಳಿಸಿದರು. ಅವರಿಗೆ ಸಂಸ್ಕೃತ ಎಂ.ಎ. ಮಾಡುವ ಆಸೆ ಇತ್ತು. ಆದಾಗ್ಯೂ ತನ್ನ ಕುಟುಂಬ ಪರಿಸ್ಥಿತಿಗಳು ಮತ್ತು ತನ್ನ ತಂದೆ ಅವರ ಕುಟುಂಬ ನಿರ್ವಹಣೆಗೆ ಭಾಗವತ ಕಥಾ ನಿರೂಪಣೆಯ ವೃತ್ತಿ ಪಡೆಯಲು ಬಯಸಿದರು. 1884 ರಲ್ಲಿ ಅಲಹಾಬಾದ್ನಲ್ಲಿ ಸರ್ಕಾರದ ಪ್ರೌಢಶಾಲೆಯಲ್ಲಿ ಶಿಕ್ಷಕನಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು.ಆದರೆ ವಿದ್ಯಾಭ್ಯಾಸ ಮುಂದುವರಿಸುವ ದೃಷ್ಟಿಯಿಂದಾಗಿ ಅವರು ವೃತ್ತಿ ಯನ್ನು ತೊರೆದರು. ಬಳಿಕ ಕಾನೂನು ಕಲಿತ ಮಾಳವೀಯರು ಜಿಲ್ಲಾ ನ್ಯಾಯಾಲಯದಲ್ಲಿ ವಕೀಲಿ ವೃತ್ತಿಯನ್ನೂ ನಡೆಸಿದರು.
ಸ್ವಾತಂತ್ರ್ಯ ಹೋರಾಟಕ್ಕೆ ದುಮುಕಿದ ಮಾಳವೀಯ ರವರು 50 ವರ್ಷಗಳ ಕಾಲ ಭಾರತೀಯ ಕಾಂಗ್ರೆಸ್ಸಿನ ಸದಸ್ಯರಾಗಿ ಸ್ವಾತಂತ್ರ್ಯ ಹೋರಾಟಕ್ಕೆ ದಿಗ್ದರ್ಶಕರಾಗಿದ್ದವರು. ಸ್ವಾತಂತ್ರ್ಯ ಹೋರಾಟಗಾರರಾದ ಗೋಪಾಲ ಕೃಷ್ಣ ಗೋಖಲೆ, ಮತ್ತು ಸಮಾಜ ಸುಧಾರಕರೂ ಆದ 'ಬಾಲಗಂಗಾಧರ ತಿಲಕ'ರ ಅನುಯಾಯಿಯಾಗಿದ್ದರು.
1930 ರಲ್ಲಿ ಮಹಾತ್ಮಾ ಗಾಂಧಿಯವರು ಕರೆ ನೀಡಿದ್ದ ಉಪ್ಪಿನ ಸತ್ಯಾಗ್ರಹ ಮತ್ತು ಕಾನೂನು ಭಂಗ ಚಳವಳಿಯಲ್ಲಿ ಮಾಳವೀಯರು ಸಕ್ರಿಯವಾಗಿ ಭಾಗಿಯಾಗಿದ್ದರು. ಪರಿಣಾಮ ಅವರನ್ನು ಬ್ರಿಟಿಷರು ಬಂಧಿಸಿ ಜೈಲಿಗಟ್ಟಿದರು. ಸ್ವಾತಂತ್ರ್ಯ ಹೋರಾಟಕ್ಕೆ ಮಾಳವೀಯರ ಕೊಡುಗೆಯನ್ನು ಗೋಖಲೆಯವರು ಒಂದೆಡೆ ಹೀಗೆ ನೆನೆಯುತ್ತಾರೆ-'ಮಾಳವೀಯರು ನಿಜವಾದ ತ್ಯಾಗ ಜೀವಿ. ಕೈತುಂಬ ಸಂಬಳ, ಐಷಾರಾಮದ ಜೀವನ ನಡೆಸಬಹುದಾಗಿದ್ದ ಅವರು ದೇಶದ ಕಷ್ಟನಿವಾರಣೆಗೆ ಜೀವನ ಮುಡುಪಿಟ್ಟವರು. ಆದರೆ ಹೋರಾಟದ ಜೀವನ ಅವರನ್ನು ಬಡತನಕ್ಕೆ ನೂಕಿತು."
ಮಾಳವೀಯರು ಪತ್ರಕರ್ತರೂ ಆಗಿದ್ದರು. 1909 ರಲ್ಲಿ ಅಲಹಾಬಾದ್ನಲ್ಲಿ ಇಂಗ್ಲಿಷ್ ಪತ್ರಿಕೆ 'ದಿ ಲೀಡರ್' ಆರಂಭಿಸಿದರು. ಸಮಾಜಪರ, ಸ್ವಾತಂತ್ರ್ಯ ಹೋರಾಟಕ್ಕೆ ಪ್ರೋತ್ಸಾಹಕರವಾದ ವಿಚಾರಗಳನ್ನು ಈ ಪತ್ರಿಕೆಯಲ್ಲಿ ಬರೆಯುತ್ತಿದ್ದರು. 1903 ರಿಂದ 1918 ರವರೆಗೆ ಅಲಹಾಬಾದ್ ನಗರ ಪಾಲಿಕೆಯ ಸದಸ್ಯರಾಗಿ, ಪ್ರಾದೇಶಿಕ ಶಾಸಕಾಂಗ ಸಮಿತಿಯ ಸದಸ್ಯರಾಗಿ ಮಾಳವೀಯರು ಸೇವೆ ಸಲ್ಲಿಸಿದ್ದರು.
1937 ರಲ್ಲಿ ಸಕ್ರಿಯ ರಾಜಕೀಯವರನ್ನು ತೊರೆದ ಅವರು ಬಳಿಕ ಸಮಾಜ ಸುಧಾರಣೆಯತ್ತ ಗಮನ ಕೇಂದ್ರೀಕರಿಸಿದರು. ಮಹಿಳೆಯರ ಶಿಕ್ಷಣ, ವಿಧವಾ ವಿವಾಹ, ಬಾಲ್ಯವಿವಾಹ, ಡಾಂಭಿಕ ಆಚರಣೆಗಳ ವಿರುದ್ಧ ದನಿ ಎತ್ತಿದರು.
ಮಹಾತ್ಮ ಗಾಂಧಿಯವರು ಅತಿ ಹೆಚ್ಚು ಗೌರವ ಹೊಂದಿದ್ದ ಮೂವರಲ್ಲಿ ಮಾಳವೀಯ ಒಬ್ಬರು. ತಿಲಕ್ ಮತ್ತು ಗೋಖಲೆ ಇತರ ಇಬ್ಬರು. ಲಂಡನ್ನಲ್ಲಿ ನಡೆದ ಎರಡನೇ ದುಂಡು ಮೇಜಿನ ಪರಿಷತ್ತಿನಲ್ಲಿ ಗಾಂಧೀಜಿ ಅವರೊಂದಿಗೆ ಭಾಗವಹಿಸಿದ್ದರು. ಖುದ್ದು ಸಂಸ್ಕೃತ ವಿದ್ವಾಂಸರು, ಆದರೆ, ಇಂಗ್ಲಿಷ್ ಮೇಲೆ ಅಷ್ಟೇ ಪ್ರಭುತ್ವ ಹೊಂದಿದವರು. ಅಲ್ಲಿ ನೀಡಿದ ಭಾಷಣದೊಂದಿಗೆ ಬ್ರಿಟಿಷರನ್ನು ಅಚ್ಚರಿಗೊಳಿಸಿದರು. ಆಕ್ಸ್ಫರ್ಡ್, ಕೇಂಬ್ರಿಜ್ನಲ್ಲಿ ಓದದಿದ್ದರೂ ಇಂಗ್ಲಿಷ್ ಮೇಲೆ ಹೊಂದಿರುವ ಹಿಡಿತದ ಬಗ್ಗೆ ಬಹಿರಂಗವಾಗಿ ಪ್ರಶಂಸೆ ವ್ಯಕ್ತಪಡಿಸಿದರಂತೆ ಬ್ರಿಟನ್ನ ರಾಜಕಾರಣಿ ಗಳು. ಭಾರತೀಯ ಶಾಸನಸಭೆಯ ಸದಸ್ಯರಾಗಿದ್ದ ಮಾಳವೀಯ ಅವರು ಜಲಿಯನ್ವಾಲಾಭಾಗ್ ಹತ್ಯಾಕಾಂಡವನ್ನು ಅತ್ಯುಗ್ರವಾಗಿ ಖಂಡಿಸಿದರು. ಸಂಪ್ರದಾಯಸ್ಥ ಎನಿಸಿಕೊಂಡರೂ ಬದಲಾವಣೆಗೆ ಸದಾ ತೆರೆದು ಕೊಂಡಿದ್ದರು. ಇದರಿಂದಾಗಿಯೇ ಮಹಾಮನ ಎಂದು ಕರೆಸಿಕೊಂಡಿದ್ದರು.
ಭಾರತ ಸ್ವಾತಂತ್ರ್ಯ ಪಡೆಯುವ ಮುನ್ನವೇ ಅಂದರೆ 1946 ರ ನವೆಂಬರ್ 12 ಮಾನವೀಯ ರವರು ಇಹಲೊಕ ತ್ಯಜಿಸಿದರು. ಮರಣೋತ್ತರವಾಗಿ ಶ್ರೀಯುತರಿಗೆ 2014 ರಲ್ಲಿ ಭಾರತ ರತ್ನ ಪ್ರಶಸ್ತಿ ನೀಡಲಾಗಿದೆ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529.
No comments:
Post a Comment