ಆಗಸ್ಟ್ ಮಾಸದ ನೆನಪುಗಳು...
ಭಾಗ _6
ನೇತಾಜಿ ಸುಭಾಷ್ ಚಂದ್ರ ಬೋಸ್.
ಮಹಾತ್ಮಾ ಗಾಂಧೀಜಿಯವರ ಬಗ್ಗೆ ಅಪಾರವಾದ ಗೌರವವಿಟ್ಟುಕೊಂಡು ಅವರ ಅಹಿಂಸೆ, ಸತ್ಯಾಗ್ರಹ ಮುಂತಾದ ಅಸ್ತ್ರಗಳು ನಮ್ಮ ಸ್ವಾತಂತ್ರ್ಯ ಹೋರಾಟಕ್ಕೆ ಮಹತ್ವದ ತಿರುವು ನೀಡಿವೆ ಎಂಬುದನ್ನು ಅಲ್ಲಗಳೆಯಲಾಗದು. ಅದೇ ರೀತಿಯಲ್ಲಿ ನೇತಾಜಿಯವರು ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎಂಬುದು ಅಷ್ಟೇ ಸತ್ಯ.
ಸುಭಾಷ್ ಚಂದ್ರ ಬೋಸ್ ಜನಿಸಿದ್ದು 1897ರ ಜನವರಿ 23ರಂದು, ಒಡಿಶಾದ ಕಟಕ್ನಲ್ಲಿ. ತಂದೆ ಜಾನಕೀನಾಥ ಬೋಸ್, ತಾಯಿ ಪ್ರಭಾವತಿ. ಆ ದಂಪತಿಗಳ 14 ಜನ ಮಕ್ಕಳಲ್ಲಿ ಸುಭಾಷ್ 9 ನೇಯವರು.ಕಟಕ್ ನಲ್ಲಿ ರಯಾವೆನ್ಶಾ ಕೊಲಿಜಿಯೇಟ್ ಶಾಲೆಯಲ್ಲಿ ಪ್ರಾಥಮಿಕ ವ್ಯಾಸಂಗ ಮಾಡಿ ಅಲ್ಲಿ ಮುಖ್ಯೋಪಾಧ್ಯಾಯ ಬೇಣಿಮಾಧವದಾಸ್ ರಿಂದ ಪ್ರೇರಣೆ ಪಡೆದು ಮುಂದೆ ವಿವೇಕಾನಂದರ ಸಾಹಿತ್ಯಗಳು, ಪತ್ರಗಳು ಮತ್ತು ’ಕೊಲೊಂಬೋದಿಂದ ಆಲ್ಮೋರಾಕ್ಕೆ’ ಉಪನ್ಯಾಸಗಳಿಂದ ಪ್ರಭಾವಿತರಾದ ಬೋಸರು ಅರವಿಂದರ ’ಆರ್ಯ’ ಮಾಸಪತ್ರಿಕೆಯ ತಪ್ಪದ ಓದುಗರಾಗಿದ್ದರು.
1919ರಲ್ಲಿ ತತ್ವಶಾಸ್ತ್ರ ವಿಭಾಗದಲ್ಲಿ ಬಿ.ಎ. ಪದವಿ ಪಡೆದ ನಂತರ ಐ.ಸಿ.ಎಸ್ ಪರೀಕ್ಷೆಗಾಗಿ ಇಂಗ್ಲೆಂಡಿಗೆ ಪಯಣ ಬೆಳೆಸಿದರು. ನಾಲ್ಕನೇ ಸ್ಥಾನಿಗರಾಗಿ ಐ.ಸಿ.ಎಸ್ ಪಾಸು ಮಾಡಿದರು. ಆದರೆ ಬ್ರಿಟಿಷರ ನೀತಿಗಳ ವಿರುದ್ಧ ಸೆಟೆದು ನಿಂತು
ಬ್ರಿಟಿಷ್ ಸರ್ಕಾರದ ಭಾರತ ವ್ಯವಹಾರ ಸಚಿವ ಎಡ್ವಿನ್ ಮಾಂಟೆಗುಗೆ ಪತ್ರವೊಂದನ್ನು ಬರೆದು ಐ ಸಿ ಎಸ್ ಗೆ ಗುಡ್ ಬೈ ಹೇಳಿದರು.
20 ತಿಂಗಳ ಇಂಗ್ಲೆಂಡ್ ವಾಸದ ನಂತರ 1921 ರ ಜುಲೈ 16ರಂದು ಮುಂಬಯಿಗೆ ಮರಳಿದರು. ಅಂದೇ ಗಾಂಧೀಜಿ ಜತೆ ಮೊದಲ ಭೇಟಿ ಮಾಡಿದರು. ಚಿತ್ತರಂಜನ್ ದಾಸ್ ರವರ ಮಾರ್ಗದರ್ಶನದಲ್ಲಿ ಯುವಕರ ಸಂಘಟನೆಗೆ ಆದ್ಯತೆ ನೀಡಿದರು. ಚಳುವಳಿಯ ಸಂದರ್ಭವೊಂದರಲ್ಲಿ ಮ್ಯಾಜಿಸ್ಟ್ರೇಟರು 6 ತಿಂಗಳ ಸಜೆ ಘೋಷಿಸಿದಾಗ ’ಬರಿಯ 6 ತಿಂಗಳೇ? ನನ್ನದೇನು ಕೋಳಿಕದ್ದ ಅಪರಾಧವೇ?’ ಎಂದಿದ್ದರು ಬೋಸ್!
ರಾಷ್ಟ್ರ ನಿರ್ಮಾಣದ ಜವಾಬ್ದಾರಿಯುತ ಸ್ಥಾನದಲ್ಲಿದ್ದು ರಾಷ್ಟ್ರಹಿತಕ್ಕೆ ಧಕ್ಕೆಯಾಗುವ ಯಾವುದೇ ವಿಷಯಗಳಲ್ಲಿ ದುರ್ಬಲನೀತಿ ಹೊಂದಿರಬಾರದೆಂಬ ಸುಭಾಷ್‌ರ ದಿಟ್ಟನಿಲುವಿನ ಪ್ರತಿಧ್ವನಿಯಾಗಿತ್ತು ಆ ಮಾತು. ಕಾಂಗ್ರೆಸ್‌ನ ಬಲಹೀನ ನಾಯಕತ್ವ, ದುರ್ಬಲ ಒಪ್ಪಂದಗಳು, ಸ್ವಾಭಿಮಾನ ಶೂನ್ಯ ವರ್ತನೆಗೆ ಪ್ರತಿಯಾಗಿ ಆತ್ಮಾಭಿಮಾನದ ಸ್ವರಾಜ್ಯಹೋರಾಟಕ್ಕೆ ಬಲತುಂಬಿದವರು ಸುಭಾಷರು.
ಬೋಸ್‌ರಿಗಿದ್ದ ರಾಜಕೀಯ ಚಿಂತನೆಯ ವೈಶಾಲ್ಯತೆ ಆ ಕಾಲಮಾನದ ಯಾರೊಬ್ಬರಲ್ಲೂ ಇರಲಿಲ್ಲ. ಎಂಬುದು ಬಲ್ಲವರ ಮಾತಾಗಿತ್ತು. ಆಸ್ಟ್ರಿಯಾ, ಇಂಗ್ಲೆಂಡ್, ಜರ್ಮನಿ, ಜಪಾನ್ ಸೇರಿದಂತೆ ಹತ್ತಾರು ರಾಷ್ಟ್ರಗಳಲ್ಲಿ ಮಿಂಚಿನ ಓಡಾಟ ನಡೆಸಿ ಭಾರತೀಯ ಸ್ವರಾಜ್ಯ ಹೋರಾಟದ ದನಿಗೆ ತೀವ್ರತೆ ತಂದಿದ್ದ ಬೋಸರು, ತಾನು ನಂಬಿದ್ದ ಕ್ರಾಂತಿಪಥದಲ್ಲಿ ಎಂದೂ ರಾಜಿಮಾಡಿದವರಲ್ಲ.
1927 ರ ನವೆಂಬರ್‌ನಲ್ಲಿ ಬಂಗಾಳಪ್ರದೇಶ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಯ್ಕೆಯಾದರು. ಆದರೆ ಗಾಂಧೀಜಿಯವರ ಮಂದ ಮಾರ್ಗಕ್ಕಿಂತ ಸುಭಾಷ್‌ರದು ತೀರಾ ಭಿನ್ನ ಎಂಬುದು ಕ್ರಮೇಣ ಗೊತ್ತಾಯಿತು. ಹತ್ತಾರು ಚಳುವಳಿಗೆ ನೇತೃತ್ವ, ಅಖಿಲಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಯ್ಕೆಯಾದರು.
ಯೂರೋಪಿನಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಪರ ಅಭಿಯಾನ ಕೈಗೊಂಡರು. ಇಂಗ್ಲೆಂಡ್, ಆಸ್ಟ್ರಿಯಾ, ಇಟೆಲಿ ವಿಯೆನ್ನಾಗಳ ತ್ವರಿತಗತಿಯ ಪ್ರವಾಸ, ಮಿಂಚಿನ ಓಡಾಟ. ಸ್ವಿಟ್ಜರ್ಲೆಂಡ್, ಚೆಕೋಸ್ಲೋವಾಕಿಯಾ, ಪೋಲೆಂಡ್, ಜರ್ಮನಿಗಳಲ್ಲಿ ಭಾರತದ ಪರ ಪ್ರಚಾರ ಮಾಡಿದರು. ಇಟೆಲಿ ಪ್ರಧಾನಿ ಬೆನಿಟೊ ಮುಸ್ಸೋಲಿನಿ ಜತೆ ಚರ್ಚಿಸಿದರು.
ಕಾಬೂಲ್ ಮೂಲಕ ಬರ್ಲಿನ್ ಸೇರಿದ ಬೋಸ್‌ರಿಂದ ಸೈನಿಕ ಕಾರ‍್ಯಾಚರಣೆ ಮಾಡಲು ’ಫ್ರೀ ಇಂಡಿಯಾ ಸೆಂಟರ್’ ಸ್ಥಾಪಿಸಿದರು. ’ಆಜಾದ್ ಹಿಂದ್’ ಲಾಂಛನ, ’ಜೈಹಿಂದ್’ ಘೋಷಣೆ, ನೀಡಿದ ಬೋಸರಿಗೆ ಜನರು ಅಭಿಮಾನಿಗಳು ’ನೇತಾಜಿ’ ಬಿರುದು ನೀಡಿದರು. ಜರ್ಮನ್ ಸೇನಾಕೇಂದ್ರಗಳಿಗೆ ಸೈನಿಕ ತರಬೇತಿ ನೀಡುತ್ತಾ, ಬರ್ಲಿನ್ ರೇಡಿಯೋದಲ್ಲಿ ಆಗಾಗ ಭಾಷಣ ಮಾಡುತ್ತಾ ಹಿಟ್ಲರ್ ಜತೆ ಭೇಟಿ ಮಾಡಿದರು. ಜಪಾನ್‌ಗೆ ತೆರಳಿ ಅಲ್ಲಿಂದ ಪೂರ್ವಾಂಚಲ ಭಾರತದ ಗಡಿಗಳಲ್ಲಿ ಸೈನ್ಯ ಸಜ್ಜು ಮಾಡಲು ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ಮೂಲಕ ಅವಿರತ ಚಟುವಟಿಕೆ ಹಮ್ಮಿಕೊಂಡು ಅಂಡಮಾನ್ ನಿಕೋಬಾರ್ ನಾಗಾ ಲ್ಯಾಂಡ್ ಗಳಲ್ಲಿ ಸ್ವಾತಂತ್ರ್ಯ ಧ್ವಜಾರೋಹಣ ಮಾಡಿ ಮುನ್ನುಗ್ಗುವಾಗ ಭಾರತೀಯರಿಗೆ ಸುದ್ದಿಯೊಂದು ಬರಸಿಡಿಲಿನಂತೆ ಎರಗಿತು.ನೇತಾಜಿಯವರು ವಿಮಾನ ಅಪಘಾತದಲ್ಲಿ ಮರಣ ಹೊಂದಿದರೆಂಬ ಸುದ್ದಿ ಇಂದಿಗೂ ವಿವಾದಾತ್ಮಕವಾಗಿರುವುದು ದುರದೃಷ್ಟಕರ.
ನರಿ ಬುದ್ದಿಯ ಕೆಂಪು ಮೂತಿಯವರ ಕುತಂತ್ರಗಳು , ಕೆಟ್ಟ ನಡೆಗಳು, ಗೋಮುಖ ವ್ಯಾಘ್ರ ಗುಣಗಳು, ಒಡೆದು ಆಳುವ ನಿಸ್ಸೀಮರಿಗೆ ಶಾಂತಿ ಅಹಿಂಸೆಯ ನಡೆಗಳು ನಾಟಲೇ ಇಲ್ಲ ಎಂಬುದನ್ನು ನಮ್ಮ ದೇಶದ ಇತಿಹಾಸ ಓದಿದ ಯಾರಾದರೂ ಒಪ್ಪಿಕೊಳ್ಳಲೇ ಬೇಕು . ಪರಂಗಿಗಳಿಗೆ ದಂಡಂ ದಶಗುಣಂ ನೀತಿಯೇ ಸರಿಯಾಗಿತ್ತು.ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡಿಸಿವೆ ಎಂದು ಗುಡುಗಿದ ನೇತಾಜಿವರ ಘರ್ಜನೆಗೆ ಬ್ರಿಟಿಷರು ಅಕ್ಷರಶಃ ಕಂಗಾಲಾಗಿ ಹೋದರು.ಅವರ ಆಕ್ರಮಣಕಾರಿ ನೀತಿಗೆ ಆಗಿನ ಯುವಜನ ಮಾರುಹೋಗಿ ಭಾರತೀಯ ರಾಷ್ಟ್ರೀಯ ಸೇನೆ ಸೇರಿ ಸ್ವಾತಂತ್ರ್ಯ ಹೋರಾಟಕ್ಕೆ ದುಮುಕಿದರು.ಇದರಲ್ಲಿ ಮಹಿಳೆಯರು ಸಹ ಪಾಲ್ಗೊಂಡರು ಎಂಬುದನ್ನು ಕ್ಯಾಪ್ಟನ್ ಲಕ್ಷ್ಮೀ ಸೆಹಗಲ್ ರಂತವರನ್ನು ಉದಾಹರಣೆ ನೀಡಬಹುದು.
ಹಿಂಸೆಯನ್ನು ಯಾರೂ ಪ್ರಚೋದಿಸಬಾರದು ಎಂಬುದನ್ನು ನಾನೂ ಒಪ್ಪುವೆ ಆದರೆ ದುಷ್ಟ ಸಂಹಾರ ಕ್ಕೆ ಕೊನೆಯ ಅಸ್ತ್ರವಾಗಿ ಹಿಂಸೆ ತಪ್ಪಲ್ಲ ಎಂಬ ನಮ್ಮ ಶಾಸ್ತ್ರ ಪುರಾಣಗಳಲ್ಲಿಯೂ ಉಲ್ಲೇಖವಿರುವುದನ್ನು ಗಮನಿಸಲೇಬೇಕು. ಮಹಿಷ ,ರಕ್ತಬೀಜರಂತಹ ರಕ್ಕಸರ ಸಂಹಾರ ಮಾಡದೇ ಶಾಂತಿ ಮಂತ್ರ ಪಠಿಸುತ್ತಾ ದೇವಿ ಕುಳಿತಿದ್ದರೆ ಜನರ ಪಾಡೇನಾಗುತ್ತಿತ್ತು? ಇನ್ನೂ ಕೃಷ್ಣಾವತಾರಗಳಲ್ಲಿಯೂ ಅಸುರಿ ಶಕ್ತಿಗಳ ಸಂಹಾರಕ್ಕೆ ಹಿಂಸೆ ತಪ್ಪಲ್ಲ ಎಂಬುದು ಸಾಬೀತಾಗಿದೆ.ಆದ್ದರಿಂದ ನೇತಾಜಿಯವರ ಮಾರ್ಗವೇ ಸರಿ ಎಂಬುದನ್ನು ಕೊನೆಗೆ ಮಹಾತ್ಮ ಗಾಂಧೀಜಿಯವರೇ ರೋಸಿ 1942 ರಲ್ಲಿ "ಬ್ರಿಟೀಷರೇ ಭಾರತ ಬಿಟ್ಟು ತೊಲಗಿ " ಎಂದು ಗುಡುಗಿ ಡೂ ಆರ್ ಡೈ ಎಂದು ಪರೋಕ್ಷವಾಗಿ ಪ್ರಭಲವಾದ ಹೋರಾಟಕ್ಕೆ ಕರೆ ನೀಡಿದ್ದು ನೇತಾಜಿವರ ಮಾರ್ಗವೇ ಸರಿ ಎಂಬುದನ್ನು ಒಪ್ಪಿದಂತೆ ಎಂದು ಕೆಲವರು ಹೇಳುವುದು ತಪ್ಪಲ್ಲ ಎನಿಸುತ್ತದೆ.
ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂಬ ಮಾತು ಎಂದಿಗೂ ಪ್ರಸ್ತುತ. ದುಷ್ಟ ಬುದ್ದಿಯ ಆಂಗ್ಲರ ಮಣಿಸಲು ಅಹಿಂಸೆಯ ಮಾರ್ಗ ಹಿಡಿಯದೇ ಬೇರೆ ದಾರಿಯಿರಲಿಲ್ಲ ಯುದ್ದ ಮತ್ತು ಪ್ರೀತಿಯಲ್ಲಿ ಎಲ್ಲವೂ ಸರಿ ಎಂಬಂತೆ ನಮ್ಮ ನೇತಾಜಿವರು ನಮ್ಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಿಂಸೆಯ ಮಾರ್ಗ ಅನುಸರಿಸಿದ್ದು ತಪ್ಪಲ್ಲ ಅಂದು ಅದು ಅನಿವಾರ್ಯವಾಗಿತ್ತು. ನೇತಾಜಿವರ ಮುಂದಾಲೋಚನೆ, ಅವರ ಚಿಂತನೆ ಎಂದಿಗೂ ಅನುಕರಣೀಯ ಅದಕ್ಕೆ ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಈಗಲೂ ಭಾರತೀಯರಿಗೆಲ್ಲ ಒಬ್ಬರೇ ನೇತಾಜಿ.
ಅವರ ಅಭಿಮಾನದಿಂದ ಮನದಾಳದಲ್ಲಿ ಮೂಡಿದ್ದು ಈ ಕವಿತೆ
*ಭಾಗ್ಯವಿಧಾತ*
ವಂದಿಪೆನು ನೇತಾಜಿಗೆ
ನಮಿಪೆನು ವೀರಸಿಂಹನಿಗೆ
ಭಾರತ ರಾಷ್ಟ್ರೀಯ ಸೇನೆ ಕಟ್ಟಿದೆ
ಬ್ರಿಟಿಷರ ಧಿಮಾಕಿಗೆ ಕುಟ್ಟಿದೆ|೧|
ಜೈ ಹಿಂದ್ ಘೋಷ ಮೊಳಗಿಸಿದೆ
ದೇಶ ಭಕ್ತಿಯ ಕಿಚ್ಚು ಹತ್ತಿಸಿದೆ
ಫಾರ್ವರ್ಡ್ ಬ್ಲಾಕ್ ಹರಿಕಾರ
ಪರಂಗಿಯರ ಎದುರಿಸಿದ ಎದೆಗಾರ|೨|
ಭಾರತ ದೇಶದ ಭಾಗ್ಯವಿಧಾತ
ತಾಯಿಯ ಋಣವ ತೀರಿಸಿದಾತ
ಶಿಸ್ತಿನ ಸಿಪಾಯಿ ನಮಗೆಲ್ಲ
ಸ್ಪೂರ್ತಿಯ ಸೆಲೆಯು ಜಗಕೆಲ್ಲ|೩|
ಹಾತೊರೆಯಲಿಲ್ಲ ನಿಮ್ಮ ಸುಖಕೆ
ಹೋರಾಡಿದಿರಿ ನೀವು ಸ್ವಾತಂತ್ರಕೆ
ಉಳಿದಿದೆ ನಿಮ್ಮೆಸರು ಧರೆಯಲೆಲ್ಲ
ನಾವೆಂದಿಗೂ ನಿಮ್ಮನು ಮರೆಯಲ್ಲ|೩|
ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529
No comments:
Post a Comment