03 August 2023

ಆಗಸ್ಟ್ ಮಾಸದ ನೆನಪುಗಳು...* ಭಾಗ _3 *ಲೋಕಮಾನ್ಯ ಬಾಲ ಗಂಗಾಧರ ತಿಲಕ್

 

*ಆಗಸ್ಟ್ ಮಾಸದ ನೆನಪುಗಳು...*

ಭಾಗ _3

*ಲೋಕಮಾನ್ಯ  ಬಾಲ ಗಂಗಾಧರ ತಿಲಕ್*

ಭಾರತದ ಚಳುವಳಿಯ ಜನಕ ಎಂಬ ಬಿರುದು ಪಡೆದ ನಾಯಕ, ಗಣೇಶ ಚತುರ್ಥಿ ಮತ್ತು ಶಿವಾಜಿ ಜಯಂತಿಗಳನ್ನು ರಾಷ್ಟ್ರೀಯತೆ ಬಿತ್ತುವ ಹಬ್ಬಗಳಾಗಿ ಪರಿವರ್ತಿಸಿದ ಮಹಾನಾಯಕ ,  ಸ್ವರಾಜ್ಯ ನನ್ನ ಜನ್ಮ ಸಿದ್ದ ಹಕ್ಕು ಅದನ್ನು ಪಡೆದೇ ತೀರುವೆ ಎಂದು ಘರ್ಜಿಸಿದ ಹುಲಿ,    ಜನಮಾನಸದಲ್ಲಿ  ಲೋಕಮಾನ್ಯ ಎಂದೇ ನೆಲೆಯೂರಿದ್ದ ಬಾಲ ಗಂಗಾಧರ ತಿಲಕ್ ರವರು ಪ್ರಾತಃ ಸ್ಮರಣೀಯರು. ಆಗಸ್ಟ್ ಮಾಸದ ಈ ಕಾಲದಲ್ಲಿ ತಿಲಕ್ ರವರ ತ್ಯಾಗ ಬಲಿದಾನ ನೆನೆಯುತ್ತಾ ಮಾಸದ ನೆನಪುಗಳ ಮೆಲುಕು ಹಾಕುತ್ತಾ ಮುಂದಿನ ಪೀಳಿಗೆಗೆ ಇಂತಹ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಅರಿವು ಮೂಡಿಸೋಣ.

ಬಾಲ ಗಂಗಾಧರ  ತಿಲಕರು ಹುಟ್ಟಿದ್ದು 1856ರ ಜುಲೈ 23ರಂದು ಮಹಾರಾಷ್ತ್ರದ ರತ್ನಗಿರಿಯ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ ಜನಿಸಿದ ಇವರು  ಚತುರ ವಿದ್ಯಾರ್ಥಿಯಾಗಿದ್ದರು. ಗಣಿತದಲ್ಲಿ ವಿಶೇಷ ಪ್ರತಿಭೆಯಿತ್ತು. ಆಧುನಿಕ, ಕಾಲೇಜು ಶಿಕ್ಷಣ ಪಡೆದುಕೊಂಡ ನವ ಪೀಳಿಗೆಯ ಯುವಕರಲ್ಲಿ ತಿಲಕರೂ ಒಬ್ಬರಾಗಿದ್ದರು. ಪದವಿ ಪಡೆದ ಬಳಿಕ ಪುಣೆಯ ಖಾಸಗೀ ಶಾಲೆಯೊಂದರಲ್ಲಿ ಗಣಿತ ಶಿಕ್ಷಕರಾಗಿ ಸೇರಿದ ತಿಲಕರು ನಂತರ ಅದನ್ನು ಬಿಟ್ಟು ಪತ್ರಕರ್ತರಾದರು. ಪಾಶ್ಚಿಮಾತ್ಯ ಶಿಕ್ಷಣ ಪಧ್ಧತಿಯು ಭಾರತೀಯ ಪರಂಪರೆಯನ್ನು ಅವಹೇಳಿಸುವಂಥಾದ್ದೂ ಹಾಗೂ ಭಾರತದ ವಿದ್ಯಾರ್ಥಿಗಳನ್ನು ಕೀಳುಗಳೆಯುವಂಥಾದ್ದು ಎಂಬ ನಿರ್ಧಾರಕ್ಕೆ ಬಂದ ಅವರು ಈ ಪಧ್ಧತಿಯ ತೀವ್ರ ಟೀಕಾಕಾರರಾದರು. ವಿದ್ಯಾರ್ಥಿಗಳಿಗೆ ಒಳ್ಳೆಯ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಪುಣೆಯಲ್ಲಿ ಡೆಕ್ಕನ್ ಎಜುಕೇಶನ್ ಸೊಸೈಟಿಯನ್ನು ಸ್ಥಾಪಿಸಿದರು.

ತಿಲಕರು ಸ್ಥಾಪಿಸಿದ "ಕೇಸರಿ"  ಮತ್ತು  ಮರಾಠ ಪತ್ರಿಕೆಗಳು ಬಹುಬೇಗ ಜನಸಾಮಾನ್ಯರ ಮನೆಮಾತಾದವು. ಅಭಿಪ್ರಾಯ ಸ್ವಾತಂತ್ರ್ಯವನ್ನು, ಅದರಲ್ಲೂ ಮುಖ್ಯವಾಗಿ, 1905ರ ಬಂಗಾಳದ ವಿಭಜನೆಯ ವಿರೋಧವನ್ನು  ಹತ್ತಿಕ್ಕಿದ ಭಾರತದ ನಾಗರೀಕರನ್ನು  ಸಂಸೃತಿಯನ್ನು, ಪರಂಪರೆಯನ್ನು ಹೀಯಾಳಿಸುವ ಬ್ರಿಟಿಷ್ ಆಡಳಿತದ ವಿರುದ್ಧ ತೀವ್ರ ಟೀಕೆಯನ್ನು ಅವರು ಕೇಸರಿಯಲ್ಲಿ ಮಾಡುತ್ತಿದ್ದರು. ಭಾರತೀಯರಿಗೆ ಸ್ವರಾಜ್ಯದ ಹಕ್ಕನ್ನು ಬಿಟ್ಟುಕೊಡಬೇಕೆಂದು ಅವರು ಪ್ರತಿಪಾದಿಸಿದರು. 1890ರ ದಶಕದಲ್ಲಿ ತಿಲಕರು ಕಾಂಗ್ರೆಸ್ ಸೇರಿದರಾದರೂ  ಬಹುಬೇಗ  ಅದರ ಕೆಲ ನೀತಿಗಳನ್ನು ವಿರೋಧಿಸಿ ಹೊರನಡೆದರು. ಲಾಲ್ ಬಾಲ್ ಪಾಲ್ ಎಂದೇ ಖ್ಯಾತರಾದ
 ಬಿಪಿನ ಚಂದ್ರ ಪಾಲ್ ಹಾಗೂ ಪಂಜಾಬಿನ ಲಾಲಾ ಲಜಪತ ರಾಯ್  ರವರ ಜೊತೆಗೂಡಿ ಸ್ವಾತಂತ್ರ್ಯ ಚಳುವಳಿಯಲ್ಲಿ ತೊಡಗಿಕೊಂಡರು.
1907 ರ ಸೂರತ್ ಅಧಿವೇಶನದಲ್ಲಿ  ಲಾಲ್ ಬಾಲ್ ಪಾಲ್  ನೇತ್ಳತ್ವದಲ್ಲಿ "ಗರಂ ದಳ" ವನ್ನು ಸ್ಥಾಪಿಸಿ ಹೋರಾಟವನ್ನು ಚುರುಕುಗೊಳಿಸಿದರು.
  ವಿವಿಧ ಮೊಕದ್ದಮೆಗಳ ಅಡಿಯಲ್ಲಿ  ಬ್ರಿಟಿಷ್ ನ್ಯಾಯಾಧೀಶರಿಂದ ಅಪರಾಧಿ ಎಂದು ಘೋಷಿಸಲ್ಪಟ್ಟು, 1908 ರಿಂದ 1914 ರವರೆಗೆ ಬರ್ಮಾ ದೇಶದ ಮಂಡಾಲೆಯಲ್ಲಿ ಸೆರೆವಾಸ ಅನುಭವಿಸಿದರು. ಬಿಡುಗಡೆಯಾದ ನಂತರ ತಮ್ಮ ಸಹ- ರಾಷ್ಟ್ರೀಯವಾದಿಗಳನ್ನು ಕೂಡಿಕೊಂಡ ತಿಲಕರು  ಅಖಿಲ ಭಾರತ ಹೋಂ ರೂಲ್ ಲೀಗನ್ನು ಸ್ಥಾಪಿಸುವಲ್ಲಿ ಆನಿ ಬೆಸೆಂಟ್ ಮತ್ತು ಮಹಮದ್ ಆಲಿ ಜಿನ್ನಾರಿಗೆ ಸಹಕಾರ ನೀಡಿದರು. ಅದರ ಮೂಲಕ ಸ್ವಾತಂತ್ರ ಹೋರಾಟವನ್ನು ಮತ್ತೂ ಚುರುಕುಗೊಳಿಸಿದರು.

ತಿಲಕರು ಮೂಲತಃ ಅದ್ವೈತ ವೇದಾಂತದ ಪ್ರತಿಪಾದಕರಾಗಿದ್ದರೂ, ಸಾಂಪ್ರದಾಯಿಕ ಅದ್ವೈತದ "ಜ್ಙಾನವೊಂದರಿಂದಲೇ ಮುಕ್ತಿ" ಎಂಬ ನಂಬುಗೆಯು ಅವರಿಗೆ ಒಪ್ಪಿಗೆಯಿರಲಿಲ್ಲ. ಅದಕ್ಕೆ ಸರಿಸಮನಾಗಿ ಹಾಗೂ ಪೂರಕವಾಗಿ ಅವರು ಕರ್ಮಯೋಗವನ್ನೂ ಸೇರಿಸಿದರು. ವಿವಾಹಕ್ಕೆ ಕನಿಷ್ಠ ವಯೋಮಿತಿಯೇ ಮೊದಲಾಗಿ ತಿಲಕರು ಅನೇಕ ಸಾಮಾಜಿಕ ಸುಧಾರಣೆಗಳನ್ನು  ಮುಂದಿಟ್ಟರು. ಮದ್ಯಪಾನ ನಿಷೇಧದ ಪರವಾಗಿ ಅವರಿಗೆ ಅತ್ಯಂತ ಕಳಕಳಿಯಿತ್ತು. ಶಿಕ್ಷಣ ಹಾಗೂ ರಾಜಕೀಯ ಜೀವನದ ಬಗ್ಗೆ ಅವರ ವಿಚಾರಗಳು ಬಹಳ ಪ್ರಭಾವಶಾಲಿಯಾಗಿದ್ದವು ದೇವನಾಗರಿ ಲಿಪಿಯಲ್ಲಿ ಬರೆಯಲಾಗುವ ಹಿಂದಿ ಭಾಷೆಯು ಭಾರತದ ರಾಷ್ಟ್ರ ಭಾಷೆಯಾಗ  ಬೇಕು ಎಂದು ಮೊದಲು ಸೂಚಿಸಿದವರು ತಿಲಕರು. ಗಾಂಧೀಜಿ ಇದನ್ನು ಮುಂದೆ ಬಲವಾಗಿ ಅನುಮೋದಿಸಿದರು. ಆದರೆ, ತಿಲಕರು ಸಂಪೂರ್ಣವಾಗಿ ಭಾರತದಿಂದ ನಿರ್ಮೂಲನ ಮಾಡಬೇಕೆಂದು ಇಚ್ಛೆ ಪಟ್ಟಿದ್ದ ಇಂಗ್ಲೀಷ್  ಭಾಷೆ ಇಂದಿಗೂ ಸಂವಹನದ ಒಂದು ಮುಖ್ಯ ಸಾಧನವಾಗಿ ಉಳಿದುಕೊಂಡು ಬಂದಿದೆ.ಆದರೂ ಹಿಂದಿ ಮತ್ತು ಇತರ ಭಾರತೀಯ ಭಾಷೆಗಳನ್ನು ಜನಸಾಮಾನ್ಯರ ಮಟ್ಟದಲ್ಲಿ ಬಳಕೆ ಮತ್ತು ಬ್ರಿಟಿಷರ ಕಾಲದಿಂದ ಇಂದಿನವರೆಗೂ ನೀಡಲಾಗುತ್ತಿರುವ ಪ್ರೋತ್ಸಾಹಕ್ಕೆ ತಿಲಕರು ಅಂದು ಪ್ರಾರಂಭಿಸಿದ ಪುನರುಜ್ಜೀವನವೇ ಕಾರಣ ಎನ್ನಲಾಗುತ್ತದೆ. ತಿಲಕರ ಮತ್ತೊಂದು ದೊಡ್ಡ ಕಾಣಿಕೆಯೆಂದರೆ, ಸಾರ್ವಜನಿಕ ಗಣೇಶೋತ್ಸವ. ಭಾದ್ರಪದ ಶುಕ್ಲ ಚತುರ್ಥಿಯಿಂದ ಹಿಡಿದು ಅನಂತ ಚತುರ್ದಶಿಯವರೆಗಿನ 11 ದಿನಗಳ ಈ ಉತ್ಸವ, ಖಾಸಗೀ ಧಾರ್ಮಿಕ ಆಚರಣೆಯನ್ನು ಜನಸಾಮಾನ್ಯರು ಒಟ್ಟುಗೂಡಿ ಆಚರಿಸುವ, ನಾಯಕರುಗಳಿಗೆ ಜನಸಾಮಾನ್ಯರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವಾಗಿ ಬದಲಾಯಿಸಿತು. ತಿಲಕರು ಪ್ರಾರಂಭಿಸಿದ ಈ ಪರಂಪರೆ ದೇಶದ ಅನೇಕ ಕಡೆಗಳಲ್ಲಿ ಅದರಲ್ಲೂ ಮುಖ್ಯವಾಗಿ ಮಹಾರಾಷ್ಟ್ರದಲ್ಲಿ ಇಂದಿಗೂ ಮುಂದುವರಿಯುತ್ತಿದೆ.ಪರದೇಶೀ ವಸ್ತುಗಳನ್ನು ಬಹಿಷ್ಕರಿಸುವಂತೆ ಅವರು ನೀಡಿದ ಕರೆ ಬಹಳಷ್ಟು ಭಾರತೀಯರಲ್ಲಿ ದೇಶಭಕ್ತಿಯನ್ನು ಉಕ್ಕಿಸಿತು.

ತಿಲಕರು ಮಹಾತ್ಮಾ ಗಾಂಧಿಯವರ ಅಹಿಂಸಾತ್ಮಕ , ಅಸಹಕಾರ ಚಳುವಳಿಯ ಟೀಕಾಕಾರರಾಗಿದ್ದರು. ಒಂದು ಕಾಲದಲ್ಲಿ ತೀವ್ರವಾದಿ ಕ್ರಾಂತಿಕಾರಿಯೆಂದು ಪರಿಗಣಿಸಲ್ಪಟ್ಟಿದ್ದರೂ, ನಂತರದ ವರ್ಷಗಳಲ್ಲಿ ಅವರು ಗಮನಾರ್ಹವಾಗಿ ಬದಲಾಗಿದ್ದರು. ಭಾರತದ ಸ್ವಾತಂತ್ರ ಗಳಿಸಲು, ಮಾತುಕತೆಗಳ ಮೂಲಕವೇ ಹೆಚ್ಚು ಪರಿಣಾಮಕಾರಿ ಎಂಬ ಬಗ್ಗೆಯೆ ಅವರಿಗೆ ಒಲವಿತ್ತು.  ಸ್ವರಾಜ್ಯ ಮತ್ತು ರಾಜಕೀಯ ಸ್ವಾತಂತ್ರ್ಯಕ್ಕಾಗಿ ಹೋರಾಟವನ್ನು ಜನಸಾಮಾನ್ಯರವರೆಗೆ ಕೊಂಡೊಯ್ದ ತಿಲಕರನ್ನು ಸ್ವಾತಂತ್ರ್ಯ ಚಳುವಳಿಯ ಜನಕ ಎಂದು ಪರಿಗಣಿಸಲಾಗಿದೆ. ಭಾರತೀಯ ಸಂಸ್ಕೃತಿ, ಇತಿಹಾಸ ಹಾಗೂ ಧರ್ಮದ ಬಗ್ಗೆ ಲೇಖನಗಳಿಂದ ಲಕ್ಷಾಂತರ ಭಾರತೀಯರಿಗೆ ತಮ್ಮ ಭವ್ಯ ಪರಂಪರೆಯ ಹಾಗೂ ನಾಗರೀಕತೆಗಳ ಅರಿವು ಮಾಡಿಕೊಟ್ಟು, ಅವರ ಪ್ರಜ್ಙೆಯಲ್ಲಿ ತಮ್ಮ ನಾಡಿನ ಬಗ್ಗೆ ಅಭಿಮಾನವನ್ನು ಮೂಡಿಸಿದರು . ತಿಲಕರನ್ನು ಭಾರತದ ರಾಜಕೀಯ ಹಾಗೂ ಆಧ್ಯಾತ್ಮಿಕ  ನಾಯಕರನ್ನಾಗಿಯೂ, ಮಹಾತ್ಮಾ ಗಾಂಧಿಯವರನ್ನು ಇವರ ಉತ್ತರಾಧಿಕಾರಿಯಾಗಿಯೂ ಅನೇಕರು ಪರಿಗಣಿಸುತ್ತಾರೆ. 1920ರಲ್ಲಿ ತಿಲಕರು ತೀರಿಕೊಂಡಾಗ, ಅವರ ಅಂತ್ಯಕ್ರಿಯೆಯಲ್ಲಿ  ಎರಡು ಲಕ್ಷಕ್ಕೂ ಹೆಚ್ಚು ಜನರು  ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ಮಹಾತ್ಮಾ ಗಾಂಧಿಯವರು ತಿಲಕರನ್ನು "ಭಾರತದಲ್ಲಿ ಚಳುವಳಿಯ ಜನಕ"   ಎಂದು ಬಣ್ಣಿಸಿದರು.

*ಸಿಹಿಜೀವಿ ವೆಂಕಟೇಶ್ವರ*
ತುಮಕೂರು
9900925529


No comments: