13 August 2023

ಆಗಸ್ಟ್ ಮಾಸದ ನೆನಪುಗಳು... ಭಾಗ _12 ನರಗುಂದದ ಬಾಬಾ ಸಾಹೇಬ್


 

ಆಗಸ್ಟ್ ಮಾಸದ ನೆನಪುಗಳು...

ಭಾಗ _12

ನರಗುಂದದ  ಬಾಬಾ ಸಾಹೇಬ್

ಬಾಬಾ ಸಾಹೇಬ್ ಎಂದರೆ ತಟ್ಟನೆ ನಮ್ಮ ನೆನೆಪಿಗೆ ಬರುವುದು ಡಾ.ಬಿ ಆರ್ ಅಂಬೇಡ್ಕರ್. ನಮ್ಮ ನಾಡಿನ ರಾಜವಂಶದ ಕುಡಿಯೊಂದು ಅದೇ ಹೆಸರಿನಿಂದ ಪ್ರಖ್ಯಾತಿ ಪಡೆದು ಬ್ರಿಟಿಷರ ದುರಾಡಳಿತದ ವಿರುದ್ಧ ತೊಡೆ ತಟ್ಟಿ ನಿಂತು ಭಾರತದ ಸ್ವತಂತ್ರ ಸಂಗ್ರಾಮದಲ್ಲಿ ಜನರನ್ನು ಹೋರಾಡಲು ಪ್ರೇರಣೆ ನೀಡಿದ ಧೀರನೇ ನರಗುಂದ ಬಾಬಾ ಸಾಹೇಬ್.

ಭಾಸ್ಕರ್ ರಾವ್ ಭಾವೆ ಹುಟ್ಟುತ್ತಲೇ ಐಶಾರಾಮಿ ಜೀವನದಲ್ಲಿ ಕಳೆದರೂ ಕ್ರಮೇಣ ಜನಾನುರಾಗಿಯಾಗಿ ಬಾಬಾ ಸಾಹೇಬ್ ಎಂದು ಕರೆಯಲ್ಪಟ್ಟರು.
ತಂದೆ ದಾದಾಜಿಯ ಆಡಳಿತ ಕಾಲದಲ್ಲಿ ಸಂಸ್ಥಾನ ಸಾಲದಲ್ಲಿ ಮುಳುಗಿಹೋಗಿತ್ತು. ಬಾಬಾ ಸಾಹೇಬ ಪಟ್ಟವೇರಿದ ತಕ್ಷಣ ಸಂಸ್ಥಾನದ ಚಿತ್ರಣವೇ ಬದಲಾಗಲಾರಂಭಿಸಿತು.  ಆಡಳಿತವನ್ನು ಪುನರ್‍ವ್ಯವಸ್ಥೆಗೊಳಿಸಿ ದಕ್ಷತೆಯಿಂದ ಆಳತೊಡಗಿದ. ಸಂಸ್ಥಾನದ ಸಾಲದ ಹೊರೆ ಕಡಿಮೆಮಾಡಿ ಪ್ರಜೆಗಳ ಪ್ರೀತ್ಯಾದರ ಗಳಿಸಿದ.
ದುರದೃಷ್ಟವಶಾತ್ ಬಾಬಾಸಾಹೇಬನಿಗಿದ್ದ ಒಬ್ಬನೇ ಮಗ ತೀರಿಕೊಂಡು ಸಂಸ್ಥಾನ ಉತ್ತರಾಧಿಕಾರಿಯಿಲ್ಲದ  ಪರಿಸ್ಥಿತಿಯೊದಗಿತು. ಆಗ ಬಾಬಾ ಸಾಹೇಬ 1846 ರಲ್ಲಿ ಕಂಪನಿ ಸರ್ಕಾರಕ್ಕೆ ಪತ್ರ ಬರೆದು  ದತ್ತು ಸ್ವೀಕಾರಕ್ಕೆ ಅನುಮತಿ ಕೋರಿದ. ಈ ಪ್ರಶ್ನೆ ಇನಾಮ್ ಕಮಿಷನರ್ ಮ್ಯಾನ್ಸನ್ ಎಂಬುವನ ಪರಿಶೀಲನೆಗೆ ಬಂತು. ಮ್ಯಾನ್ಸನ್ ಸಂಸ್ಥಾನದ ಆರ್ಥಿಕ ಪರಿಸ್ಥಿತಿ ಶೋಚನೀಯ ಸ್ಥಿತಿಯಲ್ಲಿದೆ ಎಂಬ ನೆಪ ಒಡ್ಡಿ ದತ್ತಕ ಸ್ವೀಕಾರಕ್ಕೆ ಅನುಮತಿ ನಿರಾಕರಿಸಿದ. ಇದರಿಂದ ರೋಷಗೊಂಡ ಬಾಬಾಸಾಹೇಬ ಮ್ಯಾನ್‍ಸನ್ನನ ಮೇಲೂ ಬ್ರಿಟಿಷರ ಮೇಲೂ ಸೇಡು ತೀರಿಸಿಕೊಳ್ಳಬಯಸಿದ. 

ಆ ಕಾಲದಲ್ಲಿ ಲಾರ್ಡ್ ಡಾಲ್‍ಹೌಸಿಯ ದತ್ತು ಮಕ್ಕಳಿಗೆ ಹಕ್ಕಿಲ್ಲ ಕಾಯ್ದೆ  ಮತ್ತು ಅದರ ಹಿಂದೆಯೇ ಬಂದ ಇನಾಮ್ ಕಮಿಷನ್ನಿನ ಕಾರ್ಯ ಚಟುವಟಿಕೆಗಳೇ ಮೂಲ ಕಾರಣವಾಗಿ ಉತ್ತರ ಭಾರತಾದ್ಯಂತ ಮಹಾಕ್ರಾಂತಿ ಹತ್ತಿ ಉರಿಯುತ್ತಿತ್ತು. ಯಾವುದೇ ಹಕ್ಕು ಪತ್ರಗಳಿಲ್ಲದೆ ಹೋದರೆ ಅಥವಾ ಸಂಬಂಧಪಟ್ಟ ದಾಖಲೆಗಳು ಸ್ಪಷ್ಟವಾಗಿಲ್ಲವೆಂದು ಕಂಡುಬಂದರೆ ಅಂಥವರ ಭೂಮಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರವನ್ನು ಇನಾಮ್ ಕಮಿಷನ್ನಿಗೆ ಕೊಡಲಾಗಿತ್ತು. ದಕ್ಷಿಣ ಮರಾಠಾ ದೇಶವೊಂದರಲ್ಲೇ ಇನಾಮ್ ಕಮಿಷನ್ ಸುಮಾರು 35,000 ಜಮೀನ್ದಾರರ ಒಡೆತನ ಹಕ್ಕುಗಳನ್ನು ಪರಿಶೀಲಿಸಿ, 21,000 ಜಮೀನ್ದಾರರ ಸ್ವತ್ತನ್ನು ಸರ್ಕಾರಕ್ಕೆ ಸೇರಿಸಿಕೊಂಡಿತ್ತು. ಇದರಿಂದಾಗಿ ನಿಪ್ಪಾಣಿ, ಜಂಬೋಟಿ ಮುಂತಾದ ಕಡೆಯ ಜಮೀನ್ದಾರರು ಒಟ್ಟುಗೂಡಿ ಬಂಡಾಯವೆದ್ದರು ಬ್ರಿಟಿಷರ ವಿರುದ್ಧ ಎದ್ದು ನಿಂತರೆ ಇವರೆಲ್ಲರ ಸಹಾನುಭೂತಿ ಸಹಾಯ ತನಗೆ ದೊರಕುವುದೆಂದು ಬಾಬಾಸಾಹೇಬ ಭಾವಿಸಿದ. 

ಸಿಪಾಯಿ ದಂಗೆಯಲ್ಲಿ ಮುಖ್ಯಪಾತ್ರ ವಹಿಸಿದ್ದ ಪೇಶ್ವೆ ನಾನಾಸಾಹೇಬನೊಡನೆ ಇವನು ಪತ್ರವ್ಯವಹಾರ ನಡೆಸಿದ. ಅನಂತರ ಡಂಬಳದ ಮತ್ತು ಹಮ್ಮಿಗೆಯ ದೇಸಾಯಿಗಳೊಡನೆ ಮತ್ತು ಮುಂಡರಗಿ ಭೀಮರಾವ್ ಇವರೊಂದಿಗೆ ರಹಸ್ಯಸಮಾಲೋಚನೆ ನಡೆಸಿದ. ಕೊನೆಗೆ ಉತ್ತರ ಕರ್ನಾಟಕಾದ್ಯಂತ ಒಮ್ಮೆಲೆ ಬಂಡಾಯವೆದ್ದು ನರಗುಂದದವರು ಧಾರವಾಡ ಮತ್ತು ಅದರ ಪಶ್ಚಿಮ ಭಾಗವನ್ನೂ ಮುಂಡರಗಿ ಭೀಮರಾಯ ಕೊಪ್ಪಳವನ್ನೂ ವಶಪಡಿಸಿಕೊಳ್ಳಬೇಕೆಂಬ ನಿರ್ಣಯಕ್ಕೆ ಬರಲಾಯಿತು. ಈ ಮಧ್ಯೆ ಬ್ರಿಟಿಷರು ಶಸ್ತ್ರಾಸ್ತ್ರ ಕಾಯಿದೆಗೆ ಅನುಗುಣವಾಗಿ ಬಾಬಾಸಾಹೇಬ ತನ್ನ ಕೋಟೆಯಲ್ಲಿಟ್ಟಿದ್ದ ದೊಡ್ಡ ತೋಪುಗಳು ಮದ್ದುಗುಂಡು ಇತ್ಯಾದಿಗಳನ್ನು ತಮ್ಮ ವಶಕ್ಕೆ ಒಪ್ಪಿಸಬೇಕೆಂದು ಆಜ್ಞೆ ಮಾಡಿದರು. ಆಗ ದಕ್ಷಿಣ ಮರಾಠಾ ದೇಶದ ರಾಜಕೀಯ ಪ್ರತಿನಿಧಿಯಾಗಿದ್ದವ ಮ್ಯಾನ್‍ಸನ್. ಅಂದಿನ ಪ್ರಕ್ಷುಬ್ದ ಪರಿಸ್ಥಿತಿಯಲ್ಲಿ ಈ ಶಸ್ತ್ರಾಸ್ತ್ರಗಳು ಆಂಗ್ಲರ ವಿರೋಧಿಗಳಿಗೆ ದಕ್ಕುವಂತಾಗಬಾರದೆಂಬುದೇ ಬ್ರಿಟಿಷ್ ಸರ್ಕಾರದ ಆಶಯವೆಂದು ಹೇಳಿ, ನಂಬಿಸಿ ಬಾಬಾ ಸಾಹೇಬನಿಂದ ಶಸ್ತ್ರಾಸ್ತ್ರ ಒಪ್ಪಿಸುವ ಆಶ್ವಾಸನೆ ಪಡೆದ. ಬಾಬಾಸಾಹೇಬ ಅತಿಯಾದ ಮಳೆ ಸುರಿಯುತ್ತಿದೆಯೆಂಬ ನೆಪವೊಡ್ಡಿ ಮೂರು ತೋಪುಗಳನ್ನು ದುರ್ಗದಲ್ಲೇ ಉಳಿಸಿಕೊಂಡು ಉಳಿದೆಲ್ಲ ಸಾಮಗ್ರಿಗಳನ್ನೂ ಧಾರವಾಡದತ್ತ ಕಳುಹಿಸಿದ. ಜೊತೆಗೆ ಮಧ್ಯದಾರಿಯಲ್ಲಿ ಇವನೇ ಕಳುಹಿಸಿದ ಜನ ಸಾಗಣೆ ಸಿಬ್ಬಂದಿಯವರ ಮೇಲೆ ಬಿದ್ದು ಎಲ್ಲ ಶಸ್ತ್ರಾಸ್ತ್ರಗಳನ್ನು ದೋಚಿಕೊಂಡು ಬಂದರು.

ಕಾರಣಾಂತರದಿಂದ ಮುಂಡರಗಿ ಭೀಮರಾವ್ ರಹಸ್ಯವಾಗಿ ನಿಗದಿಮಾಡಿದ್ದ ದಿನಕ್ಕೆ ಮೊದಲೇ ಬಂಡಾಯವೆದ್ದ. ಡಂಬಳದ ಖಜಾನೆಯನ್ನು ಲೂಟಿಮಾಡಿ ಕೊಪ್ಪಳ ದುರ್ಗವನ್ನಾಕ್ರಮಿಸಲು ಹೊರಟ. ಈ ವಿಷಯ ತಿಳಿದಾಕ್ಷಣ ಬಾಬಾ ಸಾಹೇಬ ತನ್ನ ಬಳಿಯಿದ್ದ ದೊಡ್ಡ ತೋಪುಗಳನ್ನು ದುರ್ಗದ ಮೇಲೆ ಸರಿಯಾದ ಸ್ಥಳಗಳಲ್ಲಿರಿಸಿ ಯುದ್ಧ ಸನ್ನದ್ಧನಾದ.
ನರಗುಂದದೊಡೆಯನ ಈ ಅಪಾಯಕಾರಿ ಕ್ರಮಗಳ ವಿಷಯ ಮ್ಯಾನ್ಸ್‍ನ್ ಕುರುಂದವಾಡದಲ್ಲಿ ತಿಳಿಯಿತು. ಏನಾದರೂ ಮಾಡಿ ಇವನು ದಂಗೆ ಏಳದಂತೆ, ಅದು ಸಾಧ್ಯವಾಗದಿದ್ದರೆ ರಾಮದುರ್ಗದ ಸಂಸ್ಥಾನದ ಒಡೆಯನಾಗಿದ್ದ ಇವನ ಮಲತಮ್ಮ ದಂಗೆಕೋರರಿಗೆ ಸಹಾಯ ನೀಡದಂತೆ  ಮಾಡಬೇಕೆಂಬ ಉದ್ದೇಶದಿಂದ ಮ್ಯಾನ್ಸನ್ ಮೇ 25 ರಂದು ಒಳದಾರಿ ಹಿಡಿದು ನರಗುಂದದ ಕಡೆಗೆ ಸಾಗಿದ. ಜೊತೆಯಲ್ಲಿ ದಕ್ಷಿಣ ಮರಾಠಾ ಅಶ್ವದಳದ 12 ಮಂದಿಯನ್ನು ಮಾತ್ರ ತನ್ನ ರಕ್ಷಣೆಗಾಗಿ ಕರೆದೊಯ್ದ. ಆದರೆ ಕರ್ನಲ್ ಮಾಲ್ಕಮ್  ರಾಮದುರ್ಗದಲ್ಲಿ ದಕ್ಷಿಣ ಮರಾಠಾ ಆಶ್ವದಳದೊಡನೆ ತನ್ನನ್ನು ಸಂಧಿಸಬೇಕೆಂದು ಆಜ್ಞಾಪಿಸಿದ. ದುರದೃಷ್ಟವಶಾತ್ ಈ ಆಜ್ಞೆ ತಲುಪುವಷ್ಟರಲ್ಲಿ ಕರ್ನಲ್ ಮಾಲ್ಕಮ್ 250 ಕುದುರೆ ಸವಾರರೊಡನೆ ಡಂಬಳದ ಖಜಾನೆ ಲೂಟಿಮಾಡಿದ ಬಂಡುಕೋರರೊಡನೆ ಹೋರಾಟಕ್ಕೆ ಸಿದ್ಧನಾಗಿ ನಿಂತಿದ್ದ. ಇದರಿಂದ ಮ್ಯಾನ್ಸನ್ ರಾಮದುರ್ಗವನ್ನು ತಲುಪಿದಾಗ ಅವನ ರಕ್ಷಣೆಗಾಗಿ ಮಾಲ್ಕಮ್ ಅಲ್ಲಿರಲಾಗಲಿಲ್ಲ. ರಾಮದುರ್ಗದ ಒಡೆಯನೇನೋ ಸ್ನೇಹಭಾವವನ್ನೇ ತೋರಿದ. ಬಾಬಾಸಾಹೇಬ ಬರೆದಿದ್ದ ಪತ್ರ ತೋರಿಸಿ ಅಲ್ಲಿಗೆ ಹೋಗಕೂಡದೆಂದು ಎಚ್ಚರಿಸಿದ. ಈ ಪತ್ರದಲ್ಲಿ ನರಗುಂದದೊಡೆಯ ಅಪಮಾನಕ್ಕಿಂತ ಮರಣವೇ ಲೇಸೆಂದು ರಾಮದುರ್ಗ ಸಹ ದಂಗೆಯಲ್ಲಿ ಪಾಲ್ಗೊಳ್ಳಬೇಕೆಂದೂ ಒತ್ತಿ ಹೇಳಿದ್ದ. ಧಾರವಾಡಕ್ಕೆ ಹೋಗಿ ಅಲ್ಲಿ ಮಾಲ್ಕಮನ ಪಡೆಯನ್ನು ಕೂಡಿಕೊಳ್ಳುವ ಉದ್ದೇಶದಿಂದ, ಎಷ್ಟು ಹೇಳಿದರೂ ಲಕ್ಷಿಸದೆ ಮ್ಯಾನ್ಸನ್ ಮೇ 29ರ ಮಧ್ಯಾಹ್ನ ರಾಮದುರ್ಗದಿಂದ ಹೊರಟ. ಹನ್ನೆರಡು ಮಂದಿ ಆಶ್ವೀಕರಲ್ಲದೆ ಅವನ ಜೊತೆ ಕೆಲವೇ ಪರಿಚಾರಕರಿದ್ದರು. ರಾಮದುರ್ಗದಿಂದ ಧಾರವಾಡದತ್ತ ಹೋಗುವ ದಾರಿ ನರಗುಂದದ ಸಮೀಪದಲ್ಲೇ ಹಾಯುತ್ತಿತ್ತು. ಹೀಗಾಗಿ ಮ್ಯಾನ್ಸನ್ನನ ಸಾಹಸ ಅಪಾಯದಿಂದ ಕೂಡಿತ್ತು. ರಾತ್ರಿಯಾಗುತ್ತಲೇ ಸುರೆಬಾನ ಎಂಬ ಹಳ್ಳಿಯಲ್ಲಿ ಇವನು ತಂಗಿದ.

ಇಷ್ಟರಲ್ಲಿ ಮ್ಯಾನ್ಸನ್ ರಾಮದುರ್ಗದಿಂದ ಕಳುಹಿಸಿದ್ದ ಪತ್ರ ಓದಿ ಕೋಪೋದ್ರಿಕ್ತನಾಗಿದ್ದ ಬಾಬಾಸಾಹೇಬ ಸುಮಾರು 700-800 ಕುದುರೆ ಮತ್ತು ಕಾಲ್ದಳದೊಂದಿಗೆ ರಾಮದುರ್ಗದತ್ತ ಬಂದು ಮ್ಯಾನ್ಸನ್ ಸುರೆಬಾನದಲ್ಲಿ ತಂಗಿರುವ ವಿಷಯ ತಿಳಿದು ಅತ್ತ ಧಾವಿಸಿದ. ಬಾಬಾಸಾಹೇಬನ ಸೈನಿಕರು ಮ್ಯಾನ್ಸನ್ನನ ತಲೆ ಕಡಿದು ಹಾಕಿದರು. ಕತ್ತಲಲ್ಲಿ ಕೇವಲ ಆರು ಮಂದಿ ಸೈನಿಕರು ತಪ್ಪಿಸಿಕೊಂಡರು. ದಕ್ಷಿಣ ಮಹಾರಾಷ್ಟ್ರರ ಅಶ್ವದಳದ ಅಧಿಕಾರಿಗಳಲ್ಲಿ ಶ್ರೇಷ್ಠ ಎನಿಸಿದ್ದ ಪೂರ್ಣಸಿಂಗನೂ ಕೊಲ್ಲಲ್ಪಟ್ಟ. ಮ್ಯಾನ್ಸನ್ನನ ರುಂಡವನ್ನು ನರಗುಂದ ಪಟ್ಟಣದ ದ್ವಾರವೊಂದಕ್ಕೆ ನೇತುಹಾಕಲಾಯಿತು.

ಮ್ಯಾನ್ಸನ್ನ ಬಳಿಯಿದ್ದ ಕಾಗದಪತ್ರಗಳ ಪರಿಶೀಲನೆ ನಡೆಸಿದಾಗ ತನ್ನ ಅನುಚರರೇ ಆದ ಕೃಷ್ಣಾಜಿಪಂತ ಜೋಶಿ ಮೊದಲಾದ ದ್ರೋಹಿಗಳ ಮೂಲಕ ತನ್ನ ಗುಪ್ತ ಕಾರ್ಯಾಗಾರಗಳೆಲ್ಲ ಬ್ರಿಟಿಷರಿಗೆ ಗೊತ್ತಿರುವ ವಿಷಯ ಗಮನಕ್ಕೆ ಬಂದು ಬಾಬಾ ಸಾಹೇಬನಿಗೆ ಗಾಬರಿಯಾಯಿತು. ಈ ದ್ರೋಹಿಗಳು ಮದ್ದಿನ ಮನೆಗೆ ಸಗಣಿ ತುಂಬಿದ್ದರು. ಎಷ್ಟಾದರೂ ಇವನು ಹೋರಾಟಕ್ಕೆ ಸಿದ್ಧನಾದ.
ಮ್ಯಾನ್ಸನ್ ಮತ್ತು ಇತರರಿಗೊದಗಿದ ಘೋರ ಮರಣ ವೃತ್ತಾಂತ ಧಾರವಾಡಕ್ಕೆ ಮಾರನೇ ದಿನ ತಲುಪಿತು. ಕೂಡಲೇ ಧಾರವಾಡದಿಂದ ಅಮರಗೋಳಕ್ಕೆ ಸಣ್ಣ ಪಡೆಯೊಂದನ್ನು ರವಾನಿಸಲಾಯಿತು. ಜೂನ್ 1ರಂದು ಕರ್ನಲ್ ಮಾಲ್ಕಮ್ ದಕ್ಷಿಣ ಮರಾಠಾ ಅಶ್ವದಳದ 150 ಮಂದಿ ದೇಶೀಯ ಪದಾತಿದಳದ 28ನೆಯ ರೆಜಿಮೆಂಟ್ ಮತ್ತು 74ನೆಯ ಪರ್ವತ ಪಡೆಯ ಎರಡು ತುಕಡಿಗಳೊಡನೆ ನರಗುಂದ ತಲುಪಿದ. ನಡೆದ ಹೋರಾಟದಲ್ಲಿ ಪಟ್ಟಣ ಬ್ರಿಟಿಷರ ವಶವಾಯಿತು. ಮಾರನೆಯ ದಿನ ಬ್ರಿಟಿಷರು ಕೋಟೆ ವಶಪಡಿಸಿಕೊಳ್ಳಲು ಹೊರಟರು. ಬಾಬಾಸಾಹೇಬನಿಗೆ ಹೋರಾಟ ಮುಂದುವರಿಸುವುದರಿಂದ ಪ್ರಯೋಜನವಿಲ್ಲವೆಂಬ ಅರಿವಾಯಿತು. ಅಂದು ರಾತ್ರಿಯೇ ಆರು ಮಂದಿ ಆಪ್ತರೊಡನೆ ದುರ್ಗ ತೊರೆದು ಹೋದ.

ಬೆಳಗಾವಿಯ ಪೊಲೀಸ್ ಸೂಪರಿಂಟೆಂಡೆಂಟ್ ಆಗಿದ್ದ ಫ್ರಾಂಕ್ ಸೌಟರ್ ಮಾರನೆಯ ದಿನ ಪಂಢರಾಪುರಕ್ಕೆ ತೆರಳುವ ಯಾತ್ರಾರ್ಥಿಗಳಂತೆ ವೇಷ ಧರಿಸಿದ್ದ ಬಾಬಾಸಾಹೇಬ ಮತ್ತು ಅವನ ಅನುಚರರನ್ನು ತೊರಗಲ್ ಕಾಡಿನಲ್ಲಿ ಸೆರೆಹಿಡಿದು ಬೆಳಗಾಂವಿಗೆ ತಂದ. ವಿಚಾರಣೆ ನಡೆಸಿ ಬಾಬಾಸಾಹೇಬನಿಗೆ ಮರಣದಂಡನೆ ವಿಧಿಸಲಾಯಿತು. 1858 ಜೂನ್ 12ರಂದು ಸಾವಿರಾರು ಮಂದಿಯ ಸಮ್ಮುಖದಲ್ಲಿ ಬೆಳಗಾಂವಿಯಲ್ಲಿ ಈ ವೀರನನ್ನು ನೇಣುಹಾಕಲಾಯಿತು.1858ರ  ಜೂನ್ 3ರಂದು ನರಗುಂದ ಸಂಸ್ಥಾನವನ್ನು ಬ್ರಿಟಿಷರು ತಮ್ಮ ಅಧಿಪತ್ಯಕ್ಕೆ ಒಳಪಡಿಸಿಕೊಂಡರು.  ಬಾಬಾ ಸಾಹೇಬ್ ಕ್ರಾಂತಿಯ ಕಿಚ್ಚು ನಾಡಿನಾದ್ಯಂತ ಹೊತ್ತಿತು. ಸಾವಿರಾರು ದೇಶಭಕ್ತರಿಗೆ ಅವರ ಜೀವನ ಪ್ರೇರಣೆಯಾಯಿತು.

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529



No comments: