10 August 2023

ಆಗಸ್ಟ್ ಮಾಸದ ನೆನಪುಗಳು... ಭಾಗ _10 ಉಮಾಬಾಯಿ ಕುಂದಾಪುರ.


 


ಆಗಸ್ಟ್ ಮಾಸದ ನೆನಪುಗಳು...

ಭಾಗ _10

ಉಮಾಬಾಯಿ ಕುಂದಾಪುರ.

ಭಾರತದ  ಸ್ವಾತಂತ್ರ್ಯ ಹೋರಾಟಗಾರ್ತಿಯರ ಗುಂಪು ಭಗಿನೀ ಮಂಡಲದ ಸ್ಥಾಪಕಿ, ನಾ. ಸು. ಹರ್ಡೀಕರ್ ಅವರು ಸ್ಥಾಪಿಸಿದ ಹಿಂದೂಸ್ತಾನಿ ಸೇವಾದಲದ ಮಹಿಳಾ ವಿಭಾಗದ ಮುಖ್ಯಸ್ಥೆಯಾಗಿದ್ದವರು, ತನಗೆ ಬರಬಹುದಾಗಿದ್ದ ಪ್ರಶಸ್ತಿಪುರಸ್ಕಾರ, ಸರಕಾರದ ಉನ್ನತ ಹುದ್ದೆಗಳು ಎಲ್ಲವನ್ನೂ ತಿರಸ್ಕರಿಸಿದ ಅಪರೂಪದ ಮಹಿಳೆ  ಉಮಾಬಾಯಿ ಕುಂದಾಪುರ.

ಉಮಾಬಾಯಿಯವರು ಹುಟ್ಟಿದ್ದು 25ನೇ ಮಾರ್ಚ್ 1892ನೇ ಇಸವಿಯಂದು, ಕುಂದಾಪುರದ ಬ್ರಾಹ್ಮಣ ಕುಟುಂಬದಲ್ಲಿ. ಬಾಲ್ಯದ ಹೆಸರು ಭವಾನಿ ಗೋಳಿಕೇರಿ. ತಂದೆ ಗೋಳಿಕೇರಿ ಕೃಷ್ಣರಾವ್ ತಾಯಿ ತುಂಗಾಬಾಯಿ. ಐವರು ಗಂಡುಮಕ್ಕಳೂ ಸೇರಿ ಒಟ್ಟು ಆರು ಮಂದಿ ಮಕ್ಕಳು. 1898ರಲ್ಲಿ ಸಹೋದರರ ಜೊತೆಗೆ ಉಮಾಬಾಯಿಯವರೂ ಸಹ ಮುಂಬಯಿ ಮಹಾನಗರವನ್ನು ಸೇರಿಕೊಂಡರು. 1905ರಲ್ಲಿ 13ನೇ ವಯಸ್ಸಿನಲ್ಲಿ ಸಂಜೀವರಾವ್ ಕುಂದಾಪುರ್ ಅವರನ್ನು ಮದುವೆಯಾದರು.

ಆಕೆಯ ಮಾವ ಆನಂದರಾವ್ ಕುಂದಾಪುರ ಸುಧಾರಣಾವಾದಿ ಮತ್ತು ಮಹಿಳಾ ಸಬಲೀಕರಣದ ಕುರಿತಾಗಿ ಅವರಿಗೆ ಹೆಚ್ಚಿನ ಒಲವಿತ್ತು. ಅವರ ಪ್ರೋತ್ಸಾಹದ ಮೇರೆಗೆ ಉಮಾಬಾಯಿ ಮದುವೆಯ ನಂತರ ಶಿಕ್ಷಣವನ್ನು ಮುಂದುವರೆಸಿದರು. ಆನಂದರಾಯರ ಒತ್ತಾಸೆಯಂತೆ ಉಮಾಬಾಯಿ, ಪೂನಾದ ಅಣ್ಣಾಸಾಹೇಬ್ ಕಾರ್ವೆ ಶಾಲೆಯಲ್ಲಿ ಸೇರಿದರು. ಸುಮಾರು 25  ವರ್ಷ ವಯಸ್ಸಿನ ತನಕ, ಆನಂದರಾಯರು ಸೊಸೆ ಉಮಾಬಾಯಿಗೆ ವಿದ್ಯಾಭ್ಯಾಸದ ವಿಷಯದಲ್ಲಿ ಹೆಚ್ಚಿನ ಸಹಾಯ ಮಾಡಿದರೂ ತನ್ನ ದುರ್ಬಲ ಆರೋಗ್ಯದ ಕಾರಣದಿಂದಾಗಿ, ವಿದ್ಯಾಭ್ಯಾಸವನ್ನು ಮುಂದುವರಿಸಲಾಗಲಿಲ್ಲ. ಹೀಗಾಗಿಯೇ ಅವರ ಕಲಿಕೆ ಆರಂಭವಾಗುವಾಗ ಹೆಚ್ಚೇ ವಯಸ್ಸಾಗಿತ್ತು. ಆದರೆ ಮೆಟ್ರಿಕ್ಯುಲೇಷನ್ ವಿದ್ಯಾಭ್ಯಾಸವನ್ನು ಎರಡೇ ವರ್ಷದಲ್ಲಿ ಮುಗಿಸಿದರು.
ಅಂದಿನ ಕಾಲದಲ್ಲಿ ದಕ್ಷಿಣ ಕನ್ನಡದಲ್ಲಿ ಮೆಟ್ರಿಕ್ಯುಲೇಷನ್ ವಿದ್ಯಾಭ್ಯಾಸವನ್ನು ಪಡೆಯುವುದು ದೊಡ್ಡ ಸಾಧನೆಯೇ ಆಗಿತ್ತು. ಹೀಗಾಗಿ ಉಮಾಬಾಯಿಯವರನ್ನು ಮುಂಬೈನ ಸಾರಸ್ವತ ಮಹಿಳಾ ಸಮಾಜವು ಅವರನ್ನು ಕರೆದು ಗೌರವಿಸಿತು.  

1920 ರ ಆಗಸ್ಟ್ ಒಂದರಂದು ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕರು ಮೃತರಾದರು. ತಿಲಕರ ಮೃತದೇಹದ ಭವ್ಯ ಮೆರವಣಿಗೆಯನ್ನು ನೋಡಿದ ಉಮಾಬಾಯಿಯವರಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಲು ಪ್ರೇರಣೆಯಾಯಿತು. ಆ ದಿನಗಳಲ್ಲಿ, ಸ್ವಾತಂತ್ರ್ಯ ಹೋರಾಟಕ್ಕೆ ಹೊಸದಾಗಿ ಕಾಲಿಡುವವರಿಗೆ ಕಾಂಗ್ರೆಸ್ ಸಂಘಟನೆ ಮತ್ತು ಅದರ ಸ್ವಯಂಪ್ರೇರಿತ ಸೇವೆ ಅನುಕರಣೀಯವಾಗಿತ್ತು. ಇವೆಲ್ಲವನ್ನು ಗಮನಿಸಿದ ಉಮಾಬಾಯಿಯವರು ಸ್ವಇಚ್ಛೆಯಿಂದ ಸ್ವಾತಂತ್ರ್ಯ ಹೋರಾಟಕ್ಕೆ ಪಾದಾರ್ಪಣೆ ಮಾಡಿದರು.

1920ರಲ್ಲಿ  ಮಹಾತ್ಮಾ ಗಾಂಧೀಜಿಯವರು  ಕರೆ ಕೊಟ್ಟ ಅಸಹಕಾರ ಚಳುವಳಿಯಲ್ಲಿ   ಉಮಾಬಾಯಿ ರವರು ತನ್ನ ಸಹೋದರ ರಘುರಾಮರಾವ್, ಪತಿ ಸಂಜೀವರಾವ್ ಜತೆ ಸೇರಿ  ಉತ್ಸಾಹದಿಂದ ಭಾಗವಹಿಸಿದರು. ಖಾದಿಯ ಬಗ್ಗೆ ಪ್ರಚಾರ ಮಾಡಲು ಆರಂಭಿಸಿದರು. ಮನೆಮನೆಗೆ ತೆರಳಿ ಮಹಿಳೆಯರನ್ನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಲು ಪ್ರೇರೇಪಿಸಿದರು. ಚಳುವಳಿಗೆ ಸಂಬಂಧಿಸಿದಂತೆ ಹಲವಾರು ನಾಟಕಗಳನ್ನು ಬರೆದು ಪ್ರದರ್ಶಿಸಿದರು.
ಉಮಾಬಾಯಿಯವರಿಗೆ 28 ವರ್ಷವಾಗಿದ್ದಾಗ  ಅವರ ಪತಿ ಅಕಾಲಿಕವಾಗಿ ಮರಣಹೊಂದಿದರು. ಗಂಡನ ಮರಣಾನಂತರ, ಉಮಾಬಾಯಿಯವರು ಮಾವನೊಂದಿಗೆ ಹುಬ್ಬಳ್ಳಿಗೆ ಹಿಂತಿರುಗಿದರು. ಆನಂದರಾವ್ ಅವರು ಹುಬ್ಬಳ್ಳಿಯಲ್ಲಿ ಕರ್ನಾಟಕ ಪ್ರೆಸ್ ಅನ್ನು ಆರಂಭಿಸಿದರು.

ಡಾ. ನಾ. ಸು. ಹರ್ಡೀಕರ್ ಅವರು ಭಾರತೀಯ ಯುವಕರನ್ನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸುವಂತೆ ಪ್ರೇರೇಪಿಸುವ ಸಲುವಾಗಿ  1923 ರಲ್ಲಿ ಹಿಂದೂಸ್ತಾನಿ ಸೇವಾ ದಳವನ್ನು ಹುಬ್ಬಳ್ಳಿಯಲ್ಲಿ ಪ್ರಾರಂಭಿಸಿದರು. ಉಮಾಬಾಯಿಯವರು ಈ ಸಂಘದಲ್ಲಿ ಸೇರಿಕೊಂಡರಲ್ಲದೆ, ಮಹಿಳಾ ವಿಭಾಗದ ಮುಖ್ಯಸ್ತೆಯಾಗಿಯೂ ಆಯ್ಕೆಯಾದರು. ಉಮಾಬಾಯಿಯವರು, ನಾ. ಸು. ಹರ್ಡೀಕರ್ ಅವರು ಸ್ಥಾಪಿಸಿದ್ದ ತಿಲಕ್ ಕನ್ಯಾ ಶಾಲೆಯ ಉಸ್ತುವಾರಿವಹಿಸಿಕೊಂಡರು.

1924 ರಲ್ಲಿ ಕಾಂಗ್ರೆಸ್ ಸಂಘಟನೆಯ ರಾಷ್ಟ್ರೀಯ ಸಮ್ಮೇಳನವು ಬೆಳಗಾವಿಯಲ್ಲಿ ಜರುಗಿತು. ಅಲ್ಲಿಯವರೆಗೆ ಜರುಗಿದ ಅಖಿಲ ಭಾರತ ಸಮ್ಮೇಳನದಲ್ಲಿ ಮಹಾತ್ಮಾ ಗಾಂಧಿಯವರು ಅಧ್ಯಕ್ಷರಾಗಿ ಭಾಗವಹಿಸಿದ ಏಕೈಕ ಸಮ್ಮೇಳನವಾಗಿತ್ತು ಅದು. ಹರ್ಡೀಕರ್ ಅವರ ಜೊತೆ ಅತ್ಯುತ್ಸಾಹದಿಂದ ಉಮಾಬಾಯಿಯವರು ಈ ಸಮ್ಮೇಳನದಲ್ಲಿ ಭಾಗವಹಿಸಿದರು.   ರಾಜ್ಯದಾದ್ಯಂತ ತಿರುಗಿ ಸುಮಾರು 150ಕ್ಕಿಂತ ಹೆಚ್ಚು ಮಂದಿ ಮಹಿಳೆಯರನ್ನು, ಅದರಲ್ಲೂ ಮನೆಯಲ್ಲಿ ಕುಳಿತ ವಿಧವೆಯರನ್ನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸುವಂತೆ ಮಾಡಿದರು. ಆನಂದರಾಯರ ಮನೆ, ಮುದ್ರಣಾ ಘಟಕಗಳು ಸಂಘಟನೆಯ ಚಟುವಟಿಕೆಯ ಕೇಂದ್ರವಾಯಿತು. ಇದರಿಂದಾಗಿ ಬ್ರಿಟೀಶ್ ಸರಕಾರದ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ಉಮಾದೇವಿಯವರು ಹಲವಾರು ರಾಷ್ಟ್ರೀಯ ನಾಯಕರ ಸಂಪರ್ಕಕ್ಕೆ ಬರಲು ಈ ಸಮ್ಮೇಳನವು ಸಹಾಯಕವಾಯಿತು.  ಕರ್ನಾಟಕದಲ್ಲಿ ಕಾಂಗ್ರೆಸ್ ಸಂಘಟನೆಯ ಉಪಾಧ್ಯಕ್ಷೆಯಾಗಿ ಆಯ್ಕೆಯಾದರು.
ಭಾರತವು ಸ್ವಾತಂತ್ರ್ಯ ಪಡೆಯುವ ಹೊತ್ತಿಗೆ, ಉಮಾಬಾಯಿಯವರ ಹೆಸರು ಸಾಕಷ್ಟು ಪ್ರಸಿದ್ಧಿಯಾಗಿತ್ತು. ತಾನು ಮಾಡಿದ ಕೆಲಸಕಾರ್ಯಗಳಿಂದ, ಹಲವು ರಾಷ್ಟ್ರೀಯ ನಾಯಕರ ಗಮನ ಸೆಳೆದಿದ್ದರು ಇದನ್ನು ಬಳಸಿಕೊಂಡು ರಾಜಕೀಯ ಪ್ರವೇಶಿಸುವ ಹಲವು ಅವಕಾಶಗಳು ಅವರನ್ನು ಹುಡುಕಿಕೊಂಡು ಬಂದವು. ಸ್ವಾತಂತ್ರ್ಯ ಹೋರಾಟಗಾರರಿಗೆ ಕೊಡಮಾಡುವ, ರಾಷ್ಟ್ರೀಯ ಮತ್ತು ರಾಜ್ಯ ಸರ್ಕಾರದ ಪಿಂಚಣಿಯನ್ನು ಮತ್ತು ಮುಂಚೂಣಿಯ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವ ತಾಮ್ರಪತ್ರ ಪ್ರಶಸ್ತಿಯನ್ನೂ ಸ್ವೀಕರಿಸಲು ಒಪ್ಪಲಿಲ್ಲ. ಅವರು ಸಾಮಾನ್ಯ ಸ್ವಯಂಸೇವಕಿಯಾಗಿಯೇ ಇರಲು ಬಯಸಿದರು.

ಇಂತಹ ದಿಟ್ಟ ನಿಸ್ವಾರ್ಥ ಮಹಿಳಾ ಸ್ವಾತಂತ್ರ್ಯ   ಹೋರಾಟಗಾರರಾದ ಉಮಾಬಾಯಿ ರವರು 1992 ರಲ್ಲಿ ವಿಧಿವಶರಾದರು. ಈ ಆಗಸ್ಟ್ ಮಾಸದಲ್ಲಿ ಅವರ ತ್ಯಾಗ ನಿಸ್ವಾರ್ಥ ಸೇವೆಯನ್ನು ನೆನೆಯುವುದು ನಮ್ಮ ಆದ್ಯ ಕರ್ತವ್ಯ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529.

No comments: