17 January 2023

R V M ವೋಟಿಂಗ್ ಮೆಷಿನ್ ಏನು ಎತ್ತ....


 



ವೋಟಿಂಗ್ ಹೆಚ್ಚಳಕ್ಕೆ ಆರ್ ವಿ ಎಂ  ಪೂರಕವಾಗಲಿದೆ. 


ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ರಾಜಕೀಯ ವ್ಯವಸ್ಥೆ ಮತ್ತು ಆಡಳಿತವನ್ನು ಕಂಡ ಪ್ರಪಂಚದ ಹಲವಾರು ದೇಶಗಳು ಅಚ್ಚರಿ ಮತ್ತು ಮೆಚ್ಚುಗೆ ವ್ಯಕ್ತಪಡಿಸುತ್ತಿವೆ.140 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ನಮ್ಮ ದೇಶದಲ್ಲಿ ಅಚ್ಚುಕಟ್ಟಾಗಿ ಚುನಾವಣೆ ನಡೆಸುವುದೇ ಒಂದು ಸವಾಲು. ಆ ಸವಾಲು ಮೆಟ್ಟಿ ಚುನಾವಣೆ ನಡೆಸುತ್ತಾ ಬಂದಿರುವ ಭಾರತದ ಚುನಾವಣಾ ಆಯೋಗಕ್ಕೆ ಅಭಿನಂದಿದಲೇಬೇಕು .ಇಷ್ಟೆಲ್ಲಾ ಸಂತಸದ ಸುದ್ದಿಯ ನಡುವೆ ಬೇಸರದ ಸಂಗತಿಯೆಂದರೆ ಇದುವರೆಗಿನ ಸಾರ್ವತ್ರಿಕ ಚುನಾವಣೆಯಲ್ಲಿ ಶೇಕಡಾ ನೂರು ಇರಲಿ ಶೇಕಡಾ ತೊಂಬತ್ತು ಮತದಾನ ಆಗಿಲ್ಲ! 

ಕಳೆದ ಲೋಕಸಭಾ ಚುನಾವಣೆಯಲ್ಲಿ ಅಂದರೆ 2019 ರಲ್ಲಿ ನಡೆದ ಚುನಾವಣೆಯಲ್ಲಿ  ಚುನಾವಣಾ ಆಯೋಗ ,ಸ್ವೀಪ್ ಮತ್ತು ಶಾಲಾಕಾಲೇಜುಗಳ  ಇ ಎಲ್ ಸಿ ಕ್ಲಬ್ ಗಳ ಮತದಾನದ ಜಾಗೃತಿಯ ಪರಿಣಾಮವಾಗಿ ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಕೊಂಚ ಹೆಚ್ಚು ಎನ್ನುವಷ್ಟು 

 67.4 % ಮತದಾನ ಆಗಿದೆ . ನೊಂದಾಯಿತ 

30 ಕೋಟಿ ಜನ ತಮ್ಮ ಮತದಾನದ  ಹಕ್ಕು ಚಲಾಯಿಸಿಲ್ಲ ಎಂಬುದು ನಮ್ಮ ಜನರು ಮತದಾನದ ಬಗ್ಗೆ ಇರುವ ನಿರಾಸಕ್ತಿ ಎಷ್ಟಿದೆ ಎಂಬುದು ತಿಳಿಯುತ್ತದೆ.


ಮತದಾನ ಕಡಿಮೆಯಾಗಲು ಜನರ ನಿರಾಸಕ್ತಿ, ರಾಜಕಾರಣಿಗಳ ಬಗ್ಗೆ ಅನಾದರ ಮುಂತಾದ ಅಂಶಗಳು ಕಾರಣವಾದರೂ ವಲಸೆ  ಮತದಾನ ಕಡಿಮೆಯಾಗಲು ಅತಿ ದೊಡ್ಡ ಕಾರಣ ಎಂಬ ಸತ್ಯ ಅರಿತ ಚುನಾವಣಾ ಆಯೋಗ ಒಂದು ಹೊಸ ಪ್ರಯೋಗಕ್ಕೆ ಕೈ ಹಾಕಿದೆ. ಅದೇ  

ವಲಸಿಗರ   ವಾಸಸ್ಥಳದಿಂದಲೇ ಮತದಾನ ಅವಕಾಶ ನೀಡುವ  ಆರ್ ವಿ ಎಂ ಅಂದರೆ ರಿಮೋಟ್ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ 


ವಲಸಿಗ ಮತದಾರರು ತಾವಿರುವ ಸ್ಥಳದಿಂದಲೇ ಮತದಾನ ಮಾಡಲು ಅನುವಾಗುವಂತೆ ದೂರನಿಯಂತ್ರಿತ. ವಿದ್ಯುನ್ಮಾನ ಮತಯಂತ್ರದ ಮಾದರಿಯನ್ನು ಕೇಂದ್ರ ಚುನಾವಣಾ

ಆಯೋಗವು ಅಭಿವೃದ್ಧಿಪಡಿಸಿದೆ.

ಎಲೆಕ್ಟ್ರಾನಿಕ್ ವೋಟಿಂಗ್ ಮಷೀನ್ (ಆರ್ವಿಎಂ) ಕಾರ್ಯಶೈಲಿಯ ಬಗ್ಗೆ ಆಯೋಗವು ರಾಜಕೀಯ ಪಕ್ಷಗಳಿಗೆ ಜ.16ರಂದು ಪ್ರಾತ್ಯಕ್ಷಿಕೆ ನೀಡಲು ಉದ್ದೇಶಿಸಿತ್ತು .ಆದರೆ ಅದು ನೆರವೇರಲಿಲ್ಲ. ಈ  ಸೌಲಭ್ಯ ಜಾರಿಗೆ ಬಂದರೆ, ವಲಸಿಗರು

ತಾವು ವಾಸವಿರುವ ಸ್ಥಳದಿಂದಲೇ ಮತದಾನ ಮಾಡಬಹುದು. ಮತದಾನ ಮಾಡಲೆಂದೇ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿರುವ  ಸ್ಥಳಕ್ಕೆ  ಪ್ರಯಾಣಿಸುವ ಅಗತ್ಯ ಬರುವುದಿಲ್ಲ.     


ಪ್ರಾತ್ಯಕ್ಷಿಕೆ ಹಾಗೂ ಆರ್ವಿಎಂ ನ  ಕಾರ್ಯಶೈಲಿ ವಿವರಿಸಲು  "ಮಾನ್ಯತೆ  ಪಡೆದ ಎಂಟು ರಾಷ್ಟ್ರೀಯ ಮತ್ತು  57 ಪ್ರಾದೇಶಿಕ ಪಕ್ಷಗಳಿಗೆ ಆಯೋಗ   ಅಹ್ವಾನ ಕಳುಹಿಸಿ ಆಯೋಗದ ಪರಿಣತರು ಮತ್ತು ಸದಸ್ಯರು ಸಭೆಯಲ್ಲಿ ಭಾಗವಹಿಸಿ  ಇವಿಎಂಗಳ  ದೂರನಿಯಂತ್ರಿತ  ನಿರ್ವಹಣೆ ಸಾಧ್ಯವಿದೆ ಎಂದು ಪ್ರಾತ್ಯಕ್ಷಿಕೆಯನ್ನು ನೀಡಬೇಕಿತ್ತು ಅದು ಈಗ ಮುಂದಕ್ಕೆ ಹೋಗಿದೆ. 


ಮತದಾನದಲ್ಲಿ ಸಕ್ರಿಯವಾಗಿ ಭಾಗವಹಿಸಲು  ತಾಂತ್ರಿಕ ಸಹಾಯ ಒದಗಿಸುವುದು ಈ ಉಪಕ್ರಮದ ಪ್ರಮುಖ ಉದ್ದೇಶ. ಒಂದು   ಆರ್ಪಿಎಂ. ಮತಗಟ್ಟೆಯಿಂದ ಒಟ್ಟು 72 ಕ್ಷೇತ್ರಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಅವಕಾಶ   ಇರಲಿದೆ. ಇಲ್ಲಿ ಯಾವುದೇ  ಲೋಪಕ್ಕೆ ಅವಕಾಶ ಇರುವುದಿಲ್ಲ, ಇಂಟರ್ನೆಟ್ ಸಂಪರ್ಕ ಕಲ್ಪಿಸಲಾಗುವುದಿಲ್ಲ  ಎಂದು ಆಯೋಗ ಹೇಳಿದೆ. 



ಅಲ್ಲದೆ ವಲಸಿಗರಿಗೆ ಮತದಾನಕ್ಕೆ ಅವಕಾಶ ಕಲ್ಪಿಸುವ ಕ್ರಮ, ಪ್ರಕ್ರಿಯೆಯ ಅನುಷ್ಠಾನ ಕ್ರಮ, ಪೂರಕವಾಗಿ ಆಡಳಿತಾತ್ಮಕವಾಗಿ ಆಗಬೇಕಿರುವ ಬದಲಾವಣೆ, ಪ್ರತ್ಯೇಕ ಕಾಯ್ದೆಯ ಅಗತ್ಯ ಕುರಿತಂತೆ ಅಭಿಪ್ರಾಯ ತಿಳಿಸುವಂತೆಯೂ ಪಕ್ಷಗಳಿಗೆ ಕೋರಲಾಗಿದೆ. 


ಸಮರ್ಪಕ ಸಾರಿಗೆ ವ್ಯವಸ್ಥೆಯ ಕೊರತೆಯಿಂದ ಕುಗ್ರಾಮಗಳ ಮತಗಟ್ಟೆಗಳಿಗೆ ಮತಯಂತ್ರ ಸಾಗಣೆ, ಸಿಬ್ಬಂದಿ ಪ್ರಯಾಣ ಕಷ್ಟವಾಗಿದೆ ಮತ್ತು ಮತ  ಎಣಿಕ ಕೂಡಾ ತಾಂತ್ರಿಕವಾಗಿ ಸವಾಲಿನದ್ದಾಗಿದೆ

ಮದುವೆ,ಶಿಕ್ಷಣ, ಉದ್ಯೋಗ ಮುಂತಾದ ಕಾರಣದಿಂದಾಗಿ 85% ಜನರು ಮತದಾನದಿಂದ ವಂಚಿತರಾಗುತ್ತಿದ್ದಾರೆ  ಅಂತಹವರಿಗೆ ಆರ್ ಪಿ ಎಮ್ ವರದಾನವಾಗಲಿದೆ.

ಎಂದು ಆಯೋಗದ ಅಧಿಕಾರಿಗಳು ಆಶಾಭಾವನೆ ವ್ಯಕ್ತಪಡಿಸುತ್ತಾರೆ.

ಈ ಪ್ರಯೋಗಗಳನ್ನು ರಾಜಕೀಯ ಪಕ್ಷಗಳು ಒಪ್ಪಿದರೆ 2023 ರಲ್ಲಿ ನಡೆಯುವ ಒಂಭತ್ತು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ  ಜಾರಿಗೆ ತರಲಾಗುತ್ತದೆ. ಇದರ ಸಾಧಕ ಬಾಧಕ ಪರಿಗಣಿಸಿ  

2024  ರ ಲೋಕಸಭೆ ಚುನಾವಣೆಯಲ್ಲಿ ಈ ಆರ್ ಪಿ ಎಂ ಅಳವಡಿಸಿಕೊಳ್ಳುವ ಸಾಧ್ಯತೆ ಇದೆ.


ಈ ಆರ್ ಪಿ ಎಂ ಹೇಗೆ ಕೆಲಸ ಮಾಡಲಿದೆ ಎಂಬುದನ್ನು ನೋಡುವುದಾದರೆ ವಲಸೆ ಹೋದ ವ್ಯಕ್ತಿ 

ಮೊದಲು ತಮ್ಮ ಮತವಿರುವ  ಮೂಲ  ಕ್ಷೇತ್ರದ ಚುನಾವಣಾ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿ ದೂರದ ಸ್ಥಳದಲ್ಲಿ ಮತದಾನ ಮಾಡಲು ಅನುಮತಿ ಕೋರಬೇಕು.ನಂತರ ವಲಸೆ ಜನಗಳಿಗೆ ಮೀಸಲಾದ ಮತಗಟ್ಟೆಯಲ್ಲಿ ಮತದಾನದ ಇತರ ಎಲ್ಲಾ ಕಾರ್ಯಚಟುವಟಿಕೆಗಳನ್ನು ಅನುಸರಿಸಿ ಮತದಾನಕ್ಕೆ ಅವಕಾಶವನ್ನು ನೀಡಲಾಗುತ್ತದೆ 



ಮಾಹಿತಿ ಹಾಗೂ ಪ್ರಾತ್ಯಕ್ಷಿಕೆಗೆ    ವಿರೋಧ ವ್ಯಕ್ತಪಡಿಸಿರುವ ವಿಪಕ್ಷಗಳು ರಿಮೋಟ್ ವೋಟಿಂಗ್ ಮಷೀನ್ ನ  ಅಗತ್ಯವೇನಿದೆ ಎಂದು ಕೇಳಿರುವುದಲ್ಲದೇ ಚುನಾವಣ ಆಯೋಗಕ್ಕೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿವೆ.

ಇದೇ ವೇಳೆ ಮೊಟ್ಟಮೊದಲಿಗೆ ಆರ್ವಿಎಂ ಪರಿಕಲ್ಪನೆಯೇ ಸ್ವೀಕಾರಾರ್ಹವಲ್ಲ. ಇದನ್ನು ಪರಿಚಯಿಸುವ ಮೊದಲು ಚುನಾವಣಾ ಆಯೋಗವು ದೇಶದ ಹಲವು ಪಕ್ಷಗಳು ಇವಿಎಂ ಕುರಿತು ಎತ್ತಿರುವ ಕಳವಳಗಳಿಗೆ ಉತ್ತರಿಸಬೇಕು. ನಗರ ಪ್ರದೇಶದ ಮತದಾರರು ಏಕೆ ಹಕ್ಕು ಚಲಾವಣೆಯಲ್ಲಿ ಹಿಂದಿದ್ದಾರೆ ಎಂಬುದನ್ನು ಅರಿತು, ಅದನ್ನು ಸರಿಪಡಿಸುವ ಕೆಲಸ ಮಾಡಬೇಕು ಎಂದೂ ವಿಪಕ್ಷಗಳು ಸಲಹೆ ನೀಡಿವೆ. 

 ಈ ವಿಚಾರದ ಬಗ್ಗೆ ಚರ್ಚೆ ಮಾಡಲು ಇನ್ನಷ್ಟು ಕಾಲಾವಕಾಶ ನೀಡುವಂತೆ ವಿಪಕ್ಷಗಳು ಆಗ್ರಹಿಸಿದ ಕಾರಣ ಆರ್ವಿಎಂ ಯಂತ್ರಗಳ ಪ್ರಾತ್ಯಕ್ಷಿಕೆಯನ್ನು ಚುನಾವಣ ಆಯೋಗ ಮುಂದೂಡಿತು. ಅಲ್ಲದೇ ರಿಮೋಟ್ ವೋಟಿಂಗ್ ಮಷೀನ್ ಬಳಕೆ ಕುರಿತು ಪ್ರತಿಕ್ರಿಯೆ ಸಲ್ಲಿಸಲು ನೀಡಲಾಗಿದ್ದ ಗಡುವನ್ನೂ ಫೆ.28ರ ವರೆಗೆ ವಿಸ್ತರಣೆ ಮಾಡಿತು. ಈ ಹಿಂದೆ ಜ.31ರೊಳಗಾಗಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಲಾಗಿತ್ತು.


ವಿಪಕ್ಷಗಳು ಕೇಳಿರುವ ಕೆಲ ಪ್ರಶ್ನೆಗಳು ಈ ಹೀಗಿವೆ 

ವಲಸೆ ಕಾರ್ಮಿಕನು ಬೇರೆ ರಾಜ್ಯದಲ್ಲೂ ನೋಂದಣಿ ಮಾಡಿಕೊಂಡು, ತನ್ನ ಊರಲ್ಲೂ ನೋಂದಣಿ ಮಾಡಿಕೊಂಡಿದ್ದರೆಆಗ ಡುಪ್ಲಿಕೇಟ್ ತಡೆಯಲು ಏನು ಮಾಡುತ್ತೀರಿ?

ದೂರದೂರಲ್ಲಿ ಮತಗಟ್ಟೆ ಸ್ಥಾಪಿಸಲು ನಿಗದಿತ ಸ್ಥಳವನ್ನು ಹೇಗೆ ನಿರ್ಧರಿಸುತ್ತೀರಿ?

ಕ್ಷೇತ್ರದಾಚೆಗೆ ದೂರದೂರಲ್ಲಿ ನಡೆಯುವ ಮತದಾನ ಪ್ರಕ್ರಿಯೆಯನ್ನು ಪೋಲಿಂಗ್ ಏಜೆಂಟ್ ನಿಗಾ ವಹಿಸುವುದು ಹೇಗೆ?

ವಿವಿಪ್ಯಾಟ್ ಸ್ಲಿಪ್ಗಳ ಸಾಗಾಟ ಹಾಗೂ ದಾಸ್ತಾನು ಎಲ್ಲಿ, ಹೇಗೆ ಮಾಡುತ್ತೀರಿ?

ದೂರದೂರಲ್ಲಿ ಚಲಾವಣೆಯಾದ ಮತಗಳನ್ನು ಪ್ರತ್ಯೇಕವಾಗಿ ಎಣಿಸುತ್ತೀರಾ ಅಥವಾ ಕ್ಷೇತ್ರದ ಮತಗಳೊಂದಿಗೆ ಮಿಶ್ರ ಮಾಡುತ್ತೀರಾ? 

ಅರ್ಹ ವಲಸೆ ಕಾರ್ಮಿಕರು ಬೇರೆ ಬೇರೆ ರಾಜ್ಯಗಳಲ್ಲಿರುವಾಗ ನಾವು(ಪಕ್ಷಗಳು) ಚುನಾವಣಾ ಪ್ರಚಾರ ಮಾಡುವುದು ಹೇಗೆ?


ಪ್ರತಿಪಕ್ಷಗಳು ಎತ್ತಿರುವ ಈ ಎಲ್ಲಾ ಪ್ರಶ್ನೆಗಳಿಗೆ ಆಯೋಗವು ಸೂಕ್ತವಾದ ಉತ್ತರ ನೀಡಿ ಆರ್ ವಿ ಎಂ ಬಗ್ಗೆ ಇರುವ ಸಂದೇಹಗಳನ್ನು ದೂರ ಮಾಡಬೇಕಿದೆ. ಹೊಸ ತಂತ್ರಜ್ಞಾನ ಮತ್ತು ಉಪಕ್ರಮಗಳನ್ನು ಪರಿಚಯಿಸುವಾಗ ಆರಂಭದಲ್ಲಿ ಕೆಲ ತೊಡಕು ಸಂದೇಹಗಳು ಸಹಜ ಅವುಗಳನ್ನು ಪರಿಹರಿಸಿಕೊಂಡು ಮುಂದೆ ಸಾಗಿದರೆ ಆರ್ ವಿ ಎಂ ಮುಂದೊಂದು ದಿನ ಶೇಕಡಾ ನೂರು ಮತದಾನ ನಡೆದು ಪ್ರಜಾಪ್ರಭುತ್ವವನ್ನು ಬಲಪಡಿಸುವ ಉಪಕ್ರಮ ಆಗಬಹುದು ಎಂಬ ಆಶಾವಾದ ಹೊಂದೋಣ. 


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಶಿಕ್ಷಕರು 

ಸರ್ಕಾರಿ ಪ್ರೌಢಶಾಲೆ ಕ್ಯಾತ್ಸಂದ್ರ

ತುಮಕೂರು.





No comments: