20 January 2023

ಬದುಕು ನಿಂತ ನೀರಲ್ಲ...

 

ಬದುಕು ನಿಂತ ನೀರಲ್ಲ...

ಒಂದು ಕಾಲದಲ್ಲಿ ಎಲ್ಲರ ಕೈಯಲ್ಲೂ
ನೋಕಿಯಾ  ಫೋನ್  ಗಳು  ಪ್ರಪಂಚದ ಬಹುತೇಕ ದೇಶಗಳಲ್ಲಿ ನೋಕಿಯಾ ತನ್ನ ಗ್ರಾಹಕರನ್ನು ಹೊಂದಿ  ಮಾರುಕಟ್ಟೆಯಲ್ಲಿ ಪಾರಮ್ಯ  ಹೊಂದಿತ್ತು...ಈಗ ಆಪಲ್, ಸ್ಯಾಮ್ಸಂಗ್, ರೆಡ್ಮಿ  ,ರಿಯಲ್ ಮಿ ಮುಂತಾದ ಹೊಸ ಕಂಪನಿಗಳ ಅಬ್ಬರದಲಿ ನೋಕಿಯಾ ಕಳೆದು ಹೋಗುವ ಅಪಾಯದಲ್ಲಿದೆ.ಹಾಗಾದರೆ ನೋಕಿಯಾ ಮಾಡಿದ ತಪ್ಪೇನು? ಏನೂ ಇಲ್ಲ ಕಾಲಕ್ಕೆ ತಕ್ಕನಾಗಿ ಬದಲಾವಣೆಗಳಿಗೆ  ಹೊಂದಿಕೊಳ್ಳಲಿಲ್ಲ  ತನ್ನನ್ನು  ತಾನು  ಅಪ್ಡೇಟ್ ಮಾಡಿಕೊಳ್ಳಲಿಲ್ಲ . ತಂತ್ರಜ್ಞಾನದ ಬೆಳವಣಿಗೆಗೆ ತಕ್ಕಂತೆ ಬದಲಾಗಲಿಲ್ಲ ಅಷ್ಟೇ.

ಜೀವನದಲ್ಲಿ ಬದಲಾವಣೆ ಬಹಳ ಮುಖ್ಯ. ಅದರಲ್ಲೂ ಈ ಪ್ರಸ್ತುತ ಪ್ರಪಂಚದಲ್ಲಿ ಸರಾಸರಿ ಹತ್ತು ವರ್ಷಗಳಿಗೊಮ್ಮೆ ವ್ಯಾವಹಾರಿಕ ಪ್ರಪಂಚದ ವಾಸ್ತವ ಬದಲಾಗುತ್ತಿದೆ. ದಶಕದ ಹಿಂದೆ ಊಹೆಗೂ ಸಿಗದಿದ್ದ ನೌಕರಿಗಳು ಇಂದು  ಮಾರುಕಟ್ಟೆಯನ್ನು ಆಕ್ರಮಿಸಿವೆ. ಈವೆಂಟ್ ಮ್ಯಾನೇಜರ್, ಫ್ಲವರ್ ಡೆಕೋರೇಟರ್,  ಡಿಲೆವರಿ ಬಾಯ್, ಯ್ಯೂಟೂಬರ್ ,ಬ್ಲಾಗರ್,  ಇಂತಹ ಹೊಸ ಉದ್ಯೋಗಗಳು ಸುಮಾರು ಮೂವತ್ತು ವರ್ಷಗಳ ಹಿಂದೆ ಕಿವಿಯ ಮೇಲೆ ಬಿದ್ದಿರಲಿಲ್ಲ. ಇವು ಕೆಲ ಉದಾಹರಣೆಗಳು ಮಾತ್ರ. ನಾನು ಈ ಲೇಖನ ಬರೆಯುತ್ತಿರುವಾಗ ಜಗದ ಎಲ್ಲೊ ಒಂದು ಕಡೆ ಹೊಸ ಉದ್ಯಮ, ಉದ್ಯೋಗ ಸೃಜನವಾಗಿರುತ್ತದೆ. ಇಂತಹ ಉದ್ಯೋಗಗಳ  ಅರಿವು ನಮಗಿರಬೇಕು ಅದಕ್ಕೆ ತಕ್ಕ ಶಿಕ್ಷಣ ಕೌಶಲಗಳನ್ನು ಪಡೆಯಲು ನಿರಂತರವಾಗಿ ಪ್ರಯತ್ನ ಮಾಡುತ್ತಲೇ ಇರಬೇಕು. ಹೀಗಾಗಿ ನಮ್ಮ ಅರಿವನ್ನು ಬೆಳೆಯಲು ಬಿಡದಿದ್ದರೆ ಅವಕಾಶವಂಚಿತರಾಗುತ್ತೇವೆ. Update ಆಗದಿದ್ದರೆ outdated ಆಗಿಬಿಡಬಹುದು. ಬಹಳ ಬಾರಿ ನನಗಿಷ್ಟು ಸಾಕು, ನಾನು ಬದಲಾಗುವುದು ಬೇಕಿಲ್ಲ  ಎನಿಸಬಹುದು. ಆದರೆ, ನಾವು ಯಾವುದನ್ನು ಇಂದು ಸಂಪೂರ್ಣವಾಗಿ ಅವಲಂಬಿಸಿದ್ದೇವೋ ಅದು ನಾಳೆ ಇಲ್ಲವಾದರೆ ನಮ್ಮ ಅಸ್ತಿತ್ವಕ್ಕೇ ಸಂಚಕಾರ ಮೂಡಿದಂತಾಗುತ್ತದೆ. ಒಂದು ಕಾಲದಲ್ಲಿ ರಾರಾಜಿಸುತ್ತಿದ್ದ ಟೈಪ್ ರೈಟರ್ ಯಂತ್ರಗಳು ಇಂದು ಸಂಗ್ರಹಾಲಯದ ವಸ್ತುಗಳಾಗಿವೆ.ಗ್ರಾಮಾಪೋನ್,  ಟೇಪ್ ರೆಕಾರ್ಡರ್ , ವಾಲ್ಕ್ಮಾನ್ , ವಿಸಿಪಿ, ವಿ ಸಿ ಆರ್ , ಕ್ಯಾಸೆಟ್ ಗಳು  ಮೂಲೆ ಗುಂಪಾಗಿವೆ. ಮೊಬೈಲ್ ಫೋನುಗಳು ಬಂದ ಮೇಲೆ ಪೇಜರ್ ಅಗತ್ಯ ಇಲ್ಲದೇ ಹೋಗಿದೆ. ಆದ್ದರಿಂದ ನಮ್ಮ ವೃತ್ತಿ ಇಂದು ಎಷ್ಟೇ ಸುರಕ್ಷಿತ ಎನಿಸಿದರೂ ಪರಿಸ್ಥಿತಿ ದಿಢೀರನೆ ಬದಲಾಗಬಹುದು ಇದಕ್ಕೆ ಉತ್ತಮ ಉದಾಹರಣೆ ಎಂದರೆ ಲಕ್ಷಗಳ ಪ್ಯಾಕೇಜ್ ಹೋಂದಿ ಕೆಲಸ ಮಾಡುತ್ತಿದ್ದ ಟೆಕ್ಕಿಗಳನ್ನು ಡೌನ್ ಸೈಜಿಂಗ್, ರಿಸೆಷನ್ ಕಾಸ್ಟ್ ಕಟ್ ಇನ್ನೂ ಏನೇನೊ ಹೆಸರಲ್ಲಿ ಕೆಲಸದಿಂದ ತೆಗೆದು ಸದ್ದಿಲ್ಲದೇ ಮನೆಗೆ ಕಳಿಸುವ ಚಿತ್ರಣ ನಮ್ಮ ಮುಂದಿದೆ. ಇಂತಹ ಸಂದರ್ಭಗಳಲ್ಲಿ  ಸಮಯಕ್ಕೆ ತಕ್ಕಂತೆ ಜ್ಞಾನದ ವಿಸ್ತರಣೆ, ಹೊಸ ಕೌಶಲಗಳ ಕಲಿಕೆ ನಮ್ಮ ನೆರವಿಗೆ ಬಂದೇ ಬರುತ್ತವೆ.  ಅರಿವನ್ನು ವಿಸ್ತರಿಸದೆ ಹೋದರೆ ನಮ್ಮ ಅಸ್ತಿತ್ವವೇ ಉಳಿಯದಿರಬಹುದು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ಮರೆಯಬಾರದು .
ವ್ಯಾಯಾಮ, ಧ್ಯಾನ, ಧನಾತ್ಮಕ ಚಿಂತನೆಗಳು, ಹೊಸಬರೊಡನೆ ಬೆರೆಯುವ ಮನಃಸ್ಥಿತಿ, ಹೊಸದನ್ನು ಕಲಿಯುವ ಬಯಕೆ, ಪ್ರವಾಸ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಿಕೆ, ಸೋಮಾರಿತನ ಬಿಟ್ಟು ಯಾವುದೋ ಉತ್ಪಾದಕ ಕೆಲಸದಲ್ಲಿ ತೊಡಗಿಕೊಳ್ಳುವಿಕೆ, ಆರೋಗ್ಯಕರ ಆಹಾರ, ಒಳ್ಳೆಯ ನಿದ್ರೆ, ಸಾಮಾಜಿಕ ಸಂಬಂಧಗಳು, ಮೊದಲಾದವು ನಮ್ಮ ಅರಿವನ್ನು ಬೆಳೆಸುತ್ತವೆ. ನಮ್ಮ ನಿಯಮಿತ ಜೀವನಾವಧಿಯನ್ನು ಉತ್ತಮ ರೀತಿಯಿಂದ ಕಳೆಯಲು ಮನಸ್ಸನ್ನು ಚಿಂತನೆಗಳ ವಿಸ್ತರಣೆಗೆ ಸಜ್ಜುಗೊಳಿಸುವುದು ಒಳ್ಳೆಯ ವಿಧಾನ. ಈ ಪ್ರಕ್ರಿಯೆ ಸದಾ ಜಾರಿಯಲ್ಲಿರಲಿ ಅದಕ್ಕೆ ತಿಳಿದವರು ಹೇಳಿರುವುದು ಬದುಕು ನಿಂತ ನೀರಲ್ಲ.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು

No comments: