ಮಾಯವಾಗಲಿದೆ ಗುಂಡ್ ಪಿನ್ ಚಾರ್ಜರ್...
ನಿಮ್ ಮನೇಲಿ ಗುಂಡ್ ಪಿನ್ ಚಾರ್ಜರ್ ಇದ್ಯಾ? ನಿಮ್ ಮನೇಲಿ ದೆಬ್ಬೇ ಚಾರ್ಜರ್ ಇದ್ಯಾ? ಇವು ಸಾಮಾನ್ಯವಾಗಿ ನಾವು ಬೇರೆ ಊರುಗಳಿಗೆ ಹೋದಾಗ ,ಪ್ರವಾಸ ಮಾಡುವಾಗ ಚಾರ್ಜರ್ ಖಾಲಿಯಾಗಿ ಪವರ್ ಬ್ಯಾಂಕ್ ಕೂಡಾ ದಮ್ ಕಳೆದುಕೊಂಡಾಗ ಮೊಬೈಲ್ ಚಾರ್ಜರ್ ಮರೆತು ಬಂದಾಗ ನಮ್ಮ ಬಾಯಿಂದ ಬರುವ ಅಮ್ಮಾ ..ತಾಯಿ..ನುಡಿಗಳು . ಬಹುತೇಕ ನಾವೆಲ್ಲರೂ ಒಂದಲ್ಲ ಒಂದು ಬಾರಿ ಇಂತಹ ಮುಜುಗರದ ಘಟನೆಗಳಿಗೆ ಸಾಕ್ಷಿಯಾಗಿರುತ್ತೇವೆ.
ಇಂತಹ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಮಾನಕ ಸಂಸ್ಥೆ
(ಬಿಐಎಸ್ ) ಎಲ್ಲ ಉಪಕರಣಗಳಿಗೆ ಟೈಪ್-ಸಿ ಚಾರ್ಜರ್ ಅಳವಡಿಕೆ ಮಾಡಲು ಶಿಪಾರಸು ಮಾಡಿದೆ.
ಹಾಗೂ ಮೂರು ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಗುಣಮಟ್ಟ ಮಾನದಂಡಗಳನ್ನು ನಿಗದಿಪಡಿಸಿದೆ. ಡಿಜಿಟಲ್ ಟಿ.ವಿ ರಿಸೀವರ್ಗಳು, ಟೈಪ್-ಸಿ ಯುಎಸ್ಬಿ ಕೇಬಲ್ ಹಾಗೂ ವಿಡಿಯೊ ಕಣ್ಣಾವಲು ವ್ಯವಸ್ಥೆಗಳಿಗೆ (ಬಿ ಐಎಸ್) ಮಾನದಂಡಗಳನ್ನು ಗೊತ್ತುಪಡಿಸಿದೆ.
ಲ್ಯಾಪ್ಟಾಪ್, ಮೊಬೈಲ್ ಸೇರಿದಂತೆ ಎಲ್ಲ ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳಲ್ಲೂ ಏಕರೂಪ ಬಳಕೆಗೆ ಹೊಂದುವ ರೀತಿಯಲ್ಲಿ ಟೈಪ್- ಸಿ ವಿಧದ ಪೋರ್ಟ್, ಪ್ಲಗ್, ಕೇಬಲ್ಗಳನ್ನು ತಯಾರಿಸಬೇಕು. ಎಂಬ ಮಾನದಂಡ ರೂಪಿಸಲಾಗಿದೆ. ದೇಶದಲ್ಲಿ ಮಾರಾಟವಾಗುವ ಎಲ್ಲ ರೀತಿಯ ಸ್ಮಾರ್ಟ್ಫೋನ್ಗಳು ಹಾಗೂ ಇತರೆ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಏಕರೂಪದ ಚಾರ್ಜಿಂಗ್ ಸವಲತ್ತು ಒದಗಿಸುವುದಕ್ಕಾಗಿ ಈ ಮಾನದಂಡ ಗೊತ್ತುಪಡಿಸಲಾಗಿದೆ.
ಈ ಮಾನದಂಡದಿಂದಾಗಿ, ಪ್ರತಿಯೊಬ್ಬ ಗ್ರಾಹಕರಿಗೂ ಪ್ರತ್ಯೇಕ ಚಾರ್ಜರ್ ಅನ್ನು ಒದಗಿಸುವ ಅಗತ್ಯ ಇರುವುದಿಲ್ಲ. ಪ್ರತಿ ಬಾರಿ ಉಪಕರಣ ಖರೀದಿಸಿದಾಗ ಗ್ರಾಹಕರು ತಮ್ಮ ಮೊಬೈಲ್ಗೆ ಹೊಂದಿಕೆಯಾಗಬಲ್ಲ ಪ್ರತ್ಯೇಕ ಚಾರ್ಜರ್ ಅನ್ನು ಖರೀದಿಸುವ ಅಗತ್ಯವಿರುವುದಿಲ್ಲ. ಈ ಕ್ರಮದಿಂದ ಇ ತ್ಯಾಜ್ಯ ಉತ್ಪಾದನೆಯೂ ತಗ್ಗಲಿದ್ದು, ಚಾರ್ಜರ್ ಖರೀದಿಗೆ ಮಾಡುವ ವೆಚ್ಚವೂ ಉಳಿತಾಯವಾಗಲಿದೆ. ಹಲವು ದೇಶಗಳು ಈ ಮಾನದಂಡವನ್ನು ಅನುಸರಿಸುವತ್ತ ಈಗಾಗಲೇ ಹೆಜ್ಜೆ ಇರಿಸಿವೆ.
ಇತ್ತೀಚಿನ ದಿನಗಳಲ್ಲಿ ವಿಡಿಯೊ ನಿಗಾ ವ್ಯವಸ್ಥೆಗೆ ಹೆಚ್ಚಿನ ಬೇಡಿಕೆಯಿದ್ದು, ಗ್ರಾಹಕರಿಗೆ ಯಾವ ರೀತಿಯ ಉಪಕರಣಗಳನ್ನು ಖರೀದಿಸುವುದು ಸೂಕ್ತ ಎಂಬ ಗೊಂದಲವಿದೆ. ಇದನ್ನು ನಿವಾರಣೆ ಮಾಡುವುದಕ್ಕಾಗಿ ಮಾನಕ ಸಂಸ್ಥೆಯು ವಿಡಿಯೊ ನಿಗಾ ವ್ಯವಸ್ಥೆಗೆ ಮಾನದಂಡ ರೂಪಿಸಿದೆ. ಕ್ಯಾಮರಾ, ಇಂಟರ್ಫೇಸ್, ಇನ್ಸ್ಟಾಲೇಷನ್ ಮೊದಲಾದವುಗಳಿಗೆ ನಿಯಮಗಳನ್ನು ಗೊತ್ತುಪಡಿಸಿದೆ. ಭದ್ರತಾ ವ್ಯವಸ್ಥೆಯನ್ನು ಹೆಚ್ಚು ನಿಖರವಾಗಿ ಹಾಗೂ ಕಡಿಮೆ ವೆಚ್ಚದಲ್ಲಿ ಪಡೆಯಲು ಈ ಮಾನದಂಡಗಳು ನೆರವಾಗುತ್ತವೆ.
ಇದರ ಜೊತೆಯಲ್ಲಿ ಬಿ ಐ ಎಸ್ ಮತ್ತೊಂದು ಸಲಹೆ ನೀಡಿದೆ
ಸೆಟ್ ಟಾಪ್ ಬಾಕ್ಸ್ ಇಲ್ಲದೆ ಪ್ರೀ ಟು ಏರ್ ಟಿ ವಿ ಚಾನೆಲ್ ನೋಡಲು ಅನುವಾಗುವಂತೆ ಎಲ್ಲಾ ಟಿ ವಿ ಗಳಲ್ಲಿ ಇನ್ ಬಿಲ್ಟ್ ರಿಸೀವರ್ ಅಳವಡಿಸಲು ತಿಳಿಸಿದೆ ಇದು ಸಹ ಮುಂದಿನ ದಿನಗಳಲ್ಲಿ ಕ್ರಾಂತಿಕಾರಿ ಬೆಳವಣಿಗೆಯಾಗಿ ಪರಿಣಮಿಸಲಿದೆ.
ಪ್ರಸ್ತುತ ಸನ್ನಿವೇಶದಲ್ಲಿ
ಜನರು ಶುಲ್ಕ ಸಹಿತ ಹಾಗೂ ಉಚಿತ ಟಿ.ವಿ ವಾಹಿನಿಗಳನ್ನು ವೀಕ್ಷಿಸಬೇಕಾದರೆ, ಸೆಟ್ಟಾಪ್ ಬಾಕ್ಸ್ಗಳನ್ನು ಖರೀದಿಸಬೇಕಿದೆ. ದೂರದರ್ಶನದ ಉಚಿತ ಚಾನಲ್ಗಳನ್ನು ವೀಕ್ಷಿಸಬೇಕಿದ್ದರೂ, ಸೆಟ್ ಟಾಪ್ ಬಾಕ್ಸ್ ಖರೀದಿಸಲೇಬೇಕಿದೆ. ಆದರೆ ಉಚಿತ ಚಾನಲ್ಗಳನ್ನು ಸೆಟ್ ಟಾಪ್ ಬಾಕ್ಸ್ ಇಲ್ಲದೆಯೇ ವೀಕ್ಷಿಸುವುದು ಇನ್ನುಮುಂದೆ ಸಾಧ್ಯವಾಗಲಿದೆ.
ಸ್ಯಾಟಲೈಟ್ ಟ್ಯೂನರ್ಗಳನ್ನು ಅಳವಡಿಸಿದ ರಿಸೀವರ್ಗಳನ್ನು ಟಿ ವಿ ತಯಾರಿಸುವಾಗಲೇ ಅಳವಡಿಸಲಾಗುತ್ತದೆ. ತಂತ್ರಜ್ಞಾನದ ಈ ಸೌಲಭ್ಯದಿಂದ ಸರ್ಕಾರದ ಹಲವು ಕಾರ್ಯಕ್ರಮಗಳು, ಶೈಕ್ಷಣಿಕ ಮಾಹಿತಿ ವೀಕ್ಷಕರಿಗೆ ಸುಲಭವಾಗಿ ಸಿಗಲಿವೆ.
ಇದು ಹೆಚ್ಚಾಗುತ್ತಿರುವ ಈ ವೇಸ್ಟ್ (e waste) ತಡೆಗಟ್ಟಲು ದಾರಿಯಾಗಲಿದೆ. ಪರಿಸರ ಕಾಳಜಿಹೊಂದಿದ ಮತ್ತು ಗ್ರಾಹಕ ಸ್ನೇಹಿಯಾದ ಇಂತಹ ಸಣ್ಣ ಸಣ್ಣ ನಡೆಗಳು ಪರಿಸರ ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ನಮ್ಮ ಸರ್ಕಾರಗಳು ಇಂತಹ ಕ್ರಮಗಳನ್ನು ಹೆಚ್ಚಾಗಿ ಜಾರಿಗೆ ತರಬೇಕು ಇಂತಹ ಉಪಕ್ರಮಗಳಿಗೆ ಜನರು ಸಹ ಬೆಂಬಲ ನೀಡಬೇಕಿದೆ ತನ್ಮೂಲಕ ಸುಸ್ಥಿರ ಅಭಿವೃದ್ಧಿಗೆ ಕೈಜೋಡಿಸಬೇಕಿದೆ.
ಸಿ ಜಿ ವೆಂಕಟೇಶ್ವರ
ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ
ಕ್ಯಾತ್ಸಂದ್ರ
ತುಮಕೂರು
No comments:
Post a Comment