ಮೂರು ತಲೆಮಾರು.
ವಿಮರ್ಶೆ
ತ ಸು ಶಾಮರಾಯರ ಜನ್ಮ ಶತಮಾನೋತ್ಸವದ ನೆನಪಿನಲ್ಲಿ ಮಾಡಿದ ಪ್ರಕಟಣೆಯಾದ
"ಮೂರು ತಲೆಮಾರು" ಕನ್ನಡದ ಮೊದಲ ಪ್ರಾಧ್ಯಾಪಕ ಶ್ರೀ ಟಿ.ಎಸ್.ವೆಂಕಣ್ಣಯ್ಯ ಅವರನ್ನು ಕುರಿತಾಗಿ ಅವರ ಸಹೋದರ ಶ್ರೀ ತ.ಸು.ಶ್ಯಾಮರಾಯರು ಬರೆದ ಜೀವನ ಚರಿತ್ರೆ .ಇದು ತ.ಸು.ಶಾಮರಾಯರ ಆತ್ಮ ಚರಿತ್ರೆ ಎಂದರೂ ತಪ್ಪಿಲ್ಲ.
ಈ "ಮೂರು ತಲೆಮಾರು"ವಿನಲ್ಲಿ ಶ್ರೀ ಶಾಮರಾಯರು ಶ್ರೀ ತ.ಸು.ವೆಂಕಣ್ಣಯ್ಯನವರ ಬಗೆಗೆ ಸ್ವತಃ ಕಂಡ, ತಾಯಿ ಮತ್ತು ಇತರ ಸೋದರರಿಂದ ಕೇಳಿದ ಮತ್ತು ಅನುಭವಿಸಿದ ವಿವರಗಳನ್ನು ಮೂರು ವಿಭಾಗಗಳಲ್ಲಿ ಬರೆದಿದ್ದಾರೆ. ಈ ಕೃತಿಗೆ ಮುನ್ನುಡಿಯನ್ನು ರಾಷ್ಟ್ರಕವಿ ಶ್ರೀ ಜಿ.ಎಸ್.ಶಿವರುದ್ರಪ್ಪ ರವರು ಬರೆದಿರುವುದು ವಿಶೇಷ.
ಜಿ ಎಸ್ ಎಸ್ ರವರ ಮಾತಿನಲ್ಲೇ ಹೇಳುವುದಾದರೆ ಈ ಕೃತಿ, ಪುರಾಣ, ಚರಿತ್ರೆ ಹಾಗೂ ವಾಸ್ತವಗಳನ್ನು ಒಂದು ಸೃಜನಶೀಲ ಕೇಂದ್ರಬಿಂದುವಿಗೆ ತಂದುಕೊಂಡು ಸಾಕ್ಷಿಪ್ರಜ್ಞೆಯಲ್ಲಿ ನಿರೂಪಿಸಿದ ಅನನ್ಯ ಕಥನವಾಗಿದೆ. ನಿಜವಾಗಿ ನೋಡಿದರೆ ಪುರಾಣ ಚರಿತ್ರೆ ಮತ್ತು ವಾಸ್ತವ ಎಂದು ನಾವು ಗುರುತಿಸುವ ಈ ಮೂರು ನೆಲೆಗಳಿಗೆ ಅಂತಹ ವ್ಯತ್ಯಾಸವೇನೂ ಇಲ್ಲ. ಈ ಮೂರೂ ಅಸ್ತಿತ್ವದ ನಿರಂತರತೆ ಯಲ್ಲಿ ಉದ್ಭದ್ಧವಾಗುವ ಘಟನಾವಳಿಗಳನ್ನು ಕುರಿತು ಕಾಲ - ದೇಶ ಬದ್ಧವಾದ ಮನಸ್ಸು ತನ್ನ ಸಂಸ್ಕಾರಕ್ಕೆ ಅನುಸಾರವಾಗಿ ಅದನ್ನು ಗ್ರಹಿಸುವ ಹಾಗೂ ವ್ಯಾಖ್ಯಾನಿಸುವ ಕ್ರಮಕ್ಕೆ ನಾವು ಕೊಟ್ಟುಕೊಳ್ಳುವ ಹೆಸರುಗಳಷ್ಟೇ.
ಲೇಖಕರ ಬಿನ್ನಹದಲ್ಲಿ ಶಾಮರಾಯರು ಕಳೆದ ಕೆಲವು ಶತಮಾನಗಳಿಂದ ವ್ಯತ್ಯಾಸಗೊಳ್ಳುತ್ತಾ ಹೋಗಿರುವ ಧಾರ್ಮಿಕ, ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಜೀವನ ಮೌಲ್ಯಗಳ ಒಂದು ಕಿರುನೋಟವನ್ನು ಇಲ್ಲಿ ಕಾಣಬಹುದು. ಈ ದೃಷ್ಟಿಯಿಂದ ಇದು ಸರ್ವಜನಾದರಣೀಯವಾಗುವುದೆಂದು ಆಶಯ ವ್ಯಕ್ತಪಡಿಸಿದ್ದರು .ಪುಸ್ತಕ ಓದಿದ ಮೇಲೆ ನಿಜಕ್ಕೂ ಓದುಗರಿಗೆ ಮೂರು ತಲೆಮಾರಿನ ವೈವಿಧ್ಯಮಯ ಅನುಭವಗಳನ್ನು ಓದಿದ ಸಂತಸ ಖಂಡಿತವಾಗಿಯೂ ದೊರೆಯುತ್ತವೆ.
ಈ ಮೊದಲೇ ಹೇಳಿದಂತೆ ಈ ಪುಸ್ತಕದ ಮೂರು ವಿಭಾಗಗಳಲ್ಲಿ
" ಕೇಳಿದ್ದು" ವಿಭಾಗದಲ್ಲಿ ಶ್ರೀ ವೆಂಕಣ್ಣಯ್ಯನವರ ಪೂರ್ವೀಕರ ವಿಚಾರಗಳಿಂದ ಹಿಡಿದು ಅವರ ಅಂತಿಮ ಯಾತ್ರೆ ವಿವರಗಳು ದಾಖಲಾಗಿವೆ.
"ಕಂಡದ್ದು" ವಿಭಾಗದಲ್ಲಿ ತಳುಕಿನಲ್ಲಿನ ವ್ಯಕ್ತಿಗಳು, ಸುಬ್ಬಣ್ಣ ನವರ ಬಾಲ್ಯ, ವಿವಾಹ, ಅವರ ಸಂಪರ್ಕಕ್ಕೆ ಬಂದ ವ್ಯಕ್ತಿಗಳು ಸುಬ್ಬಣ್ಣ ನವರ ಅಂತಿಮ ದಿನಗಳ ಪ್ರಸ್ತಾಪಗಳಿವೆ.
ಕೊನೆಯ "ಅನುಭವಿಸಿದುದು" ಭಾಗದಲ್ಲಿ ಶ್ರೀ ವೆಂಕಣ್ಣಯ್ಯನವರ ಬಾಲ್ಯ, ಶಿಕ್ಷಣ, ವೃತ್ತಿ, ಸಂಸಾರ ಅಂತ್ಯದ ಮಾಹಿತಿಗಳಿವೆ.
ಮೊದಲ ಭಾಗ "ಕೇಳಿದ್ದು". ಅದರಲ್ಲಿನ ಮುಖ್ಯ ಏಳು ಅಧ್ಯಾಯಗಳಿವೆ .
ಬಂದನಾ ಹುಲಿರಾಯನು,ಧರ್ಮೋ ರಕ್ಷತಿ ರಕ್ಷಿತಃ,ಹಾಳೂರಿನ ಅನುಭವ
,ಸತ್ವಪರೀಕ್ಷೆ,ವೆಂಕಣ್ಣಯ್ಯನವರ ಪೂರ್ವಿಕರು , 'ದೇವರಲೀಲೆ' ವೆಂಕಪ್ಪನವರು ವೈಷ್ಣವರಾದುದು ಎಂಬ ಶೀರ್ಷಿಕೆ ಅಡಿಯಲ್ಲಿ ಬರುವ ಪ್ರತಿಯೊಂದು ಸಾಲು ನಮಗೆ ದಾರಿ ದೀಪ ಎಂದರೆ ತಪ್ಪಾಗಲಾರದು. ಬಂದನಾ ಹುಲಿರಾಯ ಎಂಬ ಭಾಗದಲ್ಲಿ ತಮ್ಮದಲ್ಲದ ತಪ್ಪಿಗೆ ಶಿಕ್ಷೆಯನ್ನು ಅನುಭವಿಸಿದ್ದು ಹಾಗೂ ಸರಳವಾದ ಮತ್ತು ಧಾರ್ಮಿಕ ಸತ್ ಚಿಂತನೆಗಳ ಫಲವಾಗಿ ಮತ್ತೆ ಉನ್ನತವಾದ ಸ್ಥಾನ ಪಡೆಯುವ ಮಾರ್ಗ ಇಂದಿನ ಸಮಾಜಕ್ಕೆ ದಾರಿದೀವಿಗೆ ಎಂಬುದು ನನ್ನ ಅನಿಸಿಕೆ.
ಹಿರಿಯೂರಿನಿಂದ ಚಳ್ಳಕೆರೆ ಮಾರ್ಗದಲ್ಲಿ ನಾನು ಪ್ರಯಾಣ ಮಾಡುವಾಗ ಗರಣಿ ಎಂಬ ಊರಿನ ಬಳಿ ಬಂದಾಗ ವೆಂಕಣ್ಣಯ್ಯನವರ ಹಾಳೂರಿನ ಪ್ರಸಂಗ ನೆನಪಾಗುತ್ತದೆ ಮತ್ತು ಆ ಕಾಲದಲ್ಲಿ ಅತೀಂದ್ರಿಯ ಶಕ್ತಿಗಳನ್ನು ಜನ ಹೇಗೆ ನಂಬಿದ್ದರು ಎಂಬುದನ್ನು ವಿವರಿಸುವಾಗ ನಂಬಲು ಕಷ್ಟವಾದರೂ ಓದುತ್ತಾ ರೋಚಕತೆಯ ಅಂಶಗಳು ಮನಸೆಳೆಯುತ್ತವೆ.
"ಕಂಡದ್ದು" ಭಾಗದಲ್ಲಿ ಇಪ್ಪತ್ತೊಂದು ಅಧ್ಯಾಯಗಳಿದ್ದು
ತಳುಕಿನಲ್ಲಿ ನೆಲೆಸಿದರು.
ವೆಂಕಣ್ಣಯ್ಯನವರು ತೀರಿಕೊಂಡ ಮೇಲೆ ಅವರ ಪತ್ನಿ ಹನುಮಕ್ಕ ಮೂವರು ಮಕ್ಕಳೊಡನೆ ತಳುಕು ಗ್ರಾಮಕ್ಕೆ ಬಂದು ನೆಲೆಸಿದ ಬಗ್ಗೆ, ಊರ ಪ್ರಮುಖರಿಗೆ ವೆಂಕಣ್ಣಯ್ಯನವರಲ್ಲಿ ಅಪಾರ ಅಭಿಮಾನ ಇದ್ದುದರಿಂದ ಅವರಿಗೆ ಎಲ್ಲ ರೀತಿಯ ನೆರವನ್ನು ಮಾಡಿಕೊಟ್ಟ ರೀತಿ, ಚಳ್ಳಕೆರೆ ತಾಲ್ಲೂಕು ಕಛೇರಿ ಗುಮಾಸ್ತ ಶ್ಯಾಮಣ್ಣ ವೆಂಕಣ್ಣಯ್ಯನವರ ಮಗ ಸುಬ್ಬಣ್ಣನಿಗೆ ಲೆಕ್ಕಪತ್ರ ಇಡುವ ಕಲೆ ಕಲಿಸಿಕೊಟ್ಟ ವಿಚಾರಗಳು ಪ್ರಸ್ತಾಪವಾಗಿವೆ.
ಸುಬ್ಬಣ್ಣನ ವಿವಾಹ ಪ್ರಸಂಗ ,
ನರಸಮ್ಮ ರವರ ಬಗ್ಗೆ ಪುತ್ರೋತ್ಸವದ ಬಗ್ಗೆ,ಸ್ಟ್ಯಾಂಪ್ವೆಂಡರ್ ಸುಬ್ಬಣ್ಣ,ಕಂಟ್ರಾಕ್ಟದಾರ ಭೀಮರಾಯ,ಅಶ್ವರತ್ನರಂಗ
, ಗುಗ್ಗರಿ ಕಂಚವ್ವ - ತೊರೆಯಪ್ಪ,ಸಣ್ಣ ಸುಬ್ಬಣ್ಣನ ಮದುವೆ,ಅಡಿಕೆಯ ಕಳವು ,ದಾಯಾದಿ ಮಾತ್ಸರ್ಯ, ಸೇಂದಿ ಕಂಟ್ರಾಕ್ಟರ್ ಹಾಗೂ ಅಚ್ಚಮ್ಮ ಎಂಬ ಅಧ್ಯಾಯಗಳು ಅಂದಿನ ಜನಜೀವನ ಮತ್ತು ಕುಟುಂಬ ವ್ಯವಸ್ಥೆಯ ಬಗ್ಗೆ ಬೆಳಕು ಚೆಲ್ಲುತ್ತವೆ.
ಕೊನೆಯ ಭಾಗ "ಅನುಭವಿಸಿದುದು" ನಲ್ಲಿ ಮೂರನೆಯ ತಲೆಮಾರಿನ ವೆಂಕಣ್ಣಯ್ಯನವರ ಬಾಲ್ಯ ಮತ್ತು ವಿದ್ಯಾಭ್ಯಾಸ, ಕಾಲೇಜು ವಿದ್ಯಾಭ್ಯಾಸ ಧಾರವಾಡದಲ್ಲಿ ಅಧ್ಯಾಪನ ಕೈಗೊಂಡ ಬಗ್ಗೆ,ಬೆಂಗಳೂರಿನ ಜೀವನದ ಕೆಲ ಪ್ರಮುಖ ಘಟನೆಗಳ ಉಲ್ಲೇಖವಿದೆ.
ಮೈಸೂರುಜೀವನ,ವೆಂಕಣ್ಣಯ್ಯನವರ ವ್ಯಕ್ತಿತ್ವ,ಸಾಹಿತ್ಯ ಸೃಷ್ಟಿ
ಹಾಗೂ ಕೊನೆಯ ದಿನಗಳ ಬಗ್ಗೆ ತ ಶು ಶಾಮರಾಯ ರವರು ತಮ್ಮ ನೆನಪಿನ ಭಂಡಾರದಿಂದ ಉತ್ತಮ ಮಾಹಿತಿಯನ್ನು ಪುಸ್ತಕ ರೂಪದಲ್ಲಿ ನೀಡಿರುವರು .ಮೂರು ತಲೆಮಾರುಗಳ ಮಹಾನ್ ಚೇತನಗಳ ಬಗ್ಗೆ ತಿಳಿಯಲು ಎಲ್ಲರೂ ಈ ಪುಸ್ತಕ ಓದಲೇಬೇಕು.
ಪುಸ್ತಕದ ಹೆಸರು: ಮೂರು ತಲೆಮಾರು
ಲೇಖಕರು: ತ.ಸು.ಶಾಮರಾಯ
ಪ್ರಕಾಶನ: ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ, ಬೆಂಗಳೂರು
ಬೆಲೆ: 200ರೂ.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
No comments:
Post a Comment